Homeಮುಖಪುಟದಿಲ್ಲಿ ಗಲಭೆಗಳ ಕುರಿತು ಗೃಹ ಸಚಿವ ಅಮಿತ್ ಶಾಗೆ ಮೂರು ಪ್ರಶ್ನೆಗಳು..

ದಿಲ್ಲಿ ಗಲಭೆಗಳ ಕುರಿತು ಗೃಹ ಸಚಿವ ಅಮಿತ್ ಶಾಗೆ ಮೂರು ಪ್ರಶ್ನೆಗಳು..

ಒಂದು ಘಟನೆಯಲ್ಲಂತೂ ದಿಲ್ಲಿ ಪೊಲೀಸರೇ ಮುಸ್ಲಿಮ್ ಯುವಕನೊಬ್ಬನ ಸಾವಿಗೆ ಕಾರಣವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಆತನಿಗೆ ಮತ್ತು ಇನ್ನೊಬ್ಬ ಯುವಕನಿಗೆ ಪೊಲೀಸರೇ ಹೊಡೆದು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವ ಘಟನೆ ಹಲವಾರು ವಿಡಿಯೋಗಳಲ್ಲಿ ದಾಖಲಾಗಿದೆ.

- Advertisement -
- Advertisement -

ಕೃಪೆ: ಸ್ಕ್ರೋಲ್‌ -ರೋಹನ್ ವೆಂಕಟರಾಮಕೃಷ್ಣನ್

ಅನುವಾದ: ನಿಖಿಲ್ ಕೋಲ್ಪೆ

ದಿಲ್ಲಿ ಪೊಲೀಸರು ಕೇಂದ್ರ ಗೃಹಸಚಿವ ಅಮಿತ್ ಶಾ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಅವರ ಕ್ರೌರ್ಯ ಹಿಂಸೆಗಳ ಬಗ್ಗೆ ವಿಡಿಯೋ ಸಾಕ್ಷ್ಯಗಳು ಇರುವಾಗ ಈ ಅಮಿತ್ ಶಾ ಅವರನ್ನು ಸಮರ್ಥಿಸಿ ಭಾಷಣ ಮಾಡುವುದು ಹೇಗೆ ಸಾಧ್ಯ?

ದಶಕಗಳ ನಂತರ ಅತ್ಯಂತ ಕ್ರೂರ ಕೋಮುಗಲಭೆಗೆ ಒಳಗಾಗಿ 50ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡ ದಿಲ್ಲಿಯ ಘಟನೆಗಳ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಕೊನೆಗೂ ಸಂಸತ್ತಿನಲ್ಲಿ ಬಾಯಿ ಬಿಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆದ ಗಲಭೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗಳ ಕೊನೆಯಲ್ಲಿ, “ಇದೊಂದು ಅತ್ಯಂತ ಯೋಜಿತ ಸಂಚಿನ ಹೊರತು” ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಗಲಭೆಗಳ ನಿಯಂತ್ರಣಕ್ಕೆ 36 ಗಂಟೆಗಳನ್ನು ತೆಗೆದುಕೊಂಡ ದಿಲ್ಲಿ ಪೊಲೀಸರನ್ನು ಅವರು ಶ್ಲಾಘಿಸಿದ್ದಾರೆ. ಅದೂ ಕೂಡಾ ಪೊಲೀಸರು ತಮ್ಮ ನಾಲಾಯಕ್‌ತನ ಮತ್ತು ನೇರ ಶಾಮೀಲಾತಿಯ ಆರೋಪಗಳಿಗೆ ಗುರಿಯಾಗಿರುವಾಗ…!!

ಈಶಾನ್ಯ ದಿಲ್ಲಿಯ ಮುಖ್ಯ ರಸ್ತೆಯೊಂದರಲ್ಲಿ ಪೌರತ್ವ ಕಾಯಿದೆಗೆ ನಡೆದ ತಿದ್ದುಪಡಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿಗಳು ನಡೆದ ಬಳಿಕ ಫೆಬ್ರವರಿ 23ರಂದು ಗಲಭೆಗಳು ಆರಂಭಗೊಂಡಿದ್ದವು. ಭಾರತೀಯ ಜನತಾ ಪಕ್ಷದ ನಾಯಕ ಕಪಿಲ್ ಮಿಶ್ರಾ ಜನರನ್ನು ಬೀದಿಗಿಳಿಯುವಂತೆ ಪ್ರಚೋದನೆ ನೀಡಿದ್ದರು. ಫೆಬ್ರವರಿ 26ರಂದು ಕೊನೆಗೂ ಶಾಂತಿ ಸ್ಥಾಪನೆಯಾಗುವ ಹೊತ್ತಿಗೆ ಮುಖ್ಯವಾಗಿ ಮುಸ್ಲಿಮರನ್ನೇ ಗುರಿಯಾಗಿಸಿದ ದೊಡ್ಡ ಪ್ರಮಾಣದ ಹಿಂಸಾಚಾರ, ಲೂಟಿ, ಬೆಂಕಿಹಚ್ಚುವಿಕೆ ನಡೆದವು. 53 ಜನರು ಪ್ರಾಣ ಕಳೆದುಕೊಂಡರು ಮತ್ತು ಬಹಳಷ್ಟು ಜನರ ಜೀವನವೇ ನಷ್ಟವಾಯಿತು.

ಮೂರು ದಿನಗಳ ಹಿಂಸಾಚಾರದ ಬಳಿಕ ಎದ್ದಿರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಮಿತ್ ಶಾ ಭಾಷಣವು ಕೇವಲ ರಾಜಧಾನಿ ಮತ್ತು ದೇಶದ ಜನರ ರಕ್ಷಣೆ ಹೊತ್ತಿರುವ, ಕಾನೂನು ಮತ್ತು ಶಿಸ್ತು ಕಾಪಾಡುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳಿಂದ ಇನ್ನಷ್ಟು ವಿವರಣೆಗಳನ್ನು ಮಾತ್ರ ಕೇಳುತ್ತಿದೆ.

ಗುಪ್ತಚರ ವೈಫಲ್ಯವೇ?

ದಿಲ್ಲಿ ಗಲಭೆಗಳು “ಅತ್ಯಂತ ಯೋಜಿತ ಸಂಚಿನ” ಪರಿಣಾಮ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಉತ್ತರಪ್ರದೇಶದಿಂದ ಬಂದ ನೂರಾರು ಜನರು ಇದರಲ್ಲಿ ಶಾಮೀಲಾಗಿದ್ದಾರೆಂದು ತನಿಖೆಗಳು ತಿಳಿಸಿವೆ ಎಂದೂ ಹೇಳಿದ್ದಾರೆ. ಮೊದಲೇ ಹೇಳಿರುವಂತೆ ಹಿಂಸಾಚಾರಗಳು ಕಪಿಲ್ ಮಿಶ್ರಾ ಭಾಷಣದ ಬಳಿಕ ಆರಂಭವಾಗಿದ್ದವು. ಮಿಶ್ರಾ ಭಾಷಣ ಈಶಾನ್ಯ ದಿಲ್ಲಿಯ ಅತ್ಯುನ್ನತ ಪೊಲೀಸ್ ಅಧಿಕಾರಿಯ ಕಣ್ಣುಗಳ ಮುಂದೆಯೇ ನಡೆದಿತ್ತು ಎಂದು ವರದಿಗಳು ಹೇಳುತ್ತವೆ. ಪ್ರತಿಭಟನಕಾರರನ್ನು ತೆರವು ಮಾಡಲು ಪೊಲೀಸರಿಗೆ ಗಡು ನೀಡಿದ್ದ ಮಿಶ್ರಾ, ಇಲ್ಲದಿದ್ದರೆ ತಾನು ಮತ್ತು ತನ್ನ ಬೆಂಬಲಿಗರೇ ಅವರನ್ನು ತೆರವು ಮಾಡುವುದಾಗಿ ಬೆದರಿಕೆ ಹಾಕಿದ್ದ.

ಫೆಬ್ರವರಿ 24ರ ಭಾನುವಾರವೇ ಸಂಭಾವ್ಯ ಹಿಂಸಾಚಾರಗಳ ಕುರಿತು ಕನಿಷ್ಟ ಆರು ಗುಪ್ತಚರ ವರದಿಗಳನ್ನು ಸಲ್ಲಿಸಲಾಗಿತ್ತು. ಮೇಲಾಗಿ ಗಲಭೆ ಎಬ್ಬಿಸುವುದಕ್ಕೆ ಜನರು ಬಂದಿದ್ದ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಡಳಿತವಿದೆ ಮತ್ತು ಗಲಭೆ ನಿಯಂತ್ರಿಸಬೇಕಾದ ದಿಲ್ಲಿ ಪೊಲೀಸರು ಅಮಿತ್ ಶಾ ನಿಯಂತ್ರಣದಲ್ಲಿಯೇ ಇದ್ದಾರೆ. ಹೀಗಿರುವಾಗ ಇದೊಂದು ಅತ್ಯಂತ ಯೋಜಿತ ಸಂಚಿನ ಪರಿಣಾಮವೇ ಆಗಿದ್ದರೆ, ಹಿಂಸಾಚಾರ ನಡೆಯಲಿದೆ ಎಂದು ಮೊದಲೇ ಗುಪ್ತಚರ ವರದಿಗಳು ಬಂದಿದ್ದರೆ, ಮೂರು ದಿನಗಳ ಕಾಲ ಹಿಂಸಾಚಾರ ಯಾಕೆ ಮುಂದುವರಿಯಿತು?

ಮುಖ ಚಹರೆ ಗುರುತು ತಂತ್ರಜ್ಞಾನ?

ಮುಖ ಚಹರೆ ಗುರುತು ಪತ್ತೆ ತಂತ್ರಜ್ಞಾನ ಬಳಸಿ ಹಿಂಸಾಚಾರದಲ್ಲಿ ಪಾಲುಗೊಂಡ 1,100ರಷ್ಟು ಜನರನ್ನು ಗುರುತಿಸಲಾಗಿದೆ ಎಂದು ಗೃಹಸಚಿವ ತನ್ನ ಭಾಷಣದಲ್ಲಿ ಹೇಳಿದ್ದಾರೆ. ಜನರ ಮತದಾರರ ಗುರುತುಚೀಟಿ, ಡ್ರೈವಿಂಗ್ ಲೈಸನ್ಸ್ ಮುಂತಾದ ಮಾಹಿತಿ ಸಂಗ್ರಹದಿಂದ ಸಿ.ಸಿ. ಕ್ಯಾಮರಾದ ಫೊಟೊಗಳನ್ನು ಹೋಲಿಸಿ ಈ ತಂತ್ರಜ್ಞಾನವು ಜನರನ್ನು ಗುರುತಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಪೊಲೀಸರು ಬಳಸಿದಾಗ ಈ ಮುಖ ಚಹರೆ ಪತ್ತೆ ತಂತ್ರಜ್ಞಾನ ತೀರಾ ದೋಷಯುಕ್ತವಾಗಿದೆ ಎಂಬುದು ನಮಗೆ ಗೊತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆದ ಒಂದು ಸಂಶೋಧನೆಯು ಅಲ್ಲಿನ ನಗರ ಪೊಲೀಸರು ಬಳಸುವ ಮುಖ ಚಹರೆ ಪತ್ತೆ ತಂತ್ರಜ್ಞಾನದಲ್ಲಿ ಐದರಲ್ಲಿ ನಾಲ್ಕು ಸಲ ಅಮಾಯಕ ಜನರನ್ನು ಗುರುತಿಸಲಾಗಿದೆ ಎಂದು ತಿಳಿಸುತ್ತದೆ.

ಇಂತಹಾ ತಂತ್ರಜ್ಞಾನಗಳು ಜನರು ಮತ್ತು ಮಾಹಿತಿಯನ್ನು ಕಂಪ್ಯೂಟರಿಗೆ ತುಂಬುವವರ ಪೂರ್ವಗ್ರಹಗಳನ್ನು ಪ್ರತಿಫಲಿಸುತ್ತವೆ ಎಂದೂ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಯಾವುದೇ ಖಾಸಗಿತನ ರಕ್ಷಣಾ ಕಾಯಿದೆಯಾಗಲೀ, ಸ್ಪಷ್ಟ ನಿರ್ದೇಶನಗಳಾಗಲೀ ಇಲ್ಲದೇ ಇರುವಾಗ ಈ ತಂತ್ರಜ್ಞಾನ ತೀರಾ ಅಪಾಯಕಾರಿಯಗಬಲ್ಲದು.

ಪೊಲೀಸರ ಮೇಲೇ ಪೊಲೀಸ್?

ಒಂದು ಬೀಸು ಹೇಳಿಕೆಯಲ್ಲಿ ಅಮಿತ್ ಶಾ ದಿಲ್ಲಿ ಪೊಲೀಸರ ಮೇಲಿರುವ ಎಲ್ಲಾ ಆರೋಪಗಳನ್ನು ಬದಿಗೆ ಗುಡಿಸಿ, ಇಂತಹಾ ಆರೋಪಗಳು ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತವೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, 36 ಗಂಟೆಗಳ ದೀರ್ಘಕಾಲದಲ್ಲಿ ಗಲಭೆಯನ್ನು ನಿಯಂತ್ರಿಸಿದಕ್ಕಾಗಿ ದಿಲ್ಲಿ ಪೊಲೀಸರನ್ನು ಅಭಿನಂದಿಸಿದ್ದಾರೆ. ಆ ಸಮಯದಲ್ಲಿ ಯಾಕೆ ಅವರು ಹೆಚ್ಚು ಸಕ್ರಿಯವಾಗಿ ಕೆಲಸಮಾಡಲಿಲ್ಲ ಎಂಬುದಕ್ಕೆ ತೀರಾ ದುರ್ಬಲ ಸಮರ್ಥನೆಯನ್ನೂ ನೀಡಿದ್ದಾರೆ. ಅದೆಂದರೆ, ತಾನು ತನ್ನ ಸಂಸದೀಯ ಕ್ಷೇತ್ರವಾದ ಅಹಮದಾಬಾದ್‌ಗೆ ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿದ್ದುದರಿಂದ ತಾನು ಅಲ್ಲಿ ವ್ಯಸ್ತವಾಗಿದ್ದೆ; ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಜವಾಬ್ದಾರಿ ತೆಗೆದುಕೊಳ್ಳುವಂತೆ ಹೇಳಿದ್ದೆ ಎಂದು ನುಣುಚಿಕೊಂಡಿರುವುದು.

ಆದರೆ, ವಿಡಿಯೋ ದಾಖಲೆಗಳೂ, ವರದಿಗಳೂ ಪೊಲೀಸರು ಮುಸ್ಲಿಮ್ ವಿರೋಧಿ ಗುಂಪುಗಳ ಪರ ಪಕ್ಷಪಾತದಿಂದ ವರ್ತಿಸಿರುವುದು ಮತ್ತು ನೇರವಾಗಿ ಕಲ್ಲೆಸತದಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗಿದೆ.

ಒಂದು ಘಟನೆಯಲ್ಲಂತೂ ದಿಲ್ಲಿ ಪೊಲೀಸರೇ ಮುಸ್ಲಿಮ್ ಯುವಕನೊಬ್ಬನ ಸಾವಿಗೆ ಕಾರಣವಾಗಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಆತನಿಗೆ ಮತ್ತು ಇನ್ನೊಬ್ಬ ಯುವಕನಿಗೆ ಪೊಲೀಸರೇ ಹೊಡೆದು ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸುವ ಘಟನೆ ಹಲವಾರು ವಿಡಿಯೋಗಳಲ್ಲಿ ದಾಖಲಾಗಿದೆ.

ದಿಲ್ಲಿ ಪೊಲೀಸರು ಹೇಗೆ ಗಲಭೆಗಳ ನಂತರದಲ್ಲಿ ಹಲವಾರು ದೂರುಗಳನ್ನು ದಾಖಲಿಸಲು ನಿರಾಕರಿಸಿ ತನಿಖೆಯನ್ನೂ ನಡೆಸಲಿಲ್ಲ ಎಂಬ ಬಗ್ಗೆ ‘ಸ್ಕ್ರೋಲ್ ಡಾಟ್ ಇನ್’ ವರದಿ ಮಾಡಿದೆ. ದಿಲ್ಲಿ ಪೊಲೀಸರು ಪ್ರಶ್ನಾರ್ಹವಾಗಿ ವರ್ತಿಸುತ್ತಿರುವಾಗ, ಅದು ಹೇಗೆ ಈ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ಕೊಡಬಲ್ಲರು? ಗೃಹ ಸಚಿವ ಮತ್ತು ಸರಕಾರವೇ ದಿಲ್ಲಿ ಪೊಲೀಸರ ಧಣಿಗಳಾಗಿರುವಾಗ ಹೇಗೆ ಇದನ್ನು ಮಾಡಬಲ್ಲರು? ಆದುದರಿಂದ ಸರಕಾರವನ್ನು ಹೊರತುಪಡಿಸಿದ ಬೇರೊಂದು ಸ್ವತಂತ್ರ ಸಂಸ್ಥೆ ಇದರ ತನಿಖೆ ನಡೆಸುವುದು ನ್ಯಾಯವಲ್ಲವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...