Homeಮುಖಪುಟವರುಣಾ ಮತ್ತು ಕೋಲಾರ ಎರಡು ಕಡೆ ಸ್ಪರ್ಧೆ ವದಂತಿ: ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ?

ವರುಣಾ ಮತ್ತು ಕೋಲಾರ ಎರಡು ಕಡೆ ಸ್ಪರ್ಧೆ ವದಂತಿ: ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ?

ಇದುವರೆಗೂ 3 ಚುನಾವಣೆಗಳಲ್ಲಿ ಸೋತಿರುವ ಸಿದ್ದರಾಮಯ್ಯನವರು 8 ಬಾರಿ ಗೆಲುವು ಸಾಧಿಸಿದ್ದಾರೆ.

- Advertisement -
- Advertisement -

ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹುಕಾಲದಿಂದ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಅವರು ಸದ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರ ದೂರವಾದ್ದರಿಂದ ಬೆಂಗಳೂರಿಗೆ ಹತ್ತಿರದ ಕ್ಷೇತ್ರ ಇದ್ದರೆ ಸೂಕ್ತ ಎಂದು ಕೆಲ ದಿನಗಳ ಹಿಂದೆ ಕೋಲಾರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಸದ್ಯ ಅವರು ಕೋಲಾರದಿಂದ ಹಿಂದೆ ಸರಿಯುತ್ತಾರೆ ಅಥವಾ ಕೋಲಾರ ಮತ್ತು ವರುಣಾ ಎರಡು ಕ್ಷೇತ್ರಗಳಿಂದಲೂ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹಬ್ಬಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಯಾವ ಕ್ಷೇತ್ರ ಅವರ ಆಯ್ಕೆಯಾಗಿರುತ್ತದೆ ಎಂಬ ವಿವರ ಇಲ್ಲಿದೆ.

ಸಿದ್ದರಾಮಯ್ಯನವರು ರಾಜಕೀಯ ಹಾದಿ

ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿ ಗ್ರಾಮದವರು. ವಕೀಲರಾಗಿದ್ದ ಅವರು 1983ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಯತ್ನದಲ್ಲಿಯೇ ಜಯಗಳಿಸಿದರು. ಅವರು 26,614 ಮತಗಳನ್ನು ಗಳಿಸಿ, ಕಾಂಗ್ರೆಸ್‌ನ ಜಯದೇವರಾಜೇ ಅರಸು ಅವರನ್ನು 3,504 ಮತಗಳ ಅಂತರದಲ್ಲಿ ಮಣಿಸಿದ್ದರು.

1985ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು 33,725 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಕೆ.ರಂಗನಿಕಾ ಅವರನ್ನು 8,271 ಮತಗಳಿಂದ ಮಣಿಸಿದರು.

ಮೊದಲ ಸೋಲು

1989ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯನವರು 36,483 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜಶೇಖರ ಮೂರ್ತಿಯವರು ಎದುರು 6,409 ಮತಗಳ ಅಂತರದಲ್ಲಿ ಸೋಲು ಕಂಡರು.

1994ರಲ್ಲಿ ಮತ್ತೆ ಜನತಾ ದಳದಿಂದ ಸ್ಪರ್ಧಿಸಿದ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ಎ.ಎಸ್.ಗುರುಸ್ವಾಮಿ ಅವರನ್ನು 32,155 ಮತಗಳ ಬೃಹತ್ ಅಂತರದಲ್ಲಿ ಸೋಲಿಸಿದರು. ಆ ಮೂಲಕ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು.

1999ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮತ್ತೆ ಸೋಲು ಕಂಡರು. ಆ ವೇಳೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರು 6,200 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಗುರುಸ್ವಾಮಿಯವರ ಎದುರು ಸೋಲು ಕಂಡರು.

2004ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ರೇವಣ್ಣ ಸಿದ್ದಯ್ಯ ಎಲ್ ಅವರನ್ನು 32,345 ಮತಗಳ ಅಂತರದಲ್ಲಿ ಮಣಿಸಿದರು. ಈ ಹೊತ್ತಿಗೆ ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿ ಬೆಳೆದರು. ಉಪ ಮುಖ್ಯಮಂತ್ರಿ, ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.

2006ರಲ್ಲಿ ಹಲವು ರಾಜಕೀಯ ಪಲ್ಲಟಗಳಾದಾಗ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಅದೇ ವರ್ಷ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಿದ್ದರಾಮಯ್ಯನವರ ರಾಜಕೀಯ ಬದುಕಿನ ತಿರುವುಗಳಲ್ಲಿ ಒಂದಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಚುನಾವಣೆ ಇದಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯನವರು 1,15,512 ಮತಗಳನ್ನು ಪಡೆದರೆ ಜೆಡಿಎಸ್‌ನ ಶಿವಬಸಪ್ಪ ಅವರು 1,15,255 ಮತಗಳನ್ನು ಪಡೆದು ಕೇವಲ 257 ಮತಗಳ ಅಂತರದಲ್ಲಿ ಸೋಲುಂಡರು. ಆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಒಂದು ವೇಳೆ ಸೋತಿದ್ದರೆ ಬಹುಶಃ ಅವರ ರಾಜಕೀಯ ವರ್ಚಸ್ಸು ಮುಗಿದುಹೋಗುತ್ತಿತ್ತು ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

2008 ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ವರುಣಾ ಕ್ಷೇತ್ರವನ್ನು ರಚಿಸಲಾಯಿತು. ಆಗ ಸಿದ್ದರಾಮಯ್ಯನವರು ಅಲ್ಲಿಂದ ಸ್ಪರ್ಧಿಸಿ 71,908 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್ ರೇವಣಸಿದ್ದಯ್ಯನವರನ್ನು ಸೋಲಿಸಿದರು.

2013ರಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸುತ್ತೇನೆ ಎಂದು ಕಾಪು ಸಿದ್ದಲಿಂಗಸ್ವಾಮಿಯವರು ಕೆಜೆಪಿ ಪಕ್ಷದಿಂದ ಕಣಕ್ಕಿಳಿದರು. ಆದರೂ ಸಿದ್ದರಾಮಯ್ಯನವರು 84,385 ಮತಗಳನ್ನು ಪಡೆದು 29,641 ಮತಗಳ ಅಂತರದಿಂದ ಸಿದ್ದಲಿಂಗಸ್ವಾಮಿಯವರನ್ನು ಸೋಲಿಸಿದರು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಾದರು.

2018ರಲ್ಲಿ ಅವರು ತಮ್ಮ ಸ್ವಕ್ಷೇತ್ರ ವರುಣಾವನ್ನು ತಮ್ಮ ಮಗ ಡಾ. ಯತೀಂದ್ರ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟು ತಾವು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆ ಸ್ಪರ್ಧೆ ಮಾಡಿದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡರ ಎದುರು 36,042 ಮತಗಳ ಬೃಹತ್ ಅಂತರದಲ್ಲಿ ಸೋಲು ಕಂಡ ಅವರು, ಬಾದಾಮಿಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ಎದುರು 1,696 ಮತಗಳ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರು. 8ನೇ ಬಾರಿಗೆ ಶಾಸಕರೆನಿಸಿಕೊಂಡರು.

2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರವು ಆಡಳಿತ ಕೇಂದ್ರ ಬೆಂಗಳೂರಿನಿಂದ ದೂರವಾದ ಕಾರಣದಿಂದ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಆದರೆ ಬಾದಾಮಿಯ ಕೆಲವೊಂದಿಷ್ಟು ಜನ ಬೆಂಗಳೂರಿಗೆ ಬಂದು ಸಿದ್ದರಾಮಯ್ಯನವರು ನಮ್ಮೂರಿನಿಂದಲೇ ಸ್ಪರ್ಧಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಎಲೆಕ್ಷನ್ ಖರ್ಚಿಗೆ ದುಡ್ಡು ಕೊಡುತ್ತೇವೆ, ಹೆಲಿಕಾಪ್ಟರ್ ತೆಗೆದುಕೊಡುತ್ತೇವೆ ನಮ್ಮಲ್ಲಿಗೆ ಬನ್ನಿ ಎಂದು ಮನವಿ ಮಾಡಿದ್ದರು.

ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಬಾದಾಮಿ, ಸವದತ್ತಿ, ಕೊಪ್ಪಳ, ಚಾಮರಾಜಪೇಟೆ, ಹರಿಹರ, ಕೋಲಾರ, ವರುಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು. ಆದರೆ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು. ಕೋಲಾರಕ್ಕೆ ಪದೇ ಪದೇ ಭೇಟಿ ನೀಡಿ ಚುನಾವಣಾ ಪ್ರಚಾರ ಆರಂಭಿಸಿದ್ದರು. ವಾರ್ ರೂಂ ಸಹ ಆರಂಭಿಸಿದ್ದರು. ಅಲ್ಲಿನ ಹಾಲಿ ಜೆಡಿಎಸ್ ಶಾಸಕ ಕೆ.ಶ್ರೀನಿವಾಸ್‌ಗೌಡರು ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದ್ದರು. ಕಾಂಗ್ರೆಸ್‌ನ ಕೆ.ಎಚ್ ಮುನಿಯಪ್ಪ ಬಣ ಸಹ ಸಿದ್ದರಾಮಯ್ಯನವರ ಗೆಲುವಿಗೆ ಕೆಲಸ ಮಾಡುವುದಾಗಿ ಹೇಳಿದ್ದವು.

ವರ್ತೂರು ಪ್ರಕಾಶ್

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸುತ್ತೇವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಘೋಷಿಸಿದ್ದವು. ಬಿಜೆಪಿಯಿಂದ ಕುರುಬ ಸಮುದಾಯದ ಮಾಜಿ ಶಾಸಕ ವರ್ತೂರು ಪ್ರಕಾಶ್ ಅಭ್ಯರ್ಥಿಯಾಗುವ ನಿರೀಕ್ಷೆಯಿದ್ದು ಅವರು 50,000 ಮತಗಳ ಅಂತರದಿಂದ ಸಿದ್ದರಾಮಯ್ಯನವರನ್ನು ಸೋಲಿಸುತ್ತೇವೆ ಎಂದಿದ್ದರು. ಇನ್ನು ಜೆಡಿಎಸ್ ಪಕ್ಷವು ಒಕ್ಕಲಿಗ ಸಮುದಾಯದ ಸಿ.ಎಂ.ಆರ್ ಶ್ರೀನಾಥ್‌ರವರಿಗೆ ಟಿಕೆಟ್ ಘೋಷಿಸಿದ್ದು ಅವರು ಸಹ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ಸಿ.ಎಂ ಇಬ್ರಾಹಿಂರವರು ಕೋಲಾರಕ್ಕೆ ಪದೇ ಪದೇ ಭೇಟಿ ನೀಡಿ ಜೆಡಿಎಸ್ ಪರ ಮತ ಯಾಚಿಸಿದ್ದರು.

ಸಿ.ಎಂ ಆರ್ ಶ್ರೀನಾಥ್

ಕೋಲಾರ ಕ್ಷೇತ್ರದ ಅಂದಾಜು ಜಾತಿವಾರು ಮತಗಳು

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು: 2,35,000 ಮತಗಳಿದ್ದು ದಲಿತ ಮತ್ತು ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಪರಿಶಿಷ್ಟ ಜಾತಿ: 60,000

ಮುಸ್ಲಿಂ: 60,000 ಮತಗಳು

ಒಕ್ಕಲಿಗ: 40,000

ಕುರುಬ: 22,000

ಪರಿಶಿಷ್ಟ ಪಂಗಡ: 10,000

ಇತರೆ: 47,000

ಕೋಲಾರದ ಹಾಲಿ ಪರಿಸ್ಥಿತಿ

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೆ.ಶ್ರೀನಿವಾಸಗೌಡರವರು ಕಾಂಗ್ರೆಸ್‌ನ ಸೈಯದ್ ಜಮೀರ್ ಪಾಶ ಎದುರು 44,251 ಮತಗಳ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಕ್ಷೇತ್ರದ ಶಾಸಕರಾಗಿದ್ದಾರೆ. ಅದಕ್ಕೂ ಮುಂಚಿನ ಎರಡು ಚುನಾವಣೆಗಳಲ್ಲಿ ಅವರ ಎದುರು ಸ್ವತಂತ್ರ ಅಭ್ಯರ್ಥಿ ವರ್ತೂರು ಪ್ರಕಾಶ್‌ರವರು ಗೆಲುವು ಸಾಧಿಸಿದ್ದರು. ಸದ್ಯ ಹಾಲಿ ಶಾಸಕ ಕೆ.ಶ್ರೀನಿವಾಸಗೌಡರು ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟಿದ್ದಾರೆ. ‘ರಾಜ್ಯದ ಮೊದಲ ಸಿಎಂ ನೀಡಿದ್ದು ಕೋಲಾರ. ಈಗ ಎರಡನೇ ಸಿಎಂ ನೀಡುವ ಕಾಲ ಬಂದಿದೆ’ ಎನ್ನುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರು ಕೋಲಾರಕ್ಕೆ ಬಾರದಿದ್ದರೆ ತಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ಕೋಲಾರ ಕಾಂಗ್ರೆಸ್ ಸ್ಥಿತಿಗತಿ

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರೂ ಆಗಿದ್ದ ದಲಿತ ಸಮುದಾಯದ ಕೆ.ಎಚ್ ಮುನಿಯಪ್ಪನವರಿಗೆ ಇಡೀ ಜಿಲ್ಲೆಯ ಮೇಲೆ ತಮ್ಮದೇ ಹಿಡಿತ ಹೊಂದಿದ್ದರು. ಆದರೆ, ತಾಲೂಕುಗಳಲ್ಲಿ ಕಾಂಗ್ರೆಸ್ ಎಂಎಲ್‌ಎಗಳು ಅಥವಾ ಎಂಎಲ್‌ಎ ಅಭ್ಯರ್ಥಿಗಳಿಂದ ಲೋಕಸಭಾ ಚುನಾವಣೆಗಳಿಗೆ ಬೆಂಬಲ ಪಡೆದು, ನಂತರದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರ ವಿರುದ್ಧವೇ ಕೆಲಸ ಮಾಡುತ್ತಾರೆ ಎಂಬ ಆರೋಪವು ಅವರ ಮೇಲಿದೆ. ಹಾಗಾಗಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಬಣ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಸಕ್ರಿಯವಾಗಿದೆ. ಮುನಿಯಪ್ಪನವರ ಮೇಲೆ ಕೋಪಗೊಂಡಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು 2019ರ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿದ ಪರಿಣಾಮ ಮುನಿಯಪ್ಪನವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋತರು. ಪರಿಣಾಮ ಬಿಜೆಪಿಯ ಮುನಿಸ್ವಾಮಿ ಗೆದ್ದಿದ್ದಲ್ಲದೇ ಕೋಲಾರದಲ್ಲಿ ಬಿಜೆಪಿಯನ್ನು ನೆಲೆಯೂರಿಸಲು ಕೆಲಸ ಮಾಡುತ್ತಿದ್ದಾರೆ. ಆ ಸೋಲಿನ ನೋವಿನಿಂದ ಕೆ.ಎಚ್ ಮುನಿಯಪ್ಪನವರು ಸಹಜವಾಗಿ ಬಹಿರಂಗವಾಗಿಯೇ ರಮೇಶ್ ಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಸೇರಿದಂತೆ ಹಲವರು ಅವರೊಂದಿಗೆ ಮಾತನಾಡಿ ಸಮಾಧಾನ ಮಾಡಿದ್ದಾರೆ. ಹಾಗಾಗಿ ಇತ್ತೀಚೆಗೆ ಕೆ.ಎಚ್ ಮುನಿಯಪ್ಪನವರು ಸಿದ್ದರಾಮಯ್ಯನವರ ಪರ ಕೆಲಸ ಮಾಡುತ್ತೇನೆ ಎಂದಿದ್ದರು.

ಕೆ.ಎಚ್ ಮುನಿಯಪ್ಪ

ಸಿದ್ದರಾಮಯ್ಯನವರ ಗೆಲುವು ಸುಲಭವೇ?

ಹೀಗಿರುವ ಸ್ಥಿತಿಯಲ್ಲಿ ಕೋಲಾರದಿಂದ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ ಗೆಲುವು ಸುಲಭ ಎನ್ನುವ ಅಭಿಪ್ರಾಯವಿದೆ. ರಾಜ್ಯದ ಮಾಸ್ ಲೀಡರ್ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ತಮ್ಮ ಕ್ಷೇತ್ರದ ಶಾಸಕರಾಗುವುದರಿಂದ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗುತ್ತವೆ ಎಂಬುದು ಹಲವರ ಬಯಕೆಯಾಗಿದೆ. ಅಹಿಂದ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅದು ಸಿದ್ದರಾಮಯ್ಯನವರಿಗೆ ಅನುಕೂಲವಾಗಲಿದೆ. ಅವರು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯನ್ನು ಕ್ಷೇತ್ರದ ಬಹುತೇಕರು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಬಾರಿ ಕಾಂಗ್ರೆಸ್ ಘೋಷಿಸಿರುವ 10 ಕೆಜಿ ಅಕ್ಕಿ, ಮನೆಯೊಡತಿಗೆ ತಿಂಗಳಿಗೆ 2,000 ರೂ ಹಣ ಮತ್ತು 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಗ್ಯಾರಂಟಿಗಳು ಜನರನ್ನು ಆಕರ್ಷಿಸುವ ಸಾಧ್ಯತೆಯಿದೆ.

ಸಿದ್ದರಾಮಯ್ಯನವರಿಗೆ ತೊಡಕಾಗಿರುವ ಅಂಶಗಳು

ಒಳಮೀಸಲಾತಿ ಜಾರಿಗೊಳಿಸದಿರುವುದು ಮತ್ತು ಆ ಕುರಿತು ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದು ಸಿದ್ದರಾಮಯ್ಯನವರಿಗೆ ಮುಳುವಾಗುವ ಸಾಧ್ಯತೆಯಿದೆ. ಕೋಲಾರದಲ್ಲಿ ಮಾದಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಒಳಮೀಸಲಾತಿ ವಿಚಾರ ಮುಂದಕ್ಕೆ ಹೋಗದೆ ಅವರು ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ಹಾಕುವ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನು ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತಂದಿರುವವರು ಕೆ.ಆರ್ ರಮೇಶ್ ಕುಮಾರ್‌ ಬಣದವರೆ ಆಗಿದ್ದಾರೆ. ಆದರೆ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್ ಮುನಿಯಪ್ಪನವರನ್ನು ಸೋಲಿಸಲು ಕರೆ ನೀಡಿದ್ದು, ಬಿಜೆಪಿ ಗೆದ್ದು ಜಿಲ್ಲೆಯಲ್ಲಿ ಬೇರು ಬಿಡಲು ಕಾರಣವಾಗಿದೆ. ಈಗ ಅದೇ ಕಾಂಗ್ರೆಸ್‌ಗೆ ತಿರುಗುಬಾಣವಾಗಿದೆ. ಇನ್ನು ಕೆ.ಎಚ್ ಮುನಿಯಪ್ಪನವರು ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲಾಗದು.

ಕೋಲಾರದ ಅಂಜುಮಾನ್ ಇಸ್ಲಾಮಿಯ ಅಧ್ಯಕ್ಷರಾಗಿದ್ದ ಜಮೀರ್‌ರವರು ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುತ್ತಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದು ಮುಸ್ಲಿಮರಿಗೆ ಇರಿಸುಮುರಿಸು ತಂದಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಮೀರ್‌ರವರನ್ನು ಜೆಡಿಎಸ್ ಪಕ್ಷ ಸೆಳೆದುಕೊಂಡಿದೆ. ಅಂಜುಮಾನ್ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳು ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಒಂದಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಹೋಗುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ?

ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ. ಬದಲಾಗಿ ಅವರ ಸ್ವಕ್ಷೇತ್ರ ವರುಣಾದಲ್ಲಿಯೇ ಸ್ಪರ್ಧಿಸಲಿ ಎಂಬ ಸಲಹೆ ನೀಡಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಸಹ ಇಂದು ಕೋಲಾರ ಜಿಲ್ಲಾ ಭೇಟಿಯನ್ನು ರದ್ದುಗೊಳಿಸಿದ್ದಾರೆ.

ಒಟ್ಟಾರೆಯಾಗಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರ ಒಂದರಲ್ಲಿ ಸ್ಪರ್ಧಿಸಿದರೆ ಇಂದಿಗೂ ಅವರಿಗೆ ಗೆಲುವು ಎಂಬ ಪರಿಸ್ಥಿತಿ ಇದೆ. ಆದರೆ ಅವರು ಕೋಲಾರ ಮತ್ತು ವರುಣಾ ಎರಡೂ ಕಡೆ ಸ್ಪರ್ಧಿಸಿದರೆ ಗೆದ್ದ ನಂತರ ಕೋಲಾರ ಕಡೆಗಣಿಸಬಹುದು ಎಂದು ಜನ ಭಾವಿಸುವ ಅಪಾಯವಿದೆ. ಇನ್ನು ವರುಣಾದಲ್ಲಿ ಮಾತ್ರ ಸ್ಪರ್ಧಿಸಿದರೆ ಅವರಿಗೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ; ಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ: ಅಣ್ಣಾಮಲೈ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...