Homeಅಂಕಣಗಳುಬಿಜೆಪಿ ಸೀಟುಗಳಲ್ಲಿ ಮೈತ್ರಿಯಿಂದ ಫೈಟ್, ಮೈತ್ರಿ ಸೀಟುಗಳಲ್ಲಿ ಬಿಜೆಪಿ ಫೈಟ್

ಬಿಜೆಪಿ ಸೀಟುಗಳಲ್ಲಿ ಮೈತ್ರಿಯಿಂದ ಫೈಟ್, ಮೈತ್ರಿ ಸೀಟುಗಳಲ್ಲಿ ಬಿಜೆಪಿ ಫೈಟ್

- Advertisement -
- Advertisement -

1ನೇ ಹಂತ: ಮೈತ್ರಿಗೆ ಮುನ್ನಡೆ.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆಯ ನಡೆಯಲಿದ್ದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಈ 14ರ ಪೈಕಿ 2014ರಲ್ಲಿ 8 ಸೀಟುಗಳನ್ನು ಕಾಂಗ್ರೆಸ್ ಜೆಡಿಎಸ್ (6 ಮತ್ತು 2) ಗೆದ್ದಿದ್ದರೆ ಬಿಜೆಪಿಯು 6 ಸೀಟು ಗೆದ್ದಿತ್ತು. ಆಗ ಇದ್ದ ಕಾಂಗ್ರೆಸ್ ವಿರೋಧಿ ಅಲೆಯ ನಡುವೆ ಇಡೀ ರಾಜ್ಯದಲ್ಲಿ ಪಡೆದುಕೊಂಡ 9 ಸೀಟುಗಳ ಪೈಕಿ, ಇಲ್ಲೇ 6ನ್ನು ಗೆದ್ದಿತ್ತು. ಅವುಗಳಲ್ಲಿ ಬೆಂಗಳೂರಿನ ಮೂರು ಕ್ಷೇತ್ರಗಳು ಮತ್ತು ಕರಾವಳಿ ಮಲೆನಾಡಿನ ಎರಡು ಕ್ಷೇತ್ರಗಳನ್ನು ದೊಡ್ಡ ಮತಗಳ ಅಂತರದಿಂದ ಕಳೆದುಕೊಂಡಿದ್ದರೆ, ಗೆದ್ದುಕೊಂಡ ಕ್ಷೇತ್ರಗಳಲ್ಲಿ ಭಾರೀ ಬಹುಮತವೇನೂ ಇರಲಿಲ್ಲ. ಆದರೆ, ಈ ಸಾರಿ ಜೆಡಿಎಸ್ ಜೊತೆಗಿನ ಮೈತ್ರಿಯ ಕಾರಣಕ್ಕೆ ಒಂದಷ್ಟು ಲಾಭ ಕಾಂಗ್ರೆಸ್‍ಗೆ ಆಗಿದೆ. ಸ್ವತಂತ್ರವಾಗಿ ಸ್ಪರ್ಧಿಸಿದರೆ ಎರಡಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿರದ ಜೆಡಿಎಸ್ ಸಹಾ ಅದೇ ಉಮೇದಿನಲ್ಲಿ ಇದೆ. ಆದರೆ, 8ಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮದೇ ಎಂಎಲ್‍ಎಗಳನ್ನು ಹೊಂದಿದ್ದರೂ ಮಂಡ್ಯದಲ್ಲಿ ಸುಮಲತಾರ ವಿರುದ್ಧ ಗೆಲ್ಲಲು ಸಿಕ್ಕಾಪಟ್ಟೆ ಸರ್ಕಸ್ ಮಾಡುತ್ತಿದೆ.
ಕಾಂಗ್ರೆಸ್‍ನ ಕೆಲವು ಅಭ್ಯರ್ಥಿಗಳು ತಮ್ಮ ಸ್ವಕ್ಷೇತ್ರಗಳಲ್ಲಿಯೇ ವಿರೋಧವನ್ನು ಎದುರಿಸುತ್ತಿರುವುದರಿಂದ, ಅಂತಿಮವಾಗಿ ಮೈತ್ರಿಕೂಟ ಕಳೆದ ಸಾರಿ ಪಡೆದಷ್ಟೇ ಸೀಟುಗಳನ್ನು (ಅಂದರೆ ಒಟ್ಟು 8) ಪಡೆಯುವ ಸಾಧ್ಯತೆಯೇ ಹೆಚ್ಚು. ಒಂದೇ ವಿಶೇಷವೆಂದರೆ, ಕರಾವಳಿ ಮತ್ತು ಮಲೆನಾಡಿನ ಎರಡು ಕ್ಷೇತ್ರಗಳೂ (ಮಂಗಳೂರು ಮತ್ತು ಚಿಕ್ಕಮಗಳೂರು-ಉಡುಪಿ) ಸೇರಿದಂತೆ, ಎಲ್ಲಾ ಬಿಜೆಪಿ ಕ್ಷೇತ್ರಗಳಲ್ಲಿಯೂ ಈ ಸಾರಿ ಹಿಂದಿಗಿಂತ ಶಕ್ತಿಯುತವಾದ ಫೈಟ್‍ನಂತೂ ಮೈತ್ರಿ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಆ ಫೈಟ್‍ನ ಪರಿಣಾಮವಾಗಿ ಮೈತ್ರಿಗೆ ಇನ್ನೊಂದೆರಡು ಸ್ಥಾನ ಹೆಚ್ಚಾಗಬಹುದೆಂಬ ಆಸೆ ಎರಡೂ ಪಕ್ಷಗಳಲ್ಲಿರಬಹುದು. ಏಕೆಂದರೆ, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ಬಿಜೆಪಿ ಈ ಸಾರಿ ಏದುಸಿರುಬಿಡುತ್ತಿದೆ. ಉತ್ತರದಲ್ಲಂತೂ ಕೃಷ್ಣಭೈರೇಗೌಡರು ಗೆಲ್ಲುವುದು ಖಚಿತವೆಂಬಂತೆ ಇದೆ. ಅದೇ ರೀತಿ ಕಳೆದ 2 ದಶಕಗಳಲ್ಲಿ ಮೊದಲ ಬಾರಿಗೆ ಕರಾವಳಿಯಲ್ಲಿ ಕಾಂಗ್ರೆಸ್‍ನಲ್ಲೂ ಉತ್ಸಾಹ ಕಂಡು ಬರುತ್ತಿದೆ.
ಆದರೆ, ಮೊದಲ ಬಾರಿಗೆ ಮತ ಹಾಕುವ ಯುವಜನರನ್ನು ಕಾಂಗ್ರೆಸ್ ಆಕರ್ಷಿಸುವ ಸಾಧ್ಯತೆ ಕಡಿಮೆ. ಸ್ಥಳೀಯ ಚುನಾವಣೆಗಳಲ್ಲಿ ಸ್ಥಳೀಯ ಅಭ್ಯರ್ಥಿಯು ಪ್ರಮುಖವಾಗಬಹುದಾದರೂ, ಲೋಕಸಭಾ ಚುನಾವಣೆಯಲ್ಲಿ ಕೇಂದ್ರವನ್ನು ನೋಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೆಚ್ಚಿನ ಅನುಕೂಲ ಮೈತ್ರಿ ಪಕ್ಷಗಳಿಗೆ ಇರುವಂತೆ ಕಾಣುತ್ತಿಲ್ಲ.
ದಕ್ಷಿಣದ 14 ಕ್ಷೇತ್ರಗಳಲ್ಲಿ ಈಗಾಗಲೇ ಫಲಿತಾಂಶ ಹೀಗೆಯೇ ಎಂದು ಹೇಳಬಹುದಾದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಅಲ್ಲಿ ಡಿ.ಕೆ.ಸುರೇಶ್ ಗೆಲುವು ಖಚಿತ. ಅದನ್ನು ಬಿಟ್ಟರೆ ಇನ್ನಾವ ಕ್ಷೇತ್ರದಲ್ಲೂ ಇಂತಹವರಿಗೆ ಹೆಚ್ಚಿನ ಸಾಧ್ಯತೆ ಇದೆಯೆಂದಷ್ಟೇ ಹೇಳಬಹುದು. ಉಡುಪಿ, ದ.ಕ. ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿಗೆದುರು ಕಾಂಗ್ರೆಸ್, ಜೆಡಿಎಸ್‍ಗಳಿಗೆ ಸಂಘಟನಾ ಶಕ್ತಿ ಹೋಲಿಸುವ ಮಟ್ಟಕ್ಕೂ ಇಲ್ಲ. 2013ರಲ್ಲಿ ದ.ಕ. ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಬಿಟ್ಟು ಮಿಕ್ಕೆಲ್ಲಾ ಕಡೆ ಬಿಜೆಪಿ ಸೋತಿತ್ತು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್, ಹಿಂದಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಜನಾರ್ಧನ ಪೂಜಾರಿಯವರ ವಿರುದ್ಧ 2009ಕ್ಕಿಂತ 1 ಲಕ್ಷ ಹೆಚ್ಚು ಮತಗಳನ್ನು ಪಡೆದು ಪುನರಾಯ್ಕೆಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕಡೆ ಹೊಸ ಯುವ ಮುಖಗಳನ್ನು ನಿಲ್ಲಿಸಿ, ಒಂದನ್ನು ಬಿಟ್ಟು ಎಲ್ಲೆಡೆ ಗೆದ್ದಿದ್ದರು. ಇದು ಆ ಭಾಗದಲ್ಲಿ ಬಿಜೆಪಿಗಿರುವ ಸಂಘಟನಾ ಶಕ್ತಿಯ ನಿದರ್ಶನ.
ಈ ಒಂದು ವರ್ಷದಲ್ಲಿ ಬದಲಾಗಿರುವುದೇನೂ ಇಲ್ಲ. ಆದರೆ, ನಳಿನ್‍ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಇಬ್ಬರ ವಿರುದ್ಧದ ಭಾವನೆ ಅಲ್ಲಿ ಪ್ರಬಲವಾಗಿದೆ. ಅದರಲ್ಲೂ ಗೋಬ್ಯಾಕ್ ಶೋಭಾ ಕ್ಯಾಂಪೇನ್‍ಅನ್ನು ಬಿಜೆಪಿಯವರೇ ನಡೆಸಿದರು. ಜೊತೆಗೆ ಹಿಂದಿನಂತೆ ಜನಾರ್ಧನ ಪೂಜಾರಿಯವರನ್ನು ಇಳಿಸಿಲ್ಲ. ಒಂದೆಡೆ ನೇರಾನೇರ ಫೈಟ್‍ಗಿಳಿದಿರುವ ಮಿಥುನ್‍ರೈ ಮತ್ತೊಂದೆಡೆ ಜೆಡಿಎಸ್ ಟಿಕೆಟ್‍ನಿಂದ ಪ್ರಮೋದ್ ಮಧ್ವರಾಜ್‍ರನ್ನು ಕಣಕ್ಕಿಳಿಸಿದ್ದಾರೆ.
ಅದೇ ರೀತಿ ಹೇಳಿಕೊಳ್ಳುವ ಯಾವ ಸಾಧನೆಯೂ ಮಾಡದ ಬೆಂಗಳೂರಿನ ಎಂಪಿಗಳು ಸದಾನಂದ ಗೌಡ ಮತ್ತು ಪಿ.ಸಿ.ಮೋಹನ್‍ರೆದುರಿಗೂ ಒಳ್ಳೆಯ ಫೈಟ್ ನಡೆಯುತ್ತಿದೆ. ಇಬ್ಬರೂ ಸೋಲುವ ಸಾಧ್ಯತೆಗಳೂ ಇವೆ. ಬೆಂ.ದಕ್ಷಿಣದಲ್ಲಿ ಎಡವಟ್ ತೇಜಸ್ವಿಯನ್ನಿಳಿಸಿ ಬಿಜೆಪಿ ಬೆದರಿದೆ. ಅಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅಭ್ಯರ್ಥಿ. ಇನ್ನೊಂದು ಬಿಜೆಪಿ ಸೀಟು ಮೈಸೂರು-ಕೊಡಗು. ನಿಜಕ್ಕೂ ಜೆಡಿಎಸ್‍ನವರು ಬೆಂಬಲಿಸಿದರೆ ಪ್ರತಾಪ್‍ಸಿಂಹ ಇಲ್ಲಿ ಲೆಕ್ಕಕ್ಕೇ ಇಲ್ಲದ ಅಭ್ಯರ್ಥಿ.
ಇವೆಲ್ಲದರಿಂದ ಹೇಳಬಹುದಾದ್ದೆಂದರೆ ದಕ್ಷಿಣದ 14 ಕ್ಷೇತ್ರಗಳ ಪೈಕಿ ಎಲ್ಲೆಡೆಯೂ ಸರಿಯಾದ ಸ್ಪರ್ಧೆಯನ್ನು ಮೈತ್ರಿ ಪಕ್ಷಗಳು ನೀಡುತ್ತಿವೆ. ಆದರೆ, ತಾವೇ ಸ್ವತಃ ಕಷ್ಟಕ್ಕೆ ಸಿಕ್ಕಿಕೊಂಡಿರುವುದು ಈ ಹಿಂದೆ ಗೆದ್ದ ಕ್ಷೇತ್ರಗಳಲ್ಲಿ. ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ವೀರಪ್ಪಮೊಯಿಲಿ ಮತ್ತು ಮುನಿಯಪ್ಪರಿಗೆ ವಿರೋಧಿ ಅಲೆಯಿದೆ. ಕೆ.ಎಚ್.ಮುನಿಯಪ್ಪರ ವಿರುದ್ಧ ಕೊತ್ತನೂರು ಮಂಜು ಮತ್ತು ಸ್ಪೀಕರ್ ರಮೇಶ್‍ಕುಮಾರ್ ಬಹಿರಂಗವಾಗಿಯೇ ದನಿಯೆತ್ತಿದ್ದಾರೆ. ಧ್ರುವನಾರಾಯಣರ ವಿರೋಧಿ ಭಾವನೆ ಇಲ್ಲದಿದ್ದರೂ, ಶ್ರೀನಿವಾಸ ಪ್ರಸಾದ್‍ರು ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಆತಂಕಗೊಂಡಿದೆ.
ಇನ್ನು ಜೆಡಿಎಸ್‍ನವರು ಕುಟುಂಬದ ಕುಡಿಗಳಿಗಾಗಿ ತಮ್ಮೆಲ್ಲಾ ಕ್ಷೇತ್ರಗಳಲ್ಲಿ ನಿಲ್ಲಲು ಹೋಗಿ, ಹಿಂದೆಂದೂ ಇಲ್ಲದ ಜಿದ್ದಾಜಿದ್ದಿ ಎದುರಿಸುತ್ತಿದ್ದಾರೆ. ಮಂಡ್ಯ ಕ್ಷೇತ್ರ ಒಂದೇ ಕುಮಾರಸ್ವಾಮಿಯವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಇವೆಲ್ಲದರ ಪರಿಣಾಮವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದಿನ ಸಾರಿಗಿಂತ ಹೆಚ್ಚಿನ ಫೈಟ್ ಕಂಡುಬರುತ್ತಿರುವುದೇ ವಿಶೇಷ. ಆದರೆ, ಸೀಟುಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗದಿರಬಹುದು ಎಂಬುದನ್ನು ಮೇಲೆ ಹೇಳಿದ ಸಂಗತಿಗಳು ದೃಢಪಡಿಸುತ್ತವೆ.

ಪ್ರಕಾಶ್ ರೈ ಸ್ಪರ್ಧೆ ಪರ್ಯಾಯ ರಾಜಕಾರಣದ ಪ್ರಯೋಗ
ಮುಸ್ಲಿಮರಿಗಿದ್ದ ಏಕೈಕ ಕ್ಷೇತ್ರ ಮತ್ತು ಮತವಿಭಜನೆಯಿಂದ ಬಿಜೆಪಿಗೆ ನೆರವಾಗಬಹುದು ಎಂಬ ಆತಂಕದ ಕಾರಣದಿಂದ ಪ್ರಗತಿಪರರ ನಡುವೆ ಒಂದು ಗೊಂದಲವುಂಟು ಮಾಡಿದ್ದು ನಟ ಪ್ರಕಾಶ್ ರೈ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕದೇ ಸಹಾಯ ಮಾಡಬಹುದೆಂಬ ನಿರೀಕ್ಷೆಯನ್ನು ಹೊಂದಿದ್ದರೂ, ತನ್ನ ಸ್ಪರ್ಧೆ ಕೇವಲ ಅಡ್ಜಸ್ಟ್‍ಮೆಂಟ್‍ದಲ್ಲ ಎಂದು ಆರಂಭದಿಂದಲೇ ಸ್ಪಷ್ಟತೆ ಹೊಂದಿದ್ದರು. ಜನಸಾಮಾನ್ಯರ ಸಮಸ್ಯೆಗಳು ಮತ್ತು ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾತನಾಡುತ್ತಲೇ ಪ್ರತಿನಿತ್ಯ ಜನರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆಯ ಉಮೇದಿನಲ್ಲಿ ಜನರು ಸೇರಿದಾಗ ಗೆದ್ದೇ ಬಿಡುತ್ತೇನೆಂದು ಎಲ್ಲರೂ ಭಾವಿಸುವ ಹಾಗೆ ಪ್ರಕಾಶ್ ರೈ ಸಹಾ ಉತ್ಸಾಹದಲ್ಲಿದ್ದಂತಿದೆ. ಆದರೆ, ಚುನಾವಣೆಯ ವಾಸ್ತವ ಬೇರೆಯೇ ಇದೆ. ಉಳಿದಿಬ್ಬರು ಅಭ್ಯರ್ಥಿಗಳಿಗಿಂತ ಬಹಳ ಕಡಿಮೆ ಮತ ಗಳಿಸಿದರೂ, ಅಂತಿಮವಾಗಿ ಅವರು ಯಾರ ಮತಗಳನ್ನು ಎಷ್ಟು ತೆಗೆಯುತ್ತಾರೆಂಬುದರ ಮೇಲೆ ಚುನಾವಣೆಯ ಫಲಿತಾಂಶವೂ ಇರುವಷ್ಟರ ಮಟ್ಟಿಗೆ ಅಲ್ಲಿ ಫೋಟೋ ಫಿನಿಷ್ ಇದೆ.
ಯಾವುದನ್ನು ‘ಚುನಾವಣೆಯ ವಾಸ್ತವ’ ಎಂದು ಕರೆಯಲಾಗುತ್ತದೋ ಅದನ್ನೇ ಬದಲಿಸಬೇಕೆಂಬ ಪ್ರಕಾಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಯಾವ ದೊಡ್ಡ ಚಳವಳಿಯೂ ಇಲ್ಲದಾಗ ಪರ್ಯಾಯ ರಾಜಕಾರಣದ ಪ್ರಯತ್ನವನ್ನು ಮಾಡಲು ಇಂತಹ ಸೆಲೆಬ್ರಿಟಿ ಸ್ಟಾರ್‍ಗಳಿದ್ದರೆ ಸಾಧ್ಯ ಎಂಬುದನ್ನು ಅವರೆಬ್ಬಿಸಿರುವ ಹವಾದಲ್ಲಿ ನೋಡಬಹುದು. ಪ್ರಕಾಶ್ ರೈ ಅವರು ತೆಗೆಯುವ ಮತಗಳ ಪ್ರಮಾಣ ಮುಂದಿನ ದಿನಗಳಲ್ಲಿ ಪರ್ಯಾಯ ರಾಜಕಾರಣದ ಸಾಧ್ಯಾಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಸೋತರೂ 15 ವರ್ಷ ಬೆಂಗಳೂರು ಸೆಂಟ್ರಲ್‍ನಲ್ಲಿ ಉಳಿಯುತ್ತೇನೆಂಬ ನಿರ್ಧಾರದ ಘೋಷಣೆ, ಈ ‘ಹೊಸ ರೀತಿಯ ರಾಜಕಾರಣಿ’ಯ ಗೌರವವನ್ನು ಹೆಚ್ಚಿಸಿದೆ.

ತುಮಕೂರಿನಲ್ಲಿ ಗೌಡರ ಗೆಲುವಿನ ಸಮೀಕರಣವೇನು?
ತುಮಕೂರು ಜಿಲ್ಲೆಯಲ್ಲಿ, ತುಮಕೂರು ನಗರದಲ್ಲಿ ಮೂರೂ ಪಕ್ಷಗಳು ಸಮಬಲದಲ್ಲಿದ್ದವು ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ ಮತ್ತು ಚಿಕ್ಕನಾಯಕನಹಳ್ಳಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೋರಾಟ. ತಿಪಟೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ. ಉಳಿದಂತೆ ಮಧುಗಿರಿ, ಕೊರಟಗೆರೆಗಳಲ್ಲಿ ಫೈಟ್ ಇರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ. ಇವಿಷ್ಟರ ಪೈಕಿ ಕೊರಟಗೆರೆಯಲ್ಲೊಂದು ಕಡೆ ಮಾತ್ರ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಾಂಗ್ರೆಸ್‍ನಿಂದ ಗೆದ್ದಿದ್ದಾರೆ. 2018ರ ಚುನಾವಣೆಯಲ್ಲಿ ಬದಲಾದ ಈ ಸಮೀಕರಣದ ಕಾರಣದಿಂದಲೇ ದೇವೇಗೌಡರು ತುಮಕೂರನ್ನು ಪಡೆದುಕೊಂಡಿದ್ದು. ಆದರೆ, ಮುದ್ದಹನುಮೇಗೌಡರು ಮತ್ತು ಕೆ.ಎನ್.ರಾಜಣ್ಣ ಪಟ್ಟು ಹಿಡಿದು ಗೊಂದಲವುಂಟಾಯಿತು. ಇದುವರೆಗೂ ಅವರಿಬ್ಬರೂ ಕಣಕ್ಕಿಳಿದಿಲ್ಲ. ರಾಜಣ್ಣ ಕಾರ್ಯಕರ್ತರ ಸಭೆ ಕರೆದು ನಿಮ್ಮಿಷ್ಟ ಎಂದಿದ್ದಾರೆ. ಪರಮೇಶ್ವರ್ ಮಾತ್ರ ಕೊರಟಗೆರೆಯಲ್ಲಿ ದೊಡ್ಡ ಲೀಡ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.
ಕುಂಚಿಟಿಗರು ಮತ್ತು ಒಕ್ಕಲಿಗರೆಲ್ಲರೂ ಸೇರಿ ತಮ್ಮ ಕೈ ಹಿಡಿಯುವರೆಂದು ಗೌಡರಿಗೆ ಗೊತ್ತಿದೆ. ಗಣನೀಯ ಪ್ರಮಾಣದ ಕುರುಬರ ಮತವೂ ಇರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ವಿರುದ್ಧ ಏಕೆ ಮತ ಹಾಕಬೇಕು ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವ ಸಿದ್ದರಾಮಯ್ಯನವರು, ಅಹಿಂದ ಮತದಾರರ ಮೇಲೆ ಪ್ರಭಾವ ಬೀರಬಲ್ಲರು. ಇನ್ನು ತಿಪಟೂರು, ತುಮಕೂರು ನಗರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ವಿರುದ್ಧ ಓಟ್ ಮಾಡಲೇಬೇಕು. ಇವೆಲ್ಲಾ ಕಾರಣಗಳಿಂದ ಗೌಡರು ಗೆಲ್ಲದಿರಲು ಕಾರಣವೇ ಇಲ್ಲ. ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯಿತ ಮತಗಳು ಕ್ರೋಢೀಕೃತಗೊಂಡರೂ ಉಳಿದ ಸಮೀಕರಣ ಅವರ ಪರವಾಗಿ ವರ್ಕ್ ಮಾಡುತ್ತದೆ.

ದಾಖಲೆ ಬರೆಯುವರೇ ಡಿ.ಕೆ.ಸುರೇಶ್?
2013ರ ಉಪಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೊದಲ ಬಾರಿಗೇ ಅನಿತಾ ಕುಮಾರಸ್ವಾಮಿ ವಿರುದ್ಧ 1.30 ಲಕ್ಷ ಅಂತರಗಳಿಂದ ಗೆದ್ದಿದ್ದ ಡಿ.ಕೆ.ಸುರೇಶ್, 2014ರಲ್ಲಿ 2.30 ಲಕ್ಷ ಮತಗಳಿಂದ ಗೆದ್ದರು. ಆ ಹೊತ್ತಿಗಾಗಲೇ ಡಿಕೆ ಬ್ರದರ್ಸ್ ಜೊತೆ ಅಡ್ಜಸ್ಟ್‍ಮೆಂಟ್‍ಗಿಳಿದಿದ್ದ ಕುಮಾರಸ್ವಾಮಿ, ಇನ್ನೊಂದು ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ಚಿಕ್ಕಬಳ್ಳಾಪುರಕ್ಕೆ ಹೋಗಿ ಮೂರನೇ ಸ್ಥಾನ ಪಡೆದಿದ್ದರು. ಹಾಗಾಗಿ ಸಾಕಷ್ಟು ಪೇಮೆಂಟ್ ಮಾಡಿ ಸೀಟ್ ಪಡೆದಿದ್ದ ಪ್ರಭಾಕರರೆಡ್ಡಿ ಜೆಡಿಎಸ್‍ನಿಂದ ಸ್ಪರ್ಧೆಗಿಳಿದು ಮೂರನೇ ಸ್ಥಾನಕ್ಕಿಳಿದಿದ್ದರು. ಅಂತಹ ಡಮ್ಮಿ ಕ್ಯಾಂಡಿಡೇಟೇ 3 ಲಕ್ಷ ಮತ ಪಡೆದಿದ್ದರು. ಈಗಂತೂ ಬೆಂಗಳೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನುಳಿದು ಇನ್ನೆಲ್ಲಾ ಕಡೆ ಮೈತ್ರಿ ಶಾಸಕರೇ ಇದ್ದಾರೆ.
ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ಅನ್ನೇ ಹೈಜಾಕ್ ಮಾಡಿದ್ದ ಡಿಕೆ ಬ್ರದರ್ಸ್, ಬಿಜೆಪಿಯು ಅಪಹಾಸ್ಯಕ್ಕೀಡಾಗುವಂತೆ ಮಾಡಿದ್ದರು. ಈ ಸಾರಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ್‍ರೂ ಭಾರೀ ಪ್ರಬಲ ಅಭ್ಯರ್ಥಿಯೇನಲ್ಲ. ಹೀಗಾಗಿ ದಾಖಲೆ ಮತಗಳ ಅಂತರದಿಂದ ಡಿ.ಕೆ.ಸುರೇಶ್ ಗೆಲ್ಲದಿದ್ದರೆ ಆಶ್ಚರ್ಯ.

ಮತ್ತೆ ಚಿಗುರುತ್ತಿರುವ ಮೊಯ್ಲಿ ಅದೃಷ್ಟ; ಮುನಿಯಪ್ಪರಿಗೆ ಸ್ಪೀಕರ್‍ರದೇ ಸಮಸ್ಯೆ
ಮೊಯ್ಲಿಯವರ ಸುಳ್ಳುಗಳ ಜೊತೆಗೆ, ಈ ಭಾಗದ ರಾಜಕೀಯ ಸಂಸ್ಕøತಿಗೆ ಒಗ್ಗದ ಅವರ ನಡವಳಿಕೆ ಎಲ್ಲವೂ ಸೇರಿಕೊಂಡು ಈ ಸಾರಿ ಮೊಯ್ಲಿ ಗೆಲ್ಲಲಾರರು ಎಂಬ ಭಾವನೆ ಬಲವಾಗಿತ್ತು. ಆದರೆ, ಎಲ್ಲಾ ಶಾಸಕರು ಗಂಭೀರವಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಮತ್ತೊಂದು ಅಂಶ ಮೊಯ್ಲಿಯವರಿಗೆ ನೆರವಾಗುತ್ತಿದೆ. 1977ರಲ್ಲಿ ಎಂ.ವಿ.ಕೃಷ್ಣಪ್ಪನವರು ಗೆದ್ದ ನಂತರ ಇದುವರೆಗೂ ಈ ಕ್ಷೇತ್ರದಲ್ಲಿ ಸಂಖ್ಯೆಯಲ್ಲಿ ದೊಡ್ಡವಾಗಿರದ ಸಮುದಾಯಗಳ ಅಭ್ಯರ್ಥಿಗಳೇ (ವೈಶ್ಯರಾದ ಪ್ರಸನ್ನಕುಮಾರ್, ಬ್ರಾಹ್ಮಣ ವಿ.ಕೃಷ್ಣರಾವ್, ಈಡಿಗ ಸಮುದಾಯದ ಆರ್.ಎಲ್.ಜಾಲಪ್ಪ ಮತ್ತು ಸವಿತಾ ಸಮಾಜದ ವೀರಪ್ಪ ಮೊಯ್ಲಿ) ಗೆದ್ದು ಬಂದಿದ್ದಾರೆ. ಅದೇ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲೆಲ್ಲಾ ಒಕ್ಕಲಿಗ/ರೆಡ್ಡಿಗಳೇ ಗೆದ್ದು ಬರುತ್ತಾರೆ. ಎಂಎಲ್‍ಎಗಳಾಗಿ ಗೆಲ್ಲುವ ಬಲಾಢ್ಯ ಜಾತಿಯವರ ವಿರುದ್ಧ ಮಿಕ್ಕವರು ತೀರಿಸಿಕೊಳ್ಳುವ ಪ್ರತೀಕಾರದಂತೆಯೂ ಇದನ್ನು ನೋಡಬಹುದು.
ಎಲ್ಲರಿಗಿಂತ ಮೊದಲು ಅಭ್ಯರ್ಥಿಯೆಂದು ಘೋಷಿತವಾದ ಬಚ್ಚೇಗೌಡರು ಒಕ್ಕಲಿಗ ಕಾರ್ಡ್‍ಆನ್ನು ಬಳಸಲು ಶುರುಮಾಡಿದ್ದೇ ಅವರಿಗೆ ಮುಳುವಾಗುತ್ತಿದೆ. ಎಲ್ಲೆಡೆ ಒಕ್ಕಲಿಗರೇ ಆವರಿಸಿಕೊಳ್ಳಬಹುದೆಂಬ ಕಾರಣಕ್ಕೆ ರಿವರ್ಸ್ ಧ್ರುವೀಕರಣ ಆರಂಭವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು (ಶೇ.45)ರಷ್ಟಿರುವ ಎಸ್.ಸಿ. ಮತ್ತು ಎಸ್.ಟಿ ಸಮುದಾಯಗಳು ಒಕ್ಕಲಿಗೇತರ ಅಭ್ಯರ್ಥಿಗೆ ಇಡಿಯಾಗಿ ಮತ ಹಾಕಲು ನಿರ್ಧರಿಸುವ ಸಾಧ್ಯತೆಗಳಿವೆ.
ಈ ಮಧ್ಯೆ ಇವೇ ಮತಗಳಲ್ಲಿ ಒಂದಷ್ಟನ್ನು ಬಿಎಸ್‍ಪಿಯಿಂದ ಸ್ಪರ್ಧಿಸಿರುವ ಸಿ.ಎಸ್.ದ್ವಾರಕಾನಾಥ್ ಪಡೆದುಕೊಳ್ಳಲಿದ್ದಾರೆ. ಯಾವಾಗಲೂ ಜಾತ್ಯಾತೀತ ವಲಯದಲ್ಲೇ ಇದ್ದ, ದ್ವಾರಕಾನಾಥ್‍ರಿಗೆ ಬಲಿಜ ಸಮುದಾಯದ ಮತಗಳೆಲ್ಲಾ ಇಡುಗಂಟಾಗಿ ಬೀಳುವ ಸಾಧ್ಯತೆ ಇಲ್ಲ. ಜೊತೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪರ ರಾಜಕಾರಣ ಮೂಲೆಗುಂಪಾಗಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನೇ ಶೋಷಿತ ಸಮುದಾಯಗಳೂ ಆಯ್ದುಕೊಳ್ಳುತ್ತಾರೆ. ಇನ್ನು ಸಿಪಿಎಂನಿಂದ ವರಲಕ್ಷ್ಮಿ ಅವರು ಸ್ಪರ್ಧಿಸಿದ್ದು, ಕಳೆದ ಸಾರಿಯೂ ಅದೇ ಪಕ್ಷದಿಂದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸ್ಪರ್ಧಿಸಿ 26 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿಯೂ ಅಷ್ಟು ಮತಗಳಿಗೆ ಕಡಿಮೆಯಿಲ್ಲದಂತೆ ಪಡೆಯುವ ಸಾಧ್ಯತೆಯಿದೆ.
ಬಚ್ಚೇಗೌಡರು ಜಾತಿ ಧ್ರುವೀಕರಣಕ್ಕೆ ಕೈ ಹಾಕಿದ್ದರಿಂದ, ಸೋತೇಬಿಡುತ್ತಾರೆನ್ನುವ ಪರಿಸ್ಥಿತಿಯಲ್ಲಿದ್ದ ಮೊಯ್ಲಿಯವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ಪಕ್ಕದ ಕೋಲಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮುನಿಯಪ್ಪ ಕಷ್ಟ ಪಡುತ್ತಿದ್ದಾರೆ. ಸತತ 7 ಬಾರಿ ಗೆದ್ದಿರುವ ಕೆ.ಎಚ್. ‘ಆಡಳಿತ’ ವಿರೋಧಿ ಅಲೆಗಿಂತ ಸ್ವಪಕ್ಷೀಯರ ವಿರೋಧವನ್ನೇ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಅದರ ಮುಂಚೂಣಿಯಲ್ಲಿರುವುದು ಸ್ಪೀಕರ್ ರಮೇಶ್‍ಕುಮಾರ್ ಆಗಿರುವುದು ಅವರ ಆತಂಕವನ್ನು ಹೆಚ್ಚಿಸಿದೆ. ಪ್ರತೀ ಸಾರಿಯೂ ತಮ್ಮ ಸ್ವಪಕ್ಷೀಯರ ಜೊತೆಗೆ ವಿರೋಧ ಪಕ್ಷದ ಮತಗಳನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಅವರು, ಇದ್ದುದನ್ನು ಕಳೆದುಕೊಂಡರೆ ಹೇಗೆ ಎಂದು ಒದ್ದಾಡುತ್ತಿದ್ದಾರೆ. ಮಾಜಿ ಶಾಸಕ ಕೊತ್ತನೂರು ಮಂಜು ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದರೆ, ಜೆಡಿಎಸ್ ಶಾಸಕ ಶ್ರೀನಿವಾಸಗೌಡರು ಮೈತ್ರಿ ಅಭ್ಯರ್ಥಿ ಪರವಾಗಿ ಕಣಕ್ಕಿಳಿದಿಲ್ಲ.
ಎಲ್ಲೆಡೆ ಬಿರುಕು ಮುಚ್ಚುವ ಕೆಲಸ ಮಾಡುತ್ತಿರುವ ರಾಜ್ಯ ನಾಯಕರುಗಳು ಕೋಲಾರದ ವಿಷಯದಲ್ಲಿ ರಮೇಶ್‍ಕುಮಾರ್‍ರನ್ನು ಎದುರಿಸುವ ಧೈರ್ಯವಿಲ್ಲದೇ ಮುಗುಮ್ಮಾಗಿದ್ದಾರೆ. ಎಲ್ಲಾ ಆತಂಕಗಳನ್ನು ದಾಟಿಯೂ ಕೆ.ಎಚ್. ಗೆದ್ದರೆ ಅದೊಂದು ದಾಖಲೆಯೇ ಸರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...