ತಮಂಧ ಮತ್ತು ಬೋಧಿ: ಒಂದು ಪತ್ರ

ಈಚೆಗೆ, ರಘುನಂದನ ಅವರು ಬರೆದ ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ? ಮತ್ತು ಫ್ಯಾಸಿಜ಼ಮ್‍ನ ನಿಜವಾದ ಗೆಲುವು ಎಂಬ ಎರಡು ಬರಹಗಳು ನಾನು ಗೌರಿ ಪತ್ರಿಕೆಯಲ್ಲಿ ಬೆಳಕು ಕಂಡವು. ಆ ಲೇಖನಗಳನ್ನು ಓದಿದ ಕನ್ನಡದ ಹಿರಿಯ ಸಾಹಿತಿಯೊಬ್ಬರು ರಘುನಂದನ ಅವರ ಮುಂದೆ ಮೂರು ಪ್ರಶ್ನೆಗಳನ್ನಿಟ್ಟರು. ಅವರು ರಘುನಂದನ ಅವರ ನೆಚ್ಚಿನ ಸಾಹಿತಿಗಳೊಬ್ಬರು ಕೂಡ ಹೌದು. ಆ ಪ್ರಶ್ನೆಗಳಿಗೆ ಉತ್ತರವಾಗಿ ಬರೆಯಲಾದ ಪತ್ರರೂಪ ಲೇಖನದ ಪರಿಷ್ಕೃತ ಆವೃತ್ತಿ ಈ ಕೆಳಗಿದೆ. ಕೊರೊನಾ ವೈರಸ್ಸಿನ ದಾಂಧಲೆ ಜೋರಾಗುವ ಮುನ್ನ, ಹತ್ತಿರ ಹತ್ತಿರ ಒಂದು ತಿಂಗಳ ಹಿಂದೆ, ಬರೆದ ಪತ್ರ-ಲೇಖನವಿದು. ಈ ಬರಹವು ವೈಯಕ್ತಿಕ ನೆಲೆಯ ನೈತಿಕ-ಆಧ್ಯಾತ್ಮಿಕ ಆತ್ಮಶೋಧ, ಮತ್ತು ಸಾರ್ವಜನಿಕ ಜೀವನದ ಧರ್ಮಶೋಧ, ಎರಡನ್ನೂ ಒಟ್ಟೊಟ್ಟಿಗೆ ಮಾಡುತ್ತದೆಯಾದ್ದರಿಂದ, ಇದನ್ನು ನಾನು ಗೌರಿ ಓದುಗರ ಮುಂದೆ ಇಡುತ್ತಿದ್ದೇವೆ. - ಸಂಪಾದಕ

ಒಂದು ಪತ್ರ

9 ಮಾರ್ಚ್ 2020

ಪ್ರೀತಿಯ …. ಅವರೇ,

ನಮಸ್ಕಾರ. ನಿಮ್ಮ ಪ್ರಶ್ನೆಗಳಿಗೆ ಕೂಡಲೆ ಉತ್ತರಿಸಲಾಗಲಿಲ್ಲ, ಕ್ಷಮೆಯಿರಲಿ. ಆದರೆ, ಉದ್ದಕ್ಕೂ ಮನಸ್ಸಿನಲ್ಲಿದ್ದವು ಅವು. ನಿಮ್ಮ ಪ್ರಶ್ನೆಗಳು:

1. ಕಾಶ್ಮೀರ ಸಮಸ್ಯೆಗೆ ಶಾಶ್ವತ‌ ಪರಿಹಾರ ಯಾವುದು, ನಿಮ್ಮ ದೃಷ್ಟಿಯಲ್ಲಿ?

2. ದಯವಿಟ್ಟು, ಸುಮ್ಮನೆ, ನೀವು ಈ ದೇಶದ ಪ್ರಧಾನಿಯಾಗಿದ್ದೀರಿ ಎಂದು ಭಾವಿಸಿಕೊಳ್ಳಿ. ಪಾಕಿಸ್ತಾನ ಜಿಂದಾಬಾದ್ ಎಂದ ವಿದ್ಯಾರ್ಥಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಿರಿ?

3. ಅಮೂಲ್ಯಳನ್ನು ಹೀಗೇ ವೇದಿಕೆಗಳ ಮೇಲೆ ಘೋಷಣೆ, ಭಾಷಣ ಮುಂದುವರೆಸಲು ಬಿಡಬೇಕೋ? ಬೇಡವೋ?

ನಾನು ಆ ಪ್ರಶ್ನೆಗಳಿಗೆ ಅವು ಕೈಸೇರಿದ ಕೂಡಲೆ ಚುಟುಕಾಗಿ ಉತ್ತರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವುದು ಸರಿಯಲ್ಲ ಅನ್ನಿಸಿತು. ಚುಟುಕಾದ ಅಂಥ ಉತ್ತರಗಳಲ್ಲಿ (ಆ ಬಗೆಯ ಭಾವನೆ ನನ್ನ ಮನಸ್ಸಿನಲ್ಲಿಲ್ಲದಿದ್ದರೂ) ಅಸಹನೆಯಿದೆ,  ಒರಟುತನ ಎಂದನ್ನಿಸಬಹುದಲ್ಲವೇ ನಿಮಗೆ ಎಂಬ ಅಂಜಿಕೆಯಿತ್ತು. ಹಾಗಾಗಿ ಉತ್ತರ ಬರೆಯಲು ತಡೆದೆ. ಜೊತೆಗೆ, ಏನೇನೋ ಕೆಲಸ…

ಈಗ ಆ ಪ್ರಶ್ನೆಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ಉತ್ತರ ನೀಡುತ್ತಿದ್ದೇನೆ.


ಈ ಹಿಂದೆ ಬರೆದ ಬರಹಗಳ ಕೊಂಡಿ ಕೆಳಗೆ ನೀಡಲಾಗಿದೆ. 

 “ಫ್ಯಾಸಿಜ಼ಮ್‍ನ ನಿಜವಾದ ಗೆಲುವು” ಹಾಗೂ “ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?”


 

ಒಂದನೆಯ ಪ್ರಶ್ನೆ

ಕಾಶ್ಮೀರ ಸಮಸ್ಯೆ. ಅಂಥ ಯಾವುದೇ ಸಮಸ್ಯೆಗೆ, ಶಾಶ್ವತವಾದ ಪರಿಹಾರ ಇಲ್ಲ, ಇರುವುದಿಲ್ಲ. ಅಂಥ ಪರಿಹಾರಕ್ಕಾಗಿ ಆಶಿಸುವುದು ಕೂಡ ಸರಿಯಲ್ಲ. ವೈಯಕ್ತಿಕವಾದ ಮಾತು ಹೇಳಬೇಕೆಂದರೆ, ಶಾಶ್ವತ ಪರಿಹಾರವನ್ನಾಗಲಿ, ಇಲ್ಲವೆ ಕೇವಲ ದೀರ್ಘಕಾಲೀನ ಪರಿಹಾರವನ್ನೇ ಆಗಲಿ ಸೂಚಿಸಲು ನಾನು ತ್ರಿಕಾಲಜ್ಞಾನಿ ಅಲ್ಲ, ಸರ್ವಶಕ್ತನಲ್ಲ.

ಯಾವುದೇ ವಿಷಯದಲ್ಲಿ, ಮತ್ತು ಯಾವುದೇ ಕೆಲಸ ಮಾಡುವುದರಿಂದ, ನಾವು  ಮುಟ್ಟಬೇಕಾದ ಗುರಿ ಯಾವುದು ಎಂದು ಹಲವೊಮ್ಮೆ ನನಗೆ – ನಮಗೆ – ಗೊತ್ತಿರುತ್ತದೆ; ಕೆಲವೊಮ್ಮೆ (ಹಲವು ಕೆಲವೊಮ್ಮೆ) ಗೊತ್ತಿರುವುದಿಲ್ಲ. ಆದರೂ – ಗುರಿ ಯಾವುದು,  ಎಲ್ಲಿದೆ ಎಂದು ಗೊತ್ತಿದ್ದರೂ, ಗೊತ್ತಿಲ್ಲದಿದ್ದರೂ – ಬದುಕಿದಷ್ಟು ದಿವಸ, ಉಸಿರಾಡುವುದು, ಕಾಲು ಹಾಕುವುದು, ಸಾಗುವುದಂತೂ ಇದ್ದೇ ಇರುತ್ತದೆ, ಅಲ್ಲವೇ? ಆಗ,

·         ನನ್ನ ಉಸಿರಾಟ ಸರಿಯಿದೆಯೋ ಇಲ್ಲವೋ ಎಂದು ನನಗೆ ಗೊತ್ತಾಗುತ್ತಿರುತ್ತದೆ, ಗೊತ್ತಾಗಬೇಕು, ಅಲ್ಲವೇ?

·         ನಾನಿಡುತ್ತಿರುವ ಹೆಜ್ಜೆಗಳು ಸರಿಯಿವೆಯೇ, ಅಥವಾ ಎಲ್ಲೆಲ್ಲಿಯೋ, ಹೇಗೆಹೇಗೋ ಕಾಲಿಡುತ್ತಿದ್ದೇನೆಯೇ  ನಾನು ಅನ್ನುವುದಾದರೂ ನನಗೆ ಗೊತ್ತಾಗುತ್ತಿರುತ್ತದೆ, ಗೊತ್ತಾಗಬೇಕು, ಅಲ್ಲವೇ?

·         ನಾನು ಸಾಗುತ್ತಿರುವ ದಾರಿ ಆತ್ಮವಂಚನೆಯ ದಾರಿಯೇ, ಪರವಂಚನೆಯ ದಾರಿಯೇ; ನಾನು ಮಾಡುತ್ತಿರುವ ಕೆಲಸ, ಕೆಲಸ ಮಾಡುತ್ತಿರುವುದರ ರೀತಿ, ಇವುಗಳಲ್ಲಿ, ಆತ್ಮವಂಚನೆಯಿದೆಯೇ, ಪರವಂಚನೆಯಿದೆಯೇ  – ಅನ್ನುವುದು ನನಗೆ ಗೊತ್ತಾಗುತ್ತಿರುತ್ತದೆ, ಗೊತ್ತಾಗಬೇಕು, ಅಲ್ಲವೇ?

ಸರಳವಾದ ಸತ್ಯವನ್ನು ಹೇಳುವ ಮಾತುಗಳವು, ಆದರೆ ಗಹನವಾದುವು. ಹಾಗಾಗಿ ಆ ಮಾತುಗಳನ್ನು ಇನ್ನು ಸ್ವಲ್ಪ ಬಿಡಿಸಿನೋಡೋಣ, ನೋಡಿಕೊಳ್ಳೊಣ.

·         ಉಸಿರಾಟ. ನಾವು ಹೆದರಿದಾಗ, ಸಿಟ್ಟಿಗೆದ್ದಾಗ, ನಮಗೆ ದುರಾಸೆಯಾದಾಗ, ನಾವು ಯಾವುದೇ ಬಗೆಯ ಯಾವುದೇ ಪ್ರಮಾಣದ ಕಾಯಿಲೆಯಿಂದ ನರಳುವಾಗ, ಬೇರೆಯವರಿಗೆ ಕೇಡೆಣಿಸುವಾಗ, ಹೊಟ್ಟೆಕಿಚ್ಚಾದಾಗ, ಹುನ್ನಾರ ಮಾಡುವಾಗ ಮುಂತಾದ ಮುಂತಾದ ಕೇಡಿನ ಪರಿಸ್ಥಿತಿ ಮತ್ತು ಭಾವಾವಸ್ಥೆಗಳಲ್ಲಿ ನಮ್ಮ ಉಸಿರಾಟ ಹೇಗಿರುತ್ತದೆ ಅನ್ನುವುದು ನನಗೂ ಗೊತ್ತಿದೆ, ನಿಮಗೂ ಗೊತ್ತಿದೆ.

ಅದೇ, ನಾವು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ನೂರಕ್ಕೆ ನೂರು ಸ್ವಸ್ಥವಾದ ಸ್ಥಿತಿಯಲ್ಲಿದ್ದಾಗ ಹೇಗಿರುತ್ತದೆ ಅದು? ನೂರಕ್ಕೆ ನೂರು ಸ್ವಸ್ಥವಾಗಿರುವುದು ಅಂದರೆ ಏನು ಎಂದು ನನಗಂತೂ ಗೊತ್ತಿಲ್ಲ; ಮತ್ತು ನಿಮಗೂ ಗೊತ್ತಿರಲಾರದು ಅನ್ನುವ ಧೈರ್ಯ ಮಾಡುತ್ತಿದ್ದೇನೆ. ಯಾಕೆಂದರೆ, ನಾನಾಗಲಿ, ನೀವಾಗಲಿ ಮತ್ತು (ಅಲ್ಲಮ, ಏಸುಕ್ರಿಸ್ತರೂ ಸೇರಿದಂತೆ) ಈ ಭೂಮಿಯಮೇಲಿರುವ ಹಾಗೂ ಆಗಿಹೋದ ಯಾರಿಗೇ ಆಗಲಿ ನೂರಕ್ಕೆ ನೂರು ಹಾಗಿರುವ ಭಾಗ್ಯ ಇರುವುದಿಲ್ಲ. ವ್ಯಕ್ತಮಧ್ಯದಲ್ಲಿ ಬಂದುರಿವವರು ನಾವು, ವಿಭಕ್ತರು.[1] ಆ ಉರಿಯ ಶಮನಕ್ಕಾಗಿ ತಹತಹಿಸುವವರು. ವಿಭಕ್ತಿಯಿದ್ದಲ್ಲಿ ತಾನೆ ಭಕ್ತಿಯ ಅಗತ್ಯ, ಶಿವೈಕ್ಯದ ತಹತಹ?

[1] ವ್ಯಕ್ತಮಧ್ಯ ಅನ್ನುವುದು ಭಗವದ್ಗೀತೆಯ ಮಾತು. ನೋಡಿ, ಭಗವದ್ಗೀತೆ, ಅಧ್ಯಾಯ 2, ಶ್ಲೋಕ 28.  ನಮ್ಮ ಹುಟ್ಟಿಗೆ ಮೊದಲಿನದ್ದು ನಮಗೆ ಅವ್ಯಕ್ತ. ನಾವು ಸತ್ತನಂತರದ್ದು ಅವ್ಯಕ್ತ. ನಮ್ಮ ಆ ಅವ್ಯಕ್ತಗಳು ನಮ್ಮ ಅನು-ಭವಕ್ಕೆ ನಿಲುಕದಂಥವು. ಅವುಗಳ ಮಧ್ಯದ್ದು, ಇಗೋ, ವ್ಯಕ್ತಮಧ್ಯ ಎಂಬ ಈ ನಮ್ಮ ಬದುಕು – ಸ್ವಲ್ಪ ಕಾಲದ್ದು ಮಾತ್ರ. ಇಹದ ಈ ಜೀವನವನ್ನು ಮಾತ್ರ ನಾವು ಅನು-ಭವಿಸಬಹುದು. ಆದರೆ, ಅವ್ಯಕ್ತದಲ್ಲಿನ ಐಕ್ಯದ, ಭಕ್ತಿಯ ಅವಸ್ಥೆಯಿಂದ ಒಡೆದು, ವಿಭಕ್ತಗೊಂಡು ಹುಟ್ಟಿದವರು ನಾವು ಆದ್ದರಿಂದ, ಆ ಅವ್ಯಕ್ತದಲ್ಲಿ ಮತ್ತೆ ಐಕ್ಯಗೊಳ್ಳುವುದಕ್ಕಾಗಿ ನಾವು ಬೇಯುವುದು ತಪ್ಪದು.

ಆದರೆ, ನಾವೆಲ್ಲರೂ, ಒಂದಲ್ಲ ಒಂದು ರೀತಿಯಲ್ಲಿ, ನಮ್ಮನಮ್ಮ ಮಿತಿಯಲ್ಲಿ, ಆಗಲೇ ಹೇಳಿದ ಕೇಡಿನ, ಉರಿಯ ಪರಿಸ್ಥಿತಿ ಮತ್ತು ಭಾವಾವಸ್ಥೆಗಳಿಂದ ನಿಜ ಸ್ವಸ್ಥತೆಯ ಸ್ಥಿತಿಯತ್ತ ಹೋಗಲು ಪ್ರಯತ್ನಮಾಡುತ್ತೇವೆ. ಆ ನಮ್ಮ ಪ್ರಯತ್ನದ ಗಳಿಗೆಗಳಲ್ಲಿ ನಮ್ಮ ಉಸಿರಾಟ ಸ್ವಲ್ಪಸ್ವಲ್ಪವೇ – ಸ್ವಲ್ಪವಾದರೂ – ಸರಿಯಿರುತ್ತದೆ, ಸರಿಯಾಗುತ್ತಹೋಗುತ್ತದೆ ಅನ್ನುವುದು ನಮಗೆಲ್ಲರಿಗೂ ನಿತ್ಯವೂ ನಮ್ಮಲ್ಲಿಯೇ ಅನುಭವಿಸಿ ಗೊತ್ತಿದೆ.

ಈಗ ನೋಡಿ, ಕಾಂಗ್ರೆಸ್ ಸರಕಾರವು ಕಾಶ್ಮೀರದಲ್ಲಿ ಮೊದಲಿನಿಂದಲೂ ಮಾಡಿರುವ, ಕೆಲವೊಮ್ಮೆ ಹೆಚ್ಚಾಗುತ್ತ, ಕೆಲವೊಮ್ಮೆ ಕಮ್ಮಿಯಾಗುತ್ತಹೋದ, ಕೇಡಿನಿಂದಾಗಿ, ನಮ್ಮ ದೇಶದ ಉಸಿರಾಟದಲ್ಲಿ, ಮತ್ತು ಕಾಶ್ಮೀರದ ಉಸಿರಾಟದಲ್ಲಿ ಎಂಥೆಂಥ ಏರುಪೇರುಗಳಾದವು! ಆದರೆ, ಈಗ? ಕಾಶ್ಮೀರ ಪ್ರದೇಶದ  ಉಸಿರಾಟದಲ್ಲಿ, ಕಾಶ್ಮೀರದ ಜನರ ಉಸಿರಾಟದಲ್ಲಿ ಏನೆಲ್ಲ ಆಗುತ್ತಿದೆ, ಗಮನಿಸಿ. ಆ ರಾಜ್ಯ, ಆ ಕಣಿವೆಯ ಜನ ಉಸಿರಾಡುತ್ತಿದ್ದಾರೋ ಇಲ್ಲವೋ ಎಂದು ಕೂಡ ನಮಗೆ ಗೊತ್ತಾಗದಂತೆ, ಆ ಕಣಿವೆಯಮೇಲೆ ದೊಡ್ಡ ಮುಸುಕು ಹಾಕಲಾಗಿದೆ. ಕಂಬಳಿಯ ಮುಸುಕಲ್ಲ ಅದು, ದಪ್ಪ ಟಾರ್ಪಾಲಿನದ್ದು. ಅಲ್ಲಿನ ಜನರು ಈಗ, ಅಥವಾ ಇನ್ನು ಮುಂದೆ, ಕೊಸರಾಡುತ್ತಾರೆ, ಪ್ರತಿಭಟಿಸುತ್ತಾರೆ ಎಂದರೆ ಸಾಕು, ಆ ನಾಡಿನಮೇಲೆ, ಆ ಜನರಮೇಲೆ ಕಾಂಕ್ರೀಟು-ಕಬ್ಬಿಣಗಳ ಸಮಾಧಿ ಮುಸುಕಿಸಲು ಈಗಿನ ಕೇಂದ್ರ ಸರಕಾರ ತಯಾರಿದೆ; ದೇಶದ ಒಂದು ವರ್ಗದ ಜನರೂ ತಯಾರಿದ್ದಾರೆ, ಚಂಡೀಗಢದಿಂದ ಹಿಡಿದು ಚೆನ್ನೈತಿರುವನಂತಪುರಗಳವರೆಗೆ, ಅಗರ್ತಲಾದಿಂದ ಹಿಡಿದು ಅಹಮದಾಬಾದಿನವರೆಗೆ. ಆ ಸಮಾಧಿಗೆ ತೋರಿಕೆಯ ಜನಸಮ್ಮತಿ ಹಾಗೂ ಪ್ರಜಾಸತ್ತೆಯ ಮುಲಾಮು ಹಚ್ಚಿ, ಪೋಷಾಕು ಹೊದಿಸಿ, ಚಂದಮಾಡಿ ಲೋಕಕ್ಕೆ ತೋರಿಸಲಾಗುತ್ತದೆ, ಅಷ್ಟೆ.

ಕಾಶ್ಮೀರದ ಜನರಂತೂ ಉಸಿರಾಡುವಂತಿಲ್ಲ, ಉಸಿರೆತ್ತುವಂತಿಲ್ಲ. ಜೊತೆಗೆ, ಅದರಿಂದ ನಮ್ಮದೇ ಉಸಿರಾಟಕ್ಕೇನಾಗಿದೆ, ಗಮನಿಸಿ. ಉಸಿರು ಬಿಗಿಹಿಡಿದು ಕೂತಿರಬೇಕಾಗಿದೆ ನಾವು, ಈ ದೇಶದ ಜನ. ಕಾಶ್ಮೀರ ಜನತೆಯ ಪರವಾಗಿ ನಾವು ಉಸಿರೆತ್ತಿದರೆ ಸಾಕು, ಉಸಿರೆತ್ತಿದ  (ಅಥವಾ ಎತ್ತಬಹುದಾದ) ಜನರಮೇಲೆ ದೇಶದ್ರೋಹದ ಕಾಯಿದೆ, ಯುಎಪಿಎ ಕಾಯಿದೆ, ಎನ್‍ಎಸ್‍ಎ ಕಾಯಿದೆ, AFSPA ಕಾಯಿದೆ, ಪಿಎಸ್‍ಎ ಕಾಯಿದೆಗಳಲ್ಲೊಂದು ಲಾಗೂ ಆಗುತ್ತದೆ…

ಸರಕಾರ, ಸೈನ್ಯ, ಗೂಢಚರ್ಯೆಯ ಸಂಸ್ಥೆಗಳು ಮುಂತಾದುವೆಲ್ಲ ಕೂಡಿ ಆಗಿರುವ ಪ್ರಭುತ್ವಶಕ್ತಿ (ಇಂಗ್ಲಿಶಿನ ಪಾರಿಭಾಷಿಕದಲ್ಲಿ the state), ಇವುಗಳು ಕೂಡ – ಎಲ್ಲಿ, ಯಾವಾಗ, ಹೇಗೆ, ಯಾವುದರಿಂದ ಏನಾಗುತ್ತದೆಯೋ ಏನೋ  ಎಂದು – ಸದಾ ಉಸಿರು ಬಿಗಿಹಿಡಿದಿರಬೇಕಾಗಿದೆ. ಎಲ್ಲರೂ, ಎಲ್ಲವೂ ಅನಾರೋಗ್ಯದಲ್ಲಿರುವ ಸ್ಥಿತಿಯಿದು.

ಕೇಡನ್ನು ಮಾಡಿದವರಿಗೆ ನಿದ್ದೆಗೇಡಿತನ ಖಾತ್ರಿ.

ಈ ವಿಷಯದಲ್ಲಿ ನಮಗೆಲ್ಲ, ಈಹಿಂದೆ ಯಾವತ್ತೂ, ಈಗಿರುವಷ್ಟು ಉಸಿರಾಟದ ತೊಂದರೆ, ನಿದ್ದೆಗೇಡಿತನ ಇರಲಿಲ್ಲ, ಗಮನಿಸಿ.

ಪ್ರೀತಿಯ …. ಅವರೇ, ಸರಿಯಾಗಿ ಉಸಿರಾಡಲು ಪ್ರಯತ್ನಮಾಡೋಣ. ಸರಿಯಾಗಿ ಉಸಿರಾಡಬೇಕು ಅನ್ನುವ ಆಶೆಯನ್ನು ಉಳಿಸಿಕೊಳ್ಳೋಣ. ಚೆನ್ನಾಗಿ ನಿದ್ದೆಮಾಡಬೇಕಾದರೆ ನಾವು ಏನನ್ನು ಮಾಡಬೇಕೋ ಅದನ್ನು ಮಾಡೋಣ. ನಳಿನಿ ಬಾಲಕುಮಾರ್, ಅಮೂಲ್ಯಾ ಲಿಯೊನಾ ಮುಂತಾದವರು ಆ ಪ್ರಯತ್ನ ಮಾಡುತ್ತಿದ್ದಾರೆ, ಆ ಆಶೆ, ಆ ಛಲ, ಆ ಸಂಕಲ್ಪ ಉಳಿಸಿಕೊಂಡಿದ್ದಾರೆ.

ನಳಿನಿ ಬಾಲಕುಮಾರ್

·         ಕಾಲುಹಾಕುವುದು, ಹೆಜ್ಜೆ, ಹೆಜ್ಜೆಗಾರಿಕೆ, ನಡೆ. ಕಟುವಾದ, ಅಶ್ಲೀಲ ಅನ್ನಿಸಬಹುದಾದ ಮಾತುಗಳಲ್ಲಿ ಹೇಳುತ್ತೇನೆ.

ಭಾರತದ ಜನರಾದ ನಾವು, ಸ್ವಾತಂತ್ರ್ಯ ಸಿಕ್ಕಕಾಲದಿಂದಲೂ – ವಿಶೇಷವಾಗಿ, ಕಳೆದ ಮೂರೂವರೆ ದಶಕಗಳಲ್ಲಿ – ಕಾಶ್ಮಿರ ಕಣಿವೆಯಲ್ಲಿ ಹೇತು, ನಮ್ಮದೇ ಹೇಸಿಗೆಯ ಹಾದಿಯಲ್ಲಿ ಕಾಲುಹಾಕುತ್ತ ನಡೆದಿದ್ದೇವೆ. ಇರುವುದೊಂದು ಹಾದಿ.  ನಡೆಯಬೇಕಾದ್ದು ಆ ಹಾದಿಯಲ್ಲಿಯೇ. ಬೇರೆ ದಾರಿಯಿಲ್ಲ. ಅದರಲ್ಲಿ ನಾವೇ ಎಲ್ಲ ಹೇತುಬಿಟ್ಟಿದ್ದೇವೆ. ಆ ದಾರಿಯನ್ನು ನಾವು ಪೂರಾ ಚೊಕ್ಕಮಾಡಬಹುದಿತ್ತೇನೋ; ಮಾಡಲು ನಮಗೆ ಮನಸ್ಸಾಗಲಿಲ್ಲ.

ಇನ್ನು, ಕೆಡುಕಿನಲ್ಲಿ ನಮ್ಮ ಪಕ್ಕದ ದೇಶದವರೇನೂ ಕಮ್ಮಿಯಲ್ಲ. ಅವರು ಕೂಡ ಅಲ್ಲಿ ಹೇಸಿಗೆಮಾಡಿಬಿಟ್ಟಿದ್ದಾರೆ; ಅಕ್ಕಪಕ್ಕದ ಹಾದಿಯಲ್ಲಿಯೂ ಹೇಸಿಗೆಮಾಡಿಬಿಟ್ಟಿದ್ದಾರೆ. ಹಾಗಾಗಿ, ಇರುವ  ಈ ಒಂದು ಹಾದಿಯಲ್ಲಿಯೇ ಸಾಗಬೇಕಾಗಿದೆ ನಾವು.

ನಮ್ಮಲ್ಲಿ, ಮೋದಿ ಸರಕಾರ ಬರುವವರೆಗೆ, ಹೇಲನ್ನು ಮೆಟ್ಟಬಾರದು ಎಂಬ ಪ್ರಜ್ಞೆಯಾದರೂ ಒಂದಷ್ಟುಮಟ್ಟಿಗೆ ಇತ್ತು. ಹಾಗಾಗಿ, ಹೇಲಿನ ಹಾದಿಯಲ್ಲಿಯೇ ನಡೆದರೂ, ಹೇಸಿಗೆಯು ಕಾಲಿಗೆ ತೀರ ಮೆತ್ತದಿರುವಂತೆ, ಏನೇನೋ ಸರ್ಕಸ್ಸು ಮಾಡುತ್ತ, ವಕ್ರವಕ್ರವಾಗಿ ಡ್ಯಾನ್ಸುಮಾಡುತ್ತ ಸಾಗಿದೆವು. ಆಗೀಗ ಕಾಲಿಗೆ ಒಂದಷ್ಟು ಹೇಸಿಗೆ ಹತ್ತುತ್ತಿತ್ತು, ನಿಜ. ಆದರೂ ನಮಗೆ ನೈತಿಕಸ್ವಚ್ಛತೆಯ ಭಾರತ ಅನ್ನುವುದೊಂದರ ಕಲ್ಪನೆ ಒಂದು ಸ್ವಲ್ಪವಾದರೂ ಇತ್ತು. (ಆಗೆಲ್ಲ, ಈವತ್ತಿರುವಂತೆ, ಕೇವಲ ಭೌತಿಕವಾದ ನೆಲೆಯಲ್ಲಿ ಭಾರತವು ಸ್ವಚ್ಛವಿದ್ದರೆ, ಅಥವಾ ಸ್ವಚ್ಛವಿರುವಂತೆ ತೋರಿದರೆ, ಸಾಕು ಎಂಬ ‘ಸ್ವಚ್ಛ ಭಾರತ’ ಘೋಷಣೆ ಇರಲಿಲ್ಲ, ಬಿಡಿ)!

ಈಗ ಏನಾಗಿದೆ ಅಂದರೆ, ಹುಸಿ ರಾಷ್ಟ್ರೀಯತೆ ಮತ್ತು ರಾಷ್ಟ್ರಸುರಕ್ಷೆಯ ಹೇಸಿದೇವರುಗಳು ಚೆಲ್ಲಾಡಿಕೊಂಡಿವೆ ದಾರಿ ತುಂಬೆಲ್ಲ. ದೈವ ದೈವವೆಂದು ಕಾಲಿಡಲಿಂಬಿಲ್ಲ.[2] ಕಾಲು ಹೇಲಿನಲ್ಲಿ ಪೂರ್ತಿ ಹೂತುಹೋಗಿಬಿಟ್ಟಿದೆ, ಮೊಳಕಾಲು, ತೊಡೆಗಂಟ. ಆದರೆ ನಾವೋ ‘‘ಇಲ್ಲ, ಇಲ್ಲ, ಏನೂ ಹೂತುಹೋಗಿಲ್ಲ. ಎಲ್ಲ ಸರಿಯಿದೆ,’’ ಎಂದು ನಟಿಸುತ್ತ, ಮೈಗೆಲ್ಲ ಸೆಂಟುಪೂಸಿಕೊಂಡು, ಹೊರಗಿನ ದೇಶಗಳ ಸಂಸದರನ್ನು ಕರೆದು, ಅವರ ಕಾಲಿಗೆ ಹೇಲುಮೆತ್ತದಂತೆ, ನಮ್ಮ ಹೆಗಲಮೇಲೆ ಕೂರಿಸಿಕೊಂಡು ಅಲ್ಲೆಲ್ಲ ಸುತ್ತಾಡಿಸಿದ್ದೇವೆ. ಅವರೇನೂ ಕುರುಡರಲ್ಲ. ಅವರಿಗೂ  ಗೊತ್ತು, ನಮ್ಮದೆಲ್ಲ ಬಡಿವಾರ ಎಂದು. ಹುಳ್ಳಗೆ ನಕ್ಕರು ಅವರು; ಪುಕ್ಕಟೆ ಟ್ರಿಪ್ಪು ಹೊಡೆದರು; ವಾಪಸ್ ಹೋದರು.

[2] ಬಸವಣ್ಣನವರ ವಚನ. ಮಡಕೆ ದೈವ / ಮೊರ ದೈವ / ಬೀದಿಯ ಕಲ್ಲು ದೈವ… ಎಂದು ಮೊದಲಾಗುತ್ತದೆ.

·         ಸಾಗುವದಾರಿ.  ಮೇಲಿನ ಪಾಯಿಂಟು ಮತ್ತು ಈಗ ಮುಂದಿಡುತ್ತಿರುವ ಈ ಪಾಯಿಂಟು, ಎರಡೂ ಒಂದೇ ಅನ್ನಿಸಬಹುದಾದರೂ, ಅವು ಒಂದೇ ಅಲ್ಲ, ಬೇರೆಬೇರೆಯೇ ಆದವು. ಮೇಲಿನ ಪಾಯಿಂಟಲ್ಲಿ ನಾವು ಗಮನಿಸಬೇಕಾದದ್ದು ಹೆಜ್ಜೆಗಾರಿಕೆ ಕುರಿತಾದ ಮಾತನ್ನು. ಈ ಈಗ ಮಾಡುತ್ತಿರುವ ಪಾಯಿಂಟಲ್ಲಿ ನಾವು ಗಮನಿಸಬೇಕಾದದ್ದು ನಾವೆಲ್ಲ ಸಾಗುತ್ತಿರುವ, ಸಾಗಬೇಕಾದ ದಾರಿಯನ್ನು.

ಏನು ಮಾಡಬಹುದು ನಾವು, ಏನು ಮಾಡಬೇಕು? ದಾರಿಯಲ್ಲಿರುವ ಹೇಲನ್ನು ಸಂಪೂರ್ಣ ಬಾಚಿ, ಹೂತುಹಾಕಿ, ಹಾದಿಯನ್ನು ತೊಳೆಯಬೇಕು. ಇನ್ನು, ಅದು ಕಲ್ಲುಮುಳ್ಳಿನ ಹಾದಿ ಕೂಡ.  ಕಲ್ಲನ್ನು ಪೂರ್ತಿ ತೆಗೆದುಹಾಕಲು ಬರುವುದಿಲ್ಲ: ಯುಗಧರ್ಮ ಅನ್ನಿ, ಈ ಉಪಭೂಖಂಡದ ಇತಿಹಾಸದ ಬಳುವಳಿ ಅನ್ನಿ. ಕೆಲವು ಶತಮಾನ ಬೇಕು ಕಲ್ಲು ಇಲ್ಲವಾಗಲು; ಬೇಕಿದ್ದರೆ, ‘ದೇವರ ದಯೆಯೂ ಬೇಕು’ ಅನ್ನೋಣ.

ಆದರೆ ಮುಳ್ಳಿನ ಕಂಟಿ ತೆಗೆಯುವುದು ಸಾಕಷ್ಟುಮಟ್ಟಿಗೆ ನಮ್ಮ ಕೈಯಲ್ಲಿದೆ. ಅದನ್ನು  ಬೇರುಸಮೇತ ತೆಗೆದುಹಾಕಲಾಗದಿದ್ದರೂ  ಆದಷ್ಟು ಸವರಿಹಾಕಬಹುದು. ಈಗೇನು ಮಾಡುತ್ತಿದ್ದೇವೆ ಅಂದರೆ, ಆ ಹಾದಿಯಲ್ಲಿ ಇನ್ನಷ್ಟು ಕಲ್ಲು ತೂರಿ, ಇನ್ನಷ್ಟು ಮುಳ್ಳು ಬೆಳೆಸಿ, ಇನ್ನಷ್ಟು ಹೇತು, ಅದರಲ್ಲೇ ಮುಳುಗಿ ಹೆಜ್ಜೆ ಕಿತ್ತಿಡುವ ನಟನೆ ಮಾಡುತ್ತಿದ್ದೇವೆ.

ಅದನ್ನೇ ಇನ್ನೊಂದು ರೀತಿಯಲ್ಲಿ ಬಣ್ಣಿಸಿಕೊಳ್ಳೋಣ. ಈಗ, ಕಳೆದ ಹಲವು ತಿಂಗಳುಗಳಲ್ಲಿ, ಕಲ್ಲುಮುಳ್ಳುಹೇಲಿನ ಆ ದಾರಿಯಲ್ಲಿ ನಾವು ಆ ಕಣಿವೆಯ ಮಕ್ಕಳನ್ನು ಮತ್ತು  – ನನ್ನ ಮಗಳು, ನಿಮ್ಮ ಮಕ್ಕಳು ಸೇರಿದಂತೆ – ಭಾರತದ ಉಳಿದ ನಮ್ಮ ಮಕ್ಕಳನ್ನು ದಬ್ಬಿ, ಚೆಲ್ಲಿ, ಮಕಾಡೆ, ಅಂಗಾತ ಮಲಗಿಸಿಬಿಟ್ಟಿದ್ದೇವೆ. ಅವರು ಅಲ್ಲಿಂದ ಏಳಲಾರರು. ಅವರನ್ನು ಎಬ್ಬಿಸಿ, ಕಂಕುಳಿಗೆ, ಹೆಗಲಿಗೆ ಏರಿಸಿಕೊಳ್ಳುವಷ್ಟು  ವಿವೇಕವಾಗಲಿ, ಹೃದಯವಂತಿಕೆಯಾಗಲಿ ನಮಗಿಲ್ಲ. ಈ ಹಿಂದೆ, ಆ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಮಾಡುತ್ತಿದ್ದೆವು. ಈಗ ಅದೂ ಇಲ್ಲ. ಹೇಲಲ್ಲಿ, ಕಲ್ಲುಮುಳ್ಳಿನಲ್ಲಿ ಮುಚ್ಚಿಹೋಗುತ್ತಿರುವ ಮಕ್ಕಳ ಮುಖದಮೇಲೆ, ಬೆನ್ನಮೇಲೆ, ಅಂಗಾಂಗಗಳಮೇಲೆ ನಮ್ಮೆಲ್ಲ ಭಾರ ಊರಿ, ಕಲ್ಲುಮುಳ್ಳುಹೇಲಿನಲ್ಲಿ ಹೂತುಹೋಗಿರುವ ನಮ್ಮ ಕಾಲುಗಳನ್ನು ಎತ್ತೆತ್ತಿಯಿಟ್ಟು ಹೆಜ್ಜೆಹಾಕುವ ಪ್ರಯತ್ನಮಾಡುತ್ತಿದ್ದೇವೆ. ಆದರೆ… ಕಾಲು ಇನ್ನಷ್ಟು ಹುಗಿದುಹೋಗುತ್ತಿದೆ… ಮಕ್ಕಳ ಕೈಕಾಲುಮುಖಗಳನ್ನು ಇನ್ನಷ್ಟು ಬಿರುಸಾಗಿ, ಇನ್ನಷ್ಟು ಬಲವಾಗಿ ತುಳಿಯುತ್ತಿದ್ದೇವೆ.

ಕ್ರೂರವಾಯಿತಲ್ಲ, ಮಾತು? ಇದು ಕೇವಲ ಮಾತು, ಅಷ್ಟೆ. ಇದೇ ಇಷ್ಟು ಕ್ರೂರವಾಗಿದೆ ಅನ್ನಿಸಿಬಿಟ್ಟರೆ, ಇನ್ನು ಕಾಶ್ಮೀರದ ಜನರ ಅಸಲಿ ಬದುಕು ಹೇಗಿರಬೇಡ, ಹೇಳಿ. ಅಲ್ಲಿನ ಜನರ ಪಾಡನ್ನು ಅನುಭೂತಿಯಿಂದ, ನಿಜವಾದ ಕಾಂತತೆ ಮತ್ತು ಆಕ್ರಾಂತತೆಗಳಿಂದ ಅನು-ಭವಿಸಿ ನೋಡಿ.

ಮೊಗಳ್ಳಿ ಗಣೇಶರ  ‘ಬುಗುರಿ’ ಕಥೆಯನ್ನು ಓದಿದಾಗ, ಬೆಚ್ಚಿಬೀಳ್ತೇವೆ, ಹೌದು. ಅದರ ಜೊತೆಗೆ, ಕಥೆಯನ್ನು ಓದುವ ಸುಖ, ಓದಿದ ಸುಖ ಪಡೆಯುತ್ತೇವೆ; ತಥಾಕಥಿತ ‘ಕಲಾನುಭವ’ ಪಡೆಯುತ್ತೇವೆ. ಆದರೆ, ನಿಜಕ್ಕೂ ಹೇಲಿನ ಗುಂಡಿಯಲ್ಲಿ ಬಿದ್ದಿರುವ ಆ ಬುಗುರಿ ಯಾರು ಅಂದರೆ, ನಾವೇ! ಅಂಥ ಗುಂಡಿಯಲ್ಲಿನ ಆ ಜನ, ಆ ನಾವು, ಆ-ಈ ನಮ್ಮ ನಿಜದ ಪಾಡೇನು? ಯೋಚಿಸಿ.  ಅಲ್ಲ, ಅಲ್ಲ, ಭಾವಿಸಿ. Feel ಮಾಡಿ.

ಈ ಹಿಂದಿನ ಆ ವಾಕ್ಯದಲ್ಲಿ, ನಿಜ ಅನ್ನುವುದಕ್ಕೆ ಶಿವಶರಣ ವಚನಕಾರರ ಮಾತಿನಲ್ಲಿ ಬರುವ ನಿಜ ಅರ್ಥವಿದೆ.

ತಾತ್ಪರ್ಯದಲ್ಲಿ, ನಿಮ್ಮ ಮೊದಲನೆಯ ಪ್ರಶ್ನೆಗೆ ಉತ್ತರ ಇಷ್ಟೆ. ಶಾಶ್ವತ ಪರಿಹಾರ ಯಾವುದು, ನನಗೆ ಗೊತ್ತಿಲ್ಲ. ತುಳಿಯುವಹಾದಿಯ ಸ್ವಚ್ಛತೆಯ ಬಗ್ಗೆ ಪ್ರಜ್ಞೆಯಿರಬೇಕು,  ವಿವೇಕವಿರಬೇಕು.  ಹೆಜ್ಜೆಹಾಕುವಾಗ,  ಬಿದ್ದವರನ್ನು – ನಮ್ಮ ಮಕ್ಕಳನ್ನು – ಎತ್ತಿ ಕಂಕುಳಿಗೆ ಏರಿಸಿಕೊಳ್ಳುವ, ಅಥವಾ ನಮ್ಮ ಜೊತೆ ನಡೆಸುವ, ಕನಿಷ್ಠ ಮನುಷ್ಯತ್ತ್ವ, ಜೀವಂತಿಕೆ ಇರಬೇಕು (ಇಲ್ಲಿ ನನಗೆ  ಮಾತು ಸೋತಿದೆ. ಮನುಷ್ಯತ್ತ್ವ, ಜೀವಂತಿಕೆ ಎಂಥ ನಿಸ್ಸಾರವಾದ ಮಾತುಗಳವು! ಮಾತು ಸೋತಿದೆ).

ಈಗಷ್ಟೆ ಹೇಳಿದ ಆ ಪ್ರಜ್ಞೆ, ವಿವೇಕ, ‘ಮನುಷ್ಯತ್ತ್ವ’, ‘ಜೀವಂತಿಕೆ’ – ಇವೆಲ್ಲ ಇದ್ದರೆ, ಉಳಿದಿದ್ದರೆ, ಆಗ ಉಸಿರಾಟ ಕೂಡ ಒಂದು ಸ್ವಲ್ಪ ಸರಿಯಾಗುತ್ತದೆ.

ಸಮಸ್ಯೆ ಪರಿಹರಿಸೋದು, ಗುರಿಯನ್ನು – ಫಜಾರಗಟ್ಟಿಯನ್ನು – ಮುಟ್ಟಿಬಿಡೋದು ಮುಖ್ಯ ಅಲ್ಲ. ತುಳಿಯೋ ದಾರಿ, ಹಾಕೋ ಹೆಜ್ಜೆ, ತೊಗೊಳ್ಳೋ-ಬಿಡೋ ಉಸಿರು ಮುಖ್ಯ.

ಈಗ, ಪ್ರಾಕ್ಟಿಕಲ್ ಆದ, ವ್ಯಾವಹಾರಿಕವಾದ ಮಾತು ಹೇಳುತ್ತೇನೆ.

ಕಾಶ್ಮೀರವು ಏನಾಗಬೇಕು? ಕಾಶ್ಮೀರದ ಜನ ಭಾರತದ ಭಾಗವಾಗಿರಲು ಬಯಸುತ್ತಾರೋ, ಪಾಕಿಸ್ತಾನದ ಭಾಗವಾಗಿಯೋ? ಅಥವಾ, ತಮ್ಮ ನಾಡು, ಆ ಎರಡಕ್ಕೂ ಸೇರದೆ, ಸ್ವತಂತ್ರವಾದ ಪುಟ್ಟ ದೇಶವಾಗಿರಬೇಕು ಎಂದು ಬಯಸುತ್ತಾರೋ ಅವರು?

ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ನಾವು  ವಿಶ್ವಸಂಸ್ಥೆ ಹಾಗೂ ಅಂತರಾಷ್ಟ್ರೀಯ ವ್ಯವಸ್ಥೆಯೊಂದರ ಕಣ್ಗಾವಲಲ್ಲಿ ಕಾಶ್ಮೀರದ ಜನರಲ್ಲಿ ನಿಜವಾದೊಂದು ರೆಫರೆಂಡಮ್, ಪ್ಲೆಬಿಸೈಟ್ (referendum, plebiscite) ನಡೆಸಬೇಕು. ಆ ರೆಫರೆಂಡಮ್, ಪ್ಲೆಬಿಸೈಟ್ (referendum, plebiscite) ಅನ್ನುವುದು ಕಾಶ್ಮೀರೀ ಪಂಡಿತರನ್ನೂ ಒಳಗೊಳ್ಳಬೇಕು.

ಕಷ್ಟಕ್ಕೋ ಸುಖಕ್ಕೋ ಅದು ಆಗಲೇಬೇಕು.

ಸರಿ, referendum, plebiscite ಆಯಿತು ಅನ್ನೋಣ. ಆಗ, ಒಂದು ವೇಳೆ, ಅದರಲ್ಲಿ, ಬಹುಮತವು ಕಾಶ್ಮೀರವೊಂದು ಹೊಸ, ಸ್ವತಂತ್ರ ಗಣರಾಜ್ಯ-ದೇಶವಾಗಬೇಕು ಅನ್ನುವುದರ ಪರವಾಗಿ ಇದ್ದರೆ, ಪಾಕಿಸ್ತಾನದ ಕೈವಶವಾಗಿರುವ ಕಾಶ್ಮೀರದ ಭಾಗವಿದೆಯಲ್ಲ (ಯಾವುದನ್ನು ಪಾಕಿಸ್ತಾನವು ಆಜಾ಼ದ್ ಕಾಶ್ಮೀರ್ ಎಂದು ಕರೆಯುತ್ತಬಂದಿದೆಯೋ,ಯಾವುದನ್ನು ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುತ್ತಬಂದಿದೆಯೋ ಅದು), ಆ ಭೂಭಾಗವೂ ಕಾಶ್ಮೀರ ಗಣರಾಜ್ಯವೆಂಬ ಆ ಹೊಸ, ಸ್ವತಂತ್ರ ಪುಟ್ಟ ದೇಶಕ್ಕೆ ಸೇರಬೇಕು ಎಂದು ನಾವು ಅಂತಾರಾಷ್ಟ್ರೀಯ ಒತ್ತಡ ತರಬೇಕು.

ಅದಲ್ಲದೆ, ತುಂಬ ಮುಖ್ಯವಾಗಿ, ಆ ಹೊಸ ದೇಶದಲ್ಲಿ, ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಒತ್ತಾಯ ಹಾಗೂ ಒಪ್ಪಂದಗಳ ಮೇರೆಗೆ, ಈ ಕೆಳಗಿನ ಎರಡು-ಮೂರು ನಿಯಮನೀತಿಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು:

1.    ಕಾಶ್ಮೀರ ಗಣರಾಜ್ಯ-ದೇಶದಲ್ಲಿ ಕಾಶ್ಮೀರೀ ಪಂಡಿತರಿಗೆ, ಅಲ್ಲಿನ ಬಹುಸಂಖ್ಯಾತರಾಗುವ ಮುಸಲ್ಮಾನರಿಗೆ ಸರಿಯೆಣೆಯಾಗಿ, ಎಲ್ಲ ಹಕ್ಕುಗಳೂ ಇರಬೇಕು. ಕಾಶ್ಮೀರೀ ಪಂಡಿತರಿಗೆ ಯಾವುದರಲ್ಲಿಯೂ ಮೋಸವಾಗಬಾರದು.

2.    ಅಲ್ಲಿ ಭಾರತವಾಗಲಿ, ಪಾಕಿಸ್ತಾನವಾಗಲಿ ಯಾವುದೇ ಬಗೆಯ ಕೆಟ್ಟ ಕೈವಾಡ-ಕರಾಮತ್ತು ಮಾಡಬಾರದು. ಬದಲಿಗೆ ಕಾಶ್ಮೀರವು ತಮ್ಮಿಬ್ಬರ ಅಭಿಮಾನದ ನೆಂಟನೆಂದು ತಿಳಿದು, ನಮ್ಮೆರಡೂ ದೇಶಗಳು ಕೂಡಿ ಆ ನಾಡಿಗೆ ಎಲ್ಲ ಒತ್ತಾಸೆ, ಎಲ್ಲ ನೆರವು ನೀಡಬೇಕು.

3.    ಮೇಲೆ ಹೇಳಿದಂತೆ, ಆ ಹೊಸ ದೇಶದಲ್ಲಿ:

·         ಮುಸಲ್ಮಾನರು ಮತ್ತು ಕಾಶ್ಮೀರೀ ಪಂಡಿತರ ಹಕ್ಕುಗಳು ಪರಸ್ಪರ ಸಮಾನವಾಗಿರುವಂತೆ ನೋಡಿಕೊಳ್ಳಲು,

·         ಭಾರತ ಪಾಕಿಸ್ತಾನಗಳ  ಯಾವುದೇ ಕೆಟ್ಟ ಕೈವಾಡ-ಕರಾಮತ್ತು ಆಗದಂತೆ ನೋಡಿಕೊಳ್ಳಲು,

·         ಮತ್ತು ಕಾಶ್ಮೀರಕ್ಕೆ, ನಮ್ಮೆರಡು ದೇಶಗಳಿಂದ, ಒಳ್ಳೆಯ ನೆರವು, ಒತ್ತಾಸೆ ಒದಗುವಂತೆ ನೋಡಿಕೊಳ್ಳಲು,

ಬಲಿಷ್ಠವಾದ ಅಂತಾರಾಷ್ಟ್ರೀಯಸಮಿತಿಯೊಂದು ಇರಬೇಕು.

ಆ ಸಮಿತಿಗೆ ಕಾಶ್ಮೀರದ ಆಡಳಿತದಮೇಲೆ ಅಧಿಕಾರವಿರಬಾರದು. ಆದರೆ ಆ ನಾಡಿನಲ್ಲಿ, ಮುಸಲ್ಮಾನರು ಮತ್ತು ಕಾಶ್ಮೀರೀ ಪಂಡಿತರಿಗೆ ಪರಸ್ಪರ ಸಮಾನವಾದ ನಾಗರಿಕ ಹಕ್ಕುಗಳಿವೆಯೇ ಎಂದು ಗಮನಿಸಿ, ಅದು ಹಾಗಿಲ್ಲದಿದ್ದರೆ ಆ ವಿದ್ಯಮಾನವನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಚುರಪಡಿಸಿ, ಆ ವಿಷಯದಲ್ಲಿ ನ್ಯಾಯವಾದ ಮತ್ತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು, ಹಾಗೂ ಭಾರತ-ಪಾಕಿಸ್ತಾನಗಳ ವರ್ತನೆಯನ್ನು ತಿದ್ದಲು, ಅವುಗಳಿಗೆ ಸಲಹೆ ನೀಡಲು ಆ ಸಮಿತಿಗೆ ದೊಡ್ಡ ಪ್ರಮಾಣದ ಅಧಿಕಾರವಿರಬೇಕು.

ಆ ಸಮಿತಿಯ ಕಚೇರಿ ಕಾಶ್ಮೀರದಲ್ಲಿಯೇ ಇರಬೇಕು. ಆಗ ಅದಕ್ಕೆ ಕಣ್ಗಾವಲು ನಿಲ್ಲಲು ಅನುಕೂಲವಾಗುತ್ತದೆ. ಈಗ ನನ್ನ ಅಲ್ಪಮತಿಗೆ ತೋರುವಂತೆ, ಅಂಥ ಸಮಿತಿಯಲ್ಲಿ, ಸ್ಕ್ಯಾಂಡಿನೇವಿಯಾದ ಸ್ವೀಡೆನ್, ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳು ಹಾಗೂ  ಕ್ಯೂಬಾ ದೇಶಗಳ ಪ್ರತಿನಿಧಿಗಳಿದ್ದು, ಅವರ  ಕೈಮೇಲಾಗಿದ್ದರೆ ಒಳ್ಳೆಯದು. ಯಾಕೆಂದರೆ, ಇಂದಿನ ಪ್ರಪಂಚದ ಉಳಿದ ದೇಶಗಳಿಗಿಂತ ಆ ದೇಶಗಳ ಜನಜೀವನ ಮತ್ತು ಆಡಳಿತದ ಮೌಲ್ಯಗಳು ಹೆಚ್ಚು ಪ್ರಜಾಸತ್ತಾತ್ಮಕವಾಗಿವೆ ಎಂದು ತೋರುತ್ತಿದೆ.

ಮುಖ್ಯವಾದ ಮಾತು: ಇದೆಲ್ಲ ಅವಾಸ್ತವಿಕ, ಹಗಲುಗನಸು ಎಂದು ತಳ್ಳಿಹಾಕಬೇಡಿ. ಕಾಶ್ಮೀರ ಕಣಿವೆಯ ಎಪ್ಪತ್ತು ಲಕ್ಷ ಜನರ ಬಾಯಿಕಟ್ಟಿ, ಅವರನ್ನು ಬೂಟಿಗಾಲಿನಡಿ ಇಟ್ಟುಕೊಂಡು ಆಳುತ್ತೇವೆ ಎಂಬ ವಿಚಾರದಷ್ಟು ಅವಾಸ್ತವಿಕವಲ್ಲ ಇದು.

ಕಾಶ್ಮೀರವು ಭಾರತದ ‘ಅವಿಭಾಜ್ಯ ಅಂಗ’ ಎಂದು ಎಲ್ಲ ರಾಜಕೀಯ ಪಕ್ಷಗಳೂ ಬೊಗಳೆಹೊಡೆಯುತ್ತ, ಬೊಗಳುತ್ತ ಬಂದಿವೆ – ಎಡಪಕ್ಷಗಳು ಕೂಡ. ಆ ಅಪರಾಧವೆಸಗಿದವರು ಕೇವಲ ರಾಜಕೀಯ ಪಕ್ಷಗಳು, ಅವುಗಳ ನಾಯಕರುಗಳು, ಸರಕಾರಗಳು, ಸೇನಾಪಡೆಗಳು ಮಾತ್ರವಲ್ಲ; ನಾವು, ನಾವೆಲ್ಲರೂ ಆ ಅಪರಾಧಮಾಡುತ್ತಿದ್ದೇವೆ.

ತಾವು ಈ ದೇಶದ ಅವಿಭಾಜ್ಯ ಅಂಗ ಎಂದು ಕಾಶ್ಮೀರದ ಜನರೇ ಹೇಳಿಕೊಳ್ಳುವಂತಾಗಬೇಕಿತ್ತಲ್ಲವೆ? ಹಾಗಿರಬೇಕಿತ್ತಲ್ಲವೇ, ಈ ನಮ್ಮ ಘನತೆವೆತ್ತ, ಭಾರತಮಾತೆಯ ನಡವಳಿಕೆ?!! ಆದರೆ, ಭಾರತದ ತಥಾಥಿತ ಮುಖ್ಯಭೂಭಾಗದ ಜನರಾದ ನಾವು (ಅಂದರೆ ಪಂಜಾಬದಿಂದ ಹಿಡಿದು ತಮಿಳುನಾಡು-ಕೇರಳಗಳವರೆಗೆ, ಗುಜರಾತದಿಂದ ಹಿಡಿದು ಪಶ್ಚಿಮ ಬಂಗಾಳದವರೆಗಿನ, ಬಹುತೇಕ ಹಿಂದೂ mainland ಜನರಾದ ನಾವು) ಈ ವಿಷಯದಲ್ಲಿ ನಿಜವಾಗಿಯೂ ಮಾಡಿದ್ದೇನು, ಈ ಎಪ್ಪತ್ತು ವರ್ಷಗಳಲ್ಲಿ…? ಮೌನವಾಗಿ, ಪ್ರಾಮಾಣಿಕವಾಗಿ ನಮ್ಮ ನಡವಳಿಕೆಯನ್ನು ಧ್ಯಾನಿಸಿ ನೋಡಿಕೊಳ್ಳೋಣ…

ಉತ್ತರ ಸಿಕ್ಕಿತಲ್ಲವೇ?… ಹೇಸಿಗೆಯ ವರ್ತನೆಯಲ್ಲವೇ, ನಮ್ಮದು, ಭಾರತಮಾತೆ ಅನ್ನಿಸಿಕೊಳ್ಳುವವಳ ಮಕ್ಕಳದ್ದು?

ಯಾಕೆ ಹೀಗೆ ಆಡುತ್ತಬಂದಿದ್ದೇವೆ ನಾವು? ಯಾಕೆಂದರೆ, ಪಾಕಿಸ್ತಾನಕ್ಕೆ ಹೋಲಿಸಿದರೆ ನಾವೊಂದು ಸೆಕ್ಯುಲರ್ ದೇಶ ಎಂದು ನಮಗೆ ಲೋಕಕ್ಕೆಲ್ಲ ತೋರಿಸಿಕೊಂಡು ಬೀಗಬೇಕಾಗಿದೆ. ನಮಗೆ,1947ರಿಂದಲೂ, ಕಾಶ್ಮೀರ ಎಂದರೆ ನಮ್ಮ ಎದೆಯಮೇಲೆ ತೂಗಿಹಾಕಿಕೊಂಡು ಬೀಗಲು ಬೇಕಾದ ಒಂದು ಪದಕ, ಒಂದು ಒಡವೆಯಷ್ಟೆ ಆಗಿದೆ. ನಮ್ಮ ನಿಮ್ಮಂಥ ಜೀವಿಗಳಿರುವ ನಾಡು ಅದು ಎಂದು ನಮಗೆ ನಿಜಕ್ಕೂ ಅನ್ನಿಸಿಲ್ಲ. ಈ ಮಾತು ಈ ಭಾರತಮಾತೆಯ ಈಶಾನ್ಯ ಸೆರಗನ್ನು ಕುರಿತು ಕೂಡ ಆಡಬಹುದಾದದ್ದು, ಆಡಬೇಕಾದದ್ದು.  ಹಾಗೆಯೇ ನಮ್ಮ ದೇಶದ ದ್ವೀಪರಾಜ್ಯಗಳನ್ನು ಕುರಿತಾಗಿ ಕೂಡ.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಲಕ್ಷದ್ವೀಪಗಳು, ದೀವ ಮತ್ತು ದಮನ್ ಮುಂತಾದುವು ನಿಜಕ್ಕೂ ನಮ್ಮ ಭಾವಕೋಶದ ಭಾಗವಾಗಿಯೇ ಇಲ್ಲ. ಉದಾಹರಣೆಗೆ, ಉತ್ತರ ಪ್ರದೇಶದ ಕಾಶಿ, ಇಲ್ಲವೆ ಸಾರನಾಥ್, ಗುಜರಾತಿನ ವಡೋದರ, ಇಲ್ಲವೆ ಸಬರಮತಿ, ಒಡಿಶಾದ ಪುರಿ, ಇಲ್ಲವೆ ಕೊಣಾರ್ಕ, ಮುಂತಾದ ಜಾಗಗಳನ್ನು ನೆನೆದಾಗ, ಮಧ್ಯಪ್ರದೇಶದ ಉಜ್ಜಯಿನಿ, ವಿದಿಶಾ, ಖಜುರಾಹೊಗಳನ್ನು ನೆನೆದಾಗ ನಮ್ಮ ಎದೆ ಬೆಚ್ಚಗಾಗುವಂತೆ, ಪ್ರೀತಿಯ ಸಣ್ಣದೊಂದು ಪುಳಕ ನಮ್ಮಲ್ಲಿ ಏಳುವಂತೆ, ಕಾಶ್ಮೀರವನ್ನಾಗಲಿ, ಈ ದ್ವೀಪಗಳನ್ನಾಗಲಿ, ಈಶಾನ್ಯದ ರಾಜ್ಯಗಳನ್ನಾಗಲಿ ನೆನೆದಾಗ ಆಗುವುದಿಲ್ಲ, ಏಳುವುದಿಲ್ಲವಲ್ಲ!

ಕಾಶ್ಮೀರವಾಗಲಿ, ಅಂಡಮಾನ್‍ ಮತ್ತು ನಿಕೊಬಾರ್ ಮುಂತಾದ ದ್ವೀಪಗಳಾಗಲಿ, ಈಶಾನ್ಯದ ರಾಜ್ಯಗಳಾಗಲಿ – ಅಂಚಿನ ಆ ನಾಡುಗಳೆಲ್ಲ ನಮ್ಮ ಅಹಂಕಾರವನ್ನು ಪೋಷಿಸಿಕೊಳ್ಳಲು ನಾವು ಇಟ್ಟುಕೊಂಡಿರುವ ಪದಕಗಳು, ರಜೆಯ ದಿನಗಳ ನಮ್ಮ ವಿಲಾಸಕ್ಕೆ, ವಿಹಾರಕ್ಕೆ, ಚಲನಚಿತ್ರಗಳ ಷೂಟಿಂಗಿಗೆ ಬೇಕಾದ ತಾಣಗಳು.

ಈಶಾನ್ಯದ ರಾಜ್ಯಗಳು ಹಾಗೂ ಅಂಡಮಾನ್-ನಿಕೊಬಾರ್ ಗಳಂತೂ, ಬ್ರಿಟಿಶರ ಕಾಲದಿಂದಲೂ, ನಮಗೆ ನಾಟಾ (ಚೌಬೀನೆ) ಒದಗಿಸುವ ಅರಣ್ಯತಾಣಗಳು, ‘ಕಾಡು’ ಜನ ಇರುವ ಜಾಗಗಳು. ಆ ವಿಷಯದಲ್ಲಿ, ನಮ್ಮ ಮನೋಭಾವ ಮತ್ತು ನಡವಳಿಕೆಯಲ್ಲಿ ಈವತ್ತಿಗೂ ಬಹಳವೇನೂ ಬದಲಾವಣೆ ಆಗಿಲ್ಲ.  ಹೇಸಿಗೆಯ ವರ್ತನೆಯಲ್ಲವೇ ನಮ್ಮದು? ನಮ್ಮನ್ನು ಕಂಡು ನಮಗೆ ನಾಚಿಕೆಯಾಗಬೇಕಲ್ಲವೇ, ದುಃಖವಾಗಬೇಕಲ್ಲವೇ?

ಅದಿರಲಿ, ರೆಫರೆಂಡಮ್, ಪ್ಲೆಬಿಸೈಟುಗಳ ಮಾತಿಗೆ ಮರಳೋಣ.

ಯುನೈಟಡ್ ಕಿಂಗ್‍ಡಮ್‍ನ ಬೇರೆಬೇರೆ ಬಣಗಳವರು ಪರಸ್ಪರ ತೀವ್ರವಾಗಿ ಜಗಳವಾಡುತ್ತ, ತೀವ್ರ ಮನಸ್ತಾಪ ಮಾಡಿಕೊಳ್ಳುತ್ತ, ಪರಸ್ಪರ ತೀವ್ರವಾಗಿ ಬೈದುಕೊಳ್ಳುತ್ತ – ಎಲ್ಲ ಬೇಗುದಿಯ ನಡುವೆಯೂ – Brexit ಅನ್ನು ಸಾಕಷ್ಟು ಪ್ರಜಾಸತ್ತಾತ್ಮಕವಾಗಿ ಹೇಗೆ ನಿಭಾಯಿಸಿಕೊಂಡಿದ್ದಾರೆ, ನೋಡಿ. ಅಲ್ಲಿ ಈಗಲೂ Brexit ವಿಷಯದಲ್ಲಿ ಒಮ್ಮತವಿಲ್ಲ. ಆದರೆ, ಈ ತೀರ್ಮಾನಕ್ಕೆ ಬರಲು  ಅವರು ತುಳಿದ ದಾರಿ ಈವತ್ತಿನ ಲೋಕದ, ಈವತ್ತಿನ ಮಾನುಷ ವ್ಯವಹಾರದ ಎಲ್ಲ ಕೆಡುಕು, ಎಲ್ಲ ಮಿತಿಗಳ ನಡುವೆ, ಸಾಕಷ್ಟು ಪ್ರಜಾಸತ್ತಾತ್ಮಕವಾದದ್ದಾಗಿತ್ತು ಅನ್ನಿಸುತ್ತದೆ ನನಗೆ.

There can be no final or permanent solution to any human problem. There can only be the wisdom of acceptance. ಕನ್ನಡಿಗರಾದ ನಮ್ಮ ದೊಡ್ಡ ಗುಣ ಅಂತ ನಾವು ಹೇಳಿಕೊಳ್ತೇವಲ್ಲ, ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡಿರೋದು, ಕಡೆಗೆ ಅದೊಂದೇ ದಾರಿ ಇರೋದು, ಮನಷ್ಯಮಾತ್ರರಾದವರಿಗೆ.

ಎರಡು ಮತ್ತು ಮೂರನೆಯ ಪ್ರಶೆಗಳು

ಈ ಎರಡೂ ಪ್ರಶ್ನೆಗಳಿಗೆ ಉತ್ತರ ನಾನು ಗೌರಿ ಜಾಲತಾಣದಲ್ಲಿ ಪ್ರಕಟವಾಗಿರುವ ನನ್ನ ಲೇಖನಗಳಲ್ಲಿಯೇ ಇದೆ. ದೊಡ್ಡವರು ನೀವು. ನಿಮ್ಮಂಥವರು ಕೇಳಬೇಕಾದ ಪ್ರಶ್ನೆಗಳಲ್ಲ ಅವು. ನ್ಯಾಯಯುತವಾಗಿ ಯೋಚಿಸಿ ನೋಡಿ.

ಮೇಲಾಗಿ, ಈ ಪತ್ರದಲ್ಲಿ ನಾನು ಮೇಲೆಲ್ಲ ಹೇಳಿರುವ ಮಾತುಗಳಿಂದಲೂ ನೀವೊಂದು ಉತ್ತರವನ್ನು (ಅಂದರೆ ನನ್ನ ಉತ್ತರವನ್ನು) ಊಹಿಸಿಕೊಳ್ಳಬಹುದು, ಕಂಡುಕೊಳ್ಳಬಹುದು.

ಆದರೂ ಚುಟುಕಾಗಿ ಹೇಳುತ್ತೇನೆ. ಈ ದೇಶದ ಜನರಲ್ಲಿ ಯಾರೇ ಆಗಲಿ ಪಾಕಿಸ್ತಾನ ಜಿಂ಼ದಾಬಾದ್ ಎಂಬ ಘೋಷಣೆಯನ್ನು, ಅಥವಾ ಮತ್ತೊಂದು ಘೋಷಣೆಯನ್ನು, ಕೂಗಿದರೆ ಏನು ಮಾಡಬೇಕು ಅನ್ನುವುದನ್ನು ನಿರ್ಧರಿಸಬೇಕಾದ್ದು ನಮ್ಮ ಪ್ರಧಾನ ಮಂತ್ರಿಯಲ್ಲ, ಮಂತ್ರಿಮಂಡಲಗಳಲ್ಲ. ಅದನ್ನು ನಿರ್ಧರಿಸಬೇಕಾದ್ದು ನಮ್ಮ ನ್ಯಾಯಾಲಯಗಳು. ಆ ನ್ಯಾಯಾಲಯಗಳು (ಮತ್ತು ನಮ್ಮ ಸಮಾಜಿಕ ಜೀವನವೆಲ್ಲ) ನಡೆಯುತ್ತಿರುವುದು, ಮತ್ತು ನಡೆಯಬೇಕಾದ್ದು, ನಮ್ಮ ಸಂವಿಧಾನವು ಹೇಳಿದಂತೆ; ವಿಶೇಷವಾಗಿ ಆ ಸಂವಿಧಾನದ ಆಶಯದ ನುಡಿಗಳು ಹಾಗೂ ಪ್ರಭುತ್ವದ ನೀತಿಗಳಿಗೆ ಮಾರ್ಗದರ್ಶಕವಾದ ತತ್ತ್ವಗಳು ಹೇಳಿದಂತೆ; ಅರ್ಥಾತ್, Preamble to the Constitution of India ಮತ್ತು Directive Principles of State Policy ಹೇಳಿದಂತೆ; ಪ್ರಜಾಸತ್ತೆಯ ಜಾಗತಿಕ ರೂಢಿಗಳು ಹೇಳಿದಂತೆ; ಮತ್ತು, ಬಹಳ ಮುಖ್ಯವಾಗಿ, ಋಜು-ಸಹಜ ನ್ಯಾಯವಂತಿಕೆಯ ತತ್ತ್ವಗಳು (principles of natural justice) ಹೇಳಿದಂತೆ. ಆ ಕೆಲಸವನ್ನು ನಮ್ಮ ನ್ಯಾಯಾಲಯಗಳು ಈಹಿಂದೆಯೇ ಕೆಲವು ಉತ್ಕೃಷ್ಟ ತೀರ್ಪುಗಳು ಮೂಲಕ ಮಾಡಿವೆ, ನಾವು ತುಳಿಯಬೇಕಾದ ಹಾದಿಯನ್ನು ತೋರಿಸಿವೆ. ಮತ್ತೇಕೆ ಈ ಗೊಂದಲ, ಇಂಥ ಪ್ರಶ್ನೆ?

ದಯವಿಟ್ಟು, ನಮ್ಮ ಸಂವಿಧಾನದ ಆಶಯದ ನುಡಿಗಳನ್ನು ಹಾಗೂ ಪ್ರಭುತ್ವದ ನೀತಿಗಳಿಗೆ ಮಾರ್ಗದರ್ಶಕವಾದ ಅಲ್ಲಿನ ತತ್ತ್ವಗಳನ್ನು ಮೆಲುಕುಹಾಕಿ.

ತಮಾಷೆ ನೋಡಿ: ನಮ್ಮಂಥವರನ್ನು ದೇಶ ಒಡೆಯುವವರು, ಅರ್ಬನ್ ನಕ್ಸಲ್‍ಗಳು ಎಂದು ದೂಷಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ. ಆದರೆ ಸಂವಿಧಾನದ ಆಶಯಗಳನ್ನು, ತಿರುಳನ್ನು ಎತ್ತಿಹಿಡಿಯುತ್ತಿರುವವರು ಯಾರು? ನಾವು!

ಈ ಪತ್ರ ಮುಗಿಸುತ್ತಿರುವ ಹೊತ್ತಿಗೆ ಹೊಳೆಯುತ್ತಿದೆ. ನೀವು ಕೇಳಬಹುದು, ‘‘ಕೆಲವು ವಿಷಯಗಳನ್ನು ಕುರಿತು ಉಸಿರೆತ್ತಲಾಗುತ್ತಿಲ್ಲ ಅನ್ನುತ್ತೀರಿ. ಈಗ ನೀವು ಬರೆಯುತ್ತಿಲ್ಲವೇ? ಬಿಜೆಪಿ ಸರಕಾರವನ್ನು ವಿರೋಧಿಸುವವರು ಆ ತಮ್ಮ ವಿರೋಧವನ್ನು ಪತ್ರಿಕೆಗಳಲ್ಲಿ ಬರೆದು ಹೇಳುತ್ತಿಲ್ಲವೇ, ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಕಾಣಿಸಿಕೊಂಡು ಜನರ ಮುಂದಿಡುತ್ತಿಲ್ಲವೇ? ವಿರೋಧ ಪಕ್ಷಗಳು ಮತ್ತು ಉಳಿದ ಹಲವು ಸಂಘಟನೆಗಳವರು ಬಹಿರಂಗ ಸಭೆಗಳನ್ನು ನಡೆಸಿ ಈ ಸರಕಾರವನ್ನು ಟೀಕಿಸುತ್ತಿಲ್ಲವೇ? ಕನ್ಹಯ್ಯಾಕುಮಾರ್, ಜಿಗ್ನೇಶ್ ಮೇವಾನಿ, ಹರ್ಷ ಮಂದರ್ ಥರದವರು ಎಲ್ಲ ಕಡೆ ಓಡಾಡಿಕೊಂಡು ಭಾಷಣ ಮುಂತಾದ್ದು ಮಾಡುತ್ತಿಲ್ಲವೇ? ಉಸಿರೆತ್ತಲಾಗುತ್ತಿಲ್ಲ ಅನ್ನುತ್ತೀರಲ್ಲ!’’ ಎಂದು. ಅಂಥ ಮಾತಲ್ಲಿ ಒಂದಷ್ಟು ಹುರುಳಿದೆ, ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮನ್ನೆಲ್ಲ ಗಾಬರಿಗೊಳಿಸಬೇಕಾದ ಒಂದು ವಿಷಯ ಇದೆ, ಗಮನಿಸಿ:

ಹರ್ಷ ಮಂದರ್

ಮೋದಿ ಸರಕಾರ, ಸಂಘ ಪರಿವಾರ ಮತ್ತು ಆ ಪರಿವಾರದವರು ನಡಸುವ ರಾಜ್ಯ ಸರಕಾರಗಳು ನಿಜಕ್ಕೂ ಬಲವಾಗಿ ದಾಳಿ ಮಾಡುತ್ತಿರುವುದು ಯಾರಮೇಲೆ?

ಉತ್ತರ: ಜೆಎನ್‍ಯು, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಗಢ್, ಜಾಧವ್‍ಪುರ, ಮತ್ತು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯಗಳಮೇಲೆ;  ಐಐಟಿಗಳಮೇಲೆ; ಚಿಕ್ಕವಯಸ್ಸಿನವರೂ ವಿದ್ಯಾರ್ಥಿಗಳೂ ಆಗಿರುವ ಅಮೂಲ್ಯಾ, ನಳಿನಿ, ಆರ್ದ್ರಾ ಮುಂತಾದವರಮೇಲೆ; ಶಾಹೀನ್ ಶಾಲೆಯ ಪ್ರಕರಣಕ್ಕೆ ಬಂದರೆ, ಆ ಶಾಲೆಯ ಮೇಲೆ, ಅಲ್ಲಿನ ಒಂದು ಮಗುವಿನ ತಾಯಿಯಮೇಲೆ, ಅರ್ಥಾತ್ ಶಾಲಾಮಕ್ಕಳಮೇಲೆ, ಮಕ್ಕಳ ಶಾಲೆಗಳಮೇಲೆ. ಅದಕ್ಕೂ ಮೊದಲು, ರೋಹಿತ್, ಕನ್ಹಯ್ಯಾ, ಉಮರ್, ಅನಿರ್ಬಾನ್… ಮತ್ತು, ಕಳೆದ ಆರು ವರ್ಷಗಳಲ್ಲಿ ನಡೆದುಹೋದ ಇಂಥ ಎಲ್ಲವುದರ ಮಾಹಿತಿ, ವರದಿ ಕಲೆಹಾಕಿ ನೋಡಿದರೆ, ಇನ್ನು ಎಷ್ಟೋ ಜನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಮೇಲೆ.

ಹಾಗೆಯೇ, ಮಲಾಲಾ ಯೂಸುಫ್‍ಜಾ಼ಯಿಯ ಕಥೆ ನೆನೆಯಿರಿ.

ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ. ಢಾಳಾಗಿ ಬೆಳಕಿಗೆ ಬಂದವು ಈ ಪ್ರಕರಣಗಳು. ಬೆಳಕಿಗೆ ಬಾರದಿರುವ ಕಥೆಗಳು, ಪ್ರಕರಣಗಳು ಎಷ್ಟೋ ಎಷ್ಟೋ.

ಯಾಕಿರಬಹುದು ಹಾಗೆ?

ಉತ್ತರ: ಫ್ಯಾಸಿಸ್ಟರು – ಸಂಘ ಪರಿವಾರದವರು, ಐಸಿಸ್‍ನವರು, ತಾಲಿಬಾನಿಗಳು, ಲಷ್ಕರ್-ಎ-ತಯ್ಯಬಾ ಥರದ ಸಂಸ್ಥೆಗಳವರು, ಕಾಶ್ಮೀರದ  ಮತ್ತು ಪಾಕಿಸ್ತಾನದ ಮುಸ್ಲಿಮೀಯ ಮತಾಂಧರು – ಇವರಿಗೆಲ್ಲ ಶಾಲಾಕಾಲೇಜುಗಳು, ವಿಶ್ವವಿದ್ಯಾಲಯಗಳು, ಅಲ್ಲಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಕಂಡರೆ ಯಮರಾಜನನ್ನು ಕಂಡಷ್ಟು ಭಯ.[3] ವಿದ್ಯೆಯನ್ನು ಕಂಡರೆ, ವಿದ್ಯೆಯ ಅರ್ಥಿಗಳನ್ನು ಕಂಡರೆ ಭಯ, ಜೀವಭಯ. ಅವಿದ್ಯೆಯ ಏಜೆಂಟರಲ್ಲವೇ ಫ್ಯಾಸಿಸ್ಟರು, ತಮಂಧದ ಏಜೆಂಟರು?

[3] ಯಮನು ಜ್ಞಾನದ, ಧರ್ಮದ ದೇವರು! ಜೊತೆಗೆ, ಸಾವಿನ ದೇವರು! ಯುಧಿಷ್ಠಿರ-ಧರ್ಮರಾಯ ಇವನ ಮಗ! ಎಂಥ ಸಮೀಕರಣ! ಗಹನವಾದ ಎಂದ ಸತ್ಯವಿದೆ ಇಲ್ಲಿ!

ಫ್ಯಾಸಿಸ್ಟರಿಗೆ ಬೋಧಿ ಕಂಡರಾಗದು.ಇದು ಆ ಏಜೆಂಟರ ವಾರ್ನಿಂಗ್, ಎಚ್ಚರಿಕೆ: ಯೋಚನೆ ಮಾಡಬೇಡಿ. ಪ್ರಶ್ನಿಸಬೇಡಿ. ಪ್ರಶ್ನಿಸಿಕೊಳ್ಳಲೂ ಬೇಡಿ. ಶುದ್ಧವಾಗಿ ಭಾವಿಸಿಕೊಳ್ಳಬೇಡಿ. ಅರ್ಥಾತ್ ಡು ನಾಟ್ ಈವನ್ ಫೀಲ್. ಕೆದಕಬೇಡಿ. ಕಾಣಬೇಡಿ. ಕಂಡುಕೊಳ್ಳಬೇಡಿ. ಒಳತೋಟಿಗೆ ಇಂಬುಕೊಡಬೇಡಿ.ಆತ್ಮಪರಿವೀಕ್ಷಣೆ ಕೂಡದು. ಸತ್ಯಕಾಮ ಕೂಡದು. ಸತ್ಯಾನ್ವೇಷಣೆ ಕೂಡದು.

ಬಸವಣ್ಣನವರೇನೋ ಹೇಳಿದರು:

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡ ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ.

ಈ ಸದ್ಯ, ತಮಂಧದ ಬಲವೇ ಹೆಚ್ಚಾದಂತಿದೆ. ಬಹುಶಃ ಅದು ಯಾವಾಗಲೂ ಹಾಗೆಯೇ ಏನೋ…

ಆದರೆ, ತಮಂಧಕ್ಕೆ ಒಳಗಾಗದಿರಲು ನಮ್ಮಂಥವರ ಹೆಣಗಾಟವಂತೂ ತಪ್ಪಬಾರದು.

ಪ್ರೀತಿ ಮತ್ತು ವಿಶ್ವಾಸದಿಂದ,

ರಘುನಂದನ

****

 

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here