HomeಎಕಾನಮಿYES ಬ್ಯಾಂಕಿನ ಒಟ್ಟಾರೆ ನಷ್ಟ ಎಷ್ಟು? ಕಾರಣವೇನು? ಅದರ ಹಿಂದೆ ಯಾರಿದ್ದಾರೆ?

YES ಬ್ಯಾಂಕಿನ ಒಟ್ಟಾರೆ ನಷ್ಟ ಎಷ್ಟು? ಕಾರಣವೇನು? ಅದರ ಹಿಂದೆ ಯಾರಿದ್ದಾರೆ?

ಎಲ್ಲಾ ಸಾಲಗಾರರು ಉದ್ದೇಶಪೂರ್ವಕ ಸುಸ್ಥೀದಾರರಾಗಿರುವುದು YES ಬ್ಯಾಂಕ್ ನಷ್ಟಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

- Advertisement -
- Advertisement -

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬೆನ್ನಿಗೆ ಇದೀಗ ದೇಶದ ಮತ್ತೊಂದು ಸಾರ್ವಜನಿಕ ವಲಯದ ಪ್ರತಿಷ್ಠಿತ YES ಬ್ಯಾಂಕ್ ಸಹ ದಿವಾಳಿಯಾಗಿದೆ. ಪರಿಣಾಮ ಮಾರ್ಚ್ 05 ರಿಂದ 30 ದಿನದವರೆಗೆ ತಾತ್ಕಾಲಿಕವಾಗಿ ತನ್ನ ಸೇವೆಯನ್ನು ನಿಲ್ಲಿಸಿದೆ. ಈ ಬ್ಯಾಂಕ್‌ನಲ್ಲಿ ಹಣ ಹೂಡಿದ ಹೂಡಿಕೆದಾರರು ಮತ್ತು ಮಧ್ಯಮ ವರ್ಗದ ಠೇವಣಿದಾರರು ಇದೀಗ ದಿಕ್ಕು ತೋಚದಂತೆ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. Medical Emergency ಸೇರಿದಂತೆ ಅನೇಕ ಅವಶ್ಯಕತೆಗಳಿಗೆ ಹಣ ತೆಗೆದುಕೊಳ್ಳಲು ಸಾಧ್ಯವಾಗದೆ ಕೆಲವರು ಬ್ಯಾಂಕ್ ಬಾಗಿಲಲ್ಲಿ ನಿಂತು ಗೋಳಾಡುತ್ತಿರುವ ಕೆಲವು ದೃಶ್ಯಗಳು ಎಂಥವರ ಕಣ್ಣಾಲಿಗಳನ್ನೂ ತೇವಗೊಳಿಸದೆ ಇರದು.

ಕಳೆದ ಎರಡು-ಮೂರು ವರ್ಷಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ವಿಲೀನಗೊಳ್ಳುತ್ತಿರುವುದು ಮತ್ತು ನಷ್ಟದಿಂದ ಬಾಗಿಲು ಎಳೆದುಕೊಳ್ಳುತ್ತಿರುವುದು ಹೊಸದೇನಲ್ಲ. ಭಾಗಶಃ ಹೀಗೆ ನಷ್ಟದಿಂದ ಬಾಗಿಲು ಎಳೆದುಕೊಳ್ಳುತ್ತಿರುವ ಬ್ಯಾಂಕುಗಳ ಪಟ್ಟಿಯಲ್ಲಿ ಯಸ್ ಬ್ಯಾಂಕ್ ಮೊದಲನೇಯದಲ್ಲ ಭಾಗಶಃ ಕೊನೆಯದೂ ಅಲ್ಲವೇನೋ?

2004ರಲ್ಲಿ ರಾಣಾ ಕಪೂರ್ ಎಂಬ ವ್ಯಕ್ತಿಯಿಂದ ಸ್ಥಾಪನೆಯಾದ ಈ ಯಸ್ ಬ್ಯಾಂಕ್ ಕಳೆದ 16 ವರ್ಷದಲ್ಲಿ ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡುವ ಟಾಪ್ 5 ಬ್ಯಾಂಕುಗಳ ಲಿಸ್ಟ್ ನಲ್ಲಿ ಈ ಬ್ಯಾಂಕ್ ಸಹ ಸ್ಥಾನ ಪಡೆದಿತ್ತು. ದೇಶದಾದ್ಯಂತ ಸುಮಾರು 1120 ಶಾಖೆಗಳನ್ನೂ ಹೊಂದಿತ್ತು. ಸ್ವತಃ ಕೇಂದ್ರ ಸರ್ಕಾರ ರಾಣಾ ಕಪೂರ್‌ಗೆ ಅತ್ಯುತ್ತಮ ಬ್ಯಾಂಕರ್ ಪ್ರಶಸ್ತಿಯನ್ನೂ ನೀಡಿ ಗೌರವಿಸಿತ್ತು.

ಆದರೆ, ಇದೇ YES ಬ್ಯಾಂಕ್ ಇಂದು ಸಾವಿರಾರು ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಪರಿಣಾಮ ಭಾರತೀಯ ರಿಸರ್ವ್ ಬ್ಯಾಂಕ್ ಸೆಕ್ಷನ್ 45ರ ಅಡಿಯಲ್ಲಿ YES ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾ ಮಾಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಅಲ್ಲದೆ, ಬ್ಯಾಂಕಿನ ಪ್ರಸ್ತುತ ಸ್ಥಿತಿಯನ್ನು ಸುಧಾರಿಸಲು ಪ್ಯಾಕೇಜ್ ಸಹ ಬಿಡುಗಡೆ ಮಾಡಿದೆ.

ಅಸಲಿಗೆ YES ಬ್ಯಾಂಕ್ ಈ ಪ್ರಮಾಣದ ನಷ್ಟ ಅನುಭವಿಸಲು ಕಾರಣ ಏನು ಮತ್ತು ಯಾರು? ಎಂಬ ಒಂದು ಸರಳ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಈ ಬ್ಯಾಂಕ್ ಕುಸಿತದ ಹಾದಿಯ ನಿಜವಾದ ಹಗರಣವೊಂದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಂದಹಾಗೆ ಈ ಹಗರಣ ಬೊಟ್ಟು ಮಾಡುವುದು ಯಾರನ್ನು ಗೊತ್ತಾ? ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

YES ಬ್ಯಾಂಕಿನ ಒಟ್ಟಾರೆ ನಷ್ಟ ಎಷ್ಟು?

ಆರಂಭದ ದಿನಗಳಲ್ಲಿ ದೇಶದ ಖಾಸಗಿ ಬ್ಯಾಂಕುಗಳ ಸಾಲಿನಲ್ಲಿ HDFC ನಂತರ ಅಧಿಕ ಲಾಭ ಗಳಿಸುತ್ತಿರುವ ಹಾಗೂ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಬ್ಯಾಂಕ್ ಎಂಬ ಪ್ರಶಂಶೆಗೆ ಪಾತ್ರವಾಗಿದ್ದ YES ಬ್ಯಾಂಕ್ ಪ್ರಸ್ತುತ 2.41 ಲಕ್ಷ ಕೋಟಿ ನಷ್ಟದ ಸುಳಿಯಲ್ಲಿದೆ ಎನ್ನುತ್ತಿವೆ RBI ವರದಿಗಳು.

ಮಾರ್ಚ್ 31, 2017ರಿಂದ ಮಾರ್ಚ್ 31, 2019ರ ನಡುವೆ ಯಸ್ ಬ್ಯಾಂಕ್ ಸಾಲದ ಪ್ರಮಾಣ ಬರೋಬ್ಬರಿ ಶೇ.80 ರಷ್ಟು ಏರಿಕೆ ಕಂಡಿದೆ. 2017ರ ಹಣಕಾಸು ವರ್ಷದಲ್ಲಿ ಯಸ್ ಬ್ಯಾಂಕಿನ ಸಾಲದ ಪ್ರಮಾಣ 1.32 ಲಕ್ಷ ಕೋಟಿ ಇತ್ತು. ಆದರೆ, 2019ರ ಹಣಕಾಸು ವರ್ಷಕ್ಕೆ ಈ ಪ್ರಮಾಣ 2.41 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ 2 ವರ್ಷದ ಅವಧಿಯಲ್ಲಿ ಬ್ಯಾಂಕಿಗಾಗಿರುವ ನಷ್ಟ ಸುಮಾರು 1.9 ಲಕ್ಷ ಕೋಟಿ.

ಒಂದೆಡೆ ದೇಶದ ಆರ್ಥಿಕತೆಯೇ ಕುಸಿಯುತ್ತಿರುವಾಗ, ಖಾಸಗಿ ಹೂಡಿಕೆಯಲ್ಲೂ ಆಶಾದಾಯಕ ಬೆಳವಣಿಗೆ ಇಲ್ಲದ ಇಂತಹ ಸಂದರ್ಭದಲ್ಲಿ ಈ ಪ್ರಮಾಣದ ನಷ್ಟ ಪ್ರಮಾದವೇ ಸರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ಪ್ರಮಾಣದ ನಷ್ಟ ಏಕೆ ಗೊತ್ತಾ?

YES ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಪ್ರಧಾನಿ ಮೋದಿಯ ಪ್ರಚಂಡ ಭಕ್ತ. ಮೋದಿಯ ಡೀಮಾನಿಟೈಸೇಷನ್ ಒಂದು ಕ್ರಾಂತಿಕಾರಿ ನಡೆ ಎಂದು ಹಾಡಿ ಹೊಗಳಿದವರಲ್ಲಿ ಮೊದಲಿಗ. ಇದೇ ಕಾರಣಕ್ಕೆ ಈ ಬ್ಯಾಂಕ್ ನರೇಂದ್ರ ಮೋದಿ ಅವರ ಆಪ್ತ ವ್ಯವಹಾರಸ್ಥ ಅನಿಲ್ ಅಂಬಾನಿಗೆ ಸಾಲ ಕೊಡಲೇಬೇಕಿತ್ತೇನೋ?

ಅಂದಹಾಗೆ YES ಬ್ಯಾಂಕ್ ಕಳೆದ 16 ವರ್ಷದ ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರಿಗೆ, ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ಸಾಲ ಸೌಲಭ್ಯ ಒದಗಿಸಿಯೇ ಇಲ್ಲವೇನೋ? ಇವರು ಸಾಲ ನೀಡಿದ್ದು ಕೇವಲ ಅಂಬಾನಿ ಯಂತಹ ದೊಡ್ಡ ದೊಡ್ಡ ಕುಳಗಳಿಗೆ ಎನ್ನುತ್ತಿವೆ ಅವರ ಸಾಲದ ಬಾಬ್ತಿನ ಲೆಕ್ಕ.

YES ಬ್ಯಾಂಕಿನಲ್ಲಿ ಭಾರೀ ಮೊತ್ತದ ಸಾಲ ಪಡೆದು ಇಡೀ ಬ್ಯಾಂಕನ್ನೇ ಮುಂಡಾಮೋಚಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರೆ ಪ್ರಧಾನಿ ನರೇಂದ್ರ ಮೋದಿಯಿಂದ ರಾಫೇಲ್‌ ಡೀಲ್ ಪಡೆದಿರುವ ಉದ್ಯಮಿ ಅನಿಲ್ ಅಂಬಾನಿ. ಈಗಾಗಲೇ ಸಾವಿರಾರು ಕೋಟಿ ಸಾಲವನ್ನು ಮೈಮೇಲೆ ಎಳೆದುಕೊಂಡಿರುವ ಅನಿಲ್ ಅಂಬಾನಿ, YES ಬ್ಯಾಂಕ್‌ನಿಂದಲೂ ಅಪಾರ ಪ್ರಮಾಣದ ಹಣ ಸಾಲವಾಗಿ ಪಡೆದಿದ್ದಾರೆ. ಆದರೆ, ಈವರೆಗೆ ಆ ಹಣವನ್ನು ಹಿಂದಿರುಗಿಸಿಲ್ಲ ಎನ್ನಲಾಗುತ್ತಿದೆ. ಆದರೆ, ಅವರು ಸಾಲವಾಗಿ ಪಡೆದ ಹಣದ ಪ್ರಮಾಣ ಎಷ್ಟು ಎಂದು ಈವರೆಗೆ ಮಾಹಿತಿ ನೀಡಿಲ್ಲ.

ಇದಲ್ಲದೆ, ದಿವಾನ್ ಹೌಸಿಂಗ್ ಫೈನಾನ್ಸ್, ರಿಲಾಯನ್ಸ್ ಇನ್ಫ್ರಾಸ್ಟ್ರೆಕ್ಚರ್ ಸೇರಿದಂತೆ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಸಾವಿರಾರು ಕೋಟಿ ಸಾಲವಾಗಿ ನೀಡಲಾಗಿದೆ. ಆದರೆ, ಸಾಲವಾಗಿ ನೀಡಿದ ಹಣ ಬ್ಯಾಂಕಿಗೆ ಹಿಂದುರುಗಿ ಬಂದಿಲ್ಲ. ಎಲ್ಲಾ ಸಾಲಗಾರರು ಉದ್ದೇಶಪೂರ್ವಕ ಸುಸ್ಥೀದಾರರಾಗಿರುವುದು YES ಬ್ಯಾಂಕ್ ನಷ್ಟಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಲ್ಲದೆ, ಹಣವನ್ನು ಹೀಗೆ ಸಾಲವಾಗಿ ನೀಡುವಾಗ ಬ್ಯಾಂಕಿನ ಎಲ್ಲಾ ನೀತಿ ನಿಯಮಗಳನ್ನೂ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.

ಹೀಗೆ ಬ್ಯಾಂಕ್ ಠೇವಣಿಗಿಂತ ಅಧಿಕವಾಗಿ ಸಾಲ ನೀಡಿದ್ದು ಮತ್ತು ಈ ಸಾಲದ ಹಣವನ್ನು ವಸೂಲಿ ಮಾಡಲು ಸಾಧ್ಯವಾಗದೆ ಇರುವುದೇ YES ಬ್ಯಾಂಕ್ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರಸ್ತುತ YES ಬ್ಯಾಂಕ್ ಪರಿಸ್ಥಿತಿ ಹೇಗಾಗಿದೆ ಎಂದರೆ ಠೇವಣಿದಾರರಿಗೆ ಅವರ ಹಣವನ್ನೂ ಸಂದಾಯ ಮಾಡಲೂ ಸಹ ಆಡಳಿತ ಮಂಡಳಿಯ ಬಳಿ ಹಣವಿಲ್ಲದೆ ಇಡೀ ಬ್ಯಾಂಕ್ ವ್ಯವಸ್ಥೆಯೇ ದಿವಾಳಿ ಎದ್ದುಹೋಗಿದೆ ಎನ್ನಲಾಗುತ್ತಿದೆ.

ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಇಷ್ಟು ದಿನ ಕಣ್ಣು ಮುಚ್ಚಿ ಕುಳಿತಿತ್ತಾ?

YES ಬ್ಯಾಂಕ್ ದಿವಾಳಿ ಎದ್ದಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಮಧ್ಯಪ್ರವೇಶಿಸಿರುವ ರಿಸರ್ವ್ ಬ್ಯಾಂಕ್ YES ಬ್ಯಾಂಕಿನ ಆಡಳಿತ ಮಂಡಳಿಯನ್ನು ವಜಾ ಮಾಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಹೀಗೊಂದು ತತಕ್ಷಣದ ನಾಟಕವನ್ನು ಅರಂಗೇಟ್ರಂ ಮಾಡಲಾಗಿದೆ ಎಂದರೂ ತಪ್ಪಾಗಲಾರದೇನೋ?

ಏಕೆಂದರೆ ಭಾರತದ ನೂತನ ಆರ್ಥಿಕ ನೀತಿಯ ಅನ್ವಯ ಓರ್ವ ವ್ಯಕ್ತಿ ಆತನ ಅಧಿಕೃತ ಬ್ಯಾಂಕ್ ಖಾತೆಯಿಂದ 1 ಲಕ್ಷಕ್ಕಿಂತ ಅಧಿಕ ಹಣ ವಹಿವಾಟು ನಡೆಸಿದರೆ ಅದು ನೇರವಾಗಿ ಆರ್‌ಬಿಐನ ಗಮನಕ್ಕೆ ಬರುತ್ತದೆ. ಹೀಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕಿಂಗ್ ಹಣಕಾಸು ವಹಿವಾಟಿನ ಮೇಲೂ ರಿಸರ್ವ್ ಬ್ಯಾಂಕಿನ ನೇರ ನಿಗಾ ಇದ್ದೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ YES ಬ್ಯಾಂಕ್ ಹೀಗೆ ಕಾನೂನು ಬಾಹಿರವಾಗಿ ಕಾರ್ಪೊರೇಟ್ ಕುಳಗಳಿಗೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಸಾವಿರಾರು ಕೋಟಿ ಹಣವನ್ನು ಸಾಲವನ್ನಾಗಿ ನೀಡಿದ್ದು ರಿಸರ್ವ್ ಬ್ಯಾಂಕ್ ಗಮನಕ್ಕೆ ಬರಲಿಲ್ಲವೇ? ಎಂಬುದು ಪ್ರಶ್ನೆ.

ಇದು ನಿಜಕ್ಕೂ ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಗಮನಕ್ಕೆ ಬರಲಿಲ್ವಾ? ಅಥವಾ ಅವರಿಗೆ ಗೊತ್ತಿದ್ದೇ ಈ ಎಲ್ಲಾ ಅಕ್ರಮಗಳು ನಡೆದಿವೆಯಾ? ಅಥವಾ ಈ ವ್ಯವಹಾರಗಳ ಕುರಿತು ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಚಕಾರ ಎತ್ತದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆಯಾ? ಹಾಗಾದರೆ ಬ್ಯಾಂಕಿಂಗ್ ವ್ಯವಸ್ಥೆಯ ಇಷ್ಟು ದೊಡ್ಡ ಹಗರಣದಲ್ಲಿ ನಿಜವಾದ ಕಳ್ಳ ಯಾರು? ಆತನನ್ನು ಜನರ ಮುಂದೆ ನಿಲ್ಲಿಸುವವರು ಯಾರು? ಎಂದು ಕಟುವಾಗಿ ಪ್ರಶ್ನೆ ಮಾಡುತ್ತಾರೆ ಅಖಿಲ ಭಾರತ ಬ್ಯಾಂಕಿಂಗ್ ಯನಿಯನ್ ರಾಜ್ಯ ಸಂಘಟನಾ ಅಧ್ಯಕ್ಷ ಹೆಚ್. ವಸಂತ್ ರಾಯ್.

“ಸಾಮಾನ್ಯ ರೈತ 10 ಸಾವಿರ ರೂಪಾಯಿ ಸಾಲವನ್ನು ಸರಿಯಾಗಿ ಪಾವತಿ ಮಾಡದಿದ್ದರೂ ಸಹ ಬ್ಯಾಂಕ್ ಅಧಿಕಾರಿಗಳು ಆತನ ಮನೆಯನ್ನು ಜಪ್ತಿ ಮಾಡಲು ಮುಂದಾಗುತ್ತಾರೆ. ಆತನನ್ನು ಸಾವಿನ ದವಡೆಗೇ ದೂಡುತ್ತಾರೆ. ಆದರೆ, ಇಂತಹ ಕಾರ್ಪೊರೇಟ್ ಕುಳಗಳಿಂದ ಸಾಲವನ್ನು ಹಿಂಪಡೆಯಲು ಯಾವ ಸರ್ಕಾರ ಮತ್ತು ಬ್ಯಾಂಕುಗಳಿಂದಲೂ ಸಾಧ್ಯವಾಗಿಲ್ಲ ಏಕೆ?

ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೂ ಕಾರ್ಪೊರೇಟ್‌ ಕುಳಗಳು 10-20 ವರ್ಷ ಆ ಕೇಸ್ ನಡೆಸಿ ಖುಲಾಸೆಯಾಗುತ್ತಾರೆ. ಒಂದೆಡೆ ಜನರ ತೆರಿಗೆ ಹಣ ಹೀಗೆ ವ್ಯಯವಾದರೆ, ಮತ್ತೊಂದೆಡೆ ರೈತ ಚಿಲ್ಲರೆ ಕಾಸಿನ ಸಾಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾನೆ. ಇದು ನಿಜಕ್ಕೂ ನಾಗರಿಕ ಸಮಾಜ ಅರಗಿಸಿಕೊಳ್ಳಲು ಸಾಧ್ಯವಾಗದ ವಿಚಾರ” ಎಂದು ದೇಶದ ಆರ್ಥಿಕ ವ್ಯವಸ್ಥೆ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ ಹೆಚ್. ವಸಂತ್ ರಾಯ್.

ಈ ಎಲ್ಲಾ ಷಡ್ಯಂತ್ರಗಳ ಹಿಂದಿದೆಯಾ ಖಾಸಗೀಕರಣದ ಲಾಬಿ

ಭಾರತದಲ್ಲಿದ್ದ ಬಹುತೇಕ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನೂ ಕಳೆದ 6 ವರ್ಷದ ಅವಧಿಯಲ್ಲಿ ಖಾಸಗೀಕರಣ ಮಾಡಲಾಗಿದೆ. ದೇಶದ ರೈಲ್ವೆಯಿಂದ ರಕ್ಷಣಾ ವ್ಯವಸ್ಥೆವರೆಗೆ ಎಲ್ಲಾ ವಿಭಾಗದಲ್ಲೂ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ. ಖಾಸಗಿಯವರ ಜವಾಬ್ದಾರಿಗೆ ವಹಿಸಲಾಗಿದೆ. ಇನ್ನೂ ರಿಲಾಯನ್ಸ್ ಜಿಯೋ ಲಾಭ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಬಿಎಸ್ಎನ್ಎಲ್ ಅನ್ನು ಉದ್ದೇಶಪೂರ್ವಕವಾಗಿ ಸಾಲದ ಸುಳಿಗೆ ತಳ್ಳಿರುವುದು, 4 ಲಕ್ಷ ಉದ್ಯೋಗಿಗಳ ಕೆಲಸವನ್ನು ಕಸಿದುಕೊಂಡಿರುವುದು ಇಂದು ಗುಟ್ಟಾಗೇನು ಉಳಿದಿಲ್ಲ.

ಹೀಗೆ ದೇಶದ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನೂ ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಎದುರಿರುವ ಮುಂದಿನ ಆಯ್ಕೆ ದೇಶದ ಬ್ಯಾಕಿಂಗ್ ವ್ಯವಸ್ಥೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಕುರಿತು ಕೇಂದ್ರ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ, ಈ ನಿರ್ಧಾರದ ವಿರುದ್ಧ ಇಡೀ ದೇಶದ ಎಲ್ಲಾ ಬ್ಯಾಂಕ್ ನೌಕರರೂ ಉಗ್ರ ಹೋರಾಟ ರೂಪಿಸಿದ ಕಾರಣ ಬ್ಯಾಂಕ್ ವ್ಯವಸ್ಥೆ ಖಾಸಗೀಕರಣವಾಗುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

ಚಿತ್ರ ಕೃಪೆ: ದಿನೇಶ್‌ ಕುಕ್ಕಜಡ್ಕ

ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಉದ್ದೇಶದಿಂದಲೇ ಒಂದೊಂದೇ ಬ್ಯಾಂಕುಗಳನ್ನೂ ವಿಲೀನ ಮಾಡಲಾಗುತ್ತಿದೆ. ಹಾಗೂ ಕೆಲವು ಬ್ಯಾಂಕುಗಳನ್ನು ಆರ್‌ಬಿಐ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ಬಂಡವಾಳದ ಕೊರತೆಯ ಕಾರಣವನ್ನು ಮುಂದಿಟ್ಟು ಹೀಗೆ ಎಲ್ಲಾ ಬ್ಯಾಂಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರ, ಭವಿಷ್ಯದಲ್ಲಿ ಅದರ ನಿರ್ವಹಣೆಯನ್ನು ಖಾಸಗಿಗೆ ನೀಡಲಿದೆ ಎಂದು ಈಗಾಗಲೇ ದೇಶದಾದ್ಯಂತ ಅನೇಕ ಆರ್ಥಿಕ ವಿಶ್ಲೇಷಕರು ಬಹಿರಂಗವಾಗಿಯೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾತಂತ್ರ್ಯಾ ನಂತರದಲ್ಲಿ ಭಾರತ ನಿಜಕ್ಕೂ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗುವತ್ತಾ ಹೆಜ್ಜೆ ಇಟ್ಟಿದ್ದು 70ರ ದಶಕದ ಆರಂಭ ಕಾಲದಲ್ಲಿ. ಆ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಖಾಸಗಿ ಬ್ಯಾಂಕುಗಳು ನೂರಾರು ಕೋಟಿ ಲಾಭ ಮಾಡಿಕೊಳ್ಳುತ್ತಿದ್ದಾಗ 1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಏಕಾಏಕಿ ಎಲ್ಲಾ ಬ್ಯಾಂಕುಗಳನ್ನೂ ರಾಷ್ಟ್ರೀಕರಣಗೊಳಿಸಿ ಆದೇಶಿಸಿದರು. ನೋಡ ನೋಡುತ್ತಿದ್ದ ಖಾಸಗಿ ಕೈಲಿದ್ದ ಸರ್ಕಾರಿ ಬ್ಯಾಂಕುಗಳು ಸರ್ಕಾರಿ ವಲಯಕ್ಕೆ ಸೇರ್ಪಡೆಯಾಗಿತ್ತು.

ಪರಿಣಾಮ ಹಳ್ಳಿ ಹಳ್ಳಿಗೂ ದೇಶದ ಪ್ರತೀ ಮೂಲೆಗೂ ಜನರ ಬಳಿ ಬ್ಯಾಂಕಿಂಗ್ ವ್ಯವಸ್ಥೆ ತಲುಪಿತ್ತು. ಹೀಗಾಗಿ ಸರ್ಕಾರದ ಬೊಕ್ಕಸಕ್ಕೂ ಇದರಿಂದ ಅಪಾರ ಪ್ರಮಾಣದ ಲಾಭ ಸಂದಾಯವಾಗತೊಡಗಿತು. ನೋಡ ನೋಡುತ್ತಿದ್ದಂತೆ ಭಾರತ ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲೊಂದಾಗಿ ಅಭಿವೃದ್ಧಿ ಸಾಧಿಸಿತು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನ, ಹರಿಯಾಣ ಚುನಾವಣೆಯಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವರೆಗೆ ತಮ್ಮ ಪ್ರಚಾರ ಭಾಷಣದಲ್ಲಿ ಆಗಾಗ್ಗೆ ಬಳಸಿದ್ದ ಪದ ನಮ್ಮ ಮುಂದಿನ ಗುರಿ 5 ಟ್ರಿಲಿಯನ್ ಡಾಲರ್ ಎಂಬುದು.

ಆದರೆ, ಇದಕ್ಕೆ ವ್ಯತಿರೀಕ್ತವಾಗಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ತೀರಾ ಶೋಚನೀಯವಾಗಿದೆ. 5 ಟ್ರಿಲಿಯನ್ ಡಾಲರ್ ಕನಸು ಹಿಮ್ಮುಖವಾಗಿ ಚಲಿಸುತ್ತಿದೆ. ಇತಿಹಾಸ ಕಾಣದಷ್ಟು ನಿರುದ್ಯೋಗ ಹಾಗೂ ಬಡತನ ದೇಶದಲ್ಲಿ ತಾಂಡವವಾಡುತ್ತಿದೆ. ದೇಶದ ಜಿಡಿಪಿ ದರ ಶೇ.4.5ಕ್ಕಿಂತ ಕಡಿಮೆಯಾಗುತ್ತಿದೆ. ದೇಶದ ಸಾಲದ ಹೊರೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತಹ ವಿಶ್ವಶ್ರೇಷ್ಟ ಅರ್ಥಶಾಸ್ತ್ರಜ್ಞರೇ ಭಾರತೀಯರಿಗೆ ಇದಕ್ಕಿಂತ ಕೆಟ್ಟ ದಿನಗಳು ಇನ್ನೂ ಕಾದಿವೆ ಎಂದು ಸೂಚನೆ ನೀಡಿದ್ದಾರೆ. ಇಂತಹ ಸಂದಿಗ್ಥ ದಿನಗಳಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಹೀಗೆ ಸಾಲು ಸಾಲಾಗಿ ಬಾಗಿಲು ಎಳೆದುಕೊಳ್ಳುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕದ ಛಾಯೆಯನ್ನು ಸೃಷ್ಟಿಸಿರುವುದು ಸುಳ್ಳಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...