ಭಿನ್ನಮತ ಎನ್ನುವುದು ಬೇರೆಬೇರೆ ಮಟ್ಟದಲ್ಲಿ, ನಮ್ಮ ಪರಿತ್ಯಾಗ ಪರಂಪರೆ ಹಾಗೂ ಕೆಲವು ಸಂತರ ಬೋಧನೆಯ ಕೇಂದ್ರದಲ್ಲಿ ಸ್ಥಾನ ಪಡೆದಿತ್ತು. ಹಾಗಾಗಿ, ಗಾಂಧಿಯ ಸತ್ಯಾಗ್ರಹ ಪಡೆದ ಜನಬೆಂಬಲವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ಪರಂಪರೆಯಿಂದ ಏನನ್ನಾದರೂ ಪಡೆದುಕೊಂಡಿತ್ತೇ ಎಂಬ ಪ್ರಶ್ನೆಯನ್ನು ನಾವು ಕೇಳಬಹುದಲ್ಲವೇ? ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ನನ್ನ ಆಸಕ್ತಿ ಇರುವುದು ಗಾಂಧಿ ಮಾದರಿಯ ಸತ್ಯಾಗ್ರಹ ಪರಿಕಲ್ಪನೆಯ ಹುಟ್ಟಿನ ಮೂಲ ಯಾವುದು ಎಂಬುದರಲ್ಲಲ್ಲ. ಬದಲಿಗೆ, ಭಾರತೀಯ ಜನಸಾಮಾನ್ಯರಿಂದ ಅದು ಹೇಗೆ ಅಷ್ಟೆಲ್ಲ ಒಳ್ಳೆಯ ಸ್ಪಂದನೆ ಪಡೆಯಿತು ಎಂಬುದರಲ್ಲಿ. ನೋಡಿ, ಈ ಪರಿತ್ಯಾಗದ ತಾತ್ವಿಕತೆಯಲ್ಲಿ ಸಾಮಾಜಿಕ ನೈತಿಕತೆಯ ಕುರಿತು ಕಾಳಜಿಯಿದೆ.

ಸಂತರ ಕೆಲವು ವಿಚಾರಗಳ ಹಿಂದೆಯೂ ಸಾಮಾಜಿಕ ನ್ಯಾಯದ ಹುಡುಕಾಟವಿದೆ. ಇವೆರಡರಲ್ಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಭಿನ್ನಮತದ ಎಳೆಯು ಸತ್ಯಾಗ್ರಹದ ಕುರಿತು ಜನಸ್ಪಂದನೆಯನ್ನು ಪ್ರೇರೇಪಿಸಿದ್ದಿರಬಹುದು ಎನ್ನುವುದು ನನ್ನ ವಾದದ ಕೇಂದ್ರವಾಗಿದೆ. ಶ್ರಮಣರ ಪರಿತ್ಯಾಗದ ಸಾರ ಹಾಗೂ ನಂತರದಲ್ಲಿ ಭಕ್ತಿ ಮತ್ತು ಸೂಫಿ ಧಾರೆಯ ವ್ಯಕ್ತಿಗತ ಸ್ವ-ವ್ಯಾಖ್ಯಾನಕ್ಕೂ (ಅಂದರೆ, ತಾನು ಯಾರೆಂಬುದನ್ನು ಸ್ಥಾಪಿತ ಧಾರ್ಮಿಕ ಚೌಕಟ್ಟನ್ನು ಮೀರಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ, ಸ್ವತಂತ್ರವಾಗಿ ವ್ಯಾಖ್ಯಾನಿಸಿಕೊಳ್ಳುವುದಕ್ಕೂ – ಅನುವಾದಕ), ಗಾಂಧಿಯ ಸತ್ಯಾಗ್ರಹಕ್ಕೆ ಭಾರತದ ಜನರು ತೋರಿದ ಸ್ಪಂದನೆಗೂ ಏನಾದರೂ ನಂಟಿದೆಯೇ?

ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ, ಅಂದು ಯುನೈಟೆಡ್ ಪ್ರಾವಿನ್ಸ್ (ಸಂಯುಕ್ತ ಸಂಸ್ಥಾನ) ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಹಲವು ರೈತ ಚಳವಳಿಗಳು ನಡೆದಿದ್ದವು. ಇವುಗಳಲ್ಲಿ ಭಾಗವಹಿಸಿದ್ದ ಮತ್ತು ಮುಂದಾಳುತನ ವಹಿಸಿದ್ದ ಪ್ರಮುಖರಲ್ಲಿ ಕೆಲವರು ಸಹಜಾನಂದ ಸರಸ್ವತಿ ಹಾಗೂ ಅವಧ್‌ನ ಬಾಬಾ ರಾಮಚಂದರ್‌ನಂತೆ ಸಾಧುಗಳೂ, ಸನ್ಯಾಸಿಗಳೂ ಆಗಿದ್ದರು. ಅವರೆಲ್ಲರೂ ಬೇರೆಬೇರೆ ಹಿನ್ನೆಲೆಗಳಿಂದ ಬಂದವರು. ಆ ಹಿನ್ನೆಲೆ ಹೇಗೇ ಇರಲಿ, ಅವರೆಲ್ಲರೂ ಪರಿತ್ಯಾಗಿಗಳೆಂದರೆ ಭಿನ್ನಮತವನ್ನು ತೋರುವ ವ್ಯಕ್ತಿಗಳೆಂಬ ಗ್ರಹಿಕೆಯನ್ನು ಒಂದಿಷ್ಟಾದರೂ, ಕೆಲವೊಮ್ಮೆ ತುಸು ಹೆಚ್ಚಾಗೇ ಹೆಂದಿದ್ದರು. ಇನ್ನು, ಆ ರೈತ ಚಳವಳಿಗಳು ಕೇವಲ ಭಿನ್ನಮತದ ಅಭಿವ್ಯಕ್ತಿಯಷ್ಟೇ ಆಗಿರಲಿಲ್ಲ. ಏಕೆಂದರೆ ಅವು, ಭೂಮಾಲಿಕರು ಹಾಗೂ ಆಡಳಿತದ ತೆರಿಗೆ ಮತ್ತು ಬೇಡಿಕೆಗಳ ವಿರುದ್ಧ ಪ್ರತಿಭಟಿಸಿದ್ದವು. ನಾನು ಮುಂದೆ ಉಲ್ಲೇಖಿಸಲಿರುವ ಚರಿತ್ರಕಾರರು ಈ ಚಳವಳಿಗಳ ನಿರೂಪಣೆ ಹಾಗೂ ಚರ್ಚೆಯನ್ನು ಮತ್ತೆ ಮತ್ತೆ ಮಾಡುತ್ತಲೇ ಬಂದಿದ್ದಾರೆ.

ಒಂದು ನಿದರ್ಶನವನ್ನು ನೋಡೋಣ. 1921ರಲ್ಲಿ ಉತ್ತರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ರೈತ ಚಳವಳಿ ನಡೆಯಿತು. ಗಾಂಧಿಯ ನುಡಿ ಮತ್ತು ನಡೆಯ ವಿಚಾರವು ಅಲ್ಲಿನ ಬಹುತೇಕರ ಸಂಭಾಷಣೆಗಳ ಕೇಂದ್ರವಾಗಿತ್ತು. ಇನ್ನು, ಅಂದಿನ ಬ್ರಿಟಿಷ್ ಆಡಳಿತ ದಾಖಲಿಸಿ, ವರದಿ ಮಾಡಿದ ಸುದ್ದಿಗಳು ಗಾಂಧಿಯನ್ನು ದೇಶದ ಜನರು ಹೇಗೆ ನೋಡುತ್ತಿದ್ದರೆಂಬುದಕ್ಕೆ ಸಾಕ್ಷಿಗಳಾಗಿವೆ. ಎಲ್ಲರ ಒಳಿತಿಗಾಗಿ ಗಾಂಧಿ ಸನ್ಯಾಸ ವ್ರತವನ್ನು ಕೈಗೊಂಡಿದ್ದರಂತೆ. ಭಕ್ತಿ ಪರಂಪರೆಯಲ್ಲಿ ಇವರನ್ನು ’ಗುರು ಗಾಂಧಿ’ ಎಂದೂ ಕರೆಯಲಾಗುತ್ತದೆ. ಇವರು ನಡೆಸಿದ್ದಾರೆಂದು ನಂಬಲಾದ ಕೆಲವು ಚಟುವಟಿಕೆಗಳು ಸಾಧುಗಳ ಚಟುವಟಿಕೆಗಳಂತೆಯೇ ಇವೆ. ಉದಾಹರಣೆಗೆ, ಗಾಂಧಿ ಹಲವು ಪವಾಡಗಳನ್ನು ಮಾಡಿದ್ದಾರೆಂದು ಕೆಲವರು ನಂಬುತ್ತಾರೆ. ಇದು ’ಪವಿತ್ರ ಪುರುಷರ’ ಕಾರ್ಯವ್ಯಾಪ್ತಿಗೆ ಬರುವಂಥದ್ದು. ಇಲ್ಲೊಂದು ಕುತೂಹಲಕಾರಿ ವಿಚಾರವನ್ನು ಗಮನಿಸಬೇಕು.

ಈ ಪವಾಡ ಪುರುಷನನ್ನು ಶ್ರೇಣೀಕರಣದಲ್ಲಿ ಮೇಲಿನದ್ದು ಎನಿಸಿಕೊಂಡಿದ್ದ ಕುಲ ಅಥವಾ ವರ್ಗದವನೆಂದೋ, ಬ್ರಾಹ್ಮಣ ಸಮುದಾಯದ ಸದಸ್ಯನೆಂದೋ ಜನರು ಕಂಡಿರಲಿಲ್ಲ (ರೈತ ನಾಯಕರಲ್ಲಿ ಕೆಲವರು ಇಂಥ ಮೂಲಗಳಿಂದ ಬಂದಿದ್ದರು). ಬದಲಿಗೆ, ಈತನನ್ನು ಮೊದಲು ’ನಮ್ಮವರಲ್ಲೊಬ್ಬ’ ಎಂದು ಪರಿಗಣಿಸಿದರು. ನಂತರ, ’ಮಹಾತ್ಮ’ ಎಂದು ಗುರುತಿಸಿ, ಗೌರವಿಸಿದರು. ಬ್ರಾಹ್ಮಣರು ವಿಧಿವತ್ತಾಗಿ ಆಚರಣೆಗಳನ್ನು ಮಾಡುತ್ತಿದ್ದರೇ ಹೆರತು ಪವಾಡಗಳನ್ನಲ್ಲ. ಆದರೆ, ಗಾಂಧಿಯವರಲ್ಲಿತ್ತು ಎನ್ನಲಾದ ಪವಾಡಸದೃಶ ಶಕ್ತಿಯು ಪರಿತ್ಯಾಗಿಗಳು ಹಾಗೂ ತಪಸ್ವಿಗಳಿಗೆ ಸಂಬಂಧಿಸಿದ್ದಾಗಿದೆ. ಇನ್ನು, ಯಾವ ಕನವರಿಕೆ, ಭ್ರಮೆಗಳನ್ನು ಆಧರಿಸಿ ಪವಾಡವೆಂಬ ವಿದ್ಯಮಾನ ಬೆಳೆದಿದೆಯೋ ಅವು ಎಲ್ಲ ಧರ್ಮಗಳಲ್ಲೂ ಸಾಮಾನ್ಯ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಇದಲ್ಲದೆ, ಹೆಚ್ಚು ವ್ಯಾವಹಾರಿಕವಾದ ಕಾರಣವೊಂದಿತ್ತು. ರೈತರು ಕಟ್ಟಬೇಕಿದ್ದ ಬಾಡಿಗೆ ಹಾಗೂ ತೆರಿಗೆಯ ಪ್ರಮಾಣವನ್ನು ತಗ್ಗಿಸುವಂತೆ ಗಾಂಧಿ ಬ್ರಿಟಿಷ್ ಸರಕಾರವನ್ನು ಒತ್ತಾಯಿಸುತ್ತಾರೆಂಬ ನಂಬಿಕೆಯೂ ಜನರಲ್ಲಿ ಬಲವಾಗಿತ್ತು.

ಗಾಂಧಿ ಯಾವ ಲೇಖಕರನ್ನು ಓದಿದ್ದರೋ, ಯಾರ ಕುರಿತು ಬರೆದಿದ್ದರೋ – ನಿರ್ದಿಷ್ಟವಾಗಿ ಟಾಲ್ಸ್‌ಟಾಯ್, ಥೋರೋ ಹಾಗೂ ರಸ್ಕಿನ್ – ಅಂಥವರ ವಿಚಾರಗಳಿಂದ ಸತ್ಯಾಗ್ರಹದ ತಮ್ಮ ಪರಿಕಲ್ಪನೆಯನ್ನು ರೂಪಿಸಿಕೊಂಡಿದ್ದರು. ಇದರ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಇವರು ಜೈನ ಧರ್ಮದ ಕುರಿತು ರಾಯ್‌ಚಂದ್‌ಭಾಯಿ ಅವರೊಂದಿಗೂ, ತನ್ನ ತಾಯಿ ಹಾಗೂ ಜೈನ ಪಕ್ಷಪಾತಿಯಾಗಿದ್ದ ಗುಜರಾತಿನ ಇತರರೊಂದಿಗೂ ಸುದೀರ್ಘ ಸಂವಾದ ನಡೆಸುತ್ತಿದ್ದರು. ಭಕ್ತಿ ಸಂತರ, ವಿಶೇಷವಾಗಿ 15ನೇ ಶತಮಾನದ ಸಂತ ನರ್ಸಿ ಮೆಹ್ತಾರ ಗುಜರಾತಿ ಕೃತಿಗಳ ಓದು ಗಾಂಧಿಗಿತ್ತು. ಸತ್ಯಾಗ್ರಹವೆಂಬ ಈ ನಿರ್ದಿಷ್ಟ ಸ್ವರೂಪದ ಹೆರಾಟವು ಹೇಗೆ ಜನರೊಂದಿಗೆ ಬಹಳ ಚೆನ್ನಾಗಿ ಬೆಸೆದುಕೊಂಡಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾನಿಲ್ಲಿ ಪ್ರಯತ್ನಿಸುತ್ತಿದ್ದೇನೆ.

PC : Histroy.com (ಜನರಲ್ ಲುಡ್ಡ್)

ಹಿಂದೂಯಿಸಂಗೆ ಸಂಬಂಧಿಸಿದ ಪಠ್ಯಗಳನ್ನು ಗಾಂಧಿ ಓದಿದ್ದ ರೀತಿಯೇ ಭಿನ್ನವಾಗಿದೆ. ಅವರ ಭಗವದ್ಗೀತೆಯ ಓದಾಗಲೀ, ಬ್ರಹ್ಮಚರ್ಯದ ಸೆಳೆತವಾಗಲೀ ಇದನ್ನೇ ಸೂಚಿಸುತ್ತದೆ. ಪರಂಪರೆಯೆಂದು ಗ್ರಹಿಸಬಹುದಾದದ್ದೊಂದರ ಗರ್ಭದಿಂದಲೇ ಹಬ್ಬಿದ ಚಿಂತನೆಗಳ ಪರಿಣಾಮವೆಂಬಂತೆ ಗಾಂಧಿ ಒಂದು ವಿಶಿಷ್ಟ ಧಾರ್ಮಿಕ-ಜೀವನ ವಿಧಾನವನ್ನು ಅರಸಿದ್ದರು. ಈ ಹುಡುಕಾಟವನ್ನು, ನಮ್ಮ ಚರಿತ್ರೆಯುದ್ದಕ್ಕೂ ಕಂಡುಬರುವ ಸಂಸ್ಕೃತಿಯ ಪರ್ಯಾಯ ಮಾದರಿಗಳು ಪ್ರಭಾವಿಸಿದ್ದವೇ? ಗಾಂಧಿ ಹಾಗೂ ಅವರ ಅನುಯಾಯಿಗಳ ಮೇಲೆ ಇದರ ಪ್ರಭಾವವನ್ನು ಅಂದುಕೊಂಡಷ್ಟು ಸ್ಪಷ್ಟವಾಗಿ ನಾವಿನ್ನೂ ಅರ್ಥಮಾಡಿಕೊಂಡಿಲ್ಲ. ಭಿನ್ನಮತವನ್ನು ಅಭಿವ್ಯಕ್ತಿಸುವ ಘನ ಪರಂಪರೆಯನ್ನು ನಾಟುವಲ್ಲಿ, ಉದ್ದೀಪಿಸುವಲ್ಲಿ ಸತ್ಯಾಗ್ರಹದ ರೂಪ ಮತ್ತು ಸಮರ್ಥನೆಯು ಗೆದ್ದಿತೇ? ಕೆಲವರು ವಾದಿಸುವಂತೆ ಗಾಂಧಿ ಬ್ರಹ್ಮಚರ್ಯದ ಆದರ್ಶವನ್ನೇ ಸತ್ಯಾಗ್ರಹದಲ್ಲೂ ಪಾಲಿಸುತ್ತಿದ್ದರು. ಆದರೆ, ಬ್ರಹ್ಮಚರ್ಯ ಎನ್ನುವುದು ಪ್ರತಿರೋಧ ಅಥವಾ ಭಿನ್ನಮತದಿಂದ ಹುಟ್ಟಿದ್ದಲ್ಲ. ಬ್ರಹ್ಮಚರ್ಯವು ಸಂಪ್ರದಾಯನಿಷ್ಠರು ಒಪ್ಪಿಕೊಳ್ಳಬಹುದಾದ ಜೀವನ ವಿಧಾನವಾಗಿತ್ತು. ತಪಶ್ಚರ್ಯದಂತೆ ಇದು ಕೂಡ ವ್ಯಕ್ತಿಯ ಸ್ವ-ಅಭಿವ್ಯಕ್ತಿಯನ್ನೇ ಕೇಂದ್ರವಾಗಿಸಿಕೊಂಡಿತ್ತು. ವ್ಯಕ್ತಿಯನ್ನು ಮರುಹುಟ್ಟಿನಿಂದ ಬಿಡುಗಡೆಗೊಳಿಸುವುದೇ ಇದರ ಪ್ರಧಾನ ಕಾಳಜಿಯಾಗಿತ್ತೇ ಹೊರತು, ಸಾಮಾಜಿಕ ನೈತಿಕ ಮೌಲ್ಯಗಳಲ್ಲ. ಇದು ಮಹಿಳೆಯರಿಗೆ ಗಣನೀಯ ಸ್ಥಾನವನ್ನೇನೂ ನೀಡಿರಲಿಲ್ಲ.

ಆದರೆ ಸತ್ಯಾಗ್ರಹ ಇದಕ್ಕಿಂತ ಸಾಕಷ್ಟು ಭಿನ್ನವಾಗಿತ್ತು. ಇದು ಎಲ್ಲಕ್ಕಿಂತ ಮುಖ್ಯವಾಗಿ ಒಂದು ರಾಜಕೀಯ ನಿಲುವು, ನಡೆಯಾಗಿತ್ತು. ಭಾರತೀಯ ಪರಂಪರೆಯೇ ಮುಂಚೂಣಿಯಲ್ಲಿ ನಿಂತು ಗಾಂಧಿಯ ಚಿಂತನೆ ಹಾಗೂ ಕ್ರಿಯೆಗಳನ್ನು ಪ್ರಭಾವಿಸಿದವೆಂದು ನಾನು ಹೇಳುತ್ತಿಲ್ಲ. ಬದಲಿಗೆ, ಅವರ ಚಿಂತನೆಗಳು ಅಂತರ್ಗತಗೊಂಡು, ತನ್ನದೇ ಸ್ವಂತದ್ದು ಹಾಗೂ ಆಪ್ತವಾದದ್ದು ಎಂದಾಗುವಲ್ಲಿ ಪ್ರಚಲಿತ ಸಾಂಸ್ಕೃತಿಕ ಮಾದರಿಗಳು ಅಪ್ರಜ್ಞಾಪೂರ್ವಕವಾಗಿಯಾದರೂ ನೆರವಾಗಿವೆ ಎಂದು ಹೇಳುತ್ತಿದ್ದೇನೆ. ಮೇಲಾಗಿ ಈ ಮಾದರಿಗಳು, ಗಾಂಧಿಗೆ ಸ್ಪಂದಿಸುವ ವ್ಯಕ್ತಿಯು ಆ ಎಲ್ಲ ನಿರ್ದಿಷ್ಟ ಚಿಂತನೆ ಹಾಗೂ ನಡೆಗಳು ಪರಂಪರೆಯ ನಿರಂತರತೆಯ ಭಾಗವೆಂದು ಗುರುತಿಸುವಂತೆ, ಗ್ರಹಿಸುವಂತೆ ಮಾಡಿದವು.

ಸತ್ಯಾಗ್ರಹವನ್ನು ಅಭ್ಯಾಸ ಮಾಡುವವರಲ್ಲಿ ಪರಿತ್ಯಾಗಿಗಳೊಂದಿಗಿನ ಸಾದೃಶ್ಯವು ಎದ್ದುಕಾಣುವಂತದ್ದು. ಸತ್ಯಾಗ್ರಹವು ಪರಿಣಾಮಕಾರಿಯಾಗಿರಲು ಒಂದು ನಿರ್ದಿಷ್ಟ ಕಾಲಾವಧಿಯ ತರಬೇತಿಯ ಅಗತ್ಯವಿತ್ತು. ಹೀಗಿದ್ದೂ, ಕೆಲವರಿಗೆ ಈ ತರಬೇತಿಯಿಂದ ವಿನಾಯಿತಿಯನ್ನೂ ನೀಡಲಾಗುತ್ತಿತ್ತು. ಪೂರ್ವಭಾವಿಯಾಗಿ ಕೆಲವು ಪ್ರತಿಜ್ಞೆಗಳನ್ನು ಮಾಡಿದ್ದರ, ಕೆಲವು ಕಟ್ಟಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಗೆ ನೀಡಿದ್ದರ ಉಲ್ಲೇಖಗಳೂ ದೊರೆಯುತ್ತವೆ. ಒಮ್ಮೆ ಅಭ್ಯಾಸಾರ್ಥಿಗಳಿಗೆ ಒಪ್ಪಿಗೆ ಸಿಕ್ಕರೆ, ಅವರು ಆಶ್ರಮದಲ್ಲಿ ಕಟ್ಟುನಿಟ್ಟಾದ ಶಿಸ್ತಿನ ಬದುಕು ನಡೆಸಬೇಕಿತ್ತು. ಈ ಎಲ್ಲ ವಿಚಾರಗಳು ಮನುಬೆನ್ ಎಂಬ ಆಶ್ರಮದ ಯುವತಿಯ ನೆನಪಿನ ಗ್ರಂಥದಲ್ಲೂ ದಾಖಲಾಗಿವೆ. ಸತ್ಯಾಗ್ರಹವೇನೂ ಮಠದ ವ್ಯವಸ್ಥೆಗೆ ಒಳಪಟ್ಟಿರಲಿಲ್ಲ. ಹೀಗಿದ್ದೂ ಅದಕ್ಕೆ ಅದರದ್ದೇ ಕೆಲವು ನಿಯಮಗಳು, ಸಂಬಂಧಗಳು ಇದ್ದವು. ಅದಕ್ಕೊಂದು ವಿಶಿಷ್ಟ ಅಸ್ಮಿತೆಯೂ ಇತ್ತು. ಸತ್ಯಾಗ್ರಹದ ಬೋಧನೆಗಳನ್ನು ಒಂದು ರೀತಿಯ ಶಿಸ್ತಿಗೆ ಒಳಪಡಿಸುವ ಅಪ್ರಜ್ಞಾಪೂರ್ವಕ ಪ್ರಯತ್ನವನ್ನು ನಾವು ಗುರುತಿಸಬಹುದು. ಬಹುಶಃ ಅವುಗಳಿಗೊಂದು ಸಾಂಸ್ಥಿಕ ರೂಪ ನೀಡುವ ದಿಶೆಯಲ್ಲೇ ಇದು ನಡೆದಿರಬಹುದು. ಹೀಗೆ ಮಾಡುವುದರಿಂದ ನಾಗರಿಕ ಅಸಹಕಾರದ ತತ್ವವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವುದರಿಂದ ತಡೆಯಬಹುದಿತ್ತು.

ಒತ್ತಾಯ ಇಲ್ಲದಿದ್ದರೂ, ಹೆಚ್ಚಿನ ನೈತಿಕ ಬಲವನ್ನು ಹೊಂದುವ ಕಾರಣಕ್ಕಾಗಿ ಸತ್ಯಾಗ್ರಹಿಗಳು ಬ್ರಹ್ಮಚರ್ಯ ವ್ರತವನ್ನು ಪಾಲಿಸಬೇಕೆಂಬ ಅಪೇಕ್ಷೆಯಿತ್ತು. ಇವರ ಹೋರಾಟವೆಂದರೆ ಅಹಿಂಸಾತ್ಮಕ ಸ್ವದೇಶಿ ಚಳವಳಿಯಲ್ಲಿ ಭಾಗವಹಿಸುವುದು. ಅಂದರೆ, ವಿದೇಶಿ ಸರಕುಗಳನ್ನು, ಮುಖ್ಯವಾಗಿ ಬ್ರಿಟನ್‌ನ ಕೈಗಾರಿಕೀಕರಣದೊಂದಿಗೆ ನೇರ ಸಂಬಂಧ ಹೊಂದಿದ್ದ ಬಟ್ಟೆಗಳನ್ನು ಬಳಸಲು ನಿರಾಕರಿಸುವುದು. ಇದು, ಇನ್ನೂ ವ್ಯಾಪಕ ಉದ್ದೇಶಗಳನ್ನು ಹೊಂದಿದ್ದ ನಾಗರಿಕ ಅಸಹಕಾರ ಚಳವಳಿಯ ಭಾಗವೇ ಆಗಿತ್ತು. ಖಾದಿಯ ಉಡುಗೆಯನ್ನು ತೊಡುವುದಾಗಲಿ, ಗಿರಣಿಯಲ್ಲಿ ನೂಲಿದ ಬಟ್ಟೆಯ ಬಳಕೆಯನ್ನು ಆಕ್ಷೇಪಿಸುವುದಾಗಲಿ ಲುಡ್ಡೈಟ್ ಚಳವಳಿಯ ಆಶಯವನ್ನು ಹೊಂದಿರಲಿಲ್ಲ. ಬದಲಿಗೆ ಅವು, ಭಿನ್ನಮತವನ್ನು ದಾಖಲಿಸುವ ಮತ್ತು ಅದರ ಅಗತ್ಯವನ್ನು ತಿಳಿಹೇಳುವ ಆಶಯವನ್ನು ಹೊಂದಿದ್ದವು. (ಹೊಸ ತಂತ್ರಜ್ಞಾನಗಳು ತಮ್ಮ ಕೌಶಲ್ಯವನ್ನು ನಗಣ್ಯಗೊಳಿಸುತ್ತವೆ ಹಾಗೂ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತವೆ ಎಂಬ ಅಂಜಿಕೆಯಿಂದ ಬ್ರಿಟನ್‌ನ ಜವಳಿ ಕಾರ್ಮಿಕರು 18ನೇ ಶತಮಾನದ ಮೊದಲಾರ್ಧದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಇದರ ಮುಂದಾಳುತನವನ್ನು ಜನರಲ್ ಲುಡ್ಡ್ ಎಂಬವನು ವಹಿಸಿದ್ದನೆಂಬ ಪ್ರತೀತಿ ಇದೆ. ಹಾಗಾಗಿ ಆ ಚಳವಳಿಗೆ ಲುಡ್ಡೈಟ್ ಚಳವಳಿ ಎಂಬ ಹೆಸರು ಬಂದಿತು. ಯಾವುದೇ ಹೆಸ ತಂತ್ರಜ್ಞಾನವನ್ನು ವಿರೋಧಿಸುವ ಮನಸ್ಥಿತಿಗೆ ಲುಡ್ಡೈಟ್ ಎಂದು ಕರೆಯುವುದು ಇತ್ತೀಚಿನ ವಾಡಿಕೆಯಾಗಿದೆ – ಅನುವಾದಕ).

ಸತ್ಯಾಗ್ರಹದ ಪ್ರಕ್ರಿಯೆಯಲ್ಲಿ ಪರಿತ್ಯಾಗದ ಕೆಲವು ಸಂಕೇತಗಳೂ ಗೋಚರಿಸುತ್ತವೆ. ಸತ್ಯಾಗ್ರಹವು ನಿಂತಿರುವುದೇ ನಾಗರಿಕ ಅಸಹಕಾರಕ್ಕೆ ಕರೆ ನೀಡುವ ವ್ಯಕ್ತಿಯ ಹಾಗೂ ಆ ಕರೆಗೆ ಸ್ಪಂದಿಸುವ ವ್ಯಕ್ತಿಗಳ ನೈತಿಕ ಅಧಿಕಾರದ ಬಲದ ಮೇಲೆ, ಅಂದರೆ, ಅವರೆಲ್ಲರ ಆತ್ಮಬಲದ ಮೇಲೆ. ಇದು ಒಂದರ್ಥದಲ್ಲಿ, ಬೇರೆಬೇರೆ ಬಗೆಯ ಪರಿತ್ಯಾಗಿಗಳಿಗೆ ಯಾವುದು ಅಧಿಕಾರವನ್ನು ನೀಡಿತ್ತೋ, ಅದನ್ನೇ ಭಿನ್ನ-ವಿಭಿನ್ನವಾಗಿ ಪ್ರತಿಧ್ವನಿಸುತ್ತದೆ. ಗಾಂಧಿಯವರಿಗೆ ’ಮಹಾತ್ಮ’ ಎಂಬ ಬಿರುದು ನೀಡಲಾಯಿತು. ಈ ಬಿರುದನ್ನು ಗಾಂಧಿ ಎಂದಿಗೂ ನಿರಾಕರಿಸಲಿಲ್ಲ. ಈ ಬಿರುದನ್ನು ನೀಡುವುದರ ಹಿಂದೆ ಅವರ ನೈತಿಕ ಅಧಿಕಾರವನ್ನು ಗುರುತಿಸುವ ಉದ್ದೇಶವೂ ಇತ್ತು. ಇಂಥ ಅಧಿಕಾರಕ್ಕೆ ಯಾವ ಕಚೇರಿಯ ಅಥವಾ, ಅಧಿಕೃತ ಮಾನ್ಯತೆಯ ಅವಶ್ಯಕತೆಯೇ ಇರುವುದಿಲ್ಲ. ಒಂದು ಇಡೀ ಸಮಾಜಕ್ಕೇ ಅನ್ವಯಿಸುವಂಥ ನೈತಿಕ ಮೌಲ್ಯಗಳ ಅಗತ್ಯವನ್ನು ಸಾರುವ ಬೋಧನೆಯೇ ಆ ಅಧಿಕಾರದ ಮೂಲಶಕ್ತಿ. ಅಂಥ ನೈತಿಕತೆಯನ್ನು ಪ್ರತಿಪಾದಿಸುವ ವ್ಯಕ್ತಿಯನ್ನು ಯಾರೆಲ್ಲ ತಮ್ಮ ನಾಯಕನೆಂದು ಒಪ್ಪುವರೋ ಅವರಲ್ಲೇ ಆ ಅಧಿಕಾರದ ಬಲವೂ ನಿಹಿತವಾಗಿರುತ್ತದೆ.

ಶ್ರಮಣ ಧರ್ಮಗಳಿಗೆ ಹೇಗೋ ಹಾಗೆ ಸತ್ಯಾಗ್ರಹಕ್ಕೂ ಹಿಂಸೆಯನ್ನು ಮಾಡದಿರುವುದು ಒಂದು ಮೂಲಭೂತ ಅಗತ್ಯವಾಗಿದೆ. ಹಿಂಸಾವಿಧಾನವನ್ನು ನೇರವಾಗಿ ಬಳಸುವುದು, ಅಷ್ಟೇ ಏಕೆ, ಪರೋಕ್ಷವಾಗಿ ಹಿಂಸೆಯ ಫಲಿತಗಳ ಮೇಲೆ ಅವಲಂಬಿತರಾಗಿ ಬದುಕುವುದು ಕೂಡ ನೈತಿಕ ಅಧಿಕಾರವನ್ನೂ, ಬಲವನ್ನೂ ತೊಡೆದುಹಾಕುತ್ತದೆ. ವಸಾಹತುಶಾಹಿಯ ಶಕ್ತಿಯನ್ನೂ, ವಸಾಹತುವಿರೋಧಿ ರಾಷ್ಟ್ರೀಯವಾದಿ ಪ್ರತಿಭಟನಾಕಾರರ ಮೇಲಿನ ಅದರ ಹಿಂಸೆಯನ್ನೂ ಅಹಿಂಸೆಯು ಎದುರಿಸಿ ನಿಂತಿತು. ’ಇನ್‌ಕ್ವಿಲಾಬ್ ಜ಼ಿಂದಾಬಾದ್’, ’ಆಜ಼ಾದಿ’ ಮುಂತಾದ ಘೋಷಣೆಗಳನ್ನು ಕೂಗಿದವರ ಮೇಲೆ ಬ್ರಿಟಿಷ್ ಆಳ್ವಿಕೆಯು ಲಾಠಿ ಪ್ರಹಾರ ನಡೆಸಿ, ಅವರನ್ನೆಲ್ಲ ಬಂಧಿಸಿ, ಜೈಲಿಗಟ್ಟಿತು. ಸರಿಯಾಗಿ ಗಮನಿಸಿದರೆ, ಹಿಂಸೆ ಹಾಗೂ ಅಧಿಕಾರದ ಪ್ರಯೋಗದ ನಡುವಿನ ಅಂತರ್‌ಸಂಬಂಧವು ಹಲವು ಹಂತಗಳಲ್ಲಿ, ಹಲವು ಸನ್ನಿವೇಶಗಳಲ್ಲಿ ನಮಗೆ ಕಂಡುಬರುತ್ತದೆ.

ಈ ಬಗೆಯಲ್ಲಿ ಹಿಂಸೆಯು ರಾಜಕೀಯ ಚಟುವಟಿಕೆಯ ವಲಯದಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಸಮಯ ಸಂದರ್ಭಕ್ಕೆ ತಕ್ಕಂತೆ ನಡೆಯುವ ಹಿಂಸೆ ಎಂಬ ಸಮಜಾಯಿಷಿಯನ್ನು ಮತ್ತೆ ಮತ್ತೆ ರಾಜಕೀಯ ನಡೆಗಳಲ್ಲಿ, ರಾಜಕೀಯ ಕೊಲೆಗಳಿಂದ ತೊಡಗಿ ಯುದ್ಧಗಳವರೆಗೂ ನೀಡಲಾಗುತ್ತದೆ. ಇದನ್ನು ಸಂದರ್ಭಕ್ಕನುಗುಣವಾದ ಹಿಂಸೆ ಅಥವಾ, ಕೆಲವು ಷರತ್ತುಗಳಿಗೆ ಒಳಪಟ್ಟು ನಡೆಯುವ ಹಿಂಸೆ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಭಗವದ್ಗೀತೆ ಇದಕ್ಕೊಂದು ನಿದರ್ಶನ. ಇಲ್ಲಿ, ದುಷ್ಟರನ್ನು ಸದೆಬಡಿಯುವ ಕಾರಣ ನೀಡಿ ಹಿಂಸೆಯ ಬಳಕೆಯನ್ನು ಮಾನ್ಯಮಾಡಲಾಗಿದೆ. ಅರಸರು, ಸೈನ್ಯಾಧಿಕಾರಿಗಳು ಮತ್ತು ಸೈನಿಕರು – ಅವರು ಬೌದ್ಧರೇ ಆಗಿರಲಿ, ಜೈನರೇ ಆಗಿರಲಿ – ತಮ್ಮ ಅಹಿಂಸೆಯ ನೋಂಪಿಯನ್ನೂ ಲೆಕ್ಕಿಸದೆ ಶತ್ರುಗಳನ್ನು ಕೊಂದಿದ್ದಾರೆ.

ಸಹಿಷ್ಣುತೆಗೆ ಅಹಿಂಸೆ ಮತ್ತು ಸತ್ಯಾದ ಕುರಿತು ಬದ್ಧತೆ ಇರಬೇಕಾದದ್ದು ಅತ್ಯಾವಶ್ಯಕ. ಆಳ್ವಿಕೆ ನಡೆಸಿದವರಲ್ಲಿ ಅನೇಕರು ಶತಮಾನಗಳಿಂದ ಸಹಿಷ್ಣುತೆಯ ಅಗತ್ಯವನ್ನು ಮತ್ತೆ ಮತ್ತೆ ಸಾರುತ್ತಲೇ ಬಂದಿದ್ದಾರೆ. ಇದರ ಅರ್ಥ, ಅವರ್‍ಯಾರೂ ಸಹಿಷ್ಣುತೆಯನ್ನು ಎಂದಿಗೂ ಲಘುವಾಗಿ ಪರಿಗಣಿಸಿರಲಿಲ್ಲ ಹಾಗೂ ಅದು ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಪ್ರಚಲಿತದಲ್ಲಿರಲಿಲ್ಲ. ಅಧಿಕಾರ ದಾಹವುಳ್ಳವರು ಸಹಿಷ್ಣುತೆಯನ್ನು ಮತ್ತೆ ಮತ್ತೆ ಕಡೆಗಣಿಸುತ್ತಿದ್ದರು. ಅದು ಎಲ್ಲ ಕಾಲಕ್ಕೂ ಮೇಲುಗೈ ಸಾಧಿಸಿದ್ದೇ ಆದಲ್ಲಿ, ಅದರ ಕುರಿತು ನಿರಂತರವಾಗಿ ಎಚ್ಚರಿಸುವ ಅಗತ್ಯವೇ ಇರುತ್ತಿರಲಿಲ್ಲ. ಇನ್ನು, ಅಹಿಂಸೆಯೊಂದಿಗೆ ಪರೋಕ್ಷ ಸಂಬಂಧ ಹೆಂದಿರುವ ಇನ್ನೊಂದು ಪರಿಕಲ್ಪನೆಗೂ ಗಾಂಧಿ ಒತ್ತು ನೀಡಿದ್ದರು. ಅದು ’ನಿಷ್ಕಾಮ ಕರ್ಮ’. ಇದನ್ನು, ವೈಯಕ್ತಿಕ ಲಾಭವನ್ನು ಅಪೇಕ್ಷಿಸದೆ ಮಾಡಲಾಗುವ ಕ್ರಿಯೆ ಎಂದು ವಿವರಿಸಲಾಗುತ್ತದೆ. ಇದರ ಪರಿಧಿಯೊಳಗೆ, ನಮ್ಮ ಗುರಿ ಮತ್ತು ಅದನ್ನು ಸೇರಲು ನಾವು ಬಳಸುವ ದಾರಿಯ ನೈತಿಕತೆಯನ್ನು ಹಾಗೂ ನಮ್ಮ ಕೆಲಸಕ್ಕೆ ನಾವೇ ಹೆಣೆ ಎಂಬುದನ್ನು ತಂದಾಗ ಅಹಿಂಸೆಯೊಂದಿಗಿನ ಇದರ ಸಂಬಂಧ ಮತ್ತಷ್ಟು ಪ್ರಸ್ತುತ ಎನಿಸುತ್ತದೆ.

ಬಹುತೇಕ ಎಲ್ಲ ಪಂಥಗಳ ಪರಿತ್ಯಾಗಿಗಳು ಆ ಹೆತ್ತಿಗೆ ಜಾರಿಯಲ್ಲಿದ್ದ ವ್ಯವಸ್ಥೆಯನ್ನು ಕಿತ್ತೆಸೆಯಬೇಕೆಂದು ಮೊದಲೇ ಹೆರಟವರಲ್ಲ. ಅವರ ಆಸಕ್ತಿಯಿದ್ದದ್ದು ಒಂದು ಸುಧಾರಿತ ಪರ್ಯಾಯ ವ್ಯವಸ್ಥೆಯನ್ನು ಕಟ್ಟುವುದರಲ್ಲಿ. ಯಾವ ಬಗೆಯ ಸಮಾಜ ಬೇಕೆಂಬ ಕಲ್ಪನೆಯೂ ಅವರಲ್ಲಿತ್ತಲ್ಲದೆ ವಾಸ್ತವವನ್ನು ಹೊಸದಾಗಿ ವ್ಯಾಖ್ಯಾನಿಸುವ ಮೂಲಕ ಆ ಕಲ್ಪನೆಯನ್ನವರು ಕಟ್ಟಿಕೊಂಡಿದ್ದರು. ವರ್ತಮಾನದ ಅರಿವೂ, ಭವಿಷ್ಯತ್ತಿನ ಕಲ್ಪನೆಯೂ ಅವರದ್ದಾಗಿತ್ತು. ಅವರೆಲ್ಲರೂ ದ್ರಷ್ಟಾರರು, ದೂರದೃಷ್ಟಿಯನ್ನು ಹೆಂದಿದ್ದವರು. ದೂರದೃಷ್ಟಿಯು ಹೆಚ್ಚಾಗಿ ಯಾವುದೇ ಸಿದ್ಧಾಂತದ ಕೇಂದ್ರ ಆಕರ್ಷಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ಭಕ್ತಿಸಂತ ರವಿದಾಸ್‌ನನ್ನು ನೆನೆಸಿಕೊಳ್ಳಬಹುದು. ಆತ ಎಲ್ಲರೂ ಸಮಾನರಾಗಿರುವ ಸಮಾಜವೊಂದನ್ನು ಕಲ್ಪಿಸಿದ್ದ ಹಾಗೂ ಅಂಥಾ ವ್ಯವಸ್ಥೆಯು ದುಃಖ ಮತ್ತು ವ್ಯಾಕುಲತೆಗಿರುವ ಪ್ರಧಾನ ಕಾರಣವನ್ನೇ ತೊಡೆದುಹಾಕುತ್ತದೆ ಎಂದು ಭಾವಿಸಿದ್ದ.

ಎಲ್ಲ ಮತ-ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕಿತ್ತು. ಬಹುಶಃ ಇದೇ ಮುಂದೆ, ಸತ್ಯಾಗ್ರಹಕ್ಕೆ ಅವಶ್ಯಕವಾದ ಸಮಾನ ಹಕ್ಕುಗಳನ್ನು ನೀಡುವ ಮೌಲ್ಯವನ್ನು ಒಪ್ಪಿಕೊಳ್ಳುವಂತಾಯಿತು. ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಹಲವು ಧರ್ಮಗಳಲ್ಲಿ ಒಂದು ಮಿಕ್ಕೆಲ್ಲಕ್ಕಿಂತ ಹೆಚ್ಚು ಸಮಾನ ಎಂದನಿಸಿದ್ದಿರಬಹುದು. ಆದರೆ, ಸತ್ಯಾಗ್ರಹಕ್ಕೆ ತನ್ನದೇ ಒಂದು ಪ್ರತ್ಯೇಕ ಧಾರ್ಮಿಕ ಗುರುತು ಇರಲಿಲ್ಲ. ಹೀಗಿದ್ದೂ, ಅದರ ಕಟ್ಟಲೆಗಳು ವ್ಯಾಪಕ ಯಾತನೆಯನ್ನೇನಾದರೂ ಉಂಟು ಮಾಡಿದ್ದೇ ಆದಲ್ಲಿ ಆ ಕಟ್ಟಲೆಗಳನ್ನು ಮುರಿಯುವ ನೈತಿಕ ಹಕ್ಕು ಕೂಡ ಇತ್ತು. ಆದರೆ, ಆ ತೀರ್ಮಾನವನ್ನು ಮಾಡುವ ಹಕ್ಕು ಇದ್ದದ್ದು ಯಾರಿಗೆ? ಗಾಂಧಿ ತನಗೆ ಆ ಹಕ್ಕಿದೆ ಎಂದು ಭಾವಿಸಿದ್ದರೇ? ಇವರಿಗೆ ನೀಡಲಾದ ಮಹಾತ್ಮ ಎಂಬ ಪಟ್ಟ ಆ ಹಕ್ಕನ್ನು ಬಲಪಡಿಸಿತ್ತೇ? ಪ್ರಚಲಿತ ದುಷ್ಟತನವನ್ನು ಎದುರಿಸುವ ನಿಟ್ಟಿನಲ್ಲಾದರೂ ಹಿಂಸೆ ಅನಿವಾರ್ಯವೆಂದು ಪ್ರತಿಪಾದಿಸುವ, ಭಗವದ್ಗೀತೆಯಲ್ಲಿ ಕಂಡುಬರುವಂಥ ಸಂದರ್ಭಕ್ಕನುಗುಣವಾದ ಅಥವಾ ಕೆಲವು ಷರತ್ತುಗಳಿಗೆ ಒಳಪಟ್ಟು ನಡೆಯುವ ಹಿಂಸೆಯನ್ನು ಒಪ್ಪುವುದೇ ಆದಲ್ಲಿ ಮೇಲಿನ ದ್ವಂದ್ವ ತೀವ್ರ ಸ್ವರೂಪ ಪಡೆಯುತ್ತದೆ. ಹೀಗಿದ್ದೂ ಸತ್ಯಾಗ್ರಹಿಯು ಅಹಿಂಸಾತ್ಮಕ ಮಾರ್ಗಗಳ ತನ್ನ ನಿಲುವುಗಳನ್ನು, ಹಾಗೂ ಗುರಿ ಮತ್ತು ದಾರಿಯ ನಡುವೆ ಅಂತರ್‌ವಿರೋಧ ಇಲ್ಲದ ರೀತಿಯ ವ್ಯವಸ್ಥೆಯಲ್ಲಿ ಇತರರನ್ನು ತನ್ನೆಡೆಗೆ ಮನವೊಲಿಸಬೇಕಾಗುತ್ತದೆ.

ಹಿಂಸೆಯು ಮನವೊಲಿಸುವುದಿಲ್ಲ. ಅದು ಅಂಜಿಕೆ ಮತ್ತು ಭೀತಿಯನ್ನು ಮನವೊಲಿಕೆಯ ಬದಲಿಯಾಗಿ ನೆಲೆಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಅದು ಅಧಿಕಾರ ಚಲಾಯಿಸುವವರ ಮನುಷ್ಯ ಗುಣವನ್ನೇ ಅಲ್ಲಗಳೆಯುತ್ತದೆಯಲ್ಲದೆ, ಆಳಿಸಿಕೊಳ್ಳುವವರು, ಹಾಗೆ ಅಲ್ಲಗಳೆದಿದ್ದನ್ನು ಒಪ್ಪಿಕೊಳ್ಳುವಂತೆ ಹಿಂಸೆಯ ಭೀತಿಯು ಪ್ರೋತ್ಸಾಹಿಸುತ್ತದೆ. ಈ ಅಲ್ಲಗಳೆತನವು ಬಹಳ ಸುಪ್ತವಾಗಿ ನಡೆಯುವಂತದ್ದು, ಯಾರೂ ಮಾತನಾಡದಿರುವಂತದ್ದು. ಹೀಗಾಗ್ಯೂ, ಅಧಿಕಾರ ಸರಿತೂಗುವಿಕೆಯನ್ನು ಒಳಗೊಳ್ಳುವ ಎಲ್ಲ ಸಂಬಂಧಗಳಲ್ಲೂ ಇದೊಂದು ನೈತಿಕ ಅಗತ್ಯವೆಂಬಂತೆ ಸ್ಥಾನ ಪಡೆದಿರುತ್ತದೆ. ಅಲ್ಲದೆ, ಈ ಅಲ್ಲಗಳೆತದಿಂದಾಗಿನಅಧಿಕಾರವುಳ್ಳವರು ಅಧೀನರನ್ನು ತಿರಸ್ಕಾರದಿಂದ ನೋಡುವ ಸಾಧ್ಯವಾಗಿಸುತ್ತದೆ. ಗಾಂಧಿ ತಲೆಮಾರಿನವರು ಮತ್ತು ನಂತರದ ಆರಂಭಿಕ ಉತ್ತರಾಧಿಕಾರಿಗಳು, ಅಧೀನಕ್ಕೊಳಪಟ್ಟವರನ್ನು ’ಗೆದ್ದಲು ಹುಳುಗಳು’ ಎಂದು ಭಾವಿಸುತ್ತಿದ್ದರೇ? ಹಾಗೆ ಭಾವಿಸಲು ಸಾಧ್ಯವಿತ್ತೇ?

ಇನ್ನು ವಿಶಾಲವಾದ ಸಾಮಾಜಿಕ ಸಂದರ್ಭದಲ್ಲಿ ಸತ್ಯಾಗ್ರಹವನ್ನು ಆಚರಿಸುತ್ತಿದ್ದ ಆ ದಿನಗಳಲ್ಲಿ ಮತ್ತೊಂದು ಸಂಕೀರ್ಣವಾದ ಸಮಸ್ಯೆಯೊಂದಿತ್ತು. ಜಾತಿವ್ಯವಸ್ಥೆಯಿಂದ ಬಹಿಷ್ಕೃತರಾ ದವರನ್ನೂ ಒಳಗೊಂಡಂತೆ, ಎಲ್ಲ ಜಾತಿಗಳ ಸಮಾನತೆಯ ಪ್ರಶ್ನೆ ಅಂದು ಮುಖ್ಯವಾಗಿತ್ತು. ಅಂದು ನಿಜವಾಗಿ ನಡೆದದ್ದೇನು? ಭಿನ್ನಮತ ತೋರಿದ ಕೆಲವು ಪಂಥಗಳು ತೆಳೆದಿದ್ದ ಎಲ್ಲ ಜಾತಿಗಳಿಗೆ ಸಮಾನ ಸ್ಥಾನಮಾನವೆಂಬ ನಿಲುವು ಏನಿದೆ, ಅದು ಸವರ್ಣೀಯ ಮತ್ತು ಅವರ್ಣೀಯರಿಬ್ಬರಿಗೂ ಅನ್ವಯಿಸುತ್ತಿತ್ತೋ? ಇಲ್ಲ, ಕೇವಲ ಸವರ್ಣೀಯರಿಗಷ್ಟೇ ಅನ್ವಯಿಸುತ್ತಿತ್ತೋ? ದಿನನಿತ್ಯದ ನಡೆಯಲ್ಲಿ ಶ್ರೇಣೀಕರಣವನ್ನು ಹೇಗೆ ಎದುರಿಸಲಾಗುತ್ತಿತ್ತು? ಗಾಂಧಿಗೆ ಈ ಎಲ್ಲದರ ಪರಿಣಾಮಗಳ ಅರಿವೇನೋ ಇತ್ತು. ಆದರೆ, ಪರಿಹಾರೋಪಾಯವು ಮಾತ್ರ ನಿಲುಕದಷ್ಟು ದೂರವಿತ್ತು. ಏಕೆಂದರೆ, ಅದು ಕೇವಲ ಒಬ್ಬನ ವರ್ತಮಾನದ ಜನ್ಮಕ್ಕಷ್ಟೇ ಸಂಬಂಧಿಸಿದ್ದಾಗಿರಲಿಲ್ಲ.

ಅಂದು ಹಲವರು ನಂಬಿದ್ದ, ಪುನರ್ಜನ್ಮವೆಂಬ ಪರಿಕಲ್ಪನೆಯಲ್ಲಿ ನಂಬಿಕೆಯುಳ್ಳವರಿಗೆ ಅದು ಮುಂದಿನ ಜನ್ಮಗಳಿಗೆ ಸಂಬಂಧಿಸಿದ್ದೂ ಆಗಿತ್ತು. ಹಿಂದಿನ ಜನ್ಮದ ಕರ್ಮಗಳು ಈ ಜನ್ಮವನ್ನೂ, ಜೀವನವನ್ನೂ ಪ್ರಭಾವಿಸುತ್ತವೆ ಎಂಬ ನಂಬಿಕೆ ಹಲವರಲ್ಲಿತ್ತು. ಆದರೆ, ಜಾತಿಗಳೇ ಕರ್ಮಗಳನ್ನು ಧರ್ಮಶಾಸ್ತ್ರಗಳ ನಿಯಮಗಳಿಗೆ ಅನುಗುಣವಾಗಿ ನಿಧರಿಸುತ್ತವೆಯೆಂದಾದರೆ, ಜಾತಿ ಶ್ರೇಣೀಕರಣವನ್ನು ತೊಡೆದುಹಾಕಲು ಮೊದಲು ಧರ್ಮಶಾಸ್ತ್ರಗಳ ನಿಯಮಗಳನ್ನು ಮುಲಾಜಿಲ್ಲದೆ ತಿರಸ್ಕರಿಸಬೇಕಾದದ್ದು ಅನಿವಾರ್ಯವಾಗಿತ್ತು. ಆದರೆ ಇದನ್ನು ವಾದಿಸಿದ್ದು ಮಾತ್ರ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಜನರು.

ತಮ್ಮ ಮಠಗಳು ಜಾತಿನಿಯಮಗಳನ್ನು ಎಂದಿಗೂ ಪರಿಗಣಿಸೇ ಇಲ್ಲವೆಂದು ಶ್ರಮಣ ಧಾರೆಗಳು ಹೇಳಿಕೊಳ್ಳುತ್ತಿದ್ದವು. ಇನ್ನು ವಿಸ್ತಾರವಾದ ಸಾಮಾಜಿಕ ವ್ಯಾಪ್ತಿಯನ್ನೇ ಗಮನಿಸುವುದಾದರೆ, ಕೆಲವು ಭಕ್ತಿ ಸಂತರು, ಅವರಲ್ಲೂ ವಿಶೇಷವಾಗಿ ಅತ್ಯಂತ ಕೆಳಜಾತಿಗಳಿಂದ ಬಂದ ಸಂತರು ಕೂಡ ಜಾತಿಯನ್ನು ವಿರೋಧಿಸಿದರು. ಅವರ್ಣೀಯರಿಗಷ್ಟೇ ಮೀಸಲಾಗಿದ್ದ ಅಷ್ಟು ಗೌರವಾನ್ವಿತವಲ್ಲದ ಕೆಲಸಗಳನ್ನು ಸವರ್ಣೀಯರೂ ಮಾಡಿದರೆ ಜಾತಿ ವ್ಯವಸ್ಥೆಗೆ ಅಂಟಿದ ಕಳಂಕ ತಾನಾಗೇ ಕಳಚಿಕೊಳ್ಳಬಹುದೆಂದು ಗಾಂಧಿ ಭಾವಿಸಿದ್ದರು. ಆದರೆ ಇದಿಷ್ಟೇ ಸಾಲದಾಯಿತು. ಏಕೆಂದರೆ, ಅಷ್ಟರಲ್ಲಾಗಲೇ ಜಾತಿ ವ್ಯವಸ್ಥೆಯ ಪರಿಣಾಮಗಳು ಇದನ್ನೂ ಮೀರಿ ಬೇರೆಬೇರೆ ಸ್ವರೂಪವನ್ನು ಪಡೆದಿದ್ದವು. ಪರಿತ್ಯಾಗಿಗಳೇನೋ ತಮ್ಮ ಜಾತಿಯ ಗುರುತಿನಿಂದ ಕಳಚಿಕೊಂಡಿದ್ದರು. ಆದರೆ, ಸತ್ಯಾಗ್ರಹಿಗಳಿಗೆ ತಮ್ಮ ಜಾತಿಯ ಗುರುತನ್ನು ಮೀರುವ ಒತ್ತಾಯವಾಗಲಿ, ಅಗತ್ಯವಾಗಲಿ ಇರಲಿಲ್ಲ.

ನಾಗರಿಕ ಅಸಹಕಾರ ಚಳವಳಿಗಾಗಿ ಕೊಟ್ಟ ಕರೆಗೆ ಬಹಳ ದೊಡ್ಡ ಸಂಖ್ಯೆಯ ಜನರು ಸ್ಪಂದಿಸಿದರು. ಇದರಿಂದಲೇ ಸತ್ಯಾಗ್ರಹಕ್ಕೆ ಸಿಕ್ಕ ಮನ್ನಣೆಯು ಸ್ಪಷ್ಟವಾಗುತ್ತದೆ. ಈ ಮಟ್ಟದ ಬೆಂಬಲಕ್ಕೆ ಕಾರಣವೇನು ಎಂಬುದನ್ನು ನಾವು ಕೇಳಿಕೊಳ್ಳಬೇಕು. ಅನ್ಯಾಯವನ್ನು ಅನುಭವಿಸುತ್ತಿರುವಾಗಲೂ ಭುಗಿಲೆದ್ದ
ಪ್ರತಿರೋಧದ ನಿರಂತರತೆಯ ಪ್ರತಿಧ್ವನಿಯು ಈ ಕರೆಗೆ ಸ್ಪಂದಿಸಿತೆಂದು ಹೇಳಬಹುದೇ? ಕಾರಣವೇನೇ ಇರಲಿ, ಒಟ್ಟಿನಲ್ಲಿ, ನಾಗರಿಕ ಅಸಹಕಾರದ ಕರೆಯು ರಾಷ್ಟ್ರೀಯ ಭಾವನೆಯನ್ನು ಸಂಚಲನಗೊಳಿಸಿತು ಎಂದು ಹೇಳಬಹುದು. ಆದರೆ, ಒಂದು ಸ್ಪಷ್ಟ ಪ್ರತಿಭಟನೆಯ ಸ್ವರೂಪವನ್ನು ಕಟ್ಟುವ ಸಂದರ್ಭ ಬಂದಾಗ ಇದು ಆ ರಾಷ್ಟ್ರೀಯ ಭಾವನೆಯನ್ನು ಹಿಂಸಾತ್ಮಕ ಕ್ರಾಂತಿಯ ಸ್ವರೂಪಕ್ಕೆ ತಿರುಗದಂತೆ ನೋಡಿಕೊಂಡಿತು. ಮೊದಲಿನಿಂದಲೂ ಇಂಥ ಚಳವಳಿಗಳು ಹಿಂಸಾತ್ಮಕ ಕ್ರಾಂತಿಯ ವಿರುದ್ಧ ದಿಕ್ಕಿನಲ್ಲೇ ಚಲಿಸಿವೆ. ಇಲ್ಲೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ – ಪರಸ್ಪರ ವಿರೋಧಿ ವ್ಯಾಖ್ಯಾನಗಳು ಆಸರೆಗಾಗಿ ಪಂಥದ ಸ್ವರೂಪವನ್ನು ಪಡೆದು, ಅದು ಮಿಕ್ಕ ಪಂಥಗಳ ಜೊತೆಯಲ್ಲಿ ಬಾಳುತ್ತ, ಸೆಣೆಸುತ್ತ ಇದ್ದುದ್ದರಿಂದಲೇ ನಮ್ಮಲ್ಲಿ ಪಂಥೀಯ ಸಂಘರ್ಷಗಳು ಹೆಚ್ಚು ಕಾಣಿಸಿಕೊಂಡಿತ್ತೇ ಹೆರತು ಸಾಂಪ್ರದಾಯಿಕ ಮತ-ಧರ್ಮಗಳ ನಡುವೆ ವ್ಯಾಪಕ ಸ್ವರೂಪದ ಕಿತ್ತಾಟ ಕಾಣಿಸಿಕೊಂಡಿರಲಿಲ್ಲ – ಹೀಗೊಂದು ವಾದವನ್ನು ಮಂಡಿಸಬಹುದೇ?

ವಸಾಹತುಶಾಹಿ ಆಳ್ವಿಕೆಯ ಸನ್ನಿವೇಶದಲ್ಲಿ ಸತ್ಯಾಗ್ರಹವು ಪ್ರತಿಭಟನಾಕಾರರಿಗೆ ಹಾಗೂ ಪ್ರತಿಭಟನೆಯ ಕಾರಣಗಳಿಗೆ – ಆ ಪ್ರತಿಭಟನೆ ಉಪ್ಪು, ಬಟ್ಟೆ, ಜನರ ಸ್ವಾತಂತ್ರ್ಯ ಅಥವಾ ಇನ್ಯಾವುದೇ ವಿಚಾರವಾಗಿಯೂ ಆಗಿದ್ದಿರಲಿ- ಒಂದು ಸ್ಪಷ್ಟ ಗುರುತನ್ನು ಒದಗಿಸಿಕೊಟ್ಟಿತು. ಪ್ರತಿಭಟನಾಕಾರರು ಬಯಸುತ್ತಿದ್ದದ್ದೂ, ಅಧಿಕಾರಿಗಳು ಬಯಸದೇ ಇದ್ದದ್ದೂ ಇದನ್ನೇ.

ಎದ್ದು ಕಾಣಿಸಿಕೊಳ್ಳುವ ಗುರುತಿನ ಸಾಮರ್ಥ್ಯವೇನಿದೆ, ಅದು ನಾಗರಿಕ ಅಸಹಕಾರದಲ್ಲಿ ಶಕ್ತಿಯ ಸೆಲೆಯಾಗಿರುತ್ತದೆ. ಈ ಬಗೆಯಲ್ಲಿ ಭಿನ್ನಮತವನ್ನು ತೋರಿಸುವ ಮೂಲಕ, ವಸಾಹತುಶಾಹಿ ಶಕ್ತಿಗೆ ಎದುರಾಗಿ ನೈತಿಕ ಅಧಿಕಾರವನ್ನು ಮುಂದಿಟ್ಟು ವಸಾಹತು ಆಳ್ವಿಕೆಗೆ ಒಳಪಟ್ಟ ಜನರು ತಮ್ಮ ಸ್ಥಾನಮಾನಕ್ಕಾಗಿ ಹಕ್ಕೊತ್ತಾಯ ಮಾಡುತ್ತಿದ್ದರು. ಇದು ವಸಾಹತುಶಾಹಿ ಆಳ್ವಿಕೆಗೆ ನಿಲುಕದ ಒಂದು ಅನುಭವವಾಗಿತ್ತು.

ಗಾಂಧಿ ಅವರ ಅಧ್ಯಯನದ ಪಟ್ಟಿಯಲ್ಲಿ ಶ್ರಮಣರ ಪಠ್ಯಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇವೆ. ಅವರು ಬಹಳ ಆಳವಾಗಿ ಅಧ್ಯಯನ ಮಾಡಿದ ಭಗವದ್ಗೀತೆಯೊಂದಿಗೆ ಹೋಲಿಕೆ ಮಾಡಿ ನೋಡಿದರೆ, ಶ್ರಮಣರ ಪಠ್ಯಗಳ ಕುರಿತು ಅವರ ಆಸಕ್ತಿಯು ಪ್ರಾಥಮಿಕ ಸ್ವರೂಪದ್ದಷ್ಟೇ ಆಗಿತ್ತು.

ಆದರೆ, ಸತ್ಯಾಗ್ರಹವು ಹಿಂಸಾತ್ಮಕ ಪ್ರತಿಭಟನೆಗಳಿಗೆ ಬದಲಾಗಿ ಭಿನ್ನಮತವನ್ನು ಕಟ್ಟಿಕೊಟ್ಟಿತು. ಅಂದರೆ, ಸತ್ಯಾಗ್ರಹದಲ್ಲಿ ಶ್ರಮಣರ ಚಿಂತನೆಗಳು, ಅವು ಎಷ್ಟೇ ಕ್ಷೀಣವಾಗಿದ್ದರೂ ಪಿಸುಗುಟ್ಟುತ್ತಲೇ ಇದ್ದವು. ಹಾಗೆ ನೋಡಿದರೆ, ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಭಾರತದ ಚಿಂತನೆ, ಸಮಾಜ ಮತ್ತು ರಾಜಕೀಯವು ಬಹಳ ಸಂಕೀರ್ಣವಾಗಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ ವ್ಯಕ್ತಿಯೊಬ್ಬರು ಭಾರತದ ಚರಿತ್ರೆಯಲ್ಲಿ ಕಾಣಿಸಿಗುವ ಭಿನ್ನಮತದ ಕೆಲವು ರೂಪಗಳನ್ನು ಹಿಡಿದುಕೊಂಡು, ಬಹಳ ಸ್ವಾಭಾವಿಕವಾಗಿ ಭಿನ್ನಮತದ ಹೊಸ ರೂಪವೊಂದನ್ನು ಮರುಸೃಷ್ಟಿಸಿರಲಿಕ್ಕೂ ಸಾಕು. ಇದಕ್ಕೆ ಸಿಕ್ಕ ಒಪ್ಪಿಗೆ ಹುಬ್ಬೇರಿಸುವಂತೆ ಮಾಡುತ್ತದೆ.

ಗಾಂಧಿ ಒಂದೆಡೆ ಭಗವದ್ಗೀತೆಯನ್ನು ಒಪ್ಪಿಕೊಳ್ಳುತ್ತಾರೆ. ಇನ್ನೊಂದೆಡೆ ಸತ್ಯಾಗ್ರಹದಲ್ಲಿ ಅಹಿಂಸೆ ಇರಲೇಬೇಕೆಂದೂ ಒತ್ತಾಯಿಸುತ್ತಾರೆ. ಇದು ಅವರಲ್ಲಿನ ವಿರೋಧಾಭಾಸವಲ್ಲವೇ ಎಂದು ಕೆಲವರು ಕೇಳಬಹುದು. ಗಾಂಧಿ ಭಗವದ್ಗೀತೆಯ ಹಲವು ಅನುವಾದಗಳನ್ನು ಓದಿದ್ದಾರೆ. ಶುರುವಿಗೆ, ಗುಜರಾತಿ ಅನುವಾದಗಳನ್ನಲ್ಲದೆ 1885ರಲ್ಲಿ ಪ್ರಕಟಗೊಂಡ ಎಡ್ವಿನ್ ಅರ್ನೋಲ್ಡ್ ಅವರ ಪ್ರಸಿದ್ಧ ಅನುವಾದ ’ದ ಸಾಂಗ್ ಸೆಲೆಸ್ಟಿಯಲ್’ಅನ್ನು ಕೂಡ ಗಾಂಧಿ ಓದಿದ್ದರು. ಬೈಬಲ್ ಕ್ರಿಶ್ಚಿಯಾನಿಟಿಗೆ ಮತ್ತು ಕುರಾನ್ ಇಸ್ಲಾಂಗೆ ಆದಂತೆ ಹಿಂದೂ ಧರ್ಮದ ಪ್ರತಿನಿಧಿಯಂತಾಗುವ ಸಾಮರ್ಥ್ಯ ಭಗವದ್ಗೀತೆಗೆ ಇದೆಯೇ ಎಂಬ ಜಿಜ್ಞಾಸೆ ಆ ಕಾಲದಲ್ಲಿ ನಡೆಯುತ್ತಿತ್ತು.

ಮೂಲಕ್ಕೆ ತದನಂತರದಲ್ಲಿ ಸೇರ್ಪಡೆಗೊಂಡ ಭಾಗಗಳನ್ನೂ ಒಳಗೊಂಡ ಭಗವದ್ಗೀತೆಯನ್ನು ಚಾರಿತ್ರಿಕವಾಗಿ ಹಲವರು ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಯ ಪ್ರಕಾರ ಗೀತೆಯು ಈಗಿನ ಸ್ವರೂಪದಲ್ಲಿ ಕಾಣಿಸಿಕೊಂಡಿದ್ದು ಕ್ರಿಸ್ತ ಶಕೆ ಶುರುವಾಗುವ ಕಾಲಘಟ್ಟದಲ್ಲಿ. ಗೀತೆಯ ಟೀಕೆ-ವ್ಯಾಖ್ಯಾನಗಳನ್ನು ಶತಮಾನಗಳವರೆಗೆ ಬರೆಯಲಾಗಿದೆ. ಆದರೆ, ಗೀತೆಯು ಸಾಮಾನ್ಯಕ್ಕಿಂತ ಹೆಚ್ಚು ಮಹತ್ವದ ಸ್ಥಾನ ಪಡೆದಿದ್ದು 19ನೇ ಶತಮಾನದಲ್ಲಿ. ಪೂರ್ವದ ನಾಡುಗಳ ವಿವೇಕವನ್ನು ಅರಸಲು ಹೊರಟ ಯುರೋಪಿನ ಪೌರಸ್ತ್ಯವಾದಿ (ಒರಿಯೆಂಟಲಿಸ್ಟ್) ಅಲೆಯ ಮೇಲೆ ಸವಾರಿ ಮಾಡುತ್ತ ತನ್ನ ಸ್ಥಾನವನ್ನು ಅದು ಉನ್ನತೀಕರಿಸಿಕೊಂಡಿತು. ಥಿಯೋಸೊಫಿಸ್ಟ್‌ಗಳು ಇದನ್ನು ಪ್ರಧಾನ ಪಠ್ಯವೆಂದು ಗುರುತಿಸಿದರಲ್ಲದೆ, ಈ ಪಠ್ಯದ ವಿಚಾರಗಳು ಎಲ್ಲೆಡೆಯೂ ಹಲವು ಬಗೆಗಳಲ್ಲಿ ಹರಡುವಂತೆ ನೋಡಿಕೊಂಡರು. (ಥಿಯೋಸೊಫಿ: 19ನೇ ಶತಮಾನದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಹುಟ್ಟಿಕೊಂಡ ಹೆಸ ಧಾರ್ಮಿಕ ಪಂಥ. ಯುರೋಪಿನ ಕ್ರಿಶ್ಚಿಯನ್ ಪೂರ್ವ ಧಾರ್ಮಿಕ ನಂಬಿಕೆಗಳೊಂದಿಗೆ ಬೌದ್ಧ ಹಾಗೂ ಹಿಂದೂ ಧಾರ್ಮಿಕ ಚಿಂತನೆಗಳು ಕೂಡ ಈ ಪಂಥವನ್ನು ಪ್ರಭಾವಿಸಿತ್ತು. ಥಿಯೋಸೋಫಿಕಲ್ ಸೊಸೈಟಿಯ ಮುಖ್ಯಕಚೇರಿ ಚೆನ್ನೈನ ಅಡೈಯಾರ್‌ನಲ್ಲಿದೆ – ಅನುವಾದಕ). ಕೆಲವರು ಈ ಗ್ರಂಥವನ್ನು, ಸುಪ್ತವಾಗಿರುವ ಮಹಾನ್ ಚಿಂತನೆಗಳನ್ನು ಸಾರುವ ಸಾಂಕೇತಿಕ ನಿರೂಪಣೆಯೆಂದು (ಅಲೆಗೊರಿ) ಬಗೆದರು. ಹಾಗಾಗಿ ಸ್ವಾಭಾವಿಕವಾಗಿಯೇ ಗೀತೆಯ ಚರಿತ್ರೆಯನ್ನು ಕಡೆಗಣಿಸಲಾಯಿತು. ಯೇಟ್ಸ್, ಎಲಿಯಟ್ ಹಾಗೂ ಕ್ರಿಸ್ಟಾಫರ್ ಐಶರ್‌ವುಡ್ – ಇವರೆಲ್ಲರೂ ಗೀತೆಯ ಸಾಂಕೇತಿಕ ನಿರೂಪಣೆಯನ್ನು ಒಪ್ಪಿ, ಬಹಳ ಹುಮ್ಮಸ್ಸಿನಿಂದ ಪ್ರಚಾರ ಮಾಡಿದರು.

ಇನ್ನು, ರಾಷ್ಟ್ರೀಯವಾದಿಗಳಾದ ಅರೋಬಿಂದೋ ಮತ್ತು ತಿಲಕ್ ಅವರಿಗೆ ಕೂಡ ಗೀತೆಯ ಆ ನಿರೂಪಣೆಯು ಆಪ್ಯಾಯಮಾನವಾಗಿತ್ತು. ಕಾರಣ, ಇದನ್ನು ಬಳಸಿಕೊಂಡು, ತಮ್ಮ ಹಕ್ಕು ಹಾಗೂ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುವವರ ಕರ್ತವ್ಯವೆಂಬ ಹೆಸರಿನಲ್ಲಿ ಹಿಂಸಾತ್ಮಕ ರಾಜಕೀಯ ನಡೆಯನ್ನು ಸಮರ್ಥಿಸಿಕೊಳ್ಳಬಹುದಾಗಿತ್ತು. ಇದರ ಅರ್ಥ, ವಸಾಹತುಶಾಹಿ ಆಳ್ವಿಕೆಯು ದುಷ್ಟ ಎಂದಾದರೆ, ಅದರ ವಿರುದ್ಧ ಬಳಸಲಾಗುವ ಹಿಂಸೆಯು ಸಮರ್ಥನೀಯ ಎಂದಾಗುತ್ತದೆ. ವಸಾಹತು ವಿರೋಧಿ ರಾಷ್ಟ್ರೀಯತೆಯು ವಸಾಹತುಶಾಹಿ ಸರಕಾರಕ್ಕೆ ತೋರಿದ ಭಿನ್ನಮತದ ಒಂದು ಸ್ವರೂಪ. ಗೀತೆಯ ವಿಚಾರಕ್ಕೆ ಬರುವುದಾದರೆ, ವ್ಯಕ್ತಿಯ ಮುಕ್ತಿ ಹಾಗೂ ಹಲವು ಸಮಸ್ಯೆಗಳನ್ನು ಎದುರುಗೊಂಡಾಗ ವ್ಯಕ್ತಿಯಲ್ಲಾಗುವ ಗೊಂದಲಗಳೇ ಆ ಗ್ರಂಥದ ಕೇಂದ್ರವೆಂದು ಹೇಳಬಹುದು. ಸಮಸ್ಯೆಯನ್ನು ಸಾಮಾಜಿಕ ಸ್ತರದಲ್ಲಿ ಬಗೆಹರಿಸುವ ಆಸಕ್ತಿಯನ್ನು ಭಗವದ್ಗೀತೆ ಹೆಂದಿಲ್ಲ. ಪರ್ಯಾಯ ಸಮಾಜವನ್ನೇನೂ ಅದು ಕಟ್ಟಲು ಹೆರಡುವುದಿಲ್ಲ.

ಹಿಂಸೆ ಮತ್ತು ರಾಜಕೀಯ ನಡೆಯ ವಿಚಾರ ಬಂದಾಗೆಲ್ಲ ಭಗವದ್ಗೀತೆಗೆ ಮೊರೆಹೆಗುವ ಪ್ರವೃತ್ತಿಯು ನಿಜಕ್ಕೂ ಕುತೂಹಲಕಾರಿಯಾಗಿದೆ. ಮಹಾಭಾರತದ ಶಾಂತಿ ಪರ್ವದ 12ನೇ ಸರ್ಗವು ಈ ಎರಡೂ ವಿಚಾರಗಳನ್ನು ಚರ್ಚಿಸಲು ಹೆಚ್ಚು ಸೂಕ್ತವಾದದ್ದೆಂದು ಕೆಲವರು ಗುರುತಿಸಿದ್ದಾರೆ. ಮಹಾಕಾವ್ಯದ ಈ ಭಾಗವು ನಂತರದ ಸೇರ್ಪಡೆಯೆಂದೂ, ಇದು ನಡೆದದ್ದು ಮೌರ್ಯೋತ್ತರ ಕಾಲದಲ್ಲೆಂದೂ ಭಾವಿಸಲಾಗಿದೆ. ಈ ಸರ್ಗದ ಪ್ರಕಾರ, ಕುರುಕ್ಷೇತ್ರ ಯುದ್ಧದ ಬಳಿಕ ಯುಧಿಷ್ಠಿರನು ರಾಜತ್ವವನ್ನು ನಿರಾಕರಿಸಿ, ಕಾಡಿಗೆ ಹೋರಟು ನಿಂತಿದ್ದ. ಇವನ ಪ್ರಕಾರ ರಾಜತ್ವವು, ರಾಜಬೇಟೆಯಿಂದ ತೊಡಗಿ ಕೊನೆಯೇ ಇಲ್ಲದ ದಿಗ್ವಿಜಯಗಳವರೆಗೆ, ಹಲವು ರೀತಿಯ ಹಿಂಸೆ ಮತ್ತು ಕೊಲೆಯನ್ನು ಒಳಗೊಂಡಿರುತ್ತದೆ. ಯುಧಿಷ್ಠಿರನಿಗೆ ಇವ್ಯಾವುದರ ಬಗ್ಗೆಯೂ ಸಮ್ಮತಿ ಇರಲಿಲ್ಲ.

ಕ್ಷತ್ರಿಯರಂಥ ಕೆಲವರಿಗೆ ಇತರರನ್ನು ಕೊಲ್ಲುವುದು ಕರ್ತವ್ಯ ಎಂಬ ಅಭಿಪ್ರಾಯವಿದ್ದ ಹೊತ್ತಲ್ಲೇ ಯುದ್ಧವನ್ನು ಧಾರ್ಮಿಕವೆಂದು ಬಣ್ಣಿಸುವುದನ್ನು ಯುಧಿಷ್ಠಿರನು ಪ್ರಶ್ನಿಸಿದ. ಇವನ ಅಜ್ಜ ಭೀಷ್ಮನ ದೃಷ್ಟಿ ಬೇರೆಯಾಗಿತ್ತು. ಯುದ್ಧಭೂಮಿಯಲ್ಲಿ, ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಭೀಷ್ಮನು, ತನ್ನ ರಾಜ್ಯವನ್ನು ಕಾಯುವ ಮತ್ತು ರಕ್ಷಿಸುವ ಸಲುವಾಗಿ ರಾಜನೊಬ್ಬ ಕೊಲ್ಲುವುದನ್ನು ಸಮರ್ಥಿಸಿದ. ಇವರೀರ್ವರ ನಡುವಿನ ಸಂವಾದವು ಚರ್ಚೆಯ ಮೂಲಕ ಭಿನ್ನಮತವನ್ನು ತೋರಿಸುವ ಉತ್ತಮ ನಿದರ್ಶನವಾಗಿದೆ. ಯುಧಿಷ್ಠಿರನು ಕೊನೆಯಲ್ಲಿ, ಕೆಲವರ ಅಭಿಮತದಂತೆ ಒಲ್ಲದ ಮನಸ್ಸಿನಿಂದ, ಭಾರ ಹೃದಯದಿಂದ ರಾಜನಾಗಲು ಒಪ್ಪುತ್ತಾನೆ.

ಅಹಿಂಸೆಯು ಯಾವುದೇ ಷರತ್ತುಗಳಿಲ್ಲದೆ ನಿಷ್ಠುರವಾಗಿ ಪಾಲಿಸಬೇಕಾದ ತತ್ವವೆಂದು ಭಾವಿಸುವವರು ಗೀತೆಯು ನಿರೂಪಿಸುವ, ಷರತ್ತುಗಳಿಗೆ ಒಳಪಡುವ ಅಹಿಂಸೆಯ ತತ್ವವನ್ನೂ, ಅದರ ಪ್ರತಿಪಾದಕರನ್ನೂ ಸಹಜವಾಗಿಯೇ ಒಪ್ಪುವುದಿಲ್ಲ. ಯುಧಿಷ್ಠಿರನಿಗೆ ಹಿಂಸೆಯ ವಿರುದ್ಧ ನೈತಿಕ ಹಾಗೂ ಮೌಲಿಕ ಆಕ್ಷೇಪಣೆಗಳಿವೆ. ಕೆಲವು ವಿದ್ವಾಂಸರ ಪ್ರಕಾರ ಭೀಷ್ಮ ಹಾಗೂ ಯುಧಿಷ್ಠಿರನ ನಡುವಿನ ಈ ಚರ್ಚೆಯು, ಆ ಕಾಲದಲ್ಲಿ ಪ್ರಚಲಿತವಿದ್ದ ಹಿಂಸೆ-ಅಹಿಂಸೆಯ ಚರ್ಚೆಯನ್ನೇ ಪ್ರತಿಬಿಂಬಿಸುತ್ತದೆ. ಅಶೋಕನು, ತನ್ನ ’ಧಮ್ಮ’ದ ಪರಿಕಲ್ಪನೆಯಲ್ಲಿ ’ಅಹಿಂಸೆ’ಗೆ ಉನ್ನತ ಸ್ಥಾನ ನೀಡಿದ್ದು, ಈ ಚರ್ಚೆಯು ಬಿರುಸು ಪಡೆಯಲು ಕಾರಣವಾಯಿತು. (ಹೆಚ್ಚಿನ ಮಾಹಿತಿಗೆ ನೋಡಿ: ಜೆ ಎಲ್ ಫಿಟ್ಸ್‌ಜೆರಾಲ್ಡ್ ಅವರ ಕೃತಿಗಳು ಹಾಗೂ ಎನ್ ಸಟ್ಟನ್ ಅವರ ’ರೀಡಿಂಗ್ಸ್’, ಸೆಕ್ಷನ್ ಒಂಬತ್ತು). ಅಹಿಂಸೆಗೂ, ಅದನ್ನು ಸುತ್ತುವರಿಯುವ ಷರತ್ತುಗಳ ಸ್ವರೂಪಕ್ಕೂ ನಡೆಯುವ ಈ ಸಂವಾದದಲ್ಲಿ ಅಹಿಂಸೆ ಎಂಬ ತತ್ವವು ಕೇಂದ್ರಸ್ಥಾನ ಪಡೆದಿದೆ. ಇದು, ಆಗ ಪ್ರಚಲಿತವಿದ್ದ ಶ್ರಮಣರ ಚರ್ಚೆ ಮತ್ತು ತಾತ್ವಿಕ ಚಿಂತನೆಗಳಿಗೆ ಕೊಂಚ ರಿಯಾಯಿತಿ ನೀಡಲಾಗಿತ್ತು (ಅಂದರೆ, ವೈದಿಕರ ಮಹಾಕಾವ್ಯಗಳಲ್ಲೂ ಶ್ರಮಣರ ಚಿಂತನೆಗಳಿಗೆ ಕೊಂಚ ಸ್ಥಳಾವಕಾಶ ನೀಡಲಾಗಿತ್ತು – ಅನುವಾದಕ) ಎಂಬುದರ ಸೂಚಕವೇ? ಬುದ್ಧನ ವಿಷಯಕ್ಕೆ ಬಂದಾಗ ಗಾಂಧಿ ನೆಹರೂ ಅವರಿಗಿಂತ ಭಿನ್ನವಾಗಿದ್ದರು. ಬುದ್ಧ ಮತ್ತು ಬುದ್ಧಧಮ್ಮದಲ್ಲಿ ಗಾಂಧಿಯ ಆಸಕ್ತಿ ಸೀಮಿತವಾಗಿತ್ತು. ಅವರಿಗೆ, ಚರಿತ್ರೆಯ ಅನುಕ್ರಮದ ಓದಿನಲ್ಲೂ ಹೆಚ್ಚು ಆಸಕ್ತಿ ಇರಲಿಲ್ಲ. ಚರಿತ್ರೆ ಎಂಬ ವಿಷಯವು ನೆಹರೂರನ್ನು ಬೌದ್ಧಿಕವಾಗಿ ಪ್ರಚೋದಿಸಿದಷ್ಟು ಗಾಂಧಿಯನ್ನು ಪ್ರಚೋದಿಸಲಿಲ್ಲ.

ನಮ್ಮ ಚರಿತ್ರೆಯಲ್ಲಿ, ಹಿಂಸೆ ಮತ್ತು ಅಸಹಿಷ್ಣುತೆಯು ಮೆರೆದ ಸಂದರ್ಭಗಳಿದ್ದವು ಎನ್ನುವುದು ನಿರ್ವಿವಾದ. ಅಲ್ಲದೆ, ಅಹಿಂಸಾತ್ಮಕವಾಗಿ ಭಿನ್ನಮತವನ್ನು ತೋರುವ ಯುಕ್ತ ಪರಂಪರೆಗಳೂ ಬೆಳೆದುಬಂದವೆಂಬುವುದೂ ಅಷ್ಟೇ ವಿವಾದಾತೀತ. ಈ ಅಹಿಂಸಾತ್ಮಕ ಭಿನ್ನಮತದ ಸ್ವರೂಪಗಳೇನಿವೆ, ಅವು ಸಮಾಜ ಬದಲಾದಂತೆ ಬದಲಾಗಿವೆ. ಆ ಸ್ವರೂಪಗಳನ್ನು ನಾವು ಗುರುತಿಸಬೇಕು ಹಾಗೂ ಅವು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಬಳಕೆಯಾದವೆಂಬುದನ್ನು ಮನಗಾಣಬೇಕು. ಗಾಂಧಿಯು ಕೂಡ, ಈ ಹಿಂದೆ ಹಲವರು ಮಾಡಿದಂತೆ, ಭಿನ್ನಮತದ ವಿಭಿನ್ನ ರೂಪವೊಂದನ್ನು ಸೃಷ್ಟಿಸುತ್ತಾರೆ. ರಾಜಕೀಯ ಹಿಂಸೆಯ ಕುರಿತು ಯುಧಿಷ್ಠಿರನು ಆಡುವ ಮಾತುಗಳಲ್ಲಿ ಬಹುಶಃ ಈ ಅಂಶವು ಇಂಗಿತವಾಗಿದೆ – ಯಾವಾಗೆಲ್ಲ ಧಾರ್ಮಿಕ ಚಿಂತನೆ ಹಾಗೂ ನಿರ್ಣಯಗಳು ರಾಜಕೀಯ ಚಟುವಟಿಕೆಗಳ ಕಾರ್ಯಭಾರಿಗಳು (ಏಜೆನ್ಸಿಗಳು) ಆಗುತ್ತವೆಯೋ, ಆವಾಗೆಲ್ಲ ಆ ಧಾರ್ಮಿಕ ಚಿಂತನೆಗಳ ಮೂಲ ಉದ್ದೇಶವೇ ಬದಲಾಗುತ್ತದೆ. ರಾಜಕೀಯ ಎನ್ನುವುದು ಚಿಂತನೆ ಮತ್ತು ನಡೆಯನ್ನು ನಿರ್ಧರಿಸುತ್ತದೆ. ಭಿನ್ನಮತವನ್ನು ಹೆಂದುವ, ಅಸಮ್ಮತಿಯನ್ನು ಸೂಚಿಸುವ, ವಾಗ್ವಾದವನ್ನು ನಡೆಸುವ ಹಕ್ಕಿನ ಮುಂದುವರಿಕೆಯನ್ನು, ಅವುಗಳನ್ನು ಹೇಗೆ ನಿರೂಪಿಸಲಾಗಿದೆಯೋ ಆಯಾ ರೂಪಗಳಲ್ಲಿ ನಾವು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಸತ್ಯಾಗ್ರಹ ಎನ್ನುವುದು ಅಂಥಾ ಒಂದು ಪರಿಣಾಮಕಾರಿ ರೂಪವಾಗಿದೆ.

(ಈ ಪ್ರಬಂಧವನ್ನು 2020ರಲ್ಲಿ ಪ್ರಕಟವಾದ ರೊಮಿಲಾ ಥಾಪರ್ ಅವರ ಸುದೀರ್ಘ ಪ್ರಬಂಧ ಪುಸ್ತಕ ’ಡಿಸ್ಸೆಂಟ್’ನಿಂದ ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಅನುಮತಿಯಿತ್ತ ಸೀಗಲ್ ಬುಕ್ಸ್ ಪ್ರಕಾಶಕರಿಗೆ ಧನ್ಯವಾದಗಳು)

ರೋಮಿಲಾ ಥಾಪರ್

ರೋಮಿಲಾ ಥಾಪರ್
ಭಾರತದ ಖ್ಯಾತ ಇತಿಹಾಸ ತಜ್ಞರು. ಜೆಎನ್‌ಯುವಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವುದಲ್ಲದೆ, ವಿದೇಶಗಳ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದಾರೆ. ’ಅರ್‍ಲಿ ಇಂಡಿಯನ್ಸ್’, ’ಅಶೋಕ ಅಂಡ್ ಡಿಕ್ಲೈನ್ ಆಫ್ ಮಯೂರಾಸ್’, ’ದ ಪಾಸ್ಟ್ ಬಿಫೋರ್ ಅಸ್’, ’ದ ಪಾಸ್ಟ್ ಆಸ್ ಪ್ರಸೆಂಟ್’ ಹೀಗೆ ಇತಿಹಾಸದ ಬಗ್ಗೆ ಅವರು ಬರೆದಿರುವ ಹತ್ತಾರು ಪುಸ್ತಕಗಳು ನಮ್ಮ ಚರಿತ್ರೆಯ ಬಗ್ಗೆ ಹೊಸ ವ್ಯಾಖ್ಯಾನವನ್ನೇ ನೀಡಿವೆ.

(ಕನ್ನಡಕ್ಕೆ): ಅಮರ್ ಹೊಳೆಗದ್ದೆ


ಇದನ್ನೂ ಓದಿ: ಮೋದಿ ಎದುರು ಗಾಂಧಿತತ್ವಗಳ ಅಗತ್ಯತೆ ಸ್ಮರಿಸಿದ ಅಮೆರಿಕ ಅಧ್ಯಕ್ಷ ಬೈಡನ್‌

LEAVE A REPLY

Please enter your comment!
Please enter your name here