Homeಕರ್ನಾಟಕ'ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು; ಬಿಎಸ್‌ವೈಗೆ ಹೈಕಮಾಂಡ್ ಹೆದರಿದೆ'

‘ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದರು; ಬಿಎಸ್‌ವೈಗೆ ಹೈಕಮಾಂಡ್ ಹೆದರಿದೆ’

- Advertisement -
- Advertisement -

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್‌. ಅಶೋಕ್ ಆಯ್ಕೆಯಾದ ನಂತರ ರಾಜ್ಯ ಬಿಜೆಪಿಯಲ್ಲಿ ಇಷ್ಟು ದಿನ ಸುಪ್ತವಾಗಿದ್ದ ಆಂತರಿಕ ಕಲಹ ಈಗ ಭುಗಿಲೆದ್ದಿದೆ. ಬಿಜೆಪಿ ಅಧಿಕಾರಲ್ಲಿ ಇದ್ದಾಗಿನಿಂದಲೂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಸಮರ ಸಾರಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತಷ್ಟು ಕುಪಿತಗೊಂಡಿದ್ದಾರೆ.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡುವಾಗ ಉತ್ತರ ಕರ್ನಾಟಕದ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಹೇಳುತ್ತಿದ್ದರೂ, ಪ್ರತಿಪಕ್ಷ ನಾಯಕ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಸಿಟ್ಟು ಈಗ ವಿಜಯೇಂದ್ರ ಕಡೆಗೆ ತಿರುಗಿದೆ.

ಕರ್ನಾಟಕ ಬಿಜೆಪಿಯೊಳಗೆ ಆಂತರಿಕ ಕಚ್ಚಾಟ ತೀವ್ರಗೊಂಡಿದ್ದಕ್ಕೆ ಸಾಕ್ಷಿಯಾಗಿ ಯತ್ನಾಳ್ ಮಾತನಾಡಿರುವ ಮತ್ತೊಂದು ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ‘ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಪಕ್ಷದ ಹೈಕಮಾಂಡಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮುಂದೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ರಾತ್ರಿ ಶ್ರೀಗಳನ್ನು ಭೇಟಿ ಮಾಡಿರುವ ಯತ್ನಾಳ್, ‘ಯಡಿಯೂರಪ್ಪ ಮೇಲೆ ಹೈಕಮಾಂಡ್‌ ನಾಯಕರಿಗೆ ಯಾಕೆ ಹೆದರಿಕೆ ಬಂದಿತೋ ಗೊತ್ತಿಲ್ಲ. ಶಿಸ್ತಿನ ಬಗ್ಗೆ ಅವರು ಮಾತನಾಡುತ್ತಾರೆ. ಹಾಗಿದ್ದರೆ, ನಾವೆಲ್ಲಾ ಗುಲಾಮರೇ? ನಮಗೆ ಶಕ್ತಿ ಇಲ್ಲವೇ? ನಮಗೂ ಜನ ಬೆಂಬಲ ಇದೆ’ ಎಂದಿದ್ದಾರೆ.

‘ಲೋಕಸಭೆ ಚುನಾವಣೆಗೆ ಪ್ರಚಾರ ಮಾಡುವುದಿಲ್ಲ ಎಂದು ಕೇಂದ್ರ ನಾಯಕರಿಗೆ ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಪಕ್ಷದ ಪರ ಪ್ರಚಾರ ಮಾಡುವ ಬದಲು ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆ’ ಎಂದರು.

‘ಸೋಮಣ್ಣ ಹರಕೆಯ ಕುರಿ; ಬೊಮ್ಮಾಯಿ ಸೋಲಿಸಲು ಹಣ ಕಳಿಸಿದ್ದರು’

ಬಿಎಸ್‌ವೈ ಕುಟುಂಬ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡುತ್ತಿದೆ ಎಂಬರ್ಥದಲ್ಲಿ ಶ್ರೀಗಳ ಮುಂದೆ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದು ಅಚ್ಚರಿಯ ಸಂಗತಿ. ಈಗ ಹೈಕಮಾಂಡ್ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ವಿಜಯೇಂದ್ರ ತಮ್ಮನ್ನು ಸೋಲಿಸಲು ಹಣ ನೀಡಿದ್ದರು ಎಂದು ಸ್ವತಃ ಬೊಮ್ಮಾಯಿ ಅವರೇ ನನಗೆ ಹೇಳಿದ್ದರು. ತಂದೆ-ಮಗ ಏನೆಲ್ಲಾ ಪಿತೂರಿ ನಡೆಸಿದ್ದಾರೆ ಎಂಬ ಸತ್ಯ ಹೊರಬರಬೇಕು’ ಎಂದು ಹೇಳಿದ್ದಾರೆ.

‘ಪ್ಯಾಲೇಸ್ ಗ್ರೌಂಡ್‌ನಲ್ಲಿ ನಾವು ರ‍್ಯಾಲಿ ಮಾಡುವಾಗ ಸಂದೀಪ್ ಪಾಟೀಲ್ ಎಂಬ ಐಪಿಎಸ್ ಆಫೀಸರ್ ಮೂಲಕ ನಮ್ಮನ್ನೆಲ್ಲಾ ಅರೆಸ್ಟ್‌ ಮಾಡಿಸುವುದಕ್ಕೆ ಮುಂದಾಗಿದ್ದ; ನಾನು ಜಾಡಿಸಿದ್ದಕ್ಕೆ ಹಿಂದೆ ಸರಿದ. ಸಂದೀಪ್ ಪಾಟೀಲರನ್ನು ಕಳುಹಿಸಿದ್ದೇ ಲಿಂಗಾಯತ ಅಧಿಕಾರಿಯಿಂದ ಲಿಂಗಾಯತ ನಾಯಕರನ್ನು ಬಂಧಿಸಲು. ಇದು ವಿಜಯೇಂದ್ರನದ್ದೇ ಕುತಂತ್ರ’ ಎಂದು ಏಕವಚನದಲ್ಲೇ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಜತೆಗೆ ಹೊಂದಾಣಿಕೆ:

‘ವಿಜಯೇಂದ್ರ ವಿರುದ್ಧ ಶಿಕಾರಿಪುರದಲ್ಲಿ ಕಾಂಗ್ರೆಸ್‌ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಸೋಮಣ್ಣ ವಿರುದ್ಧ ಅವರು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದರು. ಕನಕಪುರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಡಿ.ಕೆ. ಶಿವಕುಮಾರ್ ಮತ್ತು ಯಡಿಯೂರಪ್ಪ ನಡುವೆ ಒಪ್ಪಂದವಾಗಿತ್ತು’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ; ಮೂರು ಕ್ರಿಮಿನಲ್​ ಕಾನೂನು ವಿಧೇಯಕಗಳನ್ನು ಹಿಂಪಡೆದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...