Homeಅಂಕಣಗಳುಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ...?

ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

- Advertisement -
- Advertisement -

ಒಬ್ಬ ತಂದೆಯ ಫೋನಿನಲ್ಲಿ ತನ್ನ ಮುವ್ವತ್ಮೂರು ವಯಸ್ಸಿನ ಮಗಳ ಮುಖವನ್ನು ಮಾರ್ಫ್ ಮಾಡಲಾಗಿರುವ ಒಂದು ಬ್ಲೂಫಿಲಂ ಬಂದು ಬೀಳುತ್ತದೆ; ಅವರು ಆ ನೀಲಿ ಚಿತ್ರವನ್ನು ಕೆಲಕ್ಷಣ ನೋಡಿ ನಿಲ್ಲಿಸುತ್ತಾರೆ. ತನ್ನ ಮಗಳಿಗೆ ಜೀವ ಬೆದರಿಕೆಯಿದೆಯೆನ್ನುವುದು ಅವರಿಗೆ ಈಗಾಗಲೇ ಗೊತ್ತಿತ್ತು. ತನ್ನ ಹೆಮ್ಮೆಯ ಎದೆಗಾರಿಕೆಯುಳ್ಳ ಮಗಳೊಂದಿಗೆ ಫೋನ್ ಕನೆಕ್ಟ್ ಆದಾಗ ಕೆಲಕ್ಷಣ ಮಗಳಿಗೆ ಮಾತೇ ಹೊರಡುವುದಿಲ್ಲ. ಕೊನೆಗೂ ಮಾತನಾಡಿದ ನಂತರ ಅವನು ತನ್ನ ಮಗಳಿಗೆ ಹೇಳುವುದು, it was a matter of time that this happened”. ಅಷ್ಟಾದರೂ ಆ ಮಗಳು ಮಾಡಿರುವ ಅಪರಾಧವಾದರೂ ಏನು?

ಮತ್ತೊಂದು ಯಶಸ್ವೀ ಸುಖೀ ಕುಟುಂಬವಿದೆ. ಆಕೆ ಕಾಲೇಜೊಂದರಲ್ಲಿ ಇತಿಹಾಸ ವಿಭಾಗದ ಎಚ್.ಓ.ಡಿ. ಆಗಿದ್ದಾಳೆ, ಇಬ್ಬರು ಹೆಣ್ಣುಮಕ್ಕಳು ಶಾಲೆಯಲ್ಲಿ ಓದುತ್ತಿವೆ, ಗಂಡನೂ ತನ್ನ ಕೆಲಸದಲ್ಲಿ ತುಂಬಾ ಯಶಸ್ವಿ ಮತ್ತು ಸಾಕಷ್ಟು ಹೆಸರು ಗಳಿಸಿದ್ದಾನೆ. ತನ್ನ ಗಂಡನ ಬಗ್ಗೆ ತುಂಬಾ ಹೆಮ್ಮೆಯಿದೆ ಅವಳಿಗೆ. ಆದರೆ ಕೆಲವರ್ಷಗಳಿಂದ ಗಂಡನಿಗೆ ಜೀವದ ಬೆದರಿಕೆಗಳು ಶುರುವಾಗಿವೆ. ಅವನಿಗಷ್ಟೇ ಅಲ್ಲ, ತನಗೂ ತನ್ನ ಮಕ್ಕಳಿಗೂ ಕೊಲೆ ಬೆದರಿಕೆ, ಅತ್ಯಾಚಾರದ ಬೆದರಿಕೆಗಳೂ ಪದೇಪದೇ ಬರುತ್ತಲೇ ಇವೆ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಅಷ್ಟಾದರೂ ಆತ ಮಾಡಿದ ಅಪರಾಧವಾದರೂ ಏನು?

ಉತ್ತರ- ಏನೂ ಇಲ್ಲ. ಅವರಿಬ್ಬರೂ ಯಾವ ಅಪರಾಧವನ್ನೂ ಮಾಡಿಲ್ಲ. ತಮ್ಮ ಕರ್ತವ್ಯಕ್ಕೆ ನಿಷ್ಠರಾಗಿ ದುಡಿಯುತ್ತಿರುವುದಕ್ಕಾಗಿ ಈ ಶಿಕ್ಷೆ.

ಅವಳ ಹೆಸರು ರಾಣಾ ಅಯುಬ್ ಮತ್ತು ಅವನು ರವೀಶ್ ಕುಮಾರ್, ಇಬ್ಬರೂ ಪತ್ರಕರ್ತರು. ನಮ್ಮ ದೇಶದಲ್ಲಿ ಪತ್ರಿಕೋದ್ಯಮದ ಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವ ಕೆಲವರಲ್ಲಿ ಇಬ್ಬರದೂ ದೊಡ್ಡ ಹೆಸರು.

ರಾಣಾ ಅಯೂಬ್ 1984ರಲ್ಲಿ ಮುಂಬಯಿಯಲ್ಲಿ ಜನಿಸಿದರು. ತಂದೆ ಕೂಡ ಪತ್ರಕರ್ತ, ಈಗ ಮುಚ್ಚಿಹೋಗಿರುವ ‘Blitz’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದರು. ಪತ್ರಕರ್ತೆಯಾಗಬೇಕೆಂಬ ಆಕಾಂಕ್ಷೆಯುಳ್ಳ ರಾಣಾ ಆಗ ತುಂಬಾ ಸುದ್ದಿ ಮಾಡುತ್ತಿದ್ದ, ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾದ ‘ತೆಹೆಲ್ಕಾ’ ಸೇರಿಕೊಂಡರು. ಅಲ್ಲಿ ಅವರು ತೆಗೆದುಕೊಂಡ ಪ್ರಮುಖ ಕೆಲಸ ಗುಜರಾತನಲ್ಲಿ ಆದ ಗಲಭೆಗಳ ಬಗ್ಗೆ ಒಂದು ಸ್ಟಿಂಗ್ ಮಾಡುವುದು. ರಾಣಾ ಅವರು ಮೈಥಿಲಿ ತ್ಯಾಗಿ ಎನ್ನುವ ಹೆಸರಿನಲ್ಲಿ ಗುಜರಾತಿನಾದ್ಯಂತ ತಿರುಗಿ, ಬಿಜೆಪಿ ಹಾಗೂ ಸಂಘಪರಿವಾರದ ಅನೇಕ ಮುಖಂಡರೊಂದಿಗೆ ಮಾತನಾಡಿದರು, ಆ ಮಾತುಕತೆಗಳ ವಿಡಿಯೋ ಕೂಡ ಮಾಡಿದರು. ಅವರ ತನಿಖಾ ವರದಿಗಳು ಭಾರೀ ಪರಿಣಾಮಕಾರಿಯಾಗಿದ್ದು, ಅಂತರಾಷ್ಟ್ರೀಯ ಮನ್ನಣೆ ಗಳಿಸಿವೆ. ಇಂಥಾ ಒಂದು ತನಿಖಾ ವರದಿಯ ಪರಿಣಾಮವಾಗಿ ರಾಷ್ಟ್ರೀಯ ಪಕ್ಷವೊಂದರ ಹಾಲಿ ಅಧ್ಯಕ್ಷ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಜೈಲಿಗೆ ಹೋದ ಆ ಮಹನೀಯರ ಹೆಸರು ಅಮಿತ್ ಶಾ.

ಗುಜರಾತ್‍ನ ತನಿಖಾ ಕೆಲಸ ಮುಗಿಯುವ ಹೊತ್ತಿಗೆ ತೆಹೆಲ್ಕಾದಲ್ಲಿ ಸಮಸ್ಯೆಗಳು ಶುರುವಾಗಿದ್ದರಿಂದ ರಾಣಾ ಅಲ್ಲಿಂದ ಹೊರಬಂದು ತಾವು ಸಂಗ್ರಹಿಸಿದ ವಿಡಿಯೋಗಳು ಮತ್ತು ಸಂಭಾಷಣೆಗಳನ್ನಾಧರಿಸಿ ‘Gujrat Files, Anatomy of a cover up’ ಎನ್ನುವ ಪುಸ್ತಕವನ್ನು 2016 ರಲ್ಲಿ ಹೊರತಂದರು. (ಆ ಪುಸ್ತಕದ ಕನ್ನಡ ಅನುವಾದ ಕೃತಿಯನ್ನು ಗೌರಿ ಲಂಕೇಶ್ ಅವರು ತಮ್ಮ ಪ್ರಕಾಶನದಿಂದಲೇ ಪ್ರಕಟಿಸಿದ್ದರು).

ಆ ಪುಸ್ತಕ ಬಿಡುಗಡೆಯಾದೊಡನೆ ರಾಣಾಗೆ ಖ್ಯಾತಿ, ಪ್ರಶಸ್ತಿಗಳೇನೋ ಬಂದವು. ಆದರೆ ಅದಕ್ಕಿಂತ ಹೆಚ್ಚು ಬಂದಿದ್ದು ಕೊಲೆ, ಅತ್ಯಾಚಾರದ ಬೆದರಿಕೆಗಳು. ಇದ್ಯಾವುದಕ್ಕೂ ಜಗ್ಗದ ರಾಣಾಗೆ ಆಘಾತವೊಂದು ಕಾದಿತ್ತು. ಎರಡು ತಿಂಗಳ ಹಿಂದೆ ಕಾಶ್ಮೀರದಲ್ಲಿ ಹಸುಳೆ ಮೇಲೆ ಬಲಾತ್ಕಾರವಾದಾಗ ಆ ಬಲಾತ್ಕಾರವನ್ನು ರಾಣಾ ಸಮರ್ಥಿಸಿಕೊಂಡಳೆಂದು, ರಾಣಾ ಭಾರತವನ್ನು, ಭಾರತೀಯರನ್ನು ದ್ವೇಷಿಸುತ್ತಾಳೆನ್ನುವ ಹೇಳಿಕೆಗಳನ್ನು ಅವರ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯ ಬಿಡಲಾಯ್ತು. ಅಷ್ಟಕ್ಕೂ ನಿಲ್ಲದೇ ನೀಲಿ ಚಿತ್ರವೊಂದಕ್ಕೆ ಇವರ ಮುಖವನ್ನು ಸೇರಿಸಿ ಎರಡೂವರೆ ನಿಮಿಷದ ವಿಡಿಯೋ ಒಂದನ್ನು ಹರಿಬಿಟ್ಟರು, ಆ ವಿಡಿಯೋವನ್ನು ಅವರ ತಂದೆಗೂ ತಲುಪಿಸಲಾಯಿತು. ರಾಣಾ ಅವರ ವೈಯಕ್ತಿಕ ಫೋನ್ ನಂಬರಿನೊಂದಿಗೆ, ಅವರ ಚಿತ್ರವನ್ನು ಮತ್ತು ಮನೆಯ ವಿಳಾಸವನ್ನೂ ಸೇರಿಸಿ, ಅವಳು ಲಭ್ಯವಿದ್ದಾಳೆ ಎನ್ನುವ ಪೋಸ್ಟ್ ಕೂಡ ಹರಿಬಿಡಲಾಯಿತು. ಅವಳ ದರವನ್ನು ಕೇಳುತ್ತ ನೂರಾರು ಕರೆಗಳು ಬಂದವು. ದಿಟ್ಟ ರಾಣಾ ಕಂಗೆಟ್ಟು ಆಸ್ಪತ್ರೆ ಸೇರಬೇಕಾಯಿತು. ಇದರ ಬಗ್ಗೆ ರಾಣಾ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದಿಟ್ಟ ಪತ್ರಕರ್ತೆ ಎದುರಿಸುತ್ತಿರುವ ಅಪಾಯವನ್ನು ಗಮನಿಸಿದ ವಿಶ್ವಸಂಸ್ಥೆ ರಾಣಾ ಅವರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಭಾರತ ಸರ್ಕಾರವನ್ನು ಕೋರಿದೆ.

ರವೀಶ್ ಕುಮಾರ್, 1974ರಲ್ಲಿ ಬಿಹಾರನ ಮೊತಿಹಾರಿಯ ಮೂಲದವರು, ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದರು. ದೆಹಲಿಯಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದ ರವೀಶ್, ತಮಗೆ ಇಂಗ್ಲೀಷ್ ಬರದಿದ್ದಕ್ಕಾಗಿ ಕೀಳರಿಮೆಯನ್ನು ಅನುಭವಿಸಿದವರು. ಸ್ವಪ್ರಯತ್ನದಿಂದಲೇ ಮೇಲೆಬಂದ ರವೀಶ್ NDTV ಸೇರಿಕೊಂಡರು. NDTV India ಹಿಂದಿ ವಾಹಿನಿಯ ಸಂಪಾದಕರಾದರು. ಹಿಂದಿ ಗೊತ್ತಿರುವ ಎಲ್ಲರಿಗೂ ರವೀಶ್ ಚಿರಪರಿಚಿತರು. ಇವರ ಆಳವಾದ ವಿಶ್ಲೇಷಣೆ, ಪತ್ರಿಕೋದ್ಯಮದ ಸಾಂಪ್ರದಾಯಿಕವಲ್ಲದ ವಿಧಾನ, ಮಾತುಗಾರಿಕೆ, ಸತ್ಯವನ್ನು ಹುಡುಕುವುದಕ್ಕಾಗಿ ಎಲ್ಲೆಲ್ಲೋ ಸುತ್ತಾಡುವ ಇವರಿಗೆ ಖ್ಯಾತಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇತರ ಟಿವಿ ಆಂಕರ್‍ಗಳು ಒಂದು ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆ ನಡೆಸುವುದೇ ಕಷ್ಟವಾಗಿರುವಾಗ, ಕೆಲವು ಮಹತ್ವದ ಸಂದರ್ಭದಲ್ಲಿ ಒಂದೇ ವಿಷಯದ ಮೇಲೆ ವಾರಗಟ್ಟಲೆ ವರದಿ, ಚರ್ಚೆ ಮಾಡಿದ ದಿಟ್ಟ ಪತ್ರಕರ್ತ ಈತ. ತೋರಿಸಿದ್ದನ್ನೇ ಮತ್ತೆ ಮತ್ತೆ ತೋರಿಸುವ, ಜೋರು ಗಂಟಲಿನಲ್ಲಿ ಅರ್ಥವಿಲ್ಲದ ಪ್ರಲಾಪ ಮಾಡುವ ಅದೆಷ್ಟೋ ‘ಖ್ಯಾತ’ ಪತ್ರಕರ್ತರಿಗಿಂತ ರವೀಶ್ ತೀರಾ ಭಿನ್ನ. ಯಾವುದೇ ಅಬ್ಬರವಿಲ್ಲದೆ ತಣ್ಣಗೆ ಈ ದೇಶದ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಸ್ಯೆಗಳನ್ನು ಆಧಾರಸಮೇತ ಎಳೆಎಳೆಯಾಗಿ ಬಿಚ್ಚಿಡುವ ರವೀಶ್ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹಾಗೆಯೆ ಪಟ್ಟಭದ್ರ ಶಕ್ತಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಪರಿಣಾಮವಾಗಿ ಇವರಿಗೆ ಮಾತ್ರವಲ್ಲದೆ, ಇವರ ಕುಟುಂಬದ ಸದಸ್ಯರಿಗೂ ಬೆದರಿಕೆಗಳು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಎಷ್ಟು troll ಮಾಡಲಾಯಿತೆಂದರೆ ಇವರು ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತೊರೆಯುವಂತಾಯಿತು. ಕೊಲೆಯ ಬೆದರಿಕೆಗಳು ಸಾಮಾನ್ಯವಾದವು. ರವೀಶ್‍ರನ್ನು ಕೊಲೆ ಮಾಡುತ್ತೇನೆ ಎಂದು ಕೆಲವರು ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರವೀಶ್ ಪ್ರಸ್ತುತ ಸಮಯದಲ್ಲಿ ಎಲ್ಲಿದ್ದಾರೆ, ಎಲ್ಲಿಗೆ ಹೊರಟಿದ್ದಾರೆ ಎನ್ನುವ ವಿಷಯಗಳನ್ನು ಈ ಪೀಡಕರು ರವೀಶ್‍ಗೆ ನಿರಂತರವಾಗಿ ಕಳುಹಿಸುತ್ತಿರುತ್ತಾರೆ.

ಆ ಇಬ್ಬರಿಗೆ ಬಂದ ಬೆದರಿಕೆಗಳು, ಅವರಿಗೆ ಕೊಡಲಾದ ಮಾನಸಿಕ ಕಿರುಕುಳದ ಬಗ್ಗೆ ಬರೆಯತೊಡಗಿದರೆ ಅದೇ ಒಂದು ಪುಸ್ತಕವಾಗಬಹುದು.. ಕಿರುಕುಳ ಮತ್ತು ಬೆದರಿಕೆಗಳು ಎಷ್ಟರ ಮಟ್ಟಿಗೆ ಬಂದಿವೆಯೆಂದರೆ, ‘ಈಗ ಆ ಬೆದರಿಕೆಗಳನ್ನು ಕಾರ್ಯಗತಗೊಳಿಸುವುದಷ್ಟೇ ಉಳಿದಿರುವುದು’ ಎಂದು ರವೀಶ್ ಹೇಳಿದ್ದಾರೆ. ಬೊಗಳೋ ನಾಯಿ ಕಚ್ಚೋದಿಲ್ಲ ಎಂದು ತಿಳಿದರೆ ಅದು ಸಂಪೂರ್ಣ ತಪ್ಪು. 2017ರಲ್ಲಿ ನಾಲ್ಕು ಪತ್ರಕರ್ತರ ಕೊಲೆಯಾಗಿದೆ, ಈ ವóರ್ಷ ಆಗಲೇ ಇಬ್ಬರು ಪತ್ರಕರ್ತರ ಕೊಲೆಯಾಗಿದೆ. ಕರ್ನಾಟಕದ ದಿಟ್ಟ ಪತ್ರಕರ್ತೆಯಾದ ನಮ್ಮೆಲ್ಲರ ನೆಚ್ಚಿನ ಗೌರಿಲಂಕೇಶ್‍ರನ್ನು ಕೊಂದೇಬಿಟ್ಟರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತ ದಿನೇದಿನೇ ಜಾರುತ್ತಾ ಈಗ 138ನೇ ಸ್ಥಾನಕ್ಕೆ ಇಳಿದಿದೆ. ಅಂದರೆ ಸತ್ಯನಿಷ್ಠ ಪತ್ರಕರ್ತರ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಮೇಲಿನ ಇಬ್ಬರೂ ಹೆಸರಾಂತ ಪತ್ರಕರ್ತರು, ಅವರಿಗೆ ತಮ್ಮ ಭಾಷೆಯ, ತಾವು ಪ್ರತಿನಿಧಿಸುತ್ತಿರುವ ವರ್ಗದ ಹಾಗೂ ನಗರಪ್ರದೇಶದಲ್ಲಿ ಒಂದು ಮಟ್ಟಿಗೆ ಬೆಂಬಲವಿದೆ. ಇವರ ಕಾರ್ಯಕ್ರಮಗಳನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಆದರೆ ದೂರದ ಊರುಗಳಲ್ಲಿ, ಹಳ್ಳಿಗಾಡುಗಳಲ್ಲಿ ಕೆಲಸ ಮಾಡುತ್ತಿರುವ, ಇಂಗ್ಲೀಷ್ ಭಾಷೆಯ ಬೆಂಬಲವಿಲ್ಲದ, ಅನಾಮಧೇಯರಾಗಿರುವ ನೂರಾರು ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಸತ್ಯವನ್ನು ಜನರ ಮುಂದಿಡಬೇಕೆಂದರೆ ಪಟ್ಟಭದ್ರರನ್ನು ಎದುರು ಹಾಕಿಕೊಳ್ಳಲೇಬೇಕಾಗುತ್ತದೆ. ಅವರೆಲ್ಲ ಎಂಥೆಂಥಾ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರಬಹುದು?

ಇನ್ನೂ ಎರಡನೇ ಅತೀಮುಖ್ಯ ಪ್ರಶ್ನೆ,

ಇದು ಯಾವುದೋ ಒಂದು ರಾಜಕೀಯ ಪಕ್ಷ ಅಥವ ಸಂಘಟನೆಯ ಪ್ರಶ್ನೆ ಖಂಡಿತ ಅಲ್ಲ. ಇದೊಂದು ವ್ಯವಸ್ಥೆ. ಆ ವ್ಯವಸ್ಥೆ ಈ ದಿಟ್ಟ ಪತ್ರಕರ್ತರನ್ನು ಹಿಂದೂ ಧರ್ಮದ ವಿರೋಧಿಗಳಂತೆ ಬಿಂಬಿಸುತ್ತಿದೆ. ವಾಸ್ತವದಲ್ಲಿ ಈ ಇಬ್ಬರೂ ಹಿಂದೂ ಧರ್ಮ, ಸಂಸ್ಕøತಿಯ ವಿರುದ್ಧ ಮಾತನಾಡಿರುವ ಯಾವ ಉದಾಹರಣೆಗಳೂ ಇಲ್ಲ. ಹಾಗಾದರೆ ಇವರು ಹಿಂದೂ ಧರ್ಮದ ವಿರೋಧಿಗಳು ಆಗಿದ್ದಾದಾರೂ ಹೇಗೆ? ಹೀಗೆ ಧರ್ಮದ ಮುಸುಕಿನಲ್ಲಿ ಆಶ್ರಯ ಪಡೆಯುತ್ತಿರುವ ಶಕ್ತಿಗಳಾದರೂ ಯಾರು?

ಈ ಎಲ್ಲ ಬೆದರಿಕೆ, ಕಿರುಕುಳಗಳಲ್ಲಿ ಒಂದು ಸಂಗತಿ ಸುಸ್ಪಷ್ಟವಾಗಿದೆ. I am a Troll ಎಂಬ ಸಂಶೋದನಾ ಕೃತಿ ರಚಿಸಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಹೇಳುವಂತೆ ಇವೆಲ್ಲ ಯಾವುದೋ ಬಿಡಿಬಿಡಿ ಘಟನೆಗಳಲ್ಲ. ಇವು ಸುಸಜ್ಜಿತ ಯೋಜನೆಯೊಂದಿಗೆ ನಡೆಯುತ್ತಿವೆ, ಬೆದರಿಕೆ ಒಡ್ಡುವ ಈ ಪುಂಡರಿಗೆ ರಾಜಕೀಯ ಆಶ್ರಯವಿದೆ. ಇಂದಿನ ಪ್ರಧಾನಿಯವರನ್ನು ಒಳಗೊಂಡು ಹಲವು ಸಚಿವರು ಈ ಪುಂಡರನ್ನು ಟ್ವಿಟರ್‍ಗಳಲ್ಲಿ ಫಾಲೋ ಮಾಡುತ್ತಾರೆ, ಫೇಸ್‍ಬುಕ್‍ಗಳಲ್ಲಿ ಸ್ನೇಹಿತರಾಗಿರುತ್ತಾರೆ. ಈ Troll brigadeಗಳಿಗೆ ಭಾರೀ ಖದೀಮ ಕುಳಗಳ ಕೃಪೆಯೂ ಇರುತ್ತದೆ. ಇದು ಒಟ್ಟಾರೆ ವರ್ತಮಾನದ ಪತ್ರಿಕೋದ್ಯಮ ಎದುರಿಸುತ್ತಿರುವ ಅಪಾಯಕಾರಿ ಬಿಕ್ಕಟ್ಟಿನ ಭಾಗವೇ ಆಗಿದೆ.

ಪ್ರಜಾತಂತ್ರ ಯಶಸ್ವಿಯಾಗಬೇಕಾದರೆ ನಾಲ್ಕನೇ ಸ್ಥಂಬವೆಂದು ಪರಿಗಣಿತವಾಗಿರುವ ಪತ್ರಿಕಾರಂಗ ಸ್ವತಂತ್ರವಾಗಿ ಕೆಲಸ ಮಾಡುವಂತಿರಬೇಕು. ಮಾತ್ರವಲ್ಲ, ಪತ್ರಿಕಾರಂಗಕ್ಕೆ ಸಮಾಜದ ಹಿತವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಇಂಥಾ ಜನಪರ ಪತ್ರಿಕೋದ್ಯಮವನ್ನು ಉಳಿಸಿ, ಬೆಳೆಸಲು ನಾವೇನು ಮಾಡಬೇಕು? ಸತ್ಯವನ್ನು ನುಡಿಯುವ ದಿಟ್ಟ ಪತ್ರಕರ್ತರ ರಕ್ಷಣೆಗೆ ನಾವು ಮಾಡಬೇಕಾಗಿರುವುದೇನು?

ಇದು ನಾವು ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆ.

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...