ಒಂದೇ ಕ್ಷೇತ್ರದ ಈ ಮೂರು ಅಭ್ಯರ್ಥಿಗಳ ಆಸ್ತಿ 2000 ಕೋಟಿಗೂ ಹೆಚ್ಚು. ಆ ಕ್ಷೇತ್ರ ಯಾವುದು ಗೊತ್ತೇ?

ಹೆಚ್ಚು ಆಸ್ತಿ ಅಥವಾ ಹಣ ಇದ್ದವರು ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಯಾವ ಕಾನೂನೂ ಇಲ್ಲ. ಆದರೆ, ಚುನಾವಣೆಗೆ ಮುಂಚೆ ಅಧಿಕೃತವಾಗಿ ಮತ್ತು ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಅನಧಿಕೃತವಾಗಿ ಇಂತಹವರು ಕೋಟಿಗಟ್ಟಲೆ ಹಣ ಚೆಲ್ಲಿ ಚುನಾವಣೆ ನಡೆಸುತ್ತಾರೆ.

1

ನಿನ್ನೆ ತಾನೇ ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರ ಆಸ್ತಿಯ ವಿವರ ಹೊರಬಿದ್ದಿತ್ತು. ಕರ್ನಾಟಕದ ಪ್ರಜ್ಞಾವಂತ ಮತದಾರರನ್ನು ಅದು ಬೆಚ್ಚಿ ಬೀಳಿಸಿತ್ತು. ಏಕೆಂದರೆ ನಾಗರಾಜ್ ಮತ್ತು ಅವರ ಪತ್ನಿ ಶಾಂತಾ ಅವರ ಒಟ್ಟು ಆಸ್ತಿ 1201.50 ಕೋಟಿಗಳಾಗಿತ್ತು. ಅಷ್ಟೇ ಅಲ್ಲದೇ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಕಡೆಗೆ ಮುಖ ಮಾಡಿ ಸರ್ಕಾರ ಬೀಳಲು ಕಾರಣವಾದ 5 ದಿನಗಳಲ್ಲಿ ಅವರ ವಿವಿಧ ಬ್ಯಾಂಕ್ ಖಾತೆಗಳಿಗೆ 48 ಕೋಟಿ ರೂ ಹಣ ಬಂದಿತ್ತು. ಇದು ವಿವರವಾಗಿ ಎಲ್ಲಾ ಕಡೆ ವರದಿಯಾಗಿತ್ತು.

ಇದೀಗ ಅದೇ ರೀತಿಯ ಇನ್ನೊಂದು ಸುದ್ದಿ ಬಂದಿದೆ.

ಕ್ಷೇತ್ರದ ಮೂರೂ ಪ್ರಮುಖ ಅಭ್ಯರ್ಥಿಗಳ ಆಸ್ತಿಯ ಮೌಲ್ಯ ತಲಾ ನೂರು ಕೋಟಿಗೂ ಹೆಚ್ಚಿರುವ ವರ್ತಮಾನ ಬಹಿರಂಗವಾಗಿದೆ. ಅಷ್ಟೇ ಅಲ್ಲ ಮೂರು ಅಭ್ಯರ್ಥಿಗಳ ಒಟ್ಟು ಆಸ್ತಿ 2000 ಕೋಟಿಗೂ ಹೆಚ್ಚು  ಅದು ಹೊಸಕೋಟೆ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರ ಆಸ್ತಿಯ ಪ್ರಮಾಣ ಮೇಲಿನಂತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿಯವರದ್ದೂ ಕಡಿಮೆಯೇನಿಲ್ಲ. ಅವರು ಮತ್ತು ಅವರ ಪತಿ ಬೈರತಿ ಸುರೇಶ್‌ರವರ ಆಸ್ತಿ 424 ಕೋಟಿ ರೂ ಮತ್ತು 407 ಕೋಟಿ ರೂ. ಆಗಿದೆ. ಅಂದರೆ ಒಟ್ಟು 831 ಕೋಟಿ ರೂ.ಗಳ ಆಸ್ತಿ ಅವರದ್ದಾಗಿದೆ.

ಇದನ್ನೂ ಓದಿ: ಬಿಜೆಪಿ ಸೇರಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಆಸ್ತಿ 18 ತಿಂಗಳಲ್ಲಿ 185 ಕೋಟಿ ಏರಿಕೆ!!

ಹಾಲಿ ಹೆಬ್ಬಾಳ ಕ್ಷೇತ್ರದ ಶಾಸಕರಾಗಿರುವ ಬೈರತಿ ಸುರೇಶ್ ಅದಕ್ಕೆ ಮುಂಚೆ ವಿಧಾನಪರಿಷತ್ ಸದಸ್ಯರಾಗಿದ್ದರು. ಅದೂ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಶಾಸಕರ ಮತಗಳನ್ನು ಕೊಂಡು ಎಂಎಲ್‌ಸಿ ಆದರು ಎಂಬ ಆರೋಪ ಅವರ ಮೇಲಿತ್ತು. ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಬೈರತಿ ಸುರೇಶ್ ರಾಜ್ಯದಲ್ಲಿ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡಿರುವ ಶಾಸಕರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಮೂರನೆಯ ಅಭ್ಯರ್ಥಿ ಶರತ್ ಬಚ್ಚೇಗೌಡ. ಕಳೆದ ಸಾರಿ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಅವರು ಈಗ ಪಕ್ಷೇತರ ಅಭ್ಯರ್ಥಿ. ಜೆಡಿಎಸ್ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದೆ. ಅವರು ಮತ್ತು ಅವರ ಪತ್ನಿ ಪ್ರತಿಭಾ ಅವರ ಒಟ್ಟು ಆಸ್ತಿ ಮೌಲ್ಯ 138 ಕೋಟಿ ರೂ.ಗಳಾಗಿದೆ.

ಬೆಂಗಳೂರಿನ ಸುತ್ತಮುತ್ತಲಿರುವ ಶಾಸಕ ಸ್ಥಾನದ ಅಭ್ಯರ್ಥಿಗಳು ಇಷ್ಟೊಂದು ಪ್ರಮಾಣದ ಆಸ್ತಿ ಗಳಿಸಲು ಕಾರಣವಿದೆ. ರಾಜಕೀಯ ಬಲದಿಂದ ಹೆಚ್ಚೆಚ್ಚು ಭೂ ವ್ಯವಹಾರವನ್ನು ಇವರುಗಳು ಮಾಡುತ್ತಾರೆ. ಕಳೆದ 30 ವರ್ಷಗಳಿಂದ ಬೆಂಗಳೂರು ಹಾಗೂ ಸುತ್ತಮುತ್ತಲಲ್ಲಿ ಭೂಮಿಯ ಬೆಲೆ ಏರುತ್ತಲೇ ಹೋಗಿದೆ. ಹೀಗಾಗಿ ಅದಕ್ಕೆ ತಕ್ಕಂತೆ ಇವರುಗಳ ಆಸ್ತಿಯೂ ಹೆಚ್ಚುತ್ತಿದೆ.

ಈಗ ನೂರಾರು ಕೋಟಿ ರೂ.ಗಳ ಆಸ್ತಿ ಹೊಂದಿರುವ ಮೂವರು ಅಭ್ಯರ್ಥಿಗಳ ಜಿದ್ದಾಜಿದ್ದಿ ಹೊಸಕೋಟೆಯಲ್ಲಿ ನಡೆಯುತ್ತಿದೆ. ಹಾಗಾಗಿಯೇ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ, ಯಾವ ರೀತಿಯಲ್ಲಿಯೂ ಮೌಲ್ಯಗಳ ಸ್ಪರ್ಧೆ ಇಲ್ಲಿದೆ ಎಂದು ಹೇಳಲಾಗದು. ಮೂವರು ಅಭ್ಯರ್ಥಿಗಳು ಅಥವಾ ಅವರ ಕುಟುಂಬ ಒಂದಲ್ಲಾ ಒಂದು ರೀತಿಯಲ್ಲಿ ಪಕ್ಷಾಂತರ ಅಥವಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರೇ ಆಗಿದ್ದಾರೆ. ಆ ಪಕ್ಷಾಂತರಕ್ಕೆ ವೈಯಕ್ತಿಕ ಹಿತಾಸಕ್ತಿಯಲ್ಲದೇ ಬೇರಾವ ಸೈದ್ಧಾಂತಿಕ ಕಾರಣಗಳೂ ಇರಲಿಲ್ಲ.

ಹೆಚ್ಚು ಆಸ್ತಿ ಅಥವಾ ಹಣ ಇದ್ದವರು ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಯಾವ ಕಾನೂನೂ ಇಲ್ಲ. ಆದರೆ, ಚುನಾವಣೆಗೆ ಮುಂಚೆ ಅಧಿಕೃತವಾಗಿ ಮತ್ತು ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಅನಧಿಕೃತವಾಗಿ ಇಂತಹವರು ಕೋಟಿಗಟ್ಟಲೆ ಹಣ ಚೆಲ್ಲಿ ಚುನಾವಣೆ ನಡೆಸುತ್ತಾರೆ. ಆಗ ಪ್ರಜಾಪ್ರಭುತ್ವವೂ ಬೀದಿಯಲ್ಲಿ ಚೆಲ್ಲಾಡಿ ಹೋಗುತ್ತದೆ. ಅಂತಹ ದುರಂತಕ್ಕೆ ಸಾಕ್ಷಿಯಾಗಿರುವುದು ಹೊಸಕೋಟೆ ಮಾತ್ರವಲ್ಲ. ಬೆಂಗಳೂರಿನ ಯಶವಂತಪುರ ಕ್ಷೇತ್ರ, ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ ಅಭ್ಯರ್ಥಿಗಳ ಆಸ್ತಿ ವಿವರಗಳು ಹೊರಬಿದ್ದಾಗ ಅದಕ್ಕೆ ಇನ್ನಷ್ಟು ಸಾಕ್ಷಿ ದೊರೆಯಬಹುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ನಿವೇಶನ ಮಾಡಿ ಹಂಚುವುದು, ಮಾರುವುದನ್ನು ನೆಲದೊಡೆಯರ ಹಿಡಿತಕ್ಕೆ ಬಿಡದೆ ಆಳ್ವಕೆ ತಾನೇ ಹಿಡಿತದಲ್ಲಿಟ್ಟು ಕೊಳ್ಳುವಲ್ಲಿ ಸೋತ ಪರಿಣಾಮ!

LEAVE A REPLY

Please enter your comment!
Please enter your name here