Homeಮುಖಪುಟಇದುವರೆಗಿನ ದೇಶದ್ರೋಹದ ಪ್ರಕರಣಗಳ ಕುರಿತು ಕೋರ್ಟ್‌ ತೀರ್ಪುಗಳೇನು ಗೊತ್ತೆ?

ಇದುವರೆಗಿನ ದೇಶದ್ರೋಹದ ಪ್ರಕರಣಗಳ ಕುರಿತು ಕೋರ್ಟ್‌ ತೀರ್ಪುಗಳೇನು ಗೊತ್ತೆ?

- Advertisement -
- Advertisement -

ಅಪ್ರಬುದ್ದ ಪ್ರಜಾಪ್ರಬುತ್ವ ಮತ್ತು ನಿರಂಕುಶ ಪ್ರಬುತ್ವ. ಇಂದು ಭಾರತದಲ್ಲಿ ನಡೆಯುತ್ತಿರುವುದಾದರೂ ಏನು?

– ಬಿ. ಶ್ರೀಪಾದ ಭಟ್

(ಓದುಗರಿಗೆ ಸೂಚನೆ: ಈ ಲೇಖನದ ನಿರೂಪಣೆ ಡಿ.ಎನ್ ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಖಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು ಫ್ರೂಫ್ ವ್ಯತ್ಯಾಸವೆಂದು ಬಗೆಯಬಾರದೆಂದು ಕೋರುತ್ತೇವೆ)

22, ಫೆಬ್ರವರಿ 2020ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಮಂತ್ರಿ ಬಸವರಾಜ ಬೊಮ್ಮಾಯಿಯವರು ‘ಕಾಲೇಜು, ಹಾಸ್ಟೆಲ್‌ಗಳಲ್ಲಿ ದೇಶದ್ರೋಹಿ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸದ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಗೃಹಮಂತ್ರಿಗಳ ಅನುಸಾರ ಸಿಎಎ ವಿರುದ್ದ ಪ್ರತಿಭಟನೆ ಮಾಡುತ್ತಿರುವವರೆಲ್ಲರೂ ದೇಶದ್ರೋಹಿಗಳು. ಇನ್ನೂ ಮುಂದುವರೆದು ‘ಅಂತಹ ಶಕ್ತಿಗಳನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಯಾಕೆ ಹೀಗೆ? ಯಾರು ದೇಶದ್ರೋಹಿಗಳು? ಮುಸ್ಲಿಂರ ವಿರುದ್ದ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ, ಬಿರಿಯಾನಿ ಅಲ್ಲ ಬುಲೆಟ್ ಕೊಡತೀವಿ ಅಂತ ಬೆದರಿಸಿದ ಬಿಜೆಪಿ ನಾಯಕರ ಕುರಿತಾಗಿ ನಮ್ಮ ಗೃಹಮಂತ್ರಿಗಳ ಜಾಣ ಕುರುಡು, ಜಾಣ ಕಿವುಡು.

ಕಲ್ಲಡ್ಕ ಪ್ರಭಾಕರ ಭಟ್ಟರ ಖಾಸಗಿ ಶಾಲೆಯ ಸಮಾರಂಬವೊಂದರಲ್ಲಿ ಅಲ್ಲಿನ ವಿದ್ಯಾರ್ಥಿಗಳು ಬಾಬರಿ ಮಸೀದಿ ಬೀಳಿಸುವ ಶೋ ಒಂದನ್ನು ಪ್ರದರ್ಶನ ಮಾಡಿದ್ದು ಸಹ ರಾಜ್ಯ ಬಿಜೆಪಿ ಪಕ್ಷಕ್ಕೆ ಅತಿರೇಕ, ಸಮಾಜ ವಿರೋದಿ ಕೃತ್ಯವೆನಿಸಿಲ್ಲ. ಇದು ನಾಜಿವಾದದ ದಿನಗಳು. ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಅಸಮಾನತೆ, ಅನ್ಯಾಯದ ವಿರುದ್ದ ಶಾಂತಿಯಿಂದ ಪ್ರತಿಭಟನೆ ನಡೆಸುವ ನಾಗರೀಕರ ವಿರುದ್ದ ಹುಸಿಯಾದ ಪ್ರತಿ-ನಿರೂಪಣೆಯನ್ನು ಸೃಷ್ಟಿಸುವಲ್ಲಿ ಬಿಜೆಪಿ ನಿಪುಣತೆ ಸಾದಿಸಿದೆ. ಗೃಹ ಮಂತ್ರಿಗಳ ಹೇಳಿಕೆಯೂ ಸಹ ಈ ಗೋಬೆಲ್ಸ್ ತಂತ್ರವನ್ನು ಬಳಸಿ ಜನಚಳವಳಿಯನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ. ಇದಕ್ಕೆ ಹಿನ್ನಲೆಯಾಗಿ ಒಂದೆರಡು ಘಟನೆಗಳನ್ನು ಗಮನಿಸೋಣ

20, ಫೆಬ್ರವರಿ 2020ರಂದು ಬೆಂಗಳೂರಿನಲ್ಲಿ ನಡೆದ ಪೌರತ್ವ ಕಾಯಿದೆ ವಿರುದ್ದದ ಪ್ರತಿಬಟನೆಯಲ್ಲಿ ಭಾಗವಹಿಸಿ ಮಾತನಾಡುತ್ತ 19 ವರ್ಷದ ಅಮೂಲ್ಯ ಎನ್ನುವ ವಿದ್ಯಾರ್ಥಿ ’ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಕೂಗಿದಳು ಮತ್ತು ಮುಂದುವರೆದು ‘ಹಿಂದುಸ್ತಾನ ಜಿಂದಾಬಾದ್’ ಎಂದು ಕೂಗುವಷ್ಟರಲ್ಲಿ ಆಕೆಯಿಂದ ಮೈಕು ಕಿತ್ತುಕೊಂಡು ಬಂದಿಸಲಾಗಿದೆ. ಆಕೆಯ ಉದ್ದೇಶವೇನಿತ್ತು? ಏನು ಹೇಳಲು ಬಯಸಿದ್ದಳು? ಎನ್ನುವುದಕ್ಕೆ ಅವಕಾಶ ದೊರಕಲಿಲ್ಲ. ಆದರೆ ಸ್ವತಃ ತಾನೆ ಅರಗಿಸಿಕೊಳ್ಳುವುದಕ್ಕೆ ಸಾದ್ಯವಿಲ್ಲದ ಮಾತುಗಳನ್ನು ಆಡಲು ಬಯಸಿದ್ದಳು ಎಂದೆನಿಸುತ್ತದೆ. ಆದರೆ ಇದು ಕೇವಲ ಒಂದು ಅಪ್ರಬುದ್ದ ನಡವಳಿಕೆ ಮಾತ್ರ. ಅದರಲ್ಲೂ ಅನುಮಾನಿತ ಸಮುದಾಯ ಮುಸ್ಲಿಂ ವೇದಿಕೆಯಲ್ಲಿ, ಇಂದಿನ ಪ್ರಕ್ಷುಬ್ದ ದಿನಗಳಲ್ಲಿ ಈ ಅರೆಬೆಂದ ಘೋಷಣೆ ಕೂಗಿದ್ದು ಸಮಂಜಸವಲ್ಲ. ಆದರೆ ಈ ನಡವಳಿಕೆ ಯಾವುದೆ ಶಿಕ್ಷೆಗೆ ಅರ್ಹವಾಗಿರಲಿಲ್ಲ. ಬುದ್ದಿವಾದ ಹೇಳಿ ಬಿಟ್ಟುಬಿಡಬಹುದಾದ ಕ್ಷುಲ್ಲಕ ಘಟನೆ. ಆದರೆ ತಮ್ಮ ವಿಮರ್ಶಕರನ್ನು, ಬಿನ್ನಮತೀಯರನ್ನು ಜೈಲಿಗೆ ತಳ್ಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿ ಪಕ್ಷವು ಈ ಬಾರಿಯೂ ಅಮೂಲ್ಯಳ ವಿರುದ್ದ ಕರಾಳ ಶಾಸನಗಳನ್ನು ಪ್ರಯೋಗಿಸಿದೆ. ಪೊಲೀಸ್ ಅದಿಕಾರಿ ಬಿ. ರಮೇಶ್ ಅವರು ‘ನಾವು ಆಕೆಯ ಮೇಲೆ ಸೆಕ್ಷನ್ 124ಎ (ದೇಶದ್ರೋಹ), 153ಎ ಮತ್ತು ಬಿ (ಜನರ ನಡುವೆ ದ್ವೇಷ ಭಾವನೆ ಕೆರಳಿಸುವುದು) ಅಡಿಯಲ್ಲಿ ಸುಮೋಟೋ ಮೊಕದ್ದಮೆ ಹೂಡಿದ್ದೇವೆ’ ಎಂದು ಹೇಳಿದ್ದಾರೆ. ಮತ್ತು ಅಮೂಲ್ಯಳನ್ನು 14 ದಿನಗಳ ನ್ಯಾಯಾಂಗ ಬಂದನದಲ್ಲಿರಿಸಲಾಗಿದೆ.

ಹಿರಿಯ ನ್ಯಾಯವಾದಿ ಸೋಲಿ ಸೊರಾಬ್ಜಿಯವರು ‘ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವುದು ಖಂಡನೀಯ, ಆದರೆ ಅದು ರಾಷ್ಟ್ರದ್ರೋಹವಲ್ಲ, ಸರಕಾರಗಳನ್ನು ಟೀಕಿಸುವುದು ದೇಶದ್ರೋಹವಲ್ಲ’ ಎಂದು 2016ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 24, ಫೆಬ್ರವರಿ 2020ರಂದು “ಪ್ರಜಾಪ್ರಬುತ್ವ ಮತ್ತು ಬಿನ್ನಮತೀಯತೆ” ಕುರಿತು ಉಪನ್ಯಾಸ ನೀಡುತ್ತ ನ್ಯಾಯಾದೀಶ ದೀಪಕ್ ಗುಪ್ತ ಅವರು ‘ಬಿನ್ನಮತೀಯವನ್ನು, ಬಂಡಾಯವನ್ನು ಉತ್ತೇಜಿಸಬೇಕು, ಸಂವಾದ, ಚರ್ಚೆ, ಸಂಬಾಷಣೆ ಮೂಲಕ ದೇಶವನ್ನು ಉತ್ತಮವಾಗಿ ಆಳಬಹುದು. ಹಳೆಯದನ್ನು ಪ್ರಶ್ನಿಸದೆ ಹೊಸತು ಹುಟ್ಟುವುದಿಲ್ಲ… … ಈ ಕಾರಣಕ್ಕೆ ಬಿನ್ನಮತ ವ್ಯಕ್ತಪಡಿಸುವ, ಪ್ರಶ್ನಿಸುವ ಹಕ್ಕು ಪ್ರಜಾಪ್ರಬುತ್ವದ ಅಂತಃಸತ್ವ… .. ಬಿನ್ನಮತೀಯರನ್ನು ದೇಶ-ವಿರೋದಿಗಳು ಎಂದು ಹಣೆಪಟ್ಟಿ ಹಚ್ಚುವುದು ಸಂವಿದಾನದ ಆಶಯಗಳಿಗೆ ದಕ್ಕೆ ಮಾಡಿದಂತೆ” ಎಂದು ವಿವರಿಸಿದ್ದಾರೆ. ಈ ಮಾತುಗಳು ಧರ್ಮದ ಅಮಲೇರಿಸಿಕೊಂಡ ಸಂಘ ಪರಿವಾರಕ್ಕೆ ಅರ್ಥವಾಗುವುದೆಲ್ಲಿಂದ?

ಸುಪ್ರೀಂಕೋರ್ಟ್ ಸಹ ಇದನ್ನು ಪುನರುಚ್ಚರಿಸುತ್ತಿದೆ. ದೇಶದ ಬಹುತೇಕ ಕಾನೂನುತಜ್ಞರ ಅಬಿಪ್ರಾಯವೂ ಸಹ ಇದನ್ನು ಅನುಮೋದಿಸುತ್ತದೆ. ಆದರೆ ದ್ವೇಷದ ರಾಜಕಾರಣದಲ್ಲಿ ಮುಳುಗಿರುವ ಬಿಜೆಪಿ ಪಕ್ಷವು ಈ ನೆಲದ ಯಾವುದೇ ಕಾನೂನುಗಳನ್ನು ಗೌರವಿಸುವ ಮನಸ್ಥಿತಿಯಲ್ಲಿಲ್ಲ.

ಅದಕ್ಕೂ ಹಿಂದೆ ಪತ್ರಕರ್ತ, ಕವಿ ಸಿರಾಜ್ ಬಿಸ್ಲಹಳ್ಳಿಯವರು ಆನೆಗೊಂದಿ ಉತ್ಸವದಲ್ಲಿ ಈ ಪೌರತ್ವ ಕಾಯಿದೆ ಕುರಿತಾಗಿ ಬರೆದ ಕವಿತೆಯನ್ನು ವಾಚಿಸಿದ್ದಕ್ಕಾಗಿ ಅವರ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಿಸಿದರು ಮತ್ತು ಬಂದನದ ವಾರೆಂಟ್ ಸಹ ಹೊರಡಿಸಲಾಯಿತು. ಕರ‍್ನಾಟಕದ ಇತಿಹಾಸದಲ್ಲಿ ಕವಿತೆ ಬರೆದ ಕಾರಣಕ್ಕೆ ಬಂದಿಸಿರುವುದು ಇದು ಮೊದಲ ಪ್ರಕರಣ. ಆದರೆ ಈ ದೌರ್ಜನ್ಯದ ವಿರುದ್ದ ವ್ಯಾಪಕ ವಿರೋದ ವ್ಯಕ್ತವಾಯಿತು. ಕಡೆಗೂ 18, ಪೆಬ್ರವರಿ 2020ರಂದು ಸಿರಾಜ್ ಅವರನ್ನು ಬಂದಿಸಿದರು ನಂತರ 19, ಫೆಬ್ರವರಿ 2020ರಂದು ಶರತ್ತುಬದ್ದ ಜಾಮೀನು ನೀಡಿ ಬಿಡುಗಡೆ ಮಾಡಿದರು.

ಇದಕ್ಕೂ ಹಿಂದೆ ಬೀದರ್‌ನ ಶಾಹೀನ್ ಶಾಲೆಯ ಮೇಲೆ ಸೆಕ್ಷನ್ 124ಎ ಅನ್ನು ಬಳಸಿಕೊಂಡು ದೇಶದ್ರೋಹದ ಪ್ರಕರಣವನ್ನು ಹಾಕಲಾಯಿತು. 21, ಜನವರಿ 2020ರಂದು ಶಾಹೀನ್ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಆರನೆ ತರಗತಿಯ ಮಕ್ಕಳು (12ನೆ ವಯಸ್ಸು) ಈ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಕುರಿತಾದ ಕಿರು ವಿಡಂಬನಾತ್ಮಕ ನಾಟಕ ಪ್ರದರ್ಶಿಸಿದ್ದರು. ಈ ನಾಟಕದ ಸಂಬಾಷಣೆಗಳು ಪ್ರದಾನಿ ನರೇಂದ್ರ ಮೋದಿಗೆ ಮಾಡಿದ ಅವಮಾನ ಎಂದು ಆರೋಪಿಸಿ ಭಾರತೀಯ ದಂಡಸಂಹಿತೆ ಸೆಕ್ಷನ್ 504 (ಶಾಂತಿಭಂಗ ಮಾಡುವ ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 124ಎ (ದೇಶದ್ರೋಹ) ಅಡಿಯಲ್ಲಿ ಶಾಹೀನ್ ಸಂಸ್ಥೆಯ ಅದ್ಯಕ್ಷ, ಆಡಳಿತ ಮಂಡಳಿ ಮೇಲೆ ದೂರು ದಾಖಲಿಸುತ್ತಾರೆ. 28, ಜನವರಿ 2020ರಂದು 46 ಮಕ್ಕಳನ್ನು (12 ವಯಸ್ಸು) ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುತ್ತಾರೆ. ಇವರಲ್ಲಿ ಆರನೆ ತರಗತಿಯ ಆಯೇಶಾಳ ತಾಯಿಯನ್ನು ಮೇಲೆ ತಿಳಿಸಿದ ಶಾಸನಗಳ ಆದಾರದಲ್ಲಿ ಅಕ್ರಮವಾಗಿ ಬಂದಿಸುತ್ತಾರೆ. ಕಡೆಗೂ ಫೆಬ್ರವರಿ 15, 2020ರಂದು ಅವರ ಬಿಡುಗಡೆಯಾಗುತ್ತದೆ. ಆದರೆ ಈ ಸುಳ್ಳು ಪ್ರಕರಣದಿಂದ ರ‍್ನಾಟಕವು ರಾಷ್ಟ್ರೀಯ ಮಟ್ಟದಲ್ಲಿ ಅವಮಾನಿತಗೊಂಡಿತು.

ಮೇಲಿನ ಉದಾಹರಣೆಗಳನ್ನು ಅವಲೋಕಿಸಿದಾಗ ಸೆಕ್ಷನ್ 124ಎ, ಸೆಕ್ಷನ್ 144 ಅನ್ನು ಪ್ರಬುತ್ವವು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಜಾಪ್ರಬುತ್ವದ ಆಶಯಗಳನ್ನು, ಅಬಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದರೆ ಬಿಜೆಪಿ ಪಕ್ಷವು ತಮ್ಮದೆ ಪಕ್ಷದ ಸೋಮಶೇಖರ ರೆಡ್ಡಿ, ಸಿ.ಟಿ.ರವಿ, ರೇಣುಕಾಚಾರ್ಯ ಮುಂತಾದವರ ಸಮಾಜದ ಸೌಹಾರ್ದತೆ ಕದಡುವ, ದ್ವೇಷಪೂರಿತ ಹೇಳಿಕೆಗಳು, ಬಾಷಣಗಳ ವಿರುದ್ದ ಯಾವುದೇ ಕ್ರಮ ಜರುಗಿಸಿಲ್ಲ. ಇದು ನಿರಂಕುಶ ಪ್ರಬುತ್ವವಲ್ಲದೆ ಮತ್ತಿನ್ನೇನು?

ಕಾನೂನು ತೀರ್ಪುಗಳು

1950ರಲ್ಲಿ ‘ರೊಮೇಶ್ ಥಾಪರ್ ವರ್ಸಸ್ ಸ್ಟೇಟ್ ಆಫ್ ಮದ್ರಾಸ್’ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ ‘ಪತ್ರಿಕಾ ಸ್ವಾತಂತ್ರ್ಯವು ವಾಕ್ ಸ್ವಾತಂತ್ರ್ಯ ಮತ್ತು ಅಬಿವ್ಯಕ್ತಿ ಸ್ವಾತಂತ್ರ್ಯದ ಭಾಗ” ಎಂದು ತೀರ್ಪು ನೀಡಿದೆ.

‘ಮನೇಕಾ ಗಾಂಧಿ ವರ್ಸಸ್ ಕೇಂದ್ರ ಸರಕಾರ’ ಪ್ರಕರಣದಲ್ಲಿ 1, ಜನವರಿ 1978ರಂದು ತೀರ್ಪು ನೀಡಿದ 7 ನ್ಯಾಯಮೂರ್ತಿಗಳ ಪೀಠವು ‘ಅನುಚ್ಛೇದ 14, 19, 21 ಪ್ರತ್ಯೇಕ ಕಲಂಗಳಾಗಿದ್ದರೂ ಪರಸ್ಪರ ಪೂರಕವಾಗಿವೆ. ಯಾವುದೆ ವ್ಯಕ್ತಿಯ ಖಾಸಗಿ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟಾದರೆ ಈ ಸುವರ್ಣ ತ್ರಿಕೋನ (golden triangle) ಕಲಂಗಳನ್ನು ಅನ್ವಯಿಸಿ ಅವರ ಸಮಾನತೆ ಹಕ್ಕು, ಖಾಸಗಿತನ ಮತ್ತು ಅಬಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಬೇಕು’ ಎಂದು ಹೇಳಿದೆ. ಈ ತೀರ್ಪಿನ ಸಂದರ್ಭದಲ್ಲಿ ಜಸ್ಟೀಸ್ ಭಗವತಿ ಅವರು “ಸಾರ್ವಜನಿಕ ವಿಷಯಗಳ ಕುರಿತು ಚರ್ಚಿಸಲು ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ, ಸ್ವಾತಂತ್ರ್ಯವಿದೆ, ಈ ಚರ್ಚೆಗಳ ಮೂಲಕ ಆತ ಪ್ರಜಾಪ್ರಬುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾನೆ ಮತ್ತು ಆತನ ಈ ಅಬಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕು” ಎಂದು ಹೇಳುತ್ತಾರೆ.

‘ರಾಮಲೀನ ಮೈದಾನ ಘಟನೆ ವರ್ಸಸ್ ಕೇಂದ್ರ ಸರಕಾರ’ ಪ್ರಕರಣದಲ್ಲಿ ಸುಮೋಟೋ ದೂರು ದಾಖಲಿಸಿಕೊಂಡ ಸುಪ್ರೀಂ ಕೋರ್ಟ 23, ಫೆಬ್ರವರಿ 2012ರಂದು ತೀರ್ಪು ನೀಡುತ್ತ ‘ಒಂದೆಡೆ ಗುಂಪುಗೂಡಿ ಶಾಂತಿಯುತವಾಗಿ ಪ್ರತಿಭಟಿಸುವುದು ನಾಗರಿಕರ ಮೂಲಭೂತ ಹಕ್ಕು. ಇದನ್ನು ಪ್ರಬುತ್ವವು ತನ್ನ ನಿರಂಕುಶ ಅದಿಕಾರದಿಂದ ದಮನ ಮಾಡಲು ಸಾದ್ಯವಿಲ್ಲ’ ಎಂದು ಹೇಳಿದೆ.

2015ರಲ್ಲಿ ‘ಶ್ರೇಯಾ ಸಿಂಘಾಲ್ ವರ್ಸಸ್ ಕೇಂದ್ರ ಸರಕಾರ’ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ ಆನಲೈನ್ ಭಾಷಣವನ್ನು, ಬರವಣಿಗೆಯನ್ನು ನಿಯಂತ್ರಿಸುವ, ರದ್ದುಪಡಿಸುವ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 66ಎ ಅನ್ನು ರದ್ದುಗೊಳಿಸುತ್ತಾ ‘ಈ ಕಾಯಿದೆ ಕಾನೂನುಬಾಹಿರ, ಇದು ಅನುಚ್ಛೇದ 19(1)(ಎ) ದ ಸ್ಷಷ್ಟ ಉಲ್ಲಂಘನೆಯಾಗಿದೆ’ ಎಂದು ಐತಿಹಾಸಿಕ ತೀರ್ಪು ನೀಡಿದೆ

ಡಿಸೆಂಬರ್ 19, 2019ರಂದು ಪೌರತ್ವ ಕಾಯಿದೆ ವಿರುದ್ದ ಪ್ರತಿಭಟನೆ ಆಯೋಜಿಸಿದಾಗ ನಗರ ಪೊಲೀಸ್ ಆಯುಕ್ತರು ಕಾನೂನುಬಾಹಿರವಾಗಿ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರು. ಅದರ ಆದಾರದ ಮೇರೆಗೆ ಹೋರಾಟಗಾರರನ್ನು ಅಕ್ರಮವಾಗಿ ಬಂದಿಸಿದ್ದರು. ಡಿಸೆಂಬರ್ 19, 2019ರಂದು ಪೌರತ್ವ ಕಾಯಿದೆ ವಿರುದ್ದ ಪ್ರತಿಭಟನೆ ಆಯೋಜಿಸಿದಾಗ ನಗರ ಪೊಲೀಸ್ ಆಯುಕ್ತರು ಕಾನೂನುಬಾಹಿರವಾಗಿ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರು. ಅದರ ಆದಾರದ ಮೇರೆಗೆ ಹೋರಾಟಗಾರರನ್ನು ಅಕ್ರಮವಾಗಿ ಬಂದಿಸಿದ್ದರು. 13, ಫೆಬ್ರವರಿ 2020ರಂದು ಕರ‍್ನಾಟಕ ಹೈಕೋರ್ಟ ‘18, ಡಿಸೆಂಬರ್ 2019 – 21, ಡಿಸೆಂಬರ್ 2019’ರವರೆಗೆ ಬೆಂಗಳೂರು ಮತ್ತು ಕರ‍್ನಾಟಕದ ಆಯ್ದ ಭಾಗಗಳಲ್ಲಿ ವಿದಿಸಲಾಗಿದ್ದ ಸೆಕ್ಷನ್ 144 ಅನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿದೆ. ಈ ಶಾಸನವನ್ನು ಬೇಕಾಬಿಟ್ಟಿ ಬಳಸಿಕೊಳ್ಳುವಂತಿಲ್ಲ ಎಂದು ಛೀಮಾರಿ ಹಾಕಿದೆ.

15, ಫೆಬ್ರವರಿ 2020ರಂದು ಬಾಂಬೆ ಹೈಕೋರ್ಟ (ಔರಂಗಾಬಾದ್ ಪೀಠ)ವು ಇಫ್ತೆಕರ್ ಝಾಕೀ ಶಾಹ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿ “ಸಿಎಎ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯ ಸ್ವಾತಂತ್ರವನ್ನು ಸೆಕ್ಷನ್ 144 ಅಡಿಯಲ್ಲಿ ಮೊಟಕುಗೊಳಿಸುವ ಪ್ರಬುತ್ವದ ಆದೇಶವನ್ನು ರದ್ದುಗೊಳಿಸಿದೆ ಮತ್ತು ಸಿಎಎ ವಿರುದ್ದ ಅಬಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕರೆಯಲು ಸಾದ್ಯವಿಲ್ಲ” ಎಂದು ತೀರ್ಪು ನೀಡಿದೆ.

ಅನುಚ್ಛೇದ 14, 19, 21 ಸುವರ್ಣ ತ್ರಿಕೋನಗಳ ನೀತಿಸಂಹಿತೆಗಳನ್ನು ಬೆಂಬಲಿಸುತ್ತಾ ನ್ಯಾಯಾಂಗವು ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು, ಪ್ರಜೆಗಳ ಅಬಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕುಗಳನ್ನು ರಕ್ಷಿಸಿದ ಇಂತಹ ಹತ್ತಾರು ಉದಾಹರಣೆಗಳಿವೆ.

ಸೋತ ಪ್ರಜಾಪ್ರಬುತ್ವ ಮತ್ತು ಅಸಹಾಯಕ ಪ್ರಜೆಗಳು

ಜಾನ್ ಡ್ಯೂನ್ ಪ್ರಜಾಪ್ರಬುತ್ವದ ಇತಿಹಾಸದ ಕುರಿತು ಬರೆಯುತ್ತಾ ‘ಸಾಂದರ್ಬಿಕ ಹುಟ್ಟಿನ, ಅಗೌರವದ, ಕಳಂಕದ ದೀರ್ಘ ಇತಿಹಾಸ ಹೊಂದಿರುವ, ಇತ್ತೀಚೆಗೆ ಜಗತ್ತಿನ ರಾಜಕೀಯ ಪರಿಕಲ್ಪನೆಯನ್ನು ಪ್ರಭಾವಿಸುತ್ತಿರುವ ಪ್ರಜಾಪ್ರಬುತ್ವ ಎನ್ನುವ ಪದವು 2500 ವರ್ಷಗಳ ಹಿಂದೆ ಸ್ಥಳೀಯ ಗ್ರೀಕ್‌ನಲ್ಲಿ ಆಗಿನ ತುರ್ತು ಅಗತ್ಯಕ್ಕೆ ಪರಿಹಾರವಾಗಿ ಹುಟ್ಟಿಕೊಂಡಿತು” ಎನ್ನುತ್ತಾನೆ. ಮುಂದುವರೆದು “ನಂತರ ಈ ಪ್ರಜಾಪ್ರಬುತ್ವವು 2500 ವರ್ಷಗಳ ಕಾಲ ನಾಪತ್ತೆಯಾಗಿತ್ತು… .. ಮತ್ತೆ ಆದುನಿಕ ರಾಜಕೀಯ ಅಸ್ತ್ರವಾಗಿ ಮರುಹುಟ್ಟು ಪಡೆದುಕೊಂಡಿತು’ ಎಂದು ಹೇಳುತ್ತಾನೆ. ಈ ಮರುಹುಟ್ಟಿಗೆ 18ನೆ ಶತಮಾನದ ಅಮೆರಿಕಾದ ಹೋರಾಟ, ಫ್ರೆಂಚ್ ಕ್ರಾಂತಿಯನ್ನು ಉದಾಹರಿಸುತ್ತಾನೆ. ಡಾ. ಬೆಂಜಮಿನ್ ಇಸಾಕಾನ್ ಅವರು ‘ಈ ರೀತಿಯಲ್ಲಿ ಪ್ರಾಚೀನ ಗ್ರೀಕ್‌ನ ಪಾಲ್ಗೊಳ್ಳುವಿಕೆ ಸರಕಾರವೆನ್ನುವ ಪ್ರಯೋಗದಿಂದ ಶುರುವಾಗಿ, ಕೆಲ ಹಂತದವರೆಗೆ ರೋಮ್‌ಗೆ ತಲುಪಿ ಮುಂದೆ ಪ್ರಜಾಪ್ರಬುತ್ವದ ತಳಹದಿ ಎನ್ನಬಹುದಾದ ಬ್ರಿಟಿಷ್ ಸಂಸತ್ತಿನ ಬೆಳವಣಿಗೆ, ಅಲ್ಲಿಂದ ಅಮೆರಿಕಾದ ಸ್ವಾತಂತ್ರ್ಯದ ಘೋಷಣೆ ಮತ್ತು ಪ್ರೆಂಚ್ ಕ್ರಾಂತಿ, ನಂತರ ಕಳೆದ 200 ವರ್ಶಗಳಲ್ಲಿ ಪಶ್ಚಿಮದ ಮಾರ್ಗದರ್ಶನದಲ್ಲಿ ಉದಾರವಾದಿ ಮೇಲ್ಪಂಕ್ತಿಯ ಪ್ರಜಾಪ್ರಬುತ್ವ ಜಾಗತಿಕವಾಗಿ ಅರಳಿದೆ’ ಎನ್ನುತ್ತಾರೆ. ಇದು ಸ್ಥೂಲ ಇತಿಹಾಸ. ಇದನ್ನು ಉಳ್ಳಾಗಡ್ಡೆ ಸಿಪ್ಪೆ ಸುಲಿದಂತೆ ಸುಲಿಯಬಹುದು. ಆದರೆ ಬೇಡ.

ಭಾರತದ ಪ್ರಜಾಪ್ರಬುತ್ವಕ್ಕೆ ಈಗ 71 ವರ್ಷ. ಈ ದೇಶವು ವಿವಿಧ ಜಾತಿಗಳು, ವರ್ಗಗಳು, ಜನಾಂಗೀಯ ಭಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಂಡ ಬಹುಸಂಸ್ಕೃತಿಯ, ವೈವಿದ್ಯತೆಯ ಒಕ್ಕೂಟ ವ್ಯವಸ್ಥೆ. ನಮ್ಮ ಪ್ರಜಾತಂತ್ರಕ್ಕೆ ಇಂಗ್ಲೆಂಡ್‌ನ ಸಂಸದೀಯ ಪ್ರಜಾಪ್ರಬುತ್ವದ ಮಾದರಿಯಾಗಿದೆ. ಇಲ್ಲಿನ ಸಂವಿದಾನದ ನೀತಿಸಂಹಿತೆಗಳು ಪ್ರತಿಯೊಬ್ಬ ನಾಗರಿಕನಿಗೆ ಅಬಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನದ ಹಕ್ಕುಗಳು, ಸಮಾನತೆಗಳನ್ನು ಕಲ್ಪಿಸಿದೆ. ಇಲ್ಲಿ ಜನಸಾಮಾನ್ಯರು ಪ್ರಜಾಪ್ರಬುತ್ವದ ಜೀವಾಳ. ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಬುತ್ವವನ್ನು ಕಾಪಾಡುತ್ತಾರೆ. ಅದನ್ನು ಉಳಿಸುವವರೂ, ಬೆಳೆಸುವವರೂ ಪ್ರಜೆಗಳು. ಆದರೆ ಅದನ್ನು ನಾಶ ಮಾಡಬಲ್ಲರೆ? ಹೌದು ಪ್ರಬುತ್ವದ ದೌರ್ಜನ್ಯಕ್ಕೆ ಬಲಿಯಾಗುವ ಜನಸಾಮಾನ್ಯರು ಅಸಹಾಯಕತೆಯಲ್ಲಿ, ಮೋಸದಲ್ಲಿ, ಅನೈತಿಕತೆಯಲ್ಲಿ ಪ್ರಬುತ್ವದ ದಾಳಗಳಾಗಿ, ಅದರ ದಬ್ಬಾಳಿಕೆಯಲ್ಲಿ ಶಾಮೀಲಾಗಬಲ್ಲರು. ನಿಸ್ಸಿಂ ಮಂತುಕರೇನ್ ‘ಈ ಆಮ್ ಆದ್ಮಿಗಳೇ ಇತರ ಲಕ್ಷಾಂತರ ಸಾಮಾನ್ಯ ಜನರನ್ನು ಗ್ಯಾಸ್ ಛೇಂಬರ್‌ಗೆ ತಳ್ಳಿದ್ದರು. ಈ ಆಮ್ ಆದ್ಮಿಗಳೇ ಹಿಟ್ಲರ್‌ನನ್ನು ಚುನಾಯಿಸಿ ಆತನಿಗೆ ಆಳುವ ಅಧಿಕಾರ ನೀಡಿದ್ದರು. ರ‍್ವಾಂಡಾದ ಸಾಮಾನ್ಯ ಜನರೇ ತಮ್ಮದೇ ದೇಶದ ಲಕ್ಷಾಂತರ ಸಾಮಾನ್ಯ ಜನರನ್ನು ಹತ್ಯೆಗೈದಿದ್ದರು. ಈ ಸಾಮಾನ್ಯ ಜನರೇ ನರೋಡ ಪಾಟಿಯಾದಲ್ಲಿ ಗುಂಪುಗೂಡಿ ತಮ್ಮ ನೆರೆಹೊರೆಯ ಸಾಮಾನ್ಯ ಜನರ ಮೇಲೆ ಅತ್ಯಾಚಾರ ನಡೆಸಿದ್ದರು, ಅವರ ಮನೆಗಳನ್ನು ಲೂಟಿ ಮಾಡಿ, ಸುಟ್ಟು ಹಾಕಿದ್ದರು, ತಮ್ಮ ನೆರೆಹೊರೆಯವರ ಹತ್ಯೆಗೈದಿದ್ದರು” ಎಂದು ಬರೆಯುತ್ತಾರೆ.

1984ರಲ್ಲಿ ಸಿಖ್‌ರನ್ನು ಮಾರಣಹೋಮ ಮಾಡಿದರು, ಕೆಲ್ವಿನಮಣಿ, ಖೈರ್ಲಾಂಜಿ, ಕಂಬಾಲಪಲ್ಲಿಯಲ್ಲಿ ದಲಿತರ ಹತ್ಯೆ ಮಾಡಿದರು, ಮೋದಿಯವರನ್ನು ಅಬಿಮಾನದಿಂದ ಆಯ್ಕೆ ಮಾಡಿ, ಪ್ರೀತಿಯಿಂದ ಅದಿಕಾರ ನೀಡಿದರು ಎಂದೂ ಇದನ್ನು ಮುಂದುವರೆಸಬಹುದು. ಈ ವಿಪರ್ಯಾಸಗಳನ್ನು, ಸಂಧಿಗ್ಧತೆಗಳನ್ನು, ಗೊಂದಲಗಳನ್ನು ಗುರುತಿಸದೆ, ಇವುಗಳೊಂದಿಗೆ ತೊಡಗಿಕೊಳ್ಳದೆ, ಇದರಿಂದ ಹೊರಬರಲು ಪ್ರಜಾತಾಂತ್ರಿಕ ಮಾದರಿಗಳನ್ನು ಅನುಸರಿಸದೇ ಹೋದರೆ ಈ ಪ್ರಜಾಪ್ರಭುತ್ವವೇ ಟೊಳ್ಳಾಗುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರ್ಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅಧಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವುದೆಂದರೆ ಈ ಒಗ್ಗಟ್ಟು ನಿರಂಕುಶ ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲುದೊಡ್ಡ ವ್ಯಂಗ್ಯ. ಜನಸಾಮಾನ್ಯರು ತಮ್ಮ ಶೋಷಕನನ್ನು, ಹಲ್ಲೆಕೋರನನ್ನು ತಾವೆ ಬಹುಮತದಲ್ಲಿ ಆಯ್ಕೆ ಮಾಡುವ ಮಟ್ಟಕ್ಕೆ ಭಾರತದ ಪ್ರಜಾಪ್ರಭುತ್ವ ತಲುಪಿದೆ. ಈ ನಿರಂಕುಶವು ಸರ್ವಾಧಿಕಾರದ ರೂಪದಲ್ಲಿ ಸಾಮಾನ್ಯ ಜನರ ದಬ್ಬಾಳಿಕೆಯನ್ನು ನಡೆಸುವ ಸಾಮರ್ಥ್ಯ ಪಡೆದುಕೊಂಡಿರುತ್ತದೆ. ಮತ್ತು ಪ್ರಜೆಗಳಿಗೆ ಇದರ ಅರಿವಿಲ್ಲವೆ ಎನ್ನುವ ಗೊಂದಲ ನಿಜವಾದರೆ ಅಲ್ಲಿಗೆ ಪ್ರಜಾಪ್ರಭುತ್ವ ಅವಸಾನದ ಅಂಚಿನಲ್ಲಿದೆ ಎಂದರ್ಥ. ಇಂದು ಮೋದಿ-ಶಾ-ಆರೆಸ್ಸಸ್‌ನ ನಿರಂಕುಶ ಆಡಳಿತದಲ್ಲಿ ಭಾರತ ಈ ಸ್ಥಿತಿಗೆ ತಲುಪಿದೆ.

ಮಂತುಕರೇನ್ ‘ಸಾಮಾಜಿಕ, ರಾಜಕೀಯ ಹೋರಾಟಗಳು ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳಸಮುದಾಯಗಳ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಯನ್ನು ಪ್ರತಿನಿಧಿಸಿದಾಗ ಮಾತ್ರ (ಅದು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ಆಗಿರಲಿ) ಅದರ ಚಳವಳಿ ತನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಇದನ್ನು ಒಳಗೊಳ್ಳದೇ ಹೋದರೆ ಆ ಚಳುವಳಿ ತಾನು ಪ್ರಾತಿನಿಧಿಸುವ ಸಾಮಾನ್ಯತೆ ಮತ್ತು ಸರಳತೆ ಕೇವಲ ನಿರ್ವಿಕಾರವಾಗಿರುತ್ತದೆ. ಇದು ನಿರ್ವಾತದಲ್ಲಿ ಜರಗುತ್ತಿರುತ್ತದೆ” ಎಂದು ಹೇಳುತ್ತಾರೆ. ಪ್ರಬುತ್ವದ ಕಟ್ಟಳೆಗಳು ಅತಿಯಾಗಿ ಪ್ರಾಯೋಗಿಸಲ್ಪಟ್ಟಾಗ ಬಂಡಾಯ ಚಿಗುರೊಡೆಯುತ್ತದೆ. ಆದರೆ ಪ್ರಜಾಪ್ರಬುತ್ವದ ಚೌಕಟ್ಟಿನೊಳಗೆ ಕಾನೂನು ಕ್ರಮವೂ ಅಗತ್ಯವಾಗುತ್ತದೆ. ಈ ಕಾನೂನು ಮತ್ತು ಪ್ರತಿರೋಧವು ಜೀವಂತಿಕೆಯ ಲಕ್ಷಣಗಳಾಗಿ ನವiಗಿಂದು ಅವಶ್ಯಕವಾಗಿದೆ. ಇವೆರಡರಲ್ಲಿ ಒಂದನ್ನು ಈ ಸಮೀಕರಣದಿಂದ ತೆಗೆದುಹಾಕಿದ ಕ್ಷಣದಿಂದ ಪ್ರಜಾಪ್ರಭುತ್ವದ ಕೊನೆದಿನಗಳ ಕ್ಷಣಗಣನೆ ಆರಂಭವಾಗುತ್ತದೆ. ಆಗ ಆರಂಭದಲ್ಲಿ ಲಗಾಟ ಹೊಡೆಯುವ ಪ್ರಜಾಪ್ರಭುತ್ವ ಕಡೆಗೆ ಬಸವಳಿದು ನೆಲಕಚ್ಚುತ್ತದೆ.

ಪೌರತ್ವ ಕಾಯಿದೆ ವಿರೋಧದ “ನಾವು ಭಾರತೀಯರು ಸ್ಪ್ರಿಂಗ್‌”ನ (we the people of india spring) ಮುಂದಿನ ದಿನಗಳನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...