Homeಮುಖಪುಟಇದು ‘ಅದಾನಿ ಸರ್ಕಾರ’: ಪ್ರತಿಭಟನೆಯಲ್ಲಿ ಪ್ರತಿಪಕ್ಷಗಳ ಘೋಷಣೆ

ಇದು ‘ಅದಾನಿ ಸರ್ಕಾರ’: ಪ್ರತಿಭಟನೆಯಲ್ಲಿ ಪ್ರತಿಪಕ್ಷಗಳ ಘೋಷಣೆ

- Advertisement -
- Advertisement -

ಅದಾನಿ ಗುಂಪಿನ ಹಗರದ ವಿರುದ್ಧ ವಿರೋಧ ಪಕ್ಷಗಳ ಸದಸ್ಯರು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಯಾವುದೇ ಕ್ರಮ ಜರುಗಿಸದ ನರೇಂದ್ರ ಮೋದಿ ಸರ್ಕಾರವನ್ನು ‘ಅದಾನಿ ಸರ್ಕಾರ’ ಎಂದು ಟೀಕಿಸಿದ್ದಾರೆ. ಈ ಹಗರಣದ ವಿಚಾರವಾಗಿ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಪ್ರಧಾನಿಯವರು ದೇಶಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಗುಂಪಿನ ವಿರುದ್ಧ ಹೊರಿಸಿರುವ ವಂಚನೆಯ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು 16 ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.

ಭಾರತೀಯ ಜೀವ ವಿಮಾ ನಿಗಮ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅದಾನಿ ಗ್ರೂಪ್‌ನೊಂದಿಗೆ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕ ಹಣವನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, “ಈ ರೀತಿಯ ಘೋಷಣೆ ಕೂಗುವುದು ಸರಿಯಲ್ಲ ಮತ್ತು ಸದನವು ಕ್ರಮಬದ್ಧವಾಗಿ ನಡೆಯುತ್ತಿಲ್ಲ” ಎಂದು ವಾದಿಸಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಅದಾನಿ ವಿರುದ್ಧ ತನಿಖೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಬೇಕೆಂಬ ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿಸದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ನಂತರ ರಾಜ್ಯಸಭೆಯ ಕಲಾಪವನ್ನು ಸಭಾಪತಿ ಜಗದೀಪ್ ಧನಕರ್ ಅವರೂ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಚರ್ಚೆಯನ್ನು ಕೈಗೆತ್ತಿಕೊಳ್ಳಲು ನಿಯಮ 267ರ ಅಡಿಯಲ್ಲಿ ಸಲ್ಲಿಸಲಾಗಿರುವ ನೋಟಿಸ್‌ಗಳನ್ನು ಧಂಕರ್ ಅವರು ತಿರಸ್ಕರಿಸಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.

“ನೀವು ಬಾಹ್ಯ ಉದ್ದೇಶಗಳಿಗಾಗಿ ಚರ್ಚಿಸಲು ಈ ವೇದಿಕೆಯನ್ನು ಆರಿಸಿಕೊಳ್ಳುವುದು ಸೂಕ್ತವಲ್ಲ … ನಾನು ನಿಮಗೆ ಮನವಿ ಮಾಡುತ್ತೇನೆ, ಸಾಮಾನ್ಯ ಜನರು ಏನು ಯೋಚಿಸುತ್ತಿದ್ದಾರೆಂದು ನಾವು ಯೋಚಿಸುವ ಸಮಯ ಇದು” ಎಂದು ದಂಕರ್‌ ಹೇಳಿದರು.

ಅದಾನಿ ಮೇಲಿನ ಆರೋಪಗಳ ತನಿಖೆಗಾಗಿ ಮೋದಿ ಸರ್ಕಾರದ ಮೇಲೆ ಒತ್ತಡವನ್ನು ಮುಂದುವರಿಸಲು, ಹಿಂದಿನ ದಿನ 16 ರಾಜಕೀಯ ಪಕ್ಷಗಳ ನಾಯಕರು ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಸಿದ್ದರು.

ಇದನ್ನೂ ಓದಿರಿ: ಅದಾನಿ ವಿಚಾರವಾಗಿ ಪ್ರತಿದಿನ ಕಾಂಗ್ರೆಸ್‌ನಿಂದ ಮೋದಿಗೆ ಮೂರು ಪ್ರಶ್ನೆ

ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಭಾರತ್ ರಾಷ್ಟ್ರ ಸಮಿತಿ, ಜನತಾ ದಳ ಯುನೈಟೆಡ್, ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಸಿಪಿಐ, ಕೇರಳ ಕಾಂಗ್ರೆಸ್ (ಜೋಸ್ ಮಣಿ), ಜಾರ್ಖಂಡ್ ಮುಕ್ತಿ ಮೋರ್ಚಾ, ರಾಷ್ಟ್ರೀಯ ಲೋಕದ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ರಾಷ್ಟ್ರೀಯ ಜನತಾ ದಳ ಮತ್ತು ಶಿವಸೇನೆ ಈ ಸಭೆಯಲ್ಲಿ ಪಾಲ್ಗೊಂಡಿದ್ದವು.

ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಸಂಸದರು, ಲೋಕಸಭೆ ಮತ್ತು ರಾಜ್ಯಸಭೆಯ ಒಳಗೆ, ಹೊರಗೆ ಈ ವಿಷಯದ ಬಗ್ಗೆ ಮತ್ತೊಮ್ಮೆ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ನಂತರ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಪಕ್ಷಗಳ ಸಂಸದರು ಜಮಾಯಿಸಿದರು. ಕಾಂಗ್ರೆಸ್ ನಾಯಕರಾದ ಖರ್ಗೆ, ಅಧೀರ್ ರಂಜನ್ ಚೌಧರಿ, ಶಿವಸೇನೆಯ (ಯುಬಿಟಿ) ಸಂಜಯ್ ರಾವುತ್ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ರಾಷ್ಟ್ರಪತಿಗಳ ಭಾಷಣದ ಬಗ್ಗೆ ಚರ್ಚಿಸಲು ಸಿದ್ಧವಾಗಿವೆ. ಆದರೆ ಮೊದಲು ಅದಾನಿ ಗ್ರೂಪಿನ ವಿಷಯದ ಬಗ್ಗೆ ಮೋದಿಯವರಿಂದ ಉತ್ತರವನ್ನು ಬಯಸುತ್ತೇವೆ” ಎಂದು ಖರ್ಗೆ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...