Homeಕರ್ನಾಟಕಸಮಾಜ ಕಲ್ಯಾಣ ಹಾಸ್ಟೆಲ್‌ಗಳ ದುರವಸ್ಥೆಗೆ ವಿದ್ಯಾರ್ಥಿಗಳ ಕಣ್ಣೀರು; ಗಮನ ಹರಿಸುವುದೇ ಸರ್ಕಾರ?

ಸಮಾಜ ಕಲ್ಯಾಣ ಹಾಸ್ಟೆಲ್‌ಗಳ ದುರವಸ್ಥೆಗೆ ವಿದ್ಯಾರ್ಥಿಗಳ ಕಣ್ಣೀರು; ಗಮನ ಹರಿಸುವುದೇ ಸರ್ಕಾರ?

- Advertisement -
- Advertisement -

ಕೆಲವು ತಿಂಗಳ ಹಿಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಘಟನೆ. ಪಿಜಿ ಹಾಸ್ಟೆಲ್‌ಗಳಲ್ಲಿ ಪದೇಪದೇ ನೀರಿನ ಸಮಸ್ಯೆ ಉಂಟಾಗುತ್ತಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೂತರು. ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದರು. ಮೇಲಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು. ಮಧ್ಯಾಹ್ನ ಎರಡೂವರೆಯಾದರೂ ಅಧಿಕಾರಿಗಳು ಬರಲಿಲ್ಲ. ಬಿಸಿಲಿನ ಝಳಕ್ಕೆ ಸುಸ್ತಾಗಿ ಒಬ್ಬ ವಿದ್ಯಾರ್ಥಿ ಅಂಗಾತ ಮಲಗಿದ್ದನು. ಆ ವೇಳೆಗೆ ಬಂದ ಡೀನ್ ಮತ್ತು ಇತರ ಅಧಿಕಾರಿಗಳು, ’ಏನ್ರಪ್ಪ ನಿಮ್ಮ ಸಮಸ್ಯೆ?’ ಎಂದರು. ಸುಸ್ತಾಗಿ ಮಲಗಿದ್ದ ವಿದ್ಯಾರ್ಥಿಯ ಮೊಬೈಲ್‌ಗೆ ಯಾರದೋ ಕರೆ ಬಂತು, ’ಹಲೋ ಈಗಷ್ಟೇ ಡೀನ್ ಬಂದರು. ಎ.ಸಿ. ರೂಮ್‌ನಲ್ಲಿ ಆರಾಮವಾಗಿ ಬೆಳಿಗ್ಗೆಯಿಂದ ಇದ್ದು, ಚೆನ್ನಾಗಿ ಊಟ ಮಾಡಿಕೊಂಡು ಈಗ ನಮ್ಮನ್ನು ವಿಚಾರಿಸಲು ಬಂದಿದ್ದಾರೆ. ನಾವಿನ್ನೂ ಊಟ ಮಾಡಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಕರೆ ಮಾಡ್ತೀನಿ’ ಎಂದು ಆ ವಿದ್ಯಾರ್ಥಿ ಅಣಕ ಮಾಡಿದ.

ಮತ್ತೊಬ್ಬ ವಿದ್ಯಾರ್ಥಿ, “ನೀವಿರುವ ಕ್ವಾಟ್ರರ್ಸ್‌ನಲ್ಲಿ ಎರಡು ದಿನ ನೀರು ಬರದಿದ್ದರೆ ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದ. “ನಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಬೇಡಿ” ಎಂದರು ಅಧಿಕಾರಿ. “ನಾವು ಕೂಡ ನಿಮ್ಮ ಮಕ್ಕಳಂತೆ ಅಲ್ವಾ?” ಎಂದು ಮರುಪ್ರಶ್ನೆ ಎಸೆದಾಗ ಅಧಿಕಾರಿಗಳ ಬಾಯಿಕಟ್ಟಿತ್ತು. ಈ ಘಟನೆ ನಡೆದು ತಿಂಗಳುಗಳೇ ಕಳೆದರೂ ಈಗಲೂ ನೀರಿನ ಸಮಸ್ಯೆ ತಪ್ಪಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು. ವಿವಿ ಕ್ಯಾಂಪಸ್‌ನಲ್ಲಿಯೇ ಇರುವ ಹಾಸ್ಟೆಲ್‌ಗಳ ಕಥೆ ಇದು.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳು ಎದುರಿಸುತ್ತಿರುವ ಮೂಲಸೌಕರ್ಯಗಳ ಸಮಸ್ಯೆಗಳು ಅರಣ್ಯರೋದನವೇ ಸರಿ. ಬಿಜೆಪಿ ಅಧಿಕಾರಾವಧಿಯಲ್ಲಂತೂ ಪರಿಶಿಷ್ಟ ಸಮುದಾಯಗಳ ವಿದ್ಯಾರ್ಥಿಗಳು ತೀರ ಅವಗಣನೆಗೆ ಒಳಗಾದರು. ಸ್ಕಾಲರ್‌ಶಿಪ್, ಪ್ರವೇಶಾತಿ ಎಲ್ಲದರಲ್ಲೂ ಗೊಂದಲವನ್ನು ಸೃಷ್ಟಿಸಲಾಯಿತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ದಲಿತ ಹೋರಾಟಗಾರರ ಕಣ್ಮಣಿ ಎನ್ನಬಹುದಾದ ಡಾ.ಎಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯೂ ಆಗಿದ್ದು, ದಲಿತ ವಿದ್ಯಾರ್ಥಿಗಳು, ವಾರ್ಡನ್‌ಗಳು ಹಲವು ನಿರೀಕ್ಷೆಗಳನ್ನು ಹೊತ್ತು ಕುಳಿತಿದ್ದಾರೆ. ಇನ್ನಾದರೂ ವಿದ್ಯಾರ್ಥಿನಿಲಯಗಳು ಸುಧಾರಿಸಬಹುದೇನೋ ಗೊತ್ತಿಲ್ಲ.

ಎಸ್‌ಸಿಎಸ್‌ಪಿ, ಟಿಎಸ್‌ಪಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ) ಕಾಯ್ದೆ ಅಡಿ ಕಡ್ಡಾಯವಾಗಿ ಮೀಸಲಿಡಬೇಕಾದ ಶೇ.24.1 ಅನುದಾನವನ್ನು ಬಿಜೆಪಿ ಅಧಿಕಾರಾವಧಿಯಲ್ಲಿ ವರ್ಷವರ್ಷವೂ ಕಡಿತ ಮಾಡಲಾಗುತ್ತಿತ್ತು. ಬಜೆಟ್ ಗಾತ್ರ ಹೆಚ್ಚಾದರೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಮಾತ್ರ ಹೆಚ್ಚಳ ಕಾಣಲಿಲ್ಲ. ಜೊತೆಗೆ ಈ ಕಾಯ್ದೆಯ ’ಸೆಕ್ಷನ್ ಡಿ’ ದುರುಪಯೋಗದಿಂದಾಗಿ, ಪರಿಶಿಷ್ಟರಲ್ಲದವರೂ ಫಲಾನುಭವಿಗಳಾಗುವ ಕಾರ್ಯಕ್ರಮಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತಿತ್ತು.

2013ರಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರವೇ ’ಸೆಕ್ಷನ್ ಡಿ’ ಸೇರಿಸುವ ಪ್ರಮಾದವನ್ನು ಮಾಡಿತ್ತು. ಬಿಜೆಪಿ ಅವಧಿಯಲ್ಲಿ ಅದರ ದುರುಪಯೋಗ ಹೆಚ್ಚಿತ್ತು. ಈಗ ಅದನ್ನು ತೆರವುಗೊಳಿಸುವ ನಿರ್ಧಾರವನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೈಗೊಂಡಿದೆ. ಜೊತೆಗೆ ಪ್ರಸ್ತುತ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು 4,079 ಕೋಟಿ ರೂ ಹೆಚ್ಚಳ ಮಾಡಿದ್ದಾರೆ. ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ 30,215 ಕೋಟಿಯನ್ನು ಮೀಸಲಿಟ್ಟಿತ್ತು. ಈಗ ಕಾಂಗ್ರೆಸ್ 34,294 ಕೋಟಿ ಎತ್ತಿಟ್ಟಿದೆ. ಹೀಗಾಗಿ ದಲಿತ ವಿದ್ಯಾರ್ಥಿಗಳ ಸಮಸ್ಯೆಗಳು ಕೊಂಚವಾದರೂ ತಗ್ಗಬಹುದೇ ಎಂಬ ಆಶಾಭಾವನೆ ಉಂಟಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳೂ ಇದರಿಂದ ಸಮಸ್ಯೆಮುಕ್ತವಾಗುವತ್ತ ಹೆಜ್ಜೆ ಹಾಬಹುದೇ?

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಎದುರಿಸುತ್ತಿರುವುದು ಮುಖ್ಯ ಸಮಸ್ಯೆ, ಎಷ್ಟೋ ಹಾಸ್ಟೆಲ್‌ಗಳು ಸರ್ಕಾರಿ ಬಿಲ್ಡಿಂಗ್‌ಗಳಲ್ಲಿ ಇಲ್ಲದೆ ಖಾಸಗಿಯವರ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡಿಕೊಂಡಿರುವುದು ಮತ್ತು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಟ್ಟಡಗಳಿಲ್ಲ ಎಂಬುದು. ಇಂತಹ ಖಾಸಗಿ ಕಟ್ಟಡಗಳಿಂದಾಗಿ ವಿದ್ಯಾರ್ಥಿನಿಯರಂತೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಂಡ್ಯದ ಬಂಡಿಗೌಡ ಲೇಔಟ್‌ನ ಎರಡನೇ ಕ್ರಾಸ್‌ನಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಉಳಿದಿರುವ ವಿದ್ಯಾರ್ಥಿನಿಯೊಬ್ಬಳು ತಮ್ಮ ಕಷ್ಟಗಳನ್ನು ’ನ್ಯಾಯಪಥ’ದೊಂದಿಗೆ ಹಂಚಿಕೊಂಡಿದ್ದು ಹೀಗೆ:

“ಬಟ್ಟೆ ಒಣಗಿ ಹಾಕಲೂ ನಮ್ಮ ಹಾಸ್ಟೆಲ್‌ನಲ್ಲಿ ಜಾಗ ಇಲ್ಲ. ಹಾಸಿಗೆ ವ್ಯವಸ್ಥೆ ಇಲ್ಲ. ಹಾಸ್ಟೆಲ್ ಇರುವ ಜಾಗ ತುಂಬಾ ಸಂಕೀರ್ಣವಾಗಿದೆ. ರೀಡಿಂಗ್ ಟೇಬಲ್‌ಗಳು ಇಲ್ಲ. ನಮ್ಮ ಕಾಲೇಜಿಗೂ ಹಾಸ್ಟೆಲ್‌ಗೂ ಸುಮಾರು 15 ಕಿ.ಮೀ. ದೂರವಿದೆ. ಹೋಗಿ ಬರುವುದರಲ್ಲೇ ಸಮಯ ಕಳೆದುಹೋಗುತ್ತದೆ. ಹೀಗಾಗಿ ಮಧ್ಯಾಹ್ನದ ಊಟ ಕೂಡ ನಮಗೆ ಸಿಗುವುದಿಲ್ಲ.

“ನಮ್ಮ ವಾರ್ಡನ್ ವಾರಕ್ಕೊಮ್ಮೆ ಬರುತ್ತಾರೆ. ಊಟ ಹೇಗಿದೆ ಎಂದು ಟೇಸ್ಟ್ ಕೂಡ ನೋಡಲ್ಲ. ಸ್ಯಾನಿಟರಿ ಪ್ಯಾಡ್ ಕೊಡುವ ವ್ಯವಸ್ಥೆ ಇದೆ. ಆದರೆ ಅವುಗಳು ಗುಣಮಟ್ಟ ಸಮರ್ಪಕವಾಗಿಲ್ಲ. ಬಳಸುವುದಕ್ಕೆ ಯೋಗ್ಯವಿಲ್ಲದ ಕಾರಣ ಅವುಗಳನ್ನು ಕಸದಬುಟ್ಟಿಗೆ ಎಸೆಯುತ್ತೇವೆ. ಹೆಸರಿಗೆ ಮಾತ್ರ ಸ್ಯಾನಿಟರಿ ಪ್ಯಾಡ್ ಕೊಡುತ್ತಾರಷ್ಟೇ.

“ಊಟದ ವಿಚಾರವಂತೂ ಕೇಳಲೇಬೇಡಿ. ಅಕ್ಕಿಯನ್ನು ಬೇಯಿಸುವುದೇ ಇಲ್ಲ. ಬೇಕಾಬಿಟ್ಟಿ ಅರ್ಧಂಬಧ ಬೇಯಿಸಿ ಹಾಕ್ತಾರೆ. ಸಾಂಬಾರ್ ಖಾಲಿಯಾಗುತ್ತಿದ್ದರೆ ಹೊಸದಾಗಿ ಮಾಡುವುದಿಲ್ಲ. ಉಳಿದ ಸಾಂಬಾರ್‌ಗೆ ಸಾಂಬಾರ್ ಪುಡಿ ಹಾಕಿ, ಬಿಸಿ ಮಾಡಿ ಕೊಡ್ತಾರೆ. ನಾನು ಹಾಸ್ಟೆಲ್‌ಗೆ ಸೇರಿ ಒಂದು ವರ್ಷ ಆಯ್ತು. ಒಂದು ದಿನವೂ ಚಪಾತಿ ನೋಡಿಲ್ಲ. ಅಡುಗೆ ಮೆನು ಜಾರಿಯೇ ಆಗುತ್ತಿಲ್ಲ.

“ರೂಮ್‌ಗಳು ಬಹಳ ಕಿರಿದಾಗಿವೆ. ಆದರೂ ಒಂದು ರೂಮಿಗೆ ಐದು ಜನರನ್ನು ತುಂಬಿದ್ದಾರೆ. ರೂಮ್ ಡೋರ್‌ಗಳನ್ನೆಲ್ಲ ಸದಾ ಮುಚ್ಚಿರಬೇಕು. ಕಿಟಕಿ ತೆರೆಯಲೂ ಬಿಡಲ್ಲ. ಈ ವಿಷಯವಾಗಿ ಹಾಸ್ಟೆಲ್ ವಾರ್ಡನ್ ಜೊತೆ ಸಾಕಷ್ಟು ಜಗಳವಾಗಿದೆ. 25 ಜನಕ್ಕೆ ಒಂದು ಶೌಚಾಲಯ ನೀಡಿದ್ದಾರೆ. ಇದಂತೂ ತುಂಬಾ ಹಿಂಸೆ ತಂದಿದೆ.

“ನಮ್ಮ ಹಾಸ್ಟೆಲ್ ಖಾಸಗಿಯವರ ಬಿಲ್ಡಿಂಗ್‌ನಲ್ಲಿ ನಡೆಯುತ್ತಿದೆ. ಅಕ್ಕಪಕ್ಕ ಮನೆಗಳಿವೆ. ಊಟ ಮಾಡಿ ಫ್ರೀಯಾಗಿ ಎರಡು ನಿಮಿಷ ಓಡಾಡಲು ಕೂಡ ಅಲ್ಲಿ ಜಾಗ ಇಲ್ಲ. ಮನೆ ಓನರ್‌ಗೆ ವಾರ್ಡನ್ ಹೆದರಿಕೊಳ್ತಾರೆ. ಬಿಲ್ಡಿಂಗ್‌ಗೆ ಸ್ವಲ್ಪ ಪ್ರಾಬ್ಲಮ್ ಆದ್ರೂ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ನಿನ್ನ ಅಪ್ಪನ ಮನೆ ಅಂದ್ಕೊಂಡಿದ್ದೀಯ ಅಂತಾರೆ. ಲೈಬ್ರರಿ ಇಲ್ಲ, ಕಂಪ್ಯೂಟರ್ ಲ್ಯಾಬ್ ಇಲ್ಲ, ವೈಫೈ ಸೌಲಭ್ಯವಿಲ್ಲ- ಹೀಗೆ ಸಮಸ್ಯೆಯ ಸರಮಾಲೆಯನ್ನೇ ಆ ವಿದ್ಯಾರ್ಥಿನಿ ಬಿಚ್ಚಿಟ್ಟರು.

ಬೆಂಗಳೂರು ವಿವಿ ವಿದ್ಯಾರ್ಥಿ ಮನೋಜ್ ಮಾತನಾಡಿ, “ಸರ್ಕಾರಿ ಕಟ್ಟಡಗಳ ಸಮಸ್ಯೆ ಇಲ್ಲವಾಗಬೇಕು. ಪ್ರತಿ ಹಾಸ್ಟೆಲ್‌ಗಳು ಮೈದಾನಗಳನ್ನು ಹೊಂದಿರಬೇಕು. ಕಂಪ್ಯೂಟರ್ ಲ್ಯಾಬ್, ಜಿಮ್, ಲೈಬ್ರರಿ ಮತ್ತು ಆಡಿಟೋರಿಯಂಗಳನ್ನು ಕಡ್ಡಾಯವಾಗಿ ಮಾಡಿಕೊಡಬೇಕು. ಕಾಯಂ ನಿಲಯಪಾಲಕರ ನೇಮಕವಾಗಬೇಕು. ಪಿಜಿ ಮತ್ತು ಯುಜಿಗೆ ಪ್ರತ್ಯೇಕವಾಗಿ ಹಾಸ್ಟೆಲ್‌ಗಳನ್ನು ತೆರೆಯಬೇಕು. ಯುಜಿ ಮತ್ತು ಪಿಜಿ ಒಂದೇ ಕಡೆ ಇದ್ದರೆ ಸಮಸ್ಯೆಗಳು ಉದ್ಭವವಾಗುತ್ತವೆ. ವ್ಯಾಸಂಗ ಮುಗಿದರೂ ಹಿರಿಯ ವಿದ್ಯಾರ್ಥಿಗಳು ಹೊರಗಡೆ ಹೋಗುವುದಿಲ್ಲ. ಕಿರಿಯ ವಿದ್ಯಾರ್ಥಿಗಳನ್ನು ಹೆದರಿಸಿ ಹಾಸ್ಟೆಲ್‌ಗಳಲ್ಲೇ ಉಳಿದುಬಿಡುತ್ತಾರೆ. ಮೇಲಧಿಕಾರಿಗಳ ಭ್ರಷ್ಟಾಚಾರಗಳು ಇಂಥವರಿಗೆ ಚೆನ್ನಾಗಿ ಗೊತ್ತಿರುವುದರಿಂದ ಜಾಗ ಖಾಲಿ ಮಾಡಲು ಹೋಗುವುದಿಲ್ಲ ಎಂದರು.

“ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮಗಳು ನಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೃತ್ತಿಪರರಿಂದ ತರಬೇತಿಗಳನ್ನು ಕೊಡಿಸಬೇಕು. ಕಾಟಾಚಾರಕ್ಕೆ ತರಬೇತಿಗಳನ್ನು ನಡೆಸಬಾರದು. ಸ್ಪೋಕನ್ ಇಂಗ್ಲಿಷ್ ಕ್ಲಾಸ್‌ಗಳನ್ನು ಸಮರ್ಪಕವಾಗಿ ಮುನ್ನಡೆಸಬೇಕು” ಎಂದು ಒತ್ತಾಯಿಸಿದರು.

ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿಯೊಬ್ಬ ಮಾತನಾಡಿ, “ಬಿ.ಇಡಿ ಓದುವಾಗ ನನ್ನ ಕಾಲೇಜು ರಾಜೇಂದ್ರನಗರದಲ್ಲಿತ್ತು. ಹಾಸ್ಟೆಲ್ ಬೋಗಾದಿಯಲ್ಲಿತ್ತು. ಸುಮಾರು 15 ಕಿಮೀ ನಿತ್ಯವೂ ಹೋಗಬೇಕಾಗಿತ್ತು. ಬಸ್‌ಗಳೇ ಸಿಗುತ್ತಿರಲಿಲ್ಲ. ಮಳೆಗಾಲದಲ್ಲಂತೂ ನಮ್ಮ ಪಾಡು ಕೇಳುವುದೇ ಬೇಡ. ಹಾಸ್ಟೆಲ್‌ಗಳಲ್ಲಿ ಸಮರ್ಪಕ ಬಿಸಿ ನೀರಿನ ವ್ಯವಸ್ಥೆ ಇರುವುದಿಲ್ಲ. ಕೆಲವು ಕಡೆ ಸೋಲಾರ್ ಹಾಕಿಸಿದ್ದರೂ ನಾಲ್ಕೈದು ವಿದ್ಯಾರ್ಥಿಗಳು ಸ್ಥಾನ ಮಾಡುವಷ್ಟರಲ್ಲಿ ನೀರು ತಣ್ಣಗಾಗಿರುತ್ತದೆ” ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ

ಸ್ಕಾಲರ್‌ಶಿಪ್ ಬಾರದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವ ಕುರಿತು ಮಾತನಾಡಿದ ಅವರು, “ಮೊದಲೆಲ್ಲ ಸರ್ಕಾರ ನೇರವಾಗಿ ಕಾಲೇಜಿನ ಅಕೌಂಟ್‌ಗೆ ಸ್ಕಾಲರ್‌ಶಿಪ್ ಹಾಕುತ್ತಿತ್ತು. ಅದನ್ನು ನಿಲ್ಲಿಸಿ ಈಗ ವಿದ್ಯಾರ್ಥಿಗಳ ಅಕೌಂಟ್‌ಗೇ ಕಳುಹಿಸುತ್ತಿದ್ದಾರೆ. ಏನಾದರೂ ಡಾಕ್ಯುಮೆಂಟ್ಸ್ ಪಡೆಯಬೇಕಾದರೆ ಕಾಲೇಜಿನ ಆಡಳಿತ ವರ್ಗ ಪೂರ್ಣ ಪ್ರಮಾಣದ ಹಣ ಕಟ್ಟಬೇಕೆಂದು ಬ್ಲಾಕ್‌ಮೇಲ್ ಮಾಡುತ್ತದೆ. ಒಬ್ಬರಿಗೆ ಸ್ಕಾಲರ್‌ಶಿಪ್ ಬಂದರೆ, ಇನ್ನೊಬ್ಬರಿಗೆ ಬರುವುದಿಲ್ಲ. ಸರ್ಕಾರ ನೇರವಾಗಿ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರೆ ಈ ಸಮಸ್ಯೆಯಾಗುವುದಿಲ್ಲ. ಈ ಗೊಂದಲವನ್ನು ಸೃಷ್ಟಿಸಿದ್ದು ಬಿಜೆಪಿ ಸರ್ಕಾರ. ಈಗಲಾದರೂ ಬದಲಾಗುತ್ತದೆಯೋ ಎಂಬ ನಿರೀಕ್ಷೆಯಲ್ಲಿದ್ದೇವೆ. ಸ್ಕಾಲರ್‌ಶಿಪ್ ಸಂಬಂಧ ಕಾಲೇಜಿನಲ್ಲಿ ಕೇಳಿದರೆ ಸಮಾಜ ಕಲ್ಯಾಣ ಇಲಾಖೆಗೆ ಕಳಿಸುತ್ತಾರೆ. ಇಲಾಖೆಯವರು ಕಾಲೇಜಿಗೆ ಹೋಗಿ ಕೇಳಿ ಅಂತಾರೆ. ಸುತ್ತಾಡಿ ಸಾಕಾಗಿ ಅನಿವಾರ್ಯವಾಗಿ ಸಾಲ ಮಾಡಿಕೊಂಡು ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದಿಸಿದರು.

ಖಾಸಗಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಬರುತ್ತಿಲ್ಲ. ಸರ್ಕಾರಿ ಕೋಟಾದಲ್ಲಿ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರೆ ಸ್ಕಾಲರ್‌ಶಿಪ್ ಸಿಗಬಹುದು. ಯೂನಿವರ್ಸಿಟಿಗಳಲ್ಲಿ ಎಲ್ಲರಿಗೂ ಸೀಟ್ ಸಿಗಲ್ಲ. ಸಾವಿರ ವಿದ್ಯಾರ್ಥಿಗಳಲ್ಲಿ ನೂರು ವಿದ್ಯಾರ್ಥಿಗಳು ಯೂನಿವರ್ಸಿಟಿಯಲ್ಲಿ ಪ್ರವೇಶ ಪಡೆದರೆ ಹೆಚ್ಚು. ಇನ್ನು 900 ವಿದ್ಯಾರ್ಥಿಗಳು ಏನು ಮಾಡಬೇಕು? ಪೇಮೆಂಟ್ ಸೀಟ್‌ನಲ್ಲಿ ಸೇರಿಕೊಂಡವರಿಗೆ ಸ್ಕಾಲರ್‌ಶಿಪ್ ಕೊಡಬಾರದೆಂಬ ನಿಯಮವನ್ನು ಬಿಜೆಪಿ ಸರ್ಕಾರ ಮಾಡಿತು. ಪ್ರವೇಶಾತಿ ಪಡೆಯಲು ಸಾಧ್ಯವಾಗದ, ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗದ ಕನಸನ್ನೇ ಬಿಟ್ಟು ಹೊರಗುಳಿದರು. ಇದು ಈಗಲೂ ಮುಂದುವರಿದಿದೆ.

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಪೀಠೋಪಕರಣ, ಸೌಕರ್ಯಗಳನ್ನು ಸರ್ಕಾರ ಸಮರ್ಪಕವಾಗಿ ಸರಬರಾಜು ಮಾಡುವುದಿಲ್ಲ. ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಕೊಡುತ್ತಿಲ್ಲ.

ಕೆಲವು ವಾರ್ಡನ್‌ಗಳನ್ನು ಭೇಟಿ ಮಾಡಿ ಮಾತನಾಡಿದಾಗ ಮತ್ತಷ್ಟು ಅವ್ಯವಸ್ಥೆ ಕಣ್ಣಿಗೆ ರಾಚಿದವು. “ನಾವು ಆರ್ಡರ್ ಮಾಡುವುದೇ ಒಂದು, ಅವರು ಕೊಡುವುದೇ ಒಂದು. ಹೊಸ ವಿದ್ಯಾರ್ಥಿನಿಲಯಗಳು ಆರಂಭವಾದಾಗ ಅವುಗಳಿಗೆ ಸೌಲಭ್ಯ ನೀಡುವುದಿಲ್ಲ. ಹಳೆಯ ಪಟ್ಟಿಯ ಪ್ರಕಾರವಷ್ಟೇ ಹಾಸಿಗೆ, ದಿಂಬುಗಳನ್ನು ನೀಡುತ್ತಾರೆ. ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಿಗೆ ಇನ್ನೂ ಹಾಸಿಗೆ ದಿಂಬುಗಳನ್ನು ಸರಬರಾಜು ಮಾಡಿಲ್ಲ. ಗುಣಮಟ್ಟದ ಪೀಠೋಪಕರಣಗಳನ್ನು ನೀಡಬೇಕು. ಆದರೆ ಇವರು ಒದಗಿಸುವ ಸೌಕರ್ಯಗಳೆಲ್ಲ ಒಂದೇ ವರ್ಷಕ್ಕೆ ಹಾಳಾಗಿಬಿಡುತ್ತವೆ” ಎನ್ನುತ್ತಾರೆ ವಾರ್ಡನ್ ಒಬ್ಬರು.

“ನಿಗದಿತ ಅವಧಿಯಲ್ಲಿ ವಿದ್ಯಾರ್ಥಿನಿಲಯಗಳು ಪ್ರಾರಂಭವಾಗಬೇಕು. ಈಗ ತುಂಬಾ ತಡವಾಗಿ ಆರಂಭವಾಗುತ್ತಿದ್ದು, ಹೊಸದಾಗಿ ಹಾಸ್ಟೆಲ್ ಸೇರುವ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಗುತ್ತಿದೆ. ಹಿಂದಿನ ಸಾಲಿನಲ್ಲಿ ಇದ್ದಂತೆ ನಿಲಯಗಳಿಗೆ ಆಯ್ಕೆ ಸಮಿತಿ ಇರಬೇಕು.

ಇದನ್ನೂ ಓದಿ: ತಿ.ನರಸೀಪುರ ವೇಣುಗೋಪಾಲ್ ಕೊಲೆಗೆ ಸಂಘ ಪರಿವಾರ ಕೋಮು ತಿರುವು ನೀಡಲೆತ್ನಿಸಿ ವಿಫಲವಾದದ್ದು..

ಈಗಿರುವ ಪದ್ಧತಿ ಗೊಂದಲಗಳಿಂದ ಕೂಡಿದ್ದು ಅದು ವಿದ್ಯಾರ್ಥಿ ಸ್ನೇಹಿಯಲ್ಲ. ಶುಚಿ ಸಂಭ್ರಮ ಕಿಟ್ ವಿತರಣೆಯಲ್ಲಿ ಆಡಳಿತಾತ್ಮಕ ಸಮಸ್ಯೆ ಇದೆ. ಆದರೆ ಅದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಲ್ಲ. ಅದನ್ನು ಕೂಡಲೇ ಬಗೆಹರಿಸಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಮೊತ್ತವನ್ನು ಹೆಚ್ಚಿಸಬೇಕು” ಎಂದು ವಿವರಿಸಿದರು.

“ಸಕಾಲದಲ್ಲಿ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ಸರಬರಾಜು ಆದರೆ ವ್ಯಾಸಂಗಕ್ಕೆ ಅರ್ಥವಿದೆ. ನಿಲಯಗಳಲ್ಲಿ ಡಿಜಿಟಲ್ ಲೈಬ್ರರಿ ಇನ್ನೂ ಕನಸಿನ ಮಾತಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿನಿಲಯಗಳಿಗೆ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿ, ಭೇಟಿ ನೀಡಿ ಕೊರತೆಗಳನ್ನು ಒಂದು ತಿಂಗಳಲ್ಲಿ ಬಗೆಹರಿಸಬೇಕು” ಎಂದು ಆಶಿಸಿದರು.

ವಾರ್ಡನ್‌ಗಳ ಸಮಸ್ಯೆಗಳೇ ಹಾಸ್ಟೆಲ್ ದುರವಸ್ಥೆಯ ಮೂಲ

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಎದುರಿಸುತ್ತಿರುವ ಮೂಲಸೌಕರ್ಯದ ಕೊರತೆ, ಆಹಾರದಲ್ಲಿನ ಗುಣಮಟ್ಟದ ಕೊರತೆ, ವಿದ್ಯಾರ್ಥಿಗಳ ಪ್ರತಿಭಟನೆ, ಆಕ್ರೋಶಗಳಿಗೆಲ್ಲ ಹಾಸ್ಟೆಲ್ ವಾರ್ಡನ್‌ಗಳ ಸಮಸ್ಯೆಗಳೂ ಥಳುಕು ಹಾಕಿಕೊಂಡಿವೆ. ಪ್ರಾಮಾಣಿಕ ವಾರ್ಡನ್‌ಗಳು ಹೇಗೋ ಗುದ್ದಾಡಿ ಮುನ್ನುಗ್ಗುತ್ತಿದ್ದರೆ, ವ್ಯವಸ್ಥೆಯ ಜೊತೆ ಅನಿವಾರ್ಯವಾಗಿ ಶಾಮೀಲಾಗಿ ತಾವು ಅದರ ಭಾಗವಾಗಿದ್ದೇವೆ ಎಂಬುದು ಅನೇಕ ವಾರ್ಡನ್‌ಗಳ ಪ್ರಾಮಾಣಿಕ ಅಭಿಪ್ರಾಯ.

ಊಟದ ಗುಣಮಟ್ಟದಲ್ಲಿನ ತೊಂದರೆಗಳ ಕುರಿತು ಮಾತನಾಡಿದ ಓರ್ವ ವಾರ್ಡನ್, “ವಿದ್ಯಾರ್ಥಿಗಳ ಊಟಕ್ಕೆ ಕೊಡುತ್ತಿರುವ ಹಣ ಸಾಕಾಗುವುದಿಲ್ಲ. ಈಗ ಮಾಸಿಕ 1,750 ರೂಪಾಯಿ ನೀಡುತ್ತಾರೆ. ಪ್ರತಿ ತಿಂಗಳು ಸರಿಯಾಗಿ ರೇಷನ್ ಬಿಡುಗಡೆಯಾಗುವುದಿಲ್ಲ. ಗ್ಯಾಸ್ ಬೆಲೆ 400 ರೂ ಇದ್ದಾಗ ನಿಗದಿಯಾಗಿದ್ದ ಮೊತ್ತವನ್ನೇ ಈಗಲೂ ಮುಂದುವರಿಸಿದ್ದಾರೆ. ಗ್ಯಾಸ್ ರೇಟ್ ಈಗ 1,100 ರೂ ಆಗಿದೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಿದೆ. ಹೀಗಾಗಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಗುತ್ತಿಗೆದಾರರು ಕಳಪೆ ಗುಣಮಟ್ಟದ ಆಹಾರವನ್ನು ಕಳುಹಿಸುತ್ತಾರೆ. ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಟೆಂಡರ್ ಮುಂಜೂರು ಮಾಡಬೇಕು. ಅದಾಗುತ್ತಿಲ್ಲ. ಕಡಿಮೆ ರೇಟ್‌ಗೆ ಗುತ್ತಿಗೆ ಪಡೆದವನಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಗುತ್ತಿಗೆದಾರರು ನೀಡುವ ಆಹಾರ ಪದಾರ್ಥಗಳನ್ನು ಮೇಲಧಿಕಾರಿಗಳೂ ಪರಿಶೀಲನೆ ಮಾಡುವುದಿಲ್ಲ ಎಂದು ವಿಷಾದಿಸಿದರು.

“ಮೆಸ್ ಬಿಲ್ ಪಾವತಿಯಾಗಬೇಕೆಂದರೆ ಸರಿಯಾದ ಸಮಯಕ್ಕೆ ಸ್ಕಾಲರ್‌ಶಿಪ್ ಬಿಡುಗಡೆಯಾಗಬೇಕು. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣವನ್ನು ಗುತ್ತಿಗೆದಾರನಿಗೆ ಪಾವತಿಸಿದರೆ ಆತ ಒಂದಿಷ್ಟು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಿಲ್ ಪಾವತಿಯಾಗುವುದು ತಡವಾದಾಗ ಒಂದೆರಡು ತಿಂಗಳು ಅಡ್ವಾನ್ಸ್ ಆಗಿ ಆಹಾರ ಸರಬರಾಜು ಮಾಡುವುದು ಸಾಮಾನ್ಯ. ಕಳಪೆ ಗುಣಮಟ್ಟವನ್ನು ಪ್ರಶ್ನಿಸುವ ಸ್ಥಿತಿಯಲ್ಲೂ ನಾವು ಇರುವುದಿಲ್ಲ. ಅಧಿಕಾರಗಳು ಸೇರಿದಂತೆ ಎಲ್ಲರನ್ನೂ ಗುತ್ತಿಗೆದಾರ ಆಟವಾಡಿಸುತ್ತಾನೆ. ಹೀಗಾಗಿ ಹಾಸ್ಟೆಲ್‌ಗಳು ಆರಂಭವಾದ ತಕ್ಷಣವೇ ಸ್ಕಾಲರ್‌ಶಿಪ್ ನೀಡಬೇಕು. ಈ ಸಮಸ್ಯೆಗಳು ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ. ಊಟ ಸರಿ ಇಲ್ಲವೆಂದು ನಮ್ಮ ವಿರುದ್ಧ ಆಕ್ರೋಶ ಹೊರಹಾಕುತ್ತಾರೆ” ಎಂದು ಅಳಲು ತೋಡಿಕೊಂಡರು.

“ಗುಣಮುಟ್ಟದ ಅಕ್ಕಿಯನ್ನು ನೀಡಿದರೆ ಅರ್ಧದಷ್ಟು ಆಹಾರದ ಸಮಸ್ಯೆಗಳು ಬಗೆಹರಿಯುತ್ತವೆ. ಈಗ ನೀಡುತ್ತಿರುವ ಪಿಡಿಎಸ್ ಪಿಡಿಎಸ್ ಅಕ್ಕಿಯ ಒಂದೊಂದು ಮೂಟೆಯೂ ಒಂದೊಂದು ಥರದ ಅನುಭವವನ್ನು ನೀಡುತ್ತಿವೆ. ಅನ್ನ ಒಮ್ಮೆ ಮುದ್ದೆಯಂತಾದರೆ, ಮತ್ತೊಮ್ಮೆ ಮುಳ್ಳಕ್ಕಿಯಾಗುತ್ತದೆ. ಅಕ್ಕಿಯ ಗುಣವನ್ನು ಅರ್ಥ ಮಾಡಿಕೊಳ್ಳುವುದೇ ಅಡುಗೆ ಸಿಬ್ಬಂದಿಗೆ ತ್ರಾಸದಾಯಕವಾಗಿದೆ. ಗೋಧಿಯನ್ನು ಕೊಡುವಾಗಲೇ ಹುಳುವಾಗಿರುತ್ತದೆ. ನಿತ್ಯವು ಒಣಗಿಸಿ ಎತ್ತಿಬಿಡಬೇಕಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೊಂದು ಹಾಸ್ಟೆಲ್‌ನ ವಾರ್ಡನ್ ವ್ಯವಸ್ಥೆಯ ಮತ್ತಷ್ಟು ಲೋಪಗಳನ್ನು ’ನ್ಯಾಯಪಥ’ದೊಂದಿಗೆ ತೆರೆದಿಟ್ಟರು. “ನೂರು ಮಕ್ಕಳಿಗೆ ಐದು ಜನ ಅಡುಗೆಯವರನ್ನು ನೇಮಿಸಬೇಕು ಎಂಬ ನಿಯಮವಿದೆ. ಬೆಳಿಗ್ಗೆ 7.30ಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕಾಗಿರುತ್ತದೆ. ಹೀಗಿದ್ದಾಗ ಮುಂಜಾನೆ ನಾಲ್ಕೂವರೆಗೆ ಅಡುಗೆ ಸಿಬ್ಬಂದಿ ಕೆಲಸವನ್ನು ಶುರು ಮಾಡಬೇಕಾಗುತ್ತದೆ. ಅಡುಗೆಯವರು ಎಂಟು ಗಂಟೆ ಕೆಲಸ ಮಾಡಬೇಕು ಎಂದು ಹೇಳುತ್ತೇವೆ. ಆದರೆ ಮೂರು ಹೊತ್ತು ಅಡುಗೆ ಮಾಡಬೇಕೆಂದರೆ ಮುಂಜಾನೆ 4.30ರಿಂದ ರಾತ್ರಿ 9 ಗಂಟೆಯವರೆಗೂ ದಣಿಯಬೇಕಾಗುತ್ತದೆ. ಜೊತೆಗೆ ಕ್ಲೀನಿಂಗ್ ಮಾಡೋರೂ ಯಾರು? ಹುಳುಬಿದ್ದ ಗೋದಿ ಒಣಗಿ ಹಾಕುವುದು ಯಾರು? ಪ್ರೀಮೆಟ್ರಿಕ್ ಹಾಸ್ಟೆಲ್‌ಗಳಾದರೆ ತೊಂದರೆ ಇಲ್ಲ. ಮಧ್ಯಾಹ್ನ ಬಿಸಿಯೂಟ ಶಾಲೆಯಲ್ಲಿ ಇರುತ್ತದೆ ಎಂದು ಒಂದಿಷ್ಟು ರೆಸ್ಟ್ ಮಾಡಬಹುದು. ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳ ವಿಚಾರದಲ್ಲಿ ಹೀಗಾಗುವುದಿಲ್ಲ. ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳನ್ನು ಬೇರ್ಪಡಿಸಿ ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕು” ಎಂದರು.

“ಆಹಾರ ಪ್ರಮಾಣದಲ್ಲೂ ಸಮಸ್ಯೆ ಇದೆ. ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಬ್ಬರಿಗೂ ಒಂದೇ ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿದೆ” ಎಂದು ಆರೋಪಿಸಿದ ಅವರು, “ಇದು ಸರಿಯಲ್ಲ. ಪ್ರೀ ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ಆಹಾರ ಪೋಲಾಗುತ್ತಿದ್ದರೆ, ಪೋಸ್ಟ್ ಮೆಟ್ರಿಕ್‌ಗಳಲ್ಲಿ ಕೊರತೆ ಉಂಟಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾತಿನಿಧಿಕ ಚಿತ್ರ

“ವಾರ್ಡನ್‌ಗಳಿಗೆ ಪ್ರ್ರಮೋಷನ್ ಎಂಬುದೇ ಇಲ್ಲವಾಗಿದೆ. ಇದೊಂದು ಆಡಳಿತಾತ್ಮಕ ಸಮಸ್ಯೆ. 20 ವರ್ಷ ಸೇವೆ ಸಲ್ಲಿಸಿದರೂ ವಾರ್ಡನ್‌ಗಳಿಗೆ ಪ್ರಮೋಷನ್ ಇಲ್ಲವಾದರೆ ಆತ ಜಡ್ಡುಗಟ್ಟಿ ಹೋಗಿರುತ್ತಾನೆ, ಕೆಲಸದಲ್ಲಿ ನಿರ್ಲಕ್ಷ್ಯ ತಾಳುತ್ತಾನೆ. ಅಡುಗೆಯವರಿಗೆ ಪ್ರಮೋಷನ್ ಕೊಡುತ್ತಾರೆ. ಆದರೆ ವಾರ್ಡನ್‌ಗಳಿಗೆ ಇಲ್ಲ. ಅವರು ಎಸ್‌ಡಿಎ, ಎಫ್‌ಡಿಎ ಆಗಬಹುದಾದ ಅವಕಾಶವಿದೆ. ಆದರೆ ವಾರ್ಡನ್‌ಗಳು ವಾರ್ಡನ್ ಆಗಿಯೇ ಇರುತ್ತಾರೆ. ತಮ್ಮ ಕೆಳಗೆ ಕೆಲಸ ಮಾಡಿದ ಅಡುಗೆ ಸಿಬ್ಬಂದಿ ಅಧಿಕಾರಿಯಾಗುತ್ತಾನೆ. ಹೀಗಾದಾಗ ವಾರ್ಡನ್ ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಉತ್ಸಾಹಿ ವಾರ್ಡನ್‌ಗಳು ಕೂಡ ಆಸಕ್ತಿ ಕಳೆದುಕೊಳ್ಳುತ್ತಾರೆ. ಪೇ ಸ್ಕೇಲ್ ಬದಲಾಗದಿದ್ದಾಗ, ಆತ ಇರುವುದರಲ್ಲೇ ಏನಾದರೂ ಪೀಕಬಹುದಾ ಎಂದು ಯೋಚಿಸುತ್ತಾನೆ. ಇಪ್ಪತ್ತು ವರ್ಷ ವಾರ್ಡನ್ ಆಗಿದ್ದವನು, ಮನೆ ಮಕ್ಕಳಿಗಾಗಿ ಏನಾದರೂ ಮಾಡಿಕೊಳ್ಳೋಣ ಅಂತ ಹೋಗುತ್ತಾನೆ. ವಾರ್ಡನ್‌ಗಳಿಗೆ ಹತ್ತು ವರ್ಷಕ್ಕಾದರೂ ಪ್ರ್ರಮೋಷನ್ ಸಿಗುವಂತಿದ್ದರೆ ಈ ಅವ್ಯವಹಾರಗಳಿಗೆ ಬಹುತೇಕ ಕಡಿವಾಣ ಬಿಡಬಹುದು” ಎಂದು ಅಭಿಪ್ರಾಯಪಟ್ಟರು.

“ಹೀಗೆ ಭ್ರಷ್ಟಾಚಾರ ಮಾಡೋದು ತಪ್ಪು ಎಂದು ತಮ್ಮ ಸಹೋದ್ಯೋಗಿಗಳಿಗೆ ಹೇಳಿದರೆ, ನಮಗೇನು ಡಿಪಾರ್ಟ್ಮೆಂಟ್‌ನಲ್ಲಿ ಕಿರೀಟ ಕೊಡುತ್ತಾರಾ? ಎಂದು ಪ್ರಶ್ನಿಸುತ್ತಾರೆ. ಇದು ವ್ಯವಸ್ಥೆ. ವಾರ್ಡನ್ ಹಂತದಿಂದ ಮೇಲಧಿಕಾರಿಗಳವರೆಗೆ ಕಮಿಷನ್ ಹೋಗಬೇಕಿರುತ್ತದೆ. ಹೀಗಾಗಿ ಡಬ್ಬಲ್ ಬಿಲ್‌ಗಳನ್ನು ಮಾಡಬೇಕಾದ ಸಂಕಷ್ಟವನ್ನು ವಾರ್ಡನ್‌ಗಳು ಎದುರಿಸುತ್ತಾರೆ” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

“ಪ್ರತಿದಿನ ತಾಜಾ ತರಕಾರಿಗಳನ್ನು ಸಪ್ಲೈ ಮಾಡಬೇಕು ಎಂಬ ನಿಯಮವಿದೆ. ಆದರೆ ಗುತ್ತಿಗೆದಾರರೊಂದಿಗೆ ಮೇಲಧಿಕಾರಿಗಳು ಶಾಮೀಲಾಗಿರುತ್ತಾರೆ. ವಾರಕ್ಕೆ ಎರಡು ದಿನ ಸಪ್ಲೈ ಮಾಡುತ್ತಾರೆ. ಶುಕ್ರವಾರ ತರಕಾರಿ ಕಳುಹಿಸಿರುತ್ತಾನೆ ಎಂದಿಟ್ಟುಕೊಳ್ಳಿ. ಮಂಗಳವಾರ ಯಾರೋ ಒಬ್ಬ ಅಧಿಕಾರಿ ಬಂದು ಆಹಾರವನ್ನು ಪರಿಶೀಲಿಸುತ್ತಾನೆ. ಕೊಳೆತ ಬದನೆಕಾಯಿಯನ್ನೋ, ಟೊಮೊಟೊವನ್ನೋ ನೋಡಿ ವ್ಯವಸ್ಥೆ ಸರಿ ಇಲ್ಲ ಎಂದು ಬರೆದು ಹೋಗುತ್ತಾರೆ. ಸಿಕ್ಕಿಬೀಳುವುದು ವಾರ್ಡನ್‌ಗಳು ಮಾತ್ರ. ಇಲ್ಲಿ ನಿಜವಾದ ತಪ್ಪಿತಸ್ಥರು ಮೇಲಧಿಕಾರಿಗಳು ಮತ್ತು ಗುತ್ತಿಗೆದಾರರು. ಮೂಲದಲ್ಲಿ ಸರಿಯಾದರೆ ಈ ಎಲ್ಲ ಸಮಸ್ಯೆಗಳು ಬಹುತೇಕ ಬಗೆಹರಿಯುತ್ತವೆ” ಎಂದು ಅಭಿಪ್ರಾಯಪಟ್ಟರು.

ಹೀಗೆ ಸಮಾಜ ಕಲ್ಯಾಣ ಇಲಾಖೆಯ ಸಮಸ್ಯೆಗಳು ಒಂದಕ್ಕೊಂದು ಥಳುಕು ಹಾಕಿಕೊಂಡು ಕಟ್ಟಕಡೆಯದಾಗಿ ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ. ಮೂಲದಲ್ಲೇ ತೊಡಕುಗಳನ್ನು ಸರಿಪಡಿಸಿದರೆ ಮಾತ್ರ ಇವೆಕ್ಕೆಲ್ಲ ಕಡಿವಾಣ ಬೀಳಬಹುದು. ಇಲ್ಲವಾದರೆ ಸರ್ಕಾರಗಳು ಬರುತ್ತವೆ, ಹೋಗುತ್ತವೆ, ವ್ಯವಸ್ಥೆ ಮಾತ್ರ ಬದಲಾಗಲ್ಲ ಎಂಬ ಆರೋಪ ಸತ್ಯವಾಗಿ ಉಳಿಯುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ದ್ವೀಪ ರಾಷ್ಟ್ರದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ: ಮಾಲ್ಡೀವ್ಸ್ ಸಚಿವ

0
ಮಾಲ್ಡೀವ್ಸ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ರಚಿಸಲು ಭಾರತವು ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ಮಾಲ್ಡೀವ್ಸ್ ಸಚಿವ ಮೊಹಮ್ಮದ್ ಸಯೀದ್ ಹೇಳಿದ್ದಾರೆ. ಮಾಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವ ಸಯೀದ್, "ಎಫ್‌ಟಿಎಗೆ...