Homeಅಂಕಣಗಳುಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

ಹಾಸುಹೊಕ್ಕು ಅಂಕಣ: ಊರಭಾಷೆಯ ಸೆಳೆತ

- Advertisement -
- Advertisement -

ರಹಮತ್ ತರೀಕೆರೆ |

ಚರಿತ್ರೆಯ ವಿದ್ವಾಂಸರಾದ ಪ್ರೊ. ಷ. ಶೆಟ್ಟರ್ ಅವರು, ಒಮ್ಮೆ ನನ್ನನ್ನು ‘ಹರಿಹರನ ಹಾಗೆ ಹೊಯ್ಸಳರ ನಾಡಿನಿಂದ ವಿಜಯನಗರ ನಾಡಿಗೆ ವಲಸೆ ಬಂದವನು’ ಎಂದು ವರ್ಣಿಸಿದರು. ಆಡಳಿತಾನುಕೂಲಕ್ಕೆ ಮಾಡಿಕೊಂಡಿರುವ ಜಿಲ್ಲೆ-ತಾಲೂಕು ಎಂಬ ಕಂದಾಯ ಪರಿಭಾಷೆಗಿಂತ, ರಾಜಮನೆತನಗಳ ಚರಿತ್ರೆಯ ಪರಿಭಾಷೆಯಲ್ಲಿ ನನ್ನ ವಲಸೆಯನ್ನು ವಿವರಿಸಿದ್ದು ವಿಶಿಷ್ಟವಾಗಿ ಕಂಡಿತು. ಆದರೂ ನನ್ನ ವಲಸೆಯ ಪರಿಯನ್ನು ಕಂದಾಯವೂ ಅಲ್ಲದ, ರಾಜಕೀಯ ಚರಿತ್ರೆಗೂ ಸೇರದ ನುಡಿಗಟ್ಟುಗಳಲ್ಲಿ ಹೇಳಿಕೊಳ್ಳಲು ಅವಕಾಶ ಸಿಕ್ಕರೆ, ನಾನು ಭದ್ರಾ ಪ್ರದೇಶದಿಂದ ತುಂಗಭದ್ರಾ ಪ್ರದೇಶಕ್ಕೆ ಬಂದವನು ಎಂದು ಕರೆದುಕೊಳ್ಳುವೆನು. ಅಥವಾ ರಾಗಿ ಸೀಮೆಯಿಂದ ಜೋಳದ ಸೀಮೆಗೆ, ಲಕ್ಷ್ಮೀಶನ ಸೀಮೆಯಿಂದ ರಾಘವಾಂಕರ ಸೀಮೆಗೆ, ಬಾಬಾಬುಡನ್ ಸೀಮೆಯಿಂದ ಹೇರೂರ ವಿರುಪನಗೌಡರ ಸೀಮೆಗೆ ಬಂದವನು-ಎಂದರೂ ಸರಿಯೇ. ಕಾರಣ, ನೀರು ಆಹಾರ ಕಾವ್ಯ ಅಧ್ಯಾತ್ಮದ ಪರಿಭಾಷೆಗೆ ವರ್ತಮಾನದ ಜನಬದುಕಿನ ಜತೆ ರಾಜಕೀಯ ಚರಿತ್ರೆಗಿಂತಲೂ ಆಪ್ತವಾದ ಸಂಬಂಧವಿರುತ್ತದೆ.

ಮೇಲ್ಕಾಣಿಸಿದ ನುಡಿಗಟ್ಟುಗಳಲೆಲ್ಲ ಜಲಸಂಸ್ಕೃತಿಯದೇ ನನಗೆ ಪ್ರಿಯ. ಇದಕ್ಕೆ ಕಾರಣ, ನನ್ನೂರಿನ ಹೆಸರಲ್ಲೇ ನೀರಿನ ಕುರುಹಿದೆ. ಇದಕ್ಕೆ ತಕ್ಕನಾಗಿ ನಮ್ಮೂರನ್ನು ನಾಲ್ಕು ದೊಡ್ಡಕೆರೆ ಆವರಿಸಿಕೊಂಡಿವೆ. ನಮ್ಮೂರ ಹೆಸರಿನ ಹಿನ್ನೆಲೆ ಕುರಿತು ಎರಡು ಊಹೆಗಳಿವೆ. ಮೊದಲನೆಯದು- ಮೈತುಂಬ ಮುಳ್ಳುಗಳುಳ್ಳ ತರೀ ಗಿಡಗಳ ಕಾರಣಗಳಿಂದ ಬಂದಿದ್ದು. ಎರಡನೆಯದು-ಬೌದ್ಧಯಕ್ಷಿ ತಾರಾ ಭಗವತಿಯ ಹೆಸರಲ್ಲಿ ಕಟ್ಟಿದ ಕೆರೆಯ ಕಾರಣದಿಂದ ಬಂದಿದ್ದು. ಇದರಲ್ಲಿ ಮೊದಲನೆಯದೇ ಹೆಚ್ಚು ನಿಜವಿರಬೇಕು. ಆದರೆ ಬೌದ್ಧಧರ್ಮದ ಬಗ್ಗೆ ಸೆಳೆತವುಳ್ಳ ನನಗೆ ಎರಡನೆಯ ವ್ಯಾಖ್ಯಾನದ ಬಗ್ಗೆ ತುಸು ಭಾವಪಕ್ಷಪಾತ. ಚರಿತ್ರೆಯ ಈ ಯಾವ ಖಬರೂ ಇಲ್ಲದೆ, ಬೆಸಗರಹಳ್ಳಿ, ಬರಗೂರು, ದೇವನೂರು, ನಾಗವಾರ ಇತ್ಯಾದಿ ಊರ ಹೆಸರಿಟ್ಟುಕೊಂಡು ಬರೆಯುತಲಿದ್ದ ಹಿರೀಕರನ್ನು ಅನುಕರಿಸುತ್ತ, ಊರ ಹೆಸರನ್ನು ಲಗತ್ತಿಸಿಕೊಂಡೆವು. ಆದರೆ ಊರಿನ ಕುರುಹು, ಅದರಿಂದ ದೂರಹೋದಂತೆಲ್ಲ ಕಾಡುವ ಪರಿ ಎಷ್ಟು ಸಂಕೀರ್ಣ ಎಂಬುದು ಬಳಿಕ ಹೊಳೆಯುತ್ತ ಹೋಯಿತು. ನಾನು ವಿದ್ಯಾಭ್ಯಾಸಕ್ಕಾಗಿ ಕಾವೇರಿ ದಡದ ಮೈಸೂರಿಗೆ ಹೋದೆ. ನೌಕರಿ ಶಿವಮೊಗ್ಗೆಯಲ್ಲಿ ಸಿಕ್ಕಿತು-ಅದು ತುಂಗಾಸೀಮೆ. ಬಳಿಕ ತುಂಗಭದ್ರೆಯ ಮಡಿಲಿಗೆ ಬಂದುಬಿದ್ದೆ. ನನ್ನ ಬಾಳಿನಲ್ಲಿ ನದಿ ಪ್ರದೇಶಗಳು ಹೇಗೋ ತೊಡಕಿಕೊಂಡಿವೆ. ಹೊಸಪೇಟೆಯಲ್ಲಿ ಈಗಿರುವ ಮನೆಗೆ ಸಮೀಪದಲ್ಲೆ ತುಂಗಭದ್ರೆಯ ಎಡದಂಡೆ ಕಾಲುವೆಯಿದ್ದು, ಅದರಲ್ಲಿ ಹರಿವ ನೀರನ್ನು ನೋಡುವಾಗ, ಇದರಲ್ಲಿ ನಮ್ಮ ಕೆರೆಗಳಿಂದ ಕೋಡಿಬಿದ್ದು ಹೊಳೆಸೇರಿದ ನೀರಿನ ಪಾಲೂ ಇರಬಹುದೆಂದು ಪುಳಕಿತನಾಗುತ್ತೇನೆ. ಹುಟ್ಟಿದ ಪ್ರದೇಶದ ಮಾಯೆ ಹಲವು ನೆಪಗಳಲ್ಲಿ ಹಿಂಬಾಲಿಸಿ ಬರುತ್ತದೆ. ಅದರಲ್ಲೂ ಕರ್ಣಕವಚದಂತೆ ನನ್ನ ನಾಮಕ್ಕೆ ಅಂಟಿಕೊಂಡಿರುವ ಕೆರೆಯ ಕುರುಹು, ಬಾಲ್ಯದ ಸುಪ್ತ ನೆನಪುಗಳನ್ನು ಸದಾ ಬಡಿದೆಬ್ಬಿಸುತ್ತದೆ. ನಾನು ಆಗಾಗ್ಗೆ ಬರೆಯುವ ಸಣ್ಣಕತೆ ಮತ್ತು ಲಲಿತ ಪ್ರಬಂಧಗಳಲ್ಲಿ, ನಮ್ಮ ಕಡೆಯ ಪಾತ್ರಗಳು ನಮ್ಮ ಸೀಮೆಯ ಭಾಷೆಯನ್ನಾಡುತ್ತ ಪ್ರತ್ಯಕ್ಷವಾಗುತ್ತವೆ. ಊರಭಾಷೆ, ಕುಡಿದು ಬೆಳೆದ ನೀರನಷ್ಟೇ ಉಂಡು ಬೆಳೆದ ಊಟದಷ್ಟೇ ಭಾವನಾತ್ಮಕ ಸಂಗತಿ.

ನಾನು, ನಮ್ಮ ಸೀಮೆಯ ಕನ್ನಡ ನುಡಿಯ ವಿಶಿಷ್ಟಲಯಗಳನ್ನು ಮೊದಲು ಕೇಳಿಸಿಕೊಂಡಿದ್ದು ಶಾಲೆಯಲ್ಲಲ್ಲ; ಬೀದಿಯಲ್ಲಿ, ಸಂತೆಯಲ್ಲಿ, ಹೊಲದಲ್ಲಿ, ಅಪ್ಪ ಕೆಲಸ ಮಾಡುತ್ತಿದ್ದ ಕುಲುಮೆ ಮನೆಯಲ್ಲಿ. ಕನ್ನಡ ತೆಲುಗು ತಮಿಳು ಹೀಗೆ ವಿಭಿನ್ನ ಭಾಷೆಯಾಡುವ ಬೇರೆಬೇರೆ ಜಾತಿಯ ಕುಟುಂಬಗಳ ನಡುವೆ ನಾವು ಬೆಳೆದೆವು. ಮನೆಯ ಹಿಂದಿನ ಬೀದಿ ಲಿಂಗಾಯತರದಾಗಿದ್ದು, ನಮ್ಮ-ಅವರ ಹಿತ್ತಲುಗಳ ನಡುವೆ ಸೋರೆ ಹಬ್ಬಿಸಿದ ಬೇಲಿಯಿರುತ್ತಿತ್ತು. ಬೇಲಿಯ ಆಚೀಚೆ ನಿಂತು ನಾವು ಮಾತಾಡುತ್ತಿದ್ದೆವು. ನಮ್ಮೂರ ಲಿಂಗಾಯತರಾದವರೂ ನಮ್ಮಂತೆ ಉರ್ದು ಮಾತಾಡುತ್ತಿದ್ದರು. ಅಪ್ಪ-ಅಮ್ಮನ ಗೆಳೆಯರು ಸಹ ನಾನಾ ಭಾಷೆಗೆ ಸೇರಿದವರಾಗಿದ್ದರು. ನಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದುದು ಬೆಟ್ಟದಾವರೆಕೆರೆಯ ಒಂದು ಲಿಂಗಾಯತ ಕುಟುಂಬ. ಮಕ್ಕಳಿಲ್ಲದ ಪಾರ್ವತಕ್ಕ ನನ್ನನ್ನು ಎಳವೆಯಲ್ಲಿ ತನ್ನ ಮನೆಯಲ್ಲಿಟ್ಟುಕೊಂಡು ಸಾಕಿದಳು. ಅವಳ ಕನ್ನಡ ಅದೆಷ್ಟು ಒಗರಿನಿಂದ ಕೂಡಿರುತ್ತಿತ್ತು! ನಮ್ಮ ಕುಲುಮೆಗೆ ತರೀಕೆರೆ ಅಜುಬಾಜಿನ ಇಪ್ಪತ್ತು ಹಳ್ಳಿಯ ರೈತರು ಬರುತ್ತಿದ್ದರು. ಅವರು ತಮ್ಮ ಕುಡ ಕುಳಗಳು ಸಿದ್ಧವಾಗುವವರೆಗೆ ಅಥವಾ ಗಾಡಿಗೆ ಹಳಿಕಟ್ಟುವ ಕೆಲಸ ಮುಗಿಯುವವರೆಗೆ ಅಪ್ಪನ ಜತೆ ಹರಟುತ್ತಿದ್ದರು. ಬೀಡಿಯಿಂದ ಹಿಡಿದು ಇಂದಿರಾಗಾಂಧಿಯ ತನಕ ವಿಷಯಗಳು ಚರ್ಚೆಗೆ ಬಂದು, ಕುಲುಮೆ ಮನೆ ಸಂಸತ್ತಾಗುತ್ತಿತ್ತು. ತಿದಿ ಎಳೆಯುತ್ತ ನಾನು ಅವನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೆ. ಅವುಗಳಲ್ಲಿ ಬೇರೆಬೇರೆ ವೃತ್ತಿಗೆ ಸಂಬಂಧಿಸಿದ ಶಬ್ದಗಳು ವಿಶೇಷವಾಗಿದ್ದವು. ನನ್ನ ಅಜ್ಜಿ ಮತ್ತು ಅಮ್ಮ ಕನಲಿದಾಗ, ಚೂಪಾದ ಕನ್ನಡದ ಗಾದೆ ಮತ್ತು ಬೈಗುಳಗಳನ್ನು ಹೆಕ್ಕಿ ತೆಗೆದು ಎದುರಾಳಿಗಳ ಮೇಲೆ ಪ್ರಯೋಗಿಸುತ್ತಿದ್ದರು. ಭಾಷೆ ಮತ್ತು ಧರ್ಮದ ವಿಷಯದಲ್ಲಿ ನಾನು ಜಾತ್ಯತೀತತೆಯ ಮೊದಲ ಪಾಠಗಳ ಕಲಿತಿದ್ದು ಹೀಗೆ ಹರಟೆ ಜಗಳ ಪ್ರೀತಿಯ ಸನ್ನಿವೇಶಗಳಲ್ಲಿ.

ಈ ಕಾರಣದಿಂದ, ಮನೆಮಾತು ಉರ್ದುವಾದರೂ ಬೀದಿಯಲ್ಲಿ ಕಲಿತ ಕನ್ನಡವು ನನ್ನ ಪಾಲಿಗೆ ಲೋಕ ಗ್ರಹಿಸುವ, ಚಿಂತನೆ ಮಾಡುವ, ಪರಿಭಾವಿಸುವ, ಭಾವನೆ, ಚಿಂತನೆ ಅನುಭವಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಮಾಧ್ಯಮವಾಯಿತು. ನಾನು ವಿಶ್ವವಿದ್ಯಾಲಯ ಸೇರಿ, ಸಂಶೋಧನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಬಳಸುತ್ತಿರುವ ವಿಶ್ಲೇಷಣೆ-ವ್ಯಾಖ್ಯಾನದ ಭಾಷೆಯು, ಕನ್ನಡದ ಸಮಸ್ತ ಸಂಶೋಧಕರೂ ಬಳಸುತ್ತಿರಬಹುದಾದ ವಿದ್ವತ್ತಿನ ಸಾಮಾನ್ಯ ಭಾಷೆ. ಅಲ್ಲಿ ನನ್ನ ಸೀಮೆಯ ಸೊಗಡಿಗೆ ಆಸ್ಪದ ಸಹಜವಾಗಿಯೇ ಕಮ್ಮಿ. ಆದರೆ ನಾನು ತಿರುಗಾಟದ ಅನುಭವ ಬರೆಯಲು ಕೂತರೆ, ಹೇಗೂ ಮೆಲ್ಲಗೆ ನನ್ನ ಬಾಲ್ಯದ ಅನುಭವಗಳೂ ಅದರ ಜತೆ ನಮ್ಮ ಸೀಮೆಯ ನುಡಿಗಟ್ಟುಗಳು ನುಸುಳಲು ಆರಂಭಿಸುತ್ತವೆ. ಬಹುಶಃ ಕತೆ ಕಾದಂಬರಿಯ ಭಿತ್ತಿಯಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಳ್ಳದ ಹೊರತು ಯಾವುದೇ ಸೀಮೆಯ ಭಾಷೆ ತನ್ನೆಲ್ಲ ಸೊಕ್ಕಿನಲ್ಲಿ ವೈವಿಧ್ಯದಲ್ಲಿ ಜೀವಂತಿಕೆಯಲ್ಲಿ ಅವತರಿಸುವುದಿಲ್ಲ. ಆದರೆ ಕತೆ ಕಾದಂಬರಿ ನನಗೆ ಕೈವಶವಾಗಿಲ್ಲ. ಹೀಗಾಗಿ ನಮ್ಮ ಸೀಮೆಯ ಕನ್ನಡವು ನನ್ನ ಅಭಿವ್ಯಕ್ತಿಯ ಹೊರಗೇ ಉಳಿದುಬಿಟ್ಟಿದೆ.

ನಾವು ಹುಟ್ಟಿಬೆಳೆದ ಹಕ್ಕೆ ತೊರೆದು ಹೊಸ ಜಾಗಗಳಿಗೆ ಹೋಗದ ಹೊರತು, ನಮ್ಮ ಸೀಮೆಯ ಜನಜೀವನ, ಭಾಷೆ ಸಂಸ್ಕೃತಿಗಳ ಇತಿಮಿತಿ ವಿಶಿಷ್ಟತೆ ಗೊತ್ತಾಗುವುದಿಲ್ಲ; ವಲಸೆಯು ಹೋದ ಸೀಮೆಯ ವಿಶಿಷ್ಟತೆ ಮಿತಿಯನ್ನೂ ಕಾಣಿಸುತ್ತದೆ. ವಲಸೆಯ ಹೊರತು ನಮ್ಮ ವ್ಯಕ್ತಿತ್ವಕ್ಕೂ ಹೊಸ ಆಯಾಮ ದೊರಕುವುದಿಲ್ಲ. ಆದರೆ ಈ ವ್ಯಕ್ತಿತ್ವ ನಿರ್ಮಾಣದಲ್ಲಿ ಯಾವಾಗಲೂ ಹುಟ್ಟಿಬೆಳೆದ ಸೀಮೆಯ ಅನುಭವ ಮತ್ತು ಭಾಷೆಗಳು ಬುನಾದಿ ರೂಪದಲ್ಲಿರುತ್ತವೆ. ವಲಸೆ ಹೋಗಿ ನೆಲೆಸುವ ಕರ್ಮಭೂಮಿಯು ಜನ್ಮಭೂಮಿಯ ಭಾಷೆಗೆ ಅನುಭವಕ್ಕೆ ಹೊಸ ರೂಪಾಂತರ ಒದಗಿಸುತ್ತದೆ. ಕನ್ನಡದಲ್ಲಿ ತಾವು ಹುಟ್ಟಿ ಬೆಳೆದ ಪರಿಸರದಲ್ಲೇ ಇದ್ದು ಬರೆಹ ಮಾಡಿದವರುಂಟು-ಗುಲ್ವಾಡಿ ವೆಂಕಟರಾವ್, ಕಾರಂತ, ವೈದೇಹಿ, ಶಾಂತರಸರ ತರಹ. ಆದರೆ ಹುಟ್ಟಿದೂರನ್ನು ಬಿಟ್ಟು, ನೆಲೆಸಿದ ಊರಲ್ಲಿದ್ದು ಬರೆದವರೇ ಹೆಚ್ಚು-ಕುವೆಂಪು, ಚಿತ್ತಾಲ, ದೇವನೂರು, ಲಂಕೇಶ್ ತರಹ; ಅನಂತಮೂರ್ತಿ ‘ಸಂಸ್ಕಾರ’ ಬರೆದಿದ್ದು ಇಂಗ್ಲೆಂಡಿನಲ್ಲಿ. ಅನುಭವ ಪಡೆದ ಸ್ಥಳವನ್ನೂ ಅಲ್ಲಿನ ಭಾಷಿಕ ಪರಿಸರವನ್ನೂ ಬಿಟ್ಟು ದೂರಹೋದ ಕಾರಣದಿಂದಲೇ, ಅವುಗಳ ಸೆಳೆತ ಮಾತ್ರವಲ್ಲ, ಅದರೊಳಗಿನ ಮಾಂತ್ರಿಕತೆ ಕೂಡ ಹೆಚ್ಚು ಗಾಢವಾಗಿ ಅವತರಿಸುತ್ತದೆಯೊ ಏನೊ?

ಮಾತುಕತೆ, ಸಂಸ್ಕೃತಿ, ಆಹಾರದ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯ ಘಟ್ಟಪ್ರದೇಶದಲ್ಲಿ ಒಂದು ಬಗೆಯಿದ್ದರೆ, ಬಯಲು ಸೀಮೆಯ ಭಾಗದಲ್ಲಿ ಇನ್ನೊಂದು ಬಗೆಯಿದೆ. ಅಜ್ಜಂಪುರದಲ್ಲಿ ‘ಏಸ್ ಕೊತಂಬರಿ ಚೀಲಕ್ಕೆ ಬಾಳಿದೀಯೊ ನೀನು?’ ಎಂದು ಜನ ಜಗಳ ಮಾಡುತ್ತಿದ್ದರು. ಜನರನ್ನು ಧಾನ್ಯದ ಚೀಲದ ಜತೆಗಿಟ್ಟು ತೂಕಮಾಡುವುದು ಸೋಜಿಗವಾಗುತ್ತಿತ್ತು. ಇದು ೧೫ ಕಿಮೀ ದೂರದ ಕೆಮ್ಮಣ್ಣಿನ ಜಮೀನುಳ್ಳ ತರೀಕೆರೆಯಲ್ಲಿ ಇರಲಿಲ್ಲ. ಅಜ್ಜಂಪುರವು ಈರುಳ್ಳಿ, ದನಿಯಾ, ಜೋಳ ಬೆಳೆಯುವುದಕ್ಕೆ ಬೇಕಾದ ಎರೆಭೂಮಿ. ಭೂಮಿಗೂ ಬೆಳೆಗೂ ಭಾಷೆಗೂ ಒಳನಂಟಿದೆ. ಒಂದು ಪ್ರದೇಶದ ಭಾಷೆಯ ಸಾಂಸ್ಕೃತಿಕ ವೈಖರಿಯನ್ನು, ಅಮೂರ್ತ ಚಿಂತನೆ ಭಾವನೆಗಳ ಮೇಲೆ ಹುಟ್ಟುವ ಕವಿತೆ ಹೆಚ್ಚಾಗಿ ದುಡಿಸಿಕೊಳ್ಳುವುದಿಲ್ಲ. ಆದರೆ ಸ್ಥಳೀಯ ಅನುಭವ ಪ್ರಧಾನವಾದ ಗದ್ಯಕಥನಗಳು ದುಡಿಸಿಕೊಳ್ಳುತ್ತದೆ. ಈ ಮೂಲಕ ಆಯಾ ಪ್ರದೇಶದ ಬದುಕಿನ ಚಿತ್ರ ಕಟ್ಟಿಕೊಡುತ್ತವೆ. ‘ಮದುಮಗಳು’ ‘ಗ್ರಾಮಾಯಣ’ ‘ನಿಸರ್ಗ’ ‘ಒಡಲಾಳ’ ‘ಬದುಕು’ ‘ಮುಸ್ಸಂಜೆಯ ಕಥಾಪ್ರಸಂಗ’ ‘ಬೆಟ್ಟದಜೀವ’ ಕಾದಂಬರಿಗಳನ್ನು; ಮಾಸ್ತಿ, ಕುಂವೀ, ರಾಘವೇಂದ್ರ ಪಾಟೀಲ, ನಾಗವೇಣಿ, ಮೊಗಳ್ಳಿ, ರಶೀದ್, ವಸುಧೇಂದ್ರ, ನುಗಡೋಣಿಯವರ ಕತೆಗಳನ್ನು; ಬಿ. ಚಂದ್ರೇಗೌಡರ ಅಂಕಣಗಳನ್ನು ಓದುವಾಗ, ಆಯಾ ಲೇಖಕರ ಸೀಮೆಯ ಜನಬದುಕು ಮತ್ತು ಸಂಸ್ಕೃತಿಗಳು, ಅಲ್ಲಿನ ಭಾಷೆಯ ಬಾಗುಬಳುಕುಗಳ ಮೂಲಕ ಪ್ರಕಟವಾಗುವುದನ್ನು ಗಮನಿಸಬಹುದು. ಕನ್ನಡವು ಸಾಂಸ್ಕೃತಿಕವಾಗಿ ಏಕರೂಪಿಯಲ್ಲ. ಅದಕ್ಕೆ ಬಹರೂಪಿಯಾದ ಪ್ರಾದೇಶಿಕ ಒಳಸ್ತರಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ವಿಭಿನ್ನ ಸೀಮೆಯ ಜೀವಂತ ಭಾಷೆಯನ್ನು ದುಡಿಸಿಕೊಳ್ಳಬಲ್ಲ, ಸಂಸ್ಕೃತಿಯನ್ನು ಸೃಜನಶೀಲವಾಗಿ ಮರುಸೃಷ್ಟಿಸಿ ಕೊಡಬಲ್ಲ ಕಥನಗಳು ಎಲ್ಲ ಮೂಲೆಗಳಿಂದಲೂ ಮೂಡಬೇಕಿದೆ. ತರೀಕೆರೆಯ ಸೀಮೆಯ ಕನ್ನಡ ಮತ್ತು (ಹೈದರಾಬಾದ್-ಲಖನೊ-ಬಿಜಾಪುರದ ಉರ್ದುವಿಗಿಂತ ವಿಶಿಷ್ಟವಾಗಿರುವ) ಉರ್ದುವಿನಲ್ಲೂ ಇದು ಸಂಭವಿಸಬೇಕು. ಅದನ್ನು ಮುಂಬರುವ ಯಾವುದೊ ಒಂದು ಪ್ರತಿಭೆ ಸಾಕಾರಗೊಳಿಸಬಹುದು ಎಂದು ಆಶಿಸುವೆ.

ಆದರೆ ಕತೆ-ಕಾದಂಬರಿ ಬರೆಯಲಾಗದ ನಾನು, ನಮ್ಮ ಸೀಮೆಗೆ ಹೋದರೆ ಜನರಾಡುವ ಭಾಷೆಯನ್ನು ಸಂಗೀತದ ಹಾಗೆ ಆಸಕ್ತಿಯಿಂದ ಪ್ರೀತಿಯಿಂದ ಆಲಿಸುತ್ತೇನೆ. ಅದು ನನ್ನ ಬಾಲ್ಯದ ಶಬ್ದಕೋಶವನ್ನೂ ವಾಕ್ಯರಚನೆಯನ್ನೂ ದನಿಯಲ್ಲಿರುವ ಕಾಕನ್ನೂ ಸಜೀವಗೊಳಿಸುತ್ತದೆ; ಆಗ ತುಂಗಭದ್ರೆಯ ಬಾಗಿನ ತೆಗೆದುಕೊಂಡು ಭದ್ರೆಗೆ ಅರ್ಪಿಸಲು ಹೋದಂತೆ ಆನಂದವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...