ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜನ್ನು ನೃಪತುಂಗ ವಿಶ್ವವಿದ್ಯಾನಿಲಯವಾಗಿ ಘೋಷಿಸಲಾಗಿದ್ದು, ವಿವಿಗೆ ಬೇಕಾಗಿರುವ ಜಾಗಕ್ಕಾಗಿ ಐತಿಹಾಸಿಕ ಹಿನ್ನೆಲೆ ಇರುವ ಸರ್ಕಾರಿ ಕಲಾ ಕಾಲೇಜನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸರ್ಕಾರದ ನಿರ್ಧಾರವನ್ನು ಖಂಡಿಸಿ  ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಈಚೆಗೆ ಪ್ರತಿಭಟನೆ ನಡೆಸಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವಿಜ್ಞಾನ ಕಾಲೇಜನ್ನು ಇತ್ತೀಚೆಗೆ ನೃಪತುಂಗ ಯೂನಿವರ್ಸಿಟಿ ಎಂದು ಮಾಡಲಾಗಿದೆ. ಈ ಕಾಲೇಜಿನ ಅಂದಾಜು ಜಾಗ ಕೇವಲ 3.7 ಎಕರೆ ಇದೆ. ಹೀಗಿದ್ದರೂ ಸರ್ಕಾರಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ‌ ಮಾಡಿದ್ದಾರೆ. ಒಂದು ಯೂನಿವರ್ಸಿಟಿ ಮಾಡಲು ಕನಿಷ್ಠ 10 ಎಕರೆ ಜಾಗ ಬೇಕು ಎಂದು ರಾಜ್ಯ ಸರ್ಕಾರದ ಆದೇಶ ಇದೆ. ನೃಪತುಂಗ ಯೂನಿವರ್ಸಿಟಿ ಈಗ ಕೇವಲ 3.7 ಎಕರೆ ಜಾಗ ಹೊಂದಿದ್ದು, ಪಕ್ಕದ ಸರ್ಕಾರಿ ಕಲಾ ಕಾಲೇಜಿನ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿರುವುದು ದುರದೃಷ್ಟಕರ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ನಮ್ಮ ಕಾಲೇಜಿನ ಜಾಗ ಹೇಗೆ ಒತ್ತುವರಿ ಮಾಡಿಕೊಳ್ಳುತ್ತೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಕಾಲೇಜು ತರಗತಿಗಳು ನಡೆಯುತ್ತಿರಲಿಲ್ಲ. ಆಗ ರಾಜ್ಯ ಸರ್ಕಾರ ಸರ್ಕಾರಿ ವಿಜ್ಞಾನ ಕಾಲೇಜನ್ನು ನೃಪತುಂಗ ಯೂನಿವರ್ಸಿಟಿಯನ್ನಾಗಿ ಮಾಡಿದೆ. ಈ ವೇಳೆ ನೃಪತುಂಗ ಯೂನಿವರ್ಸಿಟಿ ಉಪಕುಲಪತಿ ಶ್ರೀನಿವಾಸ್ ಬಳ್ಳಿ ನಕಲಿ ದಾಖಲೆ ಸೃಷ್ಟಿಸಿ ನಮ್ಮದು 11 ಎಕರೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ನೃಪತುಂಗ ಯೂನಿವರ್ಸಿಟಿ ಕುಲಪತಿ ಶ್ರೀನಿವಾಸ ಬಳ್ಳಿ ಸೃಷ್ಟಿಸಿದ ನಕಲಿ‌ ದಾಖಲೆಗಳ ಆಧಾರದ ಮೇರೆಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಅಧೀನ ಕಾರ್ಯದರ್ಶಿ ಮಹೇಶ್ ಒಂದು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಧೀನ ಕಾರ್ಯದರ್ಶಿ  ಹೊರಡಿಸಿದ ಆದೇಶ ಪ್ರತಿಯಲ್ಲಿ ಸರ್ಕಾರಿ ಕಲಾ ಕಾಲೇಜು ಜಾಗವನ್ನು ಯೂನಿವರ್ಸಿಟಿಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರಷ್ಯಾದ ವಿವಿಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 8 ಮಂದಿ ಸಾವು

“ಸರ್ಕಾರಿ ಕಲಾ ಕಾಲೇಜು ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹಿಂದೆಯೇ ಸರ್ಕಾರ ಕಲಾ ಕಾಲೇಜು‌ ಜಾಗದ ಮೇಲೆ ಪ್ರಭಾವಿ ರಾಜಕಾರಣಿಗಳ ಕಣ್ಣು ಬಿದ್ದಿತ್ತು. ಈಗಾಗಲೇ ಸರ್ಕಾರವು ಕಲಾ ಕಾಲೇಜಿನ ಒಂದಷ್ಟು ಜಾಗವನ್ನು ಸಿವಿಲ್ ಕೋರ್ಟ್, ಬೆಂಗಳೂರು ಮೆಟ್ರೋ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟಿದ್ದಾರೆ. ಈಗ ಸರ್ಕಾರ ಕಲಾ ಕಾಲೇಜಿನಲ್ಲಿ ಇರುವುದು 7 ಎಕರೆ ಜಾಗ. ಈ ಜಾಗವನ್ನು ಅಧಿಕಾರದ ದುರಾಸೆಗಾಗಿ ನೃಪತುಂಗ ಯೂನಿವರ್ಸಿಟಿ ಕುಲಪತಿ ಶ್ರೀನಿವಾಸ್ ಬಳ್ಳಿ ಮತ್ತು ಹಲವು ಅಧಿಕಾರಿಗಳು ಕಬಳಿಸಲು ಮುಂದಾಗಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ಆಕ್ರೋಶ.

****

ಐತಿಹಾಸಿಕ ಕಾಲೇಜು; ಬಡವರ ಪಾಲಿನ ದೀಪ

ಸರ್ಕಾರಿ ಕಲಾ ಕಾಲೇಜು 1886ರಲ್ಲಿ ಪ್ರಾರಂಭವಾಯಿತು. ಬ್ರಿಟೀಷ್ ಆಳ್ವಿಕೆಯಲ್ಲಿ ಪ್ರೌಢ ಶಾಲೆ ಎಂದು ಕರೆಯಲಾಯಿತು. ಮತ್ತು ಇದನ್ನು 1927ರಲ್ಲಿ ಮಧ್ಯಂತರ ಕಾಲೇಜು ಎಂದು ಕರೆಯಲಾಯಿತು. 1957ರಲ್ಲಿ ಜ್ಞಾನ ಕಾಲೇಜು ಶುರು ಆಯಿತು. ನಂತರ 1971ರಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಾಗಿ ಇಬ್ಬಾಗವಾಗಿರುತ್ತದೆ.
ಸರ್ಕಾರಿ ಕಲಾ ಕಾಲೇಜು, ಈಗಿನ ಸರ್ಕಾರಿ ಕಾಲೇಜು ಹಿಂದಿನ ಮೈಸೂರು ಸಂಸ್ಥಾನದ ಪ್ರಮುಖ ಎಂಟು ಜಿಲ್ಲೆಗಳಲ್ಲಿ ಒಂದಾಗಿದ್ದ ಬೆಂಗಳೂರು ಜಿಲ್ಲೆಯ ಪ್ರತಿಷ್ಟಿತ ಶೈಕ್ಷಣಿಕ ಸರ್ಕಾರಿ ಪ್ರೌಢ ಶಾಲೆಯಾಗಿ 1916ರಲ್ಲಿರಲ್ಲಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರು ಅವಧಿಯಲ್ಲಿ ಆರಂಭಗೊಂಡಿದೆ ಎನ್ನುತ್ತಾರೆ ವಿದ್ಯಾರ್ಥಿ ಮುಖಂಡ ಮನೋಜ್‌.

ಈ ಕಾಲೇಜಿನಲ್ಲಿ ಓದಿದಂತಹ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಹಿತಿಗಳು, ರಾಜಕಾರಣಿಗಳು, ಅಧಿಕಾರ ಶಾಹಿ ವರ್ಗಗಳಲ್ಲಿ ಸೇವೆ ಸಲ್ಲಿಸಿದ್ದು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಸಾಹಿತಿ ಡಾ.ಸಿದ್ದಲಿಂಗಯ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆ, ಎಮ್.ಎಲ್.ಸಿ. ಪುಟ್ಟಣ್ಣ ಇಂತಹ ಅನೇಕ ಗಣ್ಯರು ಸರ್ಕಾರಿ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ ಎನ್ನುತ್ತಾರೆ ಅವರು.

ಗ್ರಾಮೀಣ, ಹಿಂದುಳಿದ, ಹಾಗೂ ದುರ್ಬಲ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿ, ಜೀವನವನ್ನು ಕಟ್ಟಿಕೊಟ್ಟಂತಹ ಕಾಲೇಜು ಇದಾಗಿದೆ. ಪ್ರಸ್ತುತ ಸರ್ಕಾರಿ ಕಲಾ ಕಾಲೇಜಿನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ. ಇದರಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾಗಿದ್ದಾರೆ. ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಕಾಲೇಜು ಉಳಿಯಬೇಕು ಎಂಬುದು ಮನೋಜ್‌ ಅವರ ಅಭಿಪ್ರಾಯ.


ಇದನ್ನೂ ಓದಿ: ‘ಕಾಲವೆ ಕಥೆ ಹೇಳುತ್ತದೆ!’ – ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ

LEAVE A REPLY

Please enter your comment!
Please enter your name here