Homeಮುಖಪುಟಕಾನೂನುಬಾಹಿರವಾಗಿ ಸಿಂಹ ಘರ್ಜನೆ ಮಾಡುವ ಕೆಂಪೇಗೌಡ ಬೇಕಿಲ್ಲ – ಮಾನವೀಯ ಸ್ಪಂದನೆಯ ಪೊಲೀಸ್ ಪಾತ್ರಗಳು ಮೂಡಲಿ

ಕಾನೂನುಬಾಹಿರವಾಗಿ ಸಿಂಹ ಘರ್ಜನೆ ಮಾಡುವ ಕೆಂಪೇಗೌಡ ಬೇಕಿಲ್ಲ – ಮಾನವೀಯ ಸ್ಪಂದನೆಯ ಪೊಲೀಸ್ ಪಾತ್ರಗಳು ಮೂಡಲಿ

- Advertisement -
- Advertisement -

”ಸಿಂಹನ ಫೋಟೋದಲ್ಲಿ ನೋಡಿರ್ತೀಯಾ.. ಸಿನಿಮಾದಲ್ಲಿ ನೋಡಿರ್ತೀಯಾ… ಟಿವಿಯಲ್ಲಿ ನೋಡಿರ್ತೀಯಾ… ಅಷ್ಟೆ ಯಾಕೆ ಝೂನಲ್ಲಿ ನೋಡಿರ್ತೀಯಾ… ರಾಜಗಾಂಭೀರ್ಯದಿಂದ ಯಾವತ್ತಾದರೂ ಕಾಡಲ್ಲಿ ಓಡಾಡುವುದನ್ನ ನೋಡಿದ್ಯಾ? ಒಂಟಿಯಾಗಿ ರೋಷದಿಂದ ಯಾವತ್ತಾದರೂ ಬೇಟೆ ಆಡುವುದನ್ನ ನೋಡಿದ್ಯಾ?….. ತೊಂದರೆ ಕೊಡೋರಿಗೆ ಈ ಕೆಂಪೇಗೌಡ ಬಿಡಲ್ಲ!” ಕನ್ನಡ ಸಿನೆಮಾವೊಂದರ ಈ ಡೈಲಾಗ್ ಅನ್ನು ಎಷ್ಟು ಟಿವಿ ಶೋಗಳಲ್ಲಿ ಮಕ್ಕಳಿಂದ ಹಿಡಿದು ಉದಯೋನ್ಮುಖ ನಟರವರೆಗೂ ಅದೆಷ್ಟು ಬಾರಿ ಪುನರುಚ್ಛರಿಸಿದ್ದಾರೋ! ಸಾಮಾನ್ಯವಾಗಿ ನಾಯಕನಟನನ್ನು ವಿಜೃಂಭಿಸುವ ಯಾವುದೇ ಪಾತ್ರವಾದರೂ ಇಂತಹ ಅತಿ ಎನ್ನಿಸುವ “ಪಂಚಿಂಗ್” ಡೈಲಾಗ್‌ಗಳನ್ನು ಹೊಡೆಯುವುದು ಕನ್ನಡ ಮತ್ತು ಭಾರತೀಯ ಚಲನಚಿತ್ರಗಳಿಗೆ ಹೊಸದೇನಲ್ಲ. ಕನ್ನಡ ಚಿತ್ರರಂಗವೂ ಒಳಗೊಂಡಂತೆ ಭಾರತ ಚಿತ್ರರಂಗದಲ್ಲಿ ಕಮರ್ಶಿಯಲ್ ಅಥವಾ ಮಸಾಲ ಸಿನೆಮಾಗಳು ಎಂಬ ವರ್ಗದಲ್ಲಿ ಮೂಡಿಬರುವ ಚಲನಚಿತ್ರಗಳ ಇಂತಹ ಪಾತ್ರಗಳು ಮತ್ತು ಅವು ಪ್ರೇಕ್ಷಕರಿಗೆ ಕಟ್ಟಿಕೊಡುವ ಬದಲಿ ವಾಸ್ತವ ಮತ್ತು ಅದು ಒಟ್ಟಾರೆಯಾಗಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮ, ಅಧ್ಯಯನಕ್ಕೆ ಒಳಪಟ್ಟಿರುವುದು ಮತ್ತು ಜನಸಾಮಾನ್ಯರ ಮಟ್ಟದಲ್ಲಿ ಗಂಭೀರ ಚರ್ಚೆ ಆಗಿರುವುದು ಬಹಳ ಕಡಿಮೆ ಎನ್ನಬಹುದು. (ಕೆಲವೇ ಕೆಲವು ಅಕಾಡೆಮಿಕ್ ಸಿನೆಮಾ ಅಧ್ಯಯನಗಳನ್ನು ಹೊರತುಪಡಿಸಿ).

ಮೇಲಿನ ಸಂಭಾಷಣೆ ಇರುವ ಕೆಂಪೇಗೌಡ ಸಿನೆಮಾ ಬಿಡುಗಡೆಯ ದಿನಾಂಕ ಮತ್ತು ಮುಂದಿನ ಕೆಲವು ದಿನಗಳಲ್ಲಿ ಈ ಚಲನಚಿತ್ರದ ಬಗ್ಗೆ ಜನಪ್ರಿಯ ಮಾಧ್ಯಮಗಳಲ್ಲಿ ಮಾಡಿರಬಹುದಾದ ವಿಮರ್ಶೆಗಳನ್ನು ಹುಡುಕಿ ನೋಡಿದರೆ, ಅವುಗಳಲ್ಲಿ ಬಹುತೇಕ ಮಾಧ್ಯಮಗಳು ಅಥವಾ ಎಲ್ಲವೂ ಕೆಂಪೇಗೌಡನ ಪಾತ್ರವನ್ನು ಮತ್ತು ಇಡಿಯಾಗಿ ಆ ಸಿನೆಮಾವನ್ನು ವಿಮರ್ಶಾತೀತವಾಗಿ ಹೊಗಳಿ ಅಟ್ಟಕ್ಕೆ ಏರಿಸಿರುತ್ತವೆ.

ಜುಲೈ ಮೊದಲ ವಾರದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಚಿಕ್ಕ ಪಟ್ಟಣವಾಗಿರುವ ಸಾತಾನ್‌ಕುಳಂನಲ್ಲಿ, ಕೊರೊನ ನಿರ್ಬಂಧಿತ ಸಮಯದಲ್ಲಿ ಅಂಗಡಿ ಮುಚ್ಚಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ಜಯರಾಜ್ ಮತ್ತು ಬೆನಿಕ್ಸ್ (ಅಪ್ಪ-ಮಗ) ಅವರನ್ನು ಬಂಧಿಸಿ ಲಾಕಪ್‌ನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಅವರಿಬ್ಬರೂ ನಿಧನರಾಗಿದ್ದರು. ಇದಕ್ಕೆ ತಮಿಳುನಾಡಿನಾದ್ಯಂತ ನಡೆದ ಪ್ರತಿಭಟನೆಗಳಿಂದ ಎಚ್ಚೆತ್ತು ಆ ಪೊಲೀಸರನ್ನು ವಜಾಗೊಳಿಸಿ, ತನಿಖೆಗೆ ಆದೇಶಿಸಲಾಗಿದೆ. ಇದು ಪೊಲೀಸ್ ವ್ಯವಸ್ಥೆ ಮತ್ತು ರಾಜಕೀಯ ಮಾತ್ರವಲ್ಲದೆ ಹಲವು ಕ್ಷೇತ್ರಗಳಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿದೆ.

ಈ ಘಟನೆಯ ಬೆನ್ನಲ್ಲಿಯೇ ‘ಸಿಂಗಂ’ ತಮಿಳು ಸಿನೆಮಾದ ನಿರ್ದೇಶಕ ಹರಿ ಅವರು ತೂತುಕುಡಿಯ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತನ್ನ ಐದು ಸಿನೆಮಾಗಳಲ್ಲಿ ಪೋಲೀಸರನ್ನು ವೈಭವೀಕರಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ನಟ ಸುದೀಪ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಟಿಸಿರುವ ಈ ಕೆಂಪೇಗೌಡ ಹರಿ ನಿರ್ದೇಶನದ ಸಿಂಗಂನ ರಿಮೇಕ್.

ಸುಮಾರು ಎರಡೂವರೆ ಘಂಟೆಯ ಈ ಸಿನೆಮಾವನ್ನು ಪೂರ್ತಿಯಾಗಿ ನೋಡಲು ಸಾಧ್ಯವಾದರೆ, 90ರ ದಶಕದ ನಂತರ ಕನ್ನಡ-ಭಾರತೀಯ ಸಿನೆಮಾದಲ್ಲಿ ಸಾಮಾನ್ಯವಾಗಿ ಪೊಲೀಸ್ ಪಾತ್ರವನ್ನು ಕಟ್ಟಿಕೊಡುವ ಎಲ್ಲ ಬಗೆಗಳನ್ನು ಕಾಣಬಹುದು. ಒಂದು: ಲಾರ್ಜರ್ ದ್ಯಾನ್ ಲೈಫ್ ಅನ್ನಲಾಗುವ ದಕ್ಷ ಅಧಿಕಾರಿ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸಮಾಜವನ್ನು ರಕ್ಷಿಸಬಲ್ಲ ಏಕೈಕ ವ್ಯಕ್ತಿ ಈತ. ಈತನಿಗೆ ಕಾನೂನು-ಸಂವಿಧಾನದ ಯಾವುದೇ ಅಂಕುಶ ಇಲ್ಲ. ವೈಯಕ್ತಿಕ ನೆಲೆಯಲ್ಲಿ ಭ್ರಷ್ಟ ಅಲ್ಲ ಅನ್ನುವ ನೈತಿಕತೆ ಒಂದೇ ಮಾನದಂಡ. ಪುರುಷಾಹಂಕಾರದ ಮೇರು ಶಿಖರದ ಪಾತ್ರ. ಕೇಂಪೇಗೌಡ ಚಲನಚಿತ್ರದಲ್ಲಿ ನಟ ಸುದೀಪ್ ಇಂತಹ ಪಾತ್ರವನ್ನು (ಕೆಂಪೇಗೌಡ) ಪೋಷಿಸಿದ್ದಾರೆ. ಎರಡು: ಪಕ್ಕಾ ಭ್ರಷ್ಟ ಅಧಿಕಾರಿ. ಆತನಿಗೆ ರೌಡಿಗಳು ಮತ್ತು ಭ್ರಷ್ಟ ರಾಜಕಾರಿಣಿಗಳ ಜೊತೆಗೆ ಶಾಮೀಲಾಗುವುದರ ಹೊರತು ಬೇರೇ ಜೀವನವೇ ಇಲ್ಲ. ಇಂತಹ ಪಾತ್ರವನ್ನು ಕೆಂಪೇಗೌಡ ಸಿನೆಮಾದಲ್ಲಿ ಜೈಜಗದೀಶ್ ಪೋಷಿಸಿದ್ದಾರೆ. ಮೂರನೆಯದು: ಪೆದ್ದ ಪೇದೆ. ಕೆಟ್ಟ ಪೋಲಿ ಜೋಕುಗಳನ್ನು ಮಾಡಿಕೊಂಡು, ಜನಸಾಮಾನ್ಯರ ಕೈಲಿ ಯಾವಾಗಲು ಬೈಸಿಕೊಳ್ಳುವ, ಸಣ್ಣ ಪುಟ್ಟ ಚಿಲ್ಲರೆ ಕಳ್ಳರ ಕೈಲಿ ಚಳ್ಳೆಹಣ್ಣು ತಿನ್ನಿಸಿಕೊಳ್ಳುವ, ಗಿಂಬಳಕ್ಕೆ ಕೈಯ್ಯೊಡ್ಡುವ, ನಾಯಕ ಪಾತ್ರಕ್ಕೆ ಸೈಡ್ ಕಿಕ್‌ನಂತಿರುವ ಪಾತ್ರ ಇದು. ಇಂತಹ ಪಾತ್ರವನ್ನು ಕೆಂಪೇಗೌಡ ಚಲನಚಿತ್ರದಲ್ಲಿ ಶರಣ್ ಪೋಷಿಸಿದ್ದಾರೆ (ಬಹುಶಹ ‘ಪ್ಯಾದೆ’ ಎನ್ನುವ ಹೀಯಾಳಿಸುವ ವಾಚಕ ಇದರಿಂದಲೇ ಹುಟ್ಟಿರಬೇಕು).

ಇಂತಹವೇ ಹೇರಳ ವಿಕ್ಷಿಪ್ತ ಪಾತ್ರಗಳನ್ನು ಸೃಷ್ಟಿಸಿಕೊಂಡು ವಿಜೃಂಭಿಸಿರುವ ಕನ್ನಡ ಚಲನಚಿತ್ರರಂಗ, ತೂತುಕುಡಿ ಘಟನೆಯ ನಂತರ ಸಿಂಗಂ ನಿರ್ದೇಶಕ ಹರಿ ಕೊಟ್ಟಿರುವ ವಿಷಾದದ ಹೇಳಿಕೆಯಂತೆಯಾದರೂ ಆತ್ಮವಿಮರ್ಶೆ ಮಾಡಿಕೊಂಡಿರುವ ಸನ್ನಿವೇಶ ನಮಗೆ ಕಾಣಸಿಗುವುದಿಲ್ಲ. ಪೊಲೀಸರ ಜೀವನದಲ್ಲಿಯೂ ಇರಬಹುದಾದ ಒಳ ಬೇಗುದಿಯನ್ನು ಪ್ರತಿನಿಧಿಸುವ, ಅವರಿಗೆ ಇರಬೇಕಾದ ಮಾನವೀಯತೆ, ಮಾನವ ಹಕ್ಕುಗಳ ಬಗ್ಗೆ ಕಾಳಜಿ, ಅಡ್ಡಿ ಆತಂಕಗಳನ್ನು ನೈಜ್ಯವಾಗಿ ತೋರಿಸಿ-ಪ್ರತಿನಿಧಿಸುವ ಅಥವಾ ಆದರ್ಶಮಯವಾಗಿ ಕಟ್ಟಿಕೊಡುವ ಪಾತ್ರಗಳನ್ನು ಕನ್ನಡ ಚಿತ್ರರಂಗ ಸೃಷ್ಟಿಮಾಡಿದ್ದು ವಿರಳಾತಿವಿರಳ.

ಸಂವಿಧಾನದ ಚೌಕಟ್ಟಿನಲ್ಲಿ, ಐಪಿಸಿ ಕಾಯ್ದೆಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ, ಕಾನೂನು ವ್ಯವಸ್ಥೆಗಳನ್ನು ತಿಳಿಹೇಳಿ ಕರ್ತವ್ಯ ನಿರ್ವಹಿಸುವ ರೀತಿಯ ಪೊಲೀಸ್ ಪಾತ್ರಗಳು ನಮಗೆ ಬೇಕೇ ಹೊರತು ಕಾನೂನನ್ನು ಗಾಳಿಗೆ ತೂರಿ ಉತ್ಪ್ರೇಕ್ಷೆಯೇ ಸಾಮಾನ್ಯ ಎಂಬುವಂತೆ ಪುರುಷ ಅಹಂಕಾರದ ಅಧಿಪತ್ಯವನ್ನು ಮೆರೆದು ಸಾಧಿಸುವ ಕೆಂಪೇಗೌಡನಂತಹ ಪಾತ್ರಗಳಲ್ಲ. ಅಥವಾ ಟಗರು ಸಿನೆಮಾದಲ್ಲಿ ಕಾನೂನುಬಾಹಿರವಾಗಿ ರೌಡಿಯನ್ನು ಕೊಂದುಹಾಕುವ ಪೊಲೀಸ್ ಅಧಿಕಾರಿಯ ಪಾತ್ರವೂ ಅಲ್ಲ.

ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಧಾರಾವಾಹಿ ಪಾತಾಳ್‌ಲೋಕ್‌ನ ಮುಖ್ಯ ಪೊಲೀಸ್ ಅಧಿಕಾರಿಯ ಪಾತ್ರದ ಬೆಳವಣಿಗೆಯನ್ನು, ಅಥವಾ ಆ ಪಾತ್ರದ ಬದಲಾವಣೆಯನ್ನು ಆ ನಿಟ್ಟಿನಲ್ಲಿ ನಿರ್ದೇಶಕ ಕಟ್ಟಿಕೊಡಲು ಪ್ರಯತ್ನಿಸಿದ್ದಾನೆ ಎನ್ನಬಹುದು. (ತನ್ನ ಗೆಳೆಯರಿಗೆ ಥಳಿಸಿದಾಗ ಅಪ್ಪನ ಮೇಲಿದ್ದ ಉದಾಸೀನ ಭಾವನೆ ತೊಲಗಿ ಮಗನಿಗೆ ಪ್ರೀತಿ ಮೂಡುವ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ).

2019ರಲ್ಲಿ ಮೂಡಿಬಂದ ಅನುಭವ್ ಸಿನ್ಹಾ ಅವರ ನಿರ್ದೇಶನದ ‘ಆರ್ಟಿಕಲ್ 15’ನ ಐಪಿಎಸ್ ಅಧಿಕಾರಿ ಮುಖ್ಯ ಪಾತ್ರಕ್ಕೂ ಅಂತಹ ಸಾಧ್ಯತೆಯನ್ನು ನಿರ್ದೇಶಕ ಮೂಡಿಸಿದ್ದಾರೆ. ಕಾನೂನು ಮತ್ತು ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿ, ತನ್ನೆಲ್ಲಾ ಸವಾಲುಗಳ ನಡುವೆ ಮಾನವೀಯ ನೆಲಯಲ್ಲಿ ಕಾರ್ಯನಿರ್ವಹಿಸುವ ಚಿತ್ರಣಕ್ಕೆ ‘ಲಾರ್ಜರ್ ದ್ಯಾನ್ ಲೈಫ್’ ಪಾತ್ರದಂತೆ ಕಾಣಿಸಿಕೊಳ್ಳುವ ಶಕ್ತಿಯೂ ಇದೆ.

ಪೊಲೀಸ್ ಪಾತ್ರಗಳನ್ನು ಕಟ್ಟಿಕೊಡುವುದು ಒಂದು ಸಮಸ್ಯೆ ಆದರೆ, ಕಲಾವಿದನಾದವನು ತನ್ನ ಸುತ್ತಲಿನ ಸಂಗತಿಗಳಿಗೆ ಸ್ಪಂದಿಸುವ ಬಗ್ಗೆಯೂ ತೂತುಕುಡಿ ಘಟನೆ ಚರ್ಚೆಯನ್ನು ಎತ್ತಿದೆ. ತಮಿಳುನಾಡಿನ ಘಟನೆಯನ್ನು ಖಂಡಿಸಿ ಹಲವು ಪ್ರಾಜ್ಞ ತಮಿಳು ನಟ – ನಿರ್ದೇಶಕರು ಧ್ವನಿ ಎತ್ತಿದ್ದಾರೆ. ಪೊಲೀಸ್ ಸುಧಾರಣೆಗೆ ಕರೆಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಪ.ರಂಜಿತ್ ಸೇರಿದಂತೆ ಮುಂತಾದವರು ಇದರ ಬಗ್ಗೆ ಮಾತನಾಡಿದ್ದಾರೆ. 2015 ರ ವೆಟ್ರಿಮಾರನ್ ನಿರ್ದೇಶನದ ತಮಿಳು ಚಲನಚಿತ್ರ ವಿಸಾರಣೈ ಪೊಲೀಸ್ ದೌರ್ಜನ್ಯದ ಕಥಾಹಂದರ ಹೊಂದಿದೆ. ಈ ಚಿತ್ರಕಥೆಗೆ ತಮಿಳು ಬರಹಗಾರ ಚಂದ್ರಶೇಖರ್ ಅವರ ‘ಲಾಕಪ್’ ಮೂಲ. ಚಂದ್ರಶೇಖರ್ ಸ್ವತಃ ಪೊಲೀಸ್ ದೌರ್ಜನ್ಯಕ್ಕೆ ಗುರಿಯಾಗಿದ್ದ ಸತ್ಯ ಘಟನೆಯ ಆಧಾರಿತ ಸಿನೆಮಾ ಇದು. ಚಂದ್ರಶೇಖರ್ ಅವರು ಇಂದಿಗೂ ಗಟ್ಟಿಯಾಗಿ ಇಂತಹ ಪೊಲೀಸ್ ದೌರ್ಜನ್ಯಗಳನ್ನು ಖಂಡಿಸುತ್ತಲೇ ಬಂದಿದ್ದಾರೆ.

ಇದೇ ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ಸಿಎಎ – ಎನ್‌ಆರ್‌ಸಿ ಪ್ರತಿಭಟನೆಯ ಸಮಯದಲ್ಲಿ ಆದ ಗೋಲೀಬಾರ್‌ನಲ್ಲಿ ಇಬ್ಬರು ನಾಗರಿಕರು ಮೃತಪಟ್ಟಾಗ, ಅದಕ್ಕೆ ಸ್ಪಂದಿಸಿದ, ಘಟನೆಯನ್ನು ಖಂಡಿಸಿದ ಕನ್ನಡ ಚಲನಚಿತ್ರರಂಗದ ಮಂದಿ ಎಷ್ಟು? ಹಾಗೆಯೇ ಕನ್ನಡ ಚಲನಚಿತ್ರಗಳ ಆಯ್ಕೆಯ ವಸ್ತುವಿನಲ್ಲಿ ವಿಸಾರಣೈನಂತಹ ಕಥಾವಸ್ತು ಮೂಡುವುದು ಅಸಾಧ್ಯ ಅಥವಾ ಅಪರೂಪ ಅನ್ನುವ ಮಟ್ಟಕ್ಕೆ ಬಂದಿಳಿದಿರುವುದು ಏಕೆ ಮತ್ತು ಹೇಗೆ? ಇವೆಲ್ಲಾ ಪ್ರಶ್ನೆಗಳು ತೂತುಕುಡಿ ಘಟನೆಯ ಹಿನ್ನಲೆಯಲ್ಲಿ ಮುಖ್ಯವಾಗುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...