ರಹಮತ್ ತರೀಕೆರೆ |
ಈಚೆಗೆ ಖುಶವಂತ ಸಿಂಗರ ಕಾದಂಬರಿ `ಟ್ರೈನ್ ಟು ಪಾಕಿಸ್ತಾನ್’ ಓದಿದೆ. ಓದಿದ ಬಳಿಕ ವರ್ತಮಾನಕ್ಕೆ ಇತಿಹಾಸದ ಅಗತ್ಯವಿದೆಯೇ? ಅಗತ್ಯವಿರುವುದಾರೆ ಅದು ಹೇಗೆ ಬೇಕು ಎಂಬ ಪ್ರಶ್ನೆ ಎದುರಾದವು. ಈ ಪ್ರಶ್ನೆ ಪ್ರಸ್ತುತ ಕೂಡ. ಯಾಕೆಂದರೆ, ನಾವು ಯಾರೊ ದೊರೆ ಮಂದಿರ ಮುರಿದು ಮಸೀದಿ ಕಟ್ಟಿಸಿದನೆಂದು ದೇಶವನ್ನು ರಣರಂಗ ಮಾಡಿದ್ದೇವೆ. ಸಮಾಜವನ್ನು ಚರಿತ್ರೆಯಲ್ಲಿ ನಡೆಯಿತು ಎನ್ನಲಾದ ಘಟನೆಗಳಿಗೆ ವರ್ತಮಾನವು ದುಬಾರಿ ಬೆಲೆ ತೆರುವಂತೆ ಮಾಡಿದ್ದೇವೆ. ದನದ ಹೆಸರಲ್ಲಿ ಸಹಮಾನವರ ಆಹಾರವನ್ನು ಕಿತ್ತುಕೊಳ್ಳುವ, ಅವರನ್ನು ಬೀದಿಯಲ್ಲಿ ಬಡಿದುಕೊಲ್ಲುವ ಕೆಲಸ ಮಾಡುತ್ತಿದ್ದೇವೆ. ನಾಗರಿಕರು ಪರಸ್ಪರ ಹೊಡೆದಾಡುವ ಮತ್ತು ಕೊಂದುಕೊಳ್ಳುವ ನತದೃಷ್ಟ ಸಮಾಜ ನಿರ್ಮಾಣವಾಗಿದೆ. ಯಾವುದೆ ಬಗೆಯ ನಾಗರಿಕ ಸಂಘರ್ಷಗಳಿಗೆ ವರ್ತಮಾನದ ಆರ್ಥಿಕ ರಾಜಕೀಯ ಸಾಮಾಜಿಕ ಒತ್ತಾಸೆಗಳಿರುತ್ತವೆ. ಇತಿಹಾಸವು ಅದಕ್ಕೆ ನೆಪವಾಗಿ ಬಂದಿರುತ್ತದೆ. ಹೀಗಾಗಿ ಇತಿಹಾಸ ಎಂದರೇನು ಎಂಬ ಮೂಲಭೂತ ಪ್ರಶ್ನೆಯನ್ನು ಕಾಡುತ್ತದೆ.
ಇತಿಹಾಸವೆಂದರೆ, ಚರಿತ್ರೆಯಲ್ಲಿ ನಡೆದ ಘಟನೆಗಳನ್ನು ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ ಕಟ್ಟಿದ ಗತಕಥನ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಇದು ಅರ್ಧಸತ್ಯ. ವಾಸ್ತವವೇನೆಂದರೆ, ಗತವನ್ನು ವರ್ತಮಾನದ ಮತ್ತು ಭವಿಷದ ಮೇಲೆ ನಿಯಂತ್ರಣ ಸಾಧಿಸಲು ಪುನಾರಚನೆ ಮಾಡಲಾಗುತ್ತದೆ. ಟಿಪ್ಪು ಮಾಡಿದ ಕ್ರೌರ್ಯದ ನಿದರ್ಶನಗಳನ್ನು ಮಾತ್ರ ಹೆಕ್ಕಿ ಅವನೊಬ್ಬ ಕ್ರೂರದೊರೆಯಾಗಿದ್ದ ಎಂದು ಇತಿಹಾಸ ಕಟ್ಟುವ ಉದ್ದೇಶ, ವರ್ತಮಾನದಲ್ಲಿರುವ ಮುಸ್ಲಿಮರನ್ನು ಅಪರಾಧಿಗಳನ್ನಾಗಿ ಘೋಷಿಸುವ, ಅವರನ್ನು ಶಿಕ್ಷಿಸುವುದಕ್ಕೆ ನ್ಯಾಯಬದ್ಧತೆ ಒದಗಿಸಿಕೊಳ್ಳುವ ಕ್ರಿಯೆಯ ಭಾಗವಾಗಿದೆ. ನಾಜಿಗಳು ಯಹೂದಿಗಳ ಕೊಲೆಗೆ ಚರಿತ್ರೆಯಲ್ಲಿ ಅವರು ಕ್ರೈಸ್ತರನ್ನು ಶಿಲುಬಿಗೇರಿಸಿದ ಘಟನೆಯನ್ನು ನೆಪವಾಗಿ ಕೊಡುತ್ತಿದ್ದರು. ವಾಸ್ತವದಲ್ಲಿ ಯಹೂದಿಗಳನ್ನು ವರ್ತಮಾನದಲ್ಲಿ ನಿಯಂತ್ರಿಸುವುದು ಅವರ ಉದ್ದೇಶವಾಗಿತ್ತು. ಇದೇ ಯಹೂದಿಗಳು ಪ್ಯಾಲೆಸ್ಟೈನರ ದಮನಕ್ಕೆ ಹಳೆಯ ಒಡಂಬಡಿಕೆಯಲ್ಲಿ ಯಹೂವನು ನೀಡಿದ ಪ್ರಾಮಿಸ್ಡ್ ಲ್ಯಾಂಡ್ ಪರಿಕಲ್ಪನೆಯನ್ನು ಮುಂದೊಡ್ಡಲಾಗುತ್ತಿದೆ. ಆದರೆ ಅವರಿಗೆ ಪ್ಯಾಲೆಸ್ಟೈನನ್ನು ವಶಪಡಿಸಿಕೊಂಡು ಅಲ್ಲಿಂದ ಅರಬರನ್ನು ಎಬ್ಬಿಸಬೇಕಾಗಿದೆ. ಪುರಾಣದ ದೇವತೆಗಳಾಗಿದ್ದವರು ಮಾಂಸ ತಿನ್ನುತ್ತಿದ್ದರು; ವೇದಗಳಲ್ಲಿ ಯಾಗಗಳಲ್ಲಿ ಪಶುವಧೆ ಮಾಡಲಾಗುತ್ತಿತ್ತು ಎಂಬ ಅಂಶಗಳನ್ನು ಕೆಲವರು ಯಾಕೆ ಉಗ್ರವಾಗಿ ಅಲ್ಲಗಳೆಯುವರು? ಯಾಕೆಂದರೆ, ಅವರಿಗೆ ಮಾಂಸತಿನ್ನದ ಸಸ್ಯಾಹಾರಿ ಸಮಾಜವನ್ನು ನಿರ್ಮಿಸಬೇಕಿದೆ. ಸಸ್ಯಾಹಾರ ಮತ್ತು ಸಸ್ಯಾಹಾರಿಗಳನ್ನು ಶ್ರೇಷ್ಠವೆಂದು, ಮಾಂಸಾಹಾರ ತಾಮಸವೆಂದು ಕೀಳೆಂದು ಸ್ಥಾಪಿಸಬೇಕಿದೆ.
ಹೀಗಾಗಿಯೇ ಭಾರತದಲ್ಲಿ ಇತಿಹಾಸವು ಬೇರೆ ಸಮಾಜವಿಜ್ಞಾನಗಳ ಹಾಗೆ ಕೇವಲ ಒಂದು ಜ್ಞಾನಶಾಸ್ತ್ರವಲ್ಲ. ಅದು ಸಮಾಜದ ವಿವಿಧ ವರ್ಗಗಳ ಅಸ್ತಿತ್ವ ಮತ್ತು ಹಿತಾಸಕ್ತಿಗಳ ಜತೆ ಗಾಢವಾಗಿ ಲಗತ್ತಾಗಿರುವ ಉಪಕರಣ. ಅಧಿಕಾರಸ್ಥ ವರ್ಗಗಳು ತಮ್ಮ ಯಜಮಾನಿಕೆ ಮುಂದುವರೆಸಲು ಅನುವಾಗುವಂತೆ ಇತಿಹಾಸ ಕಟ್ಟಿದರೆ, ಅಧಿಕಾರ ಇಲ್ಲದ ಸಮುದಾಯಗಳು ತಮಗೆ ಸಾಮಾಜಿಕ ನ್ಯಾಯ ಪಡೆಯಲು ಇತಿಹಾಸ ಕಟ್ಟುತ್ತವೆ. ವೈಭವೀಕರಣದ ಧಾಟಿಯಲ್ಲಿ ಇತಿಹಾಸ ನೋಡುವವರು ವರ್ತಮಾನ ಸಮಾಜದಲ್ಲಿರುವ ತರತಮಗಳಿಗೆ ಪರದೆಯನ್ನು ಎಳೆಯುತ್ತಿರುತ್ತಾರೆ. ಇತಿಹಾಸವನ್ನು ಅದರ ದೋಷಗಳ ಸಮೇತ ನೋಡುವವವರು, ಅದು ಹೇಗೆ ವರ್ತಮಾನದಲ್ಲಿ ಮುಂದುವರೆದಿದೆ ಮತ್ತು ಭವಿಷ್ಯದಲ್ಲಿ ಈ ಅನ್ಯಾಯಗಳು ಹೇಗೆ ಸರಿಯಾಗಬೇಕು ಎಂಬುದನ್ನು ಚಿಂತಿಸುತ್ತಿರುತ್ತಾರೆ. ಎಂತಲೇ ಬಲಪಂಥೀಯರು ಕಟ್ಟುವ ಇತಿಹಾಸದಲ್ಲಿ ಪೂರ್ವಜರ ಸಾಧನೆಗಳು ಹೆಚ್ಚಾಗಿದ್ದರೆ, ದಲಿತರು ಮಹಿಳೆಯರು ದಮನಿತರು ಕಟ್ಟಿಕೊಳ್ಳುವ ಇತಿಹಾಸದಲ್ಲಿ ಎಂತಲೇ ಗಾಯಗಳ ಪ್ರಸ್ತಾಪ ಹೆಚ್ಚಿರುತ್ತದೆ.
ನಮ್ಮಲ್ಲಿ ಇತಿಹಾಸವು ಒಂದೇ ಇರುತ್ತದೆ ಎಂಬುದು. ಅದು ವಸ್ತುನಿಷ್ಠವಾಗಿರುತ್ತದೆ, ಸತ್ಯವನ್ನು ಪ್ರತಿನಿಧಿಸುತ್ತದೆ ಎಂಬ ಕಲ್ಪನೆ ಜನಪ್ರಿಯವಾಗಿದೆ ಮತ್ತು ಆಳವಾಗಿ ಬೇರುಬಿಟ್ಟಿದೆ ವಾಸ್ತವ ಹೀಗೆ ಇರುವುದಿಲ್ಲ. ಗತಕಾಲದಲ್ಲಿ ಅನೇಕ ಘಟನೆಗಳು ನಡೆದುಹೋಗಿವೆ, ಅವನ್ನು ದಾಖಲಿಸುವ ಕೆಲಸ ಇತಿಹಾಸದ್ದು, ನಿಜ. ಆದರೆ ಹಾಗೆ ದಾಖಲಿಸುವಾಗ, ವ್ಯಾಖ್ಯಾನ ವಿಶ್ಲೇಷಣೆಗಳ ಜತೆ ದಾಖಲೆಕಾರರ ದೃಷ್ಟಿಕೋನವೂ ಸಹಜವಾಗಿ ಸೇರಿಕೊಳ್ಳುತ್ತದೆ. ಕೆಲವರು ಗತದ ಕೆಲವು ಅಂಶಗಳನ್ನು ಮುಂಚೂಣಿಗೆ ತಂದು ಕೆಲವನ್ನು ಕೈಬಿಡುತ್ತಾರೆ ಇಲ್ಲವೇ ಅಡಗಿಸಿ ಹೇಳುತ್ತಾರೆ. ದೃಷ್ಟಿಕೋನವಿಲ್ಲದೆ ಇತಿಹಾಸ ಇರುವುದೇ ಇಲ್ಲ. ಒಂದು ಘಟನೆಯ ಮೇಲೆ ಒಂದು ಇತಿಹಾಸ ಎನ್ನುವುದು ಇರುವುದಿಲ್ಲ. ಹಲವು ಇತಿಹಾಸಗಳು ಇರುತ್ತವೆ. ಅವು ಬಹುರೂಪಿಯಾಗಿರುತ್ತವೆ. ಗತವನ್ನು ಮಹಿಳೆ ದಲಿತ ಆದಿವಾಸಿ ಬಡವರ ದೃಷ್ಟಿಕೋನದ ಮೂಲಕ ನೋಡಿದರೆ ಕಾಣುವ ಚಿತ್ರವು, ಅಧಿಕಾರವಿರುವ ಆಳುವವರ್ಗದ ಕಣ್‍ನೋಟದಿಂದ ನೋಡುವಾಗ ಕಾಣುವುದಿಲ್ಲ. ದಾನಶಾಸನಗಳ ಮೂಲಕ ದೊರೆಗಳನ್ನು ನೋಡುತ್ತ ಅವರೆಷ್ಟು ಉದಾರರಾಗಿದ್ದರು ಎಂಬ ಚಿತ್ರವನ್ನು ಕಟ್ಟಲಾಗಿದೆ. ಆದರೆ ಅವರ ದಾನಗಳೆಲ್ಲ ಅಗ್ರಹಾರಕ್ಕೆ ಹೋಗಿವೆ ಎಂದು ನೋಡುವಾಗ, ದಾನಗುಣದಲ್ಲಿರುವ ಸಮಸ್ಯೆ ತಿಳಿಯುತ್ತದೆ. ಸಹಜವಾಗಿಯೇ ಬ್ರಿಟಿಶರು ಕಟ್ಟಿಕೊಟ್ಟ ಭಾರತದ ಚರಿತ್ರೆಗೆ, ತಮ್ಮನ್ನು ಭಾರತದ ರಕ್ಷಕರೆಂದು ಕಾಣಿಸುವುದು, ಈ ಹಿಂದೆ ಆಳಿದ ಮೊಗಲರನ್ನು ದುಷ್ಟರೆಂದು ಚಿತ್ರಿಸುವುದು ಉದ್ದೇಶವಾಗಿತ್ತು. ಟಿಪ್ಪುವಿನ ಬಗ್ಗೆ ಅವರು ಕಟ್ಟಿದ ಮೈಸೂರು ಇತಿಹಾಸಕ್ಕೂ ಇದೇ ತರ್ಕ ಅನ್ವಯವಾಗುತ್ತದೆ. ನಾಗರಿಕ ಲೋಕದ ದೃಷ್ಟಿಕೋನದಿಂದ ಕಟ್ಟಲಾಗಿರುವ ಆಧುನಿಕ ಭಾರತದ ಅಭಿವೃದ್ಧಿಯ ಚರಿತ್ರೆಯನ್ನು ಒಂದೊಮ್ಮೆ ಬುಡಕಟ್ಟು ದೃಷ್ಟಿಯಿಂದ ನೋಡತೊಡಗಿದರೆ, ನಮ್ಮ ಅಭಿವೃದ್ಧಿ ಕಥನವು ಹೇಗೆ ಆದಿವಾಸಿಗಳ ಕಾಡು ನದಿ ಬೆಟ್ಟಗಳನ್ನು ಕಿತ್ತುಕೊಳ್ಳುವ ಅಮಾನುಷ ಕೆಲಸ ಮಾಡಿದೆಯೆಂದು ಗೊತ್ತಾಗುವುದು. ಆದ್ದರಿಂದ ಇತಿಹಾಸ ರಚನೆಯ ಗತಿಯನ್ನು ಘಟನೆಗಳ ಆಯ್ಕೆ ನಿರ್ಧರಿಸುವುದಿಲ್ಲ. ದೃಷ್ಟಿಕೋನ ನಿರ್ಧರಿಸುತ್ತದೆ.
ನಮ್ಮ ಶಿಕ್ಷಣದಲ್ಲಿ ಕಲಿಸಲಾಗುತ್ತಿರುವ ಇತಿಹಾಸ ಯಾರ ದೃಷ್ಟಿಕೋನವುಳ್ಳದ್ದು ಎಂಬ ಪ್ರಶ್ನೆ ಕೇಳಿಕೊಂಡರೆ, ಆಳುವವರ ದೃಷ್ಟಿಕೋನವೇ ಅಲ್ಲಿ ಪ್ರಧಾನವಾಗಿದೆ ಎಂಬುದು ಉತ್ತರ. ಹೀಗಾಗಿಯೇ ತರಗತಿಗಳು ಕೊಡುತ್ತಿರುವುದು ಜ್ಞಾನವನ್ನು ಮಾತ್ರವಲ್ಲ, ದ್ವೇಷವನ್ನು ಕಲಿಸುತ್ತಿವೆ. ನಿರ್ದಿಷ್ಟ ಧರ್ಮದ ಮೇಲೆ ದ್ವೇಷ; ಆಳುವವರ್ಗಗಳ ವೈಭವೀಕರಣ; ಮಹಿಳೆಯರ ಬಡವರ ದೃಷ್ಟಿಕೋನದ ನಿರಾಕರಣೆ ಮಾಡುವ ಇತಿಹಾಸವು ಆಯುಧವಾಗಿದೆ. ಇದರಿಂದಲೇ ಪಠ್ಯಪುಸ್ತಕ ಬದಲಾಯಿಸಲು ಬಲಪಂಥೀಯರು ಮುಗಿಬೀಳುವುದು.
ಯಾವುದೇ ಧರ್ಮ ಸಮುದಾಯ ಪ್ರದೇಶ ಸಂಸ್ಕøತಿಯನ್ನು ಸ್ವಂತ ಅನುಭವದ ಮೂಲಕ ಅರಿಯುವ ಒಂದು ಕ್ರಮವಿದೆ. ಮತ್ತೊಬ್ಬರು ಈ ಕುರಿತು ಸೃಷ್ಟಿಸಿರುವ ವಿಚಾರಗಳ ಮೂಲಕ ಅರಿವ ಇನ್ನೊಂದು ಕ್ರಮವೂ ಇದೆ. ನಾವು ಸಾಮಾನ್ಯವಾಗಿ ಇತಿಹಾಸವನ್ನು ಅರಿಯುವುದು ಮತ್ತೊಬ್ಬರು ತಮ್ಮ ದೃಷ್ಟಿಕೋನದ ಮೂಲಕ ಕಟ್ಟಿದ ಕಥನಗಳ ಮೂಲಕ. ಈ ಕಥನದ ಹಿಂದೆ ಆರೋಗ್ಯಕರ ಮನಸ್ಸಿದ್ದರೆ, ನಮ್ಮ ಮನಸ್ಸು ಕಲುಷಿತವಾಗುವುದಿಲ್ಲ. ಹಾಗಿಲ್ಲದಿದ್ದರೆ ನಾವು ಜ್ಞಾನದ ಹೆಸರಲ್ಲಿ ಪೂರ್ವಗ್ರಹಗಳನ್ನು ಪಡೆದಿರುತ್ತೇವೆ. ಸಿಖ್ಖರೆಂದರೆ ದಡ್ಡರು, ಮುಸ್ಲಿಮರು ಕ್ರೂರಿಗಳು, ಬ್ರಾಹ್ಮಣರು ಜಾತಿವಾದಿಗಳು, ದಕ್ಷಿಣ ಭಾರತೀಯರು ಭಾರತದ ಸಮಗ್ರತೆ ಒಪ್ಪುವುದಿಲ್ಲ, ಆಫ್ರಿಕನರು ನಾಗರಿಕರಾಗದ ಕಾಡುತನವುಳ್ಳವರು ಎಂಬ ಪÀಡಿಯಚ್ಚುಗಳನ್ನು ಗಮನಿಸಬೇಕು. ಇವನ್ನು ಒಡೆಯುವುದು ದೊಡ್ಡ ಸಮಸ್ಯೆಯಾಗಿದೆ. ಭೈರಪ್ಪನವರ `ಆವರಣ’ ಕಾದಂಬರಿಯು ಬಪಂಥೀಯ ರಾಜಕೀಯ ಸಿದ್ಧಾಂತವು ಸೃಷ್ಟಿಸಿರುವ ಪಡಿಯಚ್ಚುಗಳ ನೆಲೆಯಲ್ಲಿ ಹುಟ್ಟಿದ ಕೃತಿ. ಕೆಟ್ಟಕಲೆಯು ಬಲಿಷ್ಠರ ರಾಜಕೀಯ ಸಿದ್ಧಾಂತಗಳಿಗಾಗಿ ಇತಿಹಾಸವನ್ನು ಮರುಕಟ್ಟುತ್ತದೆ. ಲೇಖಕನೊಬ್ಬ ಮಾನವೀಯ ನೆಲೆಯಿಂದ ಇತಿಹಾಸ ನೋಡುವ ಸಾಧ್ಯತೆ ಬಿಟ್ಟುಕೊಟ್ಟು, ಸಿದ್ಧಾಂತಕ್ಕೆ ಕಲೆಯನ್ನು ಬಲಿಗೊಡಬಾರದು. ಅಧಿಕಾರಸ್ಥರು ಕಟ್ಟಿದ ಚರಿತ್ರೆಯ ಸೀಮೋಲ್ಲಂಘನೆ ಮಾಡುವುದೇ ಸೃಜನಶೀಲ ಕಲೆ ಮಾಡುವ ದೊಡ್ಡ ಕೆಲಸ. ಅದನ್ನು ಮಾಡದಿದ್ದರೆ ಅದು ಅಶ್ಲೀಲವಾಗುತ್ತದೆ. ಜನರ ಕಷ್ಟಸುಖಗಳ ಮೂಲಕ ಇತಿಹಾಸ ನೋಡುವ ಇತಿಹಾಸಕಾರರು, ಕಟ್ಟುವುದು ಶಾಸ್ತ್ರವಾದರೂ, ಅದು ಸೃಜನಶೀಲ ಕೃತಿಗಳ ದೃಷ್ಟಿಕೋನಕ್ಕೆ ಸಮೀಪವಾಗಿರುತ್ತದೆ.
ಈ ಹಿನ್ನೆಲೆಯಿಂದ ದೇಶವಿಭಜನೆ ಕುರಿತ ಕೃತಿಗಳನ್ನು ನೋಡಬಹುದು. ಕೆಲವು ಇತಿಹಾಸಕಾರರು ಈ ದುರ್ಘಟನೆಗೆ ಬ್ರಿಟಿಶರ ಫಿತೂರಿ ಕಾರಣ ಎನ್ನುವರು. ಮತ್ತೆ ಕೆಲವರು ಮುಸ್ಲಿಮರನ್ನೂ ಮುಸ್ಲಿಂಲೀಗನ್ನೂ ಹಿಂದುತ್ವವಾದಿ ಸಂಘಟನೆಗಳನ್ನೊ ಜವಾಬ್ದಾರರಾಗಿಸುವರು. ಆದರೆ ಮಾನವತಾವಾದಿ ಲೇಖಕರು ಈ ಘಟನೆಯನ್ನು ನೋಡುವ ಕ್ರಮವೇ ಬೇರೆ. ಭೀಷ್ಮಸಹಾನಿಯವರ `ತಮಸ್’ ಖುಶವಂತ ಸಿಂಗರ `ಟ್ರೈನ್‍ಟು ಪಾಕಿಸ್ತಾನ್’ ಅಮೃತಾ ಪ್ರೀತಮರ `ಪಿಂಜರ್’, ಸಾದತ್ ಹಸನ್ ಮಂಟೂ ಅವರ ಕತೆಗಳು, ರಾಜೇಂದ್ರಸಿಂಗ್ ಬೇಡಿಯವರ `ಲಾಜವಂತಿ’, ಅಸಘರ್ ವಜಾಹತರ `ರಾವಿ ನದಿಯ ದಂಡೆಯ ಮೇಲೆ’ ನೆನಪಾಗುತ್ತವೆ. ಸತ್ಯು ಅವರ `ಗರಂ ಹವಾ’ ಸಿನಿಮಾ ನೆನಪಾಗುತ್ತದೆ. ಇವೆಲ್ಲವೂ ಈ ರಾಜಕೀಯ ನಿರ್ಧಾರ ಮತ್ತು ದುರಂತದ ಹೊರೆಯನ್ನು ಯಾರದೊ ಒಬ್ಬರ ಹೆಗಲ ಮೇಲೆ ಹಾಕಲು ಅವಸರ ಮಾಡುವುದಿಲ್ಲ. ಬದಲಿಗೆ ಈ ಘಟನೆಯಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಜನರು, ಅದರಲ್ಲೂ ಮಹಿಳೆಯರು ಮಕ್ಕಳು ಹೇಗೆ ನರಳಿದರು ಎಂಬುದನ್ನು ಮುಖ್ಯವಾಗಿ ಕಾಣಿಸುತ್ತವೆ. ದೇಶವಿಭಜನೆಯು ಪಾರಂಪರಿಕವಾಗಿ ಸೌಹಾರ್ದಯುತವಾಗಿ ಇದ್ದ ಮನುಷ್ಯ ಸಂಬಂಧಗಳನ್ನು ಹೇಗೆ ನಾಟಕೀಯವಾಗಿ ಬಿಗಡಾಯಿಸಿತು; ಈ ಮಾನವೀಯ ಸಂಕಟದಲ್ಲಿಯೂ ಮನುಷ್ಯತ್ವವು ಹೇಗೆ ಕೆಲಸ ಮಾಡಿತು ಎನ್ನುವುದನ್ನು ಕಾಣಿಸುತ್ತವೆ. ಎಂತಲೇ ಇವು ಇತಿಹಾಸವು ಶಾಸ್ತ್ರವಾಗಿ ಹೇಳಲಾಗದ ಸತ್ಯವನ್ನು ಹೇಳುತ್ತವೆ. ಮಾನವೀಯ ಕಲಾಕೃತಿಗಳ ಗುಣವೆಂದರೆ, ಜನರ ಬಾಳಿನ ಮೂಲಕ ಇತಿಹಾಸ ಕಟ್ಟಿಕೊಡುವುದು. ಮನುಷ್ಯರನ್ನು ಇತಿಹಾಸದ ಭಾರವಿಲ್ಲದೆ ನೋಡಬೇಕು. ವರ್ತಮಾನದ ಒತ್ತಡ ಜೀವನಹೋರಾಟ ಅವರನ್ನು ರೂಪಿಸುತ್ತಿರುತ್ತದೆ. ಬದುಕಿನ ಸೂಕ್ಷ್ಮ ವಿವರಗಳ ಮೂಲಕ, ವ್ಯಕ್ತಿಯ ವೇದನೆಗಳ ಮೂಲಕ ಚರಿತ್ರೆಯನ್ನು ನೋಡಬೇಕು ಎಂದು ಅವು ಭಾವಿಸಿರುತ್ತವೆ.
`ಟೈನ್ ಟು ಪಾಕಿಸ್ತಾನ್’ ಕಾದಂಬರಿಯ ಮುಖ್ಯ ಘಟನೆ ಸಿಖ್ಖರ ಹುಡುಗ ಜಗ್ಗ ಹಾಗೂ ಮುಸ್ಲಿಂ ಹುಡುಗಿ ನೂರಾನರ ಪ್ರೇಮ. ಇದು ಕೋಮುಗಲಭೆಗೆ ಈಡಾದ ನಮ್ಮ ಊರುಗಳಲ್ಲಿಯೂ ಇದೇ ತರಹ ಧರ್ಮ ಜಾತಿ ಮನೆತನಗಳ ಸೀಮೋಲ್ಲಂಘನೆ ಮಾಡಿ ರೂಪುಗೊಂಡಿರುವ ಪ್ರೇಮಿಗಳಿರುತ್ತಾರೆ. ಕೃತಿಯು ವರ್ತಮಾನದ ದೈನಿಕ ಬದುಕಿನ ಸಣ್ಣಪುಟ್ಟ ಸಂಗತಿಗಳ ಮೂಲಕ, ಮನುಷ್ಯ ಸಂಬಂಧಗಳ ಮೂಲಕ ಊರಿನ ದೇಶದ ಚರಿತ್ರೆ ಕಟ್ಟಿಕೊಡುತ್ತದೆ. ಹಿಂಸೆ ಪ್ರೇಮ ಪ್ರೀತಿಗಳು ಯಾವುದೇ ಜನಾಂಗ, ಧರ್ಮ, ದೇಶವಿಶಿಷ್ಟವಲ್ಲ. ಮನುಷ್ಯರು ಎಲ್ಲ ಕಡೆಯೂ ಒಂದೇ; ಸಮಾಜದಲ್ಲಿ ಕೇವಲ ದುಷ್ಟರು ಅಥವಾ ಸಜ್ಜನರು ಇರುವುದಿಲ್ಲ. ಇದ್ದರೂ ಅವರು ಬದಲಾಗಬಲ್ಲರು ಎಂದು ಧ್ವನಿಸುತ್ತದೆ. (ಮನುಷ್ಯರ ಬದಲಾವಣೆಯಲ್ಲಿ ನಂಬಿಕೆಯಿಲ್ಲದವರು ಎಂದರೆ ಮೂಲಭೂತವಾದಿಗಳು ಮಾತ್ರ.)
ಇಲ್ಲಿ ದೇಶವಿಭಜನೆಯ ಪಾತ್ರಧಾರಿಗಳಾದ ಜಿನ್ನಾ ಗಾಂಧಿ ಬ್ರಿಟನ್ ನೆಹರೂ ಇಲ್ಲ. ಇರುವವರೆಲ್ಲ ಸಾಮಾನ್ಯ ಜನರು. ಇವರ ಮೂಲಕ ಕೃತಿ ವಿಭಜನೆಯ ಚರಿತ್ರೆಯನ್ನು ಕಟ್ಟಿಕೊಡುತ್ತದೆ. `ಟೈನ್‍ಟು ಪಾಕಿಸ್ತಾನ್’ ಶ್ರೇಷ್ಠ ಕಲಾಕೃತಿ ಇರಲಿಕ್ಕಿಲ್ಲ. ಆದರೆ ಚರಿತ್ರೆ ಮಾನವೀಯವಾಗಿ ನೋಡುವ ಕ್ರಮಕ್ಕೆ ಅದು ಮಾದರಿಯಾಗಿದೆ. ಇತಿಹಾಸ ಯಾಕೆ ಬೇಕು ಹೇಗೆ ಬೇಕು ಎಂಬ ಪರ್ಯಾಯ ಮಾದರಿಯನ್ನು ಅದು ಮಂಡಿಸುತ್ತದೆ.