Homeಕರ್ನಾಟಕಉಡುಪಿ: ತಾಯಿ-ಮಕ್ಕಳ ಕೊಲೆ ಪ್ರಕರಣ: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿ

ಉಡುಪಿ: ತಾಯಿ-ಮಕ್ಕಳ ಕೊಲೆ ಪ್ರಕರಣ: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿ

- Advertisement -
- Advertisement -

ಉಡುಪಿ ಜಿಲ್ಲೆಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ರಾಜ್ಯದಲ್ಲೇ ಭಾರೀ ಸುದ್ದಿಯಾಗಿದ್ದ ಈ ಪ್ರಕರಣದಲ್ಲಿ ಕೃತ್ಯ ನಡೆದ ಒಂದೇ ತಿಂಗಳಲ್ಲಿ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

ಸಧ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಪರ ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ. ಈ ಕುರಿತು ಸರಕಾರಿ ಅಭಿಯೋಜಕ ಪ್ರಕಾಶ್‌ ಚಂದ್ರ ಶೆಟ್ಟಿ ಅವರಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್‌ ಕಾಲಾವಕಾಶವನ್ನು ನೀಡಿದೆ.

ನ.12ರಂದು ಭಾನುವಾರ ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್‌ನಲ್ಲಿ ಹಸೀನಾ ಹಾಗೂ ಅವರ ಮೂವರು ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಆಸೀಮ್‌ನ್ನು (12) ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿತ್ತು. ಈ ಘಟನೆ ರಾಜ್ಯದಲ್ಲಿ ಭಾರೀ ತಲ್ಲಣಗೊಳಿಸಿತ್ತು. ಕೃತ್ಯದ ಬಳಿಕ ಆರೋಪಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ನ.14ರಂದು ಮೊಬೈಲ್ ಟವರ್ ಆಧರಿಸಿ ಬಂಧಿಸಲಾಗಿತ್ತು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ಕೃತ್ಯವನ್ನು ಒಪ್ಪಿಕೊಂಡಿದ್ದ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ನ್ಯಾಯಾಂಗ ಬಂಧನ ಅವಧಿ ಡಿ.18ರವರೆಗೆ ವಿಸ್ತರಿಸಲಾಗಿದೆ.

ಪ್ರವೀಣ್ ಆರಂಭದಲ್ಲಿ ಅಯ್ನಾಝ್ ಗೆ ಮೊದಲು ದಾಳಿ ಮಾಡಿ, ಬಳಿಕ ಹಸೀನಾ, ಅಫ್ನಾನ್, ಆಸಿಂ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಬಳಿಕ ಬೇರೆ ಬೇರೆ ವಾಹನದಲ್ಲಿ ಪರಾರಿಯಾಗಿದ್ದಾನೆ. ಆರೋಪಿ ಕೈಯ ಗಾಯಕ್ಕೆ ಚಿಕಿತ್ಸೆ ಪಡೆದು ಚಾಕುವನ್ನು ಮನೆಯಲ್ಲಿ ಇಟ್ಟು ಹೆಂಡತಿಯ ತವರು ಮನೆಗೆ ಹೋಗಿದ್ದಾನೆ.

ಆರೋಪಿ ಪ್ರವೀಣ್‌ ಹಾಗೂ ಅಯ್ನಾಝ್ ಏರ್‌ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರವೀಣ್‌ ಅಯ್ನಾಝ್ ಮೇಲೆ ದ್ವೇಷವನ್ನು ಇಟ್ಟುಕೊಂಡು ಕೊಲೆಯನ್ನು ಮಾಡಿದ್ದಾನೆ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿತ್ತು.

ಘಟನೆ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆರೋಪಿ ಪ್ರವೀಣ್ ಚೌಗಲೆಯನ್ನು ಅಮಾನತುಗೊಳಿಸಿ ಕೃತ್ಯದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿತ್ತು.

ಭೀಕರ ಹತ್ಯಾಕಾಂಡದ ಕುರಿತು ತ್ವರಿತ ವಿಚಾರಣೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಮುಸ್ಲಿಂ ಜಸ್ಟೀಸ್ ಫೋರಂ ನೇತೃತ್ವದ ನಿಯೋಗ ಈ ಮೊದಲು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇತ್ತೀಚೆಗೆ ಸಂತ್ರಸ್ತ ಕುಟುಂಬದ ಯಜಮಾನ ನೂರ್‌ ಮಹಮ್ಮದ್ ಅವರು ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿ ಪ್ರಕರಣದಲ್ಲಿ ತ್ವರಿತ ನ್ಯಾಯಕ್ಕೆ ಆಗ್ರಹಿಸಿದ್ದರು.

ಇದನ್ನು ಓದಿ: ಇಸ್ರೇಲ್‌ನ ಯುದ್ಧ ದಾಹಕ್ಕೆ ತಮ್ಮದೇ ದೇಶದ ಮೂವರು ನಾಗರಿಕರು ಬಲಿ; ಪ್ರಮಾದವಾಯ್ತೆಂದ ನೆತನ್ಯಾಹು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರಕಾರ ಆದಿವಾಸಿ ಸಮುದಾಯಗಳನ್ನು ನಿರ್ಲಕ್ಷಿಸಿದೆ: ಕಾಂಗ್ರೆಸ್‌

0
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಮಧ್ಯಪ್ರದೇಶದ ಆದಿವಾಸಿ ಸಮುದಾಯಗಳನ್ನು "ನಿರ್ಲಕ್ಷಿಸಿದೆ" ಎಂದು ಆರೋಪಿಸಿದ ಕಾಂಗ್ರೆಸ್ ಮತ್ತು ಕೇಂದ್ರ ಬಜೆಟ್‌ನಲ್ಲಿ ಆದಿವಾಸಿಗಳಿಗೆ ಕೇಸರಿ ಪಕ್ಷದ ಹಂಚಿಕೆಯು ನೀತಿ ಆಯೋಗ ನಿಗದಿಪಡಿಸಿದ ಶೇಕಡಾ 8.2 ಗುರಿಗಿಂತ...