Homeಕರ್ನಾಟಕಸಾಮಾಜಿಕ ಮಾಧ್ಯಮದಲ್ಲಿ '#AmulGoback, #SaveKMF' ಹ್ಯಾಶ್‌ಟ್ಯಾಗ್‌ ಟ್ರೆಂಡ್

ಸಾಮಾಜಿಕ ಮಾಧ್ಯಮದಲ್ಲಿ ‘#AmulGoback, #SaveKMF’ ಹ್ಯಾಶ್‌ಟ್ಯಾಗ್‌ ಟ್ರೆಂಡ್

- Advertisement -
- Advertisement -

ನಂದಿನಿ ಹಾಲು ಉತ್ಪನ್ನಗಳ ಜೊತೆ ಕರ್ನಾಟಕದ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇತ್ತಿಚೆಗೆ ಬೆಂಗಳೂರಿನಲ್ಲಿ ನಂದಿನಿ ಹಾಲು ಮತ್ತು ಮೊಸರು ಬದಲಿಗೆ ಅಮುಲ್ ಹಾಲು ಮೊಸರು ಮಾರಾಟ ಮಾಡಲಾಗುತ್ತಿದೆ. ಕರ್ನಾಟಕ ಹಾಲು ಒಕ್ಕೂಟವನ್ನು (ಕೆಎಂಎಫ್) ದುರ್ಬಲಗೊಳಿಸಲು ಅಮುಲ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಹೇರಳವಾಗಿ ಬಿಡಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನಿವಾಸಿಗಳು ಸ್ಥಳೀಯ ಸಹಕಾರಕ್ಕೆ ಬೆಂಬಲ ವ್ಯಕ್ತಪಡಿಸಲು ”#AmulGoback” ಮತ್ತು ”#SaveKMF” ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

”ಕೆಎಂಎಫ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಮುಲ್ ಸಹಕಾರ ಸಂಘಗಳ ಅಲಿಖಿತ ನಿಯಮಗಳನ್ನು ಉಲ್ಲಂಘಿಸಿ “ಹಳಸಿದ ಹಾಲು” ಮಾರಾಟ ಮಾಡುವ ಮೂಲಕ ಪರಭಕ್ಷಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ” ಎಂದು ಜನರು ಆರೋಪಿಸಿದ್ದಾರೆ.

ದೇಶದಲ್ಲೇ ಎರಡನೇ ಅತಿ ದೊಡ್ಡ ಹಾಲು ಸಂಗ್ರಾಹಕ ಸಂಸ್ಥೆಯಾಗಿರುವ ಕೆಎಂಎಫ್ ನಂದಿನಿ ಟೋನ್ಡ್ ಹಾಲನ್ನು ಲೀಟರ್‌ಗೆ 40 ರೂ.ಗೆ ಮಾರಾಟ ಮಾಡುತ್ತಿದ್ದರೆ, ಅಮುಲ್ ತನ್ನ ಟೋನ್ಡ್ ಹಾಲನ್ನು ಲೀಟರ್‌ಗೆ 54 ರೂ. ಮಾರಾಟ ಮಾಡಲಾಗುತ್ತಿದೆ ಇದು ಜನರಿಗೂ ಹೊರೆಯಾಗಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದು, ”ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ ಕನ್ನಡಿಗರೇ ಎಚ್ಚರ…!!” ಎಂದಿದ್ದಾರೆ.

”ಕೆಎಂಎಫ್ ಮತ್ತು ಅಮುಲ್ ಸಂಸ್ಥೆಗಳ ವಿಲೀನದ ಬಗ್ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಪ್ರಸ್ತಾಪ ಮಾಡಿದ ದಿನದಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಿದೆ. ವಿಲೀನದ ಪ್ರಸ್ತಾವಕ್ಕೆ ಕನ್ನಡಿಗರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಅಮುಲ್ ಪ್ರವೇಶಿಸುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶ-ವಿದೇಶದಲ್ಲೂ ನಂದಿನಿ ಹಾಲು ಲಭ್ಯ, ಬೆಂಗಳೂರಿನಲ್ಲಿ ಮಾತ್ರ ಲಭ್ಯವಿಲ್ಲ!: ಇದು ಕೃತಕ ಅಭಾವದ ಸೃಷ್ಟಿನಾ?

”ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆಯಲ್ಲಿ ಮಾಯವಾಗುತ್ತಿದೆ. ಇದೇ ವೇಳೆ ಅಮುಲ್ ಉತ್ಪನ್ನಗಳ ಮಾರಾಟ ಭರದಿಂದ ಪ್ರಾರಂಭವಾಗಿದೆ. ಸಚಿವ ಅಮಿತ್ ಶಾ ನೇರ ಉಸ್ತುವಾರಿಯಲ್ಲಿಯೇ ಇವೆಲ್ಲ ನಡೆಯುತ್ತಿದೆ ಎನ್ನುವುದು ನಿಸ್ಸಂಶಯ” ಎಂದು ಆರೋಪ ಮಾಡಿದ್ದಾರೆ.

”ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಮೊಸರು ಮಾರಾಟದ ಮೂಲಕ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಲು ಹಿಂದೆಯೂ ಪ್ರಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಈಗ ರಾಜ್ಯ ಬಿಜೆಪಿ ಕೆಂಪುಕಂಬಳಿ ಹಾಸಿ ಸ್ವಾಗತಿಸಿದೆ” ಎಂದು ಟೀಕಿಸಿದ್ದಾರೆ.

”ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್ ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ?” ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

”ಕರ್ನಾಟಕದ ಬಿಜೆಪಿ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆಯೆಂದರೆ ಒಂದೆಡೆ ಬೆಳಗಾವಿ ಗಡಿಪ್ರದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ನೇರವಾಗಿ ತನ್ನ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಗುಜರಾತ್ ರಾಜ್ಯ ಅಮುಲ್ ಮೂಲಕ ಇಲ್ಲಿನ ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಮಾಡುತ್ತಿದೆ” ಎಂದು ಹೇಳಿದ್ದಾರೆ.

”ಹಿಂದಿ ಹೇರಿಕೆಯ ಮೂಲಕ ನಡೆಸುತ್ತಿರುವ ಭಾಷಾದ್ರೋಹ ಮತ್ತು ರಾಜ್ಯದ ಗಡಿಯೊಳಗೆ ಅತಿಕ್ರಮಿಸುವ ಮೂಲಕ ನಡೆಸುತ್ತಿರುವ ನೆಲದ್ರೋಹದ ಜೊತೆಗೆ ಈಗ ಕೆಎಂಎಫ್ ಅನ್ನು ಮುಚ್ಚಿಸುವ ಮೂಲಕ ರೈತದ್ರೋಹ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ” ಎಂದು ಕಿಡಿಕಾರಿದ್ದಾರೆ.

ಜನತಾ ದಳ (ಜಾತ್ಯತೀತ) ಕೂಡ ಕೆಎಂಎಫ್ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ”ರಾಜ್ಯದೆಲ್ಲೆಡೆ ಕೆಎಂಎಫ್ ನಂದಿನಿಯ ಹಾಲು, ತುಪ್ಪ, ಬೆಣ್ಣೆ ಸಮರ್ಪಕವಾಗಿ ಸಿಗದೇ ಇರುವ ಸನ್ನಿವೇಶದಲ್ಲಿ ಗುಜರಾತ್ ನ ಅಮುಲ್ ಸಂಸ್ಥೆಯು ಆನ್ ಲೈನ್ ಮಾರುಕಟ್ಟೆಗೆ ಮುಂದಾಗಿರುವ ಈ ಬೆಳವಣಿಗೆ ಏನನ್ನು ಸೂಚಿಸುತ್ತಿದೆ? ನಂದಿನಿ ಹಾಲು ನಂಬಿ ಬದುಕುತ್ತಿರುವ ಅಸಂಖ್ಯ ಕನ್ನಡಿಗರ ಕೆಲಸದ ಮೇಲೆ ಇದು ಕರಿನೆರಳಿನಂತೆ ಭಾಸವಾಗುವುದಿಲ್ಲವೆ?” ಎಂದು ಪ್ರಶ್ನಿಸಿದೆ.

”ಕೆಎಂಎಫ್ ನಂದಿನಿ ಎಂಬ ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯನ್ನು ಹಂತ ಹಂತವಾಗಿ ಮುಗಿಸುವ ದುಷ್ಟ ಯೋಜನೆಯ ಭಾಗವಾಗಿ ಈ ಬೆಳವಣಿಗೆ ಕಾಣುತ್ತಿದೆ. ನೇರವಾಗಿ ವಿಲೀನ ಮಾಡಲು ಸಾಧ್ಯವಿಲ್ಲದಾಗ, ಈ ರೀತಿಯ ಕುತಂತ್ರಗಳು ಶುರುವಾಗುತ್ತವೆ. ದೈತ್ಯ ಸಂಸ್ಥೆ ಜತೆ ಸ್ಪರ್ಧೆ ಇದು ಎಂದು ಸುಮ್ಮನೆ ಕುಳಿತರೆ, ಭವಿಷ್ಯ ಅಯೋಮಯವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಮೊದಲ ಸಹಕಾರ ಸಚಿವರಾಗಿರುವ ಅಮಿತ್ ಶಾ ಅವರು ಡಿಸೆಂಬರ್ 30, 2022 ರಂದು ”ಅಮುಲ್ ಮತ್ತು ಕೆಎಂಎಫ್ ಒಟ್ಟಾಗಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಕೆಲಸ ಮಾಡುತ್ತವೆ” ಎಂದು ಘೋಷಿಸಿದರು.

ಅಮಿತ್ ಶಾ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳು ಮತ್ತು ರೈತರ ಗುಂಪುಗಳು ಮಾತ್ರವಲ್ಲದೆ ಕರ್ನಾಟಕದ ಸಾಮಾನ್ಯ ಜನರಿಂದಲೂ ವಿರೋಧ ವ್ಯಕ್ತವಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...