Homeಅಂತರಾಷ್ಟ್ರೀಯಇಸ್ರೇಲ್ ನಡೆಸಿದ ಹಂತಹಂತದ ಮಾರಣಹೋಮದ ಸಂಕ್ಷಿಪ್ತ ಇತಿಹಾಸ

ಇಸ್ರೇಲ್ ನಡೆಸಿದ ಹಂತಹಂತದ ಮಾರಣಹೋಮದ ಸಂಕ್ಷಿಪ್ತ ಇತಿಹಾಸ

- Advertisement -
- Advertisement -

ಸೆಪ್ಟೆಂಬರ್ 2006ರಲ್ಲಿ “ದಿ ಇಲೆಕ್ಟ್ರಾನಿಕ್ ಇಂತಿಫಾದ”ಕ್ಕೆ ನಾನು ಬರೆದಿದ್ದ ಲೇಖನದಲ್ಲಿ ಗಾಜಾ ಪಟ್ಟಿಗೆ ಸಂಬಂಧಿಸಿದಂತೆ ಇಸ್ರೇಲಿನ ನರಹತ್ಯೆಯ ಧೋರಣೆಯ ಕುರಿತು ಹೇಳಿದ್ದೆ.

ಪ್ರಸ್ತುತ ಗಾಜಾದ ಮೇಲೆ ನಡೆಯುತ್ತಿರುವ ಇಸ್ರೇಲಿನ ದಾಳಿಯು, ಅದರೆ ಈ ಧೋರಣೆಗಳು ಅಡೆತಡೆಯಿಲ್ಲದೆ ಮುಂದುವರಿಯುತ್ತಿರುವುದನ್ನು ತೋರಿಸುತ್ತದೆ. ಈ ಪದವ್ಯಾಖ್ಯೆಯು ಬಹಳ ಮುಖ್ಯ ಏಕೆಂದರೆ ಅದು- ಆಗ ಮತ್ತು ಈಗಲೂ- ಒಂದು ಹೆಚ್ಚು ವಿಶಾಲವಾದ ಐತಿಹಾಸಿಕ ಸಾಂದರ್ಭಿಕ ಹಿನ್ನೆಲೆಯಲ್ಲಿ ಇಸ್ರೇಲಿನ ಬರ್ಬರ ಕೃತ್ಯವನ್ನು ಸೂಕ್ತವಾಗಿ ಗುರುತಿಸುತ್ತದೆ.

ಈ ಪಟ್ಟಿಯಲ್ಲಿ ಇಸ್ರೇಲಿ ದಾಳಿಯಿಂದಾದ ವಿನಾಶ ಮತ್ತು ಮಾರಣಹೋಮದ ಬಗ್ಗೆ ಮಹತ್ವದ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಇಲ್ಲದಿರುವುದು ಗಾಜಾದಲ್ಲಿನ ಮತ್ತು ಪ್ಯಾಲೆಸ್ತೀನಿನಲ್ಲಿ ಇತರೆಡೆ ಇರುವ ಜನ ನಿರಾಶೆ ಹೊಂದುವಂತೆ ಮಾಡಿದೆ. ಕ್ರಮ ಕೈಗೊಳ್ಳಲು ಅಸಮರ್ಥತೆ ಅಥವಾ ಒಪ್ಪಿಗೆಯಿಲ್ಲದಿರುವಿಕೆ ಮುಖ್ಯವಾಗಿ ಗಾಜಾ ಬಿಕ್ಕಟ್ಟಿನ ಬಗ್ಗೆ ಇಸ್ರೇಲಿನ ಕಥಾನಕ ಮತ್ತು ವಾದಸರಣಿಯ ಒಪ್ಪಿಗೆಯಂತೆ ಕಾಣುತ್ತದೆ. ಗಾಜಾದಲ್ಲಿನ ಸದರಿ ಮಾರಣಹೋಮದ ಬಗ್ಗೆ ಇಸ್ರೇಲ್ ಒಂದು ಸ್ಪಷ್ಟ ಕಥಾನಕವನ್ನು ಸೃಷ್ಟಿಸಿದೆ: ಯಹೂದಿಗಳ ಪ್ರಭುತ್ವದ ಮೇಲೆ ನಡೆಸಿದ ಅಪ್ರಚೋದಿತ ಕ್ಷಿಪಣಿ ದಾಳಿಯಿಂದ ಉಂಟಾದ ದುರಂತವಿದು, ಇದಕ್ಕೆ ಇಸ್ರೇಲ್ ಸ್ವರಕ್ಷಣೆಗಾಗಿ ಪ್ರತಿಕ್ರಿಯಿಸಲೇಬೇಕಿತ್ತು.

ಇಸ್ರೇಲ್ ಬಳಸಿದ ಸೇನಾಬಲದ ಮಟ್ಟದ ಬಗ್ಗೆ ಮುಖ್ಯವಾಹಿನಿ ಮಾಧ್ಯಮ, ಅಕೆಡೆಮಿಕ್ ವಲಯ ಮತ್ತು ರಾಜಕಾರಣಿಗಳು ತಮ್ಮ ಕಸಿವಿಸಿ ವ್ಯಕ್ತಪಡಿಸಿದರೂ, ಇಸ್ರೇಲಿನ ವಾದಸರಣಿಯನ್ನು ಅವರು ಒಪ್ಪುತ್ತಾರೆ. ಸೈಬರ್-ಚಳವಳಿ ಮತ್ತು ಬದಲಿ ಸ್ವತಂತ್ರ ಮಾಧ್ಯಮಗಳು ಇಸ್ರೇಲಿನ ಕಥಾನಕವನ್ನು ಸಂಪೂರ್ಣವಾಗಿ ನಿರಾಕರಿಸುತ್ತವೆ. ಅಲ್ಲಿ ಇಸ್ರೇಲಿನ ಕ್ರಮವನ್ನು ಯುದ್ಧ ಅಪರಾಧವೆಂದು ಖಂಡಿಸುವುದು ವ್ಯಾಪಕವಾಗಿದೆ ಮತ್ತು ಒಮ್ಮತದಿಂದ ಕೂಡಿದೆ.

ಮೇಲಿನ ಎರಡು ವಿಶ್ಲೇಷಣೆಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ (ಮೊದಲನೆಯದಕ್ಕೆ ಮತ್ತು ಎರಡನೆಯದಕ್ಕೆ), ಗಾಜಾದಲ್ಲಿ ಸದ್ಯದ ಇಸ್ರೇಲ್ ಕ್ರಮವನ್ನು, ಸೈದ್ಧಾಂತಿಕ ಮತ್ತು ಐತಿಹಾಸಿಕ ಸಂದರ್ಭದಲ್ಲಿಟ್ಟು ಆಳವಾದ ಮತ್ತು ಗಾಢವಾದ ರೀತಿಯಲ್ಲಿ ಅಧ್ಯಯನ ಮಾಡಲು ಚಳವಳಿಕಾರರು ಸಿದ್ಧರಿರುವುದು. ಗಾಜಾದಲ್ಲಿ ಸದರಿ ಇಸ್ರೇಲಿ ದಾಳಿ ಮತ್ತು 2006ರಿಂದ ನಡೆಸಿರುವ ಮೂರು ದಾಳಿಗಳ ಐತಿಹಾಸಿಕ ಮತ್ತು ಸಾಂದರ್ಭಿಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ಇಸ್ರೇಲ್‌ನ ಮಾರಣಹೋಮದ ನೀತಿಯನ್ನು ಅದು ಹೊರಗೆಡವುತ್ತದೆ. ದೊಡ್ಡ ಮಟ್ಟದ ಮಾರಣಹೋಮದ ಹಂತಹಂತದ ನೀತಿ, ಬೇಕಾಬಿಟ್ಟಿತನದ ಧೋರಣೆಯಿಂದ ಉತ್ಪತ್ತಿಯಾಗಿರದೆ, ಪ್ಯಾಲೆಸ್ತೀನ್ ಬಗ್ಗೆ ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ 1967ರಲ್ಲಿ ಆಕ್ರಮಸಿಕೊಂಡ ಪ್ರದೇಶದ ಬಗೆಗೆ ಇಸ್ರೇಲಿನ ಸಮಗ್ರ ತಂತ್ರಗಾರಿಕೆಯಿಂದ ಹುಟ್ಟಿರುವುದಾಗಿದೆ.

ಈ ಸಾಂದರ್ಭಿಕ ಹಿನ್ನೆಲೆಯ ಅಗತ್ಯತೆಯನ್ನು ಒತ್ತಿ ಹೇಳಬೇಕಿದೆ, ಏಕೆಂದರೆ, ಇಸ್ರೇಲಿನ ಪ್ರಚಾರ ಯಂತ್ರಾಂಗವು ಮತ್ತೆಮತ್ತೆ ತನ್ನ ಧೋರಣೆಯನ್ನು ಸಾಂದರ್ಭಿಕ ಹಿನ್ನೆಲೆಯಿಂದ ಹೊರಗಿಟ್ಟು (ಅಸಾಂಧರ್ಬಿಕವಾಗಿ) ವಿವರಿಸಲು ಯತ್ನಿಸುತ್ತಿರುವುದರಿಂದ ಮತ್ತು ಪ್ರತಿಯೊಂದು ಹೊಸ ವಿನಾಶದ ಅಲೆಯಲ್ಲಿ ತಾನು ಕಂಡುಕೊಂಡ ನೆಪವನ್ನು, ಪ್ಯಾಲೆಸ್ತೀನ್‌ನ ಹತ್ಯಾಭೂಮಿಯಲ್ಲಿ ವಿವೇಚನಾರಹಿತ ಹತ್ಯೆಗಳ ಇನ್ನೊಂದು ಸರಣಿಗೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿರುವ ಕಾರಣದಿಂದ.

ಸಾಂದರ್ಭಿಕ ಹಿನ್ನೆಲೆ

ತನ್ನ ಕ್ರೂರ ಧೋರಣೆಯನ್ನು ಪ್ಯಾಲೆಸ್ತೀನ್ ಕೃತ್ಯಗಳಿಗೆ ತಾತ್ಕಾಲಿಕ ಪ್ರತಿಕ್ರಿಯೆ ಎಂದು ಬಿಂಬಿಸುವ ಝಿಯೋನಿಸ್ಟ್ (Zionist- ಪ್ಯಾಲೆಸ್ತೀನಿನಲ್ಲಿ ಯಹೂದಿಗಳಿಗೆ ನೆಲೆ ನೀಡಬೇಕೆಂಬ ಹೋರಾಟ) ಕಾರ್ಯತಂತ್ರವು ಪ್ಯಾಲೆಸ್ತೀನಿನಲ್ಲಿ ಝಿಯೋನಿಸ್ಟ್ ಅಸ್ತಿತ್ವದಷ್ಟೇ ಹಳೆಯದಾಗಿದೆ. ತೀರಾ ಸಣ್ಣ ಪ್ರಮಾಣದ ಮೂಲನಿವಾಸಿ ಪ್ಯಾಲೆಸ್ತೀನಿಯರನ್ನಷ್ಟೇ ಹೊಂದಿರುವ ಭವಿಷ್ಯದ ಪ್ಯಾಲೆಸ್ತೀನಿನ ಝಿಯೋನಿಸ್ಟ್ ಪರಿಕಲ್ಪನೆಯ ಸಮರ್ಥನೆಗೆ ಮತ್ತೆಮತ್ತೆ ಇದನ್ನು ಬಳಸಲಾಗಿದೆ.

ಈ ಗುರಿಯನ್ನು ಸಾಧಿಸುವ ವಿಧಾನವು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದ್ದರೂ, ಸೂತ್ರ ಮಾತ್ರ ಹಾಗೆಯೇ ಉಳಿದಿದೆ: ಪ್ಯಾಲೆಸ್ತೀನ್ ದೇಶದ ಝಿಯೋನಿಸ್ಟ್ ಪರಿಕಲ್ಪನೆ ಅಥವಾ ದೃಷ್ಟಿಕೋನವು ಏನೇ ಆಗಿರಲಿ, ಅದು ಗಮನಾರ್ಹ ಸಂಖ್ಯೆಯಲ್ಲಿ ಪ್ಯಾಲೆಸ್ತೀನಿಯರ ಅಸ್ತಿತ್ವ ಇಲ್ಲದಿದ್ದಲ್ಲಿ ಮಾತ್ರವೇ ಸಾಧ್ಯವಾಗುವುದು. ಈಗಿನ ದಿನಗಳಲ್ಲಂತೂ- ಲಕ್ಷಾಂತರ ಪ್ಯಾಲೆಸ್ತೀನಿಯರು ವಾಸಿಸುವ ಐತಿಹಾಸಿಕ ಪ್ಯಾಲೆಸ್ತೀನ್‌ಅನ್ನು ಇಡಿಯಾಗಿ ವ್ಯಾಪಿಸಿಕೊಳ್ಳುವ ಪರಿಕಲ್ಪನೆ ಇಸ್ರೇಲ್‌ದಾಗಿದೆ.

ಪ್ರಸ್ತುತ ನರಹತ್ಯೆ ಅಥವಾ ಹತ್ಯಾಕಾಂಡದ ಅಲೆಯೂ ಕೂಡಾ, ಹಿಂದಿನವುಗಳಂತೆಯೇ ಸಾಂದರ್ಭಿಕ ಹಿನ್ನೆಲೆಯನ್ನು ಹೊಂದಿದೆ. ಯುಎಸ್‌ಎ ಕೂಡಾ ಆಕ್ಷೇಪ ವ್ಯಕ್ತಪಡಿಸಲಾಗದ ಐಕ್ಯ ಸರಕಾರ ಒಂದನ್ನು ರಚಿಸುವ ಪ್ಯಾಲೆಸ್ತೀನಿನ ಪ್ರಯತ್ನವನ್ನು ವಿಫಲಗೊಳಿಸುವ ಪ್ರಯತ್ನದಲ್ಲಿ ಇದು ಹುಟ್ಟಿಕೊಂಡಿದೆ.

ಯುಎಸ್‌ಎಯ ರಾಜ್ಯಾಂಗ ಕಾರ್ಯದರ್ಶಿ ಜಾನ್ ಕೆರ್ರಿಯವರ ಹತಾಶ “ಶಾಂತಿ” ಸಂಧಾನದ ಕುಸಿದು ಬಿದ್ದದ್ದು, ಆಕ್ರಮಣವನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ಯಾಲೆಸ್ತೀನಿನ ಮನವಿಗೆ ಒಂದು ನ್ಯಾಯಸಮ್ಮತೆಯನ್ನು ಒದಗಿಸಿತ್ತು. ಅದೇಹೊತ್ತಿಗೆ ವಿವಿಧ ಪ್ಯಾಲೆಸ್ತೀನ್ ಗುಂಪುಗಳು ಮತ್ತು ಕಾರ್ಯಕ್ರಮಗಳ ನಡುವೆ ಮತ್ತೊಮ್ಮೆ ಸಮನ್ವಯದ ಧೋರಣೆಯನ್ನು ಹೊಂದಿದ ಕಾರ್ಯತಂತ್ರ ರೂಪಿಸುವ ಐಕ್ಯತಾ ಸರಕಾರದ ಜಾಗರೂಕ ಪ್ರಯತ್ನಕ್ಕೆ ಅಂತಾರಾಷ್ಟ್ರೀಯ ಕೃಪಾಶೀರ್ವಾದವು ದೊರೆತಿತ್ತು.

ಜೂನ್ 1967ರಿಂದಲೂ, ಇಸ್ರೇಲ್ ತಾನು ಆ ವರ್ಷ ಆಕ್ರಮಿಸಿಕೊಂಡ ಭೂಪ್ರದೇಶಗಳನ್ನು, ಅಲ್ಲಿ ವಾಸಿಸುವ ಮೂಲನಿವಾಸಿ ಪ್ಯಾಲೆಸ್ತೀನಿಯರಿಗೆ ಹಕ್ಕುಗಳನ್ನು ಹೊಂದಿರುವ ನಾಗರಿಕತೆಯನ್ನು ನೀಡದೆಯೇ, ತನ್ನಲ್ಲೇ ಉಳಿಸಿಕೊಳ್ಳಲು ಒಂದು ದಾರಿಯನ್ನು ಹುಡುಕುತ್ತಾ ಬಂದಿದೆ. ಅದು ’ಶಾಂತಿ ಪ್ರಕ್ರಿಯೆ’ಯ ಪ್ರಹಸನದಲ್ಲಿ ಎಲ್ಲಾ ಕಾಲದಲ್ಲಿ ಭಾಗವಹಿಸುತ್ತಾ ಬಂದಿರುವಾಗಲೇ, ನೆಲಮಟ್ಟದಲ್ಲಿ ತನ್ನ ಏಕಪಕ್ಷಿಯ ವಸಾಹತೀಕರಣ ಧೋರಣೆಗಳನ್ನು ಮುಚ್ಚಿಹಾಕಲು ಅಥವಾ ಇನ್ನಷ್ಟು ಕಾಲಾವಕಾಶ ಪಡೆದುಕೊಳ್ಳಲು ಇದನ್ನು ಬಳಸಿಕೊಂಡಿದೆ.

ಕಳೆದ ಕೆಲವು ದಶಕಗಳಿಂದ ಇಸ್ರೇಲ್ ತಾನು ನೇರವಾಗಿ ನಿಯಂತ್ರಿಸಲು ಬಯಸುವ ಮತ್ತು ಪರೋಕ್ಷವಾಗಿ ನಿರ್ವಹಿಸಲು ಬಯಸುವ ಪ್ರದೇಶಗಳನ್ನು ಪ್ರತ್ಯೇಕಿಸಿಕೊಂಡಿದ್ದು, ಜನಾಂಗೀಯ ನಿರ್ಮೂಲನೆ ಮತ್ತು ಆರ್ಥಿಕ ಹಾಗೂ ಭೌಗೋಳಿಕವಾಗಿ ಉಸಿರುಗಟ್ಟಿಸುವುದೂ ಸೇರಿದಂತೆ ಪ್ಯಾಲೆಸ್ತೀನಿ ಜನಸಂಖ್ಯೆಯನ್ನು ಕನಿಷ್ಟ ಮಟ್ಟಕ್ಕೆ ಕತ್ತರಿಸುವ ದೂರಗಾಮಿ ಗುರಿಯನ್ನು ಅದು ಹೊಂದಿದೆ. ಆದುದರಿಂದ ಪಶ್ಚಿಮ ದಂಡೆ (west bank)ಯನ್ನು ’ಜ್ಯೂಯಿಶ್’ ಮತ್ತು ’ಪ್ಯಾಲೆಸ್ತೀನಿಯನ್’ ವಲಯಗಳನ್ನಾಗಿ ಪ್ರತ್ಯೇಕಿಸಲಾಯಿತು- ಪ್ಯಾಲೆಸ್ತೀನಿನ ಬಂಟುಸ್ತಾನ್‌ನ ವಾಸಿಗಳು ಈ ದೊಡ್ಡ ಜೈಲಿನಲ್ಲಿ ತಮ್ಮ ಅವತಾರವನ್ನು ಸಹಿಸಿಕೊಂಡರೆ, ಈ ವಾಸ್ತವದ ಜೊತೆಗೆ ಬಹುತೇಕ ಇಸ್ರೇಲಿಗಳು ಬದುಕಬಲ್ಲರು. ಮೂರನೇ ದಂಗೆ (uprising)ಯನ್ನು ನಿರೀಕ್ಷಿಸದೆಯೇ ಅಥವಾ ಹೆಚ್ಚಿನ ಅಂತಾರಾಷ್ಟ್ರೀಯ ಖಂಡನೆಗೆ ಒಳಪಡದೆಯೇ ಇದನ್ನು ಸಾಧಿಸಲು ಸಾಧ್ಯ ಎಂಬ ಭಾವನೆಯನ್ನು ಪಶ್ಚಿಮ ದಂಡೆ (west bank) ಇರುವ ಭೌಗೋಳಿಕ ಸ್ಥಾನವು ಕನಿಷ್ಟ ಪಕ್ಷ ಇಸ್ರೇಲಿನಲ್ಲಾದರೂ ಹುಟ್ಟಿಸುತ್ತದೆ.

ಗಾಜಾ ಪಟ್ಟಿಯು ತನ್ನ ಭೌಗೋಳಿಕ ರಾಜಕೀಯವಾಗಿ ವಿಶಿಷ್ಟವಾದ ಸ್ಥಾನದ ಕಾರಣದಿಂದಾಗಿ ಇಂತಹ ಪ್ರಯತ್ನಗಳಿಗೆ ಸುಲಭವಾಗಿ ಮಣಿದಿಲ್ಲ. 1994ರಿಂದಲೂ ಮತ್ತು 2000ದ ಪ್ರಾರಂಭದಲ್ಲಿ ಏರಿಯಲ್ ಶೆರೋನ್ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದನಂತರ, ಗಾಜಾವನ್ನು ಮತ್ತಷ್ಟು ಪ್ರತ್ಯೇಕಗೊಳಿಸುವ (ghettoize) ತಂತ್ರಗಾರಿಕೆ ತೀವ್ರವಾಗಿದೆ ಮತ್ತು ಅಲ್ಲಿ ಇಂದು ವಾಸ ಮಾಡುತ್ತಿರುವ 18 ಲಕ್ಷ ಜನರು ಕ್ರಮೇಣ ಶಾಶ್ವತವಾಗಿ ಕಣ್ಮರೆಯಾಗುತ್ತಾರೆ ಎಂದು ಆಶಿಸುವುದೇ ನಡೆದಿದೆ.

ಆದರೆ, ಕತ್ತು ಹಿಸುಕುವಿಕೆ, ಪ್ರತ್ಯೇಕೀಕರಣ, ಉಪವಾಸ ಮತ್ತು ಆರ್ಥಿಕ ಕುಸಿತಗಳ ಪರಿಸ್ಥಿತಿಯಲ್ಲಿ ಜೀವನ ಮುಂದುವರಿಸಲು ನಿರಾಕರಿಸಿ, ಈ “ಗೆಟ್ಟೋ” ಬಂಡುಕೋರತನವಾಗಿ ಪರಿಣಮಿಸಿತು. 1948ರಲ್ಲಾಗಲೀ, 2014ರಲ್ಲಾಗಲೀ ಅದನ್ನು ಈಜಿಪ್ಟ್‌ಗೆ ಸಾಧ್ಯವೇ ಇರಲಿಲ್ಲ. 1948ರಲ್ಲಿ ಉತ್ತರ ನಕಾಬ್ ಮತ್ತು ದಕ್ಷಿಣ ಕರಾವಳಿಯಿಂದ ಹೊರದೂಡಿದ ಲಕ್ಷಾಂತರ ವಲಸಿಗರನ್ನು ಇಸ್ರೇಲ್ ಗಾಜಾ ಪ್ರದೇಶಕ್ಕೆ (ಅದು ಗಾಜಾ ಪಟ್ಟಿ ಆಗುವುದಕ್ಕಿಂತಲೂ ಮೊದಲು) ತಳ್ಳಿತು ಮತ್ತು ಅವರು ಪ್ಯಾಲೆಸ್ತೀನ್ ಇಂದ ಇನ್ನಷ್ಟು ದೂರವಾಗಲಿದ್ದಾರೆ ಎಂದು ನಂಬಿತು.

1967ರ ನಂತರ ಸ್ವಲ್ಪ ಕಾಲದವರೆಗೆ, ಪಶ್ಚಿಮ ದಂಡೆಯನ್ನು, ತನಗೆ ಕೆಳಹಂತದ ಕೆಲಸಗಳನ್ನು ಮಾಡಲು ಕಾರ್ಮಿಕರನ್ನು ಒದಗಿಸುವ ಆದರೆ ಯಾವುದೇ ಮಾನವ ಮತ್ತು ನಾಗರಿಕ ಹಕ್ಕುಗಳಿಲ್ಲದ ಪಟ್ಟಣವಾಗಿ ಇಟ್ಟುಕೊಳ್ಳಲು ಇಸ್ರೇಲ್ ಬಯಸಿತು. ಈ ನಿರಂತರ ಶೋಷಣೆಯನ್ನು ಯಾವಾಗ ಆಕ್ರಮಿತ ಜನರು ಎರಡು ಇಂಟಿಫಾದ್ (ಕಲ್ಲೆಸೆಯುವ ಪ್ರತಿಭಟನೆ)ಗಳ ಮೂಲಕ ಪ್ರತಿರೋಧಿಸಿದರೋ, ಪಶ್ಚಿಮ ದಂಡೆಯನ್ನು, ಯಹೂದಿ ವಸಾಹತುಗಳು ಸುತ್ತುವರಿದಿರುವ ಎರಡು ಬಂಟುಸ್ತಾನ್‌ಗಳಾಗಿ ಇಬ್ಭಾಗ ಮಾಡಲಾಯಿತು, ಆದರೆ ಇದು ಅತಿಸಣ್ಣ ಮತ್ತು ಅತಿದಟ್ಟವಾಗಿದ್ದ ಗಾಜಾ ಪಟ್ಟಿಯಲ್ಲಿ ಸಾಧ್ಯವಾಗಲಿಲ್ಲ. ಹೇಳುವುದಾದರೆ, ಗಾಜಾ ಪಟ್ಟಿಯನ್ನು ಪಶ್ಚಿಮ ದಂಡೆಯನ್ನಾಗಿಸಲು ಇಸ್ರೇಲಿಗಳಿಗೆ ಸಾಧ್ಯವಾಗಲಿಲ್ಲ. ಆದುದರಿಂದ ಅದನ್ನು ಗೆಟ್ಟೋವನ್ನಾಗಿಸಿ ಸುತ್ತುವರಿದರು ಮತ್ತು ಅದು ಪ್ರತಿಭಟಿಸಿದಾಗ, ಅದನ್ನು ಹತ್ತಿಕ್ಕಲು ಸೇನೆಗೆ ತನ್ನ ಅಸಾಧಾರಣ ಮತ್ತು ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿಸಲಾಯಿತು. ಇದೆಲ್ಲದರೆ ಒಟ್ಟು ಮೊತ್ತದ ಪ್ರತಿಕ್ರಿಯೆಯಿಂದ ಹುಟ್ಟಿದ ಅಂತಿಮ ಘಟ್ಟವೇ ಈ ರೀತಿಯ ಮಾರಣಹೋಮ.

ನೆವ

ಮೇ 15ರಂದು ಇಸ್ರೇಲಿ ಪಡೆಗಳು ಪಶ್ಚಿಮ ದಂಡೆಯ ಬೈತುನಿಯಾ ಪಟ್ಟಣದಲ್ಲಿ ಇಬ್ಬರು ಪ್ಯಾಲೆಸ್ತೀನಿ ಯುವಕರನ್ನು ಕೊಂದವು. ಅವರನ್ನು ಒಬ್ಬ ಹೊಂಚು ಗುರಿಕಾರನ (sniper) ಗುಂಡುಗಳು ನಿರ್ದಯವಾಗಿ ಕೊಲ್ಲುವುದನ್ನು ವಿಡಿಯೋ ಒಂದರಲ್ಲಿ ಸೆರೆಹಿಡಿಯಲಾಗಿತ್ತು. ಅವರ ಹೆಸರುಗಳು ನದೀಮ್ ನುವಾರ ಮತ್ತು ಮುಹಮ್ಮದ್ ಅಬು ಅಲ್ ತಾಹಿರ್- ಇತ್ತೀಚಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಇಂತಹ ಹತ್ಯೆಗಳ ದೀರ್ಘ ಪಟ್ಟಿಯಲ್ಲಿ ಅವರ ಹೆಸರುಗಳು ಸೇರಿಕೊಂಡವು.

ಜೂನ್ ತಿಂಗಳಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಪಹರಿಸಲಾಗಿದ್ದ ಇಬ್ಬರು ಅಪ್ರಾಪ್ತರೂ ಸೇರಿದಂತೆ ಹದಿಹರೆಯದ ಇಸ್ರೇಲಿ ಯುವಕರನ್ನು ಕೊಂದುದಕ್ಕೆ ಬಹುಶಃ ಈ ಹತ್ಯೆಗಳು ಪ್ರತೀಕಾರವಾಗಿರಬಹುದು. ಆದರೆ, ಈ ಎಲ್ಲಾ ಶೋಷಕ ಆಕ್ರಮಣದ ಕ್ರೌರ್ಯಗಳಿಗೆ, ಇದು ನೆವವನ್ನು ಒದಗಿಸಿತು- ಮೊದಲಿಗೆ ಪಶ್ಚಿಮ ದಂಡೆಯ ಸೂಕ್ಷ್ಮವಾದ ಏಕತೆಯನ್ನು ಮುರಿಯುವುದಕ್ಕೆ ಮಾತ್ರವೇ ಅಲ್ಲದೆ, “ಶಾಂತಿ ಪ್ರಕ್ರಿಯೆಯನ್ನು” ಕೈಬಿಟ್ಟು, ಮಾನವ ಮತ್ತು ನಾಗರಿಕ ಹಕ್ಕುಗಳ ಮಾನದಂಡದಲ್ಲಿ ಇಸ್ರೇಲ್ ಬಗ್ಗೆ ನಿರ್ಣಯ ಮಾಡುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡುವ ಬಗ್ಗೆ ಪ್ಯಾಲೆಸ್ತೀನ್ ಅಧಿಕಾರ ಸಾಧಿಸಿದ ಐಕ್ಯತೆಯ ನಿರ್ಧಾರವನ್ನು ನಾಶಪಡಿಸಲು ಕೂಡ.

ಈ ಅಪಹರಣ, ಗಾಜಾದಿಂದ ಹಮಾಸ್ ಸಂಘಟನೆಯನ್ನು ನಿರ್ಮೂಲನ ಮಾಡುವ ಹಳೆಯ ಕನಸನ್ನು ಅನುಷ್ಠಾನಗೊಳಿಸಿ, ಗೆಟ್ಟೋವನ್ನು ಮತ್ತೆ ಮೌನವಾಗಿರಿಸಬಹುದೆಂಬುದಕ್ಕೆ ಕೂಡಾ ನೆವವನ್ನು ಒದಗಿಸಿತು.

ಇದನ್ನೂ ಓದಿ: ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ: 117 ಮಕ್ಕಳು ಸೇರಿ 266 ಫೆಲೆಸ್ತೀನಿಯರು ಸಾವು

1994ರಿಂದಲೇ, ಅಂದರೆ ಗಾಜಾ ಪಟ್ಟಿಯಲ್ಲಿ ಹಮಾಸ್ ಅಧಿಕಾರಕ್ಕೆ ಏರುವುದಕ್ಕೆ ಮೊದಲಿನಿಂದಲೇ- ಯಾವುದೇ ಸಾಮೂಹಿಕ ದಂಡನಾ ಕಾರ್ಯಾಚರಣೆಯು- ಈಗ ನಡೆಸಲಾಗುತ್ತಿರುವ ಕಾರ್ಯಾಚರಣೆಯಂತೆಯೇ ಸಾಮೂಹಿಕ ಹತ್ಯೆಗಳು ಮತ್ತು ವಿನಾಶದ ಕಾರ್ಯಾಚರಣೆ ಮಾತ್ರವೇ ಆಗಿರಲು ಸಾಧ್ಯ ಎಂಬುದನ್ನು- ನಿರ್ದಿಷ್ಟವಾಗಿ ಈ ಪಟ್ಟಿಯ ಭೌಗೋಳಿಕ ರಾಜಕೀಯ ಸ್ಥಾನವೇ ಸ್ಪಷ್ಟಗೊಳಿಸಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಅದು ನಿರಂತರ ಹತ್ಯಾಕಾಂಡ. ಈ ಅರಿವು ಆಕಾಶ, ಸಮುದ್ರ ಮತ್ತು ನೆಲದಿಂದ ಏಕಕಾಲಕ್ಕೆ ದಾಳಿ ನಡೆಸುವಂತೆ ಆದೇಶ ನೀಡಿದ ಜನರಲ್‌ಗಳಿಗೆ ಯಾವುದೇ ಹಿಂಜರಿಕೆ ಉಂಟುಮಾಡಲಿಲ್ಲ.

ಐತಿಹಾಸಿಕ ಪ್ಯಾಲೆಸ್ತೀನಿನ ಉದ್ದಗಲಕ್ಕೂ ಪ್ಯಾಲೆಸ್ತೀನಿಯರ ಜನಸಂಖ್ಯೆಯನ್ನು ಕಡಿಮೆ ಮಾಡುವುದು ಈಗಲೂ ಝಿಯೋನಿಸ್ಟ್ ಮುನ್ನೋಟವಾಗಿಯೇ ಉಳಿದಿದೆ. ಗಾಜಾದಲ್ಲಿ ಇದು ತನ್ನ ಅತ್ಯಂತ ಅಮಾನವೀಯವಾದ ರೂಪವನ್ನು ಪಡೆದುಕೊಂಡಿದೆ.

ಹಿಂದಿನಂತೆಯೇ, ಈಗಿನ ಅಲೆಯ ನಿರ್ದಿಷ್ಟ ಸಮಯವು ಕೂಡಾ, ಹೆಚ್ಚುವರಿ ಪರಿಗಣನೆಗಳನ್ನು ಒಳಗೊಂಡ ಪೂರ್ವನಿರ್ಧಾರವೇ ಆಗಿದೆ. ಇಸ್ರೇಲಿನ ಆಂತರಿಕವಾದ ಸಾಮಾಜಿಕ ಕ್ಷೋಭೆಯು 2011ರಲ್ಲಿ ಆರಂಭವಾದದ್ದು ಇನ್ನೂ ಮುಂದುವರಿದಿದೆ. ರಕ್ಷಣಾ ವೆಚ್ಚಗಳನ್ನು ಕಡಿತಗೊಳಿಸಿ, ಸದಾ ಉಬ್ಬುತ್ತಿರುವ ರಕ್ಷಣಾ ಬಜೆಟಿನಿಂದ ಹಣವನ್ನು ಸಾಮಾಜಿಕ ಸೇವೆಗಳಿಗೆ ವರ್ಗಾಯಿಸುವ ಬೇಡಿಕೆ ಸ್ವಲ್ಪ ಸಮಯ ಮುಂದುವರಿದಿತ್ತು. ಸೇನೆಯು ಈ ಸಾಧ್ಯತೆಯನ್ನು ಆತ್ಮಹತ್ಯಾತ್ಮಕ ಎಂದು ಬಣ್ಣಿಸಿತ್ತು. ಸರಕಾರವು ಸೇನಾವೆಚ್ಚಗಳನ್ನು ಕಡಿತಗೊಳಿಸಬೇಕೆಂದು ಕರೆ ನೀಡುವ ಧ್ವನಿಗಳನ್ನು ಅಡಗಿಸಲು ಸೇನಾ ಕಾರ್ಯಾಚರಣೆಗಳಿಗಿಂತ ಪರಿಣಾಮಕಾರಿಯಾದುದು ಬೇರೊಂದಿಲ್ಲ.

ಹಂತಹಂತದ ಹತ್ಯಾಕಾಂಡಗಳ ಹಿಂದಿನ ಹಂತಗಳ ಎಲ್ಲಾ ಸಾಮಾನ್ಯ ಗುಣಲಕ್ಷಣಗಳು ಈ ಅಲೆಯಲ್ಲಿ ಕೂಡಾ ಕಂಡುಬರುತ್ತವೆ. ಒಂದೇ ಒಂದು ಭಿನ್ನಮತದ ಧ್ವನಿಯೂ ಇಲ್ಲದಂತೆ, ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ನಾಗರಿಕರ ಸಾಮೂಹಿಕ ಹತ್ಯೆಗೆ, ಇಸ್ರೇಲಿ ಯಹೂದಿಗಳ ಭಾರೀ ಬೆಂಬಲವನ್ನು ಮತ್ತೊಮ್ಮೆ ಕಾಣಬಹುದಾಗಿದೆ. ಟೆಲ್ ಅವೀವ್‌ನಲ್ಲಿ ಈ ದಾಳಿಗಳನ್ನು ವಿರೋಧಿಸಿ ಸಭೆ ನಡೆಸುವ ಧೈರ್ಯ ತೋರಿದ ಕೆಲವರನ್ನು ಯಹೂದಿ ಗೂಂಡಾಗಳು ಥಳಿಸಿದಾಗ ಪೊಲೀಸರು ಮೂಕಪ್ರೇಕ್ಷಕರಂತೆ ನೋಡಿದರು.

ಅಕೆಡೆಮಿಕ್ ವರ್ಗವು ಎಂದಿನಂತೆಯೇ ಆಡಳಿತ ಯಂತ್ರದ ಭಾಗವಾಗುತ್ತದೆ. ಪ್ರತಿಷ್ಠಿತವಾದ ಖಾಸಗಿ ವಿಶ್ವವಿದ್ಯಾನಿಲಯ “ಇಂಟರ್ ಡಿಸಿಪ್ಲೀನರಿ ಸೆಂಟರ್ ಹರ್ಝಿಲಿಯಾ” ಒಂದು “ನಾಗರಿಕ ಮುಖ್ಯ ಕಚೇರಿ” ಸ್ಥಾಪನೆ ಮಾಡಿದ್ದು, ಇಲ್ಲಿ ವಿದ್ಯಾರ್ಥಿಗಳು ವಿದೇಶಗಳಲ್ಲಿ ಮಾಡಲಾಗುವ ಪ್ರಚಾರ ಅಭಿಯಾನಕ್ಕೆ ತುತ್ತೂರಿಗಳಾಗಿ ಸ್ವಯಂಪ್ರೇರಣೆಯಿಂದ ಸೇರಿಕೊಳ್ಳುತ್ತದೆ. ಸೈಬರ್‌ತಾಣಗಳಲ್ಲಿ ಮತ್ತು ಸ್ವತಂತ್ರ ಮಾಧ್ಯಮಗಳಲ್ಲಿ ಇಸ್ರೇಲಿ ಕಥಾನಕವನ್ನು ಮೂಡುವಂತೆ ಸಹಾಯ ಮಾಡಲು ಹಲವಾರು ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿ ಸಂಘಟನೆಗಳನ್ನು ಧಾರೆಯೆರೆಯುತ್ತಿವೆ.

ಇಸ್ರೇಲಿ ಮಾಧ್ಯಮ ಕೂಡ ಸರಕಾರದ ಹಾದಿಯಲ್ಲೇ ನಿಷ್ಠೆಯಿಂದಿದ್ದು, ಇಸ್ರೇಲ್ ಉಂಟುಮಾಡಿರುವ ಮಹಾಮಾನವ ದುರಂತದ ಬಗ್ಗೆ ಒಂದು ಚಿತ್ರವನ್ನೂ ತೋರಿಸುತ್ತಿಲ್ಲ ಮತ್ತು ಅದೇ ಸಮಯದಲ್ಲಿ “ಜಗತ್ತು ನಮ್ಮನ್ನು ಅರ್ಥಮಾಡಿಕೊಂಡಿದೆ; ಅದು ನಮ್ಮ ಬೆನ್ನಿಗಿದೆ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಮುಟ್ಟಿಸುತ್ತಿದೆ. ಈ ಹೇಳಿಕೆಯು ಒಂದು ಮಟ್ಟದವರೆಗೆ ನಿಜವೇ ಆಗಿದೆ. ಏಕೆಂದರೆ, ಪಶ್ಚಿಮದ ರಾಜಕೀಯ ಪ್ರತಿಷ್ಠಿತರು “ಯಹೂದಿ ದೇಶ”ಕ್ಕೆ ಹಳೆಯ ರಕ್ಷಣೆಯನ್ನು ಮುಂದುವರಿಸಿದ್ದಾರೆ. ದ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್‌ಗೆ, ಗಾಜಾದಲ್ಲಿ ಇಸ್ರೇಲ್ ನಡೆಸಿದ ಅಪರಾಧಗಳನ್ನು ಪರಿಗಣಿಸದಂತೆ ಪಶ್ಚಿಮದ ಸರ್ಕಾರಗಳು ಮನವಿ ಮಾಡಿರುವುದು ಈ ಮಾತಿಗೆ ಸಾಕ್ಷಿ ಒದಗಿಸುತ್ತದೆ.

ಪಶ್ಚಿಮದ ಬಹುತೇಕ ಮಾಧ್ಯಮಗಳು ಇದೇ ಹಾದಿ ಹಿಡಿದಿವೆ ಮತ್ತು ಹೆಚ್ಚುಕಮ್ಮಿ ಇಸ್ರೇಲಿನ ಕ್ರಮಗಳನ್ನು ಸಮರ್ಥಿಸಿಕೊಂಡಿವೆ- ಫ್ರೆಂಚ್ ಮಾಧ್ಯಮಗಳನ್ನೂ ಸೇರಿದಂತೆ, ಅದರಲ್ಲೂ ನಿರ್ದಿಷ್ಟವಾಗಿ ಫ್ರಾನ್ಸ್ 24 ಮತ್ತು ಬಿಬಿಸಿ, ಇವು ನಾಚಿಕೆಯೇ ಇಲ್ಲದಂತೆ ಇಸ್ರೇಲಿನ ಅಪಪ್ರಚಾರವನ್ನು ಗಿಳಿಪಾಠ ಒಪ್ಪಿಸುವುದನ್ನು ಮುಂದುವರಿಸಿವೆ. ಇದು ಅಚ್ಚರಿಯ ವಿಷಯವಲ್ಲವೇಕೆ ಎಂದರೆ, ಇಸ್ರೇಲಿ ಪರ ಲಾಬಿ ಗುಂಪುಗಳು ಯುಎಸ್‌ಎಯಲ್ಲಿ ಮಾಡುತ್ತಿರುವಂತೆಯೇ ಫ್ರಾನ್ಸ್ ಮತ್ತು ಇತರ ಐರೋಪ್ಯ ದೇಶಗಳಲ್ಲಿ ಇಸ್ರೇಲಿನ ಪರವಾಗಿ ದಣಿವರಿಯದೇ ವಾದಿಸುತ್ತಿವೆ.

ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವುದಕ್ಕೆ ಹೋಲಿಸಿದರೆ ಗಾಜಾದಲ್ಲಿ ಸಂಭವಿಸುತ್ತಿರುವುದು ಏನೇನೂ ಅಲ್ಲ ಎಂಬ ಪಶ್ಚಿಮದ ಪತ್ರಕರ್ತರ ಧೋರಣೆಯೂ ಈ ತಿರುಚಿದ ಚಿತ್ರಣವನ್ನು ವಿಶ್ವಕ್ಕೆ ತುಂಬುತ್ತಿರುವುದಕ್ಕೆ ಒಂದು ಕಾರಣವಾಗಿದೆ. ಇಂತಹ ಹೋಲಿಕೆಗಳನ್ನು ವಿಶಾಲವಾದ ಐತಿಹಾಸಿಕ ದೃಷ್ಟಿಕೋನ ಇಲ್ಲದೆ ನೀಡಲಾಗುತ್ತದೆ. ಪ್ಯಾಲೆಸ್ತೀನಿಯನ್ನರ ದೀರ್ಘ ಇತಿಹಾಸದ ಬಗ್ಗೆ ಗಮನವಿದ್ದಾಗ ಮಾತ್ರ ಅವರ ನೋವು ಹಾಗು ಬೇರೆಡೆಗಳಲ್ಲಿ ಮಾರಣಹೋಮಗಳನ್ನು ಮೌಲ್ಯಮಾಪನ ಮಾಡಲು ಸಹಾಯವಾಗುತ್ತದೆ.

ಆದರೆ, ಗಾಜಾದಲ್ಲಿ ಮಾರಣಹೋಮವನ್ನು ಅರ್ಥಮಾಡಿಕೊಳ್ಳಲು ಕೇವಲ ಐತಿಹಾಸಿಕ ದೃಷ್ಟಿಕೋನ ಮಾತ್ರ ಬೇಕಿರುವುದಲ್ಲ; ಇಸ್ರೇಲ್‌ಗೆ ಸಿಕ್ಕಿರುವ ರಕ್ಷಣೆ ಮತ್ತು ಬೇರೆಡೆಗಳಲ್ಲಿ ನಡೆಯುತ್ತಿರುವ ಭಯಾನಕ ಬೆಳವಣಿಗೆಗಳ ಗತಿತಾರ್ಕಿಕತೆಯ ಅಥವಾ ವಿರೋಧಾಭಾಸದ ಬೆನ್ನೇರುವುದು ಮುಖ್ಯ. ಗಾಜಾದಲ್ಲಿ ಆಗುತ್ತಿರುವಂತೆಯೇ ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು ಆತಂಕಕಾರಿಯಾಗಿವೆ. ಆದರೆ ಇಸ್ರೇಲಿ ಕ್ರೌರ್ಯ ಮತ್ತು ಈ ಪ್ರಕರಣಗಳಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವುದನ್ನು ಬರ್ಬರ ಮತ್ತು ಅಮಾನವೀಯ ಎಂದು ವಿಶ್ವದೆಲ್ಲೆಡೆ ಖಂಡನೆ ವ್ಯಕ್ತವಾಗುತ್ತದೆ, ಆದರೆ ಇಸ್ರೇಲ್ ನಡೆಸುವ ದೌರ್ಜನ್ಯಕ್ಕೆ ಸಾರ್ವಜನಿಕ ಪರವಾನಗಿ ನೀಡಲಾಗಿದೆ ಮತ್ತು ಯುಎಸ್‌ಎನ ಅಧ್ಯಕ್ಷ, ಯೂರೋಪಿಯನ್ ಯೂನಿಯನ್‌ನ ಮುಖಂಡರ ಮತ್ತು ಜಗತ್ತಿನಲ್ಲಿನ ಇಸ್ರೇಲಿನ ಇತರ ಗೆಳೆಯರ ಅನುಮೋದನೆಯಿದೆ.

ಮುಂದಿನ ಹಾದಿ

ಜೆರುಸಲೇಂನಲ್ಲಿ ಒಬ್ಬ ಪ್ಯಾಲೆಸ್ತೀನಿ ಯುವಕನನ್ನು ಜೀವಂತ ಸುಟ್ಟಿದ್ದರಿಂದ ಹಿಡಿದು, ಬೈತುನಿಯಾದಲ್ಲಿ ಬರೇ ತಮಾಷೆ ಎಂಬಂತೆ ಇನ್ನಿಬ್ಬರಿಗೆ ಮಾರಣಾಂತಿಕವಾಗಿ ಗುಂಡು ಹೊಡೆದ ಘಟನೆ ಅಥವಾ ಗಾಜಾದಲ್ಲಿ ಇಡೀ ಕುಟುಂಬಗಳನ್ನೇ ಕೊಂದ ಘಟನೆಗಳವರೆಗೆ, ಬಲಿಪಶುಗಳನ್ನು ಮನುಷ್ಯರೇ ಅಲ್ಲ ಎಂಬ ಮಟ್ಟಕ್ಕೆ ಅಮಾನವೀಯವಾಗಿ ಕಂಡಾಗ ಮಾತ್ರವೇ ಈ ಎಲ್ಲಾ ಕೃತ್ಯಗಳನ್ನು ಎಸಗಲು ಸಾಧ್ಯ. ಪ್ಯಾಲೆಸ್ತೀನ್‌ನಲ್ಲಿ ಝಿಯೋನಿಸಂ ವಿರುದ್ಧದ ಹೋರಾಟ ಯಶಸ್ವಿಯಾಗಬೇಕೆಂದರೆ, ಒಂದು ಉಲ್ಲಂಘನೆಯಿಂದ ಮತ್ತೊಂದನ್ನು ಬೇರ್ಪಡಿಸದ ಹಾಗೂ ಸಂತ್ರಸ್ತರು ಮತ್ತು ಶೋಷಕರನ್ನು ಸ್ಪಷ್ಟವಾಗಿ ಗುರುತಿಸುವ ಮಾನವ ಮತ್ತು ನಾಗರಿಕ ಹಕ್ಕುಗಳ ಅಜೆಂಡಾ ಅದಕ್ಕೆ ಇರಬೇಕು.

ಅರಬ್ ಜಗತ್ತಿನಲ್ಲಿ ಶೋಷಿತ ಅಲ್ಪಸಂಖ್ಯಾತರು ಮತ್ತು ಅಸಹಾಯಕ ಸಮುದಾಯಗಳ ಮೇಲೆ ದೌರ್ಜನ್ಯಗಳನ್ನು ನಡೆಸುವವರು ಮತ್ತು ಇಂತಹ ಕೃತ್ಯಗಳನ್ನು ಪ್ಯಾಲೇಸ್ತೀನಿ ಜನರ ವಿರುದ್ಧ ನಡೆಸುವ ಇಸ್ರೇಲಿಗಳನ್ನು ಒಂದೇ ನೈತಿಕ ಮಾನದಂಡದಿಂದ ತೂಗಿ ನೋಡಿ ನ್ಯಾಯತೀರ್ಮಾನ ಮಾಡಬೇಕು. ಇವರೆಲ್ಲರೂ ಯುದ್ಧಾಪರಾಧಿಗಳು (war criminals). ಆದರೆ ಪ್ಯಾಲೇಸ್ತೀನ್ ಸಂದರ್ಭದಲ್ಲಿ ಇಂತವರು ಉಳಿದವರಿಗಿಂತ ಬಹಳ ಹಿಂದಿನಿಂದಲೇ ಈ ಅಪರಾಧಗಳನ್ನು ನಡೆಸುತ್ತಾ ಬಂದಿದ್ದಾರೆ. ತಾವು ಯಾವ ಧರ್ಮದ ಪರವಾಗಿ ಅಥವಾ ಹೆಸರಿನಲ್ಲಿ ಇದನ್ನು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೋ, ಆ ಧರ್ಮ ಅಥವಾ ಇಂತಹ ದೌರ್ಜನ್ಯಗಳನ್ನು ನಡೆಸುವವರ ಧಾರ್ಮಿಕ ಗುರುತು ಅಥವಾ ಅಸ್ಮಿತೆಯಾಗಲೀ ಇಲ್ಲಿ ನಿಜವಾಗಿಯೂ ಲೆಕ್ಕಕ್ಕೆ ಬರುವುದಿಲ್ಲ. ಅವರು ತಮ್ಮನ್ನು ಜೆಹಾದಿಸ್ಟರು, ಜುದಾಯಿಸ್ಟರು ಅಥವಾ ಝಿಯೋನಿಸ್ಟರು ಎಂದು ಹೇಗೆ ಬೇಕಾದರೂ ಕರೆದುಕೊಳ್ಳಲಿ, ಎಲ್ಲರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳಬೇಕು.

ಇಸ್ರೇಲಿನ ವಿರುದ್ಧ ವ್ಯವಹರಿಸುವಾಗ ತನ್ನ ಇಬ್ಬಗೆ ನೀತಿಯನ್ನು ಸರಿಪಡಿಸಿಕೊಳ್ಳುವ ಜಗತ್ತು- ಜಗತ್ತಿನ ಇತರ ಕಡೆಗಳಲ್ಲಿ ನಡೆಯುವ ಯುದ್ಧಾಪರಾಧಗಳನ್ನು ಕುರಿತು ತನ್ನ ಪ್ರತಿಕ್ರಿಯೆಯಲ್ಲಿ ಬಹಳಷ್ಟು ಪರಿಣಾಮಕಾರಿಯಾಗಬಲ್ಲದು.

ಗಾಜಾದಲ್ಲಿ ಹಂತಹಂತವಾಗಿ ಹೆಚ್ಚುತ್ತಿರುವ ನರಮೇಧವನ್ನು ನಿಲ್ಲಿಸುವುದು, ಪ್ಯಾಲೆಸ್ತೀನಿಯರು ಎಲ್ಲೇ ಇದ್ದರೂ, ತಾಯ್ನಾಡಿಗೆ ಮರಳುವ ಹಕ್ಕು ಸೇರಿದಂತೆ ಅವರ ಮೂಲಭೂತ ಮಾನವ ನಾಗರಿಕ ಹಕ್ಕುಗಳನ್ನು ಮರುಸ್ಥಾಪಿಸುವುದೇ, ಪಶ್ಚಿಮ ಏಷ್ಯಾದಲ್ಲಿ ಒಂದು ಉತ್ಪಾದಕವಾದ ಅಂತಾರಾಷ್ಟ್ರೀಯ ಹಸ್ತಕ್ಷೇಪಕ್ಕೆ ಇರುವ ಏಕೈಕ ಹಾದಿಯಾಗಿದೆ.

(ಜುಲೈ 2014ರಲ್ಲಿ ಇಲಾನ್ ಪಾಪ್ಪೆ ಅವರು ಬರೆದ ಈ ಪ್ರಬಂಧ, ಆನ್ ಪ್ಯಾಲೆಸ್ತೀನ್ ಎಂಬ ಪುಸ್ತಕದಲ್ಲಿ ಮರುಪ್ರಕಟವಾಗಿದೆ. ಇಂದಿನ ಇಸ್ರೇಲ್-ಪ್ಯಾಲೆಸ್ತೀನ್ ಸಂದರ್ಭಕ್ಕೂ ಇದು ಹೆಚ್ಚು ಅನ್ವಯವಾಗುವುದರಿಂದ ಇದರ ಅನುವಾದವನ್ನು ಇಲ್ಲಿ ಪ್ರಕಟಿಸಿದ್ದೇವೆ.)

ಇಲಾನ್ ಪಾಪ್ಪೆ
ಎಕ್ಸೆಟರ್ ವಿಶ್ವವಿದ್ಯಾನಿಲಯದ ಯುರೋಪಿಯನ್ ಸೆಂಟರ್ ಫಾರ್ ಪ್ಯಾಲೆಸೀನಿಯನ್ ಸ್ಟಡೀಸ್‌ನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದ ಇವರು ಪ್ಯಾಲೆಸ್ತೀನ್ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಕನ್ನಡಕ್ಕೆ ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Violence and crime against humanity especially on unarmed civilians requires condemnation. If we revisit history since ages all semitic religions perpetrated most violent genocide on populations which did not accept their religious conversions and destruction of their cultural values and sacred places. So, in retrospect Nanu Gauri will do well to reflect and report on such historical facts.

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...