ವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಒಪ್ಪಿಕೊಂಡಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ವ್ಯಾಪಕ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟೀಕರಣ ನೀಡುವಂತೆ ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ.
“ಪ್ರಧಾನಿ ಬಹಳ ವಿಳಂಬವಾಗಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕೆಲವು ನಿಮಿಷಗಳ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಹಿರಂಗಪಡಿಸಿದ ಮಾಹಿತಿ ಎಲ್ಲವನ್ನೂ ತಲೆಕೆಳಗೆ ಮಾಡಿದೆ. ಪ್ರಧಾನಿ ಅವರು ಅವುಗಳ ಬಗ್ಗೆ ಸಂಪೂರ್ಣವಾಗಿ ಮೌನವಾಗಿದ್ದರು.” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಭಾರತವು ಅಮೆರಿಕದ ಮಧ್ಯಸ್ಥಿಕೆಗೆ ಒಪ್ಪಿಕೊಂಡಿದೆಯೇ ಅಥವಾ “ತಟಸ್ಥ” ಸ್ಥಳದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದೆಯೇ ಎಂದು ರಮೇಶ್ ಪ್ರಶ್ನಿಸಿದ್ದಾರೆ. ಆಟೋಮೊಬೈಲ್ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಭಾರತೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಅಮೆರಿಕದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಭಾರತ ಈಗ ಸಿದ್ಧವಾಗಿದೆಯೇ ಎಂದು ಅವರು ಕೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ “ಪೂರ್ಣ ಮತ್ತು ತಕ್ಷಣದ ಕದನ ವಿರಾಮ”ದ ಮಾತುಕತೆ ತನ್ನ ಮಧ್ಯಸ್ಥಿಕೆಯಿಂದ ನಡೆದಿದೆ ಎಂಬ ಹೇಳಿಕೆಯನ್ನು ಟ್ರಂಪ್ ಸೋಮವಾರ ಪುನರುಚ್ಚರಿಸಿದ್ದಾರೆ.
“ಮೋದಿ ಅವರ ಹೇಳಿಕೆ ಮತ್ತು ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನಾನು ಕೇಳಿದೆ. ಇದು ತೀವ್ರ ಸಮಸ್ಯಾತ್ಮಕ ವಿಚಾರ” ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಬಣ್ಣಿಸಿದ್ದಾರೆ.
“ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸುವಂತೆ ಮಾಡಲು ವ್ಯಾಪಾರವನ್ನು ಬೆದರಿಕೆಯಾಗಿ ಬಳಸಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷರು ಹೇಳುತ್ತಾರೆ. ಪ್ರಧಾನಿ ಇದಕ್ಕೆ ಪ್ರತಿಕ್ರಿಯಿಸುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ದುರದೃಷ್ಟವಶಾತ್, ಅವರು ಪ್ರತಿಕ್ರಿಯಿಸಲಿಲ್ಲ.” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮೋದಿಯನ್ನು ನೇರವಾಗಿ ಪ್ರಶ್ನಿಸದೆ, ಟ್ರಂಪ್ ಅವರ ಪೋಸ್ಟ್ ಅನ್ನು “ಭಾರತಕ್ಕೆ ನಿರಾಶಾದಾಯಕ” ಎಂದು ಕರೆದ್ದಾರೆ.
ಪಹಲ್ವಾಮ್ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರದ ನಂತರ ನಾಲ್ಕು ದಿನಗಳ ಕಾಲ ಉಭಯ ದೇಶಗಳ ನಡುವೆ ಮಿಲಿಟರಿ ಉದ್ವಿಗ್ನತೆ ಉಂಟಾಗಿತ್ತು. ಅದಾಗ್ಯೂ, ಭಾರತ ಮತ್ತು ಪಾಕಿಸ್ತಾನ ಎಲ್ಲಾ ಗುಂಡಿನ ದಾಳಿಯನ್ನು ನಿಲ್ಲಿಸಲು ಶನಿವಾರ ಒಪ್ಪಿಕೊಂಡವು.
ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಶನಿವಾರ ಮಧ್ಯಾಹ್ನ ಭಾರತಕ್ಕೆ ಕರೆ ಮಾಡಿ ಚಕಮಕಿಯನ್ನು ಕೊನೆಗೊಳಿಸಲು ಪ್ರಸ್ತಾಪಿಸಿದ್ದಾರೆ ಎಂದು ಇದೇ ವೇಳೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ನಿಲುವನ್ನು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ “ಪರಮಾಣು ಬೆದರಿಕೆ”ಯನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಆಪರೇಷನ್ ಸಿಂಧೂರ್ ಈಗ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
“ಭಯೋತ್ಪಾದನೆ ಮತ್ತು ಮಾತುಕತೆ” ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂಬ ಭಾರತದ ನಿಲುವನ್ನು ಮೋದಿ ಪುನರುಚ್ಚರಿಸಿದ್ದಾರೆ. “ಭಯೋತ್ಪಾದನೆ ಮತ್ತು ವ್ಯಾಪಾರ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ, ಮತ್ತು ನೀರು ಮತ್ತು ರಕ್ತ ಏಕಕಾಲದಲ್ಲಿ ಹರಿಯಲು ಸಾಧ್ಯವಿಲ್ಲ” ಎಂದು ಅವರು ಏಪ್ರಿಲ್ 23 ರಂದು ನವದೆಹಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದನ್ನು ಉಲ್ಲೇಖಿಸಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡ ಕೆಲವೇ ನಿಮಿಷಗಳ ನಂತರ ಶನಿವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಈ ಬಗ್ಗೆ ಘೋಷಣೆ ಮಾಡಿದ್ದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮತ್ತು ಪಾಕಿಸ್ತಾನ “ತಟಸ್ಥ ಸ್ಥಳದಲ್ಲಿ ವ್ಯಾಪಕವಾದ ವಿಷಯಗಳ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು” ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿದ್ದರು. ವ್ಯಾಪಾರ ನಿಲ್ಲಿಸುವುದಾಗಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 2019 ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಲ್ಲಾ ಒಂಬತ್ತು ಆರೋಪಿಗಳು ದೋಷಿಗಳು ಎಂದು ತೀರ್ಪು
2019 ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಲ್ಲಾ ಒಂಬತ್ತು ಆರೋಪಿಗಳು ದೋಷಿಗಳು ಎಂದು ತೀರ್ಪು