Homeಮುಖಪುಟಜವಾಬ್ದಾರಿ ಪೂರೈಸದವರು ಇತರರಿಗೆ ಅವಕಾಶ ಮಾಡಿಕೊಡಿ: ಕಾಂಗ್ರೆಸ್ ನಾಯಕರಿಗೆ ಖರ್ಗೆ ಸೂಚನೆ

ಜವಾಬ್ದಾರಿ ಪೂರೈಸದವರು ಇತರರಿಗೆ ಅವಕಾಶ ಮಾಡಿಕೊಡಿ: ಕಾಂಗ್ರೆಸ್ ನಾಯಕರಿಗೆ ಖರ್ಗೆ ಸೂಚನೆ

- Advertisement -
- Advertisement -

“ಪಕ್ಷದಲ್ಲಿ ತಮ್ಮ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗದವರು ಇತರರಿಗೆ ಅವಕಾಶ ಮಾಡಿಕೊಡಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಚಾಲನಾ ಸಮಿತಿ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದು, “ಕಾಂಗ್ರೆಸ್‌ನಲ್ಲಿ ಕೆಲವು ಜವಾಬ್ದಾರಿಯುತ ಪದಾಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ, ಕೆಲವರು ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಇದು ಸರಿಯೂ ಅಲ್ಲ, ಸ್ವೀಕಾರಾರ್ಹವೂ ಅಲ್ಲ” ಎಂದಿರುವ ಕಾಂಗ್ರೆಸ್ ಅಧ್ಯಕ್ಷರು, “ತಮ್ಮ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗದವರು, ತಮ್ಮ ಸಹೋದ್ಯೋಗಿಗಳಿಗೆ ದಾರಿ ಮಾಡಿಕೊಡಬೇಕಾಗುತ್ತದೆ” ಎಂಬ ಸಂದೇಶವನ್ನು ನೀಡಿದ್ದಾರೆ.

“ಪಕ್ಷ ಮತ್ತು ದೇಶದ ಬಗ್ಗೆ ಎಲ್ಲಾ ಹಂತಗಳಲ್ಲಿ ಸಂಘಟನಾ ಹೊಣೆಗಾರಿಕೆಯನ್ನು ಹೊಂದಿರುವುದು ಕಾಂಗ್ರೆಸ್ ನಾಯಕರ ದೊಡ್ಡ ಜವಾಬ್ದಾರಿ”  ಎಂದು ಖರ್ಗೆ ಎಚ್ಚರಿಸಿದ್ದಾರೆ. “ಕಾಂಗ್ರೆಸ್ ಸಂಘಟನೆಯು ಬಲಿಷ್ಠವಾಗಿದ್ದರೆ, ಜವಾಬ್ದಾರಿಯುತವಾಗಿದ್ದರೆ, ಜನರ ನಿರೀಕ್ಷೆಗೆ ತಕ್ಕಂತೆ ನಡೆದರೆ ಮಾತ್ರ ನಾವು ಚುನಾವಣೆಯಲ್ಲಿ ಗೆದ್ದು ದೇಶದ ಜನರ ಸೇವೆ ಮಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಇತಿಹಾಸವನ್ನು ಬರೆಯುತ್ತಿದೆ. ಇದು ರಾಷ್ಟ್ರೀಯ ಚಳುವಳಿಯಾಗಿ ಮಾರ್ಪಟ್ಟಿದೆ” ಎಂದು ಖರ್ಗೆ ಬಣ್ಣಿಸಿದ್ದಾರೆ.

ಪಕ್ಷದ ನಾಯಕರನ್ನು ಉದ್ದೇಶಿಸಿ ಖರ್ಗೆಯವರು ಆಡಿರುವ ಮಾತುಗಳು ಹಲವು ನಾಯಕರಿಗೆ ಎಚ್ಚರಿಕೆಯ ಕರೆಘಂಟೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿರಿ: ‘ಬಿಜೆಪಿ ರೌಡಿ ಮೋರ್ಚಾ’ ವೆಬ್‌ಸೈಟ್‌ ಓಪನ್‌: ಪ್ರತಿಪಕ್ಷದಿಂದ ವಿನೂತನ ದಾಳಿ!

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸಚಿನ್ ಪೈಲಟ್ ಕುರಿತು ಗೆಹ್ಲೋಟ್ ಅವರು ನೀಡಿರುವ ಹೇಳಿಕೆಗಳ ನಂತರ ರಾಜಸ್ಥಾನದಲ್ಲಿ ಬಿಕ್ಕಟ್ಟು ಉದ್ಭವಿಸಿತ್ತು. ಈ ಹಿನ್ನೆಲೆಯಲ್ಲಿ ಖರ್ಗೆಯವರ ಹೇಳಿಕೆಗಳು ಹೊರಬಿದ್ದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ವ್ಯಾಪಕ ವಿವಾದದ ನಂತರವಷ್ಟೇ ಸಚಿನ್ ಮತ್ತು ಗೆಹ್ಲೋಟ್‌ ನಡುವಿನ ಸಮಸ್ಯೆಯನ್ನು ಕಾಂಗ್ರೆಸ್‌ ಇತ್ಯರ್ಥಪಡಿಸಿತ್ತು.

ಮಲ್ಲಿಕಾರ್ಜುನ ಖರ್ಗೆ ಅವರು ರಚಿಸಿರುವ ಚಾಲನಾ ಸಮಿತಿಯ ಸದಸ್ಯರ ಮೊದಲ ಸಭೆಯಲ್ಲಿ ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಇನ್ನು ಕೆಲವೇ ದಿನಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read