Homeಕರ್ನಾಟಕಅತೃಪ್ತಿಗಿಂತ ಅಕ್ರಮ ದಂಧೆಗಳೇ ಪಕ್ಷಾಂತರಕ್ಕೆ ಕಾರಣ?

ಅತೃಪ್ತಿಗಿಂತ ಅಕ್ರಮ ದಂಧೆಗಳೇ ಪಕ್ಷಾಂತರಕ್ಕೆ ಕಾರಣ?

ಅಕ್ರಮ ದಂಧೆಯ ಹುಳುಕುಗಳನ್ನು ಮುಂದಿಟ್ಟೇ ಬಿಜೆಪಿಯ ಹೈಕಮ್ಯಾಂಡ್‍ನ ನೇರ ಉಸ್ತುವಾರಿಯಲ್ಲಿ ನಡೆದ ಆಪರೇಷನ್ ಇದು ಎನ್ನುವುದು ಸ್ಪಷ್ಟವಾಗುತ್ತಿದೆ.

- Advertisement -
- Advertisement -

ಯಾವ ರೀತಿಯಿಂದ ನೋಡಿದರೂ ಇಂದು ರಾಜೀನಾಮೆ ಕೊಟ್ಟಿರುವ ಶಾಸಕರ ಕಾಂಬಿನೇಷನ್ ಬಹಳ ಆಶ್ಚರ್ಯಕರವಾಗಿ ಕಾಣುತ್ತದೆ.

ಅತೃಪ್ತಿಯೇ ಕಾರಣ ಎನ್ನುವುದಾದರೆ, ಬೈರತಿ ಬಸವರಾಜ್ ಎಂದೂ ಅತೃಪ್ತಿ ವ್ಯಕ್ತಪಡಿಸಿಲ್ಲ. ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಚ್‍ಡಿಕೆ ಮತ್ತು ಡಿಕೆಶಿ ಇಬ್ಬರಿಗೂ ಮುನಿರತ್ನ ಆಪ್ತರು.

ಅಧಿಕಾರ ಸಿಕ್ಕಿಲ್ಲದಿರುವುದು ಎನ್ನುವುದಾದರೆ ಎಂ.ಟಿ.ಬಿ.ನಾಗರಾಜ್‍ರನ್ನು ಸಚಿವರನ್ನಾಗಿಸಲಾಗಿದೆ. ಸಚಿವ ಸ್ಥಾನಕ್ಕೆ ಸಮಾನವಾದ ಬಿಡಿಎ ಅಧ್ಯಕ್ಷ ಸ್ಥಾನ ಸೋಮಶೇಖರ್‍ರಿಗೆ ಮತ್ತು ಹೊಸ ಸರ್ಕಾರ ಬಂದರೂ ಕದಲಿಸಲಾಗದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸುಧಾಕರ್‍ರಿಗೆ ಸಿಕ್ಕಿದೆ. ರಾಕೇಶ್ ಸಿಂಗ್ ಬಿಡಿಎ ಆಯುಕ್ತರಾಗಿ ಮುಂದುವರೆದರೆ ತನಗೆ ಅಡ್ಡಗಾಲು ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದರಿಂದ ಅವರನ್ನೂ ಬದಲಿಸಲಾಗಿದೆ.

ಜಾತಿಯೇ ಕಾರಣ, ಲಿಂಗಾಯಿತರು ಮತ್ತು ವಾಲ್ಮೀಕಿ ಸಮುದಾಯದ ಶಾಸಕರು ಹೆಚ್ಚಾಗಿ ಆ ಕಡೆಗೆ ಹೋಗಿದ್ದಾರೆ ಎನ್ನುವ ಹಾಗೂ ಇಲ್ಲ. ಎಂ.ಟಿ.ಬಿ ನಾಗರಾಜ್ ಮತ್ತು ಬೈರತಿ ಬಸವರಾಜ್ ಇಬ್ಬರೂ ಕುರುಬರು. ಉಳಿದ ಕಾಂಬಿನೇಷನ್ ಸಹಾ ಹಾಗಿಲ್ಲ. ಇನ್ನು ರೋಷನ್‍ಬೇಗ್ ಸ್ಪರ್ಧಿಸುತ್ತಿರುವುದು ಮುಸ್ಲಿಮರೇ ಅಧಿಕವಾಗಿರುವ ಶಿವಾಜಿನಗರದಿಂದ. ಸ್ವತಃ ಬೇಗ್ ವಿರೋಧಿಸಿದರೂ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್‍ರಿಗೇ ಬಹುಮತ ಸಿಕ್ಕಿದೆ.

ಇನ್ನು ಗೋಪಾಲಯ್ಯನವರು ಹಿಂದಿನ ಸಾಲಿನಲ್ಲೇ ಚೆಲುವರಾಯಸ್ವಾಮಿ ಮತ್ತಿತರರ ಜೊತೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದರು. ನಂತರ ಮತ್ತೆ ಪಕ್ಷದಲ್ಲೇ ಉಳಿದು ಜೆಡಿಎಸ್‍ನಿಂದಲೇ ಟಿಕೆಟ್ ಪಡೆದು ಪುನರಾಯ್ಕೆಯಾಗಿದ್ದಾರೆ.

ಹೀಗಿರುವಾಗ ಇವರೆಲ್ಲರನ್ನೂ ಬೆಸೆದ ಕಾರಣವೇನು? ಕೆಲವರಿಗೆ ಅತೃಪ್ತಿಯು ಅವಕಾಶವಾದವಾಗಿ ಪರಿವರ್ತನೆಯಾಗಿರುವುದು ವಾಸ್ತವ. ಅವರಲ್ಲಿ ಎಚ್.ವಿಶ್ವನಾಥ್, ರಾಮಲಿಂಗಾರೆಡ್ಡಿ ಮತ್ತು ಕೆ.ಸಿ.ನಾರಾಯಣಗೌಡರಿದ್ದಾರೆ. ಕುಮಟಳ್ಳಿಯವರು ಜಾರಕಿಹೊಳಿಯವರ ಹಿಂದೆ ಹೋಗುವವರು. ಬಿ.ಸಿ.ಪಾಟೀಲ್ ನಿಜಕ್ಕೂ ಅತೃಪ್ತರೇ. ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಗೆದ್ದು ಬರುತ್ತಿರುವ ಏಕೈಕ ಕಾಂಗ್ರೆಸ್ ಶಾಸಕನಾದ ತನಗೆ ಬಿಜೆಪಿಯಿಂದ ಬಂದ ಆಫರ್ ತಿರಸ್ಕರಿಸಿ ಇಲ್ಲಿ ಉಳಿದರೂ ಅಧಿಕಾರ ಸಿಕ್ಕಿಲ್ಲ ಎಂಬ ಕೊರಗು ಅವರದ್ದು. ಪ್ರತಾಪ್‍ಗೌಡ ಮತ್ತು ಶಿವರಾಮ ಹೆಬ್ಬಾರ್ ಅವರು ಮಾರಿಕೊಳ್ಳಲು ನಿಂತಿರುವುದು ಬಿಟ್ಟರೆ ಹೆಚ್ಚೇನೂ ಕಾಣುತ್ತಿಲ್ಲ. ಇಷ್ಟು ಜನರನ್ನು ಬಿಟ್ಟರೆ ಮಿಕ್ಕೆಲ್ಲರೂ ಅಕ್ರಮ ದಂಧೆಯ ಕಾರಣಕ್ಕೇ ಬಿಜೆಪಿಯಿಂದ ಬೆದರಿಕೆಗೆ ಒಳಗಾಗಿದ್ದಾರೆ ಎಂಬುದು ಹಲವು ರಾಜಕಾರಣಿಗಳ ಆಡಿಟಿಂಗ್ ನಡೆಸುವ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಅನಿಸಿಕೆ.

ಇದನ್ನೂ ಓದಿ: ಮಾನಗೇಡಿ ಶಾಸಕರು, ಹೊಣೆಗೇಡಿ ನಾಯಕರು

ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅವರ ಪ್ರಕಾರ ಎಂಟಿಬಿ ನಾಗರಾಜು, ಸೋಮಶೇಖರ್, ಭೈರತಿ ಮೂರೂ ಜನರೂ ರಿಯಲ್ ಎಸ್ಟೇಟ್ ಕುಳಗಳು. ಮುನಿರತ್ನರಿಗೆ ಸಕ್ರಮ ಮತ್ತು ಅಕ್ರಮ ದಂಧೆಗಳೆರಡೂ ಇವೆ. ರಮೇಶ್ ಜಾರಕಿಹೊಳಿ ಹಲವು ವ್ಯವಹಾರಗಳನ್ನು ನಡೆಸುತ್ತಾ, ದೊಡ್ಡ ಮಟ್ಟದ ಸಾಲ ಮಾಡಿಕೊಂಡಿರುವ ‘ಸಾಹುಕಾರ’. ಆನಂದ್‍ಸಿಂಗ್ ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿರುವ ಉದ್ಯಮಿ. ಇನ್ನು ಸುಧಾಕರ್ ಅವರ ದಿಢೀರ್ ಶ್ರೀಮಂತಿಕೆಯ ಹಿನ್ನೆಲೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ರೋಷನ್‍ಬೇಗ್ ಐಎಂಎ ಕೇಸಿನಲ್ಲಿ ಯಾವಾಗ ಜೈಲಿಗೆ ಹೋಗಬೇಕಾಗಿ ಬರುತ್ತದೋ ಹೇಳಲಾಗದು.

ಹೀಗಾಗಿ ಮೂರ್ನಾಲ್ಕು ಜನರನ್ನು ಬಿಟ್ಟರೆ ಮಿಕ್ಕೆಲ್ಲರೂ ಕನಿಷ್ಠ ನೂರು ಕೋಟಿ ಕುಳಗಳು. ಒಂದಲ್ಲಾ ಒಂದು ಬಗೆಯ ಅಕ್ರಮ ದಂಧೆಗಳು ಇವರ ಹಿಂದೆ ಇದೆ ಎಂಬುದು ಆಡಿಟರ್‍ಅವರ ಅನಿಸಿಕೆ. ಹಾಗಾಗಿಯೇ ಉತ್ತರ ಕರ್ನಾಟಕದ ಅಥವಾ ಬಳ್ಳಾರಿಯ ಶಾಸಕರು ಪಕ್ಷ ಬದಲಿಸುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು, ಅದರಲ್ಲೂ ಲಿಂಗಾಯಿತ ಶಾಸಕರ ದಂಡೇ ಹೊರಹೋಗುತ್ತದೆ ಎಂಬ ನಿರೀಕ್ಷೆಗೆ ವಿರುದ್ಧವಾಗಿ ದಕ್ಷಿಣ ಕರ್ನಾಟಕದ ಶಾಸಕರು ರಾಜೀನಾಮೆ ನೀಡಿದರು. ಅದರಲ್ಲೂ ಬೆಂಗಳೂರಿನ ನಾಲ್ವರು! ಇದನ್ನು ಯಾರೂ ಊಹಿಸಿರಲಿಲ್ಲ. ಇದು ರಾಜೀನಾಮೆಯ ಅಸಲೀ ಕಾರಣ ಅತೃಪ್ತಿಯಲ್ಲ, ಅಕ್ರಮ ದಂಧೆ ಎಂಬ ಆಡಿಟರ್‍ರ ಅಭಿಪ್ರಾಯಕ್ಕೆ ಪುಷ್ಟಿ ಕೊಡುತ್ತದೆ.

ಇದನ್ನೂ ಓದಿ: ಆನಂದ್ ಸಿಂಗ್ ರಾಜೀನಾಮೆ

‘ಆಂಧ್ರದ ಮಲ್ಯರು’ ಎಂದು ಬಿಜೆಪಿಯೇ ಮೂದಲಿಸುತ್ತಿದ್ದ ಟಿಡಿಪಿಯ ರಾಜ್ಯಸಭಾ ಸದಸ್ಯರನ್ನು ಬಿಜೆಪಿಯು ಸೆಳೆದದ್ದು ಅವರ ಅಕ್ರಮ ದಂಧೆಗಳನ್ನು ಮುಂದಿಟ್ಟು ಹೆದರಿಸಿದ್ದರಿಂದ ಎಂಬುದು ದೇಶಕ್ಕೇ ಗೊತ್ತಿದೆ. 2008ರಲ್ಲಿ ಬಿಜೆಪಿಯು ಆಪರೇಷನ್ ಕಮಲ ನಡೆಸಿದ್ದೂ ಅಕ್ರಮ ಹಣದ ಮೂಲಕವೇ ಆಗಿತ್ತು. ಅಂದರೆ ತಮ್ಮ ಜೊತೆ ಇದ್ದರೆ ಎಲ್ಲಾ ಅಕ್ರಮಗಳೂ ಮಾಫ್ ಎಂಬುದು ಬಿಜೆಪಿ ಪಕ್ಷದ ನೀತಿಯಾಗಿದೆ.

ಹೀಗಾಗಿ ಅಕ್ರಮ ದಂಧೆಯ ಹುಳುಕುಗಳನ್ನು ಮುಂದಿಟ್ಟೇ ಬಿಜೆಪಿಯ ಹೈಕಮ್ಯಾಂಡ್‍ನ ನೇರ ಉಸ್ತುವಾರಿಯಲ್ಲಿ ನಡೆದ ಆಪರೇಷನ್ ಇದು ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಶಾಸಕರು ಯಾವ ಪಕ್ಷದಲ್ಲೇ ಇದ್ದರೂ, ಇವರ ಆಸ್ತಿಪಾಸ್ತಿಗಳ ತನಿಖೆಯು ನಡೆದಾಗ ಮಾತ್ರ ಅಸಲೀ ಕಾರಣ ಬಹಿರಂಗಕ್ಕೆ ಬರುತ್ತದೆ. ಅಲ್ಲಿಯವರೆಗೆ ಇಂತಹ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...