Homeಅಂಕಣಗಳುಬಹುಜನ ಭಾರತ; ಪ್ರಾಚೀನ ಕಲಾಕೃತಿಗಳು-ಕೊಳ್ಳೆಯೇಕೆ ನಿಂತಿಲ್ಲ?

ಬಹುಜನ ಭಾರತ; ಪ್ರಾಚೀನ ಕಲಾಕೃತಿಗಳು-ಕೊಳ್ಳೆಯೇಕೆ ನಿಂತಿಲ್ಲ?

- Advertisement -
- Advertisement -

ಸಾವಿರ ವರ್ಷ ಹಳೆಯ ಪ್ರಾಚೀನ ವಿಗ್ರಹಗಳನ್ನು ಇತ್ತೀಚೆಗೆ ಭಾರತಕ್ಕೆ ವಾಪಸು ಮಾಡಿತು ಆಸ್ಟ್ರೇಲಿಯಾ. ಮಾನ್ಯ ಪ್ರಧಾನಮಂತ್ರಿಯವರು ಅವುಗಳನ್ನು ಮುಟ್ಟಿ ತಡವಿ ನೋಡುತ್ತಿದ್ದ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಕವಿದು ಮೂಡಿದವು.

ಹತ್ತಿಪ್ಪತ್ತು, ನೂರಿನ್ನೂರು ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸು ತಂದು ಫೋಟೋ ತೆಗೆಯಿಸಿಕೊಳ್ಳುವುದೇನೋ ಸರಿ. ಆದರೆ ವರ್ಷವೊಂದರಲ್ಲೇ ಸಾವಿರಾರು ಕಲಾಕೃತಿಗಳು, ದೇವರ ವಿಗ್ರಹಗಳು ಕಳವಾಗಿ ಕಳ್ಳದಾರಿಯಲ್ಲಿ ದೇಶದ ಗಡಿ ದಾಟುತ್ತಿವೆ. ದೇಶಭಕ್ತಿಗೆ, ಧರ್ಮಕ್ಕೆ ಹೊಸ ವ್ಯಾಖ್ಯೆ ಬರೆದು, ಅವುಗಳ ಹೆಸರಲ್ಲಿ ಮನುಷ್ಯರನ್ನು ಕೊಲ್ಲುತ್ತಿರುವವರ ಸರ್ಕಾರವು ದೇಶದ ಗಡಿಗಳನ್ನೇಕೆ ಸುಭದ್ರಗೊಳಿಸಿಲ್ಲ. ಸುಭದ್ರಗೊಳಿಸಿದ್ದೇ ಆಗಿದ್ದಲ್ಲಿ ದೇಶದ ಸಾಂಸ್ಕೃತಿಕ ಸಂಪತ್ತು ಗಡಿ ದಾಟುವುದಾದರೂ ಹೇಗೆ ಸಾಧ್ಯವಿತ್ತು?

ವರ್ಷವರ್ಷವೂ ಲೂಟಿಯಾಗುತ್ತಿರುವ ಈ ಸಾವಿರಾರು ಪ್ರಾಚ್ಯ ವಿಗ್ರಹಗಳು- ಕಲಾಕೃತಿಗಳ ಜೊತೆಯಲ್ಲಿ ಫೋಟೋ ತೆಗೆಯಿಸಿಕೊಳ್ಳುವ ನೇರವಂತಿಕೆಯನ್ನೂ ಆಳುವವರು ತೋರಬೇಕಲ್ಲವೇ?

ಭಾರತವನ್ನು ಆಳಿದ ಬ್ರಿಟಿಷರು ಪುರಾತನ ಸಾಂಸ್ಕೃತಿಕ ಸಂಪತ್ತನ್ನೂ ಭಾರೀ ಪ್ರಮಾಣದಲ್ಲಿ ಲೂಟಿ ಹೊಡೆದರು.

ಭಾರತದ ಸಾಂಸ್ಕೃತಿಕ ಸಂಪತ್ತನ್ನು ಹೊರದೇಶಗಳಿಗೆ ಸತತ ಕಳ್ಳಸಾಗಣೆ ಮಾಡಲಾಗುತ್ತಿರುವುದು ಈಗಲೂ ನಿಂತಿಲ್ಲ. ಅಮೆರಿಕ ನಡೆಸಿರುವ ತನಿಖೆಯ ಪ್ರಕಾರ ಕಳ್ಳದಾರಿಯಲ್ಲಿ ಭಾರತದಿಂದ ಅಮೆರಿಕೆಯನ್ನು ತಲುಪಿರುವ ಭಾರತೀಯ ಪ್ರಾಚೀನ ವಿಗ್ರಹಗಳ ಸಂಖ್ಯೆ ಹತ್ತಾರು ಸಾವಿರ!

ಕೊಹಿನೂರ್ ವಜ್ರ

ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್.ಸಿ.ಆರ್.ಬಿ) ಅಂಕಿಅಂಶಗಳ ಪ್ರಕಾರ 2014-2021ರ ನಡುವೆ ಆಮೆರಿಕ, ಕೆನಡಾ, ಆಸ್ಟ್ರೇಲಿಯ, ಸಿಂಗಪುರ, ಜರ್ಮನಿ, ಇಂಗ್ಲೆಂಡ್‌ನಿಂದ ಹಿಂತಿರುಗಿಸಲಾದ ಒಟ್ಟು ಪ್ರಾಚೀನ ವಿಗ್ರಹಗಳು ಕೇವಲ 200. ದೇಶದಿಂದ ಹೊರಕ್ಕೆ ಕಳ್ಳಸಾಗಣೆ ಮಾಡಲಾಗಿರುವ ವಿಗ್ರಹಗಳು ಮತ್ತು ಕಲಾಕೃತಿಗಳ ಪೈಕಿ ಬಹಳಷ್ಟು ಈವರೆಗೂ ಪತ್ತೆಯಾಗಿಲ್ಲ. 2018-19ರ ಸಾಲಿನಲ್ಲಿ ಕೇವಲ ತಮಿಳುನಾಡೊಂದರಿಂದಲೇ 1,200 ಪ್ರಾಚೀನ ಮೂರ್ತಿಗಳನ್ನು ಕದಿಯಲಾಯಿತು ಎನ್ನುತ್ತವೆ ಸರ್ಕಾರಿ ಮೂಲಗಳು. ಇದೇ ಅವಧಿಯಲ್ಲಿ ದೇಶದೆಲ್ಲೆಡೆಯ 3,676 ಸಂರಕ್ಷಿತ ಸ್ಮಾರಕಗಳಿಂದ ಕದಿಯಲಾದ ಕಲಾಕೃತಿಗಳು 4,408. ಈ ಪೈಕಿ ಕೇವಲ 1,493 ಕಲಾಕೃತಿಗಳನ್ನು ಮಾತ್ರ ಪೊಲೀಸರು ಪತ್ತೆ ಮಾಡಿದರು. ಉಳಿದವುಗಳು ಜಗತ್ತಿನ ನಾನಾ ಭಾಗಗಳ ಹರಾಜು ಸದನಗಳನ್ನು ತಲುಪಿವೆ.

ಎಸ್. ವಿಜಯಕುಮಾರ್ ನೌಕಾ ಉದ್ಯಮಿ, ಭಾರತೀಯ ಕಲಾ ಆರಾಧಕ. ಭಾರತೀಯ ಕಲಾ ಸಂಪತ್ತಿನ ಕೊಳ್ಳೆಯನ್ನು ತಡೆಯಲು ಭಾರತ ಮತ್ತು ಅಮೆರಿಕೆಯ ಸರ್ಕಾರಗಳೊಂದಿಗೆ ಕೈಜೋಡಿಸಿದಾತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ಪ್ರಸಿದ್ಧ ವಸ್ತುಸಂಗ್ರಹಾಲಯಗಳು, ಹರಾಜು ಸದನಗಳು, ಕಲಾ ಸಂಗ್ರಹಕಾರರೊಂದಿಗೆ ಶಾಮೀಲಾಗಿರುವ ಜಗತ್ತಿನ ಸಂಘಟಿತ ಪಾತಕ ಜಾಲ ಈ ಹಗಲುದರೋಡೆಯ ಹಿಂದಿದೆ. ಈ ಪಾತಕಿಗಳ ಜಾಲವನ್ನು ಹರಿದೊಗೆಯುವ ಪ್ರಯತ್ನದ ಹಿಂದೆ ವಿಜಯಕುಮಾರ್ ಅವರ ಶ್ರಮವಿದೆ. ಭಾರತದ ದೇವಾಲಯಗಳ ಕೊಳ್ಳೆಯ ಅಸಲು ಕತೆಯೇನು ಎಂಬ ಕುರಿತ Idol Thief ಎಂಬ ಪುಸ್ತಕದ ಲೇಖಕ.

ಜಾಗತಿಕ ಕಲೆ ಮತ್ತು ಪ್ರಾಚ್ಯ ಕಲಾಕೃತಿಗಳ ಮಾರುಕಟ್ಟೆಯ ಖರೀದಿದಾರರು ಭಾರತವನ್ನು ಪ್ರಾಚ್ಯಕಲಾಕೃತಿಗಳ ಗಣಿ ಎಂದು ಬಗೆಯುತ್ತಾರೆ. ಗಣಿಗಾರಿಕೆ ಮಾಡುವುದು ಅವರ ಉದ್ದೇಶ ಎನ್ನುತ್ತಾರೆ ವಿಜಯಕುಮಾರ್.

ಭಾರತದಿಂದ ಪ್ರತಿವರ್ಷ ಸಾವಿರ ಪುರಾತನ ಕಲಾಕೃತಿಗಳನ್ನು ದೇವಸ್ಥಾನಗಳಿಂದ ಕದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲಾಗುತ್ತಿದೆ. ಈ ಪೈಕಿ ವರದಿಯಾಗುತ್ತಿರುವ ಕಳವುಗಳ ಪ್ರಮಾಣ ಕೇವಲ ಶೇ.5.

ಭಾರತದ ವಸ್ತುಸಂಗ್ರಹಾಲಯಗಳು ಮತ್ತು ದೇವಾಲಯಗಳಿಂದ ಕದಿಯಲಾಗುವ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ನಾನಾ ದೇಶಗಳಿಗೆ ಸಾಗಿಸಲಾಗುತ್ತದೆ. ಜಾಗತಿಕ ಖ್ಯಾತಿಯ ಹರಾಜು ಸದನಗಳು ನಡೆಸುವ ಹರಾಜಿಗೆ ಕಳಿಸಿಕೊಡಲಾಗುತ್ತದೆ. ಹೀಗೆ ಕದ್ದ ಕಲಾಕೃತಿಗಳ ದಾಖಲೆ ದಸ್ತಾವೇಜುಗಳಿರುವುದಿಲ್ಲ, ಹೀಗಾಗಿ ಅವುಗಳ ವಿವರಗಳು ಕಳೆದುಹೋದಂತೆಯೇ ಸರಿ ಎನ್ನುತ್ತಾರೆ ವಿಜಯಕುಮಾರ್.

ಎಸ್. ವಿಜಯಕುಮಾರ್

ವಿಶ್ವದ ಅತಿದೊಡ್ಡ ಕಲೆ ಮತ್ತು ಪ್ರಾಚ್ಯ ಕಲಾಕೃತಿಗಳ ಮಾರುಕಟ್ಟೆ ಅಮೆರಿಕ (ಶೇ.29.5). ಬ್ರಿಟನ್ನಿನದು ಎರಡನೆಯ ಸ್ಥಾನ (ಶೇ.28.5). ಮೂರನೆಯ ದೊಡ್ಡ ಮಾರುಕಟ್ಟೆ ಚೀನಾ ದೇಶ (ಶೇ.18). ಪ್ರಾಚ್ಯ ಕಲಾಕೃತಿಗಳ ಕಾಳಸಂತೆ ಸಕ್ರಿಯವಾಗಿದೆಯೆಂದು ಶೇ.99ರಷ್ಟು ಪ್ರಾಚ್ಯವಸ್ತು ತಜ್ಞರು ಹೇಳುತ್ತಾರೆ. ಕಪ್ಪುಹಣವನ್ನು ಬಿಳಿಯ ನಗದನ್ನಾಗಿ ಬದಲಾಯಿಸಲು ಈ ಮಾರುಕಟ್ಟೆಯನ್ನು ಬಳಸಲಾಗುತ್ತಿದೆ. ಇದೇ ಮಾರುಕಟ್ಟೆಯಿಂದ ಭಯೋತ್ಪಾದನೆಗೆ ಹಣ ಪೂರೈಕೆ ಮಾಡಲಾಗುತ್ತದೆ. ನಿರ್ದಿಷ್ಟ ಪ್ರಾಚ್ಯ ಕಲಾಕೃತಿಯೊಂದನ್ನು ಮಾರಿದರೆ ಎಷ್ಟು ಬಂದೂಕುಗಳಿಗೆ ಹಣ ಹೊಂದಿಸಿಕೊಳ್ಳಬಹುದೆಂಬ ಲೆಕ್ಕಾಚಾರ ನಡೆಯುತ್ತದೆ. ಹೀಗಾಗಿ ಅಮೆರಿಕ ಈ ಮಾರುಕಟ್ಟೆಯ ಮೇಲೆ ದಾಳಿ ನಡೆಸತೊಡಗಿದೆ. ಭಾರೀ ಶ್ರೀಮಂತರು ಸ್ವಿಸ್ ಬ್ಯಾಂಕುಗಳಲ್ಲಿ ಹಣವನ್ನಿಡುವ ಬದಲು ಪ್ರಾಚ್ಯ ಕಲಾಕೃತಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ವ್ಯವಸ್ಥಿತ ಸಮೀಕ್ಷೆ ನಡೆಸಿ ವಿಗ್ರಹಕಳ್ಳರ ಮೂಲಕ ವಿಗ್ರಹಗಳ ಕಳವು ಮಾಡಿಸಿದ ಆಪಾದನೆಗಳನ್ನು ವಿಶ್ವದ ಪ್ರಸಿದ್ಧ ಹರಾಜು ಮಾರುಕಟ್ಟೆ ಸೋತೆಬೀಸ್ ಮೇಲಿದೆ. ಕದ್ದ ಮೂರ್ತಿಗಳನ್ನು ಸಾಗಿಸಿ ಅವುಗಳ ಜಾಗದಲ್ಲಿ ನಕಲಿ ಮೂರ್ತಿಗಳನ್ನು ಇಟ್ಟಿರುವ ಪ್ರಕರಣಗಳೂ ಹೇರಳ.

ತಮಿಳುನಾಡಿನ ಪ್ರಸಿದ್ಧ ಕಂಚಿನ ನಟರಾಜ ವಿಗ್ರಹವನ್ನು (56 ಲಕ್ಷ ಡಾಲರುಗಳ ಮಾರುಕಟ್ಟೆ ಮೌಲ್ಯ) ವಿಲಾಸೀಸೌಧದ ಅಂಗಳದ ಉದ್ಯಾನದ ಪೀಠೋಪಕರಣವೆಂಬ ಹೆಸರಿನಲ್ಲಿ ಕಳ್ಳಸಾಗಣೆದಾರರು ಅಮೆರಿಕೆಯೊಳಕ್ಕೆ ಸಾಗಿಸಿದ್ದರು. ಭಾರತೀಯ ದೇವಾನುದೇವತೆಗಳು ವಿದೇಶಗಳಲ್ಲಿನ ಈಜುಕೊಳಗಳ ದಂಡೆಯನ್ನು ಅಲಂಕರಿಸುತ್ತಿವೆ.

1979-1989ರ ನಡುವಿನ ಹತ್ತು ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನು ಭಾರತದಿಂದ ಹೊರಕ್ಕೆ ಕದ್ದು ಸಾಗಿಸಲಾಯಿತೆಂದು ಯುನೆಸ್ಕೋ ಅಂದಾಜು ಮಾಡಿದೆ.

ಕೊಹಿನೂರ್ ವಜ್ರ, ಕ್ರಿಸ್ತಪೂರ್ವ ಮೂರನೆಯ ಶತಮಾನದ ಅಮರಾವತಿ ಸ್ತೂಪ, ಟಿಪ್ಪು ಸುಲ್ತಾನನ ಮರದ ಹುಲಿಯಂತಹ ಅಮೂಲ್ಯ ಸಂಪತ್ತನ್ನು ವಾಪಸು ತೆಗೆದುಕೊಳ್ಳುವಲ್ಲಿ ಭಾರತ ಸಫಲವಾಗಿಲ್ಲ. ಆಗುವ ಸೂಚನೆಗಳೂ ಇಲ್ಲ. ಕರ್ನಲ್ ಮೆಕೆಂಜಿ ಎಂಬಾತನು ಸಂಗ್ರಹಿಸಿದ 6,218 ಪುರಾತನ ನಾಣ್ಯಗಳು, 106 ಚಿತ್ರಗಳು, 40 ಪ್ರಾಚೀನ ಕಲಾಕೃತಿಗಳು, 1,568 ಹಸ್ತಪ್ರತಿಗಳು, ದೇವಾಲಯಗಳ ತಾಮ್ರಪತ್ರಗಳು 1828ರಲ್ಲಿ ಆತನ ಮರಣದ ನಂತರ ಲಂಡನ್ ತಲುಪಿದವು.

ಕೊಹಿನೂರ್ ಜೊತೆಗೆ ಶಹಜಹಾನ್ ಚಕ್ರವರ್ತಿ ಬಳಸುತ್ತಿದ್ದ ಅಮೂಲ್ಯ ಮಧುಬಟ್ಟಲು ಈಗಲೂ ವಿಕ್ಟೋರಿಯಾ-ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿದೆ. ಏಳನೆಯ ಶತಮಾನದ ಸುಲ್ತಾನ್ ಗಂಜ್ ಬುದ್ಧನ ಸುಂದರ ಮೂರ್ತಿ ಬರ್ಮಿಂಗ್‌ಹ್ಯಾಮ್ ವಸ್ತುಸಂಗ್ರಹಾಲಯದಲ್ಲಿದೆ. 1849ರ ಆಂಗ್ಲ-ಸಿಖ್ ಯುದ್ಧ ಗೆದ್ದ ಬ್ರಿಟಿಷರು ಕೊಹಿನೂರ್ ವಜ್ರವನ್ನು ವಶಪಡಿಸಿಕೊಂಡರು. ಕೊಹಿನೂರ್ ವಜ್ರವನ್ನು ಈಗಲೂ ಲಂಡನ್ ಟವರ್‌ನಲ್ಲಿ ಇರಿಸಲಾಗಿದ್ದು ಭಾರೀ ಆಕರ್ಷಣೆಯ ಕೇಂದ್ರವಾಗಿದೆ. ಬೆಲೆಬಾಳುವ ಬಂಗಾರದ ಹಾಳೆಗಳನ್ನು ಹೊದಿಸಿರುವ ಮಹಾರಾಜಾ ರಣಜಿತ್ ಸಿಂಗ್ ಕುಳಿತುಕೊಳ್ಳುತ್ತಿದ್ದ ಸಿಂಹಾಸನವನ್ನೂ ಬ್ರಿಟಿಷರು ಆಂಗ್ಲ-ಸಿಖ್ ಯುದ್ಧದ ನಂತರ ತಮ್ಮ ವಶಕ್ಕೆ ಪಡೆದರು. ಟಿಪ್ಪು ಸುಲ್ತಾನನಿಂದ ವಶಪಡಿಸಿಕೊಂಡ 18ನೆಯ ಶತಮಾನದ ಯಾಂತ್ರೀಕೃತ ಗೊಂಬೆ ಟಿಪ್ಪೂವಿನ ಹುಲಿ (Tipu’s Tiger) ಲಂಡನ್‌ನ ಆಲ್ಪರ್ಟ್ ಮ್ಯೂಸಿಯಂನಲ್ಲಿದೆ.

ಬ್ರಿಟಿಷರು ಕಾನೂನಿನ ಪ್ರಕಾರ ಹೊಡೆದ ಈ ಕೊಳ್ಳೆಯು ಅವರು ಭಾರತವನ್ನು ತೊರೆದ ನಂತರ ಕಾನೂನುಬಾಹಿರ ಲೂಟಿ ಎನಿಸಿಕೊಂಡಿತು. ಆದರೆ ಅದು ಅವ್ಯಾಹತವಾಗಿ ಮುಂದುವರೆಯಿತು. ಬ್ರಿಟಿಷರು ಖಾಲಿ ಮಾಡಿದ ಜಾಗವನ್ನು ಭಾರತೀಯ ಕಳ್ಳಸಾಗಣೆದಾರರು ತುಂಬಿದ್ದಾರೆ ಅಷ್ಟೇ. ಸುಭಾಷ್ ಕಪೂರ್, ದೀನದಯಾಳನ್, ವಿಜಯ್ ನಂದಾ ಹೆಸರುಗಳು ದಶಕಗಳಿಂದ ತನಿಖೆಗೆ ಒಳಪಟ್ಟಿವೆ.

1965-1970ರ ನಡುವೆ ಖಜುರಾಹೋನಿಂದ 100 ಕಾಮೋತ್ತೇಜಕ ಪ್ರತಿಮೆಗಳನ್ನು ಕದ್ದು ವಿದೇಶಕ್ಕೆ ಸಾಗಿಸಲಾಯಿತು. ಜೈಪುರ ಅರಮನೆಯ ವಸ್ತುಸಂಗ್ರಹಾಲಯದಿಂದ 2,492 ಚಿತ್ರಕಲಾಕೃತಿಗಳು ಕಾಣೆಯಾದವು. 1964ರಲ್ಲಿ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ 125 ಪ್ರಾಚೀನ ಆಭರಣಗಳು ಮತ್ತು 32 ಅಪರೂಪದ ಚಿನ್ನದ ನಾಣ್ಯಗಳು ಕಳವಾದವು.

ಕೊಹಿನೂರ್ ವಜ್ರ ಮತ್ತು ಅಮರಾವತಿ ಸ್ತೂಪದಂತಹ ಅಪಾರ ಬೆಲೆಬಾಳುವ ಪ್ರಾಚ್ಯವಸ್ತುಗಳನ್ನು ಹಿಂದಿರುಗಿಸಬೇಕೆಂಬ ಬೇಡಿಕೆಯನ್ನು ಬ್ರಿಟನ್ ತಿರಸ್ಕರಿಸಿದೆ. 2013ರಲ್ಲಿ ಬ್ರಿಟನ್ನಿನ ಅಂದಿನ ಪ್ರಧಾನಿ ಡೇವಿಡ್ ಕೆಮರೂನ್ ಭಾರತಕ್ಕೆ ಭೇಟಿ ನೀಡಿದ್ದರು. ಕೊಹಿನೂರ್ ವಜ್ರವನ್ನು ವಾಪಸು ಮಾಡಬೇಕೆಂಬ ಬೇಡಿಕೆಯನ್ನು ಅವರು ನಿಚ್ಚಳವಾಗಿ ತಳ್ಳಿಹಾಕಿದ್ದರು. ಹಾಗೆ ವಾಪಸು ಮಾಡಲು ಹೊರಟರೆ ಬ್ರಿಟಿಷ್ ವಸ್ತುಸಂಗ್ರಹಾಲಯಗಳು ಬರಿದಾಗಿ ಭಣಗುಡುತ್ತವೆ ಎಂದು ಉದ್ಗರಿಸಿದ್ದರು.

ದೇಶದ ಐತಿಹಾಸಿಕ ಸಂಪತ್ತಿನ ಕಳವನ್ನು ತಡೆಯಲು ಬಲಿಷ್ಠ ಕಾಯಿದೆಗಳಿಲ್ಲ ಎನ್ನಲಾಗಿದೆ. 1972ರ ಪ್ರಾಚೀನ ವಸ್ತುಗಳು ಮತ್ತು ಕಲಾಭಂಡಾರಗಳ ಕಾಯಿದೆಯು ನೂರು ವರ್ಷಗಳಷ್ಟು ಹಳೆಯದು. ಈ ಕಾಯಿದೆಯ ಉಲ್ಲಂಘನೆಗೆ ನೀಡಲಾಗುವ ಗರಿಷ್ಠ ಶಿಕ್ಷೆ ಆರು ವರ್ಷಗಳವರೆಗಿನ ಜೈಲುವಾಸ ಮತ್ತು ಮೂರು ಸಾವಿರ ರುಪಾಯಿಗಳ ದಂಡ.

ಆದರೆ ಪ್ರಾಚೀನ ವಿಗ್ರಹಗಳು ಮತ್ತು ಕಲಾಕೃತಿಗಳ ಕಳ್ಳಸಾಗಣೆದಾರರು ಅಪಾರ ಪ್ರಮಾಣದ ಹಣವನ್ನು ಗಳಿಸುತ್ತಿದ್ದಾರೆ. ಈ ಮೊತ್ತವನ್ನು ಆರು ಶತಕೋಟಿ ಡಾಲರುಗಳೆಂದು ಅಂದಾಜು ಮಾಡಲಾಗಿದೆ. ಶತಕೋಟಿ ಡಾಲರುಗಳು 10 ಸಾವಿರ ಲಕ್ಷ ರುಪಾಯಿಗಳಿಗೆ ಸಮ.

ಈ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಬೇಕಿದ್ದರೆ ಎಲ್ಲ ಪ್ರಾಚೀನ ಕಲಾಕೃತಿಗಳ ಒಂದು ರಾಷ್ಟ್ರೀಯ ಯಾದಿಯನ್ನು ತಯಾರು ಮಾಡಬೇಕಿದೆ. ಇವುಗಳ ಕಳ್ಳಸಾಗಣೆಯನ್ನು ತಡೆಯಲು ವಿಶೇಷ ಕಾರ್ಯದಳವನ್ನು ರಚಿಸಬೇಕಿದೆ ಎಂಬುದು ತಜ್ಞರ ಅಭಿಮತ.

ನಮ್ಮ ಸಂಸ್ಕೃತಿ ಮತ್ತು ಪರಂಪರೆ ಕುರಿತು ಬರಿದೇ ಭಾರೀ ಸದ್ದು ಮಾಡುವ ನಾವು ಅದರಿ ಸಂರಕ್ಷಣೆಗೆ ಏನನ್ನೂ ಮಾಡುತ್ತಿಲ್ಲ, ಅದೊಂದು ಆದ್ಯತೆಯ ವಿಷಯವೇ ಆಗಿಲ್ಲ ಎನ್ನುತ್ತಾರೆ INTACH ಸಂಸ್ಥೆಯ ನಿರ್ದೇಶಕ ವಿಜಯ ಅಮುಜುರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...