Homeಎಕಾನಮಿಹಣಕಾಸು ಆಯೋಗವು ಕೇಂದ್ರದ ವಿರುದ್ಧ ಕೇವಲ ಬೊಗಳಿದರೆ, ರಾಜ್ಯಗಳನ್ನು ಕಚ್ಚುತ್ತಿದೆ!

ಹಣಕಾಸು ಆಯೋಗವು ಕೇಂದ್ರದ ವಿರುದ್ಧ ಕೇವಲ ಬೊಗಳಿದರೆ, ರಾಜ್ಯಗಳನ್ನು ಕಚ್ಚುತ್ತಿದೆ!

- Advertisement -
- Advertisement -

ಕೇಂದ್ರ ಸರ್ಕಾರ ಮತ್ತು ದೇಶದೊಳಗಿನ ಎಲ್ಲ ರಾಜ್ಯ ಸರ್ಕಾರಗಳು ಒಟ್ಟಾಗಿ ಚರ್ಚಿಸಿ, ಒಬ್ಬರಿಗೊಬ್ಬರು ಸಹಕಾರದಿಂದ ರಾಜ್ಯಗಳ ಮತ್ತು ದೇಶದ ಹಿತಕ್ಕಾಗಿ ಎಲ್ಲರ ಸಾಮಾನ್ಯ ಸಮಸ್ಯೆಗಳು ಮತ್ತು ಅಗತ್ಯವಿರುವ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಒಂದಾಗಿ ನಿರ್ಧಾರಗಳನ್ನು ಕೈಗೊಳ್ಳುವುದನ್ನು ‘ಕೋ-ಆಪರೇಟಿವ್ ಫೆಡರಲಿಸಂ’ (Co-Operative Federalism) ಎನ್ನುತ್ತಾರೆ. ನಮ್ಮದೇ ಭಾಷೆಯಲ್ಲಿ ಸಹಕಾರ ತತ್ವದಡಿಯಲ್ಲಿ ಒಕ್ಕೂಟ ವ್ಯವಸ್ಥೆಯೆನ್ನಬಹುದು. ಇದೊಂದು ಅತ್ಯಂತ ಪರಿಣಾಮಕಾರಿಯಾದ ವ್ಯವಸ್ಥೆಯಾಗಿದ್ದು ಅತ್ಯಂತ ಸೂಕ್ಷ್ಮ ನಿರ್ಧಾರಗಳನ್ನು ಕೈಗೊಳ್ಳಲು ಬಹಳ ಉಪಯುಕ್ತವಾಗಿದೆ. ನಮ್ಮ ದೇಶದ ವ್ಯವಸ್ಥೆಯು ಇದನ್ನೇ ಪ್ರತಿಪಾದಿಸಿದರೂ ಕೇಂದ್ರ ಸರ್ಕಾರವು ಪ್ರಯೋಜಿತ ಯೋಜನೆಗಳ (Centrally Sponsored Schemes) ಮೂಲಕ ಅಂದರೆ, ಉದಾಹರಣೆಗೆ ಸ್ವಚ್ಛ ಭಾರತ, ನ್ಯಾಷನಲ್ ಹೆಲ್ತ್ ಮಿಷನ್, ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ, ಮಕ್ಕಳ ಕಲ್ಯಾಣ ಯೋಜನೆ ಮುಂತಾದ ಅನೇಕ ಯೋಜನೆಗಳ ಮೂಲಕ ರಾಜ್ಯಗಳ ಅಭಿವೃದ್ಧಿ ವಿಷಯದಲ್ಲೂ ಹೆಚ್ಚು-ಹೆಚ್ಚು ಪಾಲುದಾರರಾಗಲು ಬಯಸುತ್ತಿದೆ. 2013 ರಿಂದ ಕಾರ್ಯನಿರ್ವಹಿಸುತ್ತಿರುವ 14ನೇ ಹಣಕಾಸು ಆಯೋಗವು (Fourteen Finical Commission) ರಾಜ್ಯಗಳ ಪಾಲಿಗೆ ಸಿಗುತ್ತಿದ್ದ ತೆರಿಗೆ ಹಣವನ್ನು ಶೇ.42% ಏರಿಸಿರುವುದು ಕೇಂದ್ರಕ್ಕೆ ಸಮಾಧಾನವಿಲ್ಲ.

ರಾಷ್ಟ್ರಪತಿಗಳ ಅಂಕಿತದ ಮೇರೆಗೆ ಐದು ವರ್ಷವಿರುವ 15ನೇ ಹಣಕಾಸು ಆಯೋಗದ ಅವಧಿಯನ್ನು 30ನೇ ನವೆಂಬರ್ 2019ರ ಅವಧಿಗೆ ಹೆಚ್ಚಿಸಿದಾಗ Terms Of Reference (TOR) ಅನ್ನುವ ವಿಶೇಷ ನಿಮಗಳಿರುವ ಪಟ್ಟಿಗೆ “ರಕ್ಷಣೆ ಮತ್ತು ಆಂತರಿಕ ಭದ್ರತೆಗಾಗಿ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯತೆ ಇದ್ದು, ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಹೇಗೆ ರೂಪಿಸಬಹುದು ಎನ್ನುವುದನ್ನು ಪರಿಗಣಿಸಬೇಕು”. ಇಲ್ಲಿ ಗಮನಿಸಬೇಕಾದದ್ದು ಇದು ಅದಾಗಲೇ ಮೂಲ ಟಿ.ಓ.ಆರ್ (TOR) ನಲ್ಲಿರುವ ಕೇಂದ್ರದ ಬೇಡಿಕೆಯ ಪಟ್ಟಿಯಲ್ಲಿನ ಸೇನೆ, ಭದ್ರತೆ ಮತ್ತು ಆಂತರಿಕ ಭದ್ರತೆ, ರೈಲ್ವೇ ಮುಂತಾದವುಗಳ ಪಟ್ಟಿಗೆ ಹೆಚ್ಚಿನದಾಗಿ ಸೇರಿಸಿದಾಗಿದೆ.

ಹದಿನಾಲ್ಕನೇ ಹಣಕಾಸು ಆಯೋಗದ “ಡಿವಿಸಿಬಲ್ ಪೂಲ್” ಮೂಲಕ ದೊಡ್ಡ ಪ್ರಮಾಣದ ತೆರಿಗೆಯ ಮೊತ್ತವನ್ನು ಕೇಂದ್ರದೆಡೆಗೆ ಹರಿಸಿಕೊಳ್ಳುವ ಹುನ್ನಾರವಾಗಿದೆ. ಈ “ಡಿವಿಸಿಬಲ್ ಪೂಲ್” ಅಂದರೆ ಎಲ್ಲಾ ರಾಜ್ಯಗಳಿಂದ ಮತ್ತು ಕೇಂದ್ರದಿಂದ ಸಂಗ್ರಹವಾಗುವ ತೆರಿಗೆಯ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಂಚುವ ವಿತ್ತ ಸಂಸ್ಥೆಯಡಿಯಲ್ಲಿ ಬರುವ ಕಾಯ್ದೆ. ಈಗ ಕೇಂದ್ರದ ಕಣ್ಣೀರುವುದು ಅತೀ ಹೆಚ್ಚು ತೆರಿಗೆ ಕೇಂದ್ರದ ಪಾಲಾಗಬೇಕು ಅನ್ನುವ ವಿಚಾರದ ಮೇಲೆ. ಆದರೆ ವಿತ್ತ ಸಂಸ್ಥೆ ಅಥವಾ 14ನೇ ಹಣಕಾಸು ಆಯೋಗ ಇಂತಹದೊಂದು ಶಾಶ್ವತ ಹಣಕಾಸಿನ ವ್ಯವಸ್ಥೆಯನ್ನು ಒದಗಿಸಲು ರಾಜ್ಯಸರ್ಕಾರಗಳ ಮುಂದಿಟ್ಟು ಒಪ್ಪಿಗೆ ಪಡೆಯಬೇಕಾಗುತ್ತದೆ.

ಸಾಂವಿಧಾನಿಕ ಆದೇಶವೇನು
ದೇಶದ ಹಣಕಾಸು ಆಯೋಗ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲೇಖಗಳು (Terms Of Reference) ಸಂವಿಧಾನದ 280ನೇ ವಿಧಿಯಲ್ಲಿ ವಿವರಿಸಲ್ಪಟ್ಟಿದೆ. ಅದರ ಪ್ರಕಾರ ಕೇಂದ್ರದಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆಗಳ ಹಂಚಿಕೆ ಮತ್ತು ಪ್ರತಿ ರಾಜ್ಯಗಳ ಪಾಲು, ರಾಜ್ಯಗಳಿಗೆ ಒದಗಿಸಬೇಕಾದ ಅನುದಾನ ತತ್ವಗಳು ಆಯಾ ರಾಜ್ಯಗಳಲ್ಲಿನ ಹಳ್ಳಿಗಳ ಮತ್ತು ನಗರ, ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗಾಗಿ ಅಗತ್ಯವಿರುವ ಅನುದಾನದ ಕೊರತೆಯನ್ನು ಹೆಚ್ಚಿಸಲು ಆಯಾ ರಾಜ್ಯದ ಹಣಕಾಸು ಆಯೋಗ ನೀಡುವ ಶಿಫಾರಸ್ಸಿನ ಮೇಲೆ ನಿರ್ಧಾರವಾಗುತ್ತದೆ. “ಬೇರೆಲ್ಲ ವಿಚಾರಗಳು ಸಶಕ್ತ ಹಣಕಾಸಿನ ಪರಿಸ್ಥಿತಿಗೆ ಸಂಬಂಧಪಡುತ್ತದೆ.”

ಈ ಬೇರೆಲ್ಲ ವಿಚಾರಗಳ ಅಡಿಯಲ್ಲಿ ರಾಷ್ಟ್ರಪತಿಗಳ ಅಂಕಿತದೊಂದಿಗೆ ನೇಮಕವಾದ ಆಯೋಗಕ್ಕೆ ನೀಡಲಾದ ಟಿ.ಓ.ಆರ್ ನಲ್ಲಿ ನೀತಿ ನಿಯಮಗಳ ವಿಚಾರವನ್ನು ನಮೂದಿಸಲಾಗಿದೆ. ಆಯೋಗಕ್ಕೆ ನೀಡಿದ ಮೂಲ ಟಿ.ಓ.ಆರ್ (TOR)ನಲ್ಲಿ 2011ರ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಳ್ಳಲು ಹೇಳಿದ್ದರಿಂದ ಅನೇಕ ರಾಜ್ಯಗಳು ಅದನ್ನು ವಿರೋಧಿಸಿದ್ದವು. ಹಾಗಾಗಿ ಈ ವಿಚಾರದಲ್ಲಿ ಸಾಕಷ್ಟು ವಿವಾದ ಉಂಟಾಗಿತ್ತು. ಅದಾದ ಮೇಲೆ ಮತ್ತೆ ಸೇರಿಸಿದ ಮೂರು ನಿಯಮಗಳು ಮತ್ತೆ ವಿವಾದಕ್ಕೆ ಕಾರಣವಾಯಿತು. ಅವುಗಳೆಂದರೆ ಮೊದಲನೆಯದು ಆದಾಯ ಕೊರತೆಗಾಗಿ ಕೊಡುವ ಅನುದಾನವನ್ನು ಕೊಡಬೇಕೇ ಎಂದು ಪರಿಶೀಲಿಸುವುದು. ಎರಡನೆಯದು ಹದಿನಾಲ್ಕನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಗಣನೀಯವಾಗಿ ಸೇರಿಸಲಾದ ಹಂಚಿಕೆಯ ಪ್ರಮಾಣವನ್ನು ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ ನ್ಯೂ ಇಂಡಿಯಾ- 2022 ಎಂಬ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ಸೇರಿಸುವುದರ ಕುರಿತು ಪರಿಶೀಲಿಸಬೇಕು. ಕೊನೆಯದಾಗಿ ರಾಜ್ಯಗಳಿಗೆ ಅವುಗಳ ಕಾರ್ಯಕ್ಷಮತೆ ಮತ್ತು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಆಧಾರದ ಮೇಲೆ ಪ್ರೋತ್ಸಾಹಧನವನ್ನು ನೀಡುವ ಕುರಿತು ಆಯೋಗ ಪರಿಶೀಲಿಸಬೇಕು.

ಹಣಕಾಸಿನ ಕೊರತೆಯನ್ನು ನೀಗಿಸಲು ಕೊಡುವ ಅನುದಾನವು ಹಣಕಾಸು ಆಯೋಗ ಪಾಲಿಸಿಕೊಂಡು ಬಂದ ಅವಿಭಾಜ್ಯ ವಿಧಾನವಾಗಿದೆ. ಈಗ ಈ ಕುರಿತು 15ನೇ ಹಣಕಾಸು ಆಯೋಗಕ್ಕೆ ನಿರ್ದೇಶನ ನೀಡುವುದೆಂದರೆ ಅದರ ವಿಧಾನ ಬದಲಾಯಿಸಿಕೊಳ್ಳಿ ಅನ್ನುವುದಲ್ಲದೇ ಬೇರೇನೂ ಅಲ್ಲ. ಈ ಮೊದಲು ಹಣಕಾಸು ಆಯೋಗಕ್ಕೆ ಬೇರೆ ಬೇರೆ ನಿರ್ದೇಶನಗಳನ್ನು ನೀಡಿರುವ ನಿದರ್ಶನಗಳಿವೆ. ಉದಾಹರಣೆಗೆ 9ನೇ ಹಣಕಾಸು ಆಯೋಗಕ್ಕೆ ಸೂಚನೆಯ ಪ್ರಕಾರ ರಾಜ್ಯಗಳ ಆದಾಯ ಮತ್ತು ಖರ್ಚನ್ನು ಲೆಕ್ಕಹಾಕುವಾಗ ಪ್ರಾಮಾಣಿಕ ವಿಧಾನಗಳಿರಲಿ ಎನ್ನುವುದು. ಇದನ್ನು ಕೇರಳದ ಮುಖ್ಯಮಂತ್ರಿಗಳು ಖಡಾ ಖಂಡಿತವಾಗಿ ಬಹಿಷ್ಕರಿಸಿ ನೀವು ನಮೂದಿಸಿರುವ ನಿರ್ದೇಶನ ಅಸಮಾನತೆಯಿಂದ ಕೂಡಿದೆ ಮತ್ತು ಇದು ಕೇಂದ್ರಕ್ಕೆ ಅನ್ವಯವಾಗುವುದಿಲ್ಲ ಹಾಗಾಗಿ ನಾವು ಇದನ್ನು ವಿರೋಧಿಸುತ್ತೇವೆ ಎಂದು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಅದಾದ ನಂತರ 9ನೇ ಹಣಕಾಸು ಆಯೋಗದ ಅಧ್ಯಕ್ಷರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆರ್ಟಿಕಲ್ 280(4) ಮತ್ತು ಹಣಕಾಸು ಆಯೋಗದ ಕಾಯ್ದೆ ಪ್ರಕಾರ ನಾವು ಎಲ್ಲರಿಗೂ ಸರಿ ಎನಿಸುವ ವಿಧಾನವನ್ನು ಅನುಸರಿಸುತ್ತೇವೆ. ಅದು ರಾಜ್ಯಗಳು ಮತ್ತು ಕೇಂದ್ರ ಎರಡಕ್ಕೂ ಒಂದೇ ತೆರನಾದ ಹಾಗೂ ಸಮಾನವಾದ ನೀತಿಯಾಗಿರುತ್ತದೆ ಎಂದು ತಿಳಿಸಿದರು.

ಅಂದಹಾಗೆ ಮುಂಚಿನ ಆಯೋಗಗಳ ನೀತಿ ಹಾಗೂ ವಿಧಾನಗಳ ಹಂಚಿಕೆಯ ನಂತರದ ಅಂತರವನ್ನು ಪ್ರಾಮಾಣಿಕವಾಗಿ ತುಂಬುವ ಪ್ರಯತ್ನವಾಗಿ ಆದಾಯದ ಲೆಕ್ಕಪತ್ರದಲ್ಲಿ ರಾಜ್ಯಗಳ ಅನುದಾನವನ್ನು ಆರ್ಟಿಕಲ್ 275ರ ಪ್ರಕಾರ ಸರಿದೂಗಿಸುವುದಾಗಿತ್ತು. ಆದರೆ ಆದಾಯ ಕೊರತೆ ಸರಿದೂಗಿಸಲು ಅನುದಾನವೇ ಇಲ್ಲವಾದರೆ ಸರಿದೂಗಿಸುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಸ್ಪಷ್ಟ ಪಡಿಸಲಿಲ್ಲ. ಮುಂದುವರೆದು ಹೇಳುವುದಾದರೆ ಹೇಗೆ ಸರಿದೂಗಿಸಬೇಕು ಎನ್ನುವುದು ಸರಿದೂಗಿಸುವ ವಿಧಾನದ ಮೂಲಕ ಸ್ಪಷ್ಟಪಡಿಸುವುದು ಆಯೋಗದ ಜವಾಬ್ದಾರಿಯಾಗಿರುತ್ತದೆ.

ತೆರಿಗೆ ಹಂಚಿಕೆ
ಎರಡನೇ ವಿಚಾರದಲ್ಲಿ ಟಿ.ಓ.ಆರ್ (Terms Of Reference) ಮುಂಚೆ ಇದ್ದ ಆಯೋಗವು ಹೇಗೆ ತೆರಿಗೆ ಹಂಚಿಕೆಯನ್ನು ರಾಜ್ಯಗಳಿಗೆ ಹೆಚ್ಚಿಸಿದೆ ಮತ್ತು ಅದು ವಸ್ತುಸ್ಥಿತಿಗೆ ಹೇಗೆ ವಿರುದ್ಧವಾಗಿದೆ ಎನ್ನುವುದನ್ನು ಸೂಚಿಸಿ ಹಣಕಾಸು ಆಯೋಗಕ್ಕೆ ಶಿಫಾರಸ್ಸು ಮಾಡಲು ಪ್ರಯತ್ನಿಸುತ್ತಿದೆ. ಇನ್ನು ವಸ್ತುಸ್ಥಿತಿಯನ್ನು ವಿಶ್ಲೇಷಿಸುವುದಾದರೆ ಅದಕ್ಕೂ ಮುಂಚೆ ಇದ್ದ ಆಯೋಗಕ್ಕಿಂತ 14ನೇ ಹಣಕಾಸು ಆಯೋಗ ತನ್ನ ಮಿತಿಯಲ್ಲಿಯೇ ರಾಜ್ಯಗಳ ಪಾಲಿನ ತೆರಿಗೆಯನ್ನು ಕೊಂಚವೇ ಹೆಚ್ಚಿಸಿತ್ತು. 13ನೇ ಹಣಕಾಸು ಆಯೋಗ ಶೇಕಡಾ 32ರಷ್ಟು ತೆರಿಗೆ ಹಂಚಿಕೆಯನ್ನು ಶಿಫಾರಸ್ಸು ಮಾಡಿತ್ತು. ಇದು ಕೇವಲ ಯೋಜನೇತರ ಬೇಡಿಕೆಗಳನ್ನು ಪೂರೈಸಲು ಆಗಿತ್ತು. ಯೋಜನೆಗಳಿಗಾಗಿ ಶೇಕಡಾ 6.5 ತೆರಿಗೆ ಹಣವನ್ನು ಗಾಡ್ಗಿಲ್…ಸೂತ್ರದ ಪ್ರಕಾರ ಹಿಂದಿನ ಯೋಜನಾ ಆಯೋಗಕ್ಕೆ ಹಂಚಲಾಗಿತ್ತು.

14ನೇ ಹಣಕಾಸು ಆಯೋಗವು ಯೋಜನೆ ಹಾಗೂ ಯೋಜನೇತರ ಬೇಡಿಕೆಗಳನ್ನು ತೆರಿಗೆ ಹಂಚುವಾಗ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಇನ್ನು ಅದಕ್ಕೂ ಮೊದಲಿನ ಹಣಕಾಸು ಆಯೋಗ 1.5-2 ಶೇಕಡಾ ಮೊತ್ತವನ್ನು ಹಂಚಿಕೆಯ ನಿಧಿಯಿಂದ ಶಿಕ್ಷಣ, ಆರೋಗ್ಯ, ಪರಿಸರ, ಪೊಲೀಸ್ ಮತ್ತು ನ್ಯಾಯಾಂಗ ಈ ಕ್ಷೇತ್ರಗಳಿಗಾಗಿ ಪ್ರತ್ಯೇಕವಾಗಿ ಮೀಸಲಿಟ್ಟಿತ್ತು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಕೊಡುವ ಅನುದಾನವನ್ನು ಹೊರತುಪಡಿಸಿ ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿ ಲೆಕ್ಕಹಾಕಿದರೆ 13ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಗಳ ಪಾಲಿಗೆ ಶೇಕಡಾ 39ರಷ್ಟು ತೆರಿಗೆ ಹಂಚಿಕೆ ಆಗುತ್ತಿತ್ತು. 14ನೇ ಹಣಕಾಸು ಆಯೋಗ ಕೇವಲ ಶೇಕಡಾ 3ರಷ್ಟು ಹೆಚ್ಚಿಸಿ ಅದನ್ನು ಶೇಕಡಾ 42 ರಾಜ್ಯವಾರು ತೆರಿಗೆ ಹಂಚಿಕೆ ಮಾಡಿತ್ತು. ಇದು ಬಹಳ ಕನಿಷ್ಠ ಹೆಚ್ಚಳವೆನ್ನಬಹುದು.

ಆದರೆ ವಿಪರ್ಯಾಸವೆಂದರೆ ನಮ್ಮ ಒಕ್ಕೂಟ ಸರಕಾರ ಹದಿನಾಲ್ಕನೇ ಹಣಕಾಸು ಆಯೋಗದ ಶಿಫಾರಸ್ಸನ್ನು ಒಪ್ಪಿಕೊಂಡ ಬೆನ್ನಲ್ಲೇ ಕೇಂದ್ರ ಸಚಿವಾಲಯ ಸೇರಿ (Central Secretariat Service-CSS) ಯ ಬಲವರ್ಧನೆಗಾಗಿ ಮತ್ತು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎನ್ನುವ ಕಾರಣ ಕೊಟ್ಟು ಅದಕ್ಕಾಗಿ ಸೆಸ್ ಮತ್ತು ಸರ್ ಚಾರ್ಜ್‍ಗಳನ್ನು ಹೆಚ್ಚಿಸಿಕೊಳ್ಳುವ ಮುಖಾಂತರ ಈ ಶಿಫಾರಸ್ಸಿಗೆ ಸಡ್ಡು ಹೊಡೆಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೆಸ್ ಮತ್ತು ಸರ್ ಚಾರ್ಜ್ ತೆರಿಗೆಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವಂತಿಲ್ಲ.

ಕೊನೆಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಯೋಜನೆಯಡಿಯಲ್ಲಿ ‘ನ್ಯೂ ಇಂಡಿಯಾ- 2022’ ಈ ಕಾರ್ಯ ಯೋಜನೆಯ ಪೂರ್ವಭಾವಿಯಾಗಿ ಕೇಂದ್ರವು ತನ್ನ ಇತಿಮಿತಿಯೊಳಗೆ ಸಂಪನ್ಮೂಲಗಳನ್ನು ಸೂತ್ರಬದ್ಧಗೊಳಿಸಿಕೊಂಡು ಹಣಕಾಸು ಆಯೋಗದ ಮುಂದೆ ಹೆಚ್ಚಿನ ಅನುದಾನಕ್ಕೆ ಲಿಖಿತ ದಾಖಲೆಯನ್ನು ಸಲ್ಲಿಸಿತು. ಒಕ್ಕೂಟ ಸರಕಾರ ರಾಷ್ಟ್ರಪತಿಗಳ ಆದೇಶದೊಂದಿಗೆ ಹೆಚ್ಚಿನ ಹಂಚಿಕೆಗಾಗಿ ಬೇಡಿಕೆ ಇಡುವುದು ಸಂವಿಧಾನದ ಹಕ್ಕು ಸ್ವಾಮ್ಯದ ಮೇಲೆ ಪ್ರಶ್ನೆ ಹುಟ್ಟುಹಾಕುತ್ತದೆ. ಅಲ್ಲದೆ ರಾಷ್ಟ್ರ ಅಭಿವೃದ್ಧಿಯ ಜವಾಬ್ದಾರಿಯೂ ಕೇಂದ್ರ ಮತ್ತು ರಾಜ್ಯ ಸರಕಾರ ಎರಡರದ್ದೂ ಜವಾಬ್ದಾರಿಯಾಗಿದ್ದರೆ ‘ನ್ಯೂ ಇಂಡಿಯಾ-2022’ರ ಯೋಜನೆಯಲ್ಲಿ ಏನೇನಿದೆ ಎನ್ನುವುದು ಗೊತ್ತುಪಡಿಸಬೇಕಾಗಿದ್ದು ಕೇಂದ್ರ ಸರ್ಕಾರದ ಕರ್ತವ್ಯ. ಅದಿನ್ನೂ ಅಸ್ಪಷ್ಟವಾಗಿದೆ. ಒಂದು ವೇಳೆ ರಾಜ್ಯಗಳ ವಿಚಾರವಾಗಿ ಕೇಂದ್ರ ಸಚಿವಾಲಯದ ಸೇವೆಯನ್ನು ವಿಸ್ತರಿಸುವುದೇ ಆಗಿದ್ದರೆ ಇದು ಕೇಂದ್ರ ತನ್ನ ಸ್ವಾಯತ್ತತೆಯನ್ನು ಇನ್ನೂ ಹೆಚ್ಚು ಆಕ್ರಮಿಸಿಕೊಂಡ ಹಾಗಾಗುತ್ತದೆ.

ಹಣಕಾಸು ಆಯೋಗವು ಮೌಲ್ಯಮಾಪನಕ್ಕೆ ಒಂದು ಏಕರೂಪದ ರೀತಿಯನ್ನು ಅನುಸರಿಸುವ ಕುರಿತಾಗಿ ಸೇರಿದ ಸಭೆಯಾಗಿತ್ತು. ಆದರೆ ಟಿ.ಓ.ಆರ್ (TOR) ರಾಜ್ಯಗಳಿಗೆ ಹಣಕಾಸು ವರ್ಗಾವಣೆಯ ವಿಚಾರವಾಗಿ ಪ್ರೋತ್ಸಾಹಕ ವಿಧಾನವನ್ನು ಅನುಸರಿಸುವ ವಿಚಾರವನ್ನೇ ತಳ್ಳಿ ಹಾಕಿರುವುದರಿಂದ ಒಕ್ಕೂಟ ಸರಕಾರ ಈ ವಿಚಾರವಾಗಿ ತನ್ನ ಒಲವನ್ನು ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲವಾದಂತೆ. ತೆರಿಗೆಗೆ ಸಂಬಂಧಿಸಿದಂತೆ ಇನ್ನಷ್ಟು ಪ್ರಯತ್ನಿಸುವುದು ರಾಜ್ಯ ಮತ್ತು ಒಕ್ಕೂಟ ಸರಕಾರ ಎರಡಕ್ಕೂ ಬಹಳ ಮುಖ್ಯವಾದ ವಿಚಾರವಾಗಿದೆ. ಈಗಂತೂ ತೆರಿಗೆ ಸಂಗ್ರಹ ನೇರವಾಗಿ ಜಿಎಸ್‍ಟಿ (ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್) ಅಡಿಯಲ್ಲಿ ಬರುವುದರಿಂದ ಸಂಪೂರ್ಣ ಅಧಿಕಾರ ಜಿಎಸ್‍ಟಿ ಕೌನ್ಸಿಲ್‍ಗೆ ಬಿಟ್ಟಿದ್ದಾಗಿದೆ. ಆ ಕಾರಣಕ್ಕೆ ಏನಾದರೂ ಒಟ್ಟು ಸೇರಿ ನಿರ್ಧರಿಸಲು ರಾಜ್ಯಗಳಿಗೆ ಅಧಿಕಾರ ಸಿಕ್ಕಿದಂತಾಗಿದೆ.

ಜನಪ್ರಿಯತೆ ಎನ್ನುವುದು ವಿಷದಂತೆ ಚುನಾವಣಾ ರಾಜಕೀಯದಲ್ಲಿ ಹಾಸುಹೊಕ್ಕಾಗಿದ್ದು ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳೆರಡೂ ಈ ವಿಚಾರದಲ್ಲಿ ತಪ್ಪಿತಸ್ಥರಾಗಿದ್ದಾರೆ. ರಾಜ್ಯಗಳ ವಿಚಾರದಲ್ಲಿ ಹಣಕಾಸು ಆಯೋಗವು ಶಿಸ್ತನ್ನು ಪಾಲಿಸಬೇಕು, ಆದರೆ ಕೇಂದ್ರದ ವಿಚಾರದಲ್ಲಲ್ಲ ಎನ್ನುವಂತಹ ಟಿ.ಓ.ಆರ್ (TOR)ನ ಅಸಮಾನತೆಯ ಸಲಹೆಯು ರಾಜ್ಯಗಳ ಮಟ್ಟಿಗೆ ದುಃಖದ ವಿಚಾರವಾಗಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಹುವಾಗಿ ಪ್ರತಿಪಾದಿಸುತ್ತಿದ್ದ ಎಸ್.ಗುಹನ್ ಅವರು ಹೇಳುವ ಪ್ರಕಾರ ಹಣಕಾಸು ಆಯೋಗವು ಕೇಂದ್ರದ ವಿರುದ್ಧ ಬೊಗಳಿದರೆ ರಾಜ್ಯಗಳನ್ನು ಕಚ್ಚುತ್ತಿದೆ!

ರಕ್ಷಣೆ ಮತ್ತು ಆಂತರಿಕ ಭದ್ರತೆ
ಟಿ.ಓ.ಆರ್ ನ ಹೊಸ ತಿದ್ದುಪಡಿಯ ಪ್ರಕಾರ ರಕ್ಷಣೆ ಮತ್ತು ಆಂತರಿಕ ಭದ್ರತೆಯ ಸಲುವಾಗಿ ರದ್ದು ಪಡಿಸಲಾಗದಂತಹ ಪ್ರತ್ಯೇಕ ಹಣಕಾಸಿನ ನೆರವಿಗೆ ಅವಕಾಶವನ್ನು ಕಲ್ಪಿಸಿ ಕಾರ್ಯರೂಪಕ್ಕೆ ತರುವತ್ತ ಪರೀಕ್ಷಿಸಬೇಕೆಂದು ಹಣಕಾಸು ಆಯೋಗಕ್ಕೆ ಸೂಚಿಸಿದೆ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದ್ದು ಒಕ್ಕೂಟ ವ್ಯವಸ್ಥೆಯ ಪ್ರತಿಪಾದಕರೆಲ್ಲರಿಗೂ ಒಪ್ಪಿಗೆಯಾಗದಂತಹ ವಿಷಯವಾಗಿದೆ.
ಮೂಲ ಟಿ.ಓ.ಆರ್(TOR) ಉಲ್ಲೇಖಿತವಾದಂತೆ ಯಾವುದಾದರೂ ಹೊಸ ಸಲಹೆಗಳನ್ನು ನೀಡುವಾಗ ಆಯೋಗವು ತಮ್ಮ ನಡುವಿರುವ ಬೇರೆ ಅಗತ್ಯತೆಗಳನ್ನು ಪರಿಗಣಿಸಬೇಕು. ಅಂದರೆ ಕೇಂದ್ರ ಸರ್ಕಾರದಡಿಯಲ್ಲಿ ಬರುವ ರಕ್ಷಣೆ, ಆಂತರಿಕ ಭದ್ರತೆ, ರೈಲ್ವೆ, ಪ್ರಕೃತಿ ವಿಕೋಪ, ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಮತ್ತು ಇತರೆ ಖರ್ಚುಗಳು ಹಾಗೂ ಭಾಧ್ಯತೆಗಳು ಎಂಬುದಾಗಿದೆ. ಇಷ್ಟೆಲ್ಲಾ ಆದಾಗಲೇ ಸೂಚಿತವಾದ ಮೇಲೆ ಹೊಸ ಸಲಹೆಯೂ ಆಯೋಗವನ್ನು ಕೇಂದ್ರದ ಹೊಸ ಬೇಡಿಕೆಯನ್ನು ಪರಿಗಣಿಸುವಂತೆ ಒತ್ತಾಯಿಸುವಂತಿದೆ.

ವಸ್ತುಸ್ಥಿತಿಯನ್ನು ನೋಡುವುದಾದರೆ ತಮ್ಮಲ್ಲಿರುವ ಕ್ರೋಢಿಕೃತ ಆದಾಯದಿಂದ ಒಂದು ಪ್ರತ್ಯೇಕ ರದ್ದುಪಡಿಸಲಾರದಂತಹ ಹಣಕಾಸಿನ ವ್ಯವಸ್ಥೆಯನ್ನು ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಎತ್ತಿಡುವುದು ಒಕ್ಕೂಟ ಸರ್ಕಾರಕ್ಕೆ ಕಷ್ಟವೇನಲ್ಲ. ಅಷ್ಟಕ್ಕೂ ಆಯೋಗವು ಸಂವಿಧಾನದ ಪ್ರಕಾರ ಖರ್ಚು ವೆಚ್ಚಗಳ ಲೆಕ್ಕವನ್ನು ಒಕ್ಕೂಟ ಸರಕಾರದಿಂದ ರಾಜ್ಯಗಳಿಂದ ಪಡೆಯುತ್ತದೆ. ಒಂದು ವೇಳೆ ಅಂತದ್ದೊಂದು ಹಣಕಾಸಿನ ವ್ಯವಸ್ಥೆಯನ್ನು ಒಟ್ಟು ತೆರಿಗೆಯಿಂದ ಒಕ್ಕೂಟ ಸರ್ಕಾರಕ್ಕೂ ಹಾಗೂ ರಾಜ್ಯಗಳಿಗೂ ಹಂಚಿಕೆಯಾಗುವ ಮುನ್ನವೇ ಒದಗಿಸುವ ಸಲಹೆಯಾದರೆ ಇದು ಮತ್ತೆ ಸಾಂವಿಧಾನಿಕ ನ್ಯಾಯದ ಮೇಲೆಯೇ ಪ್ರಶ್ನೆ ಹುಟ್ಟು ಹಾಕುತ್ತದೆ.

ಇನ್ನೊಂದು ಕಡೆ ಪ್ರತ್ಯೇಕ ಹಣಕಾಸು ವ್ಯವಸ್ಥೆಯೆನ್ನುವುದು ತೆರಿಗೆ ಹಂಚಿಕೆಯ ನಂತರದ ಕೇಂದ್ರದ ಪಾಲಿನದ್ದಾದರೆ ಇದೊಂದು ಅನಗತ್ಯ ನಡೆಯಾಗಿರುತ್ತದೆ. ಏಕೆಂದರೆ ಕೇಂದ್ರಕ್ಕೆ ಹಣಕಾಸು ಆಯೋಗದಿಂದ ಬಂದ ತನ್ನ ಪಾಲಿನ ತೆರಿಗೆಯನ್ನು ತನ್ನದೇ ಯೋಜನೆಗಳಿಗೆ ಖರ್ಚು ಮಾಡಲು ಯಾರ ಸಲಹೆಯ ಅವಶ್ಯಕತೆಯೂ ಇರುವುದಿಲ್ಲ.

ರಕ್ಷಣೆ ಮತ್ತು ಆಂತರಿಕ ಭದ್ರತೆಯ ವಿಚಾರದಲ್ಲಿ ಒಂದು ಕೇಂದ್ರದ ಅಗತ್ಯತೆ ಇರುವುದನ್ನು ಟಿ.ಓ.ಆರ್(ಖಿಔಖ)ನ ಹೇಳಿಕೆಯಂತೆ ಇದಕ್ಕಿಂತ ಮುಂಚಿನ ಹಣಕಾಸು ಆಯೋಗಗಳು ಗುರುತಿಸಿದ್ದವು. 14ನೇ ಹಣಕಾಸು ಆಯೋಗವು ಶೇಕಡಾ 30ರಷ್ಟು ಹೆಚ್ಚುವರಿ ರಕ್ಷಣಾ ಆದಾಯ ವೆಚ್ಚವನ್ನು2016-17 ರಲ್ಲಿ ಅಂದಾಜಿತ್ತು. ಮತ್ತದನ್ನು ವೇತನ ಆಯೋಗದ ಅಡಿಯಲ್ಲಿ ಸೇರಿಸಿ ಶೇಕಡ 20ರಷ್ಟು ಏರಿಸಲು ನಿರ್ಣಯ ಕೈಗೊಳ್ಳಲಾಯಿತು. ಇದರಲ್ಲಿ ಹಣಕಾಸು ಆಯೋಗದ ಸಲಹೆಯಂತೆ ಬಂಡವಾಳ ವೆಚ್ಚವನ್ನು ಸೇರಿಸಲಿಲ್ಲ.
ಇಷ್ಟೆಲ್ಲ ಇದ್ದು ವಾಸ್ತವದಲ್ಲಿ ಜಿಡಿಪಿಗನುಗುಣವಾಗಿ ರಕ್ಷಣಾ ವೆಚ್ಚವು 2014-15ರಲ್ಲಿ ಶೇಕಡಾ ಎರಡರಷ್ಟು ಮತ್ತು 2018-19 ರಲ್ಲಿ ಶೇಕಡಾ 1.48ರಷ್ಟು ಕುಸಿತ ಕಂಡಿದೆ. ಈ ಪ್ರಕಾರ 2019-20ಕ್ಕೆ ಸೂಚಿತವಾದ ರಕ್ಷಣಾ ವೆಚ್ಚವು ಇನ್ನೂ 1.45 ಶೇಕಡಾದಷ್ಟು ಕುಸಿಯುತ್ತದೆ. ಇದು ಹಿಂದಿಗಿಂತಲೂ ಹೆಚ್ಚಿನ ಕುಸಿತ. ಕೇಂದ್ರ ಸರಕಾರದ ಒಟ್ಟು ವೆಚ್ಚವೇ ಶೇಕಡಾ 14.3 ರಷ್ಟು 2015-16 ರಲ್ಲಿ ಕುಸಿತವಾಗಿದೆ. ಇನ್ನು 2019-20 ರಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚದಲ್ಲಿ ಶೇಕಡ 11ರಷ್ಟು ಕುಸಿತವನ್ನು ಅಂದಾಜಿಸಲಾಗಿದೆ.

ಸಂವಿಧಾನ ಜವಾಬ್ದಾರಿಗಳನ್ನು ಕೇಂದ್ರ, ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಿಗೆ ಸ್ಪಷ್ಟವಾಗಿ ಹಂಚಿದೆ. ಕುತೂಹಲದ ಸಂಗತಿಯೆಂದರೆ, ರಕ್ಷಣೆ ಇದರಲ್ಲಿ ಸಂಪೂರ್ಣ ಕೇಂದ್ರದ ಹೊಣೆ. ಜಿಡಿಪಿಗನುಗುಣವಾಗಿ ರಕ್ಷಣಾ ವೆಚ್ಚವು ಕಡಿಮೆಯಾಗುತ್ತಿದೆ ಎಂದರೆ ಕೇಂದ್ರವು ತನ್ನ ಪಾಲಿನ ಹಣವನ್ನು ಹೆಚ್ಚು ರಕ್ಷಣೆಯ ಬದಲಿಗೆ ರಾಜ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ವ್ಯಯಿಸುತ್ತಿದೆ ಎಂದರ್ಥ.

2005ರಲ್ಲಿ ಶೇಕಡಾ 14ದಿಂದ 2012ರಲ್ಲಿ ಶೇಕಡಾ 20ರಷ್ಟು ಹಣವನ್ನು ರಾಜ್ಯಗಳಿಗೆ ಮತ್ತು ಸಂಬಂಧಿಸಿದ ಅಭಿವೃದ್ಧಿ ವಿಚಾರಗಳ ಮೇಲೆ ಕೇಂದ್ರ ಸರ್ಕಾರ ವ್ಯಯಿಸಿದೆ. ಅದು ಸರಾಸರಿ ಶೇ.13 ರಿಂದ 17ಶೇಕಡಾದಷ್ಟು ಹೆಚ್ಚಾಗಿರುವುದನ್ನು 14ನೇ ಹಣಕಾಸು ಆಯೋಗ ಗುರುತಿಸಿದೆ. ಹಾಗಾಗಿ ಕೇಂದ್ರವು ರಾಜ್ಯಗಳ ಮತ್ತು ಅವುಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಕೇಂದ್ರ ಸಚಿವಾಲಯದ ಸೇವೆ(CSS)ಯ ಮುಖಾಂತರ ಅತಿಯಾಗಿ ಆಕ್ರಮಿಸುವ ಉದ್ದೇಶದಿಂದಲೇ ರಕ್ಷಣಾ ವೆಚ್ಚದ ನೆಪದಲ್ಲಿ ಹೆಚ್ಚು ಹೆಚ್ಚು ಹಣವನ್ನು ಪಡೆಯಲೇತ್ನಿಸುತ್ತಿದೆ ಎಂದರೆ ತಪ್ಪಾಗಲಾರದು.

ಟಿ.ಓ.ಆರ್ ನಲ್ಲಿನ ಈ ಶೀಘ್ರ ತಿದ್ದುಪಡಿಗೆ ಕಾರಣವಾದರೂ ಏನು ಎಂದು ಪರಿಶೀಲಿಸಿದರೆ ಈ ಮೂಲಕ ರಾಜ್ಯಗಳ ಪಾಲಿನ ತೆರಿಗೆ ಹಂಚಿಕೆಯನ್ನು ತಗ್ಗಿಸುವಂತೆ ಹಣಕಾಸು ಆಯೋಗವನ್ನು ಒತ್ತಾಯಿಸುವುದೇ ಆಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೇಂದ್ರ ಸಚಿವಾಲಯದ ಸೇವೆಯ ಮುಖಾಂತರ ರಾಜ್ಯಗಳ ಮೇಲೆ ಹೆಚ್ಚಿನ ಹಣಕಾಸನ್ನು ಪಡೆದ ಮೇಲೂ ಹೆಚ್ಚುವರಿ ಆರ್ಥಿಕ ನೆರವಿಗಾಗಿ ಹಂಚಿಕೊಳ್ಳಲು ಅವಕಾಶವಿರದ ಮಾದರಿಯಲ್ಲಿ ಮತ್ತೊಂದು ಸಂಪನ್ಮೂಲವನ್ನು ಕ್ರೋಢೀಕರಿಸಲು ಮುಂದಾಗಿರುವುದರ ಉದ್ದೇಶವೇ ನ್ಯೂ ಇಂಡಿಯಾ-2022 ಯೋಜನೆಗೆ ಹೆಚ್ಚಿನ ತೆರಿಗೆ ಹಣವನ್ನು ಮೀಸಲಿಡುವುದೇ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಬಹುಶಃ ಇದರ ಉದ್ದೇಶ ಕೇಂದ್ರ ಸಚಿವಾಲಯದ ಯೋಜನೆಯನ್ನು ಸೇವೆಯ ಮುಖಾಂತರ ರಾಜ್ಯಗಳಿಗೆ ವಿಸ್ತರಿಸುವುದಾಗಿದೆ.

ಉಪಸಂಹಾರ
15ನೇ ಹಣಕಾಸು ಆಯೋಗವು ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಲುವಾಗಿ ರಾಜ್ಯಗಳಿಗೆ ಭೇಟಿ ಕೊಟ್ಟಾಗ, ಕೇಂದ್ರದಲ್ಲಿ ಆಡಳಿತವಿರುವ ಪಕ್ಷದ ಸರಕಾರವೇ ರಾಜ್ಯಗಳಲ್ಲೂ ಇರುವಂತವರು ಹೆಚ್ಚಿನ ತೆರಿಗೆ ಪ್ರಮಾಣವನ್ನು ರಾಜ್ಯಗಳಿಗೆ ನೀಡಬೇಕೆಂದು ಕೇಳಿಕೊಂಡಿವೆ. ಆ ಮೂಲಕ ಕೇಂದ್ರ ಸರಕಾರದ ಸೇವೆಯನ್ನು ಹೆಚ್ಚಿಸುವುದರಿಂದ ಆಗುವ ತೊಂದರೆಗಳು ಮತ್ತು ತಮ್ಮ ಹಣಕಾಸಿನ ಶಕ್ತಿಯನ್ನು ಕುಂದಿಸುವುದರಿಂದ ಮೂಲ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ನಗರಾಭಿವೃದ್ಧಿಗಳಂತಹ ಸಂವಿಧಾನ ಬದ್ಧ ಕಡ್ಡಾಯ ಯೋಜನೆಗಳಿಗೆ ಹಣ ಒದಗಿಸಲಾಗದ ಅಸಹಾಯಕತೆಯನ್ನು ಹಣಕಾಸು ಆಯೋಗಕ್ಕೆ ಮನದಟ್ಟು ಮಾಡಿದ್ದಾರೆ. ಟಿ.ಓ.ಆರ್(TOR)ನ ಈ ತಿದ್ದುಪಡಿಯ ಉದ್ದೇಶವೇ 15ನೇ ಹಣಕಾಸು ಆಯೋಗದ ಮನವೊಲಿಸಿ ರಾಜ್ಯಗಳ ಪಾಲಿಗೆ ಸಲ್ಲಬೇಕಾದ ತೆರಿಗೆಯನ್ನು ಹೆಚ್ಚಿಸುವುದರ ಬದಲಾಗಿ ಇಳಿಸುವುದಾಗಿದೆ. ಇದರ ಮೂಲ ಉದ್ದೇಶ ರಕ್ಷಣೆಗಾಗಿ ಹಣವನ್ನು ವಿನಿಯೋಗಿಸುವುದು ಅಲ್ಲವೇ ಅಲ್ಲ. ಬದಲಾಗಿ ಕೇಂದ್ರ ಸಚಿವಾಲಯದ ಸೇವೆಯಡಿಯಲ್ಲಿ ಅಂಗೀಕರಿಸಿದ ನ್ಯೂ ಇಂಡಿಯಾ- 2022ರ ಯೋಜನೆಗೆ ಹೆಚ್ಚಿನ ಆರ್ಥಿಕ ಅನುಕೂಲ ಮಾಡಿಕೊಡುವುದೇ ಆಗಿದೆ.

15ನೇ ಹಣಕಾಸು ಆಯೋಗವು ಸಾಂವಿಧಾನಿಕ ಸ್ವಾಯತ್ತತೆಯ ಸಂಸ್ಥೆಯಾಗಿದ್ದು ಅದು ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳ ಅಗತ್ಯತೆಗಳ ಕುರಿತು ನ್ಯಾಯೋಚಿತವಾದ ಮೌಲ್ಯಮಾಪನ ಮಾಡಬೇಕಿದೆ. ನೇರವಾಗಿ ಸಂವಿಧಾನದ ನಿಯಮಗಳನ್ನು ಪಾಲಿಸುವುದರ ಮುಖಾಂತರ ಯಾವುದೇ ಹೆಚ್ಚುವರಿ ಆದೇಶಗಳನ್ನು ಗಮನಿಸಬೇಕಾದ ಅಗತ್ಯತೆ ಇರುವುದಿಲ್ಲ. ಒಂದು ವೇಳೆ ಕೇಂದ್ರ ನಿಜವಾಗಿಯೂ ರಕ್ಷಣೆಗೆ ರದ್ದುಪಡಿಸಲಾರದಂತಹ ಹೆಚ್ಚುವರಿ ಹಣವನ್ನು ಮೀಸಲಿಡಲು ಬಯಸಿದರೆ ಅದನ್ನು ಕೇಂದ್ರದ ಈಗಿನ ತೆರಿಗೆಯ ಪಾಲಿನಲ್ಲೇ ಮಾಡಬಹುದಾಗಿದೆ.

ಮೂಲ ಲೇಖಕರು: ಎಂ.ಗೋವಿಂದರಾವ್, ಸದಸ್ಯರು, 14ನೇ ಹಣಕಾಸು ಆಯೋಗ ಮತ್ತು ಎನ್.ಐ.ಪಿ.ಎಫ್.ಪಿ ಯ ಮಾಜಿ ನಿರ್ದೇಶಕರು.

ಅನುವಾದಕರು: ಪಲ್ಲವಿ ಇಡೂರು, ಕೆ.ಎಸ್.ನಾಗೇಗೌಡ

ಕೃಪೆ: ಲೈವ್ ಮಿಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...