ಕೊಲೆಗಡುಕ ಜಾತಿ ಪ್ರತಿಷ್ಠೆಗೆ ತಂದೆಯ ಜೊತೆಗೆ ಸಮಾಜವೂ ಕಾರಣವಾಗಿದೆ

ಖಲೀಲ್ ಗಿಬ್ರಾನ್ ಅವರ ಪ್ರಾಫೆಟ್ ಎನ್ನುವ ಪುಸ್ತಕದಲ್ಲಿ ಒಂದು ಪ್ರಸಂಗ ಬರುತ್ತೆ. ಒಬ್ಬ ತಪ್ಪಿತಸ್ಥನಿಗೆ ಕಲ್ಲುಹೊಡೆದು ಶಿಕ್ಸಿಸುವ ಪ್ರಸಂಗ. ‘ನಿಮ್ಮಲ್ಲಿ ಯಾರಾದರೂ ಇವನು ಮಾಡಿದ ಅಪರಾಧವನ್ನು ನೀವು ನಿಮ್ಮ ಕಲ್ಪನೆಯಲ್ಲಿ ಮಾಡಲು ಸಾಧ್ಯವಾಗದೇ ಇರುವವರು ಮಾತ್ರ ಖಂಡಿತ ಮುಂದೆ ಬನ್ನಿ, ಕಲ್ಲೆಸೆಯಿರಿ’ ಎಂದು ಜನರನ್ನುದ್ದೇಶಿಸಿ ಹೇಳಿದಾಗ ಯಾರೊಬ್ಬರೂ ಕಲ್ಲೆಸೆಯಲು ಮುಂದಾಗುವುದಿಲ್ಲ.
ಒಬ್ಬ ಸಿನೆಮಾದವನಾಗಿ-2010 ರಲ್ಲಿ ದಿಬಾಕರ್ ಬ್ಯಾನರ್ಜೀ ನಿರ್ದೇಶಿಸಿದ ಲವ್ ಸೆಕ್ಸ್ ಔರ್ ಧೋಕಾ ಎನ್ನುವ ಚಿತ್ರ ಬಿಡುಗಡೆಯಾಯಿತು. ಅದರಲ್ಲಿ ದಿಬಾಕರ್ ಬ್ಯಾನರ್ಜೀ ಊಹಿಸಲೂ ಕಷ್ಟವಾಗುವಂತಹ, ಅರ್ಥಮಾಡಿಕೊಳ್ಳಲು ಸಾಧ್ಯವೇ ಆಗದಂಥ ಕೆಲವು ಘಟನೆ, ಪಾತ್ರಗಳನ್ನು ಎತ್ತಿಕೊಂಡು ಆ ಸಿನೆಮಾ ಮಾಡಿದರು. ಎಮ್‍ಎಮ್‍ಎಸ್ ಹಗರಣದ ವಿಷಯವನ್ನು ಇಟ್ಟುಕೊಂಡು ಒಂದು ಕತೆಯ ಜೊತೆಗೆ ಮರ್ಯಾದೆ ಹತ್ಯೆ ಮತ್ತು ಸ್ಟಿಂಗ್ ಆಪರೇಷನ್ ವಿಷಯ ಇಟ್ಟುಕೊಂಡು ಇನ್ನೆರಡು ಕತೆಗಳನ್ನು ಸೇರಿಸಿ ಮಾಡಿದ ಆ ಸಿನೆಮಾ ನೋಡುಗರಿಗೆ ಆಘಾತ ನೀಡುವ ಶಕ್ತಿಯನ್ನೊಳಗೊಂಡಿತ್ತು.
ಅದರಲ್ಲಿಯ ಒಂದು ಕತೆ ಎಮ್‍ಎಮ್‍ಎಸ್ ಹಗರಣದ ಕುರಿತಾಗಿತ್ತು, ಬರೀ ದ್ವೇಷ ಮತ್ತು ಹೇವರಿಕೆಗೆ ಮಾತ್ರ ಪಾತ್ರನಾಗಬಲ್ಲ ಒಬ್ಬ ಯುವಕ ಅದರ ಪ್ರಮುಖ ಪಾತ್ರಧಾರಿ. ಆತನ ಪಾತ್ರವನ್ನು ಒಬ್ಬ ದುರ್ಬಲ ಮನುಷ್ಯ ಎನ್ನುವ ಹಾಗೆ ಒಂದಿಷ್ಟು ಸಹಾನುಭೂತಿಯಿಂದ, ‘there are no negative characters’ ಎನ್ನುವ ನಿಯಮವನ್ನನುಸರಿಸಿ ಸೃಷ್ಟಿಸಲಾಗಿತ್ತು. ಸಿನೆಮಾ ಎನ್ನುವ ಕಥೆಯನ್ನು ಹೇಳುವ ಕಲೆಯ ಅತ್ಯದ್ಭುತ ಪ್ರದರ್ಶನವನ್ನು ಆ ಸಿನೆಮಾದಲ್ಲಿ ಸಾಧಿಸಲಾಗಿತ್ತು. ಆ ಚಿತ್ರದ ಮೊದಲ ಕತೆ ‘ಮರ್ಯಾದೆ ಹತ್ಯೆ’ ಯ ಕುರಿತದ್ದಾಗಿತ್ತು. ಆದರೆ ಅಲ್ಲಿ ಯುವಕರ ಪ್ರೀತಿ, ರೋಮಾನ್ಸ್ ಮತ್ತು ಸಡನ್ನಾಗಿ ಬರುವ ಘೋರ ಹತ್ಯೆಗೆ ಆ ಕತೆ ಸೀಮಿತಗೊಂಡಿತು. ಎಮ್‍ಎಮ್‍ಎಸ್ ಹಗರಣದ ಕಥೆಯ ಹಾಗೆ ಆ ಯುವಕನನ್ನು ಅರ್ಥ ಮಾಡಿಕೊಂಡು ಚಿತ್ರಿಸುವುದನ್ನು ಬಿಡಿ, ಈ ಕತೆಯಲ್ಲಿ ಹುಡುಗಿಯ ಅಪ್ಪ, ಸಹೋದರರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಏಕೆ? ಅದು ನಿರ್ದೇಶಕ ದಿಬಾಕರ್ ಬ್ಯಾನರ್ಜೀಯ ಲಿಮಿಟೇಷನ್ ಆಗಿರಬಹುದು. ನಾವ್ಹೇಗೆ ಅರ್ಥೈಸಬೇಕು? ಸಮಾಜದಲ್ಲಿ ತನ್ನ ಪ್ರತಿಷ್ಠೆಯೇ ಜೀವನದ ಸರ್ವಸ್ವ ಎಂದು ಬದುಕುವ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ತನ್ನ ಮಗಳ ಮದುವೆ ಸಮಾರಂಭಕ್ಕಾಗಿಯೇ ವರ್ಷಗಟ್ಟಲೇ ಕನಸು ಕಾಣುತ್ತಿರುವ ಕುಟುಂಬಗಳಿಗೆ ತನ್ನ ಗರ್ಭಿಣಿ ಮಗಳ ಗಂಡನನ್ನು ಕೊಂದವನು ಅರ್ಥವಾಗುತ್ತಿರಬಹುದು. ಏನಿದು ಈ ಮರ್ಯಾದೆ, ಪ್ರತಿಷ್ಠೆ? ತನ್ನ ಒಡಲ ಕುಡಿಯನ್ನೇ ಹೊಸಕಿಹಾಕುವ ಹೃದಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ? ಅರ್ಥ ಮಾಡಿಕೊಳ್ಳಬೇಕೆ? ಅರ್ಥ ಮಾಡಿಕೊಳ್ಳದೇ ಕತೆ ಬರೆಯಬಹುದೇ? ಅರ್ಥ ಮಾಡಿಕೊಳ್ಳದೇ ಅದರ ಪರಿಹಾರ ಕಂಡುಹಿಡಿಯಬಲ್ಲೆವೆ? ತನ್ನ ಗರ್ಭಿಣಿ ಮಗಳ ಗಂಡನನ್ನು ಕೊಲ್ಲಿಸಿದವನ್ನು ಕಲ್ಲೆಸೆದು ಶಿಕ್ಷಿಸುವ ಪ್ರಸಂಗ ಬಂದರೆ ಎಷ್ಟು ಜನ ಕಲ್ಲೆಸೆಯಲು ಹಿಂದೇಟುಹಾಕಬಹುದು? ಒಬ್ಬ ಸಿನೆಮಾದವನಾಗಿ ಈ ಪ್ರಶ್ನೆ ನನಗೆ ಕಾಡುತ್ತಿದೆ.
ಈ ಕೊಲೆ ಮತ್ತು ಕೊಲೆಯ ಹಿಂದಿನ ಸತ್ಯ ನಮ್ಮ ಸಮಾಜದ ವಾಸ್ತವ ಎನ್ನುವುದನ್ನು ಮೊದಲು ನಾವು ಒಪ್ಪಿಕೊಳ್ಳುವ. ಏಕೆಂದರೆ, ತಂದೆಯೇ ಮಗಳನ್ನು ಅಥವಾ ಆಕೆಯ ಗಂಡನನ್ನು ಕೊಲ್ಲಿಸುವುದನ್ನು ಯಾವುದೇ ಸಮಾಜದ ಮನುಷ್ಯರು ಒಪ್ಪುವುದಿಲ್ಲವೆಂದು, ಅವರು ಬಹಳ ಅಲ್ಪಸಂಖ್ಯಾತರೆಂದು ಹೆಚ್ಚಿನವರು ಭಾವಿಸಿದಂತಿದೆ. ಇಲ್ಲವೇ, ‘ನೋಡಿ ನಿಮ್ಮ ದುಷ್ಟ ಜಾತಿವ್ಯವಸ್ಥೆ; ಅದು ಎಷ್ಟು ಕ್ರೂರಿ. ಇದನ್ನು ನೀವೂ ಸಮರ್ಥಿಸಲಾರಿರಿ’ ಎಂಬ ಧ್ವನಿಯೊಂದಿಗೆ ಹಲವರು ಫೇಸ್‍ಬುಕ್‍ನಲ್ಲಿ ಬರೆಯುತ್ತಿದ್ದಾರೆ. ಇದು ನಿಜವೇ. ಇಂತಹ ಕ್ರೌರ್ಯದ ವಿರುದ್ಧ ಮಾತನಾಡದೇ ಸುಮ್ಮನಿರುವವರು ಯಾರ್ಯಾರಿದ್ದಾರೆ ನೋಡೋಣ. ಸುಮ್ಮನಿರುವ ಎಲ್ಲರೂ ಸಮರ್ಥಿಸುತ್ತಿದ್ದಾರೆ ಎಂದು ಹೇಳಲಾಗದು ಎಂಬುದೇನೋ ನಿಜ. ಅದೇ ಸಂದರ್ಭದಲ್ಲಿ ಅವರೆಲ್ಲರೂ ಈ ಹತ್ಯೆಯನ್ನು ಖಂಡಿಸುತ್ತಿದ್ದಾರೆ ಎಂದುಕೊಳ್ಳುವುದೂ ವಾಸ್ತವವಲ್ಲ.
ಸಾಮಾನ್ಯವಾಗಿ ಬಹಳ ಆರ್ಟಿಕ್ಯುಲೇಟ್ ಆಗಿರುವ ಬಲಪಂಥೀಯ ಅಜೆಂಡಾದ ಮಂದಿ ಇಂತಹ ಪ್ರಕರಣಗಳು ನಡೆದಾಗ ಏನು ಮಾಡುತ್ತಾರೆ. ಅದರಲ್ಲಿ ಹಿಂದೂ-ಮುಸ್ಲಿಂ ವಿಚಾರ ಇದ್ದರೆ ಬಹಳ ಸಕ್ರಿಯವಾಗಿಬಿಡುತ್ತಾರೆ. ಇಲ್ಲದಿದ್ದರೆ ದಿವ್ಯ ಮೌನ. ಹಿಂದೂ ನಾವೆಲ್ಲಾ ಒಂದು ಮಾಡಲು ಹೊರಟಿರುವವರು ಪ್ರತಿಕ್ರಿಯಿಸಲೇಬೇಕಲ್ಲವೇ? ಇಲ್ಲ. ಏಕೆಂದರೆ ಅವರು ಮೆಜಾರಿಟಿಯ ಭಾಷೆಯನ್ನು, ಭಾವನೆಯನ್ನು ಮಾತನಾಡಲು ಮತ್ತು ರೂಪಿಸಲು ಪ್ರಯತ್ನಿಸುತ್ತಾರೆ. ಬಹುಶಃ ಅವರಿಗೆ ಗೊತ್ತು ಮೆಜಾರಿಟಿ ಈ ಮದುವೆಯ ಪರವಾಗಿಲ್ಲ ಎಂಬುದನ್ನು. ಸಾಧ್ಯವಾದರೆ, ಈ ಹತ್ಯೆಯ ಪರವಾಗಿಯೂ ಮೆಜಾರಿಟಿಯ ಒಪೀನಿಯನ್ ಅನ್ನು ಮೊಬಿಲೈಸ್ ಮಾಡಲು ಅವರು ಪರೋಕ್ಷವಾಗಿ ಯತ್ನಿಸುತ್ತಾರೆ. ಕೆಲವು ಸಾರಿ ಸಕ್ರಿಯವಾಗಿ; ಕೆಲವು ಸಾರಿ ಮೌನವಾಗಿ.
ಇದು ಸಾಧ್ಯವಾಗುವುದು ಹೇಗೆ? ಮೆಜಾರಿಟಿ ಜನರು ನಿಜಕ್ಕೂ ತಮಗಿಂತ ‘ಕೆಳ’ ಜಾತಿಯ ಹುಡುಗನೊಂದಿಗೆ ತಮ್ಮ ಮಗಳು ಮದುವೆಯಾಗುವುದು ಪ್ರತಿಷ್ಠೆಗೆ ಕುಂದು ಎಂದು ಭಾವಿಸುವುದರಿಂದ. ಹಾಗಾಗಿಯೇ ಅವರು ಅಮೃತಾಳ ತಂದೆಗೆ ಕಲ್ಲೆಸೆಯಲು ಬರಲಾರರು. ಆ ದೃಷ್ಟಿಯಲ್ಲಿ ಅಮೃತಾಳ ತಂದೆ ಎನ್ನುವುದು ಆತನೊಬ್ಬನೇ ಅಲ್ಲ. ಈ ಸಮಾಜದ ಮೆಜಾರಿಟಿ. ಇದನ್ನು ಸರಿಪಡಿಸದ ಜಾತಿವಿನಾಶದ ಪ್ರಯತ್ನವು ಅದರಲ್ಲಿ ಯಶಸ್ವಿಯಾಗುವುದಿಲ್ಲ.
ಜಾತಿ ಪ್ರತಿಷ್ಠೆಯು ಮಕ್ಕಳ ಮೇಲಿನ ಮಮತೆಗಿಂತ ದೊಡ್ಡದು ಎಂಬುದು ಎಂದೋ ಸಾಬೀತಾಗಿ ಹೋಗಿದೆ. ಅದು ವರ್ಗಕ್ಕಿಂತಲೂ ದೊಡ್ಡದು ಎಂತಲೂ ಹಲವು ಪ್ರಕರಣಗಳು ತೋರಿವೆ. ಉದಾಹರಣೆಗೆ ಈ ಉದಾಹರಣೆಯಲ್ಲೇ ಪ್ರಣಯ್ ಬಡವನಿದ್ದಂತೆ ತೋರುವುದಿಲ್ಲ. ಹಾಗಾದರೆ ಜಾತಿ ಪ್ರತಿಷ್ಠೆಯನ್ನು ಕಡಿಮೆ ಮಾಡುವ ಬಗೆ ಹೇಗೆ? ಉತ್ತರ ಸುಲಭವಿಲ್ಲ. ಜಾತಿ ಪ್ರತಿಷ್ಠೆಯು ತನಗೆ ಅಷ್ಟು ದೊಡ್ಡದು ಎಂದು ಮಾರುತಿರಾವ್‍ಗೆ ಅನಿಸಲು ಕಾರಣ ಆತನ ಕುಟುಂಬ ಮಾತ್ರ ಕಾರಣವಲ್ಲ; ಇಂದು ಈ ಪ್ರಕರಣದಲ್ಲಿ ಕರುಳು ಚುರುಕ್ ಅನ್ನಿಸದೇ ಹೋದ ಎಲ್ಲಾ ಜಾತಿವಂತರೂ ಕಾರಣವಾಗಿದ್ದಾರೆ. ಅವರೇ ಈ ಜಾತಿ ಪ್ರತಿಷ್ಠೆಯನ್ನು ಕಾಪಾಡಿಕೊಂಡು ಬರಲು ಕಾರಣರಾಗಿದ್ದಾರೆ. ಅವರೆಲ್ಲರಲ್ಲೂ ಕ್ರೌರ್ಯಕ್ಕೆ ಮತ್ತು ಅಮಾನವೀಯತೆಗೆ ಕಲ್ಲು ಹೊಡೆಯಲು ಬೇಕಾದ ನೈತಿಕತೆಯನ್ನು ತುಂಬಿಸಲು ಬೇಕಾದ ಸುದೀರ್ಘ ಪ್ರಯತ್ನ ಇನ್ನಾದರೂ ಆರಂಭಿಸೋಣ.

– ರಾಜಶೇಖರ್ ಅಕ್ಕಿ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here