Homeಮುಖಪುಟಎನ್‌ಟಿಎಂಎಸ್ ಶಾಲೆ ಹೋರಾಟ ಕುರಿತ ನಂಬಲರ್ಹವಲ್ಲದ ದಶ ಸುಳ್ಳುಗಳು

ಎನ್‌ಟಿಎಂಎಸ್ ಶಾಲೆ ಹೋರಾಟ ಕುರಿತ ನಂಬಲರ್ಹವಲ್ಲದ ದಶ ಸುಳ್ಳುಗಳು

ಕನ್ನಡ ಶಾಲೆಯನ್ನು ನಾಶಗೊಳಿಸಿ ಸ್ವಾಮಿ ವಿವೇಕಾನಂದರು, ಮೈಸೂರು ಮಹಾರಾಜರು ಮತ್ತು ಸಹಸ್ರಾರು ಬಡಮಕ್ಕಳ ಗೋರಿಯ ಮೇಲೆ ವಿವೇಕ ಸ್ಮಾರಕ ನಿರ್ಮಿಸುವುದು ಅವಿವೇಕದ ಪರಮಾವಧಿಯಲ್ಲವೇ?

- Advertisement -
- Advertisement -

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಳೆದ 47 ದಿನಗಳಿಂದ ‘ಶಾಲೆ ಉಳಿಸಿ, ಸ್ಮಾರಕ ನಿರ್ಮಿಸಿ’ ಎಂಬ ನ್ಯಾಯೋಚಿತ ಬೇಡಿಕೆಯನ್ನು ಸರ್ಕಾರ ಮತ್ತು ಸಮಾಜದ ಮುಂದಿಟ್ಟು ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಪರರು ಮತ್ತು ಕಾಳಜಿಯುಳ್ಳ ನಾಗರೀಕರು ನಡೆಸುತ್ತಿರುವ ಪ್ರಜಾಸತ್ತಾತ್ಮಕ ಹೋರಾಟವನ್ನು ದಾರಿತಪ್ಪಿಸುವ ಸಲುವಾಗಿ ಇತ್ತೀಚೆಗೆ ಶ್ರೀರಾಮಕೃಷ್ಣ ಆಶ್ರಮ ಕೊಟ್ಟಿರುವ ದಶ ಕಾರಣಗಳು ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಕಾರಣ ಸೂಕ್ತ ಸ್ಪಷ್ಟೀಕರಣವನ್ನು ಹೋರಾಟಗಾರರ ಪರವಾಗಿ ಮಂಡಿಸಬಯಸುತ್ತೇನೆ.

1. ನಾಡಿನ ಇತಿಹಾಸಕಾರ ಹುಲಗವಾಡಿ ನರಸಿಂಹಶಾಸ್ತ್ರಿಗಳು 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಅಂದಿನ ದಿವಾನ್ ಶೇಷಾದ್ರಿ ಅಯ್ಯರ್ ಅವರ ಮನೆ ಮತ್ತು ಸಮೀಪದ ಅನಾಥಾಲಯವಾಗಿದ್ದ ನಿರಂಜನ ಮಠದಲ್ಲಿ ಕೆಲವು ಕಾಲ ತಂಗಿದ್ದರು ಎಂದು ದಾಖಲಿಸಿರುವುದು ಸತ್ಯಸಂಗತಿಯಾಗಿದೆ. ಆದರೆ ಇದೇ ಕಾರಣಕ್ಕಾಗಿ ಪ್ರಸಿದ್ಧ ವೀರಶೈವ ಧಾರ್ಮಿಕ ಕೇಂದ್ರ ನಿರಂಜನ ಮಠದ ಪಾರಂಪರಿಕತೆ ಮತ್ತು ಐತಿಹಾಸಿಕ ಎನ್‌ಟಿಎಂಎಸ್ ಹೆಣ್ಣುಮಕ್ಕಳ ಶಾಲೆ ಅಸ್ತಿತ್ವಕ್ಕೆ ತನ್ನ ಸ್ಮಾರಕ ನಿರ್ಮಿಸುವುದರ ಮೂಲಕ ಧಕ್ಕೆಯುಂಟು ಮಾಡಿರೆಂದು ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಬೇಡಿಕೆ ಮಂಡಿಸಿದ್ದರೇ?

2. 1892ರಲ್ಲಿ ತಾವು ಭೇಟಿ ನೀಡಿದ್ದರಿಂದಲೇ ಮೈಸೂರು ನಗರ ಪುನೀತವಾದ ಐತಿಹಾಸಿಕ ಸ್ಥಳವಾಗಿರುವುದರಿಂದ ತಮ್ಮ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸ್ಪರ್ಧಾತ್ಮಕವಾಗಿ ಕನ್ನಡ ಯುವಜನತೆ ಸಬಲರಾಗಲು ಅನುವು ಮಾಡಿಕೊಡಿರೆಂದು ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೆ?

3. ವಿವೇಕ ಸ್ಮಾರಕ ಯುವ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು ಕನ್ನಡ ಯುವಜನತೆಗೆ ಪ್ರಯೋಜನಕಾರಿಯಾದ ಅನೇಕ ಅಲ್ಪಾವಧಿ ಕೋರ್ಸ್ ಗಳು, ಕೌಶಲ್ಯಾಭಿವೃದ್ಧಿ ತರಬೇತಿ, ಕನ್ನಡ/ಇಂಗ್ಲೀಷ್ ಭಾಷಾ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಯೋಗ ಮತ್ತು ಧ್ಯಾನ ತರಬೇತಿ, ಗ್ರಂಥಾಲಯ ಮೊದಲಾದವುಗಳ ಮೂಲಕ ಯುವಜನರ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಆಶ್ರಮಕ್ಕೆ ಅಥವಾ ಸರ್ಕಾರಕ್ಕೆ ಅಂದು ನೀಲಿನಕ್ಷೆ ನೀಡಿದ್ದರೆ? 70ರ ದಶಕದಲ್ಲೇ ಘನ ಸರ್ಕಾರ ಸುಮಾರು 60 ಎಕರೆ ಪ್ರದೇಶದಷ್ಟು ಅಮೂಲ್ಯ ಸ್ಥಳವನ್ನು ಮೈಸೂರು ನಗರದ ಹೃದಯ ಭಾಗವಾದ ಯಾದವಗಿರಿಯಲ್ಲಿ ಶ್ರೀರಾಮಕೃಷ್ಣ ಆಶ್ರಮಕ್ಕೆ ಸಮಾಜಮುಖಿ ಕೆಲಸಗಳನ್ನು ಮಾಡಲು ನೀಡಿರುವುದು ಸರಿಯಷ್ಟೆ. ಈಗ ಮಾಡಬಯಸಿರುವ ಘನ ಕಾರ್ಯಗಳನ್ನು 50 ವರ್ಷಗಳಿಂದ ಮಾಡಲಾಗದವರು ಎನ್‌ಟಿಎಂಎಸ್ ಶಾಲೆ ಆವರಣದಲ್ಲಿ ಮಾಡ ಹೊರಟಿದ್ದೇವೆಂದು ಹೇಳಿದರೆ ನಂಬುವವರು ಯಾರು?

4. ಭಾರತದ ಪ್ರಜೆಗಳಾದ ನಾವು ನ್ಯಾಯಾಲಯದ ತೀರ್ಪನ್ನು ಖಂಡಿತವಾಗಿಯೂ ಗೌರವಿಸುತ್ತೇವೆ. 2013ರಲ್ಲಿ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರು 1892ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾಗ ಹೆಣ್ಣುಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾದರಿ ಶಾಲೆ ನಿರ್ಮಿಸಲು ಮಹಾರಾಜರಿಗೆ ಮಾಡಿದ ಮನವಿ, ಅಂದಿನ ಮಹಾರಾಜರು ಶಾಲೆ ನಿರ್ಮಾಣ ಕುರಿತು ಹೊಂದಿದ್ದ ಸಾಮಾಜಿಕ ಕಳಕಳಿ, ಅಂದಿನ ಮಹಾರಾಣಿ ಶಾಲೆ ನಿರ್ಮಾಣದಲ್ಲಿ ತೊಡಗಿಸಿಕೊಂಡ ಬಗೆ, ಪಾರಂಪರಿಕ ಕಟ್ಟಡವಾದ ಎನ್‌ಟಿಎಂಎಸ್ ಶಾಲೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಇರುವ ಕಾನೂನಾತ್ಮಕ ತೊಡಕುಗಳು ಮತ್ತು ಸಾಮಾಜಿಕ ಬಂಡವಾಳ ಅಭಿವೃದ್ಧಿಗೆ ಎನ್‌ಟಿಎಂಎಸ್ ಶಾಲೆಯ ಅನಿವಾರ್ಯತೆ ಮೊದಲಾದ ಧನಾತ್ಮಕ ಅಂಶಗಳನ್ನು ಸಮರ್ಪಕವಾಗಿ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದ ಪಕ್ಷದಲ್ಲಿ ಅಂದು ವಿವೇಕ ಸ್ಮಾರಕ ನಿರ್ಮಿಸಬೇಕೆಂಬ ತೀರ್ಪು ಬರುತ್ತಿರಲಿಲ್ಲ ಅಲ್ಲವೇ?

5. ಕರ್ನಾಟಕ ಉಚ್ಛನ್ಯಾಯಾಲಯ ವಿವೇಕ ಸ್ಮಾರಕ ನಿರ್ಮಾಣವನ್ನು ಪುರಷ್ಕರಿಸಿ ನೀಡಿರುವ ತೀರ್ಪು ಸತ್ಯನಿಷ್ಟತೆ, ವಸ್ತುನಿಷ್ಟತೆ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಸಾರ್ವಜನಿಕ ಹಿತರಕ್ಷಣೆ ಮೊದಲಾದ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿಲ್ಲವೆಂದು ಪ್ರೀತಿ ಮತ್ತು ನಿರ್ಭೀತಿಯಿಂದ ಹೇಳುವುದು ಪ್ರಗತಿಶೀಲ ನಿಲುವಾಗಿದೆ. ನ್ಯಾಯಾಲಯ ಯಾವುದೇ ಪ್ರಕರಣ ಕುರಿತಂತೆ ಇದುವರೆಗೆ ನೀಡಿರುವ ತೀರ್ಪು ಅಂತಿಮವಲ್ಲ. ಕರ್ನಾಟಕ ಉಚ್ಛನ್ಯಾಯಾಲಯದ ಅಸಮರ್ಪಕ ತೀರ್ಪನ್ನು ನವದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸೂಕ್ತ ದಾಖಲೆಗಳು, ಪುರಾವೆಗಳು ಮತ್ತು ನ್ಯಾಯೋಚಿತ ಸಮರ್ಥನೆಗಳ ಮೂಲಕ ಪ್ರಶ್ನಿಸುವ ಹಕ್ಕು ಹೇಗೆ ಪ್ರಗತಿ ವಿರೋಧಿ? ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಸರ್ಕಾರ ಮತ್ತು ನಾಗರೀಕ ಸಮಾಜಗಳ ಕರ್ತವ್ಯ. ತಮಗೆ ಸಂಬಂಧಿಸದ ಕೆಲಸವನ್ನು ಮಾಡಲು ಶ್ರೀರಾಮಕೃಷ್ಣ ಆಶ್ರಮಕ್ಕೆ ತುಂಡು ಗುತ್ತಿಗೆ ನೀಡಿದವರು ಯಾರು?

6. ಎನ್‌ಟಿಎಂಎಸ್ ಶಾಲೆ ಸಮಾಜದ ಶೋಷಿತ ಸಮುದಾಯಗಳಿಗೆ ಸೇರಿದವರ ಮಕ್ಕಳಿಗೆ ಪ್ರಜ್ಞಾಪೂರ್ವಕವಾಗಿ ಜ್ಞಾನದಾಸೋಹ ನೀಡುವ ಸಾರ್ಥಕ ಕೆಲಸ ಮಾಡುತ್ತಿದೆ. ಇದು ಈಗ ಬಾಲಕಿಯರ ಶಾಲೆಯಾಗಿ ಉಳಿಯದೇ ಬಾಲಕ-ಬಾಲಕಿಯರ ಶಾಲೆಯಾಗಿ ಬದಲಾದ ಸಂದರ್ಭದಲ್ಲಿ ಮಾರ್ಪಟ್ಟಿರುವುದು ಸರಿಯಷ್ಟೆ. ಈ ಶಾಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಕಲಿಯುತ್ತಿದ್ದಾರೆ. ಬಹಳಷ್ಟು ಮಕ್ಕಳು ಶಾಲೆಯನ್ನು ಮುಚ್ಚುವರೆಂಬ ತಪ್ಪು ಗ್ರಹಿಕೆಯಿಂದ ಇತರ ಶಾಲೆಗಳತ್ತ ಮುಖ ಮಾಡಿದ್ದಾರೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಏಕಪಾತ್ರಾಭಿನಯ ಮಾಡುವ ಶಿಕ್ಷಕರಿಗೆ ಕೊರತೆಯಿಲ್ಲ. ಕಡಿಮೆ ಸಂಖ್ಯೆಯ ಕಾರಣ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲವೆಂಬ ಸರ್ಕಾರದ ದಿಟ್ಟ ನಿಲುವು ಸ್ವಾಗತಾರ್ಹ. ಇರುವ ಶಾಲೆಯನ್ನು ಮುಚ್ಚಿ ವಿವೇಕ ಯುವ ಸಾಂಸ್ಕೃತಿಕ ಕೇಂದ್ರದ ಮೂಲಕ ಸಾವಿರಾರು ಯುವಕ-ಯುವತಿಯರಿಗೆ ನಿರಂತರ ಸೇವೆ ಸಲ್ಲಿಸುತ್ತೇವೆಂಬ ಶ್ರೀರಾಮಕೃಷ್ಣ ಆಶ್ರಮದವರ ಪೊಳ್ಳು ಭರವಸೆಯನ್ನು ನಂಬುವವರು ಯಾರು? ನಗರದ ಕೊಳಚೆ ಪ್ರದೇಶಗಳು, ಪೌರ ಕಾರ್ಮಿಕರ ಕಾಲೋನಿಗಳು, ಹಳ್ಳಿಗಳು ಮತ್ತು ಆದಿವಾಸಿ ಸಮುದಾಯಗಳತ್ತ ಇದುವರೆಗೂ ಶ್ರೀರಾಮಕೃಷ್ಣ ಆಶ್ರಮದವರು ಏಕೆ ಮುಖ ಮಾಡಲಿಲ್ಲ? ದರಿದ್ರ ನಾರಾಯಣ ದೇವೋಭವ ಎಂದ ಸ್ವಾಮಿ ವಿವೇಕಾನಂದರೆಲ್ಲಿ? ಶ್ರೀಮಂತರ ಮಕ್ಕಳಿಗೆ ಮಾತ್ರ ಶಿಕ್ಷಣವೆಂದು ಹೇಳುವ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳೆಲ್ಲಿ?

7. ವಿವೇಕ ಸ್ಮಾರಕ ನಿರ್ಮಾಣದಿಂದ ಎನ್‌ಟಿಎಂಎಸ್ ಕನ್ನಡ ಶಾಲೆಯನ್ನು ಮುಚ್ಚುವುದಿಲ್ಲ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂಬ ಶ್ರೀರಾಮಕೃಷ್ಣ ಆಶ್ರಮದವರ ವಾದ ಆಧಾರ ರಹಿತವಾಗಿದೆ. ಕನ್ನಡ ಶಾಲೆಯನ್ನು ನಾಶಗೊಳಿಸಿ ಸ್ವಾಮಿ ವಿವೇಕಾನಂದರು, ಮೈಸೂರು ಮಹಾರಾಜರು ಮತ್ತು ಸಹಸ್ರಾರು ಬಡಮಕ್ಕಳ ಗೋರಿಯ ಮೇಲೆ ವಿವೇಕ ಸ್ಮಾರಕ ನಿರ್ಮಿಸುವುದು ಅವಿವೇಕದ ಪರಮಾವಧಿಯಲ್ಲವೇ?

8. ಸ್ವಾಮಿ ವಿವೇಕಾನಂದರ ಆಶಯದಂತೆ ಶ್ರೀರಾಮಕೃಷ್ಣ ಆಶ್ರಮವು ದೀನ ದುರ್ಬಲರ ಮಕ್ಕಳ ಶೈಕ್ಷಣಿಕ ಪ್ರಗತಿ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ, ಸಾಮರ್ಥ್ಯಾಭಿವೃದ್ಧಿ, ನಾಯಕತ್ವ ಅಭಿವೃದ್ಧಿ ಮೊದಲಾದ ಆಶಯಗಳನ್ನು ಈಡೇರಿಸಲು ಕಳೆದ 100 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದುರ್ಬಲ ವರ್ಗಗಳಿಗಾಗಿ ಎಷ್ಟು ಶೈಕ್ಷಣಿಕ ಕೇಂದ್ರಗಳನ್ನು ತೆರೆದಿದೆ? ಇವರ ಫಲಾನುಭವಿಗಳೆಲ್ಲ ಮೇಲ್ವರ್ಗದ – ಹೊಟ್ಟೆ ತುಂಬಿದವರ ಮಕ್ಕಳೇ ಅಲ್ಲವೆ? ಶ್ರೀರಾಮಕೃಷ್ಣ ಆಶ್ರಮವು ಪ್ರಸ್ತುತ ಸಂದರ್ಭದಲ್ಲಿ ಶೋಷಣೆಯ ತವರು ಮನೆಯಾಗಿರುವ ವೈದಿಕಶಾಹಿಯ ನವೀಕೃತ ಕೆಟ್ಟ ತಳಿಗಳಿಂದ ಕೂಡಿರುವುದು ಅನುಭವವೇದ್ಯವಾಗಿದೆ. ಬ್ರಾಹ್ಮಣ್ಯ ದೇವೋಭವ – ಬಂಡವಾಳ ದೇವೋಭವ – ಭೋಗ ಜೀವನ ದೇವೋಭವ ಎನ್ನುವ ಇವರಿಂದ ನಾವು ಏನಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯವೇ?

9. ಎನ್‌ಟಿಎಂಎಸ್ ಶಾಲೆಯು ರಾಷ್ಟ್ರದ ಮತ್ತು ರಾಜ್ಯದ ಪ್ರಥಮ ಬಾಲಕಿಯರ ಶಾಲೆಯೆಂದು ಶಾಲೆ ಉಳಿಸಿ ಹೋರಾಟಗಾರರು ನಿಜಕ್ಕೂ ಪ್ರತಿಪಾದಿಸುತ್ತಿಲ್ಲ. ಇವರು ಸಮರ್ಥಿಸುತ್ತಿರುವುದು ಐತಿಹಾಸಿಕ ಮಹತ್ವವುಳ್ಳ ಶಾಲೆಯನ್ನು ಉಳಿಸಿ ಎಂಬುದಾಗಿದೆ. ಇದು ಅಂದಿನ ಮೈಸೂರು ಸಂಸ್ಥಾನದಲ್ಲಿ ಸ್ವಾಮಿ ವಿವೇಕಾನಂದರ ಪ್ರೇರಣೆ, ಮಹಾರಾಜರ ದಾರ್ಶನಿಕತೆ ಮತ್ತು ಮಹಾರಾಣಿಯವರ ಮಾನವೀಯತೆಗಳಿಂದ ರೂಪುಗೊಂಡ ಐತಿಹಾಸಿಕ ಶಾಲೆಯಲ್ಲವೇ? ಇಂತಹ ಐತಿಹಾಸಿಕ ಶಾಲೆಯನ್ನು ಧ್ವಂಸಗೊಳಿಸಿ ವಿವೇಕ ಸ್ಮಾರಕ ನಿರ್ಮಿಸುವುದು, ವಾಣಿಜ್ಯ ಸಂಕೀರ್ಣಗಳನ್ನು ಕಟ್ಟುವುದು, ಅಧ್ಯಾತ್ಮದ ಹೆಸರಿನಲ್ಲಿ ಲೂಟಿ ಮಾಡುವುದು ಮತ್ತು ಯೋಗಿಗಳ ಪೋಷಾಕಿನಲ್ಲಿ ಭೋಗಿಗಳಾಗುವುದು ಶ್ರೀರಾಮಕೃಷ್ಣ ಆಶ್ರಮದವರಿಗೆ ಸರಿ ಎನಿಸುವುದೇ?

10. ಈಗಿರುವ ಎನ್‌ಟಿಎಂಎಸ್ ಶಾಲೆ ಪಾರಂಪರಿಕ ಕಟ್ಟಡವೇ ಅಥವಾ ಅಲ್ಲವೇ ಎಂಬುದನ್ನು ನಿರ್ಣಯಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡುವ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಗೆ ಇದೆಯೇ ಹೊರತು ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಮತ್ತು ಅವರ ಒಡನಾಡಿಗಳಿಗೆ ಇಲ್ಲ. ಸ್ಥಳೀಯ ಪುರಾತತ್ವ ಶಾಸ್ತ್ರಜ್ಞರು ಈ ಶಾಲೆ ಪಾರಂಪರಿಕ ಕಟ್ಟಡವಾಗಿದ್ದು ಇದನ್ನು ಕೆಡವಿ ವಿವೇಕ ಸ್ಮಾರಕ ನಿರ್ಮಿಸಲು ಕಾನೂನು ಅನುಮತಿಸುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎನ್‌ಟಿಎಂಎಸ್ ಶಾಲೆ ಉಳಿಸಿ ಹೋರಾಟವನ್ನು ದಾರಿ ತಪ್ಪಿಸುವ ಸಲುವಾಗಿ ಎನ್.ಎಸ್.ಚಕ್ರವರ್ತಿ ಮತ್ತು ವಕೀಲ ಬಸಪ್ಪನವರ ಮೂಲಕ ಶ್ರೀರಾಮಕೃಷ್ಣ ಆಶ್ರಮ ಮಂಡಿಸಿರುವ ದಶ ಕಾರಣಗಳು ಸಮರ್ಥನೀಯವಲ್ಲ. ಜಗತ್ತಿನ ಇತಿಹಾಸದಲ್ಲಿ ಇಂತಹ ಸ್ವಾಮೀಜಿಗಳು, ಚಕ್ರವರ್ತಿಗಳು, ವಕೀಲರು ಮತ್ತು ಮಧ್ಯವರ್ತಿಗಳು ಬಹಳಷ್ಟು ಬಂದು ಹೋಗಿದ್ದಾರೆ. ಶಾಲೆ ಉಳಿಸಿ ಹೋರಾಟಕ್ಕೆ ಜಯವಾಗಲಿ.

ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರು ವಿಶ್ರಾಂತ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮೈಸೂರು ವಿಶ್ವವಿದ್ಯಾಲಯ. ಅಭಿಪ್ರಾಯಗಳು ಲೇಖಕರವು)


ಇದನ್ನೂ ಓದಿ: ಯಾವ ಮಹಾತ್ಮರನ್ನು ಮನೆಗೆ ಕರೆಯಬಾರದಪ್ಪ…: ದೇವನೂರು ಮಹಾದೇವ ವಿಷಾಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...