Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ; ಬೆಸಗರಹಳ್ಳಿ ರಾಮಣ್ಣ ವೃತ್ತಾಂತ ಸರಣಿ ಪ್ರಾರಂಭ: ಭಾಗ-1

ಹಿಂಗಿದ್ದ ನಮ್ಮ ರಾಮಣ್ಣ; ಬೆಸಗರಹಳ್ಳಿ ರಾಮಣ್ಣ ವೃತ್ತಾಂತ ಸರಣಿ ಪ್ರಾರಂಭ: ಭಾಗ-1

- Advertisement -
- Advertisement -

ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಗೆಳೆಯರು ಆ ವರ್ಷದ ಅತ್ಯುತ್ತಮ ಕಥಾ ಸಂಕಲನಕ್ಕೆ ರಾಮಣ್ಣನ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತ ಬರುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಸಮಾರಂಭ. ರಾಮಣ್ಣ ಕಥೆಗಾರರಾಗಿದ್ದಾಗ, ತನ್ನ ಸುತ್ತಮುತ್ತಲಿನವರಲ್ಲಿ ಕತೆ ಹೆಣಿಯುವ ಶಕ್ತಿ ಗುರುತಿಸಿ ಬರೆಸಿದ್ದರು ಮತ್ತು ಒಳ್ಳೆಯ ಕಥೆಗಳಿಗಾಗಿ ಆಶಿಸಿದ್ದರು. ಅಂತಹ ಕಥೆಗಾರನ ಸ್ಮರಣೆಯಲ್ಲಿ ಕನ್ನಡದಲ್ಲಿ ಬರುತ್ತಿರುವ ಉತ್ತಮ ಕಥಾ ಸಂಕಲನವನ್ನು ಹುಡುಕಿ ಬಹುಮಾನ ಕೊಡುವುದು, ಕನ್ನಡ ಕಥಾಲೋಕವನ್ನ ಶ್ರೀಮಂತಗೊಳಿಸುವ ಕ್ರಮಗಳಲ್ಲಿ ಒಂದು ಮತ್ತು ರಾಮಣ್ಣನಿಗೆ ಸಲ್ಲಿಸುವ ನಿಜವಾದ ಗೌರವ ಕೂಡ. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಾದ್ಯ ಸಂಗೀತ ಮತ್ತು ಹಾಡುಗಾರಿಕೆಯೂ ವಿಶೇಷವಾದದ್ದೇ.

ಆ ಸಮಾರಂಭದಲ್ಲಿ ಭಾಗವಹಿಸುವುದು ನಮಗೊಂದು ಸಂಭ್ರಮದ ಸಂಗತಿ. ಏಕೆಂದರೆ ಅಲ್ಲಿ ನಮ್ಮ ಹಳೆಯ ಗೆಳೆಯರೆಲ್ಲಾ ನೆರೆಯುತ್ತಾರೆ ಹೊಸ ಗೆಳೆಯರ ಪರಿಚಯವಾಗುತ್ತದೆ. ಮಂಡ್ಯದ ಹಿರಿಯರು ಮತ್ತು ಕಿರಿಯರು ಬಂದು ಅಸೀನರಾಗುತ್ತಾರೆ. ರಾಮಣ್ಣನ ಗೆಳೆಯರು, ಬಂಧುಬಾಂಧವರು, ಬೆಂಗಳೂರು-ಮಂಡ್ಯ-ಮೈಸೂರಿನ ಕಡೆಯವರೆಲ್ಲಾ ನೋಡಲು ಸಿಗುತ್ತಾರೆ. ರಾಮಣ್ಣನ ನೆನಪಿನ ಸಮಾರಂಭವೇ ಸರ್ವಜನಾಂಗದ ಶಾಂತಿಯ ತೋಟದಂತಿರುತ್ತದೆ. ಅಲ್ಲಿ ಎಲ್ಲ ವಯೋಮಾನದ ಗಿಡಮರ ಸಸಿಗಳು ಕಾಣುತ್ತವೆ. ಕೆಲವು ಗಿಡಗಳಿಗೆ ಹಳದಿ ರೋಗ ಬಂದಿದ್ದರೆ, ಕೆಲವುದರಲ್ಲಿ ಹಸಿರು ಮುಕ್ಕಳಿಸುತ್ತವೆ. ಮೋಟು ಮರ, ಗಾಳಿಗೆ ಮಿಂಡ ಎನ್ನುವ ಮರ, ಎತ್ತರದ ಹೂವಿನ, ಹಣ್ಣಿನ, ಹಣ್ಣು ಬಿಡದ, ಎಲೆ ಉದುರಿಸಿಕೊಂಡ, ಎಲೆಯಿಂದ ಕಂಗೊಳಿಸುವ ಮರಗಳು, ನೆಟ್ಟಾಗಿನಿಂದ ಹಾಗೇ ಇರುವ ಗಿಡಗಳು – ಹೀಗೆ ಎಲ್ಲವಕ್ಕೂ ಒಂದು ರೀತಿ ಜೀವಕಳೆ ಬರುತ್ತಿದ್ದುದು ರಾಮಣ್ಣನ ನೆನಪಿನಿಂದ. ರಾಮಣ್ಣ ಎಲ್ಲರಿಗೂ ಸಲ್ಲುವ ವ್ಯಕ್ತಿಯಾಗಿದ್ದರು. ಏಕೆಂದರೆ ಅವರು ವೈದ್ಯರಾಗಿದ್ದರು ಮತ್ತು ಈ ಸಮಾಜದ ಮನಸ್ಸನ್ನು ಬದಲಿಸುವ ಕತೆಗಾರರಾಗಿದ್ದರು.

ಸಮಾರಂಭ ಮುಗಿದನಂತರವೂ ರಾತ್ರಿ ಮಂಡ್ಯದಲ್ಲಿ ರಾಮಣ್ಣನ ಕಥೆಗಳು ಮುಂದುವರಿಯುತ್ತಿದ್ದವು. ಹಾಗೆ ನೋಡಿದರೆ ರಾಮಣ್ಣ ನಮ್ಮ ಮೈಮೇಲೆ ಬರುತ್ತಿದ್ದದ್ದು ರಾತ್ರಿ ವೇಳೆಯಲ್ಲಿಯೇ. ಹಾಗಾಗಿ ನಾವೆಲ್ಲೇ ಇರಲಿ, ರಾಮಣ್ಣನ ಸಭೆ ಎಂದರೆ ಮಂಡ್ಯದ ದಾರಿ ಹಿಡಿಯುತ್ತಿದ್ದೆವು. ರಾಮಣ್ಣನ ನೆನಪೇ ನಮಗೆ ಮಾತಿನ ಸ್ಫೂರ್ತಿ ನೀಡುತ್ತಿತ್ತು.

ರಾಮಣ್ಣ ನಾನು ಬಾಲ್ಯದಲ್ಲಿ ನೋಡಿದ ಮೊದಲ ಕತೆಗಾರ. ಅವರು ಹರದನಹಳ್ಳಿಗೆ ವರ್ಗವಾಗಿ ಬಂದಾಗ ಕಾಣಲು ಹೋಗಿದ್ದೆ. ಆ ದಿನ ಅವರಿರಲಿಲ್ಲ. ಕುಗ್ರಾಮದಂತಹ ಊರಿಗೆ ವೈದ್ಯರಾಗಿ ಬಂದಿದ್ದ ರಾಮಣ್ಣನ ಬಗ್ಗೆ ಅಂದು ನಮಗನಿಸಿದ್ದೇನೆಂದರೆ, ರಾಮಣ್ಣ ತುಂಬ ಪ್ರಭಾವವಿದ್ದ ವ್ಯಕ್ತಿಯೆಂದು. ನಮ್ಮ ಜಿಲ್ಲೆಯ ಬಹುದೊಡ್ಡ ರಾಜಕಾರಣಿಗಳೆಂದು ಗೌರವ ಸಂಪಾದಿಸಿದ್ದ ಶಂಕರೇಗೌಡರ ಕಡೆಯವರಾಗಿದ್ದರಿಂದ, ಅವರ ಪ್ರಭಾವದಿಂದ ಯಾವುದಾದರೂ ಒಳ್ಳೆಯ ಊರಿಗೆ ವರ್ಗಾ ಮಾಡಿಸಿಕೊಳ್ಳಬಹುದಿತ್ತು. ಹಾಗೆ ಮಾಡದೆ ನಾಗಮಂಗಲ, ಹರದನಹಳ್ಳಿ, ಬೆಳ್ಳೂರು ಈ ಭಾಗದಲ್ಲೇ ಅವರು ಸೇವೆ ಸಲ್ಲಿಸಿದ್ದು ನಮಗೆ ಹೆಮ್ಮೆಯ ಸಂಗತಿ. ಬಹುತೇಕ ಗ್ರಾಮಾಂತರ ಪ್ರದೇಶದಲ್ಲೇ ತಮ್ಮ ವೃತ್ತಿ ಮಾಡಿ ಮಕ್ಕಳು ದೊಡ್ಡವರಾದ ನಂತರ ಮಂಡ್ಯಕ್ಕೆ ಹೋದರು.

1969ರಂದು ನಮ್ಮ ಹೈಸ್ಕೂಲಿನಲ್ಲಿ ಕಾಣಿಸಿಕೊಂಡು ಮರೆಯಾದ ರಾಮಣ್ಣನ ಕಥೆ ಓದಬೇಕಾದರೆ, ಎರಡು ವರ್ಷವಾಯ್ತು. ನಾನು ಮೈಸೂರು ಬನುಮಯ್ಯನವರ ಕಾಲೇಜಿನಲ್ಲಿ ಓದುವಾಗ ಅಕಸ್ಮಾತ್ ಒಂದು ಪತ್ರಿಕೆ ಸಿಕ್ಕಿತು. ಅದರಲ್ಲಿ ರಾಮಣ್ಣ ಬರೆದ ಕಥೆ ಪ್ರಕಟವಾಗಿತ್ತು. ’ಜ್ವಾಲೆಯ ನಡುವೆ’ ಎಂಬ ಆ ಕಥೆಯನ್ನು ಎರಡು ಮೂರು ಬಾರಿ ಓದಿದ ಫಲವಾಗಿ ಅದರ ಕೆಲವು ಸಾಲುಗಳು ನನ್ನ ಮನಸ್ಸಿನಲ್ಲಿ ಉಳಿದದ್ದಲ್ಲದೇ, ಕಥೆಯ ರಚನೆಯ ಬಗ್ಗೆ ನನ್ನಲ್ಲಿ ಒಂದು ಬೀಜಾಂಕುರವೂ ಆಗಿತ್ತು. ರೈಲು ಬೋಗಿಯಲ್ಲಿ ವಯೋವೃದ್ಧ ವ್ಯಕ್ತಿ, ಆತನ ವಿಧವೆ ಮಗಳು, ಆಕೆಯ ಮಗು ಕುಳಿತಿದ್ದಾರೆ. ಜೊತೆಗೆ ಅಜ್ಜಿಯೊಂದು ಮುದುಡಿ ಕುಳಿತಿದೆ. ಅಜ್ಜಿಯ ಮಗನೂ ಇದ್ದಾನೆ. ಆತ ನೋಡಲು ಅನಾಗರಿಕನಂತಿದ್ದಾನೆ. ಸೂಟುಬೂಟುದಾರಿಯೊಬ್ಬ ನಿರೂಪಕನ ಜೊತೆಯಿದ್ದಾನೆ. ಎಲ್ಲ ಪ್ರಯಾಣಿಕರ ಬದುಕಿನ ಗೋಳುಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತವೆ. ಕೆಲವೇ ಕ್ಷಣಗಳ ಹಿಂದೆ ಗುರುತು ಪರಿಚಯವಿಲ್ಲದಂತಿದ್ದವರು ಈಗ ತಮ್ಮ ಬದುಕಿನ ಬವಣೆ ಹರಡಿಕೊಂಡು ಅಳೆದು ಸುರಿದು ಒಂದಾಗುತ್ತಾರೆ. ಅಲ್ಯಾರ ಕತೆಯೂ ಸುಖಕರವಾಗಿಲ್ಲ. ಇದನ್ನ ಗಾಢವಾಗಿ ಚಿಂತಿಸಿದ ನಿರೂಪಕ ರೈಲ್ವೆ ಕಿಟಕಿಯ ಮೂಲಕ ಕಾಣುತ್ತಿದ್ದ ಬಯಲ ಕಡೆ ನೋಡತೊಡಗುತ್ತಾನೆ. ಈ ಕಥೆ ಓದಿ ಅರ್ಧಶತಮಾನವಾಗುತ್ತ ಬಂದರೂ ಕತೆಯೊಳಗಿನ ಅಜ್ಜಿ ಮಾತನಾಡುತ್ತಿದ್ದವರನ್ನು ಗದರಿಸುವುದು; ಅಜ್ಜಿ ಕೈಲಿ ಬೈಸಿಕೊಂಡ ಅವಳ ಮಗ ಮತ್ತು ವಿಧವೆ ಮತ್ತಾಕೆಯ ಮಗು ಇವರಿನ್ನೂ ನನ್ನ ನೆನಪಲ್ಲಿದ್ದಾರೆ. ಇದು ರಾಮಣ್ಣನ ಕಥಾ ನಿರೂಪಣೆಯ ಶೈಲಿ. ಎಂದೋ ಓದಿದ ಅವರ ಕಥೆಗಳ ಪಾತ್ರವೆಲ್ಲಾ ನೆನಪಲ್ಲಿ ಉಳಿದಿವೆ. ನಂತರ ರಾಮಣ್ಣನ ಕಥೆಗಳನ್ನು ಹುಡುಕಿ ಓದಬೇಕೆನಿಸಿತು. ಮುಗ್ಧ ಬರಹಗಾರರಿಗೆ ಅಂದು ನವ್ಯದವರು ಉಂಟು ಮಾಡಿದ್ದ ಕೀಳರಿಮೆ ಬದಲಿಗೆ ರಾಮಣ್ಣ ನಮ್ಮೆಲ್ಲರಲ್ಲಿ ಆತ್ಮವಿಶ್ವಾಸ ತುಂಬಿದ್ದರು. ನವ್ಯಕ್ಕೆ ಪ್ರತಿಯಾಗಿ ಬಂಡಾಯ ರೂಪುಗೊಂಡಾಗ ಅದರ ರೂವಾರಿಯೇ ರಾಮಣ್ಣನಾಗಿದ್ದರು. ಹಾಗಿದ್ದರೂ ರಾಮಣ್ಣ ಯಾವ ಪಂಥವನ್ನೂ ಟೀಕಿಸದೆ ಭೂಮಿನಿಷ್ಠನಾದ ರೈತ ಉತ್ತು ಬೆಳೆತೆಗೆದಂತೆ ನಮಗೆಲ್ಲಾ ಕಥಾರೊಟ್ಟಿಗಳನ್ನ ಒದಗಿಸಿದರು. ಕಥೆ ಬರೆವ ಹೊಸ ಪೀಳಿಗೆಯವರನ್ನು ಪ್ರೇರೇಪಿಸಿದ್ದರು. ನಮ್ಮ ನೆಲದ ಆಡುಮಾತನ್ನು ನಮ್ಮ ಬರಹಗಳಲ್ಲಿ ಮುಲಾಜಿಲ್ಲದೆ ಬಳಸುವುದನ್ನು ತೋರಿಸಿಕೊಟ್ಟರು.

ರಾಮಣ್ಣ ಒಮ್ಮೆ ನಾಗಮಂಗಲದ ಮುಸಾಫಿರ್‌ಖಾನ್ ಹಿಂಭಾಗದಲ್ಲಿದ್ದ ಆರೋಗ್ಯ ಇಲಾಖೆಯ ಕೊಠಡಿಯೊಳಗೆ ಕೂತಿದ್ದರು. ಅಲ್ಲಿಗೆ ನುಗ್ಗಿದ ನಾನು “ರಾಮಯ್ಯನೋರಿದ್ದಾರ” ಅಂದೆ. “ನಾನು ಡಾ.ಬೆಸಗರಹಳ್ಳಿ ರಾಮಣ್ಣ” ಅಂದರು. “ಕಬ್ಬಾಳು ರಾಮಯ್ಯ ಸಾರ್” ಅಂದೆ. “ಹೊರಗಡೆ ಎಲ್ಲೊ ಇರಬೇಕು ನೋಡಪ್ಪ” ಅಂದವರು ಕೂಡಲೇ, “ಕೆಲಸ ಗಿಲಸ ಕೊಡುಸ್ತಿನಿ ಅಂದಿದ್ನಾ” ಅಂದ್ರು. ರಾಮಣ್ಣ ಹಾಗೆ ಕೇಳಲು ಕಾರಣ ಕಬ್ಬಾಳು ರಾಮಯ್ಯ ಅಂದು ಪ್ರಭಾವಿ ವ್ಯಕ್ತಿಯಾಗಿದ್ದರು. ಸರಕಾರಿ ಜನಗಳ ವರ್ಗಾವಣೆಯಲ್ಲದೆ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡಿಸುತ್ತಿದ್ದರು. ಇದನ್ನ ಗ್ರಹಿಸಿದ್ದ ರಾಮಣ್ಣ ನನಗೆ ಆ ಪ್ರಶ್ನೆ ಕೇಳಿದ್ದರು. ನಾನದನ್ನು ನಿರಾಕರಿಸಿ “ನೀವು ಕದಬಳ್ಳಿ ಹೈಸ್ಕೂಲಿಗೆ ಬಂದಿದ್ರಿ ಸಾ. ನಿಮ್ಮದೊಂದು ಕಥೆ ಓದಿದ್ದಿನಿ” ಅಂದೆ. ರಾಮಣ್ಣನಿಗೆ ಈ ಬೆಂಗಾಡಲ್ಲಿ ತನ್ನ ಕಥೆ ಓದಿರೊ ಹುಡುಗ ಸಿಕ್ಕಿದ್ದರಿಂದ ಕುತೂಹಲ ಆಯ್ತು. ಆನಂತರ ತನ್ನ ಇಲಾಖೇಲಿ ಸಮಸ್ಯೆಯಾಗಿರೊ ರಾಮಯ್ಯನ ಬಗ್ಗೆ ವಸಿಹು॒ಷಾರಾಗಿರುವಂತೆ ಹೇಳಿಕಳುಹಿಸಿದರು. ರಾಮಣ್ಣನ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಿದ್ದರೆ ಕೂಲಿನಾಲಿ ಮಾಡುತ್ತ ಶಿವರಾಮೇಗೌಡನ ಹಿಂಬಾಲಕನಾಗಿ ಊರಿಗೆ ಸಮಸ್ಯೆಯಾಗಿ ಬದುಕಬಹುದಿತ್ತು. ಆ ವಾರವೇ ರಾಮಯ್ಯ ಕಬ್ಬನ್ ಪಾರ್ಕ್‌ನಲ್ಲಿರುವ ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿ ರಾಮಣ್ಣನಂತಹ ಹಲವಾರು ಜನ ಕಥೆಗಾರರನ್ನ ಓದುವಂತೆ ಮಾಡಿದರು.

ರಾಮಣ್ಣ ಕಥೆ ಬಿಟ್ಟು ಏನನ್ನು ಬರೆಯಲು ಹೋಗಲಿಲ್ಲ. ಏನನ್ನಾದರು ಹೇಳಲು ಅವರು ಕಥಾ ಮಾರ್ಗವನ್ನೇ ಆರಿಸಿಕೊಳ್ಳುತ್ತಿದ್ದರು. ಅವರ ’ಸುಗ್ಗಿ’ ಕತೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಲಂಕೇಶರ ಕತೆ ಎರಡನೇ ಸ್ಥಾನಕ್ಕೆ ಸರಿದಾಗ ರಾಮಣ್ಣ ದಿಗ್ವಿಜಯ ಸಾಧಿಸಿದಂತೆ ಠೇಂಕಾರ ಮಾಡಿದ್ದರು. ಅಲ್ಲಿಂದ ಮುಂದೆ ಅವರ ಕಥೆಗಳು ನಿರಂತರವಾಗಿ ಬಡವರ ಹೊಟ್ಟೆಯಲ್ಲಿ ಮಕ್ಕಳುಟ್ಟಿದಂತೆ ಹುಟ್ಟುತ್ತ ಬೆಳೆಯುತ್ತ ಹೆಸರುವಾಸಿಯಾದವು. ಅವೆಲ್ಲ ನಮಗೆ ಇಷ್ಟವಾದವು.

ಲಂಕೇಶ್‌ಗೆ ಅರವತ್ತು ವರ್ಷ ತುಂಬಿದ್ದಕ್ಕೆ ಮೈಸೂರಿನಲ್ಲಿ ಕೆ. ರಾಮದಾಸರು ಲಂಕೇಶರ ಸಾಹಿತ್ಯ ಗೋಷ್ಠಿ ಏರ್ಪಡಿಸಿದ್ದರು. ಲಂಕೇಶ ಸಾಹಿತ್ಯ ಚರ್ಚೆಯೊಳಕ್ಕೆ ಸಮಕಾಲೀನರಾದ ತೇಜಸ್ವಿ ಅನಂತಮೂರ್ತಿ ಸೇರಿದಂತೆ ಈ ಮೂರು ಜನ ಮಹತ್ವದ ಲೇಖಕರ ಸಾಹಿತ್ಯ ಕುರಿತ ಚರ್ಚೆ ಒಂದು ಐತಿಹಾಸಿಕ ಘಟನೆಯಾಗಿತ್ತು. ಆ ಸಮಯದಲ್ಲಿ. ಕೆಲವರ ಭಾಗಕ್ಕೆ ದುಷ್ಟ ಚತುಷ್ಟರಂತಿದ್ದ ಚಂಪಾರನ್ನು ಕೂಡ ಲಂಕೇಶ್ ತೇಜಸ್ವಿಗೆ ಅನಂತಮೂರ್ತಿ ಜೊತೆಗೆ ಸೇರಿಸಬೇಕಾಗಿತ್ತು ಎಂಬುದು ಹಲವರ ತರ್ಕವಾಗಿತ್ತು. ಆದರೆ ಎಲ್ಲೂ ನಿಲ್ಲದ ಅಶಾಂತ ಮನಸ್ಸಿನ ಚಂಪಾ ಎಲ್ಲರಿಂದ ದೂರವಾಗಿ ಲಂಕೇಶರ ಕಡುವೈರಿಯಾಗಿದ್ದರು. ಆದ್ದರಿಂದ ಅವರನ್ನು ಈ ಮೂವರೊಟ್ಟಿಗೆ ಸೇರಿಸಲಾಗದೆ, ಲಂಕೇಶರ ಅರವತ್ತನೇ ವರ್ಷದ ಸಾಹಿತ್ಯಗೋಷ್ಠಿ ಮೈಸೂರಿನಲ್ಲಿ ಜರುಗಿತ್ತು. ಅಲ್ಲಿಗೆ ಬಂದ ರಾಮಣ್ಣ ಸಾಹಿತ್ಯದ ವಿದ್ಯಾರ್ಥಿಯಂತೆ ಭಾಗವಹಿಸಿದರು. ಎಲ್ಲಾ ಗೋಷ್ಠಿಗಳಲ್ಲಿ ಕುಳಿತುಕೊಂಡು ಕೂತುಹಲದಿಂದ ಕೇಳಿಸಿಕೊಂಡಿದ್ದನ್ನು ನೋಡಿದೆ. ಅಷ್ಟು ಹೊತ್ತಿಗಾಗಲೇ ನನ್ನ ಕಟ್ಟೆ ಪುರಾಣ ಕಾಲಂ ಶುರುವಾಗಿತ್ತು. ನನ್ನನ್ನ ನೋಡಿದ ಕೂಡಲೇ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿ, ದೂರ ನಿಂತವನನ್ನು ’ಇದ್ಯಾಕ್ ಬಾ’ ಅಂತ ಹತ್ತಿರ ಕೂರಿಸಿಕೊಂಡು ಭುಜದ ಮೇಲೆ ಕೈಹಾಕಿ, ಅಕ್ಕಪಕ್ಕದವರಿಗೆ ಪರಿಚಯ ಮಾಡಿಕೊಟ್ಟರು. ಆನಂತರ ದುರುಗುಟ್ಟಿ ನೋಡಿ “ಸುಮ್ಮನೆ ಯಳಿ ನೀನು. ಏನು ಸಿಕ್ಕಿದ್ರ ಬುಡಬ್ಯಾಡ. ತಗದು ಮುಟ್ಟುಸ್ತಾಯಿರು.. ವಳ್ಳೆ ಅವುಕಾಸ ಇದು” ಅಂದ್ರು. ರಾಮಣ್ಣನ ಈ ಮಾತನ್ನ ನೆನೆಸಿಕೊಂಡಾಗಲೆಲ್ಲ ನನ್ನ ಮನಸ್ಸು ಆರ್ದ್ರ-ಗೊಳುತ್ತದೆ. ರಾಮಣ್ಣನ ಇಂತಹ ಮೆಚ್ಚುಗೆಯ ಮಾತು ಆ ಕಾಲಂಅನ್ನು ಇಪ್ಪತ್ತು ವರ್ಷ ಎಳೆಯುವಂತೆ ಮಾಡಿತು.

ಕುವೆಂಪುರವರಿಗೆ ತೊಂಬತ್ತು ವರ್ಷ ತುಂಬಿದಾಗ ಕವಿಶೈಲದಲ್ಲಿ ಕುವೆಂಪು ಸಾಹಿತ್ಯ ಸಮಾರಂಭಗಳು ನಡೆದವು. ನಾಡಿನ ಕುವೆಂಪು ಅಭಿಮಾನಿಗಳೆಲ್ಲಾ ಬಂದಿದ್ದರು. ಅಲ್ಲಿಗೆ ರಾಮಣ್ಣ ಬರದೇ ಇರಲು ಸಾಧ್ಯವೇ! ಅದೊಂದು ಐತಿಹಾಸಿಕ ಸಮಾರಂಭ. ಜಿ.ಎಸ್. ಶಿವರುದ್ರಪ್ಪನವರಿಂದ ಹಿಡಿದು ಮೂರನೇ ತಲೆಮಾರಿನ ಕಾಳೆಗೌಡ ನಾಗವಾರರ ಮಗ ನಿಶಾಂತ್‌ವರೆಗೆ ಎಲ್ಲಾ ಸೇರಿದ್ದರು. ಹಿಂದಿನ ದಿನ ವರಾಹ ಮಾಂಸ ನೊರೆಗಳ್ಳನ್ನು ಕಂಠಪೂರ್ತಿ ಸೇವಿಸಿದ್ದ ನಮಗೆ ಮರುದಿನವೂ ತೆಳುವಾದ ಮಂಪರಿತ್ತು.

ಕವಿಶೈಲದ ಮನೆ ಎದುರಿಗೆ ತೋಟದಲ್ಲಿ ಕಾಳೇಗೌಡ ನಾಗವಾರರ ಅಧ್ಯಕ್ಷತೆಯಲ್ಲಿ ಸೇರಿದ ನಾವೆಲ್ಲಾ ನಮಗೆ ಗೊತ್ತಿರುವ ಹಾಸ್ಯ ಪ್ರಸಂಗಗಳನ್ನ ಹೇಳತೊಡಗಿದೆವು. ಆದರೆ ರಾಮಣ್ಣನ ಮುಂದೆ ನಾವು ಏನೇನು ಅಲ್ಲ ಅನ್ನಿಸಿತು. ನನಗ ಆಗ ಅನ್ನಿಸಿದ್ದೆಂದರೆ, ರಾಮಣ್ಣನ ಇಷ್ಟೊಂದು ಪ್ರಖರವಾದ ಹಾಸ್ಯ ಭಾಷೆ ಅವರ ಬರವಣಿಗೆಯಲ್ಲೇಕೆ ನುಗ್ಗಿಬರಲಿಲ್ಲವೆಂದು. ರಾಮಣ್ಣ ಮೈಮರೆತಂತೆ ಮಾತನಾಡುತ್ತಿದ್ದರು. ಆಗ ಅವರು ಹೇಳಿದ್ದು, “ಅವನು ಸಣ್ಣ ಹುಡುಗನಂತೆ ಮಾವಿನಕಾಯಿಗೆ ಕಲ್ಲು ಬೀರಿ ಕೆಡವಿದ್ದಾನೆ. ಸಾಬಿಯೊಬ್ಬ ಓಡಿಬಂದು ಇನ್ನೇನು ಹೊಡೆಯಬೇಕು, ಅಷ್ಟರಲ್ಲಿ ಇನ್ನೊಬ್ಬ ಸಾಬಿ ’ಛೋಡ್ರೆ ಹರೆ ಛೋಡ್ರೆ. ವೂ ಯಲ್ಲೇಗೌಡರ ಬೇಟ ಎಂದು ಅಬ್ಬರಿಸಿದನಂತೆ. ಹೊಡೆಯಲು ಬಂದ ಸಾಬಿ ಗರಹೊಡೆದಂತೆ ನಿಂತನಂತೆ. ಹತ್ತಿರ ಬಂದ ಸಾಬಿ ಯಲ್ಲೇಗೌಡನ ಹುಡುಗನಿಗೆ ಹೊಡೆದ್ರೆ ನಮ್ದು ಮಾವಿನಕಾಯಿ ಮರದಲ್ಲಿ ಒಂದು ಉಳಿಯದಿಲ್ಲ ಗೊತ್ತೆ’ ಎಂದು ಹೇಳಿ ರಾಮಣ್ಣನಿಗೆ, ’ಕೇಳಿದ್ರೆ ಕೊಡದಿಲ್ಲಾ, ಹಾಂ ಇಲ್ಲ ಅಂತಿವ, ಹಾಂ ಕಲ್ಲಲ್ಲಿ ವಡದ್ರೆ ಎಷ್ಟು ಬೀಳ್ತವೆ ಗೊತ್ತ. ಅಂಗೆ ಮಾಡಬಾರ್ದು, ಈಸ್ಕಬೇಕು, ಈಗ ಕಿತ್ತಿರದು ತಿನ್ಕಂಡಿ ಹೋಗು’ ಅಂದನಂತೆ”. ಇಂತಹ ಹಲವು ಪ್ರಸಂಗ ಹೇಳಿದ ರಾಮಣ್ಣನನ್ನ ಕಡೆ ಬಾರಿ ನೋಡಿದ್ದು ಕವಿಶೈಲದಲ್ಲಿ. ಕವಿ ಸಮಾಧಿ ಸನ್ನಿದಿಯಲ್ಲಿ. ಅದರೇನು ರಾಮಣ್ಣ ಹೊಡೆದ ಪಟ್ಟಾಂಗ ಮೊನ್ನೆಮೊನ್ನೆ ನಡೆದಂತಿದೆ.

ರಾಮಣ್ಣನ ಪ್ರತಿಷ್ಠಾನ ಮಾಡುವ ಕಾರ್ಯಕ್ರಮದಿಂದ ನಮಗಿವೆಲ್ಲಾ ನೆನಪಾಗುತ್ತವೆ. ಈ ಪೈಕಿ 2018ರ ಜೂನ್‌ನಲ್ಲಿ ನಡೆದ ಕಾರ್ಯಕ್ರಮ ವಿಶೇಷವಾಗಿತ್ತು. ಆ ದಿನ ಲಂಕೇಶ್ ಪತ್ರಿಕೆಯಲ್ಲಿದ್ದ ಗೆಳೆಯರೆಲ್ಲಾ ಸೇರಿ ಖುಷಿಯಿಂದ ಹೊರಟೆವು. ನಾನು ಮರುದಿನ ಹೊರಡಬೇಕಾದರೆ, ಸಿಟಿ ಕ್ಲಬ್ಬಿನಲ್ಲಿ ಉಳಿದಿದ್ದ ಕಮಲಾಕ್ಷಣ್ಣ ಊರಿಗೊಯ್ತಿನಿ ಬತ್ತಿಯಾ ಅಂದರು. ಶಿವಮೊಗ್ಗದ ಕತೆ ಹೊರಟಿದ್ದ ನಾನು, ಊರಿಗೆ ಹೋಗಿ ಅಲ್ಲಿಂದ ಶಿವಮೊಗ್ಗ ತಲುಪುವ ಆಲೋಚನೆ ಮಾಡಿ, ಕಮಲಾಕ್ಷಣ್ಣನ ಕಾರು ಹತ್ತಿದೆ. ಡಾ. ಎಚ್ ಟಿ ಕಮಲಾಕ್ಷ ರಾಮಣ್ಣ ಮೈಸೂರಿನಲ್ಲಿ ಎಂಬಿಬಿಎಸ್ ಓದುವಾಗ ರೂಂಮೇಟು ಮತ್ತು ಆತ್ಮೀಯ ಗೆಳೆಯ. ಕಡೆವರೆಗೂ ರಾಮಣ್ಣನ ಜೊತೆಯಿದ್ದವರು. ರಾಮಣ್ಣ ವೈದ್ಯರಾಗಿ ಗ್ರಾಮಾಂತರ ಪ್ರದೇಶಕ್ಕೆ ಬಂದರೆ, ಕಮಲಾಕ್ಷ ಬೆಂಗಳೂರಿನ ಕಾರ್ಪೋರೇಷನ್‌ನಲ್ಲಿ ಅರೋಗ್ಯಾಧಿಕಾರಿಯಾಗಿದ್ದರು.

ಮಾಜಿ ಮಂತ್ರಿ ಎಚ್ ಟಿ ಕೃಷ್ಣಪ್ಪನವರ ಸಹೋದರ ಕಮಲಾಕ್ಷಣ್ಣ ಐದು ದಶಕಗಳ ರಾಜಕಾರಣವನ್ನು ಹತ್ತಿರದಿಂದ ಬಲ್ಲವರು. ಆ ಕಾಲದ ರಾಮಣ್ಣನ ಒಡನಾಟ ಹೇಳುತ್ತಾ ಹೋದಂತೆ ನಮ್ಮ ಊರು ತಲುಪಿದ್ದೇ ತಿಳಿಯಲಿಲ್ಲ. ಕಮಲಾಕ್ಷಣ್ಣ ಹೇಳಿದ್ದನ್ನು ದಾಖಲಿಸಿಕೊಳ್ಳಬೇಕೆನಿಸಿತು. ಆದ್ದರಿಂದ ಅವನು ಹೇಳಿದ್ದನ್ನು ಬರೆದುಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದೆ. ಈಗಾಗಲೇ ಪ್ರಕಟವಾಗಿರುವ ’ಕಾಡುಗಿಣಿ’ ಎಂಬ ರಾಮಣ್ಣನ ನೆನಪಿನ ಸಂಪುಟದಲ್ಲಿ ರಾಮಣ್ಣನ ಮಾತು ಅಷ್ಟಾಗಿ ದಾಖಲಾಗಿಲ್ಲ. ನಮ್ಮ ನಡುವಿನ ವಿಜ್ಞಾನ ಬರಹಗಾರ ನಾಗೇಶ್ ಹೆಗಡೆಯವರು ಹೇಳಿದಂತೆ, ನಮ್ಮ ಹಿರಿಯರು ನಡೆದಾಡಿದ ನೆಲ ಇದೆ; ಅವರು ಉಸಿರಾಡಿದ ಗಾಳಿಯು ಇದೆ; ಹಾಗೆಯೇ ಅವರಾಡಿದ ಮಾತುಗಳೂ ಇವೆ. ಇನ್ನ ಅವರ ಮನಸ್ಸಂತೂ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಇಲ್ಲಿ ರಾಮಣ್ಣನ ಮಾತನ್ನ ಕೇಳಿಸಿಕೊಂಡವರಿಂದ ಕೇಳಿಸಿಕೊಂಡು ದಾಖಲು ಮಾಡುವ ಸಾಹಸ ಮಾಡಿದ್ದೇನೆ.

ಬಿ. ಚಂದ್ರೇಗೌಡ

ನಿರೂಪಣೆ: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಯಾರೇ ಆಗಿರಲಿ, ಯಾವ ತಂದೆ ತಾಯಿಗೂ ನಮಗೆ ಬಂದ ಕಷ್ಟ ಬಾರದಿರಲಿ – ಫಾಝಿಲ್ ತಂದೆಯ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...