ಪ್ರಜಾತಂತ್ರಕ್ಕೆ ಇದು ಪರೀಕ್ಷೆಯ ಕಾಲ
ಸಂಪಾದಕೀಯ ತಂಡದ ಪರವಾಗಿ: ದೊಡ್ಡಿಪಾಳ್ಯ ನರಸಿಂಹಮೂರ್ತಿ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ನ್ಯಾಯಾಂಗ ತೀವ್ರ ಬಿಕ್ಕಟ್ಟಿನಲ್ಲಿದೆ. 71 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರಿಂ ಕೋರ್ಟಿನ ಮುಖ್ಯನ್ಯಾಯಮೂರ್ತಿ(ಸಿಜೆಐ) ವಿರುದ್ಧ ದೋಷಾರೋಪಣಾ ಕ್ರಮ (ಇಂಪೀಚ್‍ಮೆಂಟ್) ಜರುಗಿಸುವಂತಹ ಪ್ರಸಂಗ ಬಂದೊದಗಿದೆ. ವಿರೋಧ ಪಕ್ಷಗಳಿಗೆ ಸೇರಿದ ಏಳು ಪಕ್ಷಗಳ 71 ಮಂದಿ ಸಂಸದರು ಸಹಿ ಮಾಡಿ ಇಂಥದೊಂದು ಆಗ್ರಹ ಮಾಡಿದ್ದು, ಮೂರು ದಿನಗಳ ನಂತರ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಈ ಸಾಂವಿಧಾನಿಕ ಆಗ್ರಹವನ್ನು ತಿರಸ್ಕರಿಸಿದ್ದೂ ನಡೆದಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇಂಥಾ ಮಹತ್ವದ ವಿದ್ಯಮಾನವನ್ನು ಕಾರ್ಪೊರೇಟ್ ಮಾಧ್ಯಮಗಳು ಹಗುರವಾಗಿ ಬಿಂಬಿಸಿ, ಮರೆಮಾಚಲೆತ್ನಿಸಿದ್ದು. ‘ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ನ್ಯಾಯಾಂಗಕ್ಕೆ ಮಸಿ ಬಳಿಯಲೆತ್ನಿಸುತ್ತಿವೆ’ಯೆಂಬಂತೆ ಚಿತ್ರಿಸಿದವು. ಈ ಬೇಡಿಕೆ ತಿರಸ್ಕøತಗೊಂಡ ನಂತರ ‘ಕಾಂಗ್ರೆಸ್‍ಗೆ ಮುಖಭಂಗ’ ಎಂದು ತಲೆಬರಹ ಕೊಟ್ಟವರೂ, ಬ್ರೇಕಿಂಗ್ ನ್ಯೂಸ್ ಮಾಡಿದವರೂ ಇದ್ದಾರೆ. ಮತದಾರ ಪ್ರಭುಗಳೂ ಕೂಡ ಇದನ್ನು ಮಾಮೂಲಿ ರಾಜಕೀಯ ಸುದ್ದಿ ಎಂಬಂತೆ ಪರಿಗಣಿಸಿದಂತೆ ಕಾಣುತ್ತಿದೆ.
ಹಾಗಾದರೆ ಈ ಪ್ರಕರಣ ನಿಜಕ್ಕೂ ರಾಜಕೀಯ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದ್ದೇ? ಈ ಪ್ರಕರಣದ ಹಿನ್ನೆಲೆ ನೋಡೋಣ.
ಒಟ್ಟಾರೆ ಈ ಪ್ರಸಂಗದ ಕೇಂದ್ರ ಬಿಂದು ಸಿಜೆಐ ದೀಪಕ್ ಮಿಶ್ರಾ,. ಶ್ರೀಯುತರು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು! sಸಿಜೆಐ ಹುದ್ದೆಗೇರಿದ ಏಳೆಂಟು ತಿಂಗಳಲ್ಲಿ ಹತ್ತಾರು ಬಾರಿ ವಿವಾದಗಳ ಸುಳಿಯೆಬ್ಬಿಸಿದ್ದಾರೆ. ದಿನದಿಂದ ದಿನಕ್ಕೆ ಈ ವಿವಾದಗಳು ಕಗ್ಗಂಟಾಗಿ ಈಗ ಬಿಕ್ಕಟ್ಟಿನ ಸ್ವರೂಪಕ್ಕೆ ಬಂದು ನಿಂತಿದೆ. ಸಿಜೆಐ ದೀಪಕ್ ಮಿಶ್ರಾ ಸುತ್ತ ಹೆಣೆದುಕೊಂಡಿರುವ ವಿವಾದಗಳಲ್ಲಿ ಜಸ್ಟೀಸ್ ಬಿ.ಎಚ್.ಲೋಯಾ ನಿಗೂಡ ಸಾವಿನ ಪ್ರಕರಣವೂ ಪ್ರಮುಖವಾದದ್ದು.
ಬ್ರಜ್‍ಗೋಪಾಲ್ ಹರಕಿಷನ್ ಲೋಯಾ ಸಿಬಿಐ ಕೋರ್ಟಿನ ಜಡ್ಜ್. ಗುಜರಾತಿನ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‍ಕೌಂಟರ್ ಕೇಸಿನ ವಿಚಾರಣೆ ನಡೆಸುತ್ತಿದ್ದವರು. 2014ರ ಡಿಸೆಂಬರ್ 1ರಂದು ಸಂಬಂದಿಕರ ಮದುವೆಗೆಂದು ನಾಗಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅನುಮಾನಾಸ್ಪದ ‘ಹೃದಯಾಘಾತ’ದಿಂದ ಸಾವನ್ನಪ್ಪಿದರು. ಅವರ ಅಂತ್ಯಕ್ರಿಯೆಗಳನ್ನೂ ಕೂಡ ತರಾತುರಿಯಲ್ಲಿ ಮುಗಿಸಲಾಗಿತ್ತು.
ಇದಾದ ಕೆಲದಿನಗಳಲ್ಲಿ ಜ.ಲೋಯಾ ಕುಟುಂಬದವರು ಸ್ಫೋಟಕ ವಿಷಯಗಳನ್ನು ಬಿಚ್ಚಿಟ್ಟರು. ಅವರ ಪ್ರಕಾರ ‘ಈ ಕೇಸಿನಲ್ಲಿ ತಮಗೆ ಅನುಕೂಲಕರ ತೀರ್ಪು ನೀಡುವಂತೆ ಲೋಯಾ ಅವರ ಮೇಲೆ ಭಾರೀ ಒತ್ತಡ ಇತ್ತು. ಅದಕ್ಕಾಗಿ ನೂರು ಕೋಟಿ ರೂಪಾಯಿಗಳ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ನ್ಯಾಯಪ್ರಜ್ಞೆಗೆ ಹೆಸರಾಗಿದ್ದ ಲೋಯಾ ಅವರು ಇಂಥ ಆಮಿಷವನ್ನು ತಿರಸ್ಕರಿಸಿದರು. ಬೆದರಿಕೆಗೆ ಅವರು ಸೊಪ್ಪು ಹಾಕಲಿಲ್ಲ. ಪರಿಣಾಮವಾಗಿಯೇ ಅವರನ್ನು ಕೊಲೆ ಮಾಡಲಾಗಿದೆ’ ಎಂಬ ಸ್ಫೋಟಕ ಸುದ್ದಿಗಳನ್ನು ಹೊರಹಾಕಿದ್ದರು.
ಇಷ್ಟಕ್ಕೂ ಈ ಕೇಸಿನಲ್ಲಿ ಆರೋಪಿ ಸ್ಥಾನದಲ್ಲಿದ್ದದ್ದು ಯಾರಂತೀರಿ? ಪ್ರಧಾನಿ ಮೋದಿಯವರಿಗೆ ಪರಮಾಪ್ತ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಕೇಸಿನಲ್ಲಿ 2010ರಲ್ಲಿ ಅಮಿತ್ ಶಾ 3 ತಿಂಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಈ ಕೇಸಿನಲ್ಲಿ ಶಾ ಕೈವಾಡದ ಬಗ್ಗೆ ಅನೇಕ ಸಾಕ್ಷ್ಯಾಧಾರಗಳನ್ನು ಸುಪ್ರಿಂ ಕೋರ್ಟ್ ಪರಿಗಣಿಸಿತ್ತು. ಸಾಕ್ಷ್ಯನಾಶ ಮಾಡುವ ಸಾಧ್ಯತೆಯನ್ನು ಮನಗಂಡು ಈತನನ್ನು ಎರಡು ವರ್ಷಗಳ ಕಾಲ ಗುಜರಾತ್‍ನಿಂದ ಗಡಿಪಾರು ಮಾಡಿತ್ತು. ಅಂದಹಾಗೆ ಆಗ ಅಮಿತ್ ಶಾ ಗುಜರಾತ್‍ನ ಗೃಹಮಂತ್ರಿಯಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.
ಈ ಕೇಸಿನಲ್ಲಿ ಅಮಿತ್ ಶಾ ಜೊತೆ ಡಿಐಜಿ ವಂಜಾರ ಒಳಗೊಂಡು 6 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳೂ ಜೈಲು ಪಾಲಾಗಿದ್ದರು. ಮೋದಿ ಪ್ರಧಾನಿಯಾಗಿ ಪಂಜರದ ಗಿಳಿ ಕುಖ್ಯಾತಿಯ ಸಿಬಿಐ ಅವರ ಹಿಡಿತಕ್ಕೆ ಬಂದ ಮೇಲೆ ಈ ಅಧಿಕಾರಿಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು ಕಾಕತಾಳಿಯವೇನಲ್ಲ.
ಗುಜರಾತ್‍ನಿಂದ ಹೊರಗಡೆ ಈ ಕೇಸಿನ ವಿಚಾರಣೆ ನಡೆಸಬೇಕೆಂಬ ಸುಪ್ರಿಂ ಆದೇಶದ ಪ್ರಕಾರ ಸಿಬಿಐ ಕೋರ್ಟ್ ವಿಚಾರಣೆ ನಡೆಸಿತ್ತು. ಈ ಹಿಂದೆ ವಿಚಾರಣೆ ನಡೆಸುತ್ತಿದ್ದ ಜ.ಉತ್ಪಾತ್ ಅವರು ಅಮಿತ್ ಶಾ ಕೋರ್ಟಿನ ಮುಂದೆ ಖುದ್ದು ಹಾಜರಾಗಬೇಕೆಂದು ಆದೇಶ ಹೊರಡಿಸಿದ ಕೆಲವೇ ದಿನಗಳಲ್ಲಿ ಎತ್ತಂಗಡಿಯಾದರು. ಅವರ ಸ್ಥಾನಕ್ಕೆ ಬಂದವರೇ ನತದೃಷ್ಟ ಜ.ಲೋಯಾ.
ಜಸ್ಟೀಸ್ ಲೋಯಾ ಅನುಮಾನಾಸ್ಪದ ಸಾವಿನ ನಂತರ ಏನಾಯ್ತು ಗೊತ್ತೆ? ಅವರ ಸ್ಥಾನಕ್ಕೆ ಬಂದ ಜ.ಗೋಸ್ವಾಮಿ ಎಂಬುವವರು ಈ ಕೇಸಿನಲ್ಲಿ ಅಮಿತ್ ಶಾಗೆ ಕ್ಲೀನ್ ಚಿಟ್ ದಯಪಾಲಿಸಿಬಿಟ್ಟರು. ಅಲ್ಲಿಗೆ ಒಂದು ಅಧ್ಯಾಯ ಮುಗಿದಂತಾಯ್ತು.
ನ್ಯಾಯಾಧೀಶರ ನಿಗೂಡ ಸಾವಿನ ತನಿಖೆ ಕೈಗೊಂಡ ಕ್ಯಾರವಾನ್ ಪತ್ರಿಕೆ ಅವರ ಕುಟುಂಬದವರು, ಬಂಧುಮಿತ್ರರು, ಸಹೋದ್ಯೋಗಿಗಳು ಮುಂತಾದವರಿಂದ ಮಾಹಿತಿ ಸಂಗ್ರಹಿಸಿ 2017ರ ನವೆಂಬರ್‍ನಲ್ಲಿ ತನಿಖಾ ವರದಿ ಪ್ರಕಟಿಸಿತು. ಮೂರು ವರ್ಷಗಳ ಹಿಂದೆ ಹೂತುಹೋಗಿದ್ದ ನಿಗೂಡ ಸಾವಿನ ಪ್ರಕರಣಕ್ಕೆ ಆಗಲೇ ಮರುಜೀವ ಬಂದಿದ್ದು. ಇಂಥಾ ಪ್ರಾಮಾಣಿಕ ನ್ಯಾಯಾಧೀಶರ ನಿಗೂಡ ಸಾವಿನ ಪೋಸ್ಟ್‍ಮಾರ್ಟಂ ವರದಿ ಹಾಗೂ ಕಾನೂನು ಪ್ರಕ್ರಿಯೆಗಳಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿರುವುದರಿಂದ ಸ್ವತಂತ್ರ ತನಿಖೆಗೆ ಆದೇಶಿಸಬೇಕೆಂದು ಕೋರಿ ಸುಪ್ರಿಂಕೋರ್ಟ್‍ನಲ್ಲಿ ಒಂದು ಪಿಐಎಲ್ ದಾಖಲಾಯಿತು. ಇದೇ ಅವಧಿಯಲ್ಲಿ ಬಾಂಬೆ ಹೈಕೋರ್ಟ್‍ನಲ್ಲೂ ಒಂದು ಪಿಐಎಲ್ ದಾಖಲಾಯ್ತು.
2018ರ ಜನವರಿಯಲ್ಲಿ ದಾಖಲಾದ ಇಂಥಾ ಘನಗಂಭೀರವಾದ ಪ್ರಕರಣವನ್ನು ಏಪ್ರಿಲ್ 19ರಂದು ಸುಪ್ರಿಂಕೋರ್ಟ್ ಇತ್ಯರ್ಥಪಡಿಸಿದೆ. ‘ಜಸ್ಟೀಸ್ ಲೋಯಾ ಸಾವು ಸಹಜವಾಗಿಯೇ ಸಂಭವಿಸಿದೆ, ಈ ಬಗ್ಗೆ ಯಾವುದೇ ತನಿಖೆಯ ಅಗತ್ಯವಿಲ್ಲ’ ಎಂದು ತೀರ್ಪು ನೀಡಿದ್ದು ಮಾತ್ರವಲ್ಲದೆ ಅರ್ಜಿದಾರರ ಉದ್ದೇಶವನ್ನೇ ಪ್ರಶ್ನೆ ಮಾಡಿದೆ. ನೆನಪಿಡಿ. ಜಸ್ಟೀಸ್ ಲೋಯಾ ಸಾವು ಹೃದಯಾಘಾತದಿಂದ ಸಂಭವಿಸಿದ್ದಲ್ಲ ಎಂದು ಫಾರೆನ್ಸಿಕ್ ತಜ್ಞರು ಅಭಿಪ್ರಾಯಪಟ್ಟಿರುವ ವರದಿಗಳು ಬಂದಿವೆ. ಪೋಸ್ಟ್ ಮಾರ್ಟಂ ವರದಿ ತಯಾರಿಸುವಲ್ಲಿ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಸಚಿವರೊಬ್ಬರು ಭಾಗಿಯಾಗಿದ್ದರೆಂಬ ಬಗ್ಗೆಯೂ ವರದಿಗಳು ಪ್ರಕಟವಾಗಿವೆ.
ಇಂಥದ್ದೇ ಮತ್ತೊಂದು ಪ್ರಕರಣ ಹೀಗಿದೆ.
ಇದು ಉತ್ತರಪ್ರದೇಶದ ಪ್ರಸಾದ್ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ್ದು. ಸದರಿ ಮೆಡಿಕಲ್ ಕಾಲೇಜಿನ ಪ್ರವೇಶಾತಿಯನ್ನು ನಿರ್ಬಂಧಿಸಿದ ಮೆಡಿಕಲ್ ಕೌನ್ಸಿಲ್‍ನ ಆದೇಶವನ್ನು ಪ್ರಶ್ನಿಸಿ ಆಡಳಿತ ಮಂಡಳಿ ಅಲ್ಲಿನ ಹೈಕೋರ್ಟ್ ಮೆಟ್ಟಲೇರಿತ್ತು. ತಮ್ಮ ಪರವಾಗಿ ತೀರ್ಪು ಪಡೆಯಲು ‘ನ್ಯಾಯಾಧೀಶರಿಗೆ ಲಂಚ ಕೊಡುವ ಡೀಲ್’ ಇದು. ಮಧ್ಯಮರ್ತಿಯಾಗಿದ್ದ ಒಬ್ಬ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡು 5 ಜನರನ್ನು ಅರೆಸ್ಟ್ ಮಾಡಿದ ಸಿಬಿಐ 2017ರ ಸೆಪ್ಟೆಂಬರ್‍ನಲ್ಲಿ 2 ಕೋಟಿ ನಗದು ಹಣವನ್ನು ವಶಪಡಿಸಿಕೊಂಡು ಎಫ್‍ಐಆರ್ ದಾಖಲಿಸಿತ್ತು. ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಘಾಸಿ ಮಾಡಿದ ಈ ಪ್ರಕರಣದ ಸ್ವತಂತ್ರ ತನಿಖೆಗಾಗಿ ಒತ್ತಾಯಿಸಿ ಸುಪ್ರಿಂ ಕೋರ್ಟಿನಲ್ಲಿ ಪೆಟಿಷನ್ ದಾಖಲಾಯ್ತು. ಜಸ್ಟೀಸ್ ಚಲಮೇಶ್ವರ್ ಈ ಪ್ರಕರಣವನ್ನು 5 ಮಂದಿ ಹಿರಿಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಬೇಕೆಂದು ಆದೇಶಿಸಿದರು. ಈ ಪ್ರಕರಣದಲ್ಲಿ ದಿಡೀರ್ ಮಧ್ಯಪ್ರವೇಶಿಸಿದ ಸಿಜೆಐ ದೀಪಕ್ ಮಿಶ್ರಾ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಹಾಲ್ 2ರಿಂದ ಕೋರ್ಟ್ ಹಾಲ್ ನಂಬರ್ 6ಕ್ಕೆ ವರ್ಗಾಯಿಸಿದರು. ಇತರೆ ಕೆಲವು ಕಿರಿಯ ನ್ಯಾಯಾಧೀಶರೊಂದಿಗೆ ತಾವೇ ವಿಚಾರಣೆಯನ್ನು ಕೈಗೆತ್ತಿಕೊಂಡರು.
ಆಘಾತಕಾರಿ ವಿಷಯವೆಂದರೆ ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿದ ಎಫ್‍ಐಆರ್‍ನಲ್ಲಿ ಸಿಜೆಐ ದೀಪಕ್ ಮಿಶ್ರಾರ ಹೆಸರು ಉಲ್ಲೇಖವಾಗಿಲ್ಲವಾದರೂ ಆ ವೇಳೆಯಲ್ಲಿ ಸ್ವತಃ ಅವರೇ ಅಲ್ಲಿನ ನ್ಯಾಯಾಧೀಶರಾಗಿದ್ದು ಪ್ರಕರಣದಲ್ಲಿ ಆರೋಪಿತರಾಗಿದ್ದರು! ಈ ಹಿನ್ನೆಲೆಯಲ್ಲಿ ನೀವು ಈ ಪ್ರಕರಣದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿನಂತಿಸಿದರೂ ಸಿಜೆಐ ಅದಕ್ಕೆ ಸೊಪ್ಪುಹಾಕಲಿಲ್ಲ. ವಾಸ್ತವದಲ್ಲಿ ಭೂಷಣ್ ಅವರಿಗೆ ವಾದ ಮಂಡಿಸಲು ಅವಕಾಶವನ್ನೇ ಕೊಡಲಿಲ್ಲ. ಇಂಥಾ ನಡವಳಿಕೆಯಿಂದ ಬೇಸತ್ತ ಭೂಷಣ್ ಕೋರ್ಟ್‍ಹಾಲ್‍ನಿಂದ ವಾಕ್‍ಔಟ್ ಮಾಡಬೇಕಾಗಿ ಬಂತು. ಇದು ಸಾಲದು ಎಂಬಂತೆ ದೀಪಕ್ ಮಿಶ್ರಾ ಬೆಂಬಲಕ್ಕೆ ನಿಂತಿದ್ದ ಕೆಲವು ವಕೀಲರು ಕೋರ್ಟ್‍ನ ಆವರಣದಲ್ಲೇ ಪ್ರಶಾಂತ ಭೂಷಣ್ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಕೂಡ ಮಾಡಿದರು.
ಈ ವಿದ್ಯಮಾನ ನಡೆದು ಕೆಲ ತಿಂಗಳ ನಂತರ 2018 ಜನವರಿ 12ರಂದು ನಾಲ್ಕು ಮಂದಿ ಹಿರಿಯ ನ್ಯಾಯವಾದಿಗಳು ಸಾರ್ವಜನಿಕ ಪತ್ರಿಕಾ ಗೋಷ್ಠಿ ಕರೆದು ಸಿಜೆಐ ವಿರುದ್ಧ ಬಹಿರಂಗ ಆರೋಪ ಮಾಡಿದರು. ಕೆಲವು ಅತಿ ಸೂಕ್ಷ್ಮ ಕೇಸುಗಳ ಹಂಚಿಕೆಯಲ್ಲಿ ಸಿಜೆಐ ಪಾರದರ್ಶಕವಾಗಿ, ಕ್ರಮಬದ್ಧವಾಗಿ ನಡೆದುಕೊಳ್ಳದೆ, ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆಂಬುದು ಆರೋಪದ ಸಾರಾಂಶ. ‘ಈ ಸಂಸ್ಥೆಯ ನ್ಯಾಯಪರತೆಯನ್ನು ಉಳಿಸಿಕೊಳ್ಳದೇ ಹೋದರೆ ಈ ದೇಶದಲ್ಲಿ ಪ್ರಜಾತಂತ್ರ ಉಳಿಯೋದಿಲ್ಲ’ ಎಂದು ಎರಡನೇ ಜೇಷ್ಠ ಸ್ಥಾನದಲ್ಲಿರುವ ಜ.ಚಲಮೇಶ್ವರ್ ಅಲವತ್ತುಕೊಂಡಿದ್ದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು.
ಮತ್ತೊಂದು ಪ್ರಮುಖ ವಿವಾದ ಜಡ್ಜ್‍ಗಳ ನೇಮಕಾತಿಗೆ ಸಂಬಂಧಿಸಿದ್ದು.
ಜಡ್ಜ್‍ಗಳ ನೇಮಕಾತಿಯಲ್ಲಿ ಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸಿ, ನ್ಯಾಯಾಂಗವನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಮಾರ್ಚ್ 21ರಂದು ಸಿಜೆಐಗೆ ಪತ್ರ ಬರೆದ ಚಲಮೇಶ್ವರ್ ಈ ಬಗ್ಗೆ ಚರ್ಚಿಸಲು ಎಲ್ಲಾ ಜಡ್ಜ್‍ಗಳ ಸಭೆ ಕರೆಯುವಂತೆ ಆಗ್ರಹಿಸಿದರು. ವಿಪರ್ಯಾಸವೆಂದರೆ ಸಿಜೆಐ ಸಭೆ ಕರೆಯುವುದಿರಲಿ, ಪತ್ರಕ್ಕೆ ಉತ್ತರವನ್ನೂ ಕೊಡಲಿಲ್ಲ.
ಏಪ್ರಿಲ್ 9 ರಂದು ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಸಿಜೆಐಗೆ ಪತ್ರ ಬರೆದು, ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿ ಕೊಲಿಜಿಯಂ ಶಿಫಾರಸ್ಸನ್ನು ಅಂಡಿನ ಕೆಳಗೆಹಾಕಿ ಕೂತಿರುವ ಕೇಂದ್ರ ಸರ್ಕಾರದ ಕ್ರಮದ ವಿಚಾರಣೆ ನಡೆಸಬೇಕೆಂದೂ, ಅದಕ್ಕಾಗಿ 7 ಮಂದಿ ನ್ಯಾಯಾಧೀಶರ ಒಂದು ಪೀಠವನ್ನು ರಚಿಸಬೇಕೆಂದೂ ಆಗ್ರಹಿಸಿದರು. ಉಹೂಂ ಸಿಜೆಐ ಜಪ್ಪೆನ್ನಲಿಲ್ಲ.
ಇದೇ ವಿಷಯದ ಬಗ್ಗೆ ಹಿಂದಿನ ಸಿಜೆಐ ಟಿಎಸ್ ಠಾಕೂರ್ ಅವರು 2016ರಲ್ಲಿ ನಡೆದ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯನ್ಯಾಂiÀiಮೂರ್ತಿಗಳ ಸಮವೇಶದಲ್ಲಿ ಪ್ರಧಾನಿ ಮೋದಿಯ ಮುಂದೆ ಕಣ್ಣೀರಿಟ್ಟು, ನ್ಯಾಯಾಂಗವನ್ನು ರಕ್ಷಿಸಿ ಅಂತ ಮೊರೆಯಿಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗೆ ಬರೆಯುತ್ತಾ ಹೋದರೆ ಕೊನೆಮೊದಲೆಂಬುದಿಲ್ಲ.
ಈಗ ಸಿಜೆಐ ಮುಂದಿರುವ ಹಲವಾರು ಪ್ರಮುಖ ಕೇಸುಗಳಿವೆ. ಪ್ರಸಾದ್ ಎಜುಕೇಷನಲ್ ಟ್ರಸ್ಟ್ ಲಂಚ ಪ್ರಕರಣ, 2ಜಿ ಕೇಸಿನ ಅಪೀಲು, ಜಯ್ ಶಾ ಆಸ್ತಿಗೆ ಸಂಬಂಧಿಸಿದ ಕೇಸು, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾನನ್ನು ಕಾನೂನುಬಾಹಿರವಾಗಿ ಒಎನ್‍ಜಿಸಿ ನಿರ್ದೇಶಕನನ್ನಾಗಿ ನೇಮಕ ಮಾಡಿದ ಕೇಸು… ಹೀಗೆ ಹತ್ತು ಹಲವು ಕೇಸುಗಳಿವೆ. ಸಿಜೆಐ ದೀಪಕ್ ಮಿಶ್ರಾ ನೇತೃತ್ವದಲ್ಲಿ ಈ ಕೇಸುಗಳು ಯಾವ ದಿಕ್ಕಿಗೆ ಸಾಗಲಿವೆ ಎಂಬುದನ್ನು ಓದುಗರೇ ನಿರ್ಧರಿಸಬೇಕು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ, ರಿಜರ್ವ್ ಬ್ಯಾಂಕ್, ಸಿಬಿಐ, ಕೇಂದ್ರ ವಿಚಕ್ಷಣಾ ಆಯೋಗ(ಸಿವಿಸಿ), ಇಡಿ ಮುಂತಾದವುಗಳಿಗೆ ತಮ್ಮ ಕಣ್ಸನ್ನೆಯಲ್ಲಿ ಕೆಲಸ ಮಾಡುವವರನ್ನು ತಂದು ಕೂರಿಸಿದೆಯೆಂಬ ಆರೋಪ ದಟ್ಟವಾಗಿದೆ. ಅದರಲ್ಲಿ ಹಲವರು ಸ್ವತಃ ಕಳಂಕಿತರಾಗಿದ್ದಾರೆ.
ವಿರೋಧ ಪಕ್ಷಗಳು ಇಂಪೀಚ್‍ಮೆಂಟ್‍ಗಾಗಿ ಆಗ್ರಹಿಸಿದ್ದರ ಹಿಂದೆ ಇಷ್ಟೆಲ್ಲ ನಡೆದಿದೆ. ಜ.ಲೋಯಾ ಕೇಸನ್ನು ವಿಚಾರಣೆಗೂ ಕೈಗೆತ್ತಿಕೊಳ್ಳದೆ ಇತ್ಯರ್ಥ ಮಾಡಿದ ನ್ಯಾಯಾಂಗದ ಮೇಲಿನ ನಂಬಿಕೆಯನ್ನೇ ಅಲುಗಾಡಿಸಿದೆ. ನಮ್ಮ ಪ್ರಜಾತಂತ್ರ ಅತ್ಯಂತ ಸಂಕಷ್ಟದಲ್ಲಿದೆ.
ಕೊನೆಯದಾಗಿ, ಇತ್ತೀಚಿಗೆ ಜಸ್ಟೀಸ್ ಕುರಿಯನ್ ಜೋಸೆಫ್ ಅವರು ಹೇಳಿದ ಮಾತು ಮಾರ್ಗದರ್ಶಿಯಂತಿದೆ. ‘ನ್ಯಾಯಾಲಯ ಮತ್ತು ಕೋರ್ಟ್‍ಗಳು ಕಾವಲು ನಾಯಿಗಳಂತೆ. ಅವು ಅಗತ್ಯ ಬಿದ್ದಾಗ ಬೊಗಳಬೇಕು; ಕೇಳಿಸಿಕೊಳ್ಳುವುದೇ ಇಲ್ಲವೆಂದಾಗ ಕಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲ’.