Homeಮುಖಪುಟಯುಪಿಯಿಂದ ಆಲೂಗಡ್ಡೆ ಆಮದಿಗೆ ತೆಲಂಗಾಣದಲ್ಲಿ ತಡೆ: ಯುಪಿಯಲ್ಲಿ ಓವೈಸಿ ರಾಜಕಾರಣಕ್ಕೆ ವಿರೋಧ

ಯುಪಿಯಿಂದ ಆಲೂಗಡ್ಡೆ ಆಮದಿಗೆ ತೆಲಂಗಾಣದಲ್ಲಿ ತಡೆ: ಯುಪಿಯಲ್ಲಿ ಓವೈಸಿ ರಾಜಕಾರಣಕ್ಕೆ ವಿರೋಧ

- Advertisement -
- Advertisement -

ಅಸಾದುದ್ದೀನ್ ಓವೈಸಿಯ ಪಕ್ಷವು ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಆಲೂಗಡ್ಡೆ ಉತ್ಪಾದಕರು ವಿರೋಧಿಸಿದ್ದಾರೆ. ಉತ್ತರ ಪ್ರದೇಶದಿಂದ ಸರಬರಾಜಾಗುತ್ತಿದ್ದ ಆಲೂಗಡ್ಡೆಗೆ ತೆಲಂಗಾಣ ರಾಜ್ಯ ಸರ್ಕಾರ ತಡೆವೊಡ್ಡಿದ್ದೇ ಇದಕ್ಕೆ ಕಾರಣವಾಗಿದೆ.

ಹೈದರಾಬಾದ್ ಮೂಲದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಓವೈಸಿಯವರ ಪಕ್ಷ) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ. ಓವೈಸಿಯವರು ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿಗೆ ಬೆಂಬಲ ನೀಡಿರುವುದರಿಂದ ಆಲೂಗಡ್ಡೆ ಉತ್ಪಾದಕರ ವಿರೋಧವನ್ನು ಎದುರಿಸುವಂತಾಗಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್ ವಿಶೇಷ ವರದಿ ಮಾಡಿದೆ.

ಆಗ್ರಾ ಸಮೀಪದ ಖಂಡೌಲಿಯ ಆರು ಎಕರೆ ಭೂಮಿಯಲ್ಲಿ ಆಲೂಗೆಡ್ಡೆ ಬೆಳೆದಿರುವ ಮೊಹಮ್ಮದ್ ಅಲಂಗೀರ್ ಅವರು ಆಗ್ರಾದ ಆಲೂ ಉತ್ಪಾದಕ್ ಕಿಸಾನ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಹೌದು. ಇವರು ಓವೈಸಿ ಸ್ಪರ್ಧೆಯನ್ನು ಪ್ರಶ್ನಿಸಿದ್ದಾರೆ.

“ನಮ್ಮ ಆಲೂಗಡ್ಡೆಯನ್ನು ನಿರ್ಬಂಧಿಸಿದ ತೆಲಂಗಾಣ ರಾಷ್ಟ್ರ ಸಮಿತಿ ನೇತೃತ್ವದ ತೆಲಂಗಾಣ ಸರ್ಕಾರವನ್ನು ಬೆಂಬಲಿಸುತ್ತಿರುವ ಒವೈಸಿ ಇಲ್ಲಿ ಹೇಗೆ ಪ್ರಚಾರ ಮಾಡಬಹುದು?” ಎಂದು ಅಲಂಗೀರ್ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಿಂದ ತೆಲಂಗಾಣಕ್ಕೆ ಪ್ರತಿ ದಿನ ಸುಮಾರು 100 ಟ್ರಕ್‌ಗಳಲ್ಲಿ ಆಲೂಗೆಡ್ಡೆ ಆಮದು ಮಾಡಲಾಗುತ್ತದೆ. ಒಂದೊಂದು ಟ್ರಕ್‌ನಲ್ಲೂ 50 ಕೆ.ಜಿ.ಯ 500 ಚೀಲಗಳನ್ನು ಇರಿಸಲಾಗುತ್ತದೆ ಎಂದು ಎಂದು ಅಲಂಗೀರ್ ಅಂದಾಜಿಸಿದ್ದಾರೆ. ಅದರಲ್ಲಿ 50-60 ಟ್ರಕ್‌ಗಳು ಆಗ್ರಾದಿಂದ ಹೊರಡುತ್ತವೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಉತ್ತರ ಪ್ರದೇಶದಿಂದ ಪ್ರತಿದಿನ 700-800 ಟ್ರಕ್‌ಗಳಲ್ಲಿ ಆಲೂಗಡ್ಡೆ ಸರಬರಾಜು ಮಾಡಲಾಗುತ್ತದೆ.

ತೆಲಂಗಾಣದ ಕೃಷಿ ಸಚಿವ ಎಸ್.ನಿರಂಜನ್ ರೆಡ್ಡಿ ಅವರು ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಈಗ ಯುಪಿಯಿಂದ ಬರುತ್ತಿರುವ ಆಲೂಗಡ್ಡೆಗಳು ಕಳೆದ ವರ್ಷದ ಉತ್ಪನ್ನವಾಗಿದ್ದು, ಕೋಲ್ಡ್ ಸ್ಟೋರ್‌ಗಳಲ್ಲಿ ಇರಿಸಲಾಗಿರುತ್ತದೆ. ತೆಲಂಗಾಣದಲ್ಲಿ ರೈತರು ಬೆಳೆದಿರುವ, ಹೊಸದಾಗಿ ಕೊಯ್ಲು ಮಾಡಿದ ಆಲೂಗಡ್ಡೆ ಮಾರುಕಟ್ಟೆಗೆ ಬರುತ್ತಿರುವಾಗ ನಾವು ಕಳೆದ ವರ್ಷದ ಆಲೂಗಡ್ಡೆಗಳನ್ನೇಕೆ ಸೇವಿಸಬೇಕು” ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ರೈತರು ಅಕ್ಟೋಬರ್‌ನಿಂದ ನವೆಂಬರ್ ಆರಂಭದವರೆಗೆ ಆಲೂಗಡ್ಡೆಯನ್ನು ಬಿತ್ತುತ್ತಾರೆ. ಫೆಬ್ರವರಿ 20ರಿಂದ ಮಾರ್ಚ್ 10ರೊಳಗೆ ಕೊಯ್ಲು ಮಾಡುತ್ತಾರೆ. ಈ ರೈತರು ಸಾಮಾನ್ಯವಾಗಿ ಸುಗ್ಗಿಯ ಸಮಯದಲ್ಲಿ ಸುಮಾರು ಐದನೇ ಒಂದು ಭಾಗವನ್ನು ಮಾತ್ರ ಮಾರಾಟ ಮಾಡಿ, ಇನ್ನುಳಿದ ಉತ್ಪನ್ನಗಳನ್ನು ನವೆಂಬರ್ ವರೆಗೆ ಮಾರಾಟ ಮಾಡಲು ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ಶೇಖರಿಸುತ್ತಾರೆ. ಹಿಮಾಚಲ ಪ್ರದೇಶ (ಮುಖ್ಯವಾಗಿ ಉನಾ ಜಿಲ್ಲೆ), ಪಂಜಾಬ್ (ದೋಬಾ ಬೆಲ್ಟ್), ಕರ್ನಾಟಕ (ಹಾಸನ, ಕೋಲಾರ ಮತ್ತು ಚಿಕ್ಕಬಳ್ಳಾಪುರ), ಮಹಾರಾಷ್ಟ್ರ (ಮಂಚಾರ್) ಮತ್ತು ಯುಪಿ (ಫರೂಕಾಬಾದ್ ಮತ್ತು ಕನ್ನೌಜ್) ನಂತಹ ರಾಜ್ಯಗಳಲ್ಲಿ ತಾಜಾ ಆಲೂಗಡ್ಡೆ ಲಭ್ಯವಿದೆ. 60-75 ದಿನಗಳ ಕಡಿಮೆ ಅವಧಿಯ ಈ ಬೆಳೆ 2-4 ಡಿಗ್ರಿ ಸೆಲ್ಸಿಯಸ್‌ನಲ್ಲಿ 9-10 ತಿಂಗಳವರೆಗೆ ಸಂಗ್ರಹಿಸಲು ಯೋಗ್ಯವಾಗಿಲ್ಲ.

“ಕಳೆದ ವರ್ಷ ಹೆಚ್ಚಿನ ಆಲೂಗಡ್ಡೆ ಬೆಳೆದಿದ್ದೇವೆ. ಇದರಿಂದಾಗಿ ಒಟ್ಟು ಉತ್ಪನ್ನದ ಶೇ. 4-5ರಷ್ಟು ಆಲೂಗಡ್ಡೆಗಳು ಇನ್ನೂ ನಮ್ಮ ಕೋಲ್ಡ್ ಸ್ಟೋರ್‌ಗಳಲ್ಲಿ ಬಿದ್ದಿವೆ. ತೆಲಂಗಾಣ ಮತ್ತು ಇತರರು ಖರೀದಿಸುವುದನ್ನು ನಿಲ್ಲಿಸಿದರೆ, ಫೆಬ್ರವರಿ ಅಂತ್ಯದಿಂದ ರೈತರು ತರುವ ಹೊಸ ಆಲೂಗಡ್ಡೆಗಳಿಗೆ ಜಾಗವನ್ನು ನೀಡಲು ನಾವು ಇವುಗಳನ್ನು ರಸ್ತೆಗೆ ಎಸೆಯಬೇಕಾಗುತ್ತದೆ” ಎಂದು ವೈದ್ಯಜಿ ಶೀಟ್‌ಗ್ರಾಹ್ ಪ್ರೈ.ಲಿ. (ಕೋಲ್ಡ್‌ ಸ್ಟೋರೇಜ್‌) ಮಾಲೀಕ ದೂಂಗಾರ್ ಸಿಂಗ್ ಚೌಧರಿ ಆತಂಕ ವ್ಯಕ್ತಪಡಿಸುತ್ತಾರೆ.

ಇತ್ತ ಆಲೂಗಡ್ಡೆ ಬೆಳೆಯುವಲ್ಲಿ ತೆಲಂಗಾಣವೂ ಗಮನ ಸೆಳೆಯುತ್ತಿದೆ. ತೆಲಂಗಾಣ ರಾಜ್ಯದಲ್ಲಿ ಪ್ರಸ್ತುತ 3,500-4,000 ಎಕರೆಗಳಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತಿದೆ. ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಪ್ರದೇಶ ಆಲೂಗಡ್ಡೆ ಕೃಷಿಗೆ ಹೆಸರಾಗಿದೆ. “ನಮ್ಮ ರಾಜ್ಯವು ಆಲೂಗಡ್ಡೆ ಬೆಳೆಯಲು ಅತ್ಯಂತ ಸೂಕ್ತವಾಗಿದೆ. ವಿಶೇಷವಾಗಿ ನಾವು ಕೈಗೊಂಡ ನೀರಾವರಿ ಯೋಜನೆಗಳ ನಂತರ ಹೆಚ್ಚಿನ ಕೃಷಿಯನ್ನು ಉತ್ತೇಜಿಸಲು ಅವಕಾಶವಿದೆ. ಇದು ನಿಸ್ಸಂದೇಹವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸುಗ್ಗಿಯ 4-5 ದಿನಗಳಲ್ಲಿ ಸೇವಿಸಬಹುದಾದ ತಾಜಾ ಆಲೂಗಡ್ಡೆ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ. ಹೊಸದಾಗಿ ಬೆಳೆದ ಉತ್ಪನ್ನಗಳಿಗೆ ಬೇಡಿಕೆ ಇರುವಾಗ ಆಗ್ರಾದ ಕೋಲ್ಡ್ ಸ್ಟೋರ್‌ಗಳನ್ನು ನಾವೇಕೆ ಅವಲಂಬಿಸಬೇಕು” ಎಂದು ಕೃಷಿ ಸಚಿವ ನಿರಂಜನ್ ರೆಡ್ಡಿ ಕೇಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಓವೈಸಿಯ ಸ್ಪರ್ಧೆಯನ್ನು ಉತ್ತರ ಪ್ರದೇಶದಲ್ಲಿ ವಿರೋಧಿಸಲಾಗುತ್ತಿದೆ.


ಇದನ್ನೂ ಓದಿರಿ: ದೆಹಲಿ: ಡ್ರಗ್ ಸ್ಮಗ್ಲರ್‌ ಬಂಧಿಸಲು ಹೋದ ಪೋಲೀಸರ ಮೇಲೆ ಗುಂಪು ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...