Homeಸಾಹಿತ್ಯ-ಸಂಸ್ಕೃತಿಕವನಕವನ | ಕನಸಾಗಿ ಬಿಡಲಿ ಈ ವಾಸ್ತವ

ಕವನ | ಕನಸಾಗಿ ಬಿಡಲಿ ಈ ವಾಸ್ತವ

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಏನಾಗಿದೆ ಈ ದೇಶಕೆ
ಎಲ್ಲಿಂದ ಬಂತು
ಇಂಥಾ ದುರ್ಬುದ್ಧಿ
ಈ ನನ್ನ ನೆಲಕೆ…

ಕಿಟಾರನೆ ಚೀರಿಕೊಂಡು
ಕೆಟ್ಟ ಕನಸಿಂದ
ಹೊರಬರಬೇಕು ಅನಿಸುತಿದೆ
ಆದರೆ ಸಾಧ್ಯವಾಗುತಿಲ್ಲ
ಯಾಕೆಂದರೆ
ಇದು ಕನಸಲ್ಲ…. ವಾಸ್ತವ..!!!

ಆ ದೇವರಲಿ
ನನ್ನದು ಒಂದೇ ಕೋರಿಕೆ
ಈ ವಾಸ್ತವ ಕನಸಾಗಿ ಬಿಡಲಿ
ನನ್ನ ಈ ಅನುಭವವೆಲ್ಲ
ಗಾಢ ನಿದಿರೆಯಾಗಿಬಿಡಲಿ…

ಇಲ್ಲವಾದರೆ
ನಾ ಹೇಗೆ ನಂಬಲಿ;
ಅತ್ಯಾಚಾರಿ ಬಾಬಾನ
ಗೂಂಡಾಗಳು ನಾಡನು ಸುಟ್ಟು
ಬೆಂಕಿಯ ಕುಲುಮೆಯಾಗಿಸಿದಾಗ
ಗಾಢ ಮೌನದಿಂದಿದ್ದ,
ವಿಪರೀತವೆನಿಸುವಷ್ಟು
ತಾಳ್ಮೆಗೆ ಜಾರಿದ್ದ
ಪೊಲೀಸರ ನಳಿಕೆಗಳು
ವಿಷಾನಿಲದ ವಿರುದ್ದ ದನಿ ಬಿಚ್ಚಿದ
ತನ್ನದೇ ಅಕ್ಕ, ಅಣ್ಣ,
ತಂಗಿ, ತಾಯಂದಿರ
ಮೇಲೆ ಭೋರ್ಗರೆದು
ನಡುಬೀದಿಯಲಿ ನೆತ್ತರನು
ಹೆಪ್ಪುಗಟ್ಟಿಸುವ
ಈ ಹುನ್ನಾರವ
ನಾ ಹೇಗೆ ನಂಬಲಿ.

ಈ ವಾಸ್ತವ ಕನಸಾಗಿ ಬಿಡಲಿ
ನನ್ನ ಈ ಅನುಭವವೆಲ್ಲಾ
ಗಾಢ ನಿದಿರೆಯಾಗಿಬಿಡಲಿ…

ಜೀವಾನಿಲ ಸಿಗದೆ
ಬಾಡಿದ ಆ ಎಳೆ
ಮೊಗ್ಗುಗಳ ದಾರುಣವ,
ಗೋಮಾತೆಯ ನೆಪವಿಟ್ಟು
ಮನುಷ್ಯತ್ವದ ಮೇಲೆ
ಸವಾರಿ ಮಾಡಿದ
ಆ ಮೃಗಗಳ ಅಟ್ಟಹಾಸವ,
ಬೆಳಗು ತಾರೆಯೊಂದನು
ಅಸ್ಪೃಶ್ಯ ವಸಂತದೊಳಗೆ
ಹೂತು ಸಮಾಧಿ ಮಾಡಿದ ಸತ್ಯವ,
ನಾ ಹೇಗೆ ನಂಬಲಿ.

ಈ ವಾಸ್ತವ ಕನಸಾಗಿ ಬಿಡಲಿ
ನನ್ನ ಈ ಅನುಭವವೆಲ್ಲಾ
ಗಾಢ ನಿದಿರೆಯಾಗಿಬಿಡಲಿ…

ಸೈತಾನನ ಸನ್ಮಾನವ ಕಂಡು
ಗತದ ಸಮಾಧಿಯೊಳಗೆ
ಹೊರಳಾಡಿ ರೋದಿಸುತಿರುವ
ಆ ಸಹಸ್ರ ಸಾವಿರ ಆತ್ಮಗಳನು
ನಾನು ಏನೆಂದು ಸಂತೈಸಲಿ;
ಅಮಾಯಕ ಬಾಲ್ಯವನು
ಹರಿದು ಮುಕ್ಕಿ, ದೇಶಪ್ರೇಮದ
ಜೈಕಾರ ಕೂಗಿಕೊಂಡ
ಜೀವದ್ರೋಹಿಗಳ ನಡುವೆ
ನಾ ಭಾರತೀಯನೆಂದು
ಹೇಗೆ ತಾನೆ ತಲೆಯೆತ್ತಿ ನಿಲ್ಲಲಿ.

ಸಾಕು, ಈ ವಾಸ್ತವ ಕನಸಾಗಿ ಬಿಡಲಿ
ನನ್ನ ಈ ಅನುಭವವೆಲ್ಲಾ
ಗಾಢ ನಿದಿರೆಯಾಗಿಬಿಡಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...