Homeಮುಖಪುಟ'ಡಬ್ಲೂಎಫ್ಐ'ಗೆ ತಾತ್ಕಾಲಿಕ ಸಮಿತಿ ರಚಿಸುವಂತೆ 'ಐಒಎ'ಗೆ ಪತ್ರ ಬರೆದ ಕ್ರೀಡಾ ಸಚಿವಾಲಯ

‘ಡಬ್ಲೂಎಫ್ಐ’ಗೆ ತಾತ್ಕಾಲಿಕ ಸಮಿತಿ ರಚಿಸುವಂತೆ ‘ಐಒಎ’ಗೆ ಪತ್ರ ಬರೆದ ಕ್ರೀಡಾ ಸಚಿವಾಲಯ

- Advertisement -
- Advertisement -

ಕುಸ್ತಿ ಫೆಡರೇಷನ್ ನೂತನ ಆಡಳಿತ ಮಂಡಳಿಯನ್ನು ಅಮಾನತು ಮಾಡಿದ ನಂತರ, ಭಾರತ ಒಲಿಂಪಿಕ್ ಅಸೋಸಿಯೇಷನ್ (ಐಒಎ)ಗೆ ಪತ್ರ ಬರೆದಿರುವ ಕ್ರೀಡಾ ಸಚಿವಾಲಯ, ‘ಕುಸ್ತಿ ಸಂಸ್ಥೆಯನ್ನು ಮುನ್ನಡೆಸಲು ತಾತ್ಕಾಲಿಕ ಸಮಿತಿ’ ರಚಿಸುವಂತೆ ಸೂಚನೆ ನೀಡಿದೆ.

‘ತಾತ್ಕಾಲಿಕ ಸಮಿತಿಯು ಅಥ್ಲೀಟ್‌ಗಳ ಆಯ್ಕೆ ಸೇರಿದಂತೆ ಡಬ್ಲ್ಯುಎಫ್ಐನ ವ್ಯವಹಾರಗಳನ್ನು ನಿರ್ವಹಿಸಬಹುದು ಮತ್ತು ನಿಯಂತ್ರಿಸಬಹುದು’ ಎಂದು ಐಒಎ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಕ್ರೀಡಾ ಸಚಿವಾಲಯವು ಹೇಳಿದೆ.

‘ಡಬ್ಲ್ಯುಎಫ್ಐನ ಮಾಜಿ ಪದಾಧಿಕಾರಿಗಳ ಪ್ರಭಾವ ಮತ್ತು ನಿಯಂತ್ರಣದಿಂದ ಉಂಟಾದ ಪರಿಸ್ಥಿತಿಯನ್ನು ಗಮನಿಸಿದರೆ, ಸಂಸ್ಥೆಯ ಆಡಳಿತ ಮತ್ತು ಸಮಗ್ರತೆಯ ಬಗ್ಗೆ ಗಂಭೀರ ಕಳವಳ ಹುಟ್ಟಿಕೊಂಡಿವೆ’ ಎಂದು ಕ್ರೀಡಾ ಇಲಾಖೆ ಅಧೀನ ಕಾರ್ಯದರ್ಶಿ ತರುಣ್ ಪರೀಕ್ ಅವರು ಸಹಿ ಹಾಕಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಆದ್ದರಿಂದ, ಕ್ರೀಡಾ ಸಂಸ್ಥೆಗಳಲ್ಲಿ ಉತ್ತಮ ಆಡಳಿತದ ತತ್ವಗಳನ್ನು ಎತ್ತಿಹಿಡಿಯಲು ತಕ್ಷಣದ ಮತ್ತು ಕಟ್ಟುನಿಟ್ಟಾದ ಕ್ರಮಗಳ ಅಗತ್ಯವಿದೆ. ಡಬ್ಲ್ಯೂಎಫ್ಐನ ವ್ಯವಹಾರಗಳನ್ನು ನಿರ್ವಹಿಸಲು ಮಧ್ಯಂತರ ಅವಧಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಮಾಡಲು ಐಒಎ ಸಂಸ್ಥೆಯು ಅಧಿಕಾರ ಹೊಂದಿದೆ. ಇದರಿಂದ ಕುಸ್ತಿಪಟುಗಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸುವುದಿಲ್ಲ ಮತ್ತು ಇನ್ನೂ ಉತ್ತಮ ಆಡಳಿತದ ತತ್ವವೆಂದರೆ, ಕ್ರೀಡಾ ಸಂಸ್ಥೆಯು ಅಪಾಯಕ್ಕೆ ಒಳಗಾಗುವುದಿಲ್ಲ’ ಎಂದು ಕ್ರೀಡಾ ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ.

ಡಬ್ಲ್ಯುಎಫ್ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ, ನೂತನ ಚುನಾಯಿತ ಮುಖ್ಯಸ್ಥ ಸಂಜಯ್ ಸಿಂಗ್ ನೇತೃತ್ವದ ಇತ್ತೀಚಿನ ಆಡಳಿತ ಮಂಡಳಿಯನ್ನು ಕೇಂದ್ರ ಸರ್ಕಾರವು ಅಮಾನತುಗೊಳಿಸಿರುವುದರಿಂದ ಡಬ್ಲ್ಯೂಎಫ್ಐಗೆ ಮತ್ತೊಂದು ಸುತ್ತಿನ ಚುನಾವಣೆ ಶಿಘ್ರದಲ್ಲೇ ನಡೆಯುವ ಸಾಧ್ಯತೆ ಇದೆ.

ಐಒಎ ರಚಿಸುವ ತಾತ್ಕಾಲಿಕ ಸಮಿತಿಯು ಕುಸ್ತಿ ಫೆಡರೇಷನ್‌ನ ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಥ್ಲೀಟ್‌ಗಳು ಭಾಗವಹಿಸಲು ಅನುಮತಿ ನೀಡಿವುದು ಮತ್ತು ಕ್ರೀಡಾಕೂಟಗಳನ್ನು ಏರ್ಪಡಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ.

ಹಿರಿಯ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಮುಂಬರುವ ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳ ಬಗ್ಗೆ ನಿನ್ನೆ ಕಳವಳ ವ್ಯಕ್ತಪಡಿಸಿದ್ದರು. ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳ ‘ತರಾತುರಿ’ ಘೋಷಣೆಯನ್ನು ಕೇಂದ್ರವು ಗಮನಿಸಿದ್ದು, ಸಾಕ್ಷಿ ಈ ಕುರಿತು ಪೋಸ್ಟ್ ಮಾಡಿದ ನಂತರ ಕ್ರೀಡಾ ಸಚಿವಾಲಯವು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಷನ್ ಆಡಳಿತ ಮಂಡಳಿಯು ಮುಂದಿನ ಆದೇಶದವರೆಗೆ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶಿಸಿದೆ. ಕ್ರೀಡಾ ಸಚಿವಾಲಯವು ಹೇಳಿಕೆಯಲ್ಲಿ ಹೊಸದಾಗಿ ಚುನಾಯಿತ ಸಂಸ್ಥೆಯು ‘ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿದೆ’ ಎಂದು ಆರೋಪಿಸಿದೆ.

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಾಕ್ಷಿ ಮಲ್ಲಿಕ್ ಸೇರಿದಂತೆ ದೇಶದ ಹಲವು ಹಿರಿಯ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ತಮ್ಮ ಸ್ಥಾನದಿಂದ ದೂರ ಸರಿಯಬೇಕಾಯಿತು.

ಒಲಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನವರಿಯಲ್ಲಿ ಬೀದಿಗಿಳಿದಿದ್ದರು.

ಬ್ರಿಜ್ ಭೂಷಣ್ ವಿರುದ್ಧ ತನಿಖೆ ಆರಂಭಿಸಿದ ನಂತರ, ಸರ್ಕಾರದ ಭರವಸೆ ಮೇರೆಗೆ ಧರಣಿ ಹಿಂಪಡೆದಿದ್ದರು. ಇತ್ತೀಚಿನ ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆಯೊರನ್ ವಿರುದ್ಧ ಅಮೋಘ ಜಯ ಸಾಧಿಸಿದರು, ಅವರನ್ನು ಪ್ರತಿಭಟನಾಕಾರ ಕುಸ್ತಿಪಟುಗಳು ಬೆಂಬಲಿಸಿದ್ದರು.

ಬ್ರಿಜ್ ಭೂಷಣ್ ಅವರ ಆಪ್ತರು ಮತ್ತು ಸಂಬಂಧಿಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬ ಭರವಸೆಯ ಹೊರತಾಗಿಯೂ, ಸಂಜಯ್ ಸಿಂಗ್ ಅವರ ನಾಮನಿರ್ದೇಶನವನ್ನು ಸಿಂಧುಗೊಳಿಸಿದ್ದು ಕುಸ್ತಿಪಟುಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ; ಡಬ್ಲ್ಯುಎಫ್ಐ ಅಮಾನತಿಗೂ ನನಗೂ ಯಾವುದೇ ಸಂಬಂಧವಿಲ್ಲ: ಬ್ರಿಜ್ ಭೂಷಣ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read