Homeದಲಿತ್ ಫೈಲ್ಸ್ಐಐಟಿ ಬಾಂಬೆ ದಲಿತ ವಿದ್ಯಾರ್ಥಿಯ ಸಾವಿಗೆ ಜಾತಿ ತಾರತಮ್ಯ ಕಾರಣವಲ್ಲ; ವಿಚಾರಣಾ ಸಮಿತಿ ವರದಿ

ಐಐಟಿ ಬಾಂಬೆ ದಲಿತ ವಿದ್ಯಾರ್ಥಿಯ ಸಾವಿಗೆ ಜಾತಿ ತಾರತಮ್ಯ ಕಾರಣವಲ್ಲ; ವಿಚಾರಣಾ ಸಮಿತಿ ವರದಿ

- Advertisement -
- Advertisement -

ದಲಿತ ವಿದ್ಯಾರ್ಥಿ ದರ್ಶನ ಸೋಲಂಕಿಯವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ಮಾಡಲು ಐಐಟಿ-ಬಾಂಬೆ ರಚಿಸಿದ್ದ ವಿಚಾರಣಾ ಸಮಿತಿಯು ವರದಿ ನೀಡಿದ್ದು, “ದರ್ಶನ್‌ ಸೋಲಂಕಿ ಜಾತಿ ತಾರತಮ್ಯದಿಂದ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ” ಎಂದಿದೆ.

“ಕ್ಷೀಣಿಸುತ್ತಿದ್ದ ಶೈಕ್ಷಣಿಕ ಕಾರ್ಯಕ್ಷಮತೆಯು ಈ ನಿರ್ಧಾರದ ಹಿಂದೆ ಇರಬಹುದು” ಎಂದು ವರದಿ ಹೇಳಿದೆ.

ಐಐಟಿ ಬಾಂಬೆಯಲ್ಲಿ ಪ್ರಥಮ ವರ್ಷದ ರಾಸಾಯನಿಕ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಹಮದಾಬಾದ್‌ನ ದರ್ಶನ್‌ ಸೋಲಂಕಿಯವರು ಫೆಬ್ರವರಿ 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸೆಮಿಸ್ಟರ್ ಪರೀಕ್ಷೆಗಳು ಮುಗಿದ ಒಂದು ದಿನದ ನಂತರ ಈ ಘಟನೆ ನಡೆದಿತ್ತು. “ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ತಾರತಮ್ಯಕ್ಕೆ ದರ್ಶನ್ ಒಳಗಾಗಿದ್ದನು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ” ಎಂದು ಸೊಲಂಕಿಯ ಕುಟುಂಬ ಆರೋಪಿಸಿತ್ತು.

ದರ್ಶನ್‌ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಲು ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ನಂದ್ ಕಿಶೋರ್ ನೇತೃತ್ವದಲ್ಲಿ 12 ಸದಸ್ಯರ ಸಮಿತಿಯನ್ನು ಐಐಟಿ ಬಾಂಬೆ ರಚಿಸಿತ್ತು. ಮಾರ್ಚ್ 2ರಂದು ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಒಂದು ನಕಲನ್ನು ಕೇಂದ್ರ ಸರ್ಕಾರದೊಂದಿಗೂ ಹಂಚಿಕೊಳ್ಳಲಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

“ದರ್ಶನ್‌ ಸೋಲಂಕಿಯವರ ಸಹೋದರಿ ಮಾತ್ರ ಜಾತಿ ತಾರತಮ್ಯವನ್ನು ಪ್ರಸ್ತಾಪ ಮಾಡಿದ್ದಾರೆ. ತನ್ನ ಸಹೋದರ ಐಐಟಿ ಬಾಂಬೆಯಲ್ಲಿ ಕೆಲವು ವಿದ್ಯಾರ್ಥಿಗಳಿಂದ ಜಾತಿ ಸಂಬಂಧಿತ ತಾರತಮ್ಯವನ್ನು ಎದುರಿಸುತ್ತಿರುವಾಗಿ ಸೋಲಂಕಿ ಸಹೋದರಿ ತಿಳಿಸಿದ್ದಾರೆ” ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ‘ಎಕ್ಸ್‌ಪ್ರೆಸ್‌’ ತಿಳಿಸಿದೆ.

ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಐಐಟಿ ಬಾಂಬೆಯಲ್ಲಿನ ‘ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್’ ಮತ್ತು ಅಂಬೇಡ್ಕರ್‌ವಾದಿ ವಿದ್ಯಾರ್ಥಿಗಳ್ಯಾರೂ ದರ್ಶನ್‌ ಸೋಲಂಕಿಯವರನ್ನು ಭೇಟಿ ಮಾಡಿಲ್ಲ. ದರ್ಶನ್ ಅವರು ಯಾವ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆಂದು ನೇರವಾಗಿ ಕೇಳಿ ತಿಳಿದುಕೊಂಡಿರಲಿಲ್ಲ ಎಂದಿದೆ ವರದಿ.

“ಆದ್ದರಿಂದ ದರ್ಶನ್ ಸಹೋದರಿಯ ಹೇಳಿಕೆಯನ್ನು ಹೊರತುಪಡಿಸಿ, ಐಐಟಿ ಬಾಂಬೆಯಲ್ಲಿದ್ದ ಸಮಯದಲ್ಲಿ ದರ್ಶನ್‌ ಎದುರಿಸುತ್ತಿರುವ ನೇರ ಜಾತಿ ಆಧಾರಿತ ತಾರತಮ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ” ಎಂದು ಮಧ್ಯಂತರ ವರದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿರಿ: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಸಚಿವರು

ಸಮಿತಿಯು ಜಾತಿ ತಾರತಮ್ಯವನ್ನು ಒಂದು ಕಾರಣವೆಂದು ತಳ್ಳಿಹಾಕಿದ್ದರೂ, ವರದಿಯಲ್ಲಿ ಸೋಲಂಕಿಯವರ ಶೈಕ್ಷಣಿಕ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದ್ದಾರೆ. ಒಂದು ವಿಷಯವನ್ನು ಹೊರತುಪಡಿಸಿ, ಇತರ ಎಲ್ಲದರಲ್ಲೂ ಸೋಲಂಕಿಯವರ ಅಧ್ಯಯನ ತೀರಾ ಕಳಪೆಯಾಗಿದೆ ಎಂದು ವಿಚಾರಣಾ ಸಮಿತಿ ತಿಳಿಸಿದೆ.

“ಉಪನ್ಯಾಸಗಳನ್ನು ಅರ್ಥಮಾಡಿಕೊಳ್ಳುವಲ್ಲಿ ದರ್ಶನ್‌ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಅದು ಆತನ ಮೇಲೆ ಗಂಭೀರ ಪರಿಣಾಮ ಬೀರಿರಬಹುದು. ದರ್ಶನ್‌ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದರು. ಆದ್ದರಿಂದ, ಕ್ಷೀಣಿಸುತ್ತಿರುವ ಶೈಕ್ಷಣಿಕ ಕಾರ್ಯಕ್ಷಮತೆಯ ಹತಾಶೆಯು ಆತನ ಮೇಲೆ ಗಂಭೀರ ಪರಿಣಾಮ ಬೀರಿರಬಹುದು” ಎಂದಿದ್ದಾರೆ.

ಫೆಬ್ರವರಿ 12ರಂದು ಮಧ್ಯಾಹ್ನ ಶಾಪಿಂಗ್ ಮಾಡಲು ಸೋಲಂಕಿ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಲು ಯೋಜಿಸಿದ್ದರು. “ಸ್ವಲ್ಪ ಹಣವನ್ನು ತನ್ನ ತಂದೆಯಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದರು” ಎಂದು ಸಮಿತಿ ತಿಳಿಸಿದೆ.

“ಕುಟುಂಬದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಮತ್ತು ದುರಂತ ಘಟನೆಯ ಮೊದಲು ಏನಾಯಿತು ಎಂಬುದರ ಕುರಿತು ಸಮಿತಿಗೆ ಯಾವುದೇ ಮಾಹಿತಿ ಇಲ್ಲ” ಎಂದಿದೆ ವರದಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...