Homeಕರೋನಾ ತಲ್ಲಣಕೋವಿಡ್ 2ನೇ ಅಲೆ ಕುರಿತು ನವೆಂಬರ್‌ನಲ್ಲೇ ತಜ್ಞರ ಸಮಿತಿ ಎಚ್ಚರಿಸಿದ್ದರೂ ಸಚಿವ ಸುಧಾಕರ್ ಏನು ಮಾಡುತ್ತಿದ್ದರು?

ಕೋವಿಡ್ 2ನೇ ಅಲೆ ಕುರಿತು ನವೆಂಬರ್‌ನಲ್ಲೇ ತಜ್ಞರ ಸಮಿತಿ ಎಚ್ಚರಿಸಿದ್ದರೂ ಸಚಿವ ಸುಧಾಕರ್ ಏನು ಮಾಡುತ್ತಿದ್ದರು?

- Advertisement -
- Advertisement -

ಏಪ್ರಿಲ್ 11 ರಂದು ವೈದ್ಯರೂ ಆಗಿರುವ ಡಾ. ಕೆ ಸುಧಾಕರ್ ಅವರು ತಾಂತ್ರಿಕ ಸಲಹಾ ಸಮಿತಿ ಮತ್ತು ವೈದ್ಯಕೀಯ ಸಲಹಾ ಸಮಿತಿಯ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಹೀಗೆ ಹೇಳುತ್ತಾರೆ, ‘ಮೇ ಮೊದಲ ವಾರದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣ ಆಗಲಿದೆ. ಆಗ ರಾಜ್ಯದ ಆರೋಗ್ಯ ಮೂಲಸೌಕರ್ಯದ ಮೇಲೆ ಇದು ದೊಡ್ಡ ಹೊರೆಯಾಗಲಿದೆ. ಅದಕ್ಕೆ ತಕ್ಕಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ…’

ಸಚಿವರು ತಜ್ಞರು ಹೇಳಿದ್ದನ್ನು ಸರಿಯಾಗಿಯೇ ಹೇಳಿದ್ದರು. ಆದರೆ, ಆರೋಗ್ಯ ಮೂಲಸೌಕರ್ಯ ಕುಸಿಯಲಿದೆ ಎಂಬುದು ಗೊತ್ತಿದ್ದರೂ, ಅವರು ಯಾವುದೇ ಸಿದ್ಧತೆ ಮಾಡಿಕೊಳ್ಳಲೇ ಇಲ್ಲ. ಚಾಮರಾಜನಗರದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ಆಮ್ಲಜನಕ ಕೊರತೆಯಿಂದ 24 ಸಾವು ಸಂಭವಿಸಿದಾಗ ಸಚಿವರು ಹೇಳುತ್ತಾರೆ, ‘ಆಮ್ಲಜನಕ ಕೊರತೆಯಿಂದ ಮೂರೇ ಸಾವು ಸಂಭವಿಸಿವೆ’ ಎಂದು!

ಇದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ. ಏಪ್ರಿಲ್ 11ಕ್ಕೆ ಅಪಾಯದ ಬಗ್ಗೆ ಹೇಳುವ ಅವರು, ಈ 28 ದಿನಗಳಲ್ಲಿ ಯಾವ ವ್ಯವಸ್ಥೆ ಮಾಡಿದರು? ಏನೂ ಇಲ್ಲ!

ನವೆಂಬರ್ ಅಂತ್ಯದಲ್ಲೆ 2ನೇ ಅಲೆಯ ಎಚ್ಚರಿಕೆ

ಕೊರೊನಾ ಎರಡನೇ ಅಲೆ ರಾಜ್ಯಕ್ಕೆ ಅಪ್ಪಳಿಸಲಿದೆ ಎಂದು ನವೆಂಬರ್ ಅಂತ್ಯದಲ್ಲೆ ತಜ್ಞರ ಸಮಿತಿ ಹೇಳಿತ್ತು. ಸರ್ಕಾರಕ್ಕೆ ಉಪ ಚುನಾವಣೆ ಮುಖ್ಯವಾಗಿತ್ತು. ಆದರೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಖಾತೆ ಎರಡನ್ನೂ ಹೊಂದಿರುವ, ಸ್ವತಃ ವೈದ್ಯರೂ ಆದ ಡಾ. ಸುಧಾಕರ್ ಈ ಕಡೆ ಗಮನ ಹರಿಸಬಹುದಿತ್ತು. ಇಲ್ಲ, ಅವರು ಸೋಮಾರಿತನ ತೋರಿದರು ಅಥವಾ ಈ ಗೊತ್ತುಗುರಿಯಿಲ್ಲದ ಸರ್ಕಾರದಲ್ಲಿ ಅವರು ಅನಾಥರಾದರು!

ಈ ಅವಧಿಯಲ್ಲೇ ಅವರು ಸದನದಲ್ಲಿ ಸಿಡಿ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿ ಪರ ವಿಶೇಷ ಮಮತೆ ತೋರಿಸುತ್ತ, ‘ಯಾವ್ಯಾವ ವಿಪಕ್ಷ ನಾಯಕರಿಗೆ ಎಷ್ಟೆಷ್ಟು ಪತ್ನಿಯರಿದ್ದಾರೆ ಎಂಬುದೆಲ್ಲ ಗೊತ್ತು’ ಎಂದು ಅಸಹ್ಯವಾಗಿ ಮಾತನಾಡಿದರು. ಆಗ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಳ್ಳುತ್ತಿತ್ತು.

ಕೆಲವೊಮ್ಮೆ ಮಾಧ್ಯಮಗಳ ಮುಂದೆ ಸತ್ಯವನ್ನು ಹೇಳುವ ಸುಧಾಕರ್ ಅವರು ನಿನ್ನೆ ಸುಪ್ರಿಂಕೋರ್ಟ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದ್ದನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಅಂದರೆ, ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಬೇಕು ಎಂದು ಹೈಕೋರ್ಟ್ ಹೇಳಿದ್ದರ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದ ಕೇಂದ್ರ ಸರ್ಕಾರವನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ!

ಅಯೋಗ್ಯ ಸಚಿವ, ನಾನ್‌ಸೆನ್ಸ್ ಸರ್ಕಾರ

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ಆಮ್ ಆದ್ಮಿ ಪಕ್ಷದ ಮುಖ್ಯ ಕಾರ್ಯದರ್ಶಿ ದರ್ಶನ್ ಜೈನ್, ‘ಅವರು ಆರೋಗ್ಯ ಸಚಿವರೇ ಅಲ್ಲಾರಿ, ಅಯೋಗ್ಯ ಸಚಿವರು. ಈ ಸರ್ಕಾರಕ್ಕೆ ಒಂದು ದೃಷ್ಟಿಕೋನವಿಲ್ಲ, ಜನರ ಬಗ್ಗೆ ಕಾಳಜಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ನಮ್ಮ ಪಕ್ಷದ ರಾಜಕೀಯ ಹೇಳಿಕೆ ಅಂದುಕೊಳ್ಳಬೇಡಿ, ಇದು ಈ ರಾಜ್ಯದ ಆಮ್ ಆದ್ಮಿ ಕೇಳುತ್ತಿರುವ ಪ್ರಶ್ನೆ. ನವೆಂಬರ್ 30ಕ್ಕೆ ತಜ್ಞರ ಸಮಿತಿ, ಎರಡನೇ ಅಲೆಯ ಬಗ್ಗೆ ಎಚ್ಚರಿಸಿದ ನಂತರವೂ ಆರೋಗ್ಯ ಸಚಿವರು ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಿಲ್ಲ, ಬೆಂಗಳೂರಿನ ಹೊರವಲಯದಲ್ಲಿ ಸಿದ್ಧವಾಗಿದ್ದ 10,100 ಸಾವಿರ ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಯೇ ಮಾಯವಾಗಿತು. ನಂತರದಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿಕೊಳ್ಳಲಿಲ್ಲ. ಇಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯೇ ಇಲ್ಲ… ಕೋವಿಡ್ ವಿಷಯವನ್ನು ಕೋಮುರೂಪಕ್ಕೆ ತಿರುಗಿಸಲು ಒಬ್ಬ ಚಿಲ್ಲರೆ ಸಂಸದ ಯತ್ನಿಸಿದಾಗ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಅದನ್ನು ಖಂಡಿಸಬೇಕಿತ್ತು’ ಎಂದು ದರ್ಶನ್ ಹೇಳಿದರು.

ದರ್ಶನ್ ಜೈನ್

‘ಸುಪ್ರೀಂಕೋರ್ಟಿನಲ್ಲಿ ರಾಜ್ಯದ ವಿರುದ್ಧವೇ ಒಂದು ಅರ್ಜಿ ಸಲ್ಲಿಕೆಯಾಗುತ್ತದೆ. ಆ ಸಂದರ್ಭದಲ್ಲಿ ಇಲ್ಲಿನ ಒಬ್ಬ ಸಂಸದನೂ, ಆರೋಗ್ಯ ಸಚಿವರೂ ಮತ್ತು ಸಿಎಂ ಕೂಡ ಮಾತೇ ಎತ್ತುವುದಿಲ್ಲ. ಇದೊಂದು ನಾನ್‌ಸೆನ್ಸ್ ಸರ್ಕಾರ. ಗುಲಾಮಗಿರಿಯಲ್ಲಿ ಬದುಕುತ್ತಿರುವ ಈ ಸರ್ಕಾರ ಕನ್ನಡಿಗರನ್ನು ಅಪಾಯಕ್ಕೆ ದೂಡಿದೆ’ ಎಂದು ದರ್ಶನ್ ಜೈನ್ ಕಿಡಿಕಾರಿದರು.

ಹಿರಿಯ ಪತ್ರಕರ್ತರೊಬ್ಬರು ಮಾತನಾಡಿ, ‘ಸುಧಾಕರ್‌ರವರ ಮೇಲೆ ಕೊರೊನಾ ಭ್ರಷ್ಟಾಚಾರದ ಬಹುದೊಡ್ಡ ಆರೋಪವಿದೆ. ಆದರೆ ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅವರು ಬೇಜವಾಬ್ದಾರಿ ತೋರಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ಡಿಸಿಗಳ ಜೊತೆ ಅವರೆಂದೂ ಚರ್ಚೆ ಮಾಡಲಿಲ್ಲ. ಈಗೇನೋ ತುಮಕೂರು-ಚಿತ್ರದುರ್ಗದ ಕಡೆ ಹೊರಟಿದ್ದಾಂರಂತೆ’ ಎಂದು ನಾನುಗೌರಿ.ಕಾಂ ಗೆ ತಿಳಿಸಿದರು.

‘ನವೆಂಬರ್ 30ಕ್ಕೇ ಎರಡನೇ ಅಲೆಯ ಬಗ್ಗೆ ರಾಜ್ಯ ಸರ್ಕಾರವೇ ನೇಮಿಸಿದ ತಜ್ಞರ ಸಮಿತಿ ವರದಿ ನೀಡಿದ ಮೇಲೂ ಈ ಆರೋಗ್ಯ ಸಚಿವರು ಮತ್ತು ಒಟ್ಟೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇನ್ನು ಈ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಮಾಡುವುದೇ ಆಗಿದ್ದರೆ, ಇದನ್ನು 15 ದಿನದ ಹಿಂದೆ ಕರ್ಫ್ಯೂ ಘೋಷಣೆ ಮಾಡಿದಾಗಲೇ ಮಾಡಬೇಕಿತ್ತು. ಅದಕ್ಕೂ ಮೊದಲು ದುಡಿಯುವ ವರ್ಗಗಳಿಗೆ ಅಗತ್ಯ ನೆರವು ನೀಡಬೇಕಿತ್ತು’ ಎಂದು ಅವರು ಹೇಳುತ್ತಾರೆ.

ಸಚಿವ ಸುಧಾಕರ್ ಉತ್ತರ

ಬೆಡ್‌ಗಳ ಸಂಖ್ಯೆ ಹೆಚ್ಚಿಸಲು, ಆಮ್ಲಜಕನ ಕೊರತೆ ನೀಗಿಸಲು ತೆಗೆದುಕೊಂಡಿರುವ ಕ್ರಮಗಳೇನು? ಕೋವಿಡ್ ಮೂರನೇ ಅಲೆಗೆ ಸಿದ್ದತೆ ಹೇಗಿದೆ ಎಂಬ ಪ್ರಶ್ನೆಗಳ ಕುರಿತು ಆರೋಗ್ಯ ಸಚಿವರ ಅಭಿಪ್ರಾಯ ಪಡೆಯಲು ನಾನುಗೌರಿ.ಕಾಂ ಯತ್ನಿಸಿತು. ನಮ್ಮ ಪ್ರಶ್ನೆಗಳಿಗೆ ಸಚಿವರು ಈ ಕೆಳಗಿನಂತೆ ಉತ್ತರಿಸಿದ್ದಾರೆ.

ಸರ್, ನವೆಂಬರ್ ಅಂತ್ಯದಲ್ಲಿಯೇ ತಜ್ಞರ ಸಮಿತಿ 2ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿತ್ತು… ಆರೋಗ್ಯ ಇಲಾಖೆ ಯಾವ ಪೂರ್ವ ಸಿದ್ಧತೆ ಮಾಡಿಕೊಂಡಿತು ಎಂಬ ಪ್ರಶ್ನೆಗೆ “ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಕ್ರಮಗಳನ್ನು ಕೋವಿಡ್ ಮೊದಲನೇ ಅಲೆ ಇದ್ದಾಗಿನಿಂದಲೇ ಕೈಗೊಳ್ಳಲಾಗಿದೆ. ಎರಡನೇ ಅಲೆ ಬರುವ ಮುನ್ಸೂಚನೆ ಕೂಡ ಇದ್ದಿದ್ದರಿಂದ ಅದಕ್ಕೆ ತಕ್ಕಂತೆ ಕ್ರಮಗಳನ್ನೂ ವಹಿಸಲಾಗಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ ಒಟ್ಟು 31,444, ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ 14,617, ಖಾಸಗಿ ಆಸ್ಪತ್ರೆಗಳಲ್ಲಿ 38,600, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 35,766 ಹಾಸಿಗೆಗಳಿವೆ.
ಸರ್ಕಾರಿ ವ್ಯವಸ್ಥೆಯಡಿ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ 2,108 ಇದೆ. ಖಾಸಗಿ ವ್ಯವಸ್ಥೆಯಡಿ, ವೆಂಟಿಲೇಟರ್ ಸಹಿತ ಐಸಿಯು 1,662 ಇದೆ” ಎಂದಿದ್ದಾರೆ.

ಆಮ್ಲಜನಕದ ಕೊರತೆ ಇನ್ನೂ ಏಕೆ ಕಾಡುತ್ತಿದೆ ಎಂಬ ಪ್ರಶ್ನೆಗೆ “ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಕೂಡ ವ್ಯವಸ್ಥೆ ಮಾಡಲಾಗಿದೆ. ತಲಾ 20 ಮೆಟ್ರಿಕ್ ಟನ್‌ನ 4 ಟ್ಯಾಂಕರ್ ಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿದೆ. ಇದರಿಂದ ಆಕ್ಸಿಜನ್ ಸಾಗಣೆಗೆ ನೆರವಾಗಿದೆ” ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯಕ್ಕೆ ಆಕ್ಸಿಜನ್ ಕೊಡಲು ಹೈಕೋರ್ಟ್ ಹೇಳಿದರೆ ಅಲ್ಲಿ ಕೇಂದ್ರ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಿರುದ್ಧವೇ ಅರ್ಜಿ ಸಲ್ಲಿಸಿತ್ತು…. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದಾಗ “ಆಕ್ಸಿಜನ್ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳ ಬೇಡಿಕೆಗೆ ಸ್ಪಂದಿಸಬೇಕಾದ ಒತ್ತಡ ಇರುತ್ತದೆ. ಅಗತ್ಯತೆ ನೋಡಿಕೊಂಡು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಆಕ್ಸಿಜನ್ ಅನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿದೆ. ರಾಜ್ಯದ ಬೇಡಿಕೆಗೂ ಕೇಂದ್ರ ಸರ್ಕಾರ ಶೀಘ್ರವೇ ಸ್ಪಂದಿಸುವ ವಿಶ್ವಾಸವಿದೆ. ಈ ಹಿಂದೆಯೇ ಕೇಂದ್ರ ಸರ್ಕಾರ ಆಕ್ಸಿಜನ್ ಹಂಚಿಕೆಯನ್ನು 802 ಟನ್ ನಿಂದ 865 ಟನ್ ಗೆ ಹೆಚ್ಚಿಸಿದೆ” ಎಂದರು.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋಮು ಸಾಮರಸ್ಯ ಕದಡುವ ಯತ್ನ: ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಲಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...