Homeಮುಖಪುಟತಣ್ಣಗಾಗದ ತಮಿಳುನಾಡು ಬಿಜೆಪಿ ಒಳಬೇಗುದಿ

ತಣ್ಣಗಾಗದ ತಮಿಳುನಾಡು ಬಿಜೆಪಿ ಒಳಬೇಗುದಿ

- Advertisement -
- Advertisement -

2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾರರನ್ನು ಧ್ರುವೀಕರಿಸಲು ಮತ್ತು ಹಿಂದುತ್ವದ ಅಜೆಂಡಾವನ್ನು ಉತ್ತೇಜಿಸಲು ಮುಖ್ಯವಾಹಿನಿ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಲಾಗಿತ್ತು ಎಂಬ ಸತ್ಯಾಂಶವನ್ನು “ಕೋಬ್ರಾಪೋಸ್ಟ್” ಬಯಲಿಗೆಳೆದಿತ್ತು. ಕುಟುಕು ಕಾರ್ಯಾಚರಣೆಯಲ್ಲಿ ಕೆಲವು ದೊಡ್ಡ ಪತ್ರಿಕೆಗಳ, ಟಿವಿ ಚಾನೆಲ್‌ಗಳ ಮಾಲೀಕರ ಮತ್ತು ಪತ್ರಕರ್ತರ ’ಸುಳ್ಳು’ ಪರದೆ ಸರಿಸಿ ದೊಡ್ಡ ಸದ್ದು ಮಾಡಿದ್ದ ’ಬರಹ ಭ್ರಷ್ಟಾಚಾರ’ದ ಕಾರ್ಯಾಚರಣೆಯೊಂದು ಕೊನೆಗೆ ಸಾರ್ವಜನಿಕ ವಲಯದಲ್ಲಿ ಸದ್ದಿಲ್ಲದೆ ಸೈಡಿಗೆ ಸರಿದದ್ದು ಇಂದು ಇತಿಹಾಸ.

ಆದರೆ, ಇಂತಹದ್ದೇ ಮತ್ತೊಂದು ಕುಟುಕು ಕಾರ್ಯಾಚರಣೆ ಇದೀಗ ತಮಿಳುನಾಡು ಸಾಕ್ಷಿಯಾಗಿದೆ. ತಮಿಳುನಾಡಿನ ಬಿಜೆಪಿ, ಆ ಪಕ್ಷದ ಅಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ಎಂದಿಗೂ ಬದಲಾಗದ ಕೆಲವು ಪತ್ರಕರ್ತರನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಬೆತ್ತಲುಗೊಳಿಸಿದೆ. ಈ ಮೂಲಕ ಮತದಾರರ ಧ್ರುವೀಕರಣಕ್ಕೆ ಮತೀಯವಾದ ಮತ್ತು ಮಾಧ್ಯಮಗಳ ಖರೀದಿಯ ಹೊರತಾಗಿ ಬಿಜೆಪಿ ಎಂಬ ಪಕ್ಷದ ಬಳಿ ಬೇರೆ ಯಾವುದೇ ಹೊಸ ಅಸ್ತ್ರಗಳಿಲ್ಲ ಎಂಬುದು ಮತ್ತೊಮ್ಮೆ ಬಟಾಬಯಲಾಗಿದೆ.

ಏನಿದು ಕುಟುಕು ಕಾರ್ಯಾಚರಣೆ?

ತಮಿಳುನಾಡಿನ ಮಟ್ಟಿಗೆ ಮುಖ್ಯವಾಹಿನಿ ಮಾಧ್ಯಮಗಳಿಗಿಂತಲೂ ’ಯೂಟ್ಯೂಬ್’ ಪ್ರಭಾವಿ ಮಾಧ್ಯಮ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಹಿಂದೆ ಮುಖ್ಯವಾಹಿನಿಯಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ ಅನುಭವಿಗಳೆಲ್ಲರೂ ತಮಿಳುನಾಡಿನಲ್ಲಿ ಇಂದು ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ದ್ರಾವಿಡ ನಾಡಿನಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕಂಟೆಂಟ್‌ಗಳಿಗೆ ಸಾಕಷ್ಟು ಪ್ರಮಾಣದ ವೀಕ್ಷಕರಿರುವ ಕಾರಣಕ್ಕೆ ಇಂದು ಅಲ್ಲಿನ ಪ್ರತಿಯೊಂದು ಯೂಟ್ಯೂಬ್ ಚಾನಲ್‌ಗಳಿಗೂ ಸರಾಸರಿಯಾಗಿ 20ರಿಂದ 70 ಲಕ್ಷದವರೆಗೆ ಚಂದಾದಾರರಿದ್ದಾರೆ (Subscribers). ಹೀಗಾಗಿ ತಮಿಳುನಾಡಿನಲ್ಲಿ ಯೂಟ್ಯೂಬರ್‌ಗಳೇ ಜನಗಳ ನಡುವಿನ ಇನ್ಫ್ಲುಯೆನ್ಸರ್ಸ್ ಎಂಬುದರಲ್ಲಿ ಎರಡು ಮಾತಿಲ್ಲ.

ಅಣ್ಣಾಮಲೈ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿ ಪಕ್ಷಗಳಿಗೂ, ಎಡಿಎಂಕೆ ಮೈತ್ರಿ ಪಕ್ಷಗಳ ನಡುವಿನ ಮತಗಳ ಅಂತರ ಕೇವಲ ಶೇ.4.41 ಮಾತ್ರ. ಅಂದರೆ ಆಡಳಿತಾರೂಢ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ನಡುವಿನ ಅಂತರ ಕೇವಲ 25 ಲಕ್ಷ ಮತಗಳು. ಇಷ್ಟು ಪ್ರಮಾಣದ ಮತಗಳನ್ನು ಯೂಟ್ಯೂಬ್ ಚಾನೆಲ್‌ಗಳಲ್ಲಿ “ಪೇಯ್ಡ್ ಸುದ್ದಿ”ಗಳನ್ನು ಪ್ರಕಟಿಸುವ ಮೂಲಕವೇ ಧ್ರುವೀಕರಣಗೊಳಿಸಿಬಿಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. (ತಮಿಳುನಾಡು ಬಿಜೆಪಿ ಕಳೆದ ಕೆಲ ವರ್ಷಗಳಿಂದ ಅಲ್ಲಿ ಮಾಡುತ್ತಿರುವುದೂ ಸಹ ಇದನ್ನೇ.)

ಬಿಜೆಪಿ ಪಕ್ಷದ ಮದನ್ ರವಿಚಂದ್ರನ್ ಎಂಬ ವ್ಯಕ್ತಿ ಕಳೆದ ವಾರ ಖಾಸಗಿ ಹೋಟೆಲೊಂದರಲ್ಲಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಗೆ ತಮಿಳುನಾಡಿನ ಎಲ್ಲ “ಖ್ಯಾತ ಯೂಟ್ಯೂಬರ್”ಗಳನ್ನೂ ಆಹ್ವಾನಿಸಿದ್ದಾರೆ. ಅಲ್ಲದೆ, ಎಲ್ಲರಿಗೂ ಹಣ ಮತ್ತು ಮದ್ಯವನ್ನು ಹಂಚಿ ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ ಕಾಣಿಸಿಕೊಳ್ಳುವಂತಹ ವಿಡಿಯೋ ಸ್ಟೋರಿಗಳನ್ನು ಮಾಡುವಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ ಪತ್ರಕರ್ತರು ಈ ಹಿಂದೆ ತಾವು ರಾಜಕೀಯಕ್ಕೆ ಸಂಬಂಧಿಸಿದ ಯಾವಯಾವ ಡೀಲ್‌ಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರೆಂದು ಲೋಕಾಭಿರಾಮ ಹರಟಿದ್ದಾರೆ. ಅಚ್ಚರಿಗೊಳಪಡಿಸುವಂತಹ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಆದರೆ, ಅವರ ಅರಿವಿಗಿಲ್ಲದೆ ಈ ಎಲ್ಲ ದೃಶ್ಯಗಳನ್ನೂ ’ಹಿಡೆನ್ ಕ್ಯಾಮೆರಾ’ಗಳ ಮೂಲಕ ಸೆರೆಹಿಡಿಯಲಾಗಿದೆ.

ಆ ವಿಡಿಯೋವೆ ಇದೀಗ ಬಿಡುಗಡೆಯಾಗಿ ಸದ್ದು ಮಾಡುತ್ತಿರುವುದು. ಇದಲ್ಲದೆ, ಇದರ ಜೊತೆಗೆ ಮದನ್ ರವಿಚಂದ್ರನ್ ಎಂಬ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಜೊತೆಗೆ ಮಾತನಾಡಿರುವ ಮೊಬೈಲ್ ಆಡಿಯೋ ಸಹ ಲೀಕ್ ಆಗಿದ್ದು, ಇಡೀ ತಮಿಳುನಾಡು ಮಾತ್ರವಲ್ಲ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮುಖಭಂಗ ಅನುಭವಿಸುವಂತಾಗಿದೆ. ಈ ವಿವಾದಾತ್ಮಕ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ಬಿಜೆಪಿ ವ್ಯಕ್ತಿ ಮದನ್ ರವಿಚಂದ್ರನ್ ಅವರೇ ಉದ್ದೇಶಪೂರ್ವಕವಾಗಿ ಈ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ ಎಂಬುದೇ ಈ ಪ್ರಸಂಗದಲ್ಲಿ ಮತ್ತೂ ವಿಶೇಷವಾದ ಅಂಶ.

ಯಾರು ಈ ಮದನ್ ರವಿಂಚದ್ರನ್?

ಮೂಲತಃ ಪತ್ರಕರ್ತನಾಗಿದ್ದ ಮದನ್ ರವಿಚಂದ್ರನ್ 2020ರಲ್ಲಿ ಅಣ್ಣಾಮಲೈ ಕಾರಣಕ್ಕೆ ಬಿಜೆಪಿ ಸೇರ್ಪಡೆಯಾಗಿದ್ದರು. ತಮಿಳುನಾಡು ಬಿಜೆಪಿ ಏಕಾಏಕಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅಲ್ಲಿನ ಬಹುತೇಕ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಪೈಕಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಆರ್‌ಎಸ್‌ಎಸ್ ಹಿನ್ನೆಲೆಯ ಕೆಟಿ ರಾಘವನ್ ಎಂಬ ಬ್ರಾಹ್ಮಣ ನಾಯಕನ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿತ್ತು.

ಕೆಟಿ ರಾಘವನ್ ಅವರೇ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಹಲವರು ಭಾವಿಸಿದ್ದರು. ಆದರೆ, ಅಣ್ಣಾಮಲೈ ಆ ಹುದ್ದೆಗೆ ಬಡ್ತಿ ಪಡೆಯುತ್ತಿದ್ದಂತೆ ಹಿರಿಯ ನಾಯಕರು ಭಾರೀ ಅಸಮಾಧಾನವನ್ನು ಹೊರಹಾಕಿದ್ದರು. ಈ ವೇಳೆ ಪಕ್ಷದ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅಣ್ಣಾಮಲೈ ಮಾಡಿದ್ದು ಮಾತ್ರ ತಮಿಳುನಾಡು ಈವರೆಗೆ ಕಂಡಿರದ ಹೇಯ ಕೃತ್ಯ. ಆ ಹೇಯ ಕೃತ್ಯವನ್ನು ಕಾರ್ಯರೂಪಕ್ಕೆ ತಂದದ್ದೇ ಈ ಮದನ್ ರವಿಚಂದ್ರನ್.

ಕೆಟಿ ರಾಘವನ್

ಈ ತಂಡ ಹಿರಿಯ ನಾಯಕ ಕೆಟಿ ರಾಘವನ್ ವಿರುದ್ಧ ಹನಿಟ್ರಾಪ್ ಬಲೆಬೀಸಿತ್ತು. ಮಹಿಳೆಯೊಬ್ಬರ ಮೂಲಕ ಅವರಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿಸಲಾಗಿತ್ತು. ಕೆಟಿ ರಾಘವನ್ ಅರೆಬೆತ್ತಲಾಗಿ ವಿಡಿಯೋ ಕಾಲ್‌ನಲ್ಲಿರುವ ದೃಶ್ಯವನ್ನು ಸೆರೆಹಿಡಿದಿದ್ದ ಮದನ್ ರವಿಚಂದ್ರನ್ ಆ ವಿಡಿಯೋವನ್ನು ಏಕಾಏಕಿ ಎಲ್ಲ ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದ. “ತಮಿಳುನಾಡು ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ” ಎಂದು ಸುದ್ದಿ ಬಿತ್ತರಿಸಲಾಗಿತ್ತು. ನೋಡನೋಡುತ್ತಿದ್ದಂತೆ ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗತೊಡಗಿತ್ತು. ಕೊನೆಗೆ ಕೆಟಿ ರಾಘವನ್ ತಮ್ಮ ಸ್ಥಾನದಿಂದ ಹಿಂದೆ ಸರಿದರು. ಅಲ್ಲದೆ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.

ಈ ವೇಳೆ ಬಿಜೆಪಿ ಸದಸ್ಯನೊಬ್ಬನೇ ಹಿರಿಯ ನಾಯಕರ ವಿರುದ್ಧ ಇಂತಹ ಷಡ್ಯಂತ್ರ ಹೂಡಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡಿತ್ತು. ಆದರೆ, ತನ್ನ ವಿರುದ್ಧ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಮದನ್ ರವಿಚಂದ್ರನ್, “ಅಣ್ಣಾಮಲೈ ಅವರ ಗಮನಕ್ಕೆ ತಂದು ಅವರ ಅನುಮತಿ ಪಡೆದ ನಂತರವೇ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಈ ರೀತಿ 15 ಹಿರಿಯ ನಾಯಕರ ಅಶ್ಲೀಲ ವಿಡಿಯೋ ತನ್ನ ಬಳಿ ಇದೆ. ಇದನ್ನೂ ಸಹ ಅಣ್ಣಾಮಲೈ ಹೇಳಿದ ನಂತರವೇ ಮಾಡಲಾಗಿದೆ” ಎಂದು ಬಹಿರಂಗಪಡಿಸಿದ್ದ.

ಇದನ್ನೂ ಓದಿ: ಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ: ಅಣ್ಣಾಮಲೈ

ಮದನ್ ರವಿಚಂದ್ರನ್ ಅಣ್ಣಾಮಲೈಗಾಗಿ ಹೀಗೆ ಹನಿಟ್ರಾಪ್ ವಿಡಿಯೋಗಳು ಮಾತ್ರವಲ್ಲದೆ, ಟಿವಿ ಮಾಧ್ಯಮ ಹಾಗೂ ಯೂಟ್ಯೂಬರ್‌ಗಳು ಬಿಜೆಪಿ ಪರ ಸುದ್ದಿ ಬಿತ್ತರಿಸುವ ಸಲುವಾಗಿಯೂ ಸಾಕಷ್ಟು ವ್ಯವಹಾರಗಳನ್ನು ಕುದುರಿಸಿದ್ದ. ಅಲ್ಲದೆ, ಅಣ್ಣಾಮಲೈ ಅವರ ಅನೇಕ ಸಭೆಗಳಿಗೆ ರಾಜಕೀಯ ಭಾಷಣಗಳನ್ನೂ ಬರೆದುಕೊಡುವ ಕೆಲಸ ಮಾಡಿದ್ದ. (ಈ ಸಂಬಂಧ ಅಣ್ಣಾಮಲೈ ಹಾಗೂ ಮದನ್ ರವಿಚಂದ್ರನ್ ಮಾತನಾಡಿರುವ ಹಲವಾರು ಆಡಿಯೋಗಳು ಈಗಾಗಲೇ ವೈರಲ್ ಆಗಿವೆ). ಆದರೆ, ಅಣ್ಣಾಮಲೈ ತನಗೂ ಈ ಷಡ್ಯಂತ್ರಕ್ಕೂ ಸಂಬಂಧವಿಲ್ಲ ಎಂದು ಆತನನ್ನು ನಡುನೀರಿನಲ್ಲಿ ಕೈಬಿಟ್ಟಿದ್ದರು. ಅಲ್ಲದೆ, ಮದನ್ ರವಿಚಂದ್ರನ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದರು.

ಅಣ್ಣಾಮಲೈ ಸೇಡಿಗಾಗಿ ಕುಟುಕು ಕಾರ್ಯಾಚರಣೆ

ತನ್ನನ್ನು ಬಳಸಿಕೊಂಡು ನಡುನೀರಿನಲ್ಲಿ ಕೈಬಿಟ್ಟದ್ದ ಅಣ್ಣಾಮಲೈ ಹಾಗೂ ತಮಿಳುನಾಡು ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಮದನ್ ರವಿಚಂದ್ರನ್ ಈ ಕುಟುಕು ಕಾರ್ಯಾಚರಣೆ ನಡೆಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅವರು ಮತ್ತೊಬ್ಬ ವ್ಯಕ್ತಿಯನ್ನು ಬಳಸಿಕೊಂಡು ಹಲವು ಬಿಜೆಪಿ ಪರವಾದ ಯೂಟ್ಯೂಬರ್‌ಗಳನ್ನೂ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದಾರೆ. ಈ ಹಿಂದೆ ತಾವು ಯಾವ ರೀತಿಯಲ್ಲಿ ಬಿಜೆಪಿ ಪರ ಹಣ ನೀಡಿ ಯೂಟ್ಯೂಬರ್‌ಗಳಿಂದ “ಪೇಯ್ಡ್ ಸ್ಟೋರಿ”ಗಳನ್ನು ಮಾಡಿಸುತ್ತಿದ್ದರೋ, ಅದನ್ನೇ ಬೇರೊಬ್ಬರಿಂದ ಮರುಸೃಷ್ಟಿ ಮಾಡಿಸಿದ್ದಾರೆ. ಕೊನೆಗೆ “ತಮಿಳುನಾಡಿನ ಬಿಜೆಪಿ ಸಾರಥ್ಯವನ್ನು ಪಡೆದ ದಿನದಿಂದ ಅಣ್ಣಾಮಲೈ ಮಾಡುತ್ತಿರುವುದು ಇದನ್ನೆ. ಇಂತಹ ಹೇಯಕೃತ್ಯಗಳಲ್ಲಿ ಪತ್ರಕರ್ತರ ಪಾಲು ಬಲು ದೊಡ್ಡದು” ಎಂದು ಆ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಕುಟುಕು ಕಾರ್ಯಾಚರಣೆಯ ಆ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಅಣ್ಣಾಮಲೈ ಮೇಲಿನ ತೂಗುಗತ್ತಿ ಮತ್ತಷ್ಟು ಬಿಗಿಯಾಗುತ್ತಿದೆ.

ಅಣ್ಣಾಮಲೈ ಮೇಲಿನ ಆರೋಪ ಹೊಸತೇನಲ್ಲ!

ಕೆಟಿ ರಾಘವನ್ ಅಶ್ಲೀಲ ವಿಡಿಯೋ ವಿಚಾರದಲ್ಲಿ ಅಣ್ಣಾಮಲೈ ಹೆಸರು ಸದ್ದು ಮಾಡುತ್ತಿದ್ದಂತೆ, ಮಾಜಿ ನಟಿ ಹಾಗೂ ಬಿಜೆಪಿ ಪಕ್ಷದ ಕಲೆ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಗಾಯತ್ರಿ ರಘುರಾಮ್ ಸಹ ಅಣ್ಣಾಮಲೈ ವಿರುದ್ಧ ಇದೇ ಆರೋಪವನ್ನು ಮುಂದಿಟ್ಟಿದ್ದರು. “ಅಣ್ಣಾಮಲೈ ನನ್ನ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣ ಪಡೆಯ ಮೂಲಕ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದ ಆಕೆ ಕಳೆದ ವರ್ಷ ಪಕ್ಷದಿಂದಲೇ ಹೊರನಡೆದಿದ್ದರು. ಇಂಥದ್ದೇ ಆರೋಪವನ್ನು ಮುಂದಿಟ್ಟು ಸೂರ್ಯ ಶಿವ ಎಂಬ ಮತ್ತೊಬ್ಬ ಬಿಜೆಪಿ ನಾಯಕನೂ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಇಬ್ಬರೂ ಅಣ್ಣಾಮಲೈ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅಂದಿನಿಂದ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು “ಆಡಿಯೋ ವಿಡಿಯೋ ಪಕ್ಷ ಎಂದೇ ಹೀಗಳೆಯಲಾಗುತ್ತಿದೆ.

ನಿರ್ಮಲ್ ಕುಮಾರ್

ಈ ನಡುವೆ ಕಳೆದ ವಾರವಷ್ಟೇ ಬಿಜೆಪಿ ’ಐಟಿ ವಿಂಗ್’ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದ ಸಿಟಿಆರ್ ನಿರ್ಮಲ್ ಕುಮಾರ್ ತಮ್ಮ ಹೇಳಿಕೆಯಲ್ಲಿ, “ಅಣ್ಣಾಮಲೈ ಪಕ್ಷದ ಅನೇಕ ಹಿರಿಯ ನಾಯಕರ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದಾರೆ. ಅಶ್ಲೀಲ ಆಡಿಯೋ ವಿಡಿಯೋ ಮೂಲಕ ಹಲವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ತಾನೊಬ್ಬನೇ ಏಕಮೇವ ಬಿಜೆಪಿ ನಾಯಕನಾಗಲು ಅವರು ಹೊರಟಿದ್ದು, ಸುಳ್ಳು ಹರಡುವುದೊಂದೇ ಅಣ್ಣಾಮಲೈ ಹಾಗೂ ಬಿಜೆಪಿ ಅಜೆಂಡವಾಗಿದೆ. ಇಂತಹ ಪಕ್ಷ ತಮಿಳರಿಗೆ ಮತ್ತು ತಮಿಳುನಾಡಿಗೆ ಅಪಾಯಕಾರಿಯಾದದ್ದು” ಎಂದು ದೂರಿದ್ದರು.

ಈ ಘಟನೆ ತಣ್ಣಗಾಗುವ ಮೊದಲೇ ಮದನ್ ರವಿಚಂದ್ರನ್ ಎಂಬ ಅಣ್ಣಾಮಲೈ ಅವರ ಹಳೆಯ ಸ್ನೇಹಿತ ಮತ್ತೊಂದು ಹೊಸ ಬಾಂಬ್ ಸಿಡಿಸಿರುವುದು ಅಣ್ಣಾಮಲೈ ಹಾಗೂ ತಮಿಳುನಾಡು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ, ತಮಿಳುನಾಡು ಬಿಜೆಪಿ ದಿನದಿಂದ ದಿನಕ್ಕೆ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ನಗೆಪಾಟಲಿಗೆ ಈಡಾಗುತ್ತಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...