Homeಮುಖಪುಟಎತ್ತ ಸಾಗಿದೆ ಭಾರತ ಗಣರಾಜ್ಯ?

ಎತ್ತ ಸಾಗಿದೆ ಭಾರತ ಗಣರಾಜ್ಯ?

- Advertisement -
- Advertisement -

1950ರಲ್ಲಿ ಭಾರತ ಗಣರಾಜ್ಯವಾದ ವರ್ಷವೇ ನಾನು ಹುಟ್ಟಿದ್ದು, ನಾನಾಗಲೀ ಅಥವಾ ಗಣರಾಜ್ಯವಾಗಲೀ ಬಯಸಿಬಂದದ್ದೇನಲ್ಲ ಈ ಕಾಕತಾಳೀಯ. ನಾನು ಹುಟ್ಟಿದ್ದು ಸಣ್ಣ ಪಟ್ಟಣದಲ್ಲಿ, ಅದನ್ನು ಪಟ್ಟಣಕ್ಕಿಂತಲೂ ಹಳ್ಳಿಯೆಂದೇ ಕರೆಯಬಹುದು, ಅದು ಇರುವುದು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ. ನನ್ನ ಕಾಲಕ್ಕಿಂತ ಮೂರು ಶತಮಾನಗಳ ಮೊದಲು, ನನ್ನ ಊರನ್ನು ಸುತ್ತುವರಿದ ಹಚ್ಚ ಹಸಿರು ಗುಡ್ಡಗಳು ಮತ್ತು ಒರಟಾದ ಬೆಟ್ಟಗಳು, ಶಿವಾಜಿಯ ’ಸ್ವರಾಜ್ಯ’ದ ಪರಿಕಲ್ಪನೆಯಿಂದ ಪ್ರಭಾವಿತರಾದ ಜನರ ನಡಿಗೆಯ ಮತ್ತು ಕುದುರೆಯ ಗೊರಸುಗಳ ಶಬ್ದಗಳಿಗೆ ಸಾಕ್ಷಿಯಾಗಿದ್ದವು. ನನ್ನ ಹಳ್ಳಿಯ 40 ಮೈಲಿಗಳ ದೂರದಲ್ಲಿಯೇ ಇರುವ ಪುಣೆಯಲ್ಲಿ ನನ್ನ ಹುಟ್ಟಿನ ಎಂಟು ದಶಕಗಳ ಮೊದಲು ಮಹಾತ್ಮ ಜ್ಯೋತಿಬಾ ಫುಲೆಯವರು ಇಡೀ ತಲೆಮಾರಿನ ಮನಸ್ಸಿನಲ್ಲಿ ಸತ್ಯದ ಮತ್ತು ವೈಚಾರಿಕತೆಯ ಬೀಜ ಬಿತ್ತಿದ್ದರು. ಇದೇ ಪುಣೆಯಲ್ಲಿ ’ಕ್ವಿಟ್ ಇಂಡಿಯಾ’ ಚಳವಳಿಗೆ ಕರೆ ಕೊಟ್ಟಿದ್ದಕ್ಕಾಗಿ ಮಹಾತ್ಮಾ ಗಾಂಧಿಯವರನ್ನು ಸೆರೆಮನೆಯಲ್ಲಿ ಬಂಧಿಸಿಡಲಾಗಿತ್ತು ಹಾಗೂ ಅಲ್ಲಿಯೇ ಅವರ ಸಹಬಂದಿ ಕಸ್ತೂರಬಾ ಅವರು ಕೊನೆಯುಸಿರೆಳದಿದ್ದರು. ನನ್ನ ಹುಟ್ಟಿಗೆ ಕೇವಲ 23 ವರ್ಷಗಳ ಮುನ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾಡನಲ್ಲಿ ಚಾವಡಾರ್ ಕೆರೆ ಸತ್ಯಾಗ್ರಹವನ್ನು ಆಯೋಜಿಸಿದ್ದರು, ಅದು ನನ್ನ ಹಳ್ಳಿಯಿಂದ ಸುಮಾರು 25 ಮೈಲಿ ದೂರದಲ್ಲಿ.

ನನ್ನ ಹುಟ್ಟಿನ ಒಂದು ದಶಕದ ಮುಂಚಿನ ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ನನ್ನ ಊರಿನ ಸುತ್ತಲ ಪ್ರದೇಶದ ಹಲವಾರು ಯುವಜನರು ಹುತಾತ್ಮರಾಗಿದ್ದರು. ದೇಶವಿಭಜನೆಯ ದುರಂತ ಸಂಭವಿಸಿದಾಗ ಸಿಂಧ್ ಪ್ರದೇಶದಿಂದ ಅನೇಕರು ನನ್ನ ಊರಿಗೆ ವಲಸೆ ಬಂದರು ಹಾಗೂ ಅವರಿಗೆ ಅಲ್ಲಿ ವಸತಿ ನೀಡಲಾಯಿತು. ಗಾಂಧೀಜಿಯ ಹತ್ಯೆ ಆದಾಗ, ಅನೇಕ ಬ್ರಾಹ್ಮಣ ಸಮುದಾಯದವರು ತಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕದಿಂದಿದ್ದಾಗ ಅವರ ನೆರೆಹೊರೆಯ ದೊಡ್ಡ ಕೂಡುಕುಟುಂಬಗಳು ಅವರಿಗೆ ಸುರಕ್ಷಿತ ಆಶ್ರಯ ನೀಡಿದ್ದವು. ಹಿಂದೂಗಳು, ಮುಸ್ಲಿಮರು ಮತ್ತು ಇತರ ಎಲ್ಲಾ ಜಾತಿಯ ಜನರೂ ಈ ಪುಟ್ಟ ಊರಿನಲ್ಲಿ ಒಂದು ವಿಸ್ತೃತ ಸಮಾಜದಂತೆ ವಾಸಿಸುತ್ತಿದ್ದರು. ಆಗ ವೈಯಕ್ತಿಕ ದ್ವೇಷ ಮತ್ತು ನೆರೆಹೊರೆಯವರೊಂದಿಗೆ ಜಗಳಗಳೂ ಇದ್ದವು ಆದರೆ ಇತರ ಧರ್ಮಗಳೆಡೆಗೆ ಅಗೌರವ ಇರಲಿಲ್ಲ. ಸಿಟ್ಟು ಇರುತ್ತಿತ್ತು ಆದರೆ ದ್ವೇಷ ವಿರಳವಾಗಿ ಕಾಣಿಸುತ್ತಿತ್ತು. ಗಣರಾಜ್ಯ ಸ್ಥಾಪನೆಯಾದಾಗ ಅದರೊಂದಿಗೆ ನನ್ನ ಹುಟ್ಟೂ ಆದಾಗ, ನಮ್ಮ ಗಣರಾಜ್ಯ ಯಾವ ಸ್ಫೂರ್ತಿಯ ಆಧಾರದ ಮೇಲೆ ನಿರ್ಮಿಸಲಾಗಿದೆ ಎಂಬುದನ್ನು ನನ್ನ ಪಟ್ಟಣ ಅರ್ಥಮಾಡಿಕೊಂಡಿತ್ತು. ಅಲ್ಲಿ ಯಾರೂ ಇಂಗ್ಲಿಷ್ ಓದಬಲ್ಲವರು ಇದ್ದಿಲ್ಲವಾಗಿ ಊರಿನ ಜನರ್‍ಯಾರೂ ಸಂವಿಧಾನವನ್ನು ಓದಿರಲಿಲ್ಲ, ಆದರೆ ಅವರು ಡಾ. ಅಂಬೇಡ್ಕರ್ ಅವರನ್ನು ನೋಡಿದ್ದರು ಹಾಗೂ ಅವರ ಮಾತುಗಳನ್ನು ಕೇಳಿದ್ದರು. ಹಾಗಾಗಿ ಅತ್ಯಂತ ಶೀಘ್ರವೇ ನಮ್ಮ ಸಂವಿಧಾನದ ಸ್ಪಿರಿಟ್‌ಅನ್ನು ಅರ್ಥಮಾಡಿಕೊಂಡರು. ಅದಕ್ಕಿಂತ ಮುನ್ನ ನಮ್ಮ ಊರಿಗೆ ರಾಜ ಇದ್ದ, ಅವರನ್ನು ಛೋಟಾ ರಾಜ ಎನ್ನಬಹುದು (ವಸಾಹತುಶಾಹಿಯ ಅಧಿಕೃತ ದಾಖಲೆಯಲ್ಲಿ ಆ ರೀತಿ ನಮೂದಿಸಲಾಗಿತ್ತು). ಬಾಂಬೆ ಪ್ರೆಸಿಡೆನ್ಸಿಯ ಶಾಸನಸಭೆ ಅಸ್ತಿತ್ವಕ್ಕೆ ಬಂದಾಗ ಛೋಟಾ ರಾಜರ ಆಳ್ವಿಕೆ ಕೊನೆಗೊಂಡಿತ್ತು. ಚುನಾವಣೆಗಳ ವ್ಯಾಕರಣವನ್ನು ಜನರು ಅತ್ಯಂತ ಅಲ್ಪಸಮಯದಲ್ಲಿಯೇ ಅರಗಿಸಿಕೊಂಡರು. ಜನಪ್ರತಿನಿಧಿ ಅಂದರೆ ಏನು ಎಂಬುದು ಜನರಿಗೆ ಅರ್ಥವಾಯಿತು. ಈ ನನ್ನ ಊರು ಬಹುಶಃ ಭಾರತದ ಏಳು ಲಕ್ಷ ಗ್ರಾಮಗಳ ಚಿಕ್ಕರೂಪವಾಗಿತ್ತು ಎನ್ನಬಹುದು.

ಹಲವು ದಶಕಗಳ ನಂತರ ನಾನು ಕೆಲಸದ ನಿಮಿತ್ತವಾಗಿ ಗುಜರಾತಿಗೆ ಹೋದೆ. ಅಲ್ಲಿಗೆ ನಾನು ಬಂದಾಗ, ಗಾಂಧಿಯ, ಆಜಾದ್‌ರ, ಪಟೇಲರ ಮತ್ತು ಜವಾಹರಲಾಲ ನೆಹರೂ ಅವರ ಕಂದು ಬಣ್ಣಕ್ಕೆ ತಿರುಗುತ್ತಿರುವ ಚಿತ್ರಗಳು ಜನರ ಸ್ಮೃತಿಪಟಲದಿಂದ ಮಾಸತೊಡಗಿದ್ದವು. ಅಷ್ಟರಲ್ಲಿ ಭ್ರಷ್ಟಾಚಾರ, ವ್ಯಾಪಾರೀಕರಣ, ಕೋಮುವಾದ ಮತ್ತು ಜಾತೀಯತೆಗಳು ಭಾರತೀಯ ಮನಸ್ಸಿನಲ್ಲಿ ಗಟ್ಟಿಯಾಗಿ ಆವರಿಸಿಕೊಂಡಿದ್ದವು. ಹಬ್ಬಗಳ ಮೆರವಣಿಗೆಗಳ ಸುತ್ತ ಕೋಮುದಂಗೆಗಳು ಸಾಮಾನ್ಯವಾಗಿದ್ದವು. ಪೊಲೀಸ್ ಎನ್ಕೌಂಟರ್‌ಗಳು, ಅವು ನಕಲಿಯಾಗಿರಲಿ ಅಥವಾ ನಿಜವಾದವಾಗಿರಲಿ ಜನರಿಗೆ ಆಘಾತ ಹುಟ್ಟಿಸುವುದನ್ನು ನಿಲ್ಲಿಸಿದ್ದವು. ಜನರು ಮುಚ್ಚಿದ ಮತ್ತು ಗೇಟೆಡ್ ಕಾಲನಿಗಳಲ್ಲಿ ವಾಸಿಸಲು ಆದ್ಯತೆ ನೀಡತೊಡಗಿದ್ದರು. ಸುಖದ ಪರಿಭಾಷೆ ಎಂಬಂತೆ, ಅವುಗಳೇ ಆದರ್ಶ ಎಂಬಂತೆ ಆದ ನ್ಯೂಕ್ಲಿಯರ್ ಕುಟುಂಬಗಳು, ಸಾಧ್ಯವಿರುವ ಎಲ್ಲಾ ಪ್ರಾಪಂಚಿಕ ಮತ್ತು ಭೋಗದ ವಸ್ತುಗಳನ್ನು ಹೊಂದುತ್ತಾ, ತಮ್ಮ ಮನಸ್ಸಿನಲ್ಲಿ ವಿವರಿಸಲಾಗದ ದ್ವೇಷವನ್ನು ತುಂಬಿಕೊಂಡಿದ್ದವು. ಜನರಿಗೆ ಸಮಾಜದಲ್ಲಿನ ದೋಷಗಳನ್ನು ನೋಡಿ ಸಿಟ್ಟು ಬರುವುದು ಇಲ್ಲವಾಗಿ, ಅದರ ಬದಲಿಗೆ ಸಣ್ಣ ಸಮುದಾಯಗಳ ಮತ್ತು ಬಡ ವರ್ಗಗಳ ಬಗ್ಗೆ ದ್ವೇಷಿಸುವ ನಿರಂತರ ಮನಸ್ಥಿತಿ ಬೆಳಯುತ್ತಲಿತ್ತು. ಆಗ ಸ್ವಾಭಾವಿಕವಾಗಿಯೇ ಯಾವುದೇ ಗಣನೀಯ ಪ್ರಾಪಂಚಿಕ ವಸ್ತುಸೌಲಭ್ಯಗಳಿಲ್ಲದ, ಅಶಿಕ್ಷಿತ ಜನರ ನನ್ನ ಊರ ಕಡೆಗೆ ನನ್ನ ವಿಚಾರಗಳು ತಿರುಗಿದವು. ಹಾಗೂ ಅದು ಕೇವಲ ನಾಸ್ಟಾಲ್ಜಿಯ ಅಥವಾ ಹಳೆಯದನ್ನು ಮೆಲಕುಹಾಕುವ ನೋಟವಾಗಿರಲಿಲ್ಲ; ಅದು ನಮ್ಮ ಗಣರಾಜ್ಯದ ಜೀವನಚರಿತ್ರೆಯನ್ನು ಬರೆಯುವ ಒಂದು ಪ್ರಯತ್ನವೂ ಆಗಿತ್ತು. ನನಗನಿಸಿದ್ದನ್ನು ಹೀಗೆ ಬರೆದಿದ್ದೇನೆ.

ನಾನು ಚಿಕ್ಕವನಾಗಿದ್ದಾಗ, ಸಮಾಜದ ಎಲ್ಲಾ ವರ್ಗಗಳ ಮಕ್ಕಳು ಉಚಿತ ಶಿಕ್ಷಣ ಪಡೆಯಲು ಸಾಧ್ಯವಿತ್ತು. ಹೌದು, ಆಗ ಎಲ್ಲರಿಗೂ ಸಾಕಾಗುವಷ್ಟು ಶಾಲೆ ಮತ್ತು ಕಾಲೇಜುಗಳಿರಲಿಲ್ಲ ಆದರೆ ಇದ್ದ ಶಿಕ್ಷಣ ಸಂಸ್ಥೆಗಳು ಕೆಳಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಲಭ್ಯವಿದ್ದವು. ಈಗ, 21ನೆಯ ಶತಮಾನದಲ್ಲಿ ಎಲ್ಲರಿಗಾಗಿ ಬೇರೆಬೇರೆ ವಿಧದ ಶಾಲೆಗಳಿವೆ ಹಾಗೂ ಸಾರ್ವಜನಿಕ, ಖಾಸಗಿ ಮತ್ತು ಹೊರದೇಶದ ವಿಶ್ವವಿದ್ಯಾಲಯಗಳಿವೆ ಆದರೂ ಬಹುತೇಕ ಕುಟುಂಬಗಳಿಗೆ ನಿಷೇಧವೆನ್ನುವಷ್ಟು ದುಬಾರಿಯಾಗಿವೆ. ಆಗ ನಮ್ಮ ಹಳ್ಳಿಗಳಲ್ಲಿ ಡಾಕ್ಟರ್‌ಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದರು, ಇದ್ದ ಎಲ್ಲಾ ಡಾಕ್ಟರ್‌ಗಳು ಜನರಲ್ ಪ್ರ್ಯಾಕ್ಟಿಷನರ್‌ಗಳು ಅಂದರೆ ಎಲ್ಲಾ ರೀತಿಯ ರೋಗಿಗಳನ್ನು ನೋಡುವ ಡಾಕ್ಟರ್‌ಗಳಾಗಿದ್ದರು. ಒಂದು ನಿರ್ದಿಷ್ಟ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷತೆ ಪಡೆಯುವುದು ಗೊತ್ತೇ ಇರಲಿಲ್ಲ. 21ನೆಯ ಶತಮಾನದ ನಗರದಲ್ಲಿ ಡಾಕ್ಟರ್‌ಗಳ ಸೂಪರ್ ಸ್ಪೆಷಲೈಸೇಷನ್ ಅಂದರೆ ಅತ್ಯಂತ ನಿರ್ದಿಷ್ಟ ರೋಗಳನ್ನು ಗುಣಪಡಿಸುವಲ್ಲಿ ಪರಿಣಿತಿ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಅವರ ಭೇಟಿ, ಚಿಕಿತ್ಸೆ ಮತ್ತು ಔಷಧಿಗಳು ಹೆಚ್ಚಿನ ಮಧ್ಯಮವರ್ಗದ ಜನರಿಗೆ ಕೈಗೆಟುಕುವುದಿಲ್ಲ, ಅವರು ಆರೋಗ್ಯವಿಮೆ ಮಾಡಿಸಿಕೊಂಡಿದ್ದರೆ ಮಾತ್ರ ಅಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಗಳಿವೆ. ಕಳೆದ ಶತಮಾನದ ನನ್ನ ಹಳ್ಳಿಯಲ್ಲಿ ಹೆಚ್ಚಿನ ಮನೆಗಳು ಮಣ್ಣಿನ ಗೋಡೆಗಳು ಮತ್ತು ಸೋರುವ ಮಾಳಿಗೆ ಹೊಂದಿದ್ದವು. 21ನೆಯ ಶತಮಾನದಲ್ಲಿಯ ಮನೆಗಳು ಗಟ್ಟಿಯಾದ ಉಕ್ಕು ಮತ್ತು ಕಾಂಕ್ರೀಟ್‌ನೊಂದಿಗೆ ತರಹೇವಾರಿ ಟೈಲ್‌ಗಳು ಮತ್ತು ಉಪಕರಣಗಳೊಂದಿಗೆ ಸಜ್ಜುಗೊಂಡಿವೆ. ಆದರೆ, ಅಕ್ಕಪಕ್ಕದವರು ಬಹುತೇಕ ಒಂದೇ ಧರ್ಮಕ್ಕೆ ಸೇರಿದವರು, ಹಾಗೂ ಬಹುತೇಕ ಪ್ರಕರಣಗಳಲ್ಲಿ ಒಂದೇ ಜಾತಿಗೆ ಸೇರಿದವರಾಗಿರುತ್ತಾರೆ. ನನ್ನ ಊರಿನಲ್ಲಿ ಕಸ ಸಂಗ್ರಹ ರ್‍ಯಾಂಡಮ್‌ಆಗಿ ನಡೆಯುತ್ತಿತ್ತು, ಆದರೆ ಸ್ವಚ್ಛಗೊಳಿಸುವ ಉದ್ಯೋಗಿಗಳನ್ನು ಅಲ್ಲಿಯ ಪಾಲಿಕೆಯೇ ನೇಮಿಸಿಕೊಳ್ಳುತ್ತಿತ್ತು. 21ನೆಯ ಶತಮಾನದಲ್ಲಿ ನಗರಪಾಲಿಕೆಯು ತನ್ನ ಈ ಕರ್ತವ್ಯವನ್ನು ಒಂದು ಖಾಸಗಿ ಕಂಪನಿಗೆ ಮಾರಿಕೊಂಡಿದೆ. ಕುಡಿಯುವ ನೀರಿಗೂ ಇದೇ ಗತಿ ಬಂದಿದೆ. ಜನರು ನಗರಪಾಲಿಕೆ ತೆರಿಗೆ ಕಟ್ಟಿದರು ಹಾಗೂ ಅದೇ ಸಮಯದಲ್ಲಿ ಖಾಸಗಿ ಕಂಪನಿಗಳಿಗೂ ಶುಲ್ಕ ಭರಿಸಿದರು. ಭಾರತ ಗಣರಾಜ್ಯವಾದಾಗ ರಸ್ತೆಗಳು, ನದಿಗಳು, ಬೆಟ್ಟಗಳು ಹಾಗೂ ಸಮುದ್ರ ತಟಗಳು ಸರಕಾರಕ್ಕೆ ಸೇರಿದ್ದವು. ಈ ಹೊಸ ವ್ಯವಸ್ಥೆಯಲ್ಲಿ ಇವುಗಳು ಖಾಸಗೀ ಕಂಪನಿಗಳಿಗೆ ಸೇರಿವೆ. ಶಾಲೆ, ಔಷಧಿ, ನೀರು, ವಿದ್ಯುತ್, ರಸ್ತೆ, ಬಯಲು ಪ್ರದೇಶಗಳು ಹಾಗೂ ನಮ್ಮ ದೇಶ ಎಂದು ಕರೆಯುವ ಎಲ್ಲವುಗಳ ಬಗ್ಗೆ ದೂರುಗಳು ಇದ್ದಾಗ, ಅವುಗಳನ್ನು ಯಾಂತ್ರಿಕ ನಿರ್ವಹಣೆಯ ಒಂದು ದೂರವಾಣಿ ಸಂಖ್ಯೆಯ ಮೂಲಕ ರಿಕಾರ್ಡ್ ಮಾಡಬೇಕಾಗುತ್ತದೆ ಹಾಗೂ ಈ ಸಂಭಾಷಣೆ ಸಮಸ್ಯೆಯನ್ನು ಬಗೆಹರಿಸುವುದು ವಿರಳವೇ.

ಆ ನಮ್ಮ ಪುಟ್ಟ ಊರಿನಲ್ಲಿ ಮಕ್ಕಳು ಓದಲಿ, ಓದಿ ಜಗತ್ತಿನ ಬಗ್ಗೆ ತಿಳಿದುಕೊಳ್ಳಲಿ ಎಂದು ಅಲ್ಲಿಯ ರಾಜನು ಒಂದು ಪುಟ್ಟ ಗ್ರಂಥಾಲಯವನ್ನು ಸ್ಥಾಪಿಸಿದ್ದ. 21ನೆಯ ಶತಮಾನದ ಗುಜರಾತಿನ ದೊಡ್ಡ ಶಹರದಲ್ಲಿ ಒಬ್ಬ ರಾಜಕೀಯ ನಾಯಕನ ಅತ್ಯಂತ ದೊಡ್ಡ ಗಾತ್ರದ ಡಿಜಿಟಲ್ ಮತ್ತು ಪ್ಲಾಸ್ಟಿಕಿನ ಫ್ಲೆಕ್ಸ್ ಹೋರ್ಡಿಂಗ್‌ಗಳು ಕಾಣಿಸುತ್ತವೆ ಹಾಗೂ ಅವುಗಳ ಪ್ರಮುಖ ಕೆಲಸ, ಸತ್ಯವನ್ನು ಹೇಳುವುದಕ್ಕಿಂತ ಸತ್ಯವನ್ನು ಮರೆಮಾಚುವುದೇ ಆಗಿದೆ. ಸಮಾಜದ ಆ ಮಾದರಿಯಲ್ಲಿ ಇನ್ನೊಂದು ಧರ್ಮದ ಜನರ ಬಗೆಗಿನ ಪ್ರೀತಿಯನ್ನು ಇನ್ನೊಂದು ದೇಶಕ್ಕಿರುವ ನಿಷ್ಠತೆ ಎಂದು ನೋಡಲಾಗುತ್ತಿದೆ. ಗುಜರಾತಿನ ನನ್ನ ದಿನಗಳಲ್ಲಿ, ನಾನು ಬೇರೆ ರಾಜ್ಯಕ್ಕೆ ಪ್ರಯಾಣ ಮಾಡಿದಾಗ, ಆ ರಾಜ್ಯಗಳ ಜನರು ತಾವು ಗುಜರಾತ್ ಮಾದರಿಯನ್ನು ಎಷ್ಟು ಆರಾಧಿಸುತ್ತಾರೆ ಎಂದು ನನಗೆ ಹೇಳುತ್ತಿದ್ದರು. ಇಲ್ಲ, ಗುಜರಾತಿನಲ್ಲಿ ಎಲ್ಲವೂ ಸರಿಯಿಲ್ಲ, ಅಲ್ಲಿ ಇಂದಿಗೂ ಆದಿವಾಸಿಗಳನ್ನು ತಮ್ಮ ನ್ಯಾಯಯುತ ಹಕ್ಕುಗಳಿಂದ ಮತ್ತು ಸೌಲಭ್ಯಗಳಿಂದ ದೂರವಿಡಲಾಗಿದೆ, ಅಲ್ಲಿಯ ಪರಿಶಿಷ್ಟ ಜಾತಿಯ ಜನರು ಜಾತಿಗ್ರಸ್ತ ಮನಸ್ಥಿತಿಯ ಪರಿಣಾಮಗಳನ್ನು ಇಂದಿಗೂ ಅನುಭವಿಸುತ್ತಿದ್ದಾರೆ ಹಾಗೂ ಮುಸ್ಲಿಮರು ವಾಸಿಯಾಗದ ದ್ವೇಷಕ್ಕೆ ಬಲಿಪಶುಗಳಾಗಿದ್ದಾರೆ ಎಂದು ನಾನು ಹೇಳಿದಾಗ, ಅದನ್ನು ಒಂದು ’ಅಭಿಪ್ರಾಯ’ ಎಂದು ತಳ್ಳಿಹಾಕಲಾಗುತ್ತಿತ್ತು. ನನ್ನ ಮನವಿಗೆ ಸ್ಪಂದಿಸಿದವರು ತುಂಬಾ ಕಡಿಮೆಯೇ. ನಂತರ ಅದೇ ಮಾದರಿಯ ಭಾರತದ ಆಳ್ವಿಕೆ ಬಂತು ಹಾಗೂ ಅದನ್ನು ’ರಾಷ್ಟ್ರ-ನಿರ್ಮಾಣ ಮಾದರಿ’ ಎಂದು ಕರೆದು ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತಿದೆ.

ಸ್ವಾತಂತ್ರದ 75ನೆಯ ವರ್ಷಕ್ಕೆ ಕಾಲಿಡುತ್ತಿರುವ ಇಂದು ನಾವು, ನಿಜಕ್ಕೂ ಯೋಚಿಸಬೇಕಾದದ್ದೇನೆಂದರೆ, ಗಣರಾಜ್ಯದ ಸ್ಪಿರಿಟ್‌ನಿಂದ ನಾವು ಏಕೆ ಮತ್ತು ಹೇಗೆ ಇಷ್ಟು ದೂರ ಬಂದುಬಿಟ್ಟೆವು? ಬಡವರ ಮತ್ತು ಶ್ರೀಮಂತರ ನಡುವಿನ ಕಂದರ ತಗ್ಗಿಸಲು ಸಾಧ್ಯವಾಗದಷ್ಟು ಆಳವೇಕೆ ಆಯಿತು? ಸಾಮಾಜಿಕ ಸಾಮರಸ್ಯ ಎಂಬುದು ಪಾತಾಳಕ್ಕೆ ಕುಸಿದಿದ್ದೇಕೆ? ಇಷ್ಟೊಂದು ಪ್ರಾಪಂಚಿಕ ಸಮೃದ್ಧಿಯ ಹೊರತಾಗಿಯೂ ನಮ್ಮ ಮಧ್ಯಮ ವರ್ಗದವರ ಮನಸ್ಸುಗಳಲ್ಲಿ ಇಷ್ಟೊಂದು ದ್ವೇಷ ತುಂಬಿಕೊಂಡಿದ್ದು ಏಕೆ? ಹಾಗೂ ಭಾರತವನ್ನು ಒಂದು ’ಶ್ರೇಷ್ಠ ದೇಶ’ವನ್ನಾಗಿಸುವ ಕನಸು ದೇಶದ ಜನರ ಮನಸ್ಸು ಮತ್ತು ಹೃದಯಗಳನ್ನು ಸಣ್ಣದಾಗಿಸುತ್ತಿದೆಯೇಕೆ? ನಾವು ಸ್ವಾತಂತ್ರ್ಯವನ್ನು ಮತ್ತು ಭಾರತದ ಗಣರಾಜ್ಯವನ್ನು ಸಂಭ್ರಮಿಸಲು ತಯಾರಾಗುತ್ತಿರುವಾಗ, ಮತ್ತೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ; ನಮ್ಮ ಗಣರಾಜ್ಯ ಮತ್ತು ಸಂವಿಧಾನವನ್ನು ಯಾವ ಸ್ಪಿರಿಟ್ ಮೇಲೆ ಸ್ಥಾಪಿಸಲಾಗಿದೆ ಎಂಬುದರ ಮತ್ತು ಈ ’ರಾಷ್ಟ್ರ ನಿರ್ಮಾಣ ಮಾದರಿ’ಯು ಯಾವ ಸ್ಪಿರಿಟ್‌ಅನ್ನು ಆಧರಿಸಿದೆ ಎಂಬುದರ ನಡುವೆ ಮೂಲಭೂತವಾದ ವೈರುಧ್ಯವಿದೆಯೇ ಎಂಬುದನ್ನು. ನಾನು, ಭಾರತದ ಗಣರಾಜ್ಯ ಹುಟ್ಟಿದ ದಿನವೇ ಹುಟ್ಟಿದವನಾಗಿ ವಿನಮ್ರವಾಗಿ ಹೇಳುವುದೇನೆಂದರೆ, ಕಳೆದ ಏಳು ದಶಕಗಳಲ್ಲಿ ಭಾರತದ ಜನರಿಂದ ಕಲಿತುಕೊಂಡಿದ್ದು, ಒಂದು ದೇಶ ಶ್ರೇಷ್ಠವಾಗುವುದು ಅಲ್ಲಿಯ ಜನರು ಇತರರಿಗೆ ತೋರುವ ವಿಶಾಲ ಹೃದಯದ, ಅನುಭೂತಿ, ಸಹಬಾಳ್ವೆ ಮತ್ತು ಗೌರವದ ಗುಣಗಳನ್ನು ಹೊಂದಿದ್ದಾಗ ಮಾತ್ರ ಸಾಧ್ಯ. ಸ್ವಾತಂತ್ರ, ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಪ್ರತಿಯೊಬ್ಬ ಭಾರತೀಯಳಿ/ನಿಗೆ ಘನತೆ, ಇವೆಲ್ಲವುಗಳಿಗೆ ತಾಯಿಯಾದ ನಮ್ಮ ಸಂವಿಧಾನಕ್ಕೆ ಗೌರವವೇ ಒಬ್ಬ ವ್ಯಕ್ತಿಯ ಭಾರತದ ಪ್ರೇಮಕ್ಕೆ ಒರೆಗಲ್ಲು ಆಗಿದೆ. ನಾವೀಗ ಸ್ವಾತಂತ್ರ ಸಂಗ್ರಾಮವನ್ನು ನೆನಪಿಸಿಕೊಳ್ಳುತ್ತಿರುವಾಗ, ಸಂವಿಧಾನದ ಮಾದರಿ ಮತ್ತು ಅದನ್ನು ಬುಡಮೇಲು ಮಾಡುತ್ತಿರುವ ಮಾದರಿಗಳಲ್ಲಿ ಒಂದನ್ನು ಭಾರತ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಶಿಕ್ಷಣವನ್ನು ವೈದಿಕಗೊಳಿಸುವ ಜಾಗತಿಕ ಹುನ್ನಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಎಲ್ಲರ ಜೊತೆ ಜಗಳ ಆಡಿ ಆಡಿ ಸಾಕಾಯಿತು.೧೫ ಅಗಸ್ಟ್ ೨೦೨೨ ಕ್ಕೆ ನಾವು ಸ್ವಾತಂತ್ರ್ಯದ ೭೫ ವರ್ಷ ಮುಗಿಸಿದೆವು.
    ೭೫ ಶುರುವಾಗಿಲ್ಲ.
    ನಾವು ಆಚರಿಸುತ್ತಿರೋದು ೭೬ ನೆ ಸ್ವಾತಂತ್ರ್ಯೋತ್ಸವ.
    ಮೊದಲನೆಯದನ್ನ ೧೫ ಅಗಸ್ಟ ೧೯೪೭ ರಲ್ಲಿ ಆಚರಿಸಿದೆವು.

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...