ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಹಿರಿಯ ಅಧಿಕಾರಿಗಳನ್ನು ಅನಿರೀಕ್ಷಿತವಾಗಿ ಕೆಲಸದಿಂದ ತೆಗೆಯಲಾಗುತ್ತಿದೆ. ಇದಕ್ಕೆ ಆರ್ಥಿಕ ಕುಸಿತ, ಔದ್ಯೋಗಿಕ ವ್ಯವಹಾರ ಕುಂಠಿತವೇ ಪ್ರಮುಖ ಕಾರಣ ಎಂದು ಫ್ರೆಂಚ್ ಬಹುರಾಷ್ಟ್ರೀಯ ಕಂಪನಿ ಕ್ಯಾಪ್‌ಜೆಮಿನಿ ಹೇಳುತ್ತಿದ್ದರೆ ಕಾರ್ಯ ಸಾಮರ್ಥ್ಯದ ಅಭಾವದಿಂದ ಉದ್ಯೋಗ ಕಡಿತವಾಗುತ್ತಿದೆ ಎಂದು ಭಾರತದ ಇನ್‌ಫೋಸಿಸ್ ಹೇಳುತ್ತಿದೆ.
ವಾಸ್ತವ ಏನೇ ಇರಲಿ, ಭಾರತದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿಗಳ ಸೇವೆ ಕಡಿತ ಮುಂದುವರಿಯುತ್ತಿದೆ. ಕಂಪನಿಯ ಪುನರ್‌ರಚನೆಗೆ ಅನುಕೂಲ ಎಂಬ ಅಭಿಪ್ರಾಯದೊಂದಿಗೆ ಕಾಗ್ನಿಜೆಂಟ್ 7 ಸಾವಿರ ಉದ್ಯೋಗ ಕಡಿತಗೊಳಿಸಿದ್ದರೆ, ಕ್ಯಾಪ್ ಜೆಮಿನಿ ಕಂಪನಿಯು 5 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿದೆ.
ಈ ಮಧ್ಯೆ, ಇನ್‌ಫೋಸಿಸ್ ಕಂಪನಿಯು ವಿವಿಧ ಹಂತಗಳಲ್ಲಿ ಅಂದರೆ 2200-ಹಿರಿಯ ವ್ಯವಸ್ಥಾಪಕರು, 4 ಸಾವಿರದಿಂದ 10 ಸಾವಿರ ವರೆಗೆ ಅಸೋಷಿಯೇಟ್ ಹಾಗೂ ಮಧ್ಯಮ ಹಂತ ಹಾಗೂ 50 ಹಿರಿಯ ಕಾರ್ಯನಿರ್ವಾಹಕರನ್ನು ಸೇವೆಯಿಂದ ಕೈ ಬಿಟ್ಟು ಮನೆಗೆ ಕಳಿಸಲಾಗಿದೆ.
ಅತ್ಯುನ್ನತ ಕಾರ್ಯ ಸಾಮರ್ಥ್ಯದ ಸಂಘಟನೆಯಾಗಿ ಇನ್‌ಫೋಸಿಸ್, “ಉದ್ಯೋಗಿಗಳ ಕಾರ್ಯ ಸಾಮರ್ಥ್ಯವು ಇಡೀ ಕಂಪನಿ ವ್ಯವಹಾರದ ಪ್ರಮುಖ ಭಾಗವಾಗಿದೆ. ಅಂದಮಾತ್ರಕ್ಕೆ, ಇಡೀ ಕಂಪನಿಯ ವಿವಿಧ ಹಂತದ ಎಲ್ಲ ಉದ್ಯೋಗಿಗಳನ್ನು ಸಾಮೂಹಿಕವಾಗಿ ತೆಗೆದು ಹಾಕಲಾಗುತ್ತಿದೆ ಎಂದರ್ಥವಲ್ಲ’ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆದರೆ, ಈವರೆಗೆ ಎಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
ಕಳೆದ ಕೆಲವು ತಿಂಗಳಿಂದ ಉತ್ತಮ ಗುಣಮಟ್ಟದ ಕಾರ್ಯಸಾಮರ್ಥ್ಯ ತೋರದ ಉದ್ಯೋಗಿಗಳನ್ನು ಇಷ್ಟವಿರದಿದ್ದರೂ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು (ಇನ್‌ವಾಲೆಂಟರಿ ಅಟ್ರಿಷನ್ಸ್) ಅನಿವಾರ್ಯ. ಏಕಾಏಕಿಯಾಗಿ ಅವರ ಉದ್ಯೋಗವನ್ನು ಕಸಿಯಲಾಗಿಲ್ಲ. ಕಳೆದ 6 ತಿಂಗಳು ಅಥವಾ 2 ವರ್ಷದಿಂದ ಕಾರ್ಯ ಸಾಮರ್ಥ್ಯ ತೋರದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಐಎಎನ್‌ಎಸ್ ಸಂಸ್ಥೆಗೆ ಇನ್ ಫೋಸಿಸ್ ಸ್ಪಷ್ಟಪಡಿಸಿದೆ.
ಈ ಹಿಂದೆ ಇನ್‌ಫೋಸಿಸ್ ಘೋಷಿಸಿದಂತೆ, ಉದ್ಯೋಗಿಗಳ ಕಾರ್ಯ ಸಾಮರ್ಥ್ಯದ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ಉದ್ಯೋಗಿಗಳ ಕಡಿತವು 2018 ಸೆ.30ರವರೆಗೆ ಶೇ.22.2 ಹಾಗೂ 2019ರ ಜೂ.30 ರವರೆಗೆ ಶೇ. 23.4 ಹಾಗೂ 2019ರ ಸೆ. 30ರವರೆಗೆ ಶೇ. 21.7ರಷ್ಟಿದೆ. ಇನ್ ಫೋಸಿಸ್ ನಲ್ಲಿ ಶೇ.23.4 ರಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸಿದ್ದೇ ಅತಿ ಹೆಚ್ಚು.
ಆದರೆ, ಕ್ಯ್ಯಾಪ್‌ಜೆಮಿನಿ ಸಂಸ್ಥೆಯಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳನ್ನು 90 ದಿನಗಳವರೆಗೆ ಅನುಮತಿಸಲಾಗುತ್ತದೆ. ಈ ಅವಧಿಯಲ್ಲಿ ಕೆಲವೊಂದು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಹೀಗೆ ರೂಪಿಸಲು ಸಾಧ್ಯವಾಗದ ಉದ್ಯೋಗಿಗಳಿಗೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ಇನ್‌ಫೋಸಿಸ್ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಒಂದು ವಾರದ ನಂತರ ಕ್ಯಾಪ್‌ಜೆಮಿನಿ ಕಂಪನಿಯು ಮುಂದಿನ ಮೂರು ತಿಂಗಳಲ್ಲಿ 5 ಸಾವಿರದಿಂದ 7 ಸಾವಿರ ವರೆಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಘೋಷಿಸಿತು. ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ (ಸಿಟಿಎಸ್) ತನ್ನ ಕಂಪನಿಯ 10 ಸಾವಿರದಿಂದ 12 ಸಾವಿರ ವರೆಗೆ ಹಿರಿಯ ಅಸೋಷಿಯೇಟ್ಸ್‌ಗಳನ್ನು ಕೆಲಸದಿಂದ ತೆಗೆಯುವ ಹಾಗೂ 5 ಸಾವಿರ ಜನರಿಗೆ ತರಬೇತಿ ನೀಡಿ ಉದ್ಯೋಗ ಒದಗಿಸುವ ಯೋಜನೆಯಲ್ಲಿದೆ. ಈ ಕುರಿತು, ಕಾಗ್ನಿಜೆಂಟ್ ಸಿಇಓ ಬ್ರಿಯನ್ ಹಂಪ್ರಿಸ್ ಹೇಳಿದ್ದಾರೆ.
ಎಕಾನಾಮಿಕ್ಸ್ ಟೈಮ್ಸ್ ವರದಿಯನ್ವಯ, ದೂರವಾಣಿ ವಲಯದಲ್ಲೂ ಸುಮಾರು 1 ಲಕ್ಷ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಏಕೆಂದರೆ, ಬಿಎಸ್‌ಎನ್‌ಎಲ್ ಸಂಸ್ಥೆಯು ಸುಮಾರು 20 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಾವತಿಸಬೇಕಿದೆ.