ಬೆಂಗಳೂರು: ಇದೇ ಮೇ 20ರಂದು ಜೆಸಿಟಿಯು ಮತ್ತು ಎಸ್ ಕೆ ಎಂ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಮಿಕರೊಂದಿಗೆ ಅಂದು ರೈತರು ಕೂಡ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟಕ್ಕಿಳಿಯಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ತಂದಿದ್ದ ನೀತಿಗಳನ್ನೇ ಮುಂದುವರೆಸುತ್ತಿರುವುದರಿಂದ ಮತ್ತು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಟ್ಟ ಮಾತುಗಳನ್ನೆಲ್ಲಾ ಮರೆತಿರುವುದರಿಂದ ರಾಜ್ಯ ಹಾಗೂ ಕೇಂದ್ರ ಎರಡರ ವಿರುದ್ಧವೂ ಪ್ರತಿಭಟನೆಯನ್ನು ದಾಖಲಿಸಬೇಕಿದೆ ಎಂದು ರಾಜ್ಯ ರೈತ ಸಂಘಟನೆಗಳ ಐಕ್ಯ ವೇದಿಕೆಯಾದ ಸಂಯುಕ್ತ ಹೋರಾಟ-ಕರ್ನಾಟಕವು ಹೇಳಿಕೆಯಲ್ಲಿ ಕರೆ ನೀಡಿದೆ.
ಅಂಬಾನಿ-ಅದಾನಿಯಂತಹ ಬಕಾಸುರ ಕಂಪನಿಗಳ ಕಣ್ಣಿ ಬಿದ್ದಿರುವುದು ಕಾರ್ಮಿಕರ ಶ್ರಮ ಮತ್ತು ಸಾರ್ವಜನಿಕ ಸಂಪತ್ತಿನ ಮೇಲೆ ಮಾತ್ರವಲ್ಲ ರೈತರ ಭೂಮಿ ಮತ್ತು ಬೆಳೆಯ ಮೇಲೆ ಸಹ. ನಮ್ಮ ಭೂಮಿಯನ್ನು ಅವರು ಕಬಳಿಸಬೇಕಿದೆ, ನಮ್ಮ ಬೆಳೆಯನ್ನು ಅವರು ನಿಯಂತ್ರಿಸಬೇಕಿದೆ. ಆದ್ದರಿಂದ ಭೂಮಿಯ ಖರೀದಿಯ ಮೇಲೆ, ಭೂಮಿಯ ಗುತ್ತಿಗೆ ಮೇಲೆ ಇದ್ದ ನಿರ್ಬಂಧಗಳನ್ನೆಲ್ಲಾ ತೆಗೆದು, ಯಾರು ಎಷ್ಟು ಬೇಕಾದರೂ ಖರೀದಿಸಬಹುದು, ಯಾರು ಯಾರಿಂದ ಬೇಕಾದರೂ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಳ್ಳಬಹುದು ಎಂಬ ಕಾನೂನುಗಳನ್ನು ತರಲಾಗುತ್ತಿದೆ. ಇವುಗಳನ್ನೆಲ್ಲಾ ಪ್ರತಿಭಟಿಸಿ ನಾವು ಮೇ 20ರ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಎಲ್ಲ ರೈತ ವರ್ಗಕ್ಕೆ ಕರೆ ನೀಡುತ್ತೇವೆ ಎಂದು ಸಂಯುಕ್ತ ಹೋರಾಟ ಹೇಳಿದೆ.
ರೈತರ ಬೆಳೆಯ ಬೆಲೆ ನಿಗದಿ, ಬೆಲೆ ನಿಯಂತ್ರಣ ಹಾಗೂ ಬೆಂಬಲ ಬೆಲೆಯ ಜಾರಿಗಾಗಿ ಇದ್ದ ಎಪಿಎಂಸಿಗಳನ್ನು ದುರ್ಬಲಗೊಳಿಸಿ, ಮುಚ್ಚಿಹಾಕಿ ಕೃಷಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಖಾಸಗೀ ಕಂಪನಿಗಳಿಗೆ ಒಪ್ಪಿಸುವ ಸಂಚು ರೂಪಗೊಂಡಿದೆ. ರೈತರ ಬೆಳೆಯನ್ನೆಲ್ಲಾ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿ, ರೇಟಿನ ಜೂಜಾಟ ನಡೆಸಿ, ಮನಬಂದ ಬೆಲೆಗೆ ಮಾರಿ ರೈತರನ್ನೂ ಮತ್ತು ಸಾರ್ವಜನಿಕರನ್ನು ಇಬ್ಬರನ್ನೂ ದೋಚುವ ಪರವಾನಗಿಯನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ರೈತರು ತಮ್ಮ ಬೆಳೆಗೆ ಬೆಲೆ ಖಾತ್ರಿ ಕಾಯ್ದೆ ತರಬೇಕೆಂದು ಒತ್ತಾಯಿಸುತ್ತಿದ್ದರೂ, ಐತಿಹಾಸಿಕ ದೆಹಲಿ ರೈತಾಂದೋಲನಕ್ಕೆ ಮಣಿದು, ಅದನ್ನು ಜಾರಿ ಮಾಡುವುದಾಗಿ ತಾತ್ವಿಕವಾಗಿ ಒಪ್ಪಿಕೊಂಡಿದ್ದರೂ, ಆ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆಯನ್ನೂ ಇಡದೆ, ರೈತರನ್ನು ಖಾಸಗೀ ಮಾರುಕಟ್ಟೆಯ ಜೂಜಾಟಕ್ಕೆ ತಳ್ಳುವ ಹುನ್ನಾರಗಳೇ ಚಾಲ್ತಿಯಲ್ಲಿವೆ. ಅದಕ್ಕಾಗಿಯೇ “ಕೃಷಿ ಉತ್ಪನ್ನಗಳ ಮಾರುಕಟ್ಟೆಗಾಗಿ ರಾಷ್ಟ್ರೀಯ ಚೌಕಟ್ಟು ನೀತಿ”ಯನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿ ರಾಜ್ಯಗಳ ಮೂಲಕ ಜಾರಿಗೆ ತರುವ ಪ್ರಯತ್ನದಲ್ಲಿದೆ ಎಂದು ಅದು ಆರೋಪಿಸಿದೆ.
ಮೋದಿ ಸರ್ಕಾರವು ಇದುವರೆಗೆ ಕಾರ್ಪೊರೇಟ್ ಕಂಪನಿಗಳ 50 ಲಕ್ಕ ಕೋಟಿಗೂ ಹೆಚ್ಚಿನ ಸಾಲವನ್ನು ಮನ್ನಾ ಮಾಡಿ ಪೋಷಿಸಿದೆ. ಆದರೆ ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ಅಗತ್ಯವಿರುವ 5 ಲಕ್ಷ ಕೋಟಿ ಹಣ ತನ್ನ ಬಳಿ ಇಲ್ಲ ಎಂದು ನಾಟಕವಾಡುತ್ತಿದೆ. ವಾಸ್ತವದಲ್ಲಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಬದಲು, ಅವರನ್ನು ಮತ್ತಷ್ಟು ದುಸ್ಥಿತಿಗೆ ತಳ್ಳಿ, ಅವರು ಭೂಮಿಯನ್ನು ಬಂಡವಾಳಿಗರಿಗೆ ಮಾರಿಕೊಂಡು ಹಳ್ಳಿಗಳನ್ನು ತೊರೆಯುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಕಾರ್ಪೊರೇಟ್ ಪರವಾಗಿ ನಡೆಯುತ್ತಿರುವ ಈ ಹುನ್ನಾರುಗಳು ರೈತರು ಮತ್ತು ಕಾರ್ಮಿಕರನ್ನು ಮಾತ್ರವಲ್ಲ,ಇಡೀ ದೇಶದ ಜನರ ಮೇಲೆ ವಿಪರೀತಕರ ಪರಿಣಾಮಗಳನ್ನು ಬೀರಲಿವೆ. ಮುಖ್ಯವಾಗಿ ಸರ್ವ ಕ್ಷೇತ್ರಗಳ ಖಾಸಗೀಕರಣ ಮತ್ತು ಕೇಂದ್ರ ಸರ್ಕಾರ ನಡೆಸಿರುವ ಜಿ ಎಸ್ ಟಿ ಮತ್ತು ಸೆಸ್ ಲೂಟಿಯಿಂದಾಗಿ ಬೆಲೆಗಳು ಏರುತ್ತಾ ಹೋಗಲಿದೆ, ಬದುಕು ದುಬಾರಿಯಾಗುತ್ತಾ ಹೋಗಲಿದೆ. ಮತ್ತೊಂದೆಡೆ ರೈತರನ್ನು ಭೂಮಿಯಿಂದ ಬಿಡಿಸುವ, ಮತ್ತು ಆದಾಯವನ್ನು ಕುಗ್ಗಿಸುತ್ತವೆ. ಒಟ್ಟಾರೆ ಕಂಪನಿಗಳ ಹಿತ ಕಾಯಲು ರೈತರ, ಕಾರ್ಮಿಕರ, ಯುವ ತಲೆಮಾರಿನ ಹಾಗೂ ಎಲ್ಲಾ ಜನಸಾಮಾನ್ಯರ ಬದುಕನ್ನು ಸಂಕಷ್ಟದ ಕೂಪಕ್ಕೆ ತಳ್ಳಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಸಂಯುಕ್ತ ಹೋರಾಟವು ಆರೋಪಿಸಿದೆ.
ಕೇಂದ್ರದ ಬಿಜೆಪಿ ಸರ್ಕಾರವಂತೂ ಜನಸಾಮಾನ್ಯರ ಪರವಾಗಿ ಇದ್ದಿದ್ದಿಲ್ಲ, ಅದು ಸದಾ ಕಂಪನಿಗಳ ಪರ, ಖಾಸಗೀಕರಣದ ಪರ ನಿಲುವನ್ನೇ ತಾಳಿದೆ. ಹಾಗಾಗಿ ಅದರ ಜೊತೆ ಗುದ್ದಾಡಬೇಕೇ ಹೊರತು ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವ ಸ್ಥಿತಿ ಇಲ್ಲ. ಆದರೆ ಬಿಜೆಪಿ ತರುತ್ತಿರುವ ಈ ನೀತಿಗಳನ್ನೆಲ್ಲ ವಿರೋಧ ಪಕ್ಷವಾಗಿದ್ದಾಗ ವಿರೋಧಿಸಿದ್ದ ಮತ್ತು ತಾನು ಅಧಿಕಾರಕ್ಕೆ ಬಂದರೆ ಅವನ್ನೆಲ್ಲಾ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಲಿಖಿತ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ಬಂದ ನಂತರ ಚಾಚೂ ತಪ್ಪದೆ ಬಿಜೆಪಿಯ ನೀತಿಗಳನ್ನೇ ಪಾಲಿಸುತ್ತಿದೆ. ಬಗರ್ ಹುಕುಂ ರೈತರಿಗೆ ಹುಸಿ ಭರವಸೆಗಳನ್ನು ನೀಡುತ್ತಾ, ಇದ್ದಬದ್ದ ಭೂಮಿಯನ್ನೂ ರೈತರಿಂದ ಕಸಿದು ಕಂಪನಿಗಳಿಗೆ ನೀಡುವ ಕೆಲಸ ಮಾಡುತ್ತಿದೆ. ಇದೊಂದು ವಿಶ್ವಾಸ ದ್ರೋಹದ ಕೆಲಸವಾಗಿದೆ ಎಂದು ಅದು ತಿಳಿಸಿದೆ.
ಹೀಗಾಗಿಯೇ ಮೇ 20ರಂದು ದೇಶವ್ಯಾಪಿಯಾಗಿ ನಡೆಸುತ್ತಿರುವ ಮುಷ್ಕರದಲ್ಲಿ ನಾಡಿನ ರೈತರೆಲ್ಲಾ ಭಾಗವಹಿಸಲು ಕರೆ ನೀಡುತ್ತೇವೆ. ಈ ಮುಷ್ಕರವನ್ನು ನಾವು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕಿದೆ. ನಮ್ಮ ನಮ್ಮ ಜಿಲ್ಲೆಯ ಎಲ್ಲಾ ರೈತರು ಆಯ್ದ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆಗಳನ್ನು ಸಂಘಟಿಸಬೇಕಿದೆ. ಸರ್ಕಾರ ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದೇ ಹೋದರೆ ರಸ್ತೆಗಳನ್ನು ಬಂದ್ ಮಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಜೈಲ್ ಭರೋ ನಡೆಸಿ ನಮ್ಮ ಪ್ರತಿರೋಧವನ್ನು ದಾಖಲಿಸಬೇಕಿದೆ. ಮೇ 20ರ ಹೋರಾಟ ರೈತ, ಕಾರ್ಮಿಕರು ಕೂಡಿ ಸರ್ಕಾರಗಳಿಗೆ ಕೊಡುತ್ತಿರುವ ಮೊದಲ ಎಚ್ಚರಿಕೆಯಾಗಿದೆ. ಸರ್ಕಾರಗಳು ಸ್ಪಂದಿಸದೇ ಹೋದಲ್ಲಿ ದೇಶದ ಆಗುಹೋಗುಗಗಳನ್ನೇ ಸ್ಥಬ್ದಗೊಳಿಸಬಲ್ಲ ಶಕ್ತಿ ನಮಗಿದೆ ಎಂಬ ಸಂದೇಶವನ್ನೂ ನಾವು ಕಳುಹಿಸಬೇಕಿದೆ ಎಂದು ಅದು ಎಚ್ಚರಿಸಿದೆ.
ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ಬಿಜೆಪಿ ಜಾರಿಗೆ ತಂದಿದ್ದ “ಭೂ ತಿದ್ದುಪಡಿ ಕಾಯ್ದೆ”, “ಎಪಿಎಂಸಿ ಕಾಯ್ದೆ”, “ಜಾನುವಾರು ಕಾಯ್ದೆ” ಮುಂತಾದವನ್ನು ಕೊಟ್ಟ ಮಾತಿನಂತೆ ಈ ಕೂಡಲೇ ಹಿಂಪಡೆಯಬೇಕು. ರೈತರಿಗೆ ಬೆಲೆ ಖಾತ್ರಿ ಕಾಯ್ದೆ, ಬಗರ್ ಹುಕುಂ ರೈತರಿಗೆ ಹಕ್ಕುಪತ್ರ, ದುಡಿಯುವ ಜನರ ಸಾಲಮನ್ನಾ ಮುಂತಾದ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ರೈತ ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸಭೆ ಕರೆಯಬೇಕು. ಇವು ನಮ್ಮ ಹಕ್ಕೊತ್ತಾಯಗಳು ಎಂದು ಸಂಯುಕ್ತ ಹೋರಾಟವು ಹೇಳಿಕೆಯಲ್ಲಿ ತಿಳಿಸಿದೆ.