Homeಚಳವಳಿಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

ಉಡುಗದ ದನಿ ಗುಡುಗಬೇಕಾದ ಕಾಲವಿದು : ಎಚ್.ಎಸ್. ದೊರೆಸ್ವಾಮಿ

- Advertisement -
- Advertisement -

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ನೂರರ ವಯಸ್ಸಿನ ಗಡಿ ದಾಟಿದರೂ ತುಂಬು ಉತ್ಸಾಹ, ಕಳಕಳಿಯಿಂದ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಕರ್ತರಾಗಿ, ಸಕ್ರಿಯ ಹೋರಾಟಗಾರರಾಗಿ ಪಾಲ್ಗೊಂಡಿದ್ದ ಅವರು ಈಗಲೂ ಬಡಜನರ ಪರವಾಗಿ ಭೂಮಿ ಮತ್ತು ವಸತಿ ಹಕ್ಕು ಹೋರಾಟದ ಮುಂಚೂಣಿ ವಹಿಸಿದ್ದಾರೆ. ಗೌರಿ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷರೂ ಹೌದು. ಬೆಂಗಳೂರಿನ ಬಡಾವಣೆಯೊಂದರ ಉದ್ಯಾನವನದ ಸಮಸ್ಯೆಯಿಂದ ಹಿಡಿದು, ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಭಾರತಕ್ಕಾಗುತ್ತಿರುವ ತಾರತಮ್ಯದವರೆಗೆ ಯಾವುದೂ ಅವರ ‘ಅನ್ಯಾಯದ ವಿರುದ್ಧದ ಹೋರಾಟ’ದ ಪರಿಧಿಯಿಂದ ಹೊರತಲ್ಲ.

1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, 14 ತಿಂಗಳ ಸ್ಥಾನ ಬದ್ಧತೆಯಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದೆ. 1944ರ ಏಪ್ರಿಲ್‍ನಲ್ಲಿ ನನ್ನ ಬಿಡುಗಡೆ ಆಯಿತು. ನಾನು ಬಿಡುವಾಗಿದ್ದೆ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ನನ್ನ ಅಣ್ಣನವರು, ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ವಿಷಮಶೀತ ಜ್ವರ ಬಂದಿರುವುದಾಗಿ ತಿಳಿಸಿ ನನ್ನನ್ನು ಕೂಡಲೇ ಹೊರಟುಬರಲು ಕೋರಿದ್ದರು. ನಾನು ಕೂಡ ಮೈಸೂರಿಗೆ ಹೊರಟೆ. ಆ ಮಕ್ಕಳಲ್ಲಿ ಒಬ್ಬಳಿಗೆ ಖಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ಸೇರಿಸಿದರೂ ಕೊನೆಯುಸಿರೆಳೆದಳು. ಮನೆಯಲ್ಲಿ ಶೋಕ ಆವರಿಸಿತು. ಈ ಪರಿಸ್ಥಿತಿಯಲ್ಲಿ ನಮ್ಮಣ್ಣನನ್ನು ಬಿಟ್ಟು ಬೆಂಗಳೂರಿಗೆ ಹಿಂದಿರುಗುವುದು ಸರಿಯಲ್ಲವೆಂದು ಭಾವಿಸಿ ಮೈಸೂರಿನಲ್ಲೇ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆ ಮತ್ತು ಪುಸ್ತಕ ಮಳಿಗೆಯನ್ನು ತೆರೆದೆ.

ಒಂದು ವರ್ಷ ಪೂರೈಸುವುದರಲ್ಲಿ ನನ್ನ ಬೆಂಗಳೂರಿನ ಸ್ನೇಹಿತರೂ, ರಾಜಕೀಯ ಕಾರ್ಯಕರ್ತರೂ, ಪೌರವಾಣಿ ವಾರಪತ್ರಿಕೆಯ ಸಂಪಾದಕರೂ ಆಗಿದ್ದ ರುಮಾಲೆ ಭದ್ರಣ್ಣನವರು ಸಾವನ್ನಪ್ಪಿದ ಸುದ್ದಿ ತಲುಪಿತು. ನಾನು ಬೆಂಗಳೂರಿಗೆ ಹೋಗಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡೆ.

ಸಮಾಧಿ ಕಾರ್ಯಕ್ರಮ ಮುಗಿದ ರಾತ್ರಿ ಗೆಳೆಯರೆಲ್ಲ ಸಭೆ ಸೇರಿದೆವು. ಪತ್ರಿಕೆಯ ಜವಾಬ್ದಾರಿಯನ್ನು ಹೊರಲು ಯಾರು ಸಿದ್ಧರಿದ್ದಾರೆಂಬ ಪ್ರಶ್ನೆ ನಮ್ಮ ಮುಂದೆ ಬಂದಿತು. ನನ್ನ ಸ್ನೇಹಿತರನೇಕರಿಗೆ ಹೊರೆ ಹೊರುವ ಸಾಮಥ್ರ್ಯವಿತ್ತು. ಆದರೆ, ಅವರ್ಯಾರೂ ಸಂಪಾದಕರಾಗಲು ಮುಂದೆ ಬರಲಿಲ್ಲ. ನಾನು ವಹಿಸಿಕೊಳ್ಳುವುದಾಗಿ ಹೇಳಿದೆ. ಎಲ್ಲರೂ ಸಮ್ಮತಿ ಸೂಚಿಸಿದರು.

ಮೈಸೂರಿನ ಪುಸ್ತಕದಂಗಡಿ ಖಾಲಿ ಮಾಡಿ ಬೆಂಗಳೂರಿಗೆ ಬಂದುಬಿಟ್ಟೆ. ಪತ್ರಿಕಾ ಕಚೇರಿಯಲ್ಲೇ ಉಳಿಯುವುದು ಊಟಕ್ಕೆ ನನ್ನ ಸ್ನೇಹಿತರಾದ ಎಂ.ಎಸ್. ಸೀತಾರಾಮಯ್ಯನವರ ಮನೆಗೆ ಹೋಗುವುದು ಎಂದು ತೀರ್ಮಾನವಾಯಿತು.

1947ರ ಮೈಸೂರು ಚಲೋ ಸತ್ಯಾಗ್ರಹ ಆರಂಭವಾಗುವ ಸೂಚನೆ ಇದ್ದದ್ದರಿಂದ ನಾನು ಪೌರವಾಣಿ ವಾರಪತ್ರಿಕೆಯನ್ನು ದಿನಪತ್ರಿಕೆಯಾಗಿ ಪರಿವರ್ತಿಸಿ ಅದರ ಸಂಪಾದಕನಾದೆ. ಪತ್ರಿಕೆಯಲ್ಲಿ ಪ್ರತಿದಿನ ತೀಕ್ಷ್ಣವಾದ ಅಗ್ರ ಲೇಖನ ಹಾಗೂ ಪ್ರಧಾನ ಲೇಖನವೊಂದು ಇರುತ್ತಿತ್ತು. ಪತ್ರಿಕೆಯ ಬೆಲೆ ಮೂರು ಕಾಸು (2 ನಯಾಪೈಸೆಗೆ), 4 ಪುಟಗಳ ಪತ್ರಿಕೆ.

ಪತ್ರಿಕೆಯಲ್ಲಿ  PTI, Reuters  ಸುದ್ದಿಗಳಿರುತ್ತಿದ್ದವು. ಚಳವಳಿಯ ದಿನಗಳು ಹತ್ತಿರ ಬರುತ್ತಿದ್ದಂತೆ ಮುಖ್ಯ ಲೇಖನವನ್ನು ಬರೆದುಕೊಡಲು ತಿರುಮಲೆ ತಾತಾಶರ್ಮರನ್ನು ಪ್ರಾರ್ಥಿಸಿದೆ. ಅವರು ಹತ್ತು ಲೇಖನಗಳನ್ನು ಬರೆದರು. ನೇರವಾಗಿ ಮಹಾರಾಜರನ್ನು, ಮಹಾರಾಜರ ಸರ್ಕಾರವನ್ನು ಟೀಕಿಸುವ ಲೇಖನಗಳು ಅವಾಗಿದ್ದವು.

8ನೇ ಲೇಖನ ಪ್ರಕಟವಾದ ಕೂಡಲೇ ಸರ್ಕಾರದ ಚೀಫ್ ಸೆಕ್ರೆಟರಿಯವರಿಂದ ನನಗೊಂದು ನೋಟಿಸ್ ಬಂದಿತು. ’ಇನ್ನು ಮುಂದೆ ಯಾವುದೇ ಅಗ್ರಲೇಖನ ಅಥವಾ ಲೇಖನವನ್ನು ಪ್ರಕಟಿಸುವ ಮೊದಲು ಅದನ್ನು ಚೀಫ್ ಸೆಕ್ರೆಟರಿಯವರಿಗೆ ಕಳಿಸಿ. ಅವರ ಅನುಮತಿ ದೊರೆತ ಲೇಖನಗಳನ್ನು ಮಾತ್ರ ಪತ್ರಿಕೆಯಲ್ಲಿ ಪ್ರಕಟಿಸಬೇಕು’ ಎಂದು ಆ ನೋಟಿಸ್‍ನಲ್ಲಿ ಬರೆಯಲಾಗಿತ್ತು.

ಸರ್ಕಾರದ ಅವಗಾಹನೆಗೆ ಕಳಿಸದೆಯೇ ಉಳಿದ ಎರಡು ಲೇಖನಗಳನ್ನೂ, ಸಂಪಾದಕೀಯಗಳನ್ನು ಪ್ರಕಟಿಸಿ, ’ಸರ್ಕಾರದ ಇಂತಹ ಕಠೋರ ಆಜ್ಞೆಗಳಿಗೆ ಪೌರವಾಣಿ ತಲೆ ಬಾಗುವುದಿಲ್ಲ. ಸರ್ಕಾರದ ಅನುಮತಿಗೆ ಕಳಿಸದೆಯೇ ಈ ಎರಡೂ ದಿನ ಸಂಪಾದಕೀಯ ಮತ್ತು ಲೇಖನಗಳನ್ನು ಪ್ರಕಟಿಸಲಾಗಿದೆ. ಸರ್ಕಾರದ ಈ ಬಗೆಯ ನೋಟಿಸಿಗೆ ಬೇಸತ್ತು ನಾಳೆಯಿಂದ ಪತ್ರಿಕೆಯನ್ನು ಹೊರತರದೇ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ’ ಎಂಬ ಒಂದು ಬಾಕ್ಸ್ ಸುದ್ದಿಯನ್ನು ಪೌರವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಲಾಯಿತು.

ಸರ್ಕಾರ ಪೌರವಾಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಚೇರಿಗೆ ಬೀಗಮುದ್ರೆ ಹಾಕಿಸಿತು. ಇನ್ನು ಸಂಪಾದಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸುವುದೇ ಬಾಕಿ ಉಳಿದಿರುವುದು ಎಂಬುದನ್ನು ಅರಿತಿದ್ದ ನಾನು ಬೇರೆ ಪ್ರಾಂತಕ್ಕೆ ಹೋಗಿ ಪತ್ರಿಕೆ ಹೊರತಂದು ಮುಂಬರುವ ಮೈಸೂರು ಚಲೋ ಸತ್ಯಾಗ್ರಹಕ್ಕೆ ಬೆಂಬಲವಾಗಿ ನಿಲ್ಲುವುದೇ ಸೈ ಎಂದು ನಿರ್ಧರಿಸಿ ಮಿತ್ರ ಕೆ.ಆರ್. ಶ್ರೀಧರಮೂರ್ತಿಯವರನ್ನು ಕರೆದುಕೊಂಡು ಆಂಧ್ರದ ಹಿಂದೂಪುರಕ್ಕೆ ಹೋಗಿ ಅಲ್ಲಿಂದ ಪೌರವಾಣಿ ಪತ್ರಿಕೆ ಹೊರತರಲು ನಿಶ್ಚಯಿಸಿದೆ.

ಹಿಂದೂಪುರದಲ್ಲಿ ಸಿರಾ ಕಡೆಯವರಾದ ಲಿಂಗಣ್ಣ ಎಂಬುವ ಗಣ್ಯರಿದ್ದರು. ಅವರ ಸಹಾಯ ಪಡೆದು ಹಿಂದೂಪುರದ ಸುದರ್ಶನಾ ಮುದ್ರಣಾಲಯದಲ್ಲಿ ಪೌರವಾಣಿ ಅಚ್ಚು ಹಾಕಿಸುವುದೆಂದು ನಿರ್ಧರಿಸಲಾಯಿತು. ಅನಂತಪುರಕ್ಕೆ ಹೋಗಿ ಅಲ್ಲಿಯ ಕಲೆಕ್ಟರ್ ಸಮ್ಮುಖದಲ್ಲಿ ಪೌರವಾಣಿ ಪತ್ರಿಕೆಯ ಸಂಪಾದಕರಾಗಿ ನೋಂದಾಯಿಸಿಕೊಂಡೆ. ಬೆಂಗಳೂರಿನಿಂದ ಮೈಸೂರು ಸಂಸ್ಥಾನದ ಇತರ ಕಡೆಗಳಿಂದ ಸುದ್ದಿ ತರಿಸಿಕೊಂಡು `ಮೈಸೂರು ಚಲೋ’ ಸತ್ಯಾಗ್ರಹಕ್ಕೆ ಪೂರಕವಾಗಿ ಪೌರವಾಣಿಯನ್ನು ನಡೆಸಲಾಯಿತು. ಪ್ರತಿದಿನವೂ ಒಬ್ಬ ಸತ್ಯಾಗ್ರಹಿಯ ಮೂಲಕ ಪತ್ರಿಕೆ ಬಂಡಲನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಆತನು ಪೊಲೀಸರ ಬಂಧನಕ್ಕೆ ತಯಾರಾಗಿಯೇ ಹೋಗಬೇಕಾಗಿತ್ತು.

ನನ್ನ ನೆರವಿಗೆ ಬೆಂಗಳೂರಿನಿಂದ ರುಮಾಲೆ ಚೆನ್ನಬಸವಯ್ಯನವರು, ತಿರುಮಲೆ ತೀರಂಗಾಚಾರ್ಯರು, ಮೈಸೂರಿನ ಎಚ್.ವಿ. ಸುಬ್ಬರಾಮಯ್ಯ, ಮಂಗಳೂರಿನ ಹಿಂದಿ ಪ್ರಚಾರಕ ಕೆ.ಎಲ್. ಶರ್ಮಾ, ಸೂರ್ಯನಾರಾಯಣ, ಕೃಷ್ಣಮೂರ್ತಿ ಮುಂತಾದವರಿದ್ದರು. 38 ದಿನ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿ, ಆ ನಂತರ ಬೆಂಗಳೂರಿಗೆ ಹಿಂತಿರುಗಿದೆ.

ಇದನ್ನೆಲ್ಲ ಇಲ್ಲಿ ಹೇಳಲು ಒಂದು ಕಾರಣವಿದೆ. ಕಾಲದ ಓಘದಲ್ಲಿ ಆಗಾಗ್ಗೆ ಇಂಥಾ ಕೆಟ್ಟ ಘಟ್ಟಗಳು ಎದುರಾಗುತ್ತಲೇ ಇರುತ್ತವೆ. ಇಂಥಾ ಘಟ್ಟಗಳು ಹೊಸದೂ ಅಲ್ಲ, ಅನಂತವಾದವೂ ಅಲ್ಲ. ಅವುಗಳಿಗೆ ದಿಟ್ಟವಾಗಿ ಉತ್ತರಿಸುವ ಪಣ ತೊಟ್ಟು ನಿಲ್ಲುವ ಗಟ್ಟಿ ಧೈರ್ಯ ಮಾಡುವುದೇ ನಿಜವಾದ ದೇಶಪ್ರೇಮಿಯ ಕಾಯಕ. ಗಾಂಧೀಜಿ ಮಾಡಿದ್ದೂ ಇದನ್ನೇ. ಈಗಲೂ ಅಂತಹುದೇ ಕಾಲ ಮರುಕಳಿಸಿದೆ. ಅಂದರೆ, ನಾವೀಗ ನಮ್ಮ ದೇಶಪ್ರೇಮವನ್ನು ಪಣಕ್ಕೊಡ್ಡುವ ಸಮಯ ಎದುರಾಗಿದೆ. ದೇಶಪ್ರೇಮಿಗಳ ದನಿ ಎಂದಿಗೂ ಉಡುಗುವಂತದ್ದಲ್ಲ, ಅದು ಗುಡುಗುವಂತದ್ದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...