Homeಮುಖಪುಟಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ: ಅಣ್ಣಾಮಲೈ

ಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ: ಅಣ್ಣಾಮಲೈ

- Advertisement -
- Advertisement -

“ಎಐಎಡಿಎಂಕೆ ಪಕ್ಷದ ಜೊತೆಯಲ್ಲಿ ಮೈತ್ರಿ ಮುಂದುವರಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಹೇಳಿಕೆ ನೀಡಿದ್ದಾರೆ.

ಪಕ್ಷದ ಆಂತರಿಕ ಸಭೆಯಲ್ಲಿ ಮಾತನಾಡುತ್ತಾ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಅವರು, “2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಬೇಕು” ಎಂದು ಆಶಿಸಿದ್ದಾರೆ.

ಶುಕ್ರವಾರ ಚೆನ್ನೈನಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಆಂತರಿಕ ಸಭೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. “ಕೇಂದ್ರ ನಾಯಕತ್ವವು ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಲು ನಿರ್ಧರಿಸಿದರೆ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಣ್ಣಾಮಲೈ ಹೇಳಿಕೆಗಳು ಕೋಲಾಹಲವನ್ನು ಸೃಷ್ಟಿಸಿದ್ದು, ಸಭೆಯಲ್ಲಿದ್ದ ಕನಿಷ್ಠ ಇಬ್ಬರು ನಾಯಕರು ತಕರಾರು ತೆಗೆದಿದ್ದಾರೆ ಎನ್ನಲಾಗಿದೆ. “ರಾಜ್ಯ ಘಟಕದ ಸಭೆಯಲ್ಲಿ ಮೈತ್ರಿ ಬಗ್ಗೆ ಮಾತನಾಡುವ ಅಗತ್ಯವೇನಿದೆ? ಅಂತಹ ನಿರ್ಧಾರಗಳನ್ನು ಹೊಸದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ” ಎಂದು ಹರಿಹಾಯ್ದಿದ್ದಾರೆ.

ದ್ರಾವಿಡ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಅಣ್ಣಾಮಲೈ ವಿರೋಧಿಸಿರುವ ಕುರಿತು ಸ್ಪಷ್ಟನೆಯನ್ನು ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ, ಕೊಯಮತ್ತೂರು (ದಕ್ಷಿಣ) ಶಾಸಕಿ ವನತಿ ಶ್ರೀನಿವಾಸನ್ ಮತ್ತು ಉಪಾಧ್ಯಕ್ಷ ನಾರಾಯಣನ್ ತಿರುಪತಿ ಒತ್ತಾಯಿಸಿರುವಾಗಿ ಮೂಲಗಳು ಹೇಳಿವೆ.

ಆದರೆ ಅಣ್ಣಾಮಲೈ ಅವರ ಮಾತುಗಳಿಗೆ ಇತರ ಕಾರ್ಯಕರ್ತರಿಂದ ಬೆಂಬಲ ದೊರೆತಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಸ್ವಂತ ಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಅಣ್ಣಾಮಲೈ ಬೆಂಬಲಿಗರು ಆಶಿಸಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್‌’ (ಡಿಎಚ್‌) ವರದಿ ಮಾಡಿದೆ.

ಬಿಜೆಪಿ ಸ್ವತಂತ್ರ ಪಕ್ಷವಾಗಿ ಹೊರಹೊಮ್ಮಬೇಕಾದರೆ ಸ್ವಂತ ಬಲದಲ್ಲಿ ಚುನಾವಣೆ ಎದುರಿಸಬೇಕು ಎಂಬುದು ಅಣ್ಣಾಮಲೈ ಅವರ ಉದ್ದೇಶವಾಗಿತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರು ತಿಳಿಸಿರುವುದಾಗಿ ‘ಡಿಎಚ್‌’ ಉಲ್ಲೇಖಿಸಿದೆ.

“ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದಾಗ ಮಾತ್ರ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಉತ್ತಮ ಆಡಳಿತದ ಬಗೆಗಿನ ನಮ್ಮ ನಿಲುವನ್ನು ಜನರು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಅಣ್ಣಾಮಲೈ ಹೇಳಿದರು. ಪಕ್ಷವನ್ನು ಕಟ್ಟುವಾಗ ತೊಂದರೆಗಳು ಎದುರಾಗುತ್ತವೆ; ಕೆಲವು ವರ್ಷಗಳ ಕಾಲ ಎಲ್ಲರೂ ಅಸಾಧಾರಣ ನೋವನ್ನು ಅನುಭವಿಸಬೇಕಾಗುತ್ತದೆ ಎಂಬುದು ರಾಜ್ಯಾಧ್ಯಕ್ಷರ ನಿಲುವಾಗಿದೆ” ಎಂದು ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ನಾಯಕತ್ವವು ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದರೆ ರಾಜ್ಯ ಮುಖ್ಯಸ್ಥ ಸ್ಥಾನವನ್ನು ತ್ಯಜಿಸುತ್ತೇನೆ, ಪಕ್ಷಕ್ಕಾಗಿ ‘ಸಾಮಾನ್ಯ ಕೇಡರ್’ ಆಗಿ ಕೆಲಸ ಮಾಡುತ್ತೇನೆಂದು ಅಣ್ಣಾಮಲೈ ಸಭೆಯಲ್ಲಿ ಸ್ಪಷ್ಟಪಡಿಸಿದರು ಎಂದು ಮತ್ತೊಬ್ಬ ಮುಖಂಡರು ತಿಳಿಸಿದ್ದಾರೆ.

“ನಾಯಕತ್ವ ವಹಿಸಿದ್ದೇನೆ. ತಮಿಳುನಾಡಿನಲ್ಲಿ ಬದಲಾವಣೆಯನ್ನು ತರಲು ನಾನು ರಾಜಕೀಯ ಬಂದಿದ್ದೇನೆ ಹೊರತು, ಎಐಎಡಿಎಂಕೆ ಜೊತೆ ಸೇರಿಕೊಂಡು ಎರಡನೇ ಪಿಟೀಲು ನುಡಿಸಲು ಅಲ್ಲ” ಎಂದು ಅಣ್ಣಾ ಮಲೈ ಹೇಳಿರುವುದಾಗಿ ಮುಖಂಡರು ಮಾಹಿತಿ ನೀಡಿದ್ದಾರೆ.

ಮೈತ್ರಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ವಿವರಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಿರುವುದಾಗಿ ಅಣ್ಣಾಮಲೈ ಅವರು ಸಭೆಯಲ್ಲಿ ತಿಳಿಸಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿರಿ: ‘ನಕಲಿ ಪ್ರಚಾರ’ ಆರೋಪ; ಅಣ್ಣಾಮಲೈ ವಿರುದ್ಧ ಎಫ್‌ಐಆರ್‌ ದಾಖಲು

ಅಣ್ಣಾಮಲೈ ಅವರನ್ನು ಟೀಕಿಸಿ ಬಿಜೆಪಿ ತೊರೆದ ಸಿಟಿಆರ್ ನಿರ್ಮಲ್ ಕುಮಾರ್ ಅವರನ್ನು ಕೆಲವೇ ಗಂಟೆಗಳಲ್ಲಿ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿಯವರು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ಹಿನ್ನೆಲೆಯಲ್ಲಿ ಅಣ್ಣಾಮಲೈ ಹೇಳಿಕೆಗಳು ಹೊರಬಿದ್ದಿವೆ. ಈ ಬೆಳವಣಿಗೆಗೆ ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಮೈತ್ರಿ ಪಾಲುದಾರರ ನಡುವೆ ಮಾತಿನ ಚಕಮಕಿ ನಡೆದಿದೆ.

ಮೈತ್ರಿ ಕುರಿತು ಅಣ್ಣಾಮಲೈ ನೀಡಿರುವ ಹೇಳಿಕೆಗಳನ್ನು ಎರಡನೇ ಹಂತದ ಎಐಎಡಿಎಂಕೆ ನಾಯಕರು ಸ್ವಾಗತಿಸಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ನೈನಾರ್ ನಾಗೇಂದ್ರನ್ ಪ್ರತಿಕ್ರಿಯಿಸಿ, “ಇದು ಅಣ್ಣಾಮಲೈ ಅವರ ವೈಯಕ್ತಿಕ ಅಭಿಪ್ರಾಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿ ಜಯಕುಮಾರ್ ಅವರು ಪ್ರತಿಕ್ರಿಯಿಸಿ, “ಆಂತರಿಕ ಸಭೆಯಲ್ಲಿ ಆಡಿದ ಮಾತುಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ರಾಜ್ಯದಲ್ಲಿ ತಮ್ಮ ಪಕ್ಷವು ಮೈತ್ರಿಕೂಟದ ನಾಯಕತ್ವ ವಹಿಸಲಿದ” ಎಂದು ಸ್ಪಷ್ಟಪಡಿಸಿದ್ದಾರೆ.

ಎಐಎಡಿಎಂಕೆ ಮತ್ತು ಬಿಜೆಪಿಯ ಮೈತ್ರಿ 2024 ರ ಲೋಕಸಭೆ ಚುನಾವಣೆಗೂ ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿರುವುದರಿಂದ ಅಣ್ಣಾಮಲೈ ಅವರ ನಿಲುವು ಮಹತ್ವ ಪಡೆದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...