Homeಕರ್ನಾಟಕಪ್ರಜಾತಂತ್ರ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಚುನಾವಣಾ ಕಣ!

ಪ್ರಜಾತಂತ್ರ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಚುನಾವಣಾ ಕಣ!

- Advertisement -
- Advertisement -

ಉತ್ತರಪ್ರದೇಶದ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಟ್ಟಿರುವ ದೇಶದ ನಾಗರಿಕರಿಗೆ ಭರವಸೆ ಮೂಡಿಸುತ್ತಿವೆ. ತಳಮಟ್ಟದ ವಾಸ್ತವಗಳು ಸಂಘಪರಿವಾರ ಬೆಂಬಲಿತ ಫ್ಯಾಸಿವಾದಿ ರಾಜಕೀಯ ತಂತ್ರಗಳನ್ನು ಧಿಕ್ಕರಿಸಿ ಪ್ರಜಾತಂತ್ರ ಮತ್ತಷ್ಟು ಬೇರೂರುತ್ತಿರುವುದನ್ನು ಸಾರಿ ಹೇಳುತ್ತಿವೆ.

2014, 2017 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ನಭೂತೋ ನಭವಿಷ್ಯತಿ ಎಂಬಂತೆ ಭಾರೀ ಬಹುಮತ ಪಡೆದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು 2017ರ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 312 ಸ್ಥಾನಗಳನ್ನು ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ 63 ಸ್ಥಾನಗಳನ್ನು ಗಳಿಸಿ ತನ್ನ ರಾಜಕಾರಣಕ್ಕೆ ಸರಿಸಾಟಿಯೇ ಇಲ್ಲವೆಂದು ಮೆರೆದಿದ್ದು ತಿಳಿದ ಸಂಗತಿ. ಇವುಗಳಲ್ಲಿ ಬಹುಮುಖ್ಯವಾಗಿ ಬಿಜೆಪಿ ಪರ ಕೆಲಸ ಮಾಡಿದ್ದ ಅಂಶ ಹಿಂದೂ-ಮುಸ್ಲಿಂ ಕೋಮು ಧ್ರುವೀಕರಣ. ಈಗಿನ ಚುನಾವಣೆಯಲ್ಲೂ ಅದೇ ಹಿಂದೂ – ಹಿಂದುತ್ವದ ಅಬ್ಬರ, ಕೋಮು ಧ್ರುವೀಕರಣದ ರಾಜಕಾರಣ ಕೆಲಸ ಮಾಡುತ್ತದೆಂದು ನಿರೀಕ್ಷಿಸಲಾಗಿತ್ತು. ಸಂಘ ಪರಿವಾರ ತನ್ನ ಎಂದಿನ ಚಾಳಿಯಂತೆ ಕೋಮುವಾದಿ ಅಸ್ತ್ರವನ್ನೇ ಪ್ರಯೋಗಿಸಿತು. ಹಲವು ’ಧರ್ಮ ಸಂಸತ್ತು’ಗಳನ್ನು ನಡೆಸಿ, ಅದರಲ್ಲಿ ಮುಸ್ಲಿಮರ ನರಸಂಹಾರ ಮಾಡಲು ಬಹಿರಂಗ ಕರೆ ಕೊಡಲಾಯ್ತು.

ಆದರೆ ಇದು ಅವರಿಗೆ ತಿರುಗುಬಾಣವಾಗುವ ಲಕ್ಷಣಗಳು ಕಂಡುಬಂದು ಆ ಶಕ್ತಿಗಳು ಈಗ ಬಾಲ ಮುದುರಿಕೊಂಡಿವೆ. ಮುಖ್ಯವಾಗಿ ಈ ಪ್ರಚೋದನಕಾರಿ ಷಡ್ಯಂತ್ರಗಳಿಗೆ ಉತ್ತರಪ್ರದೇಶದ ಜನ ಸೊಪ್ಪು ಹಾಕಲಿಲ್ಲ ಎಂಬುದು ಗಮನಾರ್ಹ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ವಿರೋಧ ಕಂಡುಬಂದಿದ್ದರ ಜೊತೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ನರಮೇಧಕ್ಕೆ ಪ್ರಚೋದನೆ ಕೊಡುತ್ತಿದ್ದ ಕೆಲವು ಕೇಸರಿ ಪಾಖಂಡಿಗಳು ಜೈಲುಸೇರಿದ್ದೂ ಆಯ್ತು. ಅಷ್ಟು ಮಾತ್ರವಲ್ಲ, ಅಭೂತಪೂರ್ವ ರೈತ ಚಳವಳಿಯ ಪರಿಣಾಮದಿಂದಾಗಿ ಹಿಂದೂ ರೈತರು ಹಾಗೂ ಮುಸಲ್ಮಾನ ರೈತರು ಒಂದುಗೂಡಿದ್ದಾರೆ. ಈ ಪರಿಣಾಮ ಹೆಚ್ಚಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಕಂಡುಬಂದರೂ ಇದರ ಪ್ರಭಾವ ಇಡೀ ರಾಜ್ಯದಾದ್ಯಂತ ಕಾಣಸಿಗುತ್ತದೆ. ಒಂದೇ ವೇದಿಕೆಯಲ್ಲಿ “ಹರಹರ ಮಹಾದೇವ್” ಮತ್ತು “ಅಲ್ಲಾಹು ಅಕ್ಬರ್” ಘೋಷಣೆಗಳು ಮೊಳಗಿದ್ದು ಕೋಮುವಾದಿ ರಾಜಕಾರಣಿಗಳ ನಿದ್ದೆಗೆಡಿಸಿದೆ. ಸಂವಿಧಾನ, ಪ್ರಜಾತಂತ್ರಗಳಲ್ಲಿ ನಂಬಿಕೆ ಇಟ್ಟಿರುವವರಿಗೆ ಇದೊಂದು ಸಂತಸದ ಸಂಗತಿಯೇ ಹೌದು.

ಮತ್ತೊಂದು ಅಂಶವನ್ನೂ ಗಮನಿಸಬೇಕಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿ ರಾಮಮಂದಿರ ನಿರ್ಮಾಣದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆದ ಸಂಘ ಪರಿವಾರ ರಾಮಮಂದಿರ ನಿರ್ಮಾಣದ ಯಶಸ್ಸನ್ನು ತನ್ನ ಮುಡಿಗೇರಿಸಿಕೊಂಡು ಈ ಬಾರಿ ಮತ್ತಷ್ಟು ಹೆಚ್ಚಿನ ಲಾಭದ ಲೆಕ್ಕಾಚಾರದಲ್ಲಿತ್ತು. ಆದರೆ ವಾಸ್ತವ ಸ್ಥಿತಿಗತಿಗಳು ಬೇರೆಯದೇ ಕತೆ ಹೇಳುತ್ತಿವೆ. ಉತ್ತರಪ್ರದೇಶದ ಸಾಮಾನ್ಯ ಮತದಾರರ ದೃಷ್ಟಿಯಲ್ಲಿ ಮಂದಿರ ವಿವಾದ ಈಗ ಮುಗಿದ ಅಧ್ಯಾಯ. ಕಾಶಿ ಮತ್ತು ಮಥುರಾ ವಿಷಯಗಳನ್ನು ಮುನ್ನೆಲೆಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಅವು ಕೂಡ ಟೇಕ್‌ಆಫ್ ಆಗಲೇ ಇಲ್ಲ. ಮಂದಿರ ನಿರ್ಮಾಣದ ಬಗ್ಗೆ ಸಾಮಾನ್ಯ ಹಿಂದುಗಳಲ್ಲಿ ಒಲವಿದೆಯಾದರೂ ಕೇವಲ ಮಂದಿರ ಸಿಗುತ್ತಿದೆಯೆಂಬ ಭ್ರಮೆಯಲ್ಲಿ ಮುಳುಗಿ ಈ ಹಿಂದಿನಂತೆ ಬಿಜೆಪಿ ಬಾಲ ಹಿಡಿದು ಹೋಗಲು ನಿರಾಕರಿಸುತ್ತಿದ್ದಾರೆ.

ಹಿಜಾಬ್ ವಿವಾದ ಸೃಷ್ಟಿಯಾಗಿದ್ದು ಕರ್ನಾಟಕದಲ್ಲೇ ಆದರೂ ಅದನ್ನು ಬಳಸಿಕೊಳ್ಳುವ ವಿಫಲ ಯತ್ನ ನಡೆದಿದ್ದು ಮಾತ್ರ ಯು.ಪಿ ಚುನಾವಣೆಯಲ್ಲಿ. ಈ ತಂತ್ರಗಾರಿಕೆಯ ಭಾಗವಾಗಿಯೇ ಸಾಕಷ್ಟು ಹಿಂದಿ ಟಿವಿ ಚಾನೆಲ್‌ಗಳು ಕರಾವಳಿಯಲ್ಲಿ ಬಂದು ಠಿಕಾಣಿ ಹೂಡಿ, ರಾತ್ರಿ ಹಗಲು ಹಿಜಾಬ್ ರಂಪಾಟ ಪ್ರಚುರಪಡಿಸಿದವು. ಹಿಂದಿ ಟಿವಿಗಳ ಪ್ಯಾನೆಲ್ ಡಿಸ್ಕಷನ್‌ಗಳಲ್ಲಿ ಪ್ರಮುಖ ಸ್ಥಾನ ಕಲ್ಪಿಸಿದವು. ಉಹೂಂ, ಏನೇ ಮಾಡಿದರೂ ಇವಕ್ಕೆಲ್ಲಾ ಜನ ಸೊಪ್ಪು ಹಾಕಲಿಲ್ಲ. ಸುಮಾರು 12ರಿಂದ 15%ರಷ್ಟಿರುವ ಕಟ್ಟರ್ ಪಂಥೀಯರು ಇದಕ್ಕೆ ಅಪವಾದವಷ್ಟೆ. ಇದು ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು ರಾಜಕಾರಣ ಮಾಡುವ ಹಳೆತಂತ್ರ ಎಂಬುದು ಬಹುತೇಕ ಸಾಮಾನ್ಯ ಮತದಾರರ ಪ್ರತಿಕ್ರಿಯೆ. ಎಲ್ಲರನ್ನೂ ಎಲ್ಲ ಕಾಲಕ್ಕೂ ಯಾಮಾರಿಸುವುದು ಸಾಧ್ಯವಿಲ್ಲವಲ್ಲ ತಾನೇ?

ಪತ್ರಕರ್ತರು ಕೇಳುವ “ಈ ಬಾರಿ ಚುನಾವಣೆಯ ವಿಷಯಗಳೇನು?” ಎಂಬ ಪ್ರಶ್ನೆಗೆ “ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಬಿಡಾಡಿ ದನಗಳ ಸಮಸ್ಯೆ” ಎಂಬ ಉತ್ತರ ಸರ್ವೇಸಾಮಾನ್ಯ. ಜೊತೆಗೆ, ಒಬಿಸಿ ಮತ್ತು ದಲಿತ ಜಾತಿಗಳನ್ನು ನಿರ್ಲಕ್ಷಿಸಿದ ವಿಚಾರ, ಮೀಸಲಾತಿಯ ವಿಚಾರಗಳೂ ಮುನ್ನೆಲೆಗೆ ಬರುತ್ತಿವೆ. ಧಾರ್ಮಿಕ ಧ್ರುವೀಕರಣದ ವಿಷಯಗಳನ್ನು ಬದಿಗೊತ್ತಿ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಿದ್ದಾರೆ. ತಮ್ಮನ್ನು ಕಾಡುತ್ತಿರುವ ಬದುಕಿನ ನೈಜ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಬೆಲೆಯೇರಿಕೆ, ನಿರುದ್ಯೋಗ, ಕೃಷಿ ಸಂಕಷ್ಟ ಇತ್ಯಾದಿ ನೈಜ ಸಮಸ್ಯೆಗಳು ಈಗ ಚುನಾವಣಾ ಕಣದಲ್ಲಿ ಅತಿಹೆಚ್ಚು ಚರ್ಚಿತ ವಿಚಾರಗಳು.

ಮಂದಿರ ನಿರ್ಮಾಣದ ತಮ್ಮ ’ಸಾಧನೆ’ಯ ವಿಚಾರವನ್ನು ಮೋದಿ, ಶಾ, ಯೋಗಿಯಾದಿಯಾಗಿ ಯಾರೂ ಮಾತಾಡುತ್ತಿಲ್ಲ. ತಳಮಟ್ಟದ ವಾಸ್ತವಗಳು ತಿರುಗುಬಾಣವಾಗುತ್ತವೆ ಎಂಬುದು ಅವರಿಗೆ ಗೊತ್ತು. ಅದೇನೋ ಹೇಳ್ತಾರಲ್ಲಾ, ಅತಿಯಾದರೆ ಅಮೃತವೂ ವಿಷವಾಗುತ್ತೆ ಅಂತ. ಹೀಗಾಗಿ ತಮ್ಮ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಓಟು ಕೇಳುವ ಬದಲು ಹಿಂದಿನ ಸರ್ಕಾರದ ವೈಫಲ್ಯಗಳ ಬಗ್ಗೆ, ಮುಂದೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಆಗುವ ’ಅನಾಹುತಗಳ’ ಬಗ್ಗೆ ಎಗ್ಗುಸಿಗ್ಗೂ ಇಲ್ಲದೆ ಮಾತಾಡುತ್ತಿದ್ದಾರೆ. ಪರಿಣಾಮವಾಗಿ ಕೇಂದ್ರದಲ್ಲಿ 8 ವರ್ಷ, ರಾಜ್ಯದಲ್ಲಿ 5 ವರ್ಷಗಳ ’ಡಬಲ್ ಇಂಜಿನ್ ಸರ್ಕಾರ’ದ ಸಾಧನೆಯೇನು ಎಂಬುದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ.

ಮೊದಲ ಮೂರು ಹಂತದ ಮತದಾನದ ದಿಕ್ಕು ಸ್ಪಷ್ಟವಾಗಿ ತಮ್ಮ ವಿರುದ್ಧವಾಗಿತ್ತು ಎಂಬುದನ್ನು ಅರಿತ ಬಿಜೆಪಿ, ತಮ್ಮ ಸಾಧನೆಯ ಹೊಸ ನರೇಟಿವ್ ಕಟ್ಟತೊಡಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ’ಗೂಂಡಾ ರಾಜ್‌ಅನ್ನು ಖತಂ’ ಮಾಡಿ ಕಾನೂನು ಸುವ್ಯವಸ್ಥೆಯನ್ನು ತಂದಿದ್ದೇವೆ ಎಂಬುದು ಒಂದು ಕ್ಲೇಮ್. ಕೊರೊನಾ ಸಂಕಷ್ಟದ ಕಾಲದಲ್ಲಿ ಉಚಿತ ರೇಷನ್ ಹಂಚಿದ್ದೇವೆ, ಫಲಾನುಭವಿಗಳ ಅಕೌಂಟಿಗೆ ನೇರ ಪಾವತಿ ಮಾಡಿದ್ದೇವೆ, ಈ ಫಲಾನುಭವಿಗಳು ತಮ್ಮ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುತ್ತಾರೆ ಎಂಬುದು ಸದ್ಯಕ್ಕೆ ಚಲಾವಣೆಯಲ್ಲಿರುವ ಬಿಜೆಪಿಯ ನರೇಟಿವ್. ಈ ಕ್ಲೇಮ್‌ಗಳನ್ನು ಪೂರ್ಣವಾಗಿ ಅಲ್ಲಗಳೆಯಲಾಗದು ಎಂಬುದು ನಿಜ. ತಮ್ಮನ್ನೇ ನೆಚ್ಚಿಕೊಂಡಿರುವ ನಿಷ್ಠ ಮತದಾರರು ಹಾಗೂ ಕಾರ್ಯಕರ್ತರಿಗೆ ಇದು ಪಥ್ಯವಾಗಬಹುದೇ ವಿನಃ ಬಹುತೇಕ ತಟಸ್ಥ ಮತದಾರರನ್ನು ಈ ನರೇಟಿವ್ ಸೆಳೆಯುತ್ತಿಲ್ಲ ಎಂಬುದೂ ಕೂಡ ವಾಸ್ತವ.

ಇದೇ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ದಾಖಲಿಸುವುದು ಸೂಕ್ತ.

ಯಾರು ಏನೇ ಮಾಡಿದರೂ, ಎಷ್ಟೇ ಪ್ರತಿಭಟನೆಗಳು ನಡೆದರೂ ಮೋದಿ ಸರ್ಕಾರವನ್ನು ಮಣಿಸುವುದು ಅಸಾಧ್ಯ ಎಂಬುದು ಜನಜನಿತ ವಿಚಾರ. ಮುಖ್ಯಮಂತ್ರಿಯಾಗಿ 12 ವರ್ಷಗಳು ಪ್ರಧಾನಿಯಾಗಿ ಸುಮಾರು 8 ವರ್ಷಗಳ ನಮ್ಮೆಲ್ಲರ ಅನುಭವ ಇದನ್ನೇ ಹೇಳುತ್ತಿದೆ. ಇವೆಲ್ಲವೂ ನಿಜ. ಅಂತೆಯೇ ಉತ್ತರಪ್ರದೇಶದ ಚುನಾವಣೆಯ ಭೀತಿಯಲ್ಲಿ ಮೋದಿ ಮಹಾಶಯ ಹೋರಾಟಕ್ಕಿಳಿದ ಧೀಮಂತ ರೈತ ಸಮುದಾಯದೆದುರು ಮಂಡಿಯೂರಿದ್ದು ಈಚಿನ ಹೊಚ್ಚಹೊಸ ಸತ್ಯ. ಸರ್ವಾಧಿಕಾರಿ ಮನಸ್ಥಿತಿಯ ಈ ವ್ಯಕ್ತಿ ಮೂರು ಕರಾಳ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಂಡಿದ್ದು, ನಿರ್ದಿಷ್ಟವಾಗಿ ಉತ್ತರಪ್ರದೇಶದ ರೈತಾಪಿಯಲ್ಲಿ ಅಸಮಾಧಾನ ಮಡುಗಟ್ಟಿದ್ದು ಬರಲಿರುವ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಸುಳಿವು ಸಿಕ್ಕ ನಂತರವೇ. ರೈತಾಪಿಯ ಈ ಗೆಲುವು ನಮ್ಮ ಕಾಲಮಾನದ ಪ್ರಜಾತಂತ್ರದ ಅತ್ಯಂತ ಮಹತ್ವದ ಗೆಲುವು ಎಂಬುದನ್ನು ನಾವು ಗುರುತಿಸಲೇಬೇಕು. ಚಾರಿತ್ರಿಕ ರೈತ ಚಳವಳಿ ದೇಶದ ಇತರೆ ಪ್ರಜಾತಾಂತ್ರಿಕ ಹೋರಾಟಗಳಿಗೂ ಹೊಸ ಚೈತನ್ಯ, ಕಸುವು ತಂದುಕೊಟ್ಟಿದೆ.

ಬಿಜೆಪಿ ಮತ್ತು ಆರೆಸ್ಸೆಸ್ ಕೂಟದೊಳಗೆ ಈ ಕಾನೂನು ವಾಪಾಸಾತಿ ಹೊಸ ಸಮಸ್ಯೆಯೊಂದನ್ನು ಹುಟ್ಟುಹಾಕಿದೆ. ಸೋಲುವ ಒತ್ತಡದಲ್ಲಿ ಮೋದಿ ಮಹಾಶಯರೇನೋ ದಿಢೀರನೆ ಕಾನೂನು ವಾಪಸ್ ಪಡೆದುಬಿಟ್ಟರು. ಆದರೆ ತಳಮಟ್ಟದಲ್ಲಿ ’ರೈತರನ್ನು ಉದ್ಧಾರಮಾಡಲಿಕ್ಕಾಗಿಯೇ ಈ ಕಾನೂನುಗಳು’, ’ಯಾವುದೇ ಕಾರಣಕ್ಕೂ ಇವುಗಳನ್ನು ವಾಪಸ್ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಹಗಲಿರುಳು ಗಂಟಲು ಹರಿದುಕೊಂಡು ವಾದ ಮಾಡುತ್ತಿದ್ದ ಕಾರ್ಯಕರ್ತರು, ನಾಯಕರು ಈ ವಾಪಸಾತಿಯ ನಂತರ ಮತ್ತೆ ಅದೇ ಜನರಿಗೆ ಮುಖ ತೋರಿಸೋ ಮುಜುಗರ ಇದೆಯಲ್ಲಾ, ಅದಕ್ಕೇನು ಪರಿಹಾರ ಮಾರ್ಗ? ಇಷ್ಟು ಸಾಲದು ಎಂಬಂತೆ ಕೇಂದ್ರದ ಮಂತ್ರಿ ಮಗ ಜೀಪು ಹತ್ತಿಸಿ ರೈತರನ್ನು ಕೊಂದ ಆರೋಪದ ದುರ್ಘಟನೆಯ ನಂತರವಂತೂ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು ಅಸಾಧ್ಯ ಎಂಬಂತಾಗಿದೆ. ಭಕ್ತಮಂಡಳಿ ಈ ವಿಷಯದಲ್ಲಿ ಗೊಂದಲಕ್ಕೆ ಸಿಕ್ಕಿಬಿದ್ದಿದ್ದು ಅವರಲ್ಲಿ ಗಣನೀಯ ಪ್ರಮಾಣದ ಮಂದಿ ಉತ್ಸಾಹ ಕಳೆದುಕೊಂಡಿದ್ದಾರೆಂದು ತಳಮಟ್ಟದ ವರದಿಗಳು ಹೇಳುತ್ತಿವೆ.

2014ರ ಚುನಾವಣೆಯಿಂದ ಆರಂಭಗೊಂಡು ಮೋದಿಯನ್ನು ಮುಂದಿಟ್ಟುಕೊಂಡು ಒಂದು ರೀತಿಯ ಅಧ್ಯಕ್ಷೀಯ ರಾಜಕಾರಣದ ಮಾದರಿಯನ್ನು ಬಿಜೆಪಿ ಪಕ್ಷ ದೇಶದ ಮೇಲೆ ಹೇರಲು ಹೊರಟಿದ್ದು ಮತ್ತೊಂದು ಗಂಭೀರ ಸವಾಲಾಗಿತ್ತು. ಭಾರತದಂಥ ಬಹುಸಂಸ್ಕೃತಿಯ, ಬಹುಭಾಷೆಯ, ಬಹು ಧರ್ಮಗಳ, ವಿಭಿನ್ನ ರೀತಿಗಳ ಸಮಾಜೋ-ಆರ್ಥಿಕ ಹಿನ್ನೆಲೆಯುಳ್ಳ ದೇಶದಲ್ಲಿ ಒಂದು ಪಕ್ಷ, ಒಬ್ಬನೇ ನಾಯಕ (ಸರ್ವಾಧಿಕಾರಿಯ ಪರೋಕ್ಷ ಮಾದರಿ) ಎಂಬ ಅತ್ಯಂತ ಅಪ್ರಜಾತಾಂತ್ರಿಕ ವಿಚಾರವನ್ನು ಮುನ್ನೆಲೆಗೆ ತರಲು ಕಸರತ್ತು ನಡೆಸಿದೆಯೆಂಬುದನ್ನು ಕಂಡಿದ್ದೇವೆ. ಭಾರತದಲ್ಲಿ ದ್ವಿಪಕ್ಷೀಯ ಮಾದರಿಯ ಚುನಾವಣೆಯನ್ನು ತರಬೇಕೆಂಬ ಚರ್ಚೆಯನ್ನೂ ಆಗಾಗ ತೇಲಿಬಿಡುತ್ತಾರೆ. ಎದುರಾಳಿ ಪಕ್ಷಗಳ ಶಾಸಕರನ್ನು, ನಾಯಕರನ್ನು ಆಪೋಶನ ತೆಗೆದುಕೊಂಡು ರಾಕ್ಷಸ ರಾಜಕಾರಣ ನಡೆಸುತ್ತಾ ತಮ್ಮದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಕೊಚ್ಚಿಕೊಳ್ಳುತ್ತಿತ್ತಲ್ಲಾ, ಅದೇ ರಾಜಕೀಯ ಪಕ್ಷ ಇಂದು ಉತ್ತರಪ್ರದೇಶದಲ್ಲಿ ಸೋಲಿನ ಭೀತಿ ಎದುರಿಸುತ್ತಿದ್ದು ಸಣ್ಣಪುಟ್ಟ ಪಕ್ಷಗಳಿಗೂ ದುಂಬಾಲು ಬೀಳುತ್ತಿದೆ. ಅಪ್ನಾ ದಳ್, ನಿಷಾದ್ ಪಾರ್ಟಿಯಂಥ ಎರಡು ಮೂರು ಶಾಸಕರನ್ನೂ ಗೆಲ್ಲಲಾಗದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು, ಈ ದುರ್ಬಲ ಪಕ್ಷಗಳ ಬೇಡಿಕೆಗೂ ಮಣಿಯಬೇಕಾಗಿ ಬಂದಿದೆ. ಲೋಕದಳದ ಜಯಂತ್ ಚೌಧರಿಗೆ ಮತ್ತೆ ಬಹಿರಂಗ ಆಹ್ವಾನ ಕೊಡುತ್ತಿರುವುದು ಮಾತ್ರವಲ್ಲದೆ, ಚುನಾವಣೋತ್ತರ ಮೈತ್ರಿಗೂ ಸಿದ್ಧವಿರುವುದಾಗಿ ಸ್ವತಃ ಅಮಿತ್‌ಶಾ ಗೋಗರೆಯುತ್ತಿದ್ದಾರೆ. ದೇಶದ ರಾಜಕಾರಣವನ್ನು ಫ್ಯಾಸಿವಾದಿ ದಿಕ್ಕಿನತ್ತ ಕೊಡೊಯ್ಯಬೇಕೆಂದು ಬಯಸುತ್ತಿರುವ ಪಕ್ಷಕ್ಕೆ ಈ ನೆಲದ ವಾಸ್ತವಗಳನ್ನು ಉತ್ತರಪ್ರದೇಶದ ಚುನಾವಣಾ ಕಣ ಮತ್ತೊಮ್ಮೆ ಸಾರಿ ಹೇಳುತ್ತಿದೆ.

ಈ ಬಾರಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. 2014ರಿಂದ ಆರಂಭಗೊಂಡು ಇಲ್ಲಿಯವರೆಗೆ ಬೇರೆ ಪಕ್ಷಗಳ ನಾಯಕರು ಬಿಜೆಪಿಯತ್ತ ವಲಸೆ ಹೋಗುವುದು ವಾಡಿಕೆಯಂತಾಗಿತ್ತು. ಹಾಗೆ ಒಮ್ಮೆ ಒಳಹೋದರೆ ಹೊರಬರುವ ಮಾರ್ಗಗಳು ಬಹುತೇಕ ಬಂದ್. ಯಾಕೆಂದರೆ ಐಟಿ, ಇಡಿ ಇತ್ಯಾದಿ ಅಸ್ತ್ರಗಳು ಬಿಜೆಪಿ ಬತ್ತಳಿಕೆಯಲ್ಲಿವೆ. ಹೀಗೆ ಒಂದಷ್ಟು ಆಮಿಷ ಹಾಗೂ ಭೀತಿಯ ಬಂಧನದಿಂದ ಬಿಡಿಸಿಕೊಂಡು ಬೇರೆ ಪಕ್ಷಗಳತ್ತ ಮುಖ ಮಾಡಿದವರು ಇಲ್ಲವೆಂದೇ ಹೇಳಬೇಕು. ಆದರೆ ಈ ಬಾರಿ ಹೇಗಾಗಿದೆ ನೋಡಿ, ಉತ್ತರಪ್ರದೇಶದ ಬಿಜೆಪಿಯಿಂದ

ಸಮಾಜವಾದಿ ಪಕ್ಷಕ್ಕೆ ಬಂದು ಸೇರುವವರ ಟ್ರಾಫಿಕ್ ಹೆಚ್ಚಾಗಿಬಿಟ್ಟಿದೆ. ಕೆಲವು ಕ್ಯಾಬಿನೆಟ್ ಮಂತ್ರಿಗಳನ್ನೂ ಒಳಗೊಂಡು ಹಲವು ಶಾಸಕರು, ವಿವಿಧ ಹಂತದ ನಾಯಕರು ಎಸ್‌ಪಿ ಸೇರಿದ್ದಾರೆ. ಈ ಟ್ರಾಫಿಕ್ ಎಷ್ಟು ಹೆಚ್ಚಾಗಿತ್ತೆಂದರೆ ಅದು ಎಸ್‌ಪಿಯೊಳಗೆ ಆಂತರಿಕ ಸಮಸ್ಯೆಯನ್ನು ಸೃಷ್ಟಿಸಿ, ಪರಿಣಾಮವಾಗಿ ಅಖಿಲೇಶ್ ’ಇನ್ನು ಮುಂದೆ ನಮ್ಮ ಪಕ್ಷಕ್ಕೆ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ’ ಎಂದು ನೋ ವೇಕೆನ್ಸಿ ಅಂತಾರಲ್ಲಾ ಹಾಗೆ ಒಂದು ಪತ್ರಿಕಾ ಗೋಷ್ಠಿ ನಡೆಸಬೇಕಾಯ್ತು. ಅಲ್ಲಿಗೆ ಬಿಜೆಪಿ ಪಕ್ಷದೊಳಗಿನ ಸರ್ವಾಧಿಕಾರಿ ನಿಯಂತ್ರಣವನ್ನು ಧಿಕ್ಕರಿಸಿ ಹೊರಹರಿವು ಶುರುವಾದಂತಾಯ್ತು. ಪಕ್ಷದಿಂದ ಪಕ್ಷಕ್ಕೆ ಹಾರುವ ಈ ಅವಕಾಶವಾದಿ ರಾಜಕಾರಣಿಗಳು ಪ್ರಜಾತಂತ್ರವನ್ನು ಉದ್ಧಾರ ಮಾಡೋದು ಅಷ್ಟರಲ್ಲೇ ಇದೆ ಅನ್ನೋದು ಬೇರೆ ಮಾತು. ಆದರೆ ಏಕಾಧಿಪತ್ಯ ಧೋರಣೆಯ ಬಿಜೆಪಿ ನಾಯಕತ್ವಕ್ಕೆ ಸರಿಯಾದ ಪೆಟ್ಟು ಬೀಳುತ್ತಿರುವುದಂತೂ ನಿಚ್ಚಳ.

ಬಿಜೆಪಿಯ ಕಾರ್ಪೊರೆಟ್ ಪ್ರಚಾರ ತಂತ್ರಕ್ಕೆ ಹೊಡೆತ ಕೊಟ್ಟಿರೋದು ಮತ್ತೊಂದು ಪ್ರಮುಖ ಅಂಶ. ಕಾರ್ಪೊರೆಟ್ ಧಣಿಗಳಿಂದ ಹರಿದುಬಂದ ಸಾವಿರಾರು ಕೋಟಿಗಳ ಧನಬಲದಿಂದ ಹಾಗೂ ಐಟಿ, ಇಡಿ ಭಯದ ಜೊತೆಗೆ ಜಾಹಿರಾತುಗಳ ನಿಯಂತ್ರಣಗಳ ಮೂಲಕ ಇಡೀ ಮಾಧ್ಯಮ ಕ್ಷೇತ್ರವನ್ನು ಬಿಜೆಪಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಸರ್ವವಿಧಿತ. ಹಾಗೆಯೇ ತಮ್ಮ ಐಟಿ ಸೆಲ್ ಜಾಲದ ಮೂಲಕ ಸಾಮಾಜಿಕ ಜಾಲತಾಣಗಳನ್ನೂ ಆವರಿಸಿಕೊಂಡು ದಶದಿಕ್ಕುಗಳಿಂದಲೂ ಸುಳ್ಳು ಪೊಳ್ಳುಗಳನ್ನು, ಜುಮ್ಲಾಗಳನ್ನು ಪ್ರಚುರಪಡಿಸುತ್ತಾ ಜನರ ಆಲೋಚನಾ ಶಕ್ತಿಯನ್ನು ನಿಯಂತ್ರಣ ಮಾಡಬಹುದೆಂಬ ಭ್ರಮೆಯಲ್ಲಿ ಕೇಸರಿಕೂಟ ಮುಳುಗಿತ್ತು. ದೇಶದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ ರಾತ್ರಿಹಗಲು ಮೋದಿ ಭಜನೆ ಮಾಡುತ್ತಿರುವ ಅಸಹ್ಯಕರ ವಿದ್ಯಮಾನಕ್ಕೆ ಪ್ರತಿಯಾಗಿ ಇದೀಗ ಹೊಸ ಪ್ರತಿರೋಧದ ಅಲೆಯೊಂದು ಹುಟ್ಟಿಕೊಂಡಿದೆ. ನೂರಾರು ಸ್ವತಂತ್ರ ನಿರ್ಭೀತ ಪತ್ರಕರ್ತರು ಗೋದಿ ಮೀಡಿಯಾಗಳನ್ನು ತೊರೆದು ತಳಮಟ್ಟದಲ್ಲಿ ಕಾರ್ಯನಿರತರಾಗಿದ್ದಾರೆ. ವಿಶೇಷವಾಗಿ ಹಿಂದಿ ಬೆಲ್ಟ್‌ನಲ್ಲಿ ಸಕ್ರಿಯವಾಗಿರುವ ಕನಿಷ್ಟ ಎರಡು ಡಜನ್ ಯೂಟ್ಯೂಬ್ ನ್ಯೂಸ್ ಚಾನಲ್‌ಗಳು, ಹತ್ತಾರು ವೆಬ್‌ಸೈಟ್‌ಗಳು ಕೋಟ್ಯಂತರ ಜನರನ್ನು ತಲುಪುತ್ತಿವೆ. ಕೆಲವು ಯೂಟ್ಯೂಬ್ ಚಾನಲ್‌ಗಳಿಗೆ 60 ಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ ಎಂಬುದು ಭರವಸೆ ಹುಟ್ಟಿಸುವ ಸಂಗತಿ. ಈಗಿನ ಐದು ರಾಜ್ಯಗಳ ಚುನಾವಣೆಗಳಿಗೆ ಸಂಬಂಧಿಸಿದ ಕ್ಷಣಕ್ಷಣದ ಬೆಳವಣಿಗೆಗಳನ್ನು, ತಳಮಟ್ಟದ ವಸ್ತು ಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಡುವ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇವು ಜನರಿಗೆ ಪರ್ಯಾಯ ಸುದ್ದಿ ಮಾಧ್ಯಮಗಳಾಗಿದ್ದು ಇಂಥಾ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿವೆ.

ಈ ಯೂಟ್ಯೂಬ್‌ಗಳ ಪ್ರಭಾವ ಎಷ್ಟಿದೆಯೆಂದರೆ ಕೆಲದಿನಗಳ ಹಿಂದೆ ಸಂಜಯ್ ಶರ್ಮ ಎಂಬ ಹಿರಿಯ ಪತ್ರಕರ್ತ ನಡೆಸುವ 4PM New ಎಂಬ ಯೂಟ್ಯೂಬ್ ಚಾನಲ್ ಇದ್ದಕ್ಕಿದ್ದಂತೆ ಬಂದ್ ಆಗಿತ್ತು. ಅದನ್ನು ಹ್ಯಾಕ್ ಮಾಡಲಾಗಿತ್ತಾ? ಅಥವ ಸರ್ಕಾರಿ ಯಂತ್ರಾಂಗದ ಕೈವಾಡವಿತ್ತಾ? ಯಾವುದೂ ಸ್ಪಷ್ಟವಿಲ್ಲ. ಸಂಜಯ್ ಶರ್ಮ ಪ್ರತಿದಿನ ಹೊರತರುತ್ತಿದ್ದ ಸ್ಫೋಟಕ ಸುದ್ದಿಗಳ ಬಗ್ಗೆ ತಿಳಿದಿರುವವರಿಗೆ ಈ ದಿಢೀರ್ ಬಂದ್‌ಅನ್ನು ಅರ್ಥಮಾಡಿಕೊಳ್ಳೋದು ಕಷ್ಟವೇನಲ್ಲ. ವ್ಯಾಪಕ ವಿರೋಧವಾದ ಹಿನ್ನೆಲೆಯಲ್ಲಿ ಮತ್ತೆ ಈಗ ಚಾನೆಲ್ ಚಾಲ್ತಿಗೆ ಬಂದಿದೆ.

ಒಟ್ಟಾರೆಯಾಗಿ ಹೇಳೋದಾದರೆ, ಉತ್ತರಪ್ರದೇಶದಲ್ಲಿ ಐದು ಹಂತಗಳ ಒಟ್ಟು 292 ಸ್ಥಾನಗಳ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದೆ. ಸ್ವತಂತ್ರ ಪತ್ರಕರ್ತರು ಹಾಗೂ ರಾಜಕೀಯ ವಿಶ್ಲೇಷಕರ ಪ್ರಕಾರ ಬಿಜೆಪಿ ಈ ಕ್ಷೇತ್ರಗಳಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವುದು ಖಚಿತ. ಹಾಗೆಯೇ ಎಸ್‌ಪಿ ಮೈತ್ರಿಕೂಟ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ಎರಡು ಹಂತಗಳಲ್ಲೂ ಇದೇ ಪರಿಣಾಮ ಮುಂದುವರೆಯುವ ನಿರೀಕ್ಷೆ ಇದೆ.

ಮತದಾನದ ಟ್ರೆಂಡ್ ಬಿಚ್ಚಿಡುತ್ತಿರುವ ಸತ್ಯ

ಕಳೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಿಗೆ ಹೋಲಿಸಿದರೆ ಈ ಬಾರಿ ಸರಾಸರಿ ಆರರಿಂದ ಏಳು ಶೇಕಡಾ ಕಡಿಮೆ ಮತದಾನ ಆಗಿದೆ. ಅದರಲ್ಲಿ ಬಿಜೆಪಿ ಬಲಿಷ್ಠವಾಗಿರುವ ಕ್ಷೇತ್ರಗಳ ನಗರ ಪ್ರದೇಶಗಳ ಮತದಾನ ಪ್ರಮಾಣ ಇನ್ನೂ ಕಡಿಮೆ ಇದೆ. ಮತ್ತೊಂದು ಕಡೆ ಬಿಜೆಪಿ ದುರ್ಬಲವಾಗಿರುವ ಗ್ರಾಮೀಣ ಪ್ರದೇಶಗಳ ಮತದಾನ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಾಗಿದೆ. ಇವೆಲ್ಲದರ ಜತೆಗೆ ಅಖಿಲೇಶ್ ಯಾದವ್ ನಡೆಸುತ್ತಿರುವ ಚುನಾವಣಾ ರ್‍ಯಾಲಿ ಮತ್ತು ಪ್ರಚಾರಗಳಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಮೋದಿಶಾ ಮತ್ತು ಆದಿತ್ಯನಾಥ್ ಅವರು ನಡೆಸುತ್ತಿರುವ ರ್‍ಯಾಲಿಗಳಲ್ಲಿ ಜನಕ್ಕೆ ಬರಗಾಲ ಬಂದಿರುವುದು ಒಂದು ಕಡೆಗಾದರೆ, ಸೇರುತ್ತಿರುವ ಜನರಲ್ಲೂ ಅಖಿಲೇಶ್ ರ್‍ಯಾಲಿಯಲ್ಲಿ ಕಾಣುವ ಉತ್ಸಾಹ ಮತ್ತು ಚೈತನ್ಯ ಕಾಣುತ್ತಿಲ್ಲ. ಇವೆಲ್ಲವೂ ಕೂಡ ಬಿಜೆಪಿ ಪಾಲಿಗೆ ಈ ಬಾರಿಯ ಫಲಿತಾಂಶ ನಕಾರಾತ್ಮಕವಾಗಿರಲಿದೆ ಎನ್ನುವ ಗ್ರೌಂಡ್ ರಿಪೋರ್ಟ್‌ಗಳು ಬರುತ್ತಿವೆ.

ಇದೆಲ್ಲಾ ಕಂಡು ಕಂಗಾಲಾಗಿರುವ ಸಂಘಪರಿವಾರದ ಅಧಿನಾಯಕರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಭಾರೀ ಪ್ರಮಾಣದ ಕಾಯಕರ್ತರನ್ನು, ನೆರೆಯ ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ ಮುಂತಾದ ಕಡೆಗಳಿಂದ ಕರೆಸಿಕೊಂಡು ಕಣಕ್ಕಿಳಿಸಿದ್ದಾರೆ. ಅವರುಗಳು ತಮ್ಮ ಸಾಂಪ್ರದಾಯಿಕ ಮತದಾರರನ್ನು ಪುಸಲಾಯಿಸಿ, ಬೆಣ್ಣೆ ಹಚ್ಚಿ ಮತಗಟ್ಟೆಗಳಿಗೆ ಕರೆದುಕೊಂಡು ಬರುವ ಕೆಲಸಕ್ಕೆ ಹಚ್ಚಿದ್ದಾರೆ. ಇವೆಲ್ಲವೂ ಅಲ್ಪ ಪ್ರಮಾಣದ ಪರಿಣಾಮ ಬೀರಬಹುದೇ ಹೊರತು, ಬಿಜೆಪಿಯ ವಿರುದ್ಧ ಎದ್ದಿರುವ ಅಲೆಯನ್ನು ಉಪಶಮನಗೊಳಿಸುವುದು ಸಾಧ್ಯವಿಲ್ಲ ಎಂಬುದು ಗ್ರೌಂಡ್ ರಿಯಾಲಿಟಿಯಾಗಿದೆ.

ಇವೆಲ್ಲದರ ಜತೆಗೆ ಗಮನಿಸಬೇಕಾದ ಸಂಗತಿ ಎಂದರೆ, ಇದುವರೆಗೂ ಬಿರುಕಾಗಿ ಭಿನ್ನ ಹಾದಿ ಹಿಡಿದಿದ್ದ ಸಮಾಜವಾದಿ ಪರಿವಾರದ ಪಕ್ಷಗಳು, ಗುಂಪುಗಳಲ್ಲೇ ಬಹುತೇಕರು ವಾಪಾಸ್ ಅಖಿಲೇಶ್ ಬೆನ್ನಿಗೆ ನಿಂತಿದ್ದು ಇವರಲ್ಲಿ ಅತ್ಯುತ್ಸಾಹ ವ್ಯಕ್ತವಾಗುತ್ತಿದೆ. ಅದೇ ಬಿಜೆಪಿ ಪರಿವಾರದ ಪಕ್ಷ ಮತ್ತು ಪರಿವಾರದ ಜಾತಿ ಸಮೀಕರಣದ ಒಳಗೇ ಪರಸ್ಪರರ ವಿರುದ್ಧ ಭಿನ್ನ ಧ್ವನಿಗಳು, ಮುನಿಸು, ಸಿಟ್ಟು ವ್ಯಕ್ತವಾಗುತ್ತಿವೆ.

ಇವೆಲ್ಲದರ ಒಟ್ಟು ಪರಿಣಾಮವಾಗಿ ಉತ್ತರದಿಂದ ಬದಲಾವಣೆಯ ಗಾಳಿ ರಭಸವಾಗಿ ಬೀಸಲಿದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಆಧಾರದಲ್ಲಿ ರೂಪು ತಳೆದಿರುವ ನಮ್ಮ ಪ್ರಜಾತಂತ್ರ ಹಿಟ್ಲರ್‌ಶಾಹಿಗಳಿಗೆ ಪ್ರತ್ಯುತ್ತರ ಕೊಡಲು ಸಜ್ಜಾಗುತ್ತಿದೆ ಎನ್ನಬಹುದೆ?


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ -2022: ಬಿಜೆಪಿ ಸೋಲಿನ ಭವಿಷ್ಯ ನುಡಿದ ನಾಯಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನೀವು ಸಹ ಕೋಮುವಾದಿ ಮನಸ್ಸು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ…. ಗೌರಿ.ಕಂ …. ಆದುನಿಕ ಮನು

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...