ಸೋನಿಯಾ ಗಾಂಧಿ ಜಗತ್ತಿನ 4ನೇ ಶ್ರೀಮಂತ ಮಹಿಳೆಯೇ? ಸತ್ಯ ಯಾವುದು??

ಈ ವಾರದ ಟಾಪ್‌ 5 ಫೇಕ್‌ನ್ಯೂಸ್‌ಗಳು ಮತ್ತು ಅಸಲಿ ಸತ್ಯ ದಾಖಲೆಗಳೊಂದಿಗೆ ಇಲ್ಲಿದೆ.

0
11

1 ಸೋನಿಯಾ ಗಾಂಧಿ ಜಗತ್ತಿನ 4ನೇ ಶ್ರೀಮಂತ ಮಹಿಳೆಯೇ?
ಈ ರೀತಿಯ ಸುದ್ದಿ ಕಳೆದ ಒಂದು ತಿಂಗಳಿನಿಂದ ಎಲ್ಲಾ ಕಡೆ ಹರಿದಾಡುತ್ತಿದೆ. ಪೋಸ್ಟ್ ಕಾರ್ಡ್ ಕನ್ನಡ ಎನ್ನುವ ಕನ್ನಡದ ವೆಬ್‌ಸೈಟ್ ಅಂಬಾನಿ ಸಹೋದರರು ಶ್ರೀಮಂತರಾದರೂ ಸಹ (ಮೋದಿ ಸಹಾಯದಿಂದ) ಲಕ್ಷಾಂತರ ಭಾರತೀಯರಿಗೆ ಉದ್ಯೋಗ ನೀಡಿದ್ದಾರೆ. ವಿಶ್ವದ ನಾಲ್ಕನೇ ಅತ್ಯಂತ ಶ್ರೀಮಂತ ಮಹಿಳೆ ಸೋನಿಯಾ ಗಾಂಧಿ ಎಷ್ಟು ಭಾರತೀಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ? ಎಂದು ಆರೋಪಿಸಿದೆ.

ಜೊತೆಗೆ ಸಪೋರ್ಟ್ ಮೋದಿಜಿ ಅಂಡ್ ಬಿಜೆಪಿ ಎಂಬ ಇಂಗ್ಲಿಷ್ ಪೇಜ್‌ನಲ್ಲಿಯೂ ಇದೇ ಸುದ್ದಿ ಹರಿದಾಡಿದೆ. ಆಜ್ ತಕ್, ಒನ್‌ಇಂಡಿಯಾ, ದೈನಿಕ್ ಭಾಸ್ಕರ್ ಮತ್ತು ಸ್ವರಾಜ್ ನ್ಯೂಸ್‌ನಂತಹ ಚಾನೆಲ್‌ಗಳು ‘ವಿಶ್ವದ ನಾಲ್ಕನೇ ಶ್ರೀಮಂತ ಮಹಿಳಾ ರಾಜಕಾರಣಿ’ ಎಂದು ಸುದ್ದಿ ಮಾಡಿವೆ.

ಸತ್ಯ: ಸೋನಿಯಾ ಗಾಂಧಿ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳೆ ಎಂಬುದು ಅಪ್ಪಟ ಸುಳ್ಳು. ಈ ಬಾರಿಯ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಿದ್ದಾಗ ತಮ್ಮ ಬಳಿ 11.82 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಗೂಗಲ್‌ನಲ್ಲಿ ಪ್ರಪಂಚದ ಶ್ರೀಮಂತ ಮಹಿಳೆಯರ ಪಟ್ಟಿ ಪರಿಶೀಲಿಸಿದರೆ ಗೊತ್ತಾಗಿಬಿಡುತ್ತದೆ ಅವರು ಆ ಪಟ್ಟಿಯಲ್ಲಿಲ್ಲ ಎಂದು. ಹೋಗಲಿ ‘ವಿಶ್ವದ ನಾಲ್ಕನೇ ಶ್ರೀಮಂತ ಮಹಿಳಾ ರಾಜಕಾರಣಿ’ ಆಗಿದ್ದಾರ ಎಂದು ಚೆಕ್ ಮಾಡಿದರೆ ಅದು ಸಹ ಅಪ್ಪಟ ಸುಳ್ಳು ಸುದ್ದಿ. ಈ ಸುಳ್ಳನ್ನು ಪ್ರಕಟಿಸಿದ ಅಮೆರಿಕಾದ ಬಿಸಿನೆಸ್ ಇನ್‌ಸೈಡರ್ ಪತ್ರಿಕೆಯು ಸೋರ್ಸ್ ಎಂದು ‘World’s Luxury Guide’ ಅನ್ನು ಹೆಸರಿಸಿದೆ. ಅದರ ಮೂಲ ಹುಡುಕಿದರೆ ಆ ವೆಬ್‌ಸೈಟ್ ನಾಟ್ ಫಂಡ್ ಎಂದು ಬರುತ್ತಿದೆ.

ಸೋನಿಯಾ ಗಾಂಧಿಯವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಅವರ ರಾಜಕೀಯ ವಿರೋಧಿಗಳು ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂಬುದು ಮಾತ್ರ ಸತ್ಯವಾಗಿದೆ.

2 ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಭಗವದ್ಗೀತೆಯ ಅರೇಬಿಕ್ ಅವತರಣಿಕೆ ಬಿಡುಗಡೆ
“ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾನೇ ಭಗವದ್ಗೀತೆಯ ಅರೇಬಿಕ್ ಅವತರಣಿಕೆ ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಭಾರತ್ ಮಾತಾಕೀ ಜೈ ಎಂದರೆ ಸಾಕು ಇಸ್ಲಾಂ ಅಪಾಯದಲ್ಲಿದೆ ಎಂಬು ಬೊಬ್ಬಿರಿಯುತ್ತಾರೆ” ಎಂಬ ಪೋಸ್ಟ್ ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಹರಿದಾಡಿದೆ.

ಸತ್ಯ ಏನೆಂದರೆ ಸೌದಿ ಅರೇಬಿಯಾ ಈ ಕೆಲಸ ಮಾಡಿಲ್ಲ. ಬದಲಿಗೆ ಇಸ್ಕಾನ್ ಭಕ್ತರಾದ ರಾವನರಿ ಪ್ರಭು ಎಂಬುವವರು ಭಗವದ್ಗೀತೆಯನ್ನು ಅರೇಬಿಕ್ ಭಾಷೆಗೆ ಅನುವಾದ ಮಾಡಿದ್ದಾರೆ. ಅಷ್ಟೇ ಅಲ್ಲದೇ 11ನೇ ಶತಮಾನದಲ್ಲಿಯೇ ಅಲ್ ಬಿರೂನಿ ಎಂಬುವವರು ಅನುವಾದ ಮಾಡಲು ಯತ್ನಿಸಿದ್ದರು ಎಂಬುದಕ್ಕೆ ದಾಖಲೆಗಳಿವೆ.

3 ಕೇವಲ ಜಾಹೀರಾತಿಗಾಗಿ 1500 ಕೋಟಿ ಖರ್ಚು ಮಾಡಿದ ದೆಹಲಿ ಸರ್ಕಾರ?
ಹೀಗೆಂದು ಹೇಳಿದವರು ಕೇಂದ್ರ ಪರಿಸರ ಮತ್ತು ಹವಾಮಾನ ವೈಪರೀತ್ಯ ಸಚಿವ ಪ್ರಕಾಶ್ ಜಾವಡೆಕರ್. ಅದು ಕೂಡ ಬಹಿರಂಗ ಪತ್ರಿಕಾಗೋಷ್ಟಿಯಲ್ಲಿ. “1500 ಕೋಟಿ ಹಣವನ್ನು ಜಾಹೀರಾತಿಗಾಗಿ ಸುರಿಯುವುದಕ್ಕಿಂತ ಅದೇ ಹಣವನ್ನು ಪಂಜಾಬ್ ಮತ್ತು ಹರಿಯಾಣ ರೈತರಿಗೆ ನೀಡಬಹುದಾಗಿತ್ತು” ಎಂದು ಟೀಕಿಸಿದ್ದರು.


ಆದರೆ ಸತ್ಯ ಏನೆಂದರೆ ಒಂದು ವರ್ಷಕ್ಕೆ ಮಾತ್ರವಲ್ಲ ಇಡೀ ಐದು ವರ್ಷದ ಆಡಳಿತದಲ್ಲಿ ದೆಹಲಿಯ ಆಮ್‌ ಆದ್ಮಿ ಸರ್ಕಾರ 1500 ಕೋಟಿ ಹಣವನ್ನು ಜಾಹೀರಾತಿಗೆ ಖರ್ಚು ಮಾಡಿಲ್ಲ. ಅವರು ಮಾಡಿದ್ದು ಜಾವಡೆಕರ್ ಹೇಳಿದ್ದರಲ್ಲಿ ಅರ್ಧಕ್ಕಿಂತಲೂ ಕಡಿಮೆ. ಅಂದರೆ ಐದು ವರ್ಷದಲ್ಲಿ 692ಕೋಟಿ ರೂ ಮಾತ್ರ ಖರ್ಚು ಮಾಡಿದ್ದಾರೆ. ಆಮ್ ಆದ್ಮಿ ಸರ್ಕಾರದ ಮೇಲನ ದ್ವೇಷಕ್ಕಾಗಿ ಜಾವಡೆಕರ್ ಸುಳ್ಳು ಹೇಳಿದ್ದಾರೆ.

4 ಅಯೋಧ್ಯ ತೀರ್ಪು ಕುರಿತ ಮೋದಿಯನ್ನು ಬೈಯ್ದಿದ್ದಕ್ಕಾಗಿ ಸಭೆಯಿಂದ ಹೊರನಡೆದ ಒವೈಸಿ ಬೆಂಬಲಿಗರು!
ಅಯೋಧ್ಯ ತೀರ್ಪು ನ್ಯಾಯಯುತವಾಗಿಲ್ಲ, ಮೋದಿ ರಾಜಕೀಯ ಮಾಡಿದ್ದಾರೆ ಎಂದು ಒವೈಸಿ ಮೋದಿಯನ್ನು ಹಿಗ್ಗಾ ಮಗ್ಗಾ ಟೀಕಿಸಿದ್ದಕ್ಕೆ ಬೇಸರಗೊಂಡ ಆತನ ಬೆಂಬಲಿಗರು ಕಾರ್ಯಕ್ರಮ ಬಿಟ್ಟು ಹೊರಟು ಹೋದರು ಎಂಬ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ಇದೆಲ್ಲಾ ಅಪ್ಪಟ ಸುಳ್ಳು. ಆ ವಿಡಿಯೋ 2018ನೇ ಇಸವಿಯ ಹಳೆಯದು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಒವೈಸಿ ಮೋದಿಯವರನ್ನು ತೆಗಳಿದರು. ಆಗ ಸಭಿಕರಲ್ಲಿ ಒಬ್ಬ ಒವೈಸಿ ಕಡೆ ಚಪ್ಪಲಿ ತೂರಿದ ಆಗ ಒವೈಸಿ ಬೆಂಬಲಿಗರು ವೇದಿಕೆಯ ಕಡೆ ಧಾವಿಸಿದರು. ಪರಿಸ್ಥಿತಿ ಗಂಭೀರವಾಗಿತ್ತು. ಆಗ ಒವೈಸಿಯವರು ಬೆಂಬಲಿಗರ ಮನವೊಲಿಸಿ ತಮ್ಮ ಕುರ್ಚಿಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಆಗ ಬೆಂಬಲಿಗರು ವೇದಿಕೆಯ ಕಡೆಯಿಂದ ತಮ್ಮ ಕುರ್ಚಿಗಳು ಇದ್ದಲ್ಲಿಗೆ ತೆರಳುತ್ತಿದ್ದ ವಿಡಿಯೋವನ್ನು ಕತ್ತರಿಸಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

5 ಸಿಎಂ ಕನಸು ಕಂಡಿದ್ದ ಆದಿತ್ಯ ಠಾಕ್ರೆಯ ಶಾಸಕ ಸ್ಥಾನವೇ ಢಮಾರ್?
ಮಹಾರಾಷ್ಟ್ರ ಸಿಎಂ ಆಗುವ ಕನಸು ಕಂಡಿದ್ದ ಆದಿತ್ಯ ಠಾಕ್ರೆಯ ಶಾಸಕ ಸ್ಥಾನವೇ ಢಮಾರ್ ಆಗಿದೆ. ಮಹಾ ನ್ಯಾಯವಾದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಂದು ಕರುನಾಡ-ವಾಣಿ ಎಂಬ ಕನ್ನಡದ ಫೇಸ್‌ಬುಕ್ ಪಟುದಲ್ಲಿ ಪ್ರಕಟಿಸಿಲಾಗಿದೆ. ಹೀಗಾಗಲು ಕಾರಣ ಆದಿತ್ಯ ಠಾಕ್ರೆ ತನ್ನ ಆಸ್ತಿ ಕುರಿತು ಚುನಾವಣಾ ಅಫಿಡವಿಟ್‌ನಲ್ಲಿ ತನ್ನ ಕಾರಿನ ಬೆಲೆ 6 ಲಕ್ಷ ಎಂದು ನಮೂದಿಸಿದ್ದಾರೆ. ಆದರೆ ನಿಜ ಎಂದರೆ ಆ ಕಾರಿನ ಒಂದು ಟೈರಿನ ಬೆಲೆಯೇ 6 ಲಕ್ಷ. ಅದನ್ನು ನ್ಯಾಯವಾದಿ ಕಂಡುಹಿಡಿದಿದ್ದಾರೆ ಹಾಗಾಗಿ ಅವರ ಶಾಸಕ ಸ್ಥಾನ ಢಮಾರ್ ಆಗಿದೆ ಎಂಬ ಸುಳ್ಳು ಸುದ್ದಿಯನ್ನು ಈ ಪುಟ ಹರಡಿದೆ.

ಇದೆಲ್ಲವೂ ಸಂಪೂರ್ಣ ಸುಳ್ಳಾಗಿದೆ. ಈ ಫೇಸ್ ಬುಕ್ ಪುಟ ಬಿಜೆಪಿಯನ್ನು ಬೆಂಬಲಿತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿಗೆ ಸರ್ಕಾರ ರಚಿಸಲು ಬೆಂಬಲ ಕೊಟ್ಟಿಲ್ಲ. ಹಾಗಾಗಿ ಶಿವಸೇನೆಯ ವಿರುದ್ಧ ಈ ಸುಳ್ಳನ್ನು ಹಬ್ಬಿಸಲಾಗಿದೆ. ಜನ ಎಷ್ಟು ದಡ್ಡರು ಎಂದರೆ ಈ ಸುಳ್ಳು ಸುದ್ದಿಯನ್ನು 10 ಸಾವಿರ ಜನ ಲೈಕ್ ಮಾಡಿದ್ದು 852 ಜನ ಷೇರ್ ಮಾಡಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here