Homeಪುಸ್ತಕ ವಿಮರ್ಶೆ’ಬೌದ್ಧ ಧರ್ಮ- ಸಂಕ್ಷಿಪ್ತ ಇತಿಹಾಸ ಮತ್ತು ಧಮ್ಮಪದ’ ಪುಸ್ತಕದ ತಿರುಚಿದ ಇತಿಹಾಸ; ಬೌದ್ಧ ಧರ್ಮ ವೈದಿಕದ...

’ಬೌದ್ಧ ಧರ್ಮ- ಸಂಕ್ಷಿಪ್ತ ಇತಿಹಾಸ ಮತ್ತು ಧಮ್ಮಪದ’ ಪುಸ್ತಕದ ತಿರುಚಿದ ಇತಿಹಾಸ; ಬೌದ್ಧ ಧರ್ಮ ವೈದಿಕದ ಕವಲೇ? ವೈದಿಕ ಪಂಡಿತರ ಜಿಜ್ಞಾಸೆಯ ಸುತ್ತ

- Advertisement -
- Advertisement -

ಇದು ಈ ತಿಂಗಳ ಮಾರ್ಚ್ ಒಂದರ ಸಂಚಿಕೆಯ ’ಬೌದ್ಧ ತತ್ವಗಳನ್ನು ಆಕ್ರಮಿಸುತ್ತಿರುವ ವೈದಿಕ ತಂತ್ರಗಳು’ ಎಂಬ ನನ್ನ ಲೇಖನದ ಮುಂದುವರಿದ ಭಾಗ ಎನ್ನಬಹುದು. ಬರೀ ಭಾಷಣ, ಪ್ರವಚನಗಳು ಮಾತ್ರವಲ್ಲ, ಈ ವೈದಿಕ ಪಂಡಿತರು ತಮ್ಮ ಗ್ರಂಥಗಳಲ್ಲಿಯೂ ಬುದ್ಧರ ಬೋಧನೆಗಳನ್ನು ವಿಕೃತಗೊಳಿಸುವ ಕೆಲಸಗಳನ್ನೇ ಮಾಡಿದ್ದಾರೆ. ನನ್ನ ಸ್ನೇಹಿತರು ಈ ಜನವರಿಯಲ್ಲಿ ಬಿಡುಗಡೆಯಾದ ಜಿ.ಬಿ ಹರೀಶರ ಒಂದು ಪುಸ್ತಕ ’ಬೌದ್ಧ ಧರ್ಮ- ಸಂಕ್ಷಿಪ್ತ ಇತಿಹಾಸ ಮತ್ತು ಧಮ್ಮಪದ’ವನ್ನು ಓದಲು ಕೊಟ್ಟರು. ಈ ಪುಸ್ತಕ ಇಡಿಯಾಗಿ ಬೌದ್ಧ ತತ್ವಗಳನ್ನು ವಿಕೃತಗೊಳಿಸಿ ಬುದ್ಧ ಹೇಗೆ ವೈದಿಕ ಧರ್ಮವನ್ನು ಪುನರುತ್ಥಾನ ಮಾಡಿದರು ಎಂಬುದನ್ನು ನಿರೂಪಿಸಲು ಹೆಣಗುತ್ತದೆ. ಕೆಲ ಅಂಶಗಳನ್ನು ಕೊಟ್ಟು ವಿವರಿಸುವೆ.

1) ರಾಮಕೃಷ್ಣ ಮಿಶನ್‌ನ ಸ್ವಾಮಿ ಪ್ರಭವಾನಂದರ ಅಭಿಪ್ರಾಯಗಳನ್ನು ಅನುಮೋದಿಸುತ್ತ ಹರೀಶ್ ಬರೆಯುತ್ತಾರೆ: “ವೈದಿಕ ಧರ್ಮವನ್ನು ಅವನು ಖಂಡಿಸಿದನೆಂದು ತಪ್ಪು ಅರ್ಥ ಮಾಡುವದು ಸುಲಭ. ಆದರೆ ನಿಜವಾಗಿಯೂ, ಧರ್ಮವು ವೇದಗಳ ಮತ್ತು ಇತರ ಧರ್ಮಗ್ರಂಥಗಳ ಪಾಂಡಿತ್ಯವನ್ನು ಪಡೆಯುವದರಲ್ಲಿ ಇಲ್ಲ. ತನ್ನಾತ್ಮದೊಳಗೆ ಆಧ್ಯಾತ್ಮಿಕ ಜೀವನದ ಪೂರ್ಣತೆಯನ್ನು ಪಡೆಯುವದೇ ನಿಜವಾದ ಧರ್ಮ ಎಂಬ ಸತ್ಯವನ್ನು ಅವನು ಬೆಳಕಿಗೆ ತಂದನು. ಈ ಸತ್ಯವು ವೇದಗಳಲ್ಲಿಯೇ ವ್ಯಕ್ತವಾಗಿದೆ. ಇದನ್ನು ಬ್ರಾಹ್ಮಣರು ಮರೆತರು. ಮತ್ತು ಬುದ್ಧನು ಸನಾತನ ಧರ್ಮದ ನೈಜ ತತ್ವವನ್ನು ಪ್ರಕಾಶಪಡಿಸಲು ಬಂದನು. ಬುದ್ಧನು ಯಾವ ಹೊಸ ಧರ್ಮವನ್ನೂ ಬೌಧಿಸಲಿಲ್ಲ. ಸನಾತನ ಯತಾರ್ಥ ವೈದಿಕ ಧರ್ಮವನ್ನೇ ಅದಕ್ಕೆ ನವಚೇತನವನ್ನಿತ್ತನು ಪುನಃ ಸ್ಥಾಪಿಸಿದನು.”

ನೋಡಿ, ಎಷ್ಟು ಸೂಕ್ಷ್ಮವಾಗಿ ಬೆಣ್ಣೆಯಲಿ ಕೂದಲು ತೆಗೆದಂತೆ ಹೇಳುತ್ತಾರೆ ಇವರುಗಳು! ಬ್ರಾಹ್ಮಣರು ಮರೆತಿದ್ದರಂತೆ; ಇವರು ಮರೆತ ಧರ್ಮವನ್ನು ಪುನರುತ್ಥಾನ ಮಾಡಿದರಂತೆ. ಭಗವಾನ್ ಬುದ್ಧರು ಜ್ಞಾನೋದಯವಾದ ಮೇಲೆ ಸ್ಪಷ್ಟವಾಗಿ ನುಡಿಯುತ್ತಾರೆ: “ಈ ಹಿಂದೆ ಯಾರೂ ಕೇಳದ್ದನ್ನು ನಾನು ಕೇಳುತ್ತಿದ್ದೇನೆ. ಇದು ಈ ಹಿಂದೆ ಇರಲಿಲ್ಲ” ಎಂದು. (ಅಪಿಸ್ಸು ಮಂ ಬಿಕ್ಖವೇ, ಇಮಾ ಅನಚ್ಚರಿಯಾ ಗಾಥಾಯೋ ಪಟಿಭಂಸು ಪುಬ್ಬೇ ಅಸ್ಸುತ ಪುಬ್ಬಾ- ಅರಿಯ ಪೆರಿಯೇಸನ ಸುತ್ತ-ಮಜ್ಜಿಮ ನಿಕಾಯ.) ಹೀಗೆಂದು ತಮಗೆ ತಿಳಿದ ಅತ್ಯಂತ ಗಂಭೀರವಾದ, ಸೂಕ್ಷ್ಮವಾದ, ಕಾಣಲಸಾಧ್ಯವಾದ, ಅರಿಯಲಾಗದ ಈ ಧರ್ಮವನ್ನು ಏನೂ ಅರಿಯದ ಸಾಮಾನ್ಯರಿಗೆ ಹೇಗೆ ತಿಳಿಯಪಡಿಸುವದು ಎಂದು ಗಾಥೆಯ ಮೂಲಕ ವ್ಯಕ್ತಪಡಿಸುತ್ತಾರೆ ಮತ್ತು ಯೋಚಿಸುತ್ತಾರೆ. ಆಗ ತಮ್ಮ ಮುಂದೆ ಕಾಣಿಸಿಕೊಂಡು ಸಮ್ಮಾಸಂಬುದ್ದರನ್ನು ವಿನಂತಿಸಿಕೊಂಡ ಬ್ರಹ್ಮಸಹಂಪತಿಯ ಸಲಹೆಯಂತೆ ಜನಸಾಮಾನ್ಯರಿಗೆ ತಮ್ಮ ಸಂಬೋಧಿಯ ಬೆಳಕನ್ನು ಹಂಚುವ ನಿರ್ಧಾರ ಮಾಡುತ್ತಾರೆ. “ಬಿಕ್ಖುಗಳೇ, ತಥಾಗತನನ್ನು ಸ್ತುತಿಸುವಾಗ ಜನರು ಗಂಭೀರವೂ, ಕಷ್ಟಪಟ್ಟು ಅರಿತುಕೊಳ್ಳಬೇಕಾದುದೂ, ಶಾಂತಿಯನ್ನು ತರುವಂಥದೂ, ತರ್ಕವನ್ನು ಮೀರಿದುದೂ, ನೈಪುಣ್ಯಪೂರಿತವಾದುದೂ ಜಾಣರು ತಿಳಿಯಬೇಕಾದುದೂ, ತಥಾಗತರು ಸ್ವ ಪ್ರಯತ್ನದಿಂದ ಅರಿತು ಪ್ರಕಾಶಪಡಿಸಿರುವಂಥದೂ (ಯೇ ತಥಾಗತೋ ಸಯಂ ಅಭಿಜ್ಞ ಸಚ್ಚಿಕತ್ವಾ ಪವೇದೇತಿ) ಆದ ಧರ್ಮದ ವರ್ಣನೆಯನ್ನೇ ಮಾಡುತ್ತಾರೆ- ಬ್ರಹ್ಮಜಾಲ ಸುತ್ತ, ದೀಘನಿಕಾಯ. ಬ್ರಹ್ಮಜಾಲ ಸುತ್ತದಲ್ಲೂ ಅವರ ಸಮ್ಯಕ್ ಜ್ಞಾನ ಅವರ ಸ್ವಪ್ರಯತ್ನದ್ದು ಮತ್ತು ಅದು ಮುಂಚೆ ಇರಲಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

ಇದು ಏನನ್ನು ಹೇಳುತ್ತದೆ? ಬುದ್ಧರಿಗಿಂತ ಮುಂಚೆ ಈ ಜ್ಞಾನ ಇರಲಿಲ್ಲ. ಇದು ಸ್ಪಷ್ಟ. ಮತ್ತೆ ಭಗವಾನರು ವೇದಗಳನ್ನು ಖಂಡಿಸುವ ಪ್ರಶ್ನೆಯೇ ಬರುವುದಿಲ್ಲ. ಯಾಕೆಂದರೆ ಆಗ ವೇದಗಳ ಅಸ್ತಿತ್ವವೇ ಇರಲಿಲ್ಲ. ತಿಪಿಟಕಗಳಲ್ಲಿ ಎಲ್ಲಿಯೂ ವೇದಗಳ ಹೆಸರುಗಳನ್ನಾಗಲಿ, ಅವುಗಳ ಉಧೃತ ಭಾಗಗಳನ್ನಾಗಲಿ ತಗೆದುಕೊಂಡು  ಸಂವಾದ ಅಥವಾ ಉಪದೇಶ ಮಾಡಿದ್ದಾಗಲಿ ಕೇಳಿಲ್ಲ. ಆಗ ಸಂಸ್ಕೃತ ಭಾಷೆಯೇ ಅಸ್ತಿತ್ವದಲ್ಲಿ ಇರಲಿಲ್ಲ. ಯಜ್ಞಯಾಗಗಳು, ಅನೇಕ ಮೂಢನಂಬಿಕೆಗಳು, ಪುರೋಹಿತರ ಶೋಷಣೆಗಳು ಬಹಳಷ್ಟು ಇದ್ದವು.

2) ಇನ್ನೊಂದು ಕಡೆಯಲ್ಲಿ (ಅದೇ ಪುಸ್ತಕ, ಪುಟ 81) ಬುದ್ಧರು ಮೂರೂ ವೇದಗಳನ್ನು ಅಧ್ಯಯನ ಮಾಡಿದ್ದರು (ತಿಣ್ಣಂ ವೇದಾನಂ ಪಾರಿಗು) ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆಯಾಗಿ ತೇವಿಜ್ಜ, ಸೋಣದಂಡ, ಬ್ರಹ್ಮಜಾಲ ಸುತ್ತಗಳನ್ನು ಉದಾಹರಣೆಯಾಗಿ ಕೊಡುತ್ತಾರೆ. ತಿಪಿಟಕಗಳಲ್ಲಿ ತೇವಿಜ್ಜ, ತಿಣ್ಣಂ ವೇದಾನಿ ಎನ್ನುವ ಶಬ್ದಗಳು ಬರುತ್ತವೆ. ವಿದ್, ವೇದ, ವೇದನಾ ಇದು ಪಾಲಿಯ ಶಬ್ದ , ಅಂದರೆ ಅರಿವಿಗೆ ಬರುವದು, ಅನುಭವಕ್ಕೆ ಬರುವದು, ತಿಳಿವಳಿಕೆ ಅಥವಾ ವಿದ್ಯೆ ಎಂದರ್ಥ. ತೇವಿಜ್ಜ ಅಂದರೆ ಮೂರು ವಿದ್ಯೆಗಳು ಇದನ್ನು ಸಂಗೀತಿ ಮತ್ತು ದಸುತ್ತರ ಸುತ್ತಗಳಲ್ಲಿ ವಿವರಿಸಿದ್ದಾರೆ.

“ತಿಸ್ಸೋ ವಿಜ್ಜಾ- ಪುಬ್ಬೆ ನಿವಾಸಾನುಸ್ಸತಿ ಜ್ಞಾಣಂ, ಸತ್ತಾನಂ ಜ್ಞಾಣಂ, ಅಸವಾನಂ ಖಯೇ ಜ್ಞಾಣಂ ವಿಜ್ಜಾ|| ಮೂರು ವಿದ್ಯೆಗಳು-ಹಿಂದಿನ ಜನ್ಮಗಳ ಜ್ಞಾನ, ಜೀವಿಗಳ ಹುಟ್ಟು ಸಾವುಗಳ ಜ್ಞಾನ, ಆಸವಗಳನ್ನು ನಾಶಮಾಡುವ ಜ್ಞಾನ.” – ಸಂಗೀತಿ ಸುತ್ತ ದೀಘ ನಿಕಾಯ.

ಇದನ್ನೂ ಓದಿ: ಬೌದ್ಧ ತತ್ವಗಳನ್ನು ಆಕ್ರಮಿಸುತ್ತಿರುವ ವೈದಿಕ ತಂತ್ರಗಳು

ಸುತ್ತಗಳನ್ನು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಅನುವಾದಿಸಿದ ಬೌದ್ಧ ಪಂಡಿತರೂ ಕೂಡ ತಪ್ಪಾಗಿ ಅನುವಾದಿಸಿದ್ದಾರೆ. ತೇವಿಜ್ಜ ಅಂದರೆ ಮೂರು ವೇದಗಳಲ್ಲ, ಮೂರು ವಿದ್ಯೆಗಳು. (ಮೂರು ವೇದಗಳಾದರೆ ನಾಲ್ಕನೆಯದು ಎಲ್ಲಿ? ಅದು ಇನ್ನೂ ಹುಟ್ಟಿರಲಿಲ್ವೇ?)

ಬುದ್ಧರ ಕಾಲದಲ್ಲಿ ವೇದಗಳಾಗಲಿ, ಉಪನಿಷತ್ತು ಪುರಾಣಗಳಾಗಲಿ ಇರಲಿಲ್ಲ. ಬೇರೆಬೇರೆ ರೀತಿಯ ಜ್ಞಾನ ಪಡೆದುಕೊಂಡ ಬೇರೆ ಸಂಪ್ರದಾಯದ ಸಮಣರು ಬೋಧಕರೂ ಇದ್ದರು. ಮಕ್ಖಲಿ ಗೋಶಾಲ, ಪೂರಣ ಕಸ್ಸಪ, ಅಜಿತ ಕೇಸಕಂಬಳಿ, ನಿಗಂಠನಾಥ ಪುತ್ತ, ಸಂಜಯ ಬೇಲುಪುತ್ತ ಮುಂತಾದ ಬೇರೆಬೇರೆ ಅಭಿಪ್ರಾಯದ ಸಮಣರಿದ್ದರು. ಬುದ್ಧರು ಸುತ್ತಗಳಲ್ಲಿ ಬೇರೆಬೇರೆ ಮಿಥ್ಯಾ ದೃಷ್ಟಿಕೋನಗಳನ್ನು ತಿಳಿಸಿದ್ದಾರೆ. ಆದರೆ ಎಲ್ಲಿಯೂ ಈ ಋಗ್, ಯಜು, ಸಾಮ ವೇದಗಳ ಬಗ್ಗೆ ಹೇಳಿಲ್ಲ. ವೇದಗಳು ಹತ್ತು, ಇಪ್ಪತ್ತು ಸಾವಿರ ವರ್ಷಗಳಷ್ಟು ಹಳೆಯವು ಎನ್ನುವದು ಒಂದು ಮಹಾಸುಳ್ಳು. ಕೇವಲ ಮೌಖಿಕ ಪರಂಪರೆಯಿಂದ ವೇದಗಳನ್ನು ರಕ್ಷಿಸಿಕೊಂಡು ಬರಲಾಗಿದೆ ಎನ್ನುವದೂ ಸತ್ಯಕ್ಕೆ ದೂರವಾದ ಮಾತು.

ಡಾ. ರಾಜೆಂದ್ರ ಪ್ರಸಾದ ಸಿಂಹ ಒಬ್ಬ ಹಿಂದಿಯ ಸಾಹಿತಿ ಮತ್ತು ಜಾಗತಿಕ ಭಾಷಾ ಶಾಸ್ತ್ರಜ್ಞ. ಇವರು ತಮ್ಮ ಪುಸ್ತಕ ’ಬೌದ್ಧ ಸಭ್ಯತಾಕಿ ಖೋಜ’ನಲ್ಲಿ ಪ್ರಾಕೃತದಿಂದ ಹೇಗೆ ಸಂಸ್ಕರಿತವಾದ ಭಾಷೆ ಸಂಸ್ಕೃತ ಬಂದಿತು ಎನ್ನುವದನ್ನು ವಿವರಿಸುತ್ತಾರೆ.

ಇಂಥವುಗಳಿಗೆ ಪೀಜಿನ್ (Pidgin) ಭಾಷೆಗಳು ಎನ್ನುತ್ತಾರೆ. ವ್ಯಾಪಾರ, ಆಡಳಿತ, ಧರ್ಮಪ್ರಸಾರ, ಸೈನ್ಯ ಇನ್ನೂ ಯಾವುದಾದರೂ ಕಾರಣಗಳಿಂದ ಇಂಥ ಭಾಷೆಗಳು ಹುಟ್ಟಿಕೊಳ್ಳುತ್ತವೆ. ಈಗ ಚೀನಾದಲ್ಲಿ ಒಂದು ಇಂಥ ಚೈನಿ ಇಂಗ್ಲಿಷ್ ಭಾಷೆ ಹುಟ್ಟಿಕೊಂಡಿದೆ. ಕ್ರಿಯಾಪದ, ವಿಭಕ್ತಿಗಳು ಮಾತ್ರ ಚೀನಿ ಉಳಿದ ಶಬ್ದಗಳೆಲ್ಲ ಇಂಗ್ಲಿಷ್. ನಮ್ಮ ದೇಶದಲ್ಲಿ ಉರ್ದು ಕೂಡ ಹೀಗೆ ಮಿಲಿಟರಿ ಛಾವಣಿಗಳಲ್ಲಿ ಹುಟ್ಟಿತು.

ಪಾಟಲಿಪುತ್ರ, ಉಜ್ಜೈನಿ, ವಿದಿಶಾ ಇತ್ಯಾದಿ ನಗರ, ದೇಶಗಳ ವ್ಯಾಪಾರ ಬ್ಯಾಕ್ಟ್ರಿಯಾ ಗ್ರೀಸ್‌ವರೆಗೂ ಚಾಚಿತ್ತು. ಮತ್ತು ತಕ್ಷಶಿಲೆ ಪಶ್ಚಿಮೋತ್ತರದ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಅನೇಕ ಭಾಷೆಗಳ ಸಂಗಮದಿಂದಾಗಿ ಒಂದು ಸಾಮಾನ್ಯ ವ್ಯವಹಾರಿಕ ಭಾಷೆಯ ಅವಶ್ಯಕತೆ ಉಂಟಾಯಿತು ಮತ್ತು ಸಹಜವಾಗಿ ಪಾಲಿ, ಪ್ರಾಕೃತಗಳು ನಿಯೊಪ್ರಾಕೃತ ಮತ್ತು ಯವನ ಭಾಷೆಗಳೊಂದಿಗೆ ಸೇರಿ ಹೊಸ ಭಾಷೆಯ ಬೆಳವಣಿಗೆ ಕ್ರಿ.ಪೂ 5ನೇ ಶತಮಾನದಿಂದಲೇ ಪ್ರಾರಂಭವಾಗಿತ್ತು. ಕ್ರಿ.ಶ 1-2ನೇ ಶತಮಾನಗಳಲ್ಲಿ ಅದೊಂದು ಪ್ರಬುದ್ಧ ಭಾಷೆಯಾಗಿ ಬೆಳೆಯಿತು. ಧಮ್ಮ (ಬ್ರಾಹ್ಮಿ) ಲಿಪಿಯಲ್ಲಿಲ್ಲದ ಎಷ್ಟೋ ಅಕ್ಷರಗಳು ಸೇರಿಕೊಂಡವು. ಋ, ಕ್ರ, ಗ್ರ, ತ್ರ,ದ್ರ, ಪ್ರ, ಬ್ರ, ಮ್ರ, ಇವು ಕರೋಷ್ಟಿ ಲಿಪಿಯಿಂದ (ನಿಯೊ ಪ್ರಾಕೃತ) ಸಂಸ್ಕೃತಕ್ಕೆ ಸೇರಿಕೊಂಡವು. ಮೊದಲ ಹಂತದ ಬೆಳವಣಿಗೆಯಾದ ಸಂಸ್ಕೃತವನ್ನು ಮಿಶ್ರ ಬೌದ್ಧ ಸಂಸ್ಕೃತವೆಂದೂ ಕರೆಯುತ್ತಿದ್ದರು. ಸಂಸ್ಕೃತವನ್ನು ತಾತ್ವಿಕ, ಸಾಹಿತ್ಯಿಕ ಮಟ್ಟದಲ್ಲಿ ಬೆಳೆಸಿದವರು ಮಹಾಯಾನ ಬೌದ್ಧರು. ಮುಂದೆ ಸಂಸ್ಕೃತದಲ್ಲಿ ವೈದ್ಯ, ಖಗೋಳ ಶಾಸ್ತ್ರ, ಸಾಹಿತ್ಯ ಸಂಗೀತ ಇತ್ಯಾದಿಗಳು ಬೆಳೆದುಬಂದವು. ಅದು ಯಾರ ಮಾತೃಭಾಷೆಯೂ ಆಗದೇ ಕೇವಲ ಭಾರತದ ದಕ್ಷಿಣದಿಂದ ವಾಯವ್ಯದ ತುದಿಯವರೆಗೂ ಪಾಂಡಿತ್ಯದ ಸಂಪರ್ಕ ಭಾಷೆಯಾಗಿ ಬೆಳೆಯಿತು. ಹೊರಗಿನಿಂದ ಇಲ್ಲಿಗೆ ಬಂದ ಆರ್ಯ ಜನಾಂಗ ತಮ್ಮ ಹಳೆಯ ನೆನಪುಗಳನ್ನು ಅಭಿವ್ಯಕ್ತಿಸಲು ಸಹಜವಾಗಿ ಸಂಸ್ಕೃತವನ್ನು ತಗೆದುಕೊಂಡರು.

ಕ್ರಿ.ಪೂರ್ವದ ಶಿಲಾಲಿಪಿಗಳು ಬ್ರಾಹ್ಮಿ ಲಿಪಿಯಲ್ಲಿಯೂ, ಕ್ರಿ.ಶಕದ ಆಸುಪಾಸಿನಲ್ಲಿ ಮಿಶ್ರ ಸಂಸ್ಕೃತದಲ್ಲೂ, ಎರಡನೆ ಶತಮಾನದ ನಂತರದಲ್ಲಿ ಸಂಸ್ಕೃತದಲ್ಲೂ ಇವೆ.

ಉದಾಹರಣೆಗೆ ಪಾಲಿಯ ’ಧಮ್ಮ’ ನಂತರದ ಪೀಜಿನ್ ಸಂಸ್ಕೃತದಲ್ಲಿ ’ದ್ರಮ’ (ಈಗಿನ ಪಾಕಿಸ್ತಾನದ ಶಾಬಾಜಗಡಿಯ ಅಸೋಕನ ಶಾಸನ) ಆಗಿ ನಂತರ ಸಂಸ್ಕೃತದಲ್ಲಿ ’ಧರ್ಮ’ ಆಯಿತು. (ರುದ್ರದಾಮನ್ ಶಿಲಾಲೇಖ.) ಪಾಲಿಯ ಪಿಯದಸಿ ಪ್ರಿಯದ್ರಶಿಯಾಗಿ ನಂತರ ಪ್ರಿಯದರ್ಶಿ ಆಯಿತು. ಪಾಲಿಯಲ್ಲಿ ಹಲಂತ್ ಉಚ್ಛಾರ (ವ್ಯಂಜನಾಂತ್ಯ) ಇಲ್ಲ. ಹಾಗಾಗಿ ದೇವಾನಾಂ ಎಂದು ಆಗದೇ ದೇವಾನಾಮ ಎಂದು ಬರೆಯುತ್ತಾರೆ. ಶಾಸನಗಳಲ್ಲಿ ಅಶೋಕನು ’ದೇವಾನಾಮಪಿಯದಸಿ’ ಎಂದು ಬರೆದುಕೊಳ್ಳುತ್ತಾನೆ. ಅಂದರೆ ಭಗವಾನ್ ಬುದ್ಧರಿಗೆ ಸಮಣರಿಗೆ ಪ್ರಿಯನಾದವನು ಎಂದರ್ಥ. ಇದನ್ನು ಸಂಸ್ಕೃತ ಪಂಡಿತರು ದೇವಾನಾಂ ಅಪ್ರಿಯ ಎಂದು ವಿಭಜಿಸಿ ಸಂಸ್ಕೃತ ಶಬ್ದಕೋಶದಲ್ಲಿ ಮೂರ್ಖ ಎಂದು ಬರೆಯುತ್ತಾರೆ. ಎಷ್ಟು ನೀಚತನ ಇರಬೇಕು?

ಸಂಸ್ಕೃತ ನಿಜಕ್ಕೂ ಸುಂದರವಾದ ಭಾಷೆ. ಆದರೆ ಇತಿಹಾಸ ಏನಿದೆಯೋ ಅದೇ ಅಲ್ಲವೇ? ನಾವೀಗ ಸಂಸ್ಕೃತ ಪುರಾತನವೆಂಬ ಭ್ರಮೆಯಿಂದ ಹೊರಬರಬೇಕು. ಪಾಲಿ ಪ್ರಾಕೃತಗಳು ಮತ್ತು ನಮ್ಮ ಕನ್ನಡ ಸಹಿತ ದ್ರಾವಿಡ ಬಾಷೆಗಳು ತುಂಬಾ ಪುರಾತನವಾದವು. ಭಾರತ ಮತ್ತು ಜಗತ್ತಿನ ತುಂಬ ಹರಡಿದ ಏಕೈಕ ಮಾನವೀಯ ಧರ್ಮ ಎಂದರೆ ಬೌದ್ಧ ಧರ್ಮ ಮಾತ್ರ. ಅದರಿಂದ ಎಷ್ಟೋ ದರ್ಶನಗಳು ಧರ್ಮಗಳು ಪ್ರೇರಿತವಾಗಿವೆ. ಬುದ್ಧರ ಕರುಣೆ ಮೈತ್ರಿಗಳನ್ನು ಮೈವೆತ್ತ ಅನೇಕ ಸಂತರು ಶರಣರು ನಮಗೆ ದಾರಿ ತೋರಿದ್ದಾರೆ. ನಮ್ಮ ಸಂವಿಧಾನದ ಸಮಾನತೆಯ, ಸಬ್ಬಲೋಕಾನುಕಂಪದ ಆಶಯಕ್ಕೆ ಬುದ್ಧರ ದಾರಿಯೇ ಪ್ರೇರಣೆ.

ಭವತು ಸಬ್ಬ ಮಂಗಲಮ್

ರಮಾಕಾಂತ ಪುರಾಣಿಕ

ರಮಾಕಾಂತ ಪುರಾಣಿಕ
ಮೂಲತಃ ವಿಜಯಪುರ ಜಿಲ್ಲೆಯವರು. BSNLನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೌದ್ಧ ಸಾಹಿತ್ಯ, ವಚನ ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ, ಓದು ಮತ್ತು ಬರಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...