ಕೊರೊನಾ ನಡುವೆಯೇ ಇರುಳಿಗ ಬುಡಕಟ್ಟು ಸಮುದಾಯದ ಮೇಲೆ ಅರಣ್ಯ ಇಲಾಖೆ ದಾಳಿ: ಗುಡಿಸಲುಗಳ ಧ್ವಂಸ

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಮೊದಲೇ ಸಂಕಷ್ಟದಲ್ಲಿದ್ದ ಈ ಬುಡಕಟ್ಟು ಜನರ ಮೇಲೆ ಅರಣ್ಯ ಇಲಾಖೆಯ ದಾಳಿಯಿಂದ ಅಲ್ಲಿನ ಜನತೆ ದಿಕ್ಕೆಟ್ಟಿದ್ದಾರೆ.

ಕೊರೊನಾ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿದೆ. ಈ ಸಂದರ್ಭದಲ್ಲಿ ಪೂರ್ವ ತಯಾರಿ ಇಲ್ಲದ ಕಾರಣಕ್ಕೆ ಬಹಳಷ್ಟು ಜನಕ್ಕೆ ಅನ್ನ, ನೀರು, ವಸತಿ ಇಲ್ಲದೇ ಪರಿತಪಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ರಾಮನಗರ ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳ ಅಮಾನವೀಯ ವರ್ತನೆ ಮಿತಿಮೀರಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯ ಪ್ರದೇಶದ ಬುಡಗಯ್ಯನ ದೊಡ್ಡಿ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯದ ಹಲವಾರು ಕುಟುಂಬಗಳು ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ಭೂಮಿ ಮತ್ತು ವಸತಿಗಾಗಿ ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಿವೆ. ಅಂತಹ ಕುಟುಂಬಗಳು ಲಾಕ್‌ಡೌನ್‌ ಕಾರಣಕ್ಕಾಗಿ ಅಹೋರಾತ್ರಿ ಧರಣಿ ನಿಲ್ಲಿಸಿದ್ದರು. ಇಂತಹ ಸಮಯಕ್ಕಾಗಿ ಕಾದು ಕುಳಿತಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಮುಂಜಾನೆ ದಾಳಿ ಮಾಡಿ ಗುಡಿಸಲುಗಳನ್ನು ಧ್ವಂಸಗೊಳಿಸಿರುವ ದುರ್ಘಟನೆ ಜರುಗಿದೆ.

ವಿಡಿಯೋ ನೋಡಿ.

ಇರುಳಿಗ ಬುಡಕಟ್ಟು ಸಮುದಾಯದ ಮೇಲೆ ಅರಣ್ಯ ಇಲಾಖೆ ದಾಳಿ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯ ಪ್ರದೇಶದ ಬುಡಗಯ್ಯನ ದೊಡ್ಡಿ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಸಮುದಾಯದ ಹಲವಾರು ಕುಟುಂಬಗಳು ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡು ಭೂಮಿ ಮತ್ತು ವಸತಿಗಾಗಿ ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಿವೆ. ಅಂತಹ ಕುಟುಂಬಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೇಳೆ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಗುಡಿಸಲುಗಳನ್ನು ಧ್ವಂಸಗೊಳಿಸಿರುವ ದುರ್ಘಟನೆ ಜರುಗಿದೆ.

Posted by Naanu Gauri on Wednesday, April 1, 2020

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಮೊದಲೇ ಸಂಕಷ್ಟದಲ್ಲಿದ್ದ ಈ ಬುಡಕಟ್ಟು ಜನರ ಮೇಲೆ ಅರಣ್ಯ ಇಲಾಖೆಯ ದಾಳಿಯಿಂದ ಅಲ್ಲಿನ ಜನತೆ ದಿಕ್ಕೆಟ್ಟಿದ್ದಾರೆ. ಹಲವಾರು ವರ್ಷಗಳಿಂದ ತಮಗೆ ಭೂಮಿ, ವಸತಿ ಬೇಕೆಂದು ಹೋರಾಟ ಮಾಡುತ್ತಿರುವವರನ್ನು ಏಕಾಏಕಿ ಒಕ್ಕಲೆಬ್ಬಿಸಿದರೆ ತಮ್ಮ ಜೀವನಕ್ಕೆ ಗತಿಯೇನು ಎಂದು ವಾದಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ದಾಳಿಗೆ ಕಾರಣವೇನು?

ಅರಣ್ಯ ಇಲಾಖೆಯು ಪ್ರಧಾನವಾಗಿ ಈ ಜನರು ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮನೆಕಟ್ಟಲು, ಇತರ ಕೃಷಿ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಅವರು ಅರಣ್ಯ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಾರೆ.

ಆದರೆ ಆ ಜನರಿಗೆ ಅರಣ್ಯ ಹಕ್ಕು ಕಾಯ್ದೆಯ ಬೆಂಬಲವಿದೆ..

ಈ ಕುರಿತು ನಾನುಗೌರಿ.ಕಾಂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್‌ರವರನ್ನು ಮಾತನಾಡಿಸಿತು. ಅವರು “ಅರಣ್ಯ ಹಕ್ಕು ಕಾಯ್ದೆಯಲ್ಲಿ ಆದಿವಾಸಿಗಳು ಮತ್ತು ಇತರ ಪಾರಂಪರಿಕ ಅರಣ್ಯ ಹಕ್ಕುದಾರರು ಅಂತ ಇದೆ. ಅಂದರೆ ಯಾವುದಾದರೂ ಸಮುದಾಯ ಅಲ್ಲಿ ಮೂರು ತಲೆಮಾರು ವಾಸಿಸಿದ್ದರೆ ಅವರಿಗೆ ಅಲ್ಲಿ ವಾಸಿಸಲು ಹಕ್ಕು ಸಿಗುತ್ತದೆ. ಇದನ್ನು ಬಳಸಿ ಹಲವಾರು ಜನರಿಗೆ ಭೂಮಿ ಕೊಟ್ಟಿರುವ ನೂರಾರು ಉದಾಹರಣೆಗಳಿವೆ. ಕಾಗೋಡು ತಿಮ್ಮಪ್ಪ ಮತ್ತು ಡಿ.ಕೆ ಶಿವಕುಮಾರ್‌ ಈ ರೀತಿ ಹಲವರಿಗೆ ಭೂಮಿ ಕೊಡಿಸಿದ್ದಾರೆ. ಇದೇ ಮಾದರಿಯಲ್ಲಿ ಈ ಇರುಳಿಗ ಜನರಿಗೆ ಭೂಮಿ ನೀಡಬಹುದಾಗಿದೆ. ಆದರೆ ಅರಣ್ಯ ಇಲಾಖೆಯವರು ಸರಿಯಾಗಿ ಅರಣ್ಯ ಹಕ್ಕು ಕಾಯ್ದೆಯ ನಿಯಮಗಳನ್ನು ಓದಿಕೊಳ್ಳದೇ ಈ ಕೃತ್ಯ ಎಸಗುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಮೀಸಲು ಅರಣ್ಯವೇ ಆಗಿದ್ದರೂ ಸಹ ಆದಿವಾಸಿಗಳಾಗಿದ್ದರೆ ಆ ಕಾಡಿನ ಮೇಲೆ ಅವರಿಗೆ ಹಕ್ಕು ಇರುತ್ತದೆ. ಅವರ ಮರಗಳು, ವಾಸವಿದ್ದ ಮನೆಯ ಗೋಡೆ, ಅವರ ದೈವದ ದಾಖಲೆಗಳಿದ್ದರೆ ಸಾಕು. ಅವರಿಗೆ ಅಲ್ಲಿನ ಹಣ್ಣು ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುವ ಹಕ್ಕು ಸಹ ಇದೆ. ಕಾಡಿನ ಮೇಲ್ಮೆಗೆ ಯಾವುದೇ ರೀತಿ ಬದಲಾವಣೆ ಮಾಡದೇ ಅದನ್ನು ಉಪಯೋಗಿಸುವ ಕಾನೂನಾತ್ಮಕ ಹಕ್ಕು ಇದೆ. ಆದರೆ ಅರಣ್ಯ ಅಧಿಕಾರಿಗಳು ಬಡಜನರ ವಿರುದ್ಧದ ನಿಲುವಿನಿಂದಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಸಿರಿಮನೆ ನಾಗರಾಜ್‌ ಆರೋಪಿಸಿದ್ದಾರೆ.

ಈಗಿನ ಅರಣ್ಯ ಇಲಾಖೆಯ ಈ ಕ್ರಮದಿಂದಾಗಿ ಅಲ್ಲಿನ ಬಡಜನರು ಬೀದಿಪಾಲಾಗಿದ್ದು ಗೋಳಾಡುತ್ತಿದ್ದಾರೆ. ಮಹಿಳೆಯರು ಮಕ್ಕಳು ಬೀದಿಗೆ ಬಿದ್ದಿದ್ದು ಹೋರಾಟಕ್ಕೆ ಅಣಿಯಾಗಿದ್ದಾರೆ.


ಇದನ್ನೂ ಓದಿ: ಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here