ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಗೋ ರಕ್ಷಕರು ಮುಸ್ಲೀಂ ಯುವಕನ ಮೇಲೆ ಮನಸೋ ಇಚ್ಛೆ ದಾಳಿ ಮಾಡಿದ್ದಾರೆ. ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ತಾಂಡವವಾಡುತ್ತಿರುವ ಈ ಹೊತ್ತಿನಲ್ಲೂ ಗೋರಕ್ಷಕರ ಅಮಾನವೀಯ ಹಲ್ಲೆಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗುತ್ತಿದೆ.

ಮೇ 23 (ಭಾನುವಾರ) ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾರತೀಯ ಗೋ ರಕ್ಷಣಾ ವಾಹಿನಿ ಎಂಬ ಹಿಂದೂಪರ ಸಂಘಟನೆಗೆ ಸೇರಿದ ಮನೋಜ್‌ ಠಾಕೂರ್‌ ಎಂಬ ವ್ಯಕ್ತಿಯು ಶಕೀರ್‌ ಎಂಬ ಮುಸ್ಲೀಂ ಯುವಕನ ಮೇಲೆ ಹಾಡಹಗಲೇ ಹಲ್ಲೆ ನಡೆಸಿದ್ದಾನೆ. ಬಲವಾದ ಕೋಲಿನಿಂದ ಸತತವಾಗಿ ಶಕೀರ್‌ರನ್ನು ತೀವ್ರವಾಗಿ ಥಳಿಸಿದ್ದಾನೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ. ಶಕೀರ್‌ ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಮನೋಜ್‌ ಠಾಕೂರ್‌ ಥಳಿಸುತ್ತಿದ್ದರೇ, ಇತರ ಕೆಲವು ಮಂದಿ ಕೃತ್ಯಕ್ಕೆ ಬೆಂಬಲ ನೀಡುತ್ತಿರುವ ವಿಡಿಯೋ ನೋಡಿ, ಘಟನೆಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಎರಡು ಸಮುದಾಯದ ನಡುವೆ ಘರ್ಷಣೆ: 2000 ಜನರ ಮೇಲೆ ಎಫ್‌ಐಆರ್‌‌!

ವೈರಲ್‌ ಆಗಿರುವ ವಿಡಿಯೋದಲ್ಲಿ ಮನೋಜ್‌ ಠಾಕೂರ್‌ ಎಂದು ಗುರುತಿಸಲಾದ ವ್ಯಕ್ತಿ ಶಕೀರ್‌ ಎಂಬ ವ್ಯಕ್ತಿಯನ್ನು ನಿನ್ನ ವಾಹನದಲ್ಲಿ ಏನಿದೆ..? ದಾಖಲೆ ಪತ್ರಗಳು, ಬಿಲ್‌ ಎಲ್ಲಿ.? ಎಂದು ಕೇಳುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಶಕೀರ್‌ ನನ್ನನ್ನು ಥಳಿಸುವ ಬದಲು ನೀವು ಯಾಕೆ ದಾಖಲೆಗಳನ್ನು ಪರಿಶೀಲಿಸಬಾರದು ಎಂದು ಕೇಳಿದ್ದಾನೆ.

ವಿಡಿಯೊ ವೈರಲ್ ಆಗಿ ಘಟನೆ ಗಮನಕ್ಕೆ ಬಂದ ಬಳಿಕ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಗೋ ರಕ್ಷಕರಿಂದ ಥಳಿತಕ್ಕೆ ಸಂಬಂಧಿಸಿದಂತೆ ಇದುವರೆಗೆ ಎರಡು ಎಫ್‌ಐಆರ್‌ ಗಳು ದಾಖಲಾಗಿವೆ. ಒಂದು ಶಕೀರ್‌ರನ್ನು ಥಳಿಸಿದ ಸಂಬಂಧ ಮನೋಜ್‌ ಠಾಕೂರ್‌ ಮೇಲಾದರೆ ಇನ್ನೊಂದು ಮಾಸ್ಕ್‌ ಹಾಕಿಲ್ಲವೆಂಬ ಕಾರಣಕ್ಕೆ ಶಕೀರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕತ್ಗಾರ್ ಠಾಣಾ ಅಧಿಕಾರಿ (SHO) ಕ್ವಿಂಟ್‌ ಗೆ ಮೇ 23ರ ಮಧ್ಯರಾತ್ರಿ ಪ್ರತಿಕ್ರಿಯಿಸಿದ್ದಾರೆ.

ಮನೋಜ್‌ ಠಾಕೂರ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಇತರ ಐವರನ್ನು ಸಹ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಉಳಿದ ಐವರು ಆರೋಪಿಗಳೆಂದರೆ ಪ್ರದೀಪ್‌, ಬಾಬು, ಗುಲ್ಶನ್‌ ಅಲಿಯಾಸ್‌ ಗುಲ್ಲಿ, ಸುಮಿತ್‌, ವಿಜಯ್‌. ಇನ್ನು ಹೆಸರಿಸಲಾಗದ ನಾಲ್ಕರಿಂದ ಐವರನ್ನು ಎಫ್‌ಐಆರ್‌ ನಲ್ಲಿ ಸೇರಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 147(ದಂಗೆ), 148(ಮಾರಕಾಸ್ತ್ರಗಳ ಬಳಕೆ), 148(ಅಕ್ರಮ ಗುಂಪು), 389(ಸುಲಿಗೆ), 506(ಅಪರಾಧಿಕ ಕೃತ್ಯಕ್ಕೆ ಪ್ರಚೋದನೆ) ಗಂಭೀರ ಪ್ರಕರಣಗಳಡಿಯಲ್ಲಿ ಪ್ರಕರಣ ದಾಖಲಿಸಿರುವುದರಿಂದ ಘಟನೆಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’

ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಮತ್ತು ದೂರುದಾರ ಜುನೈದ್‌ ಹೇಳುವಂತೆ ”ಮೊರಾದಾಬಾದ್‌ಗೆ ಬರುವ ದಾರಿಯಲ್ಲಿ ಅನೇಕರು ಗುಂಪಿನಲ್ಲಿ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ನೋಡಿದೆ. ಅಲ್ಲಿರುವವರನ್ನು ಈ ಸಂಬಂಧ ವಿಚಾರಿಸಿದಾಗ ವಿಷಯ ತಿಳಿಯಿತು. ಥಳಿತಕ್ಕೆ ಒಳಗಾದ ಶಕೀರ್‌ 50 ಕೆ.ಜಿ. ಯಷ್ಟು ಎಮ್ಮೆಯ ಮಾಂಸವನ್ನು ಕಾನೂನು ಬದ್ಧವಾಗಿ ಸಾಗಿಸುತ್ತಿದ್ದಾಗ ಕೆಲವು ವ್ಯಕ್ತಿಗಳು ಅವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಾನು ಅಲ್ಲಿಗೆ ಬಂದಾಗ ಶಕೀರ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ಕಳುಹಿಸಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದೇನೆ.” ಎಂದಿದ್ದಾರೆ. ಜುನೈದ್‌ ಸಂತ್ರಸ್ತ ಶಕೀರ್‌ರ ದೂರದ ಸಂಬಂಧಿಯೂ ಹೌದು.

ಶಕೀರ್‌ ತನ್ನ ಮೇಲೆ ಕೋವಿಡ್‌ ನಿಯಮಾವಳಿಯನ್ನು ಪಾಲಿಸದ ಕಾರಣಕ್ಕೆ ಕೆಲವು ಪ್ರಕರಣಗಳು ದಾಖಾಲಾಗಿದೆಯೆಂದು ತಿಳಿದಿದ್ದರೂ ಪ್ರಕರಣಗಳ ವಿವರಗಳು ತಿಳಿದಿಲ್ಲ. ಕ್ವಿಂಟ್‌ ಈ ಸಂಬಂಧ ಶಕೀರ್‌ ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಶಕೀರ್‌ ತಾನು ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ನೀವು ನನ್ನನ್ನು ಹೇಗೆ ಥಳಿಸಲಾಯಿತೆಂದು ನೋಡಿದ್ದೀರಲ್ಲವೇ ? ವಿಡಿಯೋ ನೋಡಿದ್ದೀರಲ್ಲವೆ ಎಂದು ಕರೆ ಸ್ಥಗಿತಗೊಳಿಸಿದ್ದಾರೆ.

ದೂರುದಾರ ಜುನೈದ್‌ ಅವರನ್ನು ಈ ಸಂಬಂಧ ಸಂಪರ್ಕಿಸಿದಾಗ, ’ಶಕೀರ್‌ ಇನ್ನು ಚೇತರಿಸಿಕೊಳ್ಳುತ್ತಿದ್ದಾನೆ. ಮಾನಸಿಕ ಆಘಾತದಿಂದ ಆತ ಇನ್ನೂ ಹೊರಬರುವುದು ಸಾಧ್ಯವಾಗಿಲ್ಲ’ ಎಂದು ಉತ್ತರಿಸಿದ್ದಾರೆ.

ಗೋ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳುವ ಆರೋಪಿ ಮನೋಜ್‌ ಠಾಕೂರ್‌, “ಕೆಲವು ದಿನಗಳ ಹಿಂದೆ ನನ್ನ ಮೇಲೆ ಅನೇಕರು ದಾಳಿ ಮಾಡಿದರು. ಆದರೆ ಅವರ ಮೇಲೆ ಯಾವ ಕ್ರಮವೂ ಆಗಿಲ್ಲ. ಮೊನ್ನೆ ಕೆಲ ಕಟುಕರು ನನ್ನ ಮೇಲೆ ಹಲ್ಲೆ ನಡೆಸಿದರು, ಆದರೆ ಅದಕ್ಕೆ ಯಾವುದೇ ಕ್ರಮವಿಲ್ಲ. ಈಗ ಪೊಲೀಸರು ನಾನು ಹೇಳುವುದನ್ನು ಕೇಳಿಸಿಕೊಳ್ಳಲು ಸಿದ್ಧರಿಲ್ಲ. ನನಗೆ ಸರ್ಕಾರ ಅನುಮತಿ ನೀಡಿದರೆ ನಾನು ಪ್ರತಿಯೊಬ್ಬ ದನ ಕಡಿಯುವವನನ್ನು ಹಿಡಿದುಕೊಡುತ್ತೇನೆ” ಎನ್ನುತ್ತಾರೆ.

ವ್ಯಕ್ತಿಯನ್ನು ಥಳಿಸುವ ಬದಲು ಪೊಲೀಸರಿಗೆ ಒಪ್ಪಿಸಬಹುದಿತ್ತಿಲ್ಲ ಎಂದರೆ ಅವರು ಮತ್ತೆ ನನ್ನ ಮೇಲೆ ದಾಳಿ ಮಾಡುತ್ತಿದ್ದರು. ತನ್ನನ್ನು ರಕ್ಷಿಸಿಕೊಳ್ಳಲು ವ್ಯಕ್ತಿಯನ್ನು ಥಳಿಸಿರುವುದಾಗಿ ಹೇಳುತ್ತಾರೆ. ಆದರೆ ಈ ಸಂಬಂಧ ಯಾವುದೇ ಸಾಕ್ಷಿಯಾಗಲಿ, ಮಾಹಿತಿಯಾಗಲಿ ಇದುವರೆಗೆ ಕಂಡುಬಂದಿಲ್ಲ.

ಇದನ್ನೂ ಓದಿ: ಕರ್ಫ್ಯೂ ಉಲ್ಲಂಘನೆ ನೆಪದಲ್ಲಿ ಯುವಕನ ಕೊಲೆ ಆರೋಪ: ಒಬ್ಬರ ಬಂಧನ, ಇಬ್ಬರು ಪೊಲೀಸರು ನಾಪತ್ತೆ

ಇದೇ ಸಂದರ್ಭದಲ್ಲಿ ಮನೋಜ್‌ ಠಾಕುರ್‌ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನುದ್ಧೇಶಿಸಿ ಗೋ ಸಂರಕ್ಷಣೆಗಾಗಿ ಹೋರಾಡುತ್ತಿರುವವರನ್ನು ಸರ್ಕಾರ ಕೊಲ್ಲಲು ಮುಂದಾಗುತ್ತಿದೆ ಎಂದು ಸರ್ಕಾರದ ಮೇಲೆ ಆರೋಪವನ್ನು ಮಾಡಿದ್ದಾರೆ.

ಭಾರತೀಯ ಗೋ ರಕ್ಷಣಾ ವಾಹಿನಿ ಸಂಘಟನೆಯ ಮೇಲೆ ಮಾಂಸ ಸಾಗಿಸುವ ವಾಹನಗಳಿಂದ ಹಣ ವಸೂಲಿ ಮಾಡುವ ಆರೋಪಗಳು ಕೇಳಿಬಂದಿವೆ. ಮೊರಾದಾಬಾದ್‌ ಘಟನೆಯಲ್ಲಿ ವಾಹಿನಿಯ ಪಾತ್ರದ ಕುರಿತು ಕೇಳಿದಾಗ ಸಂಘಟನೆ ಅಧ್ಯಕ್ಷರು, ಸಂಘಟನೆಗೂ ಇದಕ್ಕೂ ಸಂಬಂಧವಿಲ್ಲವೆಂದು ಉತ್ತರಿಸಿದ್ದಾರೆ.

“ಮನೋಜ್‌ ಠಾಕೂರ್‌ ಅವರನ್ನು ಆರು ತಿಂಗಳ ಹಿಂದೆಯೇ ಸಂಘಟನೆಯ ಉಪಾಧ್ಯಕ್ಷ ಹುದ್ದೆಯಿಂದ ಹಾಗೂ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಠಾಕೂರ್‌ ಈ ಹಿಂದೆ ಅನೇಕ ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅನೇಕ ವಿಚಾರಗಳು ಸಂಘಟನೆಯ ಗಮನಕ್ಕೂ ಬಂದಿತ್ತು. ಹಾಗಾಗಿ ಆ ವ್ಯಕ್ತಿಯನ್ನು ಸಂಘಟನೆಯಿಂದ ವಜಾ ಗೊಳಿಸಲಾಗಿದೆ. ಈಗ ಸಂಘಟನೆಗೆ ಈ ಪ್ರಕರಣದ ಆರೋಪಿಗೂ ಯಾವ ಸಂಬಂಧವೂ ಇಲ್ಲ. ನಾವು ಈ ಸಂಬಂಧ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಬಹುದು. ನಾವು ಅನೇಕ ಸಾರಿ ಈ ವ್ಯಕ್ತಿಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದೇವೆ” ಎಂದು ಭಾರತೀಯ ಗೋ ರಕ್ಷಣಾ ವಾಹಿನಿಯ ರಾಷ್ಟ್ರೀಯ ಅಧ್ಯಕ್ಷ ರಾಕೇಶ್‌ ಸಿಂಗ್‌ ಸರಿಹಾರ್‌ ಪ್ರಕರಣದ ಕುರಿತು ಕ್ವಿಂಟ್‌ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಠಾಕೂರ್‌, ಮೊರಾದಾಬಾದ್‌ ಪ್ರದೇಶದಲ್ಲಿನ ಅನೇಕ ಮಾಂಸೋದ್ಯಮಿಗಳು ಮತ್ತು ಕಸಾಯಿಖಾನೆ ನಡೆಸುವವರಿಗೆ ಕಂಟಕಪ್ರಾಯನಾಗಿ ಪರಿಣಮಿಸಿದ್ದ. ಇಷ್ಟು ವರ್ಷ ಸುಳ್ಳು ಆರೋಪ ಮತ್ತು ಬೆದರಿಕೆಯಿಂದ ಹಣ ವಸೂಲಿ ಮಾಡುವುದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದ ಎಂಬ ಆರೋಪಗಳಿವೆ.

ದೇಶದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ದಲಿತರು, ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕೆಲವು ಕಡೆ ವರದಿಯಾಗುತ್ತಿವೆ. ಇನ್ನೂ ಕೆಲವು ಕಡೆ ವರದಿಯಾಗುತ್ತಿಲ್ಲ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ನಡೆಸುವ ದೌರ್ಜನ್ಯಗಳ ವಿರುದ್ಧ ಪೊಲೀಸ್‌ ಇಲಾಖೆಯಾಗಲಿ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಬದಲಾಗಿ ಸರ್ಕಾರವೇ ಗೋ ರಕ್ಷಕರ ರಕ್ಷಣೆಗೆ ನಿಂತು ಬೆಂಬಲ ನೀಡುತ್ತದೆ. ಅನೇಕ ಸಂಘಟನೆಗಳು ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಸುಲಿಗೆಯನ್ನೇ ವ್ಯವಹಾರವನ್ನಾಗಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ನಡೆದಿರುವುದು ಕೇವಲ ಒಂದು ಘಟನೆಯಷ್ಟೆ. ಪ್ರತಿನಿತ್ಯ ದೇಶಾದ್ಯಂತ ಮಾಂಸೋದ್ಯಮದ ಮೇಲೆ ಜೀವನವನ್ನು ಆಧರಿಸಿರುವ ಸಾವಿರಾರು ಜನರು ಗೋ ರಕ್ಷಕರ ಭಯದಿಂದ ಜೀವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಹಿಂದೆ ಅನೇಕ ಕಡೆಗಳಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ಥಳಿಸಿ ಕೊಲ್ಲಲಾಗಿದೆ. ಆದರೆ ಪ್ರಕರಣದ ಆರೋಪಿಗಳು ರಾಜಾರೋಷವಾಗಿ ಸಮಾಜದಲ್ಲಿ ಓಡಾಡುತ್ತಲೇ ಇದ್ದಾರೆ. ಮನುಷ್ಯನ ಜೀವವು ಗೋವಿನ ಜೀವನಕ್ಕಿಂತ ಅಗ್ಗವಾಗಿರುವುದಕ್ಕೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಘಟನೆ ಮತ್ತು ಹಿಂದೆ ನಡೆದ ಘಟನೆಗಳೇ ಸಾಕ್ಷಿ.

ಮೂಲ : ದಿ ಕ್ವಿಂಟ್‌
ಕನ್ನಡಕ್ಕೆ : ರಾಜೇಶ್‌ ಹೆಬ್ಬಾರ್


ಇದನ್ನೂ ಓದಿ: ಪಶ್ಚಿಮ ಬಂಗಾಳ: ಕೊರೊನಾ ಸೋಂಕಿತರ ಅಂತ್ಯಕ್ರಿಯೆಯ ಸಿಬ್ಬಂದಿ ನೇಮಕಾತಿಯಲ್ಲೂ ಜಾತಿ ತಾರತಮ್ಯ

LEAVE A REPLY

Please enter your comment!
Please enter your name here