Homeಮುಖಪುಟಯಾವ ಭಗವದ್ಗೀತೆ ಅನುಸರಿಸಬೇಕು?

ಯಾವ ಭಗವದ್ಗೀತೆ ಅನುಸರಿಸಬೇಕು?

- Advertisement -
- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ಇಸ್ಕಾನ್ ಸಂಸ್ಥೆ ’ಗೀತಾ ದಾನ ಯಜ್ಞ ಮಹೋತ್ಸವ’ ಆಚರಿಸಿದೆ ಮತ್ತು ಭಗವದ್ಗೀತೆಯ ಒಂದು ಲಕ್ಷ ಪ್ರತಿಗಳನ್ನು ಹಂಚಲು ನಿರ್ಧರಿಸಿದೆ. ಯಜ್ಞದಲ್ಲಿ ಭಾಗವಹಿಸಿದ ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರು ಗೀತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಗೀತೆಯನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯವನ್ನಾಗಿ ಮಾಡಬೇಕೆಂದು ಕರ್ನಾಟಕದ ವಿದ್ಯಾ ಮಂತ್ರಿಗಳು ಹೇಳಿದ್ದಾರೆ. ಹಾಗೆಯೇ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಕಟೀಲರೂ ಹೇಳಿದ್ದಾರೆ. ಸಾಲದ್ದಕ್ಕೆ ಭಗವದ್ಗೀತೆ ಎಲ್ಲರಿಗೂ ಸ್ಫೂರ್ತಿ ಹಾಗೂ ಪ್ರೇರಣಾದಾಯಕ ಎಂದು ಉಡುಪಿ ವಿಶ್ವಪ್ರಸನ್ನತೀರ್ಥರು ಹೇಳಿದ್ದಾರೆ.

ಆದರೆ ಇವರು ಯಾವ ಗೀತೆಯ ಬಗ್ಗೆ ಹೇಳುತ್ತಿದ್ದಾರೆ? ಹಿಂದೂಗಳ ಸರಿಸುಮಾರು ಎಲ್ಲಾ ಧರ್ಮ ಗ್ರಂಥಗಳಲ್ಲಿ ಆಗಿರುವಂತೆ ಗೀತೆಯಲ್ಲಿಯೂ ಕಲಬೆರಕೆಯಾಗಿರುವುದರಿಂದ ಇವರು ಕಲಬೆರಕೆಯಾಗಿರುವ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ ಅಥವಾ ಕಲಬೆರಕೆಯಾಗುವ ಮೊದಲಿನ ಗೀತೆಯ ಬಗ್ಗೆ ಹೇಳುತ್ತಿದ್ದಾರೆಯೋ? ಯಾವ ಶ್ಲೋಕಗಳು ಮೂಲ ಗೀತೆಯಲ್ಲಿದ್ದವು, ಯಾವ ಶ್ಲೋಕಗಳನ್ನು ನಂತರ ಬೆರೆಸಲಾಗಿದೆ ಎಂದು ಇವರಿಗೆ ಹೇಳುವುದಕ್ಕೆ ಸಾಧ್ಯವಿದೆಯೇ? ’ಸ್ಫೂರ್ತಿದಾಯಕವಾದ ಹಾಗೂ ಪ್ರೇರಣಾದಾಯಕವಾದ’ ಶ್ಲೋಕಗಳು ಮೂಲ ಗೀತೆಯಲ್ಲಿದ್ದವೇ ಅಥವಾ ಅವುಗಳನ್ನು ನಂತರ ಕಲಬೆರಕೆ ಮಾಡಲಾಯಿತೇ? ಒಟ್ಟಿನಲ್ಲಿ ಇಂದು ಇಡೀ ಗೀತೆಯೇ ಸಂಶಯಾಸ್ಪದ ಗ್ರಂಥವಾಗಿ ಅದರ ವಿಶ್ವಾಸಾರ್ಹತೆಯೇ ಇಲ್ಲದಂತಾಗಿದೆ.

ಇಂದು ಪ್ರಚಲಿತವಾಗಿರುವ ಗೀತೆಯಲ್ಲಿ 700 ಶ್ಲೋಕಗಳಿವೆ. ಅವುಗಳಲ್ಲಿ 574 ಕೃಷ್ಣ ಹೇಳಿದ್ದು, 84 ಅರ್ಜುನ ಹೇಳಿದ್ದು, 41 ಸಂಜಯ ಹೇಳಿದ್ದು ಹಾಗೂ 1 ಧೃತರಾಷ್ಟ್ರ ಹೇಳಿದ್ದು. ಆದರೆ ಮಹಾಭಾರತದ ಭೀಷ್ಮಪರ್ವದ 43ನೆಯ ಅಧ್ಯಾಯದಲ್ಲಿ ಒಂದು ಶ್ಲೋಕ ಹೀಗೆ ಹೇಳುತ್ತದೆ: ’ಷಟ್‌ಶತಾನಿ ಸಂವಿಶಾನಿ ಶ್ಲೋಕಾನಾಂ ಪ್ರಾಹ ಕೇಶವಃ, ಅರ್ಜುನಃ ಸಪ್ತಪಂಚಾಶತ್ಸಪ್ತಷಷ್ಠಿಂ ತು ಸಂಜಯಃ, ಧೃತರಾಷ್ಟ್ರಃ ಶ್ಲೋಕಮೇಕಂ ಗೀತಾಯಾ ಮಾನಮುಚ್ಯತೆ’. ಅಂದರೆ ಗೀತೆಯಲ್ಲಿ ಕೃಷ್ಣ ಹೇಳಿದ 620, ಅರ್ಜುನ ಹೇಳಿದ 57, ಸಂಜಯ ಹೇಳಿದ 68 ಹಾಗೂ ಧೃತರಾಷ್ಟ್ರ ಹೇಳಿದ 1 ಶ್ಲೋಕಗಳು ಇವೆ ಎಂದು ಮೇಲಿನ ಸಾಲು ಹೇಳುತ್ತದೆ. ಆದರೆ ಈ ಶ್ಲೋಕದ ಪ್ರಕಾರ ಗೀತೆಯಲ್ಲಿರುವ ಶ್ಲೋಕಗಳ ಮೊತ್ತ 746 ಆಗುತ್ತದೆ. ಅಂದರೆ ಇಂದು ಲಭ್ಯವಿರುವ ಗೀತೆಯಲ್ಲಿ ಕೃಷ್ಣ ಹೇಳಿದ ಶ್ಲೋಕಗಳಲ್ಲಿ 46 ಕಡಿಮೆ ಇವೆ, ಸಂಜಯ ಹೇಳಿದ ಶ್ಲೋಕಗಳಲ್ಲಿ 27 ಕಡಿಮೆ ಇವೆ ಹಾಗೂ ಅರ್ಜುನ ಹೇಳಿದ ಶ್ಲೋಕಗಳಲ್ಲಿ 27 ಶ್ಲೋಕಗಳು ಹೆಚ್ಚಿಗಿವೆ ಎಂದಾಯಿತು.

ಮಹಾಭಾರತದ ಈ ಶ್ಲೋಕ ಮಹಾಭಾರತದ ಹಲವು ಆವೃತ್ತಿಗಳಲ್ಲಿ ಲಭ್ಯವಿದ್ದರೂ ಹಲವು ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ. ಉದಾಹರಣೆಗೆ ಈ ಶ್ಲೋಕ ಪುಣೆಯ ಭಂಡಾರಕರ ಓರಿಎಂಟಲ್ ರಿಸರ್ಚ ಇನ್ಸ್ಟಿಟ್ಯೂಟಿನ ಆವೃತ್ತಿಯಲ್ಲಿ ಲಭ್ಯವಿಲ್ಲ ಆದರೆ ಗೋರಖಪುರದ ಗೀತಾ ಪ್ರೆಸ್ ಪ್ರಕಟಿಸಿರುವ ಆವೃತ್ತಿಯಲ್ಲಿ ಲಭ್ಯವಿರುತ್ತದೆ. ಹಾಗಾದರೆ ಮಹಾಭಾರತದ ಈ ಶ್ಲೋಕವನ್ನು ಪ್ರಾಮಾಣಿಕವೆಂದು ನಂಬಿದರೆ ಗೀತೆಯಲ್ಲಿ ಕಲಬೆರಕೆಯಾಗಿದೆ ಎಂಬುವುದನ್ನು ಒಪ್ಪಬೇಕಾಗುತ್ತದೆ. ಆದರೆ ಗೀತೆಯ 700 ಶ್ಲೋಕಗಳನ್ನು ಪ್ರಾಮಾಣಿಕ ಎಂದು ನಂಬಿದರೆ, ಮಹಾಭಾರತದ ಈ ಶ್ಲೋಕವನ್ನು ಕಲಬೆರಕೆಯಾದುದು ಎಂದು ನಂಬಬೇಕಾಗುತ್ತದೆ. ಎರಡೂ ಶ್ಲೋಕಗಳು ಬರುವುದು ಮಹಾಭಾರತದ ಭೀಷ್ಮಪರ್ವದಲ್ಲಿಯೇ ಅಂದ ಮೇಲೆ ಇವೆರಡರಲ್ಲಿ ಯಾವುದನ್ನು ಪ್ರಾಮಾಣಿಕ, ಯಾವುದನ್ನು ಕಲಬೆರಕೆ ಎಂದು ಹೇಳುವುದು? ಯಾವುದನ್ನೋ ಒಪ್ಪುವುದಾದರೆ ಹಾಗೆ ಹೇಳಲು ಆಧಾರಗಳೇನು?

ಇದನ್ನೂ ಓದಿ: ಭಗವದ್ಗೀತೆಯಲ್ಲಿ ಅದ್ಯಾವ ನೈತಿಕ ಶಿಕ್ಷಣವಿದೆ?

ಸಂದರ್ಭ ಹಾಗೂ ಆಂತರಿಕ ವಿರೋಧಾಭಾಸ ಮೊದಲಾದವುಗಳ ಆಧಾರದ ಮೇಲೆ ಇಂತಹ ಕಲಬೆರಕೆಗಳನ್ನು ಗುರುತಿಸುವುದು ಸಾಧ್ಯವಿಲ್ಲ ಯಾಕೆಂದರೆ ಈ ಕಲಬೆರಕೆಗಳನ್ನು ಅತ್ಯಂತ ಚಾತುರ್ಯದಿಂದ ಅಳವಡಿಸಲಾಗಿದೆ ಎನ್ನುತ್ತಾರೆ ಮಹಾಭಾರತದ ಸಂಪಾದನೆಯಲ್ಲಿ ಭಾಗವಹಿಸಿದ ಪ್ರತಾಪ ಚಂದ್ರ ರಾಯ್ ಅವರು.

ತಮಾಷೆ ಎಂದರೆ ಭೀಷ್ಮ ಪರ್ವದಲ್ಲಿ ಸ್ವತಃ ಕೃಷ್ಣನೇ ತಾನು ಉಪದೇಶಿಸಿದ ಗೀತೆಯನ್ನು ಅಶ್ವಮೇಧಿಕ ಪರ್ವದ ಹೊತ್ತಿಗೆ ಅಂದರೆ ಯುದ್ಧದ ನಂತರ ಯುಧಿಷ್ಠಿರ ಅಶ್ವಮೇಧ ಯಜ್ಞವನ್ನು ಮಾಡುವ ಹೊತ್ತಿಗೆ ಮರೆತುಬಿಟ್ಟಿದ್ದ. ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಅರ್ಜುನ ಕೃಷ್ಣನಿಗೆ ಗೀತೆಯನ್ನು ಪುನಃ ಉಪದೇಶಿಸುವಂತೆ ಕೇಳಿದಾಗ ಕೃಷ್ಣ ’ಸ ಹಿ ಧಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ, ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಂ ಅಶೇಷತಃ’ ಎನ್ನುತ್ತಾನೆ. ತಾನು ಅದನ್ನು ಮರೆತುದಾಗಿಯೂ, ಆದುದರಿಂದ ಪುನರುಪದೇಶಿಸಲು ತನಗೆ ಸಾಧ್ಯವಿಲ್ಲ ಎಂದೂ ಹೇಳುತ್ತಾನೆ. ತಾನೇ ಉಪದೇಶಿಸಿದ ಗೀತೆಯನ್ನು ಸ್ವತಃ ಕೃಷ್ಣನೇ ಮರೆತಿದ್ದ ಎಂದ ಮೇಲೆ ಪಾಂಡವರ ಸ್ವರ್ಗಾರೋಹಣ ಆದ ಮೇಲೆ ಮಹಾಭಾರತವನ್ನು ಬರೆದವನಿಗೆ ಅದು ಹೇಗೆ ನೆನಪಿರಲು ಸಾಧ್ಯ? ಹಾಗಾದರೆ ಮೂಲ ಗೀತೆಯ ವಿಶ್ವಾಸಾರ್ಹತೆಯನ್ನು ಸ್ಥಾಪಿಸುವುದು ಹೇಗೆ?

ಹಾಗಾದರೆ ಯಾರು, ಯಾಕೆ ಮತ್ತು ಯಾವ್ಯಾವ ಶ್ಲೋಕಗಳನ್ನು ತೆಗೆದು ಹಾಕಿ ಯಾವ ಹೊಸ ಶ್ಲೋಕಗಳನ್ನು ಸೇರಿಸಿದ್ದಾರೆ ಎಂದು ಕಂಡುಕೊಳ್ಳುವುದು ಹೇಗೆ? ಕೃಷ್ಣ ಹೇಳಿದ ಶ್ಲೋಕಗಳಲ್ಲಿ 100 ಶ್ಲೋಕಗಳನ್ನು ತೆಗೆದು ಹಾಕಿ 54 ಹೊಸ ಶ್ಲೋಕಗಳನ್ನು ಸೇರಿಸಿದ್ದರೂ ಮೊತ್ತ ಅಷ್ಟೇ ಉಳಿಯುವುದರಿಂದ ಈಗ ಕೃಷ್ಣ ಹೇಳಿದ ಎನ್ನಲಾಗುವ 574 ಶ್ಲೋಕಗಳು ಮೂಲ ಗೀತೆಯಲ್ಲಿಯೂ ಇದ್ದವು, ಅವು ಕೃಷ್ಣನೇ ಹೇಳಿದ ಶ್ಲೋಕಗಳು ಎಂದು ಪ್ರಮಾಣೀಕರಿಸುವುದು ಹೇಗೆ?

ಹಿಂದೂ ಧರ್ಮ ಗ್ರಂಥಗಳಲ್ಲಿ ಹಿಗ್ಗಾಮುಗ್ಗಾ ಕಲಬೆರಕೆ ಮಾಡಿರುವುದನ್ನು ಮಹಾಭಾರತವೂ ಒಪ್ಪುತ್ತದೆ, ಮನುವೂ ಒಪ್ಪುತ್ತಾನೆ. ಯಜ್ಞಗಳಲ್ಲಿ ಹೆಂಡ, ಮೀನು, ಮಾಂಸ ಮೊದಲಾದವುಗಳಿಗೆ ಅವಕಾಶವಿಲ್ಲದಿದ್ದರೂ ಧೂರ್ತರು ಅವುಗಳ ಬಗ್ಗೆ ತಮಗಿರುವ ದುರಾಸೆಯಿಂದಾಗಿ ಅವುಗಳನ್ನು ಸೇರಿಸಿದ್ದಾರೆ ಎಂದು ಮಹಾಭಾರತ ಹೇಳುತ್ತದೆ. “ಸುರಾ ಮತ್ಸ್ಯಾ ಮಧು ಮಾಂಸಮಾಸವಂ ಕೃಸರೌದನಮ್, ಧೂತೈಃ ಪ್ರವರ್ತಿತ ಹ್ರೋತನ್ನೈತದ್ ವೇದೇಷು ಕಲ್ಪಿತಮ್, ಮಾನಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೆತತ್ಪ್ರಕಲ್ಪಿತಮ” (ಮಹಾಭಾರತ, ಶಾಂತಿ ಪರ್ವ 264.9-10). ಮನುಸ್ಮೃತಿಯ 9ನೆಯ ಅಧ್ಯಾಯದ 66ನೆಯ ಶ್ಲೋಕ ಹೀಗೆ ಹೇಳುತ್ತದೆ: “ಅಯಂ ದ್ವಿಜೈರ್ಹಿ ವಿದ್ವದ್ಭಿಃ ಪಶುಧರ್ಮೋ ವಿಗರ್ಹಿತಃ, ಮನುಷ್ಯಾಣಾಮಪಿ ಪ್ರೊಕ್ತೋ ವೇನೇ ರಾಜ್ಯಂ ಪ್ರಶಾಸತಿ”, ಅಂದರೆ ವೇಣನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದಾಗ ಇಂತಹ ಮೃಗೀಯ ಆಚರಣೆಗಳನ್ನು ಅಜ್ಞಾನಿ ದ್ವಿಜರಿಂದ ಸೇರಿಸಲಾಯಿತು. ಯಜ್ಞದಂತಹ ಪವಿತ್ರ ಆಚರಣೆಯಲ್ಲಿಯೇ ಕಲಬೆರಕೆ ಮಾಡುವವರು ಇನ್ನು ಗ್ರಂಥಗಳನ್ನು ಬಿಟ್ಟಾರೆಯೇ?

ಇಂತಹ ಕಲಬೆರಕೆಗಳನ್ನು ಯಾರು ಮಾಡಲು ಸಾಧ್ಯ? ಹಾಗೆ ಮಾಡಲು ಮೊದಲನೆಯದಾಗಿ ಅವರಿಗೆ ಸಂಸ್ಕೃತ ಭಾಷೆಯ ಜ್ಞಾನವಿರಬೇಕು. ಎರಡನೆಯದಾಗಿ ಅವರು ಆ ಗ್ರಂಥಗಳ ಸ್ವಾಧೀನವನ್ನು ಪಡೆದಿರಬೇಕು. ಶೂದ್ರರಂತೂ ಮಾಡಿರಲಾರರು ಏಕೆಂದರೆ ಮನು ಸ್ಪಷ್ಟವಾಗಿಯೇ ದ್ವಿಜರನ್ನು ದೂಷಿಸುತ್ತಾನೆ. ಅಂಥವರು ಯಾರು ಎಂಬುದು ಓದುಗರ ಕಲ್ಪನೆಗೇ ಬಿಟ್ಟ ವಿಷಯ. ಆದರೆ ಜನಸಾಮಾನ್ಯರಿಗಿರುವ ಪ್ರಶ್ನೆ ಎಂದರೆ ಯಾವ ಶ್ಲೋಕಗಳನ್ನು ಪ್ರಾಮಾಣಿಕ ಎಂದು ಪರಿಗಣಿಸಿ ಅನುಸರಿಸಬೇಕು, ಆ ಶ್ಲೋಕಗಳು ಅನುಕರಣಯೋಗ್ಯವೇ ಎನ್ನುವುದು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...