HomeUncategorizedಮಹಾಮೈತ್ರಿಗೆ ಮಹಾದ್ವಾರವಾದ ಕರ್ನಾಟಕ

ಮಹಾಮೈತ್ರಿಗೆ ಮಹಾದ್ವಾರವಾದ ಕರ್ನಾಟಕ

- Advertisement -
- Advertisement -

2018ರ ಈ ಚುನಾವಣೆಯ ಮತ ಎಣಿಕೆ ಅಂತಿಮಘಟ್ಟ ತಲುಪುವ ಮೊದಲೇ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ತೀರ್ಮಾನ ನೋಡಿ ಕರ್ನಾಟಕದ ಜನ ಮಾತ್ರ ಬೆಚ್ಚಿಬೀಳಲಿಲ್ಲ. ಬಿಜೆಪಿಯ ಅತ್ಯುತ್ಸಾಹಿ ಮುಂದಾಳುಗಳೂ ದಿಕ್ಕೆಟ್ಟು ಹೋಗಿದ್ದರು. ಎನ್‌ಡಿಟಿವಿಗೆ ಕೊಟ್ಟ ಸಂದರ್ಶನದಲ್ಲಿ ದೇವೇಗೌಡರು ’ಚುನಾವಣೆಯ ನಂತರ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಕುಟುಂಬದಿಂದ ಬಹಿಷ್ಕಾರ ಹಾಕುತ್ತೇನೆ’ ಎಂದು ಬೇರೆ ಹೇಳಿದ್ದರಿಂದ ಜನತಾದಳಕ್ಕೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಯಡಿಯೂರಪ್ಪ ಸರಕಾರ ರಚಿಸುವ ಸಾಧ್ಯತೆ ಅಂದೇ ಕಮರಿಹೋಗಿತ್ತು. ಅಂದು ಸಂಜೆಯೇ ದೇಶದ ಎಲ್ಲ ಟಿವಿ ಪರದೆಗಳ ಮೇಲೆ ಹಾಜರಾದ ಪ್ರಧಾನಿ ನರೇಂದ್ರ ಮೋದಿ ’ಕಾಂಗ್ರೆಸ್ ಮತ್ತು ಜನತಾದಳಗಳು ಸೇರಿ ಸರಕಾರ ರಚಿಸಲು ಬಿಡುವುದಿಲ್ಲ ಎಂದು ಪಕ್ಕಾ ಲೇವಾದೇವಿಗಾರನ ಸ್ಟೈಲಲ್ಲಿ ಹೇಳಿದಾಗ ಸರಕಾರ ರಚಿಸಲು, ಕ್ಷಮಿಸಿ, ಆಪರೇಷನ್ ಕಮಲ ಮಾಡಲು ಬಿಜೆಪಿಗೆ ಇದ್ದ ಅಲ್ಪಸ್ವಲ್ಪ ಅವಕಾಶಗಳೂ ಇಲ್ಲವಾದವು. ಆನಂತರ, ದೇಶವನ್ನೂ ಒಳಗೊಂಡಂತೆ ವಿದೇಶಿ ಟಿವಿ ಚಾನಲ್‌ಗಳು ಕರ್ನಾಟಕದ ವಿದ್ಯಮಾನಗಳನ್ನು ಲೈವ್ ಮಾಡತೊಡಗಿದವು. ರಾಜಕೀಯ ವಿಶ್ಲೇಷಕರು ಕರ್ನಾಟಕದ ರಾಜಕಾರಣ ತೆಗೆದುಕೊಳ್ಳಬಹುದಾದ ತಿರುವುಗಳ ಕುರಿತು ಮಾತಾಡತೊಡಗಿದರು. ಕಾರಣ ಸ್ಪಷ್ಟವಾಗಿತ್ತು, ಮೋದಿ ಮತ್ತು ಅಮಿತ್ ಶಾಗಳನ್ನು ಕಟ್ಟಿಹಾಕುವ ತಾಕತ್ತಿರುವುದು ಕರ್ನಾಟಕಕ್ಕೆ ಮಾತ್ರ, ಅದರಲ್ಲೂ ಸಿದ್ದರಾಮಯ್ಯ ಈ ಪುಂಡ ಕುದುರೆಗಳನ್ನು ಲಾಯಕ್ಕೆ ತಳ್ಳೇತಳ್ಳುತ್ತಾರೆ ಎಂದು ಭಾವಿಸಿದ್ದರು. ಹೀಗಾಗಿ ಕರ್ನಾಟಕದ ಚುನಾವಣಾ ರಾಜಕಾರಣ ಇಂಡಿಯಾ ಪಾಕಿಸ್ತಾನದ ನಡುವೆ ನಡೆಯುವ ನಿರ್ಣಾಯಕ ಟ್ವೆಂಟಿಟ್ವೆಂಟಿ ಕ್ರಿಕೆಟ್ ಮ್ಯಾಚ್‌ನಂತೆ ರೂಪಾಂತರಗೊಂಡಿತ್ತು.

ಕರ್ನಾಟಕದ ಚುನಾವಣಾ ಫಲಿತಾಂಶ ಮತ್ತು ಚುನಾವಣೋತ್ತರ ವಿದ್ಯಮಾನಗಳಿಗೆ ಹೀಗೆ ಅಂತಾರಾಷ್ಟ್ರೀಯ ಮಹತ್ವ ಲಭಿಸಿದ್ದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾದ ಕಾರಣಗಳೆಂದರೆ, ಮೋದಿ ಮತ್ತು ಶಾ ಅವರ ಕಾಂಗ್ರೆಸ್ ಮುಕ್ತಭಾರತದ ಕನಸು ಕರ್ನಾಟಕದ ಚುನಾವಣೆಯ ನಂತರ ಸಾಕಾರಗೊಳ್ಳಬಹುದೇ? ಬೆಲೆ ಏರಿಕೆ, ಜಿಎಸ್‌ಟಿ, ನೋಟು ಅಮಾನ್ಯೀಕರಣದ ದುಷ್ಪರಿಣಾಮಗಳಿಗೆ ಕರ್ನಾಟಕದ ಜನ ಚುನಾವಣೆಯ ಮೂಲಕ ಯಾವ ಉತ್ತರ ಕೊಡಬಹುದು? ಅಮಾಯಕ ಜನರ ಮೇಲೆ ನಡೆಯುತ್ತಿರುವ ಕೊಲೆ ಅತ್ಯಾಚಾರಗಳನ್ನು ನಿಯಂತ್ರಿಸುವುದಿರಲಿ, ಅವುಗಳನ್ನು ಸಮರ್ಥಿಸಿ ಬೀದಿಗಿಳಿಯುತ್ತಿರುವ ಬಿಜೆಪಿಯ ಮಾನವ ವಿರೋಧಿ ರಾಜಕಾರಣಕ್ಕೆ ಕರ್ನಾಟಕದ ಸಂವೇದನಾಶೀಲ ಜನ ಪಾಠ ಕಲಿಸಬಹುದೇ? ಗೋವಾ, ಮೇಘಾಲಯ, ಮಣಿಪುರಗಳನ್ನು ಅತಂತ್ರ ಚುನಾವಣಾ ಫಲಿತಾಂಶದ ನಡುವೆಯೂ ಅಪಹರಿಸಿದ ಮೋದಿ ಮತ್ತು ಶಾ ಕರ್ನಾಟಕವನ್ನೂ ವಶಪಡಿಸಿಕೊಳ್ಳಬಹುದೇ? ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಿದಲ್ಲಿ ದಕ್ಷಿಣ ಭಾರತವನ್ನು ಆಕ್ರಮಿಸುವ ಮೋದಿ ಶಾ ಅವರ ಕನಸು ಈಡೇರಬಹುದೇ? ಹಾಗಾದಲ್ಲಿ ಆಕಳಿಸುತ್ತಾ ಕೂತಿರುವ ಫ್ಯಾಸಿಸಮ್ ಹೇಗೆ ಇಡೀ ಭಾರತವನ್ನು ಆವರಿಸಿಕೊಳ್ಳಬಹುದು? ಎಂಬೆಲ್ಲ ಪ್ರಶ್ನೆಗಳು ಹಲವು ಜನತಂತ್ರವಾದಿಗಳನ್ನು ಕಾಡಿರಬಹುದು.
ಆದರೆ, ಮೇಲಿನ ಪ್ರಶ್ನೆಗಳನ್ನು ಕರ್ನಾಟಕದ ಮತದಾರ ಮುಖ್ಯವೆಂದು ಪರಿಗಣಿಸಿದ್ದಾನೆ ಎಂಬುದಕ್ಕೆ ಚುನಾವಣಾ ಫಲಿತಾಂಶ ಯಾವ ಸಾಕ್ಷ್ಯಗಳನ್ನೂ ಒದಗಿಸಿಲ್ಲ. ಕರ್ನಾಟಕದ ಮತದಾರ, ದಿಕ್ಕೆಟ್ಟಿರುವ ಕಾಂಗ್ರೆಸ್‌ಗಾಗಲಿ, ಜಾತ್ಯತೀತತೆ ಎಂದರೇನು ಎಂದು ಇಂದಿಗೂ ಸ್ಪಷ್ಟಗೊಳಿಸಿಕೊಳ್ಳದ ಜಾತ್ಯತೀತ ಜನತಾದಳಕ್ಕಾಗಲಿ ಸ್ಪಷ್ಟ ಬಹುಮತ ಸಿಗದಂತೆ ಮಾಡಿರುವುದರ ಜೊತೆಗೆ, ಬಿಜೆಪಿಗೆ ಅತಿಹೆಚ್ಚು ಸ್ಥಾನಗಳು ಲಭಿಸುವಂತೆ ಮಾಡಿದ್ದಾನೆ. 2018ರ ಕರ್ನಾಟಕದ ಚುನಾವಣೆ, ಅಧಿಕಾರವಿಲ್ಲದೆ ಅತಂತ್ರಗೊಂಡಿದ್ದ ಮೇಲ್ಜಾತಿ ಸಮುದಾಯಗಳನ್ನು ವಿಪರೀತ ಕ್ರಿಯಾಶೀಲವಾಗುವಂತೆ ಮಾಡಿತ್ತು. ಹೀಗೆ ಆತಂಕಿತ ಮೇಲ್ಜಾತಿಗಳು, ಜಾತಿ ಮತ್ತು ಧರ್ಮಗಳ ಕುರಿತು ಹುಟ್ಟುಹಾಕಿದ ಕಲ್ಪಿತ ಭಯವೇ ಚುನಾವಣೆಯ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ಹಿಡಿಯುವ ಸಲುವಾಗಿ ಶಾಸಕರನ್ನು ಖರೀದಿಸಲು ಮುಂದಾದ ಬಿಜೆಪಿ ಒಂದೇ ಜಾತಿಗೆ ಸೇರಿದವರನ್ನು ಮೊದಲು ಆಯ್ಕೆ ಮಾಡಿಕೊಂಡಿತ್ತು. ಅದು ಬಿಟ್ಟರೆ, ಅಕ್ರಮ ಗಣಿಗಾರಿಕೆಯ ಮೂಲಕ ಹಣ ಗಳಿಸಿದ ಬಂಡವಾಳಿಗ ಶಾಸಕರನ್ನು ಐಟಿ, ಈಡಿ ಎಂಬ ಗುಮ್ಮನನ್ನು ತೋರಿಸಿ ಬುಟ್ಟಿಗೆ ಹಾಕಿಕೊಳ್ಳಲು ನೋಡಿತ್ತು. ಶಾಸಕರ ಖರೀದಿಗೆ ನಡೆದ ಪ್ರಯತ್ನಕ್ಕೆ ಮೋದಿ ಶಾ ಇಬ್ಬರೂ ಮುಕ್ತ ಬೆಂಬಲ ಸೂಚಿಸಿದ್ದರು. ಸಾವಿರಾರು ಕೋಟಿಗಳಷ್ಟು ಹಣವನ್ನು ಇದಕ್ಕಾಗಿ ಖರ್ಚು ಮಾಡಲು ಸ್ವತಃ ಬಿಜೆಪಿ ಪಕ್ಷ ತಯಾರಾಗಿ ನಿಂತಿತ್ತು. ಖರೀದಿಗಾಗಿಯೇ ಇದ್ದ ಕೆಲವು ಶಾಸಕರು ಬೇಲಿ ಮೇಲೆ ಕೂತಿದ್ದರು. ಖರೀದಿಗೆ ಮುಕ್ತವಾಗಿದ್ದ ಕೆಲವು ಶಾಸಕರಿಗೆ ಮುಖ್ಯಮಂತ್ರಿಯೇ ಕರೆ ಮಾಡಿ ಹಣ ಮತ್ತು ಮಂತ್ರಿ ಸ್ಥಾನದ ಆಮಿಷಗಳನ್ನು ಒಡ್ಡಿದ್ದನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ದೆಹಲಿಯಿಂದ ಬಂದಿದ್ದ ಬಿಜೆಪಿ ವರಿಷ್ಠರೂ ಸಹ ಶಾಸಕರ ಖರೀದಿಗೆ ಮುಂದಾಗಿದ್ದರು. ಒಬ್ಬ ಶಾಸಕನಿಗೆ ನೂರಾರು ಕೋಟಿಗಳ ಆಮಿಷ ಒಡ್ಡಲಾಯಿತು. ಶಾಸಕರ ಮೇಲೆ ಗುರುತರ ಆಪಾದನೆಗಳ ಕಾರಣಕ್ಕಾಗಿ ಹಾಕಲಾಗಿದ್ದ ಕೇಸುಗಳನ್ನು ವಾಪಸ್ಸು ಪಡೆಯುವ ಭರವಸೆ ನೀಡಲಾಗಿತ್ತು. ಬಳ್ಳಾರಿ ಕಡೆಯ ಗಣಿಕಳ್ಳನೊಬ್ಬ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕನೊಬ್ಬನಿಗೆ ನೂರು ಪಟ್ಟು ಹೆಚ್ಚು ಹಣ ಆಸ್ತಿ ಮಾಡಿಕೊಡುತ್ತೇನೆಂದು ಆಶ್ವಾಸನೆ ಕೊಟ್ಟ ರೆಡ್ಡಿಯ ದೂರವಾಣಿ ಕರೆಯನ್ನು ರೆಕಾರ್ಡ ಮಾಡಿಕೊಳ್ಳಲಾಗಿದೆ. ಸತತ ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದ ಈ ಮನುಷ್ಯನ ಮೇಲಿದ್ದ ಬಹುತೇಕ ಎಲ್ಲ ಕೇಸುಗಳನ್ನು ಸಿಬಿಐ ದುರ್ಬಲಗೊಳಿಸಿ ಅವನನ್ನು ಜೈಲಿನಿಂದ ಬಿಡುಗಡೆಯಾಗುವಂತೆ ಮಾಡಿದೆ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಅತಿದೊಡ್ಡ ಕೊಡುಗೆ ಈ ಗಣಿಕಳ್ಳನ ಬಿಡುಗಡೆ. ಈ ಗಣಿಕಳ್ಳ ಆ ಉತ್ತರ ಕರ್ನಾಕಟದ ಶಾಸಕನಿಗೆ ಫೋನ್ ಮಾಡಿ ‘ನನಗೀಗ ಒಳ್ಳೆಯ ಕಾಲ ಬಂದಿದೆ. ೨೦೦೮ರ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದ ಉತ್ತರ ಕರ್ನಾಟಕದ ಕೆಲವು ಶಾಸಕರು ಕೋಟ್ಯಾಧೀಶರಾಗಿ ಉದ್ಧಾರವಾಗಿದ್ದಾರೆ. ಅವರು ರಾಜಕೀಯವಾಗಿಯೂ ಮುಂದೆ ಬಂದು, ಮಂತ್ರಿಗಳೂ ಆಗಿ ಬೆಳೆಯುತ್ತಿದ್ದಾರೆ. ಈಗ ನಿನಗೆ ಆ ಅವಕಾಶ ಬಂದಿದೆ. ನೀನೂ ನಮ್ಮ ಕಡೆ ಬಾ, ನಾನು ಸ್ವತಃ ನಿನ್ನನ್ನು ರಾಷ್ಟ್ರೀಯ ಅಧ್ಯಕ್ಷರ ಬಳಿ ಕರೆದೊಯ್ಯುವೆ. ಅವರ ಮುಂದೆ ಎಲ್ಲ ಮಾತನಾಡಿ ತೀರ್ಮಾನಕ್ಕೆ ಬರೋಣ’ ಎಂದು ಈ ಬಳ್ಳಾರಿ ಗಣಿಕಳ್ಳ ಮಾತಾಡಿದ್ದನ್ನು ಧ್ವನಿಮುದ್ರಿಸಿಕೊಳ್ಳಲಾಗಿದೆ. ಈ ಗಣಿಕಳ್ಳನಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ವತಃ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಘೋಷಿಸಿದ್ದು ಕೇವಲ ತೋರಿಕೆಗೆ ಎನ್ನುವಂತೆ ಆತ ಚುನಾವಣೋತ್ತರ ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದ.

‘ಸ್ವಚ್ಛ ಭಾರತ್, ಭ್ರಷ್ಟಾಚಾರ್ ಮುಕ್ತಭಾರತ್, ನಾನು ತಿನ್ನುವುದಿಲ್ಲ, ತಿನ್ನಲು ಯಾರನ್ನೂ ಬಿಡುವುದಿಲ್ಲ’ ಎಂಬ ಆದರ್ಶಗಳನ್ನು ಭಾಷಣಗಳಲ್ಲಿ ಕಿರುಚುವ ಚೌಕಿದಾರನದು ಬರೀ ಬಡಾಯಿ ಮಾತ್ರವೇ? ಹಣ ಕೊಟ್ಟು ಶಾಸಕರನ್ನು ಖರೀದಿಸಲು ಮುಂದಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಾ, ಪಕ್ಷದ ವಕ್ತಾರ ಮುರುಳೀಧರ್ ರಾವ್ ಮತ್ತು ಯಡಿಯೂರಪ್ಪನವರ ಮೇಲೆ ಪ್ರಧಾನಿ ಮೋದಿ ಕ್ರಮಕೈಗೊಳ್ಳುವರೆ? ಮೋದಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಮತ ಎಣಿಕೆ ಮುಗಿದು ೧೦೪ ಸೀಟು ಪಡೆದರೂ ಬಹುಮತ ಪಡೆಯದ ಯಡಿಯೂರಪ್ಪನವರಿಗೆ ಸರಕಾರ ರಚಿಸಲು ರಾಜ್ಯಪಾಲರ ಮೂಲಕ ಅವಕಾಶ ಕಲ್ಪಿಸಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿ. ಹೀಗೆ ಅವಕಾಶ ಕಲ್ಪಿಸುವುದರ ಜೊತೆಗೆ ಶಾಸಕರನ್ನು ಖರೀದಿಸಿ ಬಹುಮತ ಸಾಬೀತುಪಡಿಸಿ ಎಂದು ಪರೋಕ್ಷವಾಗಿ ಯಡಿಯೂರಪ್ಪನಿಗೆ ಕುಮ್ಮಕ್ಕು ಕೊಟ್ಟಿದ್ದೂ ಅವರೇ ಆಗಿದ್ದರು. ಆದರೆ, ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ಧುರೀಣರು ಅನಿರೀಕ್ಷಿತವಾಗಿ ಮುಂಜಾಗ್ರತೆ ವಹಿಸಿದ ಕಾರಣ ಶಾಸಕರ ವ್ಯಾಪಾರ ನಡೆಯಲು ಸಾಧ್ಯವಾಗಲಿಲ್ಲ.
ಯಾವಾಗ ಬಿಜೆಪಿಗೆ ಆಪರೇಷನ್ ಕಮಲ ಸಾಧ್ಯವಿಲ್ಲ ಎಂದು ಗೊತ್ತಾಗುತ್ತಿದ್ದಂತೆ ವ್ಯಾಪಾರಕ್ಕಿದ್ದ ಕುರಿಗಳು ಕಾಂಗ್ರೆಸ್ ಜೆಡಿಎಸ್ ಹಟ್ಟಿಗೆ ಬಂದುನಿಂತವು. ರಾಜ್ಯಪಾಲರಿಂದ ೧೫ ದಿನಗಳ ವರ ಪಡೆದಿದ್ದ ಮುಖ್ಯಮಂತ್ರಿ ತೀವ್ರ ಹತಾಶೆಗೆ ಒಳಗಾಗಿದ್ದರು. ಸುಪ್ರೀಮ್ ಕೋರ್ಟ್‌ನ ಆದೇಶ ಒಂದು ಕಡೆ, ವಿಫಲ ಆಪರೇಷನ್ ಕಮಲ ಇನ್ನೊಂದು ಕಡೆ, ಬಹುಮತ ಸಾಬೀತುಮಾಡದೆ ತೀವ್ರ ಅಸಹನೆಗೊಳಗಾದ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟರು. ನನ್ನದು ವಿರೋಚಿತ ಸೋಲು ಎಂಬ ಭಾವನೆಯಲ್ಲಿ ಉದ್ವೇಗದ ಭಾಷಣ ಮಾಡಿ ಮೊಳಗುತ್ತಿದ್ದ ರಾಷ್ಟ್ರಗೀತೆಗೂ ಕಿಮ್ಮತ್ತು ಕೊಡದೆ ಸದನದಿಂದ ಹೊರಹೋದರು. ಮುಖ್ಯಮಂತ್ರಿಯ ಈ ಪ್ರಲಾಪವನ್ನು ಮತ್ತು ಬಿಜೆಪಿ ಪಕ್ಷದ ಶಾಸಕರ ಖರೀದಿ ಪ್ರಯತ್ನವನ್ನು ಮಹಾನ್ ಸಾಧನೆ ಎಂಬಂತೆ ಪ್ರಚಾರ ಮಾಡಿದ್ದು ಮಾತ್ರ ಕನ್ನಡದ ಹಲವು 24X7 ನ್ಯೂಸ್ ಚಾನಲ್‌ಗಳು.

ಕಾಂಗ್ರೆಸ್ ಜೆಡಿಎಸ್‌ಗಳ ಹೊಂದಾಣಿಕೆ 
ಬಿಜೆಪಿಯ ಶಾಸಕರ ಖರೀದಿಗೆ ಹೆದರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಎಂಎಲ್‌ಎಗಳನ್ನು ಅವಿತಿಟ್ಟಿದ್ದವು. ಕೈಗೆ ಸಿಗದ ಕೆಲವು ಶಾಸಕರನ್ನು ಹಿಡಿದು ತರಲಾಯಿತು. ಯಡಿಯೂರಪ್ಪನವರ ನಿರ್ಗಮನದ ನಂತರ ಈ ಎರಡೂ ಪಕ್ಷಗಳು ಸರಕಾರ ರಚಿಸಲು ಹೊಂದಾಣಿಕೆ ಮಾಡಿಕೊಂಡಿವೆ. ಈ ಎರಡೂ ಪಕ್ಷಗಳು ಸದರಿ ಚುನಾವಣೆಯಲ್ಲಿ ಪರಸ್ಪರ ಭೀಕರವಾಗಿ ಬೈದುಕೊಂಡಿದ್ದವು. ಈ ಚುನಾವಣೆಯಲ್ಲಿ ಹಳೆಮೈಸೂರು ಭಾಗದ ಅನೇಕ ಜಿಲ್ಲೆಗಳಲ್ಲಿ ಈ ಎರಡು ಪಕ್ಷಗಳು ತೀವ್ರ ಹಣಾಹಣಿ ನಡೆಸಿದವು. ಇದರ ಪ್ರತಿಫಲವಾಗಿ ಸಿದ್ದರಾಮಯ್ಯನವರು ತಮ್ಮ ಮೂಲ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರು. ಮಂಡ್ಯ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ಸನ್ನು ತಲೆ ಎತ್ತದಂತೆ ಸೋಲಿಸಿದೆ. ಸರಕಾರ ರಚಿಸುವಷ್ಟು ಸಂಖ್ಯಾಬಲ ಹೊಂದಲು ಸಾಧ್ಯವಿಲ್ಲ ಎಂದು ಮೊದಲೇ ಖಾತ್ರಿಪಡಿಸಿಕೊಂಡಿದ್ದ ಜೆಡಿಎಸ್ ಪಕ್ಷದ ನಾಯಕರು ತಾವು ಪ್ರಬಲರಾಗಿರುವ ಕಡೆ ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಸೋಲಿಸಿದರು ಅಥವಾ ಈ ಮೂರೂ ಜಿಲ್ಲೆಗಳ ಪ್ರಬಲ ಸಮುದಾಯದ ಜನ ಜೆಡಿಎಸ್‌ನ್ನು ನಿರ್ಣಾಯಕವಾಗಿ ಗೆಲ್ಲಿಸಿದರು. ಜೆಡಿಎಸ್ ಪಕ್ಷಕ್ಕೆ ಸರಕಾರ ರಚಿಸಲು ಬೇಕಾದ ೧೧೩ ಸೀಟುಗಳು ಬೇಕಿರಲಿಲ್ಲ. ೪೫ಕ್ಕೂ ಹೆಚ್ಚು ಸ್ಥಾನಗಳು ಮಾತ್ರ ಬೇಕಿದ್ದವು. ಯಾಕೆಂದರೆ ಈ ಚುನಾವಣೆಯಲ್ಲಿ ಯಾವ ಪಕ್ಷವೂ ಸರಕಾರ ರಚಿಸುವಷ್ಟು ಬಹುಮತ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರಿಗಿಂತ ಮೊದಲು ಗ್ರಹಿಸಿದ್ದು ದೇವೇಗೌಡರು. ಹೀಗೆ ಅತಂತ್ರ ರಾಜಕೀಯ ಸ್ಥಿತಿ ನಿರ್ಮಾಣವಾದರೆ, ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವುದು ಜೆಡಿಎಸ್ ಪಕ್ಷ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಜೆಡಿಎಸ್ ಈ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಜೊತೆಗೆ ಅದು 2013ರಲ್ಲಿ 40 ಸೀಟು ಮತ್ತು ಶೇ.20 ರಷ್ಟು ಮತ ಪಡೆದಿತ್ತು. ಆದರೆ, ಈ ಚುನಾವಣೆಯಲ್ಲಿ ಅದು ಪಡೆದಿದ್ದು 37 ಸೀಟು (ಒಂದು ಬಿಎಸ್‌ಪಿ) ಮತ್ತು ಶೇ.18ರಷ್ಟು ಮತಗಳನ್ನು ಮಾತ್ರ. ಬಿಎಸ್‌ಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಜೆಡಿಎಸ್‌ನ ಮತಗಳಿಗೆಯಲ್ಲಿ ಗಣನೀಯ ಏರಿಕೆಯಾಗಿಲ್ಲ. ಹೀಗಿದ್ದರೂ ಸದರಿ ಚುನಾವಣೆಯಲ್ಲಿ ಜೆಡಿಎಸ್ ಸಮಾಧಾನಕರ ಸಾಧನೆ ಮಾಡಿದ್ದರೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.


ಈ ಪಕ್ಷಗಳ ಜೊತೆಗೂಡುವಿಕೆಯನ್ನು ಕೋಮುವಾದಿಗಳ ವಿರುದ್ಧದ ಜಾತ್ಯತೀತ ಶಕ್ತಿಗಳ ಹೊಂದಾಣಿಕೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನು ಸದ್ಯಕ್ಕೆ ಸತ್ಯವೆಂದೇ ನಂಬೋಣ. ಆದರೆ, ಈಗ ಶುರುವಾಗಿರುವುದು ಸಚಿವಸಂಪುಟ ರಚನೆಯ ಪಕ್ಕಾ ಲೆಕ್ಕಾಚಾರ. ಯಾವ ಯಾವ ಜಾತಿಗೆ ಯಾವ ಸಚಿವ ಸ್ಥಾನ? ಯಾವ ಜಾತಿಯವರಿಗೆ ಪ್ರಭಾವಿ ಖಾತೆಗಳು? ಯಾರು ಉಪಮುಖ್ಯಮಂತ್ರಿ? ಎಂಬ ಚರ್ಚೆ ಶುರುವಾಗಿದೆ. ವೀರಶೈವರು ನೊಂದಿದ್ದಾರೆ ಅವರನ್ನು ಸಮಾಧಾನಪಡಿಸಬೇಕು, ಇವರಿಗೆ ಪ್ರಭಾವಿ ಸಚಿವ ಸ್ಥಾನಗಳನ್ನು ಕೊಟ್ಟರೆ ಲಿಂಗಾಯತರು ಸಿಟ್ಟಾಗುತ್ತಾರೆ. ಉಪಮುಖ್ಯಮಂತ್ರಿ ಸ್ಥಾನವನ್ನು ಯಾರಿಗೆ ಕೊಡಬೇಕು? ಬ್ರಾಹ್ಮಣರಿಗೆ ಇಷ್ಟು, ಒಕ್ಕಲಿಗರಿಗೆ ಇಷ್ಟು, ನಾಯಕರಿಗೆ, ಕುರುಬರಿಗೆ ಇಷ್ಟು ಸ್ಥಾನಗಳು ಎಂಬ ಲೆಕ್ಕಾಚಾರಗಳು ಪಕ್ಷದ ವೇದಿಕೆಗಳಲ್ಲಿ ಗುಪ್ತವಾಗಿ ನಡೆದರೆ, ಬ್ರಹ್ಮಜ್ಞಾನವನ್ನು ನೇರವಾಗಿ ಪಡೆದಿರುವ ನ್ಯೂಸ್ ಚಾನಲ್‌ಗಳಲ್ಲಿ ಈ ಚರ್ಚೆ ಮುಕ್ತವಾಗಿ ನಡೆಯುತ್ತಿದೆ. ಟಿವಿ ಚಾನಲ್‌ಗಳ ಜನ ಮೇಲ್ಜಾತಿ ವರ್ಗಗಳಿಗೆ ಸೇರಿದ ಕೆಲವು ಕೂಗುಮಾರಿಗಳನ್ನು ಪ್ಯಾನಲ್‌ಗೆ ಕರೆದು ಸಚಿವ ಸ್ಥಾನಗಳನ್ನು ಪಡೆಯಲು ಶಾಸಕರನ್ನು ಮತ್ತು ಜನರನ್ನು ಉದ್ರೇಕಿಸುತ್ತಿದ್ದಾರೆ. ಅಂದರೆ ಇದು ಹೆಚ್ಚು ಮತಗಳನ್ನು ಹೊಂದಿರುವ ಪ್ರಬಲ ಜಾತಿಗಳು ಅಧಿಕಾರ ಹಂಚಿಕೆ ಮಾಡಿಕೊಳ್ಳಲು ನಡೆಸುತ್ತಿರುವ ರಾಜಕೀಯ ಚಟುವಟಿಕೆಯಾ? ಸಂಖ್ಯೆಯಲ್ಲಿ ಮತ್ತು ಹಣ ತೋಳ್ಬಲಗಳಲ್ಲಿ ಪ್ರಬಲರಾಗಿರುವ ಸಮುದಾಯಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯವೇ? ಇದನ್ನು ನಾವು ಜಾತ್ಯತೀತ ಪ್ರಜಾಪ್ರಭುತ್ವ ಎಂದು ಕರೆಯಬಹುದೇ? ಕೋಮುವಾದಿಗಳನ್ನು ದೂರವಿಟ್ಟ ಕರ್ನಾಟಕದ ಜನ ಒಳಗೇ ಇರುವ ಜಾತಿವಾದಿಗಳಿಗೆ ಸರಕಾರ ರಚಿಸಲು ಅವಕಾಶ ಕೊಟ್ಟಂತಾಗಿದೆಯೇ? ಈ ಎಲ್ಲ ಚಟುವಟಿಕೆಗಳ ತಾರ್ಕಿಕ ಅಂತ್ಯವೇನು? ಎಂಬ ಪ್ರಶ್ನೆಗಳು ಕರ್ನಾಟಕದ ಪ್ರಜ್ಞಾವಂತರನ್ನು ಕಾಡುತ್ತಿವೆ.

ಮಹಾಮೈತ್ರಿ ಸಾಧ್ಯವೇ?
ಈ ಎಲ್ಲ ಸೂಕ್ಷ್ಮ ಸಂಗತಿಗಳನ್ನು ಬದಿಗಿರಿಸಿದರೆ, ಕರ್ನಾಟಕದಲ್ಲಿನ ಈ ಎರಡೂ ಪಕ್ಷಗಳ ಹೊಂದಾಣಿಕೆಯನ್ನು ರಾಷ್ಟ್ರರಾಜಕಾರಣದಲ್ಲಿ ಪರ್ಯಾಯ ಬಯಸುವ ಜನ ಆಸೆಗಣ್ಣಿನಿಂದ ನೋಡುವಂತೆ ಮಾಡಿದೆ. ೨೦೧೪ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧ್ಯವಾಗಿಸಿಕೊಂಡು ದೆಹಲಿಯ ಸಿಂಹಾಸನವೇರಿದ ಮೋದಿ ಹಿಂದಿರುಗಿ ನೋಡಿಲ್ಲ. ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ಪ್ರಧಾನಿಯಾದ ಮೋದಿ ಉತ್ತರದ ಹಲವು ರಾಜ್ಯಗಳನ್ನು ಗೆಲ್ಲುತ್ತಲೇ ಬಂದಿದ್ದಾರೆ. ಅಲ್ಲಲ್ಲಿ ಸಿಕ್ಕ ಗೆಲುವುಗಳ ಕಾರಣಕ್ಕಾಗಿ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಘೋಷಣೆಯೊಂದಿಗೆ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ತೀರಾ ಇತ್ತೀಚೆಗೆ, ಮಣಿಪುರ ಮೇಘಾಲಯ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ, ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮೋದಿ ಶಾಗಳು ಆ ಪಕ್ಷಕ್ಕೆ ಸರಕಾರ ರಚನೆ ಮಾಡಲು ಅವಕಾಶ ನೀಡಲಿಲ್ಲ. ತ್ರಿಪುರಾದಲ್ಲಿ ಪ್ರತ್ಯೇಕತಾವಾದಿ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಪ್ರಾಮಾಣಿಕ ಆಡಳಿತ ನೀಡಿದ ಕಮ್ಯುನಿಸ್ಟ್ ಪಕ್ಷವನ್ನು ಹೀನಾಯವಾಗಿ ಇದೇ ಜೋಡಿ ಸೋಲಿಸಿದೆ. ಮೋದಿ ಮತ್ತು ಶಾ ಇಬ್ಬರೂ ಚುನಾವಣಾ ರಾಜಕಾರಣದಲ್ಲಿ ಅದರಲ್ಲೂ ತಂತ್ರಗಾರಿಕೆಯಲ್ಲಿ ಅಪ್ರತಿಮ ಸಾಧಕರೆಂಬಂತೆ ಬಿಂಬಿಸಲ್ಪಡುತ್ತಿದ್ದಾರೆ. ಇದೆಲ್ಲದರ ಜೊತೆ ದೇಶದ ಬಹುತೇಕ ಉತ್ತರದ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಆ ರಾಜ್ಯಗಳಲ್ಲಿ ನಡೆಸಿರುವ ಆಡಳಿತ ಹಿಟ್ಲರನ ನಾಜಿ ಪಕ್ಷವನ್ನೂ ಮೀರಿಸುವಂತಿದೆ. ಕಾಥುವಾ, ಉನ್ನಾವದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರಗಳು, ಇಕ್ಲಾಕ್‌ನ ಕೊಲೆ, ಊನ ಘಟನೆ, ಹೈದ್ರಾಬಾದ್ ವಿಶ್ವವಿದ್ಯಾಲಯ ಮತ್ತು ಜೆಎನ್‌ಯುಗಳಲ್ಲಿ ನಡೆದ ಘಟನೆಗಳಿಂದ ದೇಶದ ಜಾತ್ಯತೀತ ಪ್ರಜಾತಂತ್ರ ಅಪಾಯದ ಅಂಚಿಗೆ ಸರಿದಿರುವುದು ಎಲ್ಲರ ಅರಿವಿಗೆ ಬಂದಿದೆ. ನೋಟು ಅಮಾನ್ಯೀಕರಣ, ಬೆಲೆ ಏರಿಕೆ, ಹಲವು ಉಪಯುಕ್ತ ಸಬ್ಸಿಡಿಗಳ ರದ್ದತಿ, ರಸಗೊಬ್ಬರಗಳ ಬೆಲೆ ಹೆಚ್ಚಳದಂತಹ ಜನವಿರೋಧಿ ಕ್ರಮಗಳಿಂದಾಗಿ ಮೋದಿ ಸರ್ಕಾರ ಜನಪ್ರಿಯತೆಯನ್ನು ಕಳೆದುಕೊಂಡಿದೆ. ದಲಿತ, ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ ಶೋಷಿತ ಸಮುದಾಯಗಳು ತಲ್ಲಣಗಳಲ್ಲೇ ಬದುಕುವಂತಾಗಿದೆ. ಆದರೆ ತಮ್ಮ ಅಸಾಧಾರಣ ಚುನಾವಣಾ ತಂತ್ರಗಾರಿಕೆಯಿಂದಲೇ ಎಲೆಕ್ಷನ್‌ಗಳನ್ನು ಗೆಲ್ಲುತ್ತಿರುವ ಮೋದಿ ಶಾ ಜೋಡಿಯನ್ನು ಕಟ್ಟಿಹಾಕಿದ್ದು ಕೇಜ್ರಿವಾಲ್, ಲಾಲುಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್. ನಂತರದ ದಿನಗಳಲ್ಲಿ ಲಾಲು – ನಿತೀಶ್ ಜೋಡಿಯನ್ನು ಮುರಿದ ಶಾ ಅಲ್ಲಿಯೂ ಜೆಡಿಯು ಜೊತೆ ಬಿಜೆಪಿಯ ಹೊಂದಾಣಿಕೆಯನ್ನು ಸಾಧ್ಯವಾಗಿಸಿದರು. ದೆಹಲಿಯ ಕೇಜ್ರಿವಾಲ್ ಸರ್ಕಾರ ನೆಮ್ಮದಿಯಿಂದ ಆಡಳಿತ ನಡೆಸುವ ಸನ್ನಿವೇಶವನ್ನೇ ನಾಶ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶದ ಜನ ರಾಜಕೀಯ ಪರ್ಯಾಯವನ್ನು ಹಂಬಲಿಸುವಂತಾಗಿದೆ. ಸದ್ಯದ ರಾಜಕೀಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹೊರತಾಗಿಸಿ, ತೃತೀಯ ರಂಗದ ರಚನೆ ಸಾಧ್ಯವಾಗುತ್ತಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದಲ್ಲಿ ದೇಶದ ಪ್ರಾದೇಶಿಕ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ. ತೀರಾ ಇತ್ತೀಚಿನ ಉತ್ತರಪ್ರದೇಶದ ಉಪ ಚುನಾವಣೆಗಳಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರ ಹೊಂದಾಣಿಕೆ ಬಿಜೆಪಿಯನ್ನು ಬಡಿದು ಹಾಕಿದೆ. ಆಂದ್ರದ ಚಂದ್ರಬಾಬು ನಾಯ್ಡು ಮೋದಿಯಿಂದ ದೂರ ಸರಿದಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತೆಲಂಗಾಣದ ಚಂದ್ರಶೇಖರ್ ರಾವ್, ತಮಿಳ್ನಾಡಿನ ಸ್ಟ್ಯಾಲಿನ್, ಸೀತಾರಾಮ್ ಯೆಚೂರಿ, ದೇವೇಗೌಡ, ಮಾಯಾವತಿ, ಅಖಿಲೇಶ್ ಯಾದವ್‌    ರಂತಹ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷದ ಜೊತೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್‍ಯತೆ ಹಾಗೂ ಸಾಧ್ಯತೆಯನ್ನು ಕರ್ನಾಟಕದ ಈ ಚುನಾವಣೆ ತೋರಿಸಿಕೊಟ್ಟಿದೆ. ಈ ಚಾರಿತ್ರಿಕ ಮಹಾಮೈತ್ರಿಗೆ ಎಲ್ಲ ಪಕ್ಷಗಳೂ ಐಕ್ಯತೆಯೆಡೆಗೆ ಹೆಜ್ಜೆಯಿರಿಸಿರುವುದು ವಿಶೇಷ.

ದಿನದಿಂದ ದಿನಕ್ಕೆ ಕುಸಿಯುತ್ತಿರುವ ತಮ್ಮ ಜನಪ್ರಿಯತೆಯನ್ನು ಕರ್ನಾಟಕದ ಚುನಾವಣೆಯನ್ನು ಗೆಲ್ಲುವ ಮೂಲಕ ಎತ್ತಿನಿಲ್ಲಿಸಲು ಹೆಣಗಿದ ಮೋದಿ ಶಾ ಇಬ್ಬರೂ ವಿಫಲರಾಗಿದ್ದಾರೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಬಿಜೆಪಿಗೆ, ಅದರಲ್ಲೂ ಮೋದಿ ಶಾಗೆ ಬಾಗಿಲು ಬಂದ್ ಮಾಡಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ರೂಪುಗೊಳ್ಳುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕದ ಚುನಾವಣೆ ಇಂತಹ ಪರ್ಯಾಯ ರಾಜಕಾರಣದ ಸಾಧ್ಯತೆಯನ್ನು ದೇಶದ ಮುಂದಿಟ್ಟಿದೆ. ಸ್ಥಳೀಯ ರಾಜಕೀಯ ವಾಸ್ತವಗಳನ್ನು ಗಂಭೀರವಾಗಿ ಪರಿಗಣಿಸುವ, ಜಾತ್ಯತೀತ ಜನತಂತ್ರದ ಪರವಾದ, ಪರ್ಯಾಯ ಸೈದ್ಧಾಂತಿಕ ರಾಜಕಾರಣ ಮಾತ್ರ ಫ್ಯಾಸಿಸ್ಟ್ ಆಡಳಿತವನ್ನು ಹೆಡಮುರಿಗೆ ಕಟ್ಟಬಲ್ಲದು. ಅಂತಹ ಜನಪರ ರಾಜಕಾರಣದ ಅನಿವಾರ್ಯತೆಯನ್ನು ಈ ಫಲಿತಾಂಶ ದೇಶದ ಮುಂದಿರಿಸಿದೆ. ಇಂತಹ ಸಂದರ್ಭದಲ್ಲಿ ಪರ್ಯಾಯ ರಾಜಕಾರಣವನ್ನು ಹಂಬಲಿಸುವ ಎಲ್ಲರೂ ಸಕಾರಾತ್ಮಕವಾಗಿ ಕ್ರಿಯಾಶೀಲವಾಗಬೇಕಿದೆ.
@ ಅಲ್ಲಮ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...