ನೀಲಗಾರ |
ಕರ್ನಾಟಕದ ಟಿವಿ ಚಾನೆಲ್‍ಗಳನ್ನು ನೋಡಿದರೆ ತಳಬುಡವಿಲ್ಲದ ರಾಜಕೀಯ ಸುದ್ದಿಗಳನ್ನು ಮತ್ತು ವಿಶ್ಲೇಷಣೆಗಳನ್ನಷ್ಟೇ ಪಡೆದುಕೊಳ್ಳಲು ಸಾಧ್ಯ. ಈ ಹಿಂದೆ ಟ್ಯಾಬ್ಲಾಯ್ಡ್‍ಗಳಲ್ಲಿ ಅಥವಾ ದಿನಪತ್ರಿಕೆಗಳಲ್ಲಿ ರಾಜಕೀಯ ವಿಶ್ಲೇಷಕರಾಗಿದ್ದವರಲ್ಲೂ ಒಳ್ಳೆಯ ಗುಣಮಟ್ಟದ ಪತ್ರಕರ್ತರು ಟಿವಿ ಪ್ಯಾನೆಲ್ ಚರ್ಚೆಗಳಿಗೆ ಹೋಗುವಂತೆ ಕಾಣುವುದಿಲ್ಲ. ಹೀಗಾಗಿ ಅಲ್ಲಿ ಪ್ರಸಾರವಾಗುವ ಬಹಳಷ್ಟು ರಾಜಕೀಯ ಸ್ಟೋರಿಗಳು ಪೇಯ್ಡ್ ನ್ಯೂಸ್ ಥರಾ, ಇಲ್ಲವೇ ಅವತ್ತಿನ ಟಿಆರ್‍ಪಿ ಮಾಲಿನ ರೀತಿ, ಇಲ್ಲವೇ ಬಿಜೆಪಿ ಪರವಾಗಿ ಹೊಸೆದ ಸುದ್ದಿಗಳ ರೀತಿ ಇರುತ್ತವೆ. ಸಚಿವ ಸಂಪುಟ ವಿಸ್ತರಣೆ ಆದ ನಂತರ ಅಂತಹ ಒಂದು ಸುದ್ದಿ ಓಡಿತು. ಅದು ‘ಸಿದ್ದುವೇ ಬಾಸ್’ ಎಂಬ ರೀತಿಯ ಶೀರ್ಷಿಕೆಗಳನ್ನುಳ್ಳ ಅರ್ಧಗಂಟೆ ಅಥವಾ ಮುಕ್ಕಾಲುಗಂಟೆಯ ಸ್ಟೋರಿ. ಆಶ್ಚರ್ಯವೆಂದರೆ ಕುಮಾರಸ್ವಾಮಿಯವರ ಒಡೆತನದ ಚಾನೆಲ್‍ನಲ್ಲೂ ಈ ಸ್ಟೋರಿ ಬಂದಿತು.
ಟಗರು ಸಿನೆಮಾದ ಶೀರ್ಷಿಕೆಯ ಗೀತೆಯನ್ನು ಬಳಸಿಕೊಂಡು ‘ಸಿದ್ದರಾಮಯ್ಯನವರು ಇಂದು ಕರ್ನಾಟಕದ ಪ್ರಶ್ನಾತೀತ ನಾಯಕರು; ಅದರಲ್ಲೂ ಕರ್ನಾಟಕದ ಕಾಂಗ್ರೆಸ್‍ನಲ್ಲಂತೂ ಅವರ ನಿರ್ಣಯವೇ ಅಂತಿಮ; ಹೈಕಮ್ಯಾಂಡ್ ಸಹಾ ಅವರ ಮಾತನ್ನು ತೆಗೆದುಹಾಕುವುದಿಲ್ಲ’ ಎಂಬ ಮಾತುಗಳನ್ನು ಹಿನ್ನೆಲೆಯ ನಿರೂಪಣೆಯಲ್ಲಿ ಬಿತ್ತರಿಸುತ್ತಾ ಹೋಗುವ ಇಂತಹ ಕಾರ್ಯಕ್ರಮಗಳು ಒಂದರ ಹಿಂದೊಂದು ಪ್ರಸಾರವಾದವು. ಕೆಲವೇ ದಿನಗಳ ಹಿಂದೆ ಇದೇ ರೀತಿಯಲ್ಲಿ ಡಿ.ಕೆ.ಶಿವಕುಮಾರ್‍ರನ್ನು ಬಿಂಬಿಸುವ ಕಾರ್ಯಕ್ರಮಗಳು ಪ್ರಸಾರವಾಗಿದ್ದವು. ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆ ಮತ್ತು ಬಳ್ಳಾರಿ ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ರೂವಾರಿಯೆಂದು ಡಿಕೆಶಿಯನ್ನು ಬಿಂಬಿಸಲಾಗಿತ್ತು. ಈಗ ಇದ್ದಕ್ಕಿದ್ದಂತೆ ಅವೇ ಚಾನೆಲ್‍ಗಳು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿವೆ.
ರಾಜಕಾರಣದ ಮೇಲಾಟಗಳ ಈ ವಾಸ್ತವವೇನು ಎಂಬುದನ್ನು ಚುನಾವಣಾ ಲೆಕ್ಕಾಚಾರವನ್ನು ಆಧರಿಸಿದ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಅರ್ಥಮಾಡಿಕೊಳ್ಳಬೇಕೇ ಹೊರತು, ಅವತ್ತು ಹೊಸೆಯಬೇಕಾದ ಟಿಆರ್‍ಪಿ ಸರಕಿನಿಂದಲ್ಲ ಎಂದು ಈ ಟಿವಿ ಚಾನೆಲ್‍ಗಳಿಗಂತೂ ಹೇಳಲಾಗದು. ಆದರೆ, ಕರ್ನಾಟಕದ ಜಾಣಜಾಣೆಯರಿಗೆ ತಿಳಿಸುವ ಕರ್ತವ್ಯವಂತೂ ನಮ್ಮ ಮುಂದಿದೆ. ಈ ಚುನಾವಣಾ ಲೆಕ್ಕಾಚಾರವೇನು, ವೈಜ್ಞಾನಿಕ ವಿಶ್ಲೇಷಣೆಯೇನು, ಒಂದು ವೇಳೆ ಅಂಥದಿದ್ದರೂ ಕಾಂಗ್ರೆಸ್ ಪಕ್ಷವು ಅಂತಹ ಲೆಕ್ಕಾಚಾರವನ್ನೆಲ್ಲಾ ಮಾಡುತ್ತದೆಯಾ ಎಂಬ ಪ್ರಶ್ನೆ ಉದ್ಭವಿಸಬಹುದು. ದೇಶದ ಎಲ್ಲಾ ರಾಜ್ಯಗಳಲ್ಲೂ ಅಸ್ತಿತ್ವದಲ್ಲಿರುವ ಬೃಹತ್ ಪಕ್ಷವಾದ ಕಾಂಗ್ರೆಸ್ ಎಂಬುದು ಮೂರ್ಖ ಪಕ್ಷವೆಂದು ಭಾವಿಸಿರುವವರು ಮೂರ್ಖರಷ್ಟೇ. ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತವಾದ ಯಂತ್ರಾಂಗ 5-6 ದಶಕಗಳ ಕಾಲದಲ್ಲಿ ರೂಪುಗೊಂಡಿದೆ. ಇದನ್ನು ವಿವರಿಸುವ ಉದಾಹರಣೆಯೊಂದನ್ನು ನೀಡುವ ಮುಂಚೆ ಹೇಳಬೇಕಾದ ಮಾತೊಂದಿದೆ: ಸಿದ್ದರಾಮಯ್ಯನವರನ್ನು ಮತ್ತು ಕರ್ನಾಟಕದ ಕಾಂಗ್ರೆಸ್ಸನ್ನು ಅದರ ಹೈಕಮಾಂಡ್ ಖಚಿತವಾದ ಲೆಕ್ಕಾಚಾರದಿಂದಲೇ ನಿಭಾಯಿಸುತ್ತಿದೆ. ಈ ಬರಹದ ಉಳಿದ ಭಾಗ ಅದನ್ನೇ ಬಿಚ್ಚಿಡುವುದರಿಂದ, ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಕೆಲವು ವಿವರಗಳನ್ನು ಮೊದಲು ನೋಡೋಣ.
ದೆಹಲಿ ಮತ್ತು ದೇಶದ ವಿವಿಧ ಭಾಗಗಳಲ್ಲಿ ಹಲವು ಥಿಂಕ್ ಟ್ಯಾಂಕ್‍ಗಳು ಕೆಲಸ ಮಾಡುತ್ತವೆ. ಮೇಲ್ನೋಟಕ್ಕೆ ಅವು ಆಗಿಂದಾಗ್ಗೆ ಕಾನ್ಸ್ಟಿಟ್ಯೂಷನ್ ಕ್ಲಬ್, ಇಂಡಿಯಾ ಇಂಟರ್‍ನ್ಯಾಷನಲ್ ಸೆಂಟರ್ ಥರದ ಜಾಗೆಗಳಲ್ಲಿ ಸೆಮಿನಾರ್‍ಗಳನ್ನು ಏರ್ಪಡಿಸುವ ಚರ್ಚಾಕೂಟಗಳಷ್ಟೇ ಎಂಬಂತೆ ಕಾಣಿಸುತ್ತವೆ. ಉದಾಹರಣೆಗೆ, ರಾಜೀವ್‍ಗಾಂಧಿ ಫೌಂಡೇಷನ್ ಅಂತಹದೊಂದು ಸಂಸ್ಥೆ. ಇದೇ ಫೌಂಡೇಷನ್ ಬಹಳ ಹಿಂದೆ ಗುಜರಾತ್‍ನ ಮೋದಿ ಸರ್ಕಾರಕ್ಕೇ ಪ್ರಶಸ್ತಿ ಕೊಟ್ಟಿತ್ತು! (ಕರಣ್ ಥಾಪರ್ ಮೋದಿಗೆ ನೀರು ಕುಡಿಸಿದ ಸಂದರ್ಶನದಲ್ಲಿ ಇದರ ಪ್ರಸ್ತಾಪ ಬರುವುದನ್ನು ನೀವು ಗಮನಿಸಿರಬಹುದು). ಇಂತಹ ಹಲವು ಸಂಸ್ಥೆಗಳು ಕಾಂಗ್ರೆಸ್ಸಿಗೆ ಬೇಕಾದ ವಿಶ್ಲೇಷಣೆ, ಯಾವ ಸಮುದಾಯಗಳನ್ನು/ಸಂದರ್ಭಗಳನ್ನು ಹೇಗೆ ನಿಭಾಯಿಸಿದರೆ ಒಳಿತು ಎಂಬಿತ್ಯಾದಿ ಮಾರ್ಗದರ್ಶನವನ್ನು ಒದಗಿಸುತ್ತವೆ.
ರಾಹುಲ್‍ಗಾಂಧಿ ಕಾಲದಲ್ಲಿ ಅದಿನ್ನೂ ಆಧುನಿಕ ರೂಪ ತಾಳಿದೆ. ಕೆಲವು ಐಐಟಿ ಇಂಜಿನಿಯರ್‍ಗಳು, ವಿದೇಶದಲ್ಲಿ ಮ್ಯಾನೇಜ್‍ಮೆಂಟ್ ಪದವಿಗಳನ್ನು ಪಡೆದ ಯುವಕರು ಮತ್ತು ಯುವತಿಯರು ಕೋರ್ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಇಂತಹ ಕೆಲವು ಗುಂಪುಗಳಿಗೆ ಕಾಂಗ್ರೆಸ್‍ನ ಸಂಘಟನಾ ರಚನೆಯಲ್ಲಿ ಅಧಿಕೃತ ಸ್ಥಾನಮಾನವೇ ಇದೆ. ಡಾಟಾ ಅನಲೆಟಿಕ್ಸ್ ವಿಭಾಗ ಎಂಬುದು ಅಂತಹದೊಂದು ವಿಭಾಗ. ಪ್ರವೀಣ್ ಚಕ್ರವರ್ತಿ ಎಂಬ ಮಾರುಕಟ್ಟೆ ಪರ ನೀತಿ ನಿರೂಪಣೆ ಮಾಡುವ ತಜ್ಞ ಅದರ ಮುಖ್ಯಸ್ಥ. ಮುಂದಿನ ಸಾರಿ ಮೋದಿ ಪ್ರಧಾನಿ ಆಗಲಾರರು ಎಂದು ಈಗ ಎಲ್ಲರೂ ಯಾವ ಆಧಾರದಲ್ಲಿ ಹೇಳುತ್ತಿದ್ದರೋ, ಅದನ್ನು ಅಂಕಿ-ಅಂಶಗಳ ಸಮೇತ 2018ರ ಫೆಬ್ರವರಿಯಲ್ಲೇ ಆತ ವಿವರವಾಗಿ ಬರೆದಿದ್ದರು.
ನಿಮಗೆ ಆಶ್ಚರ್ಯವಾಗಬಹುದು, ಇದನ್ನು ಆತ ಮೊದಲು ಹೇಳಿದ್ದು, 2014ರ ಮೇ 21ರಂದು. ಅಂದರೆ ಮೋದಿ ಅಧಿಕಾರ ವಹಿಸಿಕೊಂಡ 5 ದಿನಗಳಲ್ಲಿ! ಮೋದಿ ಪ್ರಧಾನಿಯಾದ ಐದು ದಿನಗಳಲ್ಲೇ, 2019ರಲ್ಲಿ ಅವರು ಮತ್ತೆ ಗೆಲ್ಲಲಾರರು ಎಂಬುದಕ್ಕೆ ಕೆಲವು ಕಾರಣಗಳನ್ನು ಮುಂದಿಟ್ಟಿದ್ದರು. ಈಗ ವಿವಿಧ ‘ಪಂಡಿತರು’ ಮೋದಿ ಪ್ರಧಾನಿಯಾಗಲಾರರು ಎಂದು ಹೇಳಲು ಯಾವ ವಾದಗಳನ್ನು ಮುಂದಿಡುತ್ತಿದ್ದಾರೋ ಆ ವಾದಗಳು ಅಂದೇ ಇವರು ಹೇಳಿಯಾಗಿತ್ತು. ಅದು ಸರಳ ಅಂಕಗಣಿತದ ವಿಚಾರ. ಬಿಜೆಪಿಯು 2014ರಲ್ಲಿ ಪಡೆದುಕೊಂಡ ಒಟ್ಟು ಸೀಟುಗಳನ್ನು ಕೇವಲ 11 ರಾಜ್ಯಗಳಲ್ಲಿ ಪಡೆದುಕೊಂಡಿತ್ತು! ಈ ರಾಜ್ಯಗಳಲ್ಲಿ ಒಟ್ಟು ಲೋಕಸಭೆಯ ಶೇ.60ರಷ್ಟು ಕ್ಷೇತ್ರಗಳು ಬರಲಿದ್ದು, ಅವುಗಳಲ್ಲಿ ಶೇ.90ರಷ್ಟನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ರಾಜ್ಯಗಳ ಪೈಕಿ 3 ದೊಡ್ಡ ರಾಜ್ಯಗಳಲ್ಲಿ ಬಿಜೆಪಿಯು 15 ವರ್ಷಗಳ ಕಾಲ ಆಡಳಿತ ನಡೆಸುತ್ತಿತ್ತು. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಷ್ಟನ್ನು ಪಡೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಅವೆಲ್ಲದರ ಆಧಾರದ ಮೇಲೆ – ಈಗ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಯಾವ ಅಂಶ ಸಾಬೀತಾಗಿದೆಯೋ ಅದನ್ನು – ಬರೆದಿಟ್ಟಿದ್ದರು. ಹಾಗೆಂದು ಅದರಲ್ಲಿ ದೊಡ್ಡ ಕಾಲಜ್ಞಾನವೇನೂ ಇಲ್ಲ. ಮೀಡಿಯಾಗಳ ಅಬ್ಬರದ ಮೇಲ್ಪದರದ ವಿಶ್ಲೇಷಣೆಯಲ್ಲಿ ತೇಲಿ ಹೋಗದ ಸುಸಂಬದ್ಧ ತರ್ಕ ಮಾತ್ರ ಇತ್ತು.
ಕಾಂಗ್ರೆಸ್ಸು ಪಡೆದುಕೊಳ್ಳುತ್ತಿರುವ ಆತ್ಮವಿಶ್ವಾಸ, ರಾಹುಲ್‍ಗಾಂಧಿಯ ಸಾರ್ವಜನಿಕ ಮಾತುಗಾರಿಕೆಯಲ್ಲಿ ಬಂದಿರುವ ಬದಲಾವಣೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಇಂತಹ ಹಲವು ಖಚಿತ ಲೆಕ್ಕಾಚಾರಗಳಿವೆ. ಈ ರೀತಿಯ ಥಿಂಕ್ ಟ್ಯಾಂಕ್‍ಗಳು ಹೇಳುವ ಎಲ್ಲವನ್ನೂ ನಾವು ಒಪ್ಪಬೇಕಿಲ್ಲ; ಅದರಲ್ಲೂ ಅದರ ಹಿಂದಿನ ಅವರ ಆಶಯ ಮತ್ತು ಭವಿಷ್ಯದಲ್ಲಿ ಏನು ಮಾಡಬೇಕು ಎಂಬುದನ್ನಂತೂ ನಾವು ಒಪ್ಪಿಕೊಳ್ಳಲಾಗದು. ಆದರೆ, ವಿವಿಧ ಸಂದರ್ಭಗಳಲ್ಲಿ ಕಾಂಗ್ರೆಸ್ಸಿನಂತಹ ಪಕ್ಷ ತೆಗೆದುಕೊಳ್ಳುವ ನಿಲುವುಗಳು ಕೇವಲ ಸಾಂದರ್ಭಿಕ ಒತ್ತಡಗಳೋ ಅಥವಾ ಮೂರ್ಖತನದ್ದೋ ಆಗಿರುವುದಿಲ್ಲ. ಅದರ ಹಿಂದೆ ಲೆಕ್ಕಾಚಾರಗಳಿರುತ್ತವೆ ಎಂಬುದನ್ನಂತೂ ಒಪ್ಪಬೇಕು.
ಕರ್ನಾಟಕ ಕಾಂಗ್ರೆಸ್ಸಿನ ವಿಚಾರದಲ್ಲೂ ಅದೇ ಆಗುತ್ತಿದೆ. ಇಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಮೊದಲೇ ಊಹಿಸಿತ್ತೇನೋ ಎಂಬಂತೆ, ಅತಂತ್ರ ವಿಧಾನಸಭೆಯ ಲಕ್ಷಣಗಳು ಇನ್ನೂ ಗೋಚರಿಸುತ್ತಿದ್ದಾಗಲೇ ಕಾಂಗ್ರೆಸ್ ಹೈಕಮ್ಯಾಂಡ್‍ನ ಚಾಲಾಕಿಗಳು ದೇವೇಗೌಡರ ಜೊತೆ ಮಾತಾಡಿಯಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ತೋರಿದ ಚುರುಕುತನ ಹಲವರಿಗೆ ಆಶ್ಚರ್ಯ ತಂದಿತ್ತು. ಅಲ್ಲಿಂದ ಆರಂಭಿಸಿ ಸಂಪುಟ ರಚನೆಯಾಗುವತನಕದ ಬೆಳವಣಿಗೆಗಳಲ್ಲಿ ಮೇಲ್ನೋಟಕ್ಕೆ ವಿರುದ್ಧವೆನಿಸುವ ಎರಡು ಬಗೆಯ ಧೋರಣೆಯನ್ನು ಹೈಕಮಾಂಡ್ ಪ್ರದರ್ಶಿಸಿತ್ತು. ಒಂದು, ಸಿದ್ದರಾಮಯ್ಯನವರನ್ನು ವ್ಯಕ್ತಿಗತವಾಗಿ ಅದು ಗೌರವಿಸಿದ ಪರಿ. ಸರ್ಕಾರ ರಚನೆಯ ಮಾತುಕತೆಯಲ್ಲಿ ಅವರನ್ನು ಪಕ್ಕಕ್ಕಿಡಲಿಲ್ಲ. ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ನಾಯಕರನ್ನಾಗಿಯೂ ಅವರನ್ನೇ ಆರಿಸಿತು ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಅವರನ್ನು ನೇಮಿಸಲಾಯಿತು.
ಆದರೆ, ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಬಣದಲ್ಲಿದ್ದವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿಲ್ಲ. ಸಿದ್ದರಾವiಯ್ಯನವರು ಬೆಂಬಲಿಸಿದ ಲಿಂಗಾಯಿತ ಚಳವಳಿಯ ಮುಂಚೂಣಿಯಲ್ಲಿದ್ದವರಿಗಿಂತ, ವೀರಶೈವ ಗುಂಪಿನಲ್ಲಿದ್ದವರಿಗೇ ಮಣೆ ಹಾಕಲಾಯಿತು. ಆ ಸಂದರ್ಭದಲ್ಲಿ ಚಾಲ್ತಿಗೆ ಬಂದ ವಾದವೇನೆಂದರೆ, ಸಿದ್ದರಾಮಯ್ಯನವರು ಮೇಲ್ಜಾತಿಗಳ ವಿರೋಧ ಕಟ್ಟಿಕೊಂಡಿದ್ದರಿಂದ ಮತ್ತು ಹೆಚ್ಚು ಅಹಿಂದ ಜಪ ಜಪಿಸಿದ್ದರಿಂದಲೇ ಸೋಲಾಗಿದೆ ಹಾಗೂ ಅದೇ ಕಾರಣದಿಂದ ಇನ್ನು ಮುಂದೆ ಅವರನ್ನು ಮೂಲೆಗುಂಪು ಮಾಡಲಾಗುತ್ತದೆ. ಇಲ್ಲದಿದ್ದರೆ ಆಡಳಿತ ವಿರೋಧಿ ಅಲೆಯೇ ಇಲ್ಲದಿರುವಾಗ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲದಿದ್ದಾಗ ಈ ಪರಿ ಸೋಲುಂಟಾದದ್ದು ಸಿದ್ದರಾಮಯ್ಯನವರ ಅತಿ ಆತ್ಮವಿಶ್ವಾಸದಿಂದಲೇ ಎಂಬುದನ್ನು ಸಾರ್ವಜನಿಕ ಚರ್ಚೆಗಳಲ್ಲಿ ಬಿಂಬಿಸಲಾಯಿತು. ಇಂದು ಕರ್ನಾಟಕ ಕಾಂಗ್ರೆಸ್‍ನಲ್ಲಿ ಮಹತ್ವದ ಸ್ಥಾನಗಳಲ್ಲಿರುವ, ಸಿದ್ದರಾಮಯ್ಯನವರ ಜೊತೆ ಚೆನ್ನಾಗಿದ್ದಾರೆ ಎಂದು ಹೇಳಲಾಗುತ್ತಿರುವ ನಾಯಕರುಗಳೇ ಇದನ್ನು ಅಲ್ಲಲ್ಲಿ ಹೇಳಿ ಆ ವಾದವನ್ನು ಬಲಗೊಳಿಸಿದ್ದರು.
ಅದಕ್ಕೆ ಹೊಂದಿಕೊಂಡಂತೆ ಡಿ.ಕೆ.ಶಿವಕುಮಾರ್‍ರ ಸ್ಥಾನಮಾನವೂ ಏರುತ್ತಾ ಹೋಯಿತು. ಡಬಲ್ ಪ್ರಭಾವಿ ಖಾತೆಗಳು ಸಿಕ್ಕವು. ಲಿಂಗಾಯಿತ ಚಳವಳಿಗೆ ಕೈ ಹಾಕಿದ್ದು ತಪ್ಪು ಎಂದು ಸ್ವತಃ ಡಿಕೆಶಿ ಸಾರ್ವಜನಿಕವಾಗಿ ‘ತಪ್ಪೊಪ್ಪಿಗೆ’ ರೀತಿಯ ಹೇಳಿಕೆಯನ್ನು ನೀಡುವ ಧೈರ್ಯ ತೋರಿದರು.
ಆದರೆ ಇವೆಲ್ಲವೂ ಕಾಂಗ್ರೆಸ್ ಹೈಕಮಾಂಡ್ ಸುಮ್ಮನೇ ಸಿದ್ದರಾಮಯ್ಯನವರಿಗೆ ತೋರಿಕೆಯ ಗೌರವ ನೀಡುತ್ತಿದೆ; ಅದು ಡಿ.ಕೆ.ಶಿವಕುಮಾರ್‍ರಂತಹ ರಾಜಕಾರಣಿಗಳ ಕಡೆಗೆ ದಿಕ್ಕು ಬದಲಿಸಿದೆ ಎಂಬುದು ‘ಲೆಕ್ಕಾಚಾರ’ಕ್ಕೆ ವಿರುದ್ಧವಾಗುತ್ತದೆ. ಆ ಲೆಕ್ಕಾಚಾರವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ವಲ್ಪ ಹಿಂದಕ್ಕೆ ಹೋಗಬೇಕು.
ದೇಶದ ಇತರ ಭಾಗಗಳಿಗಿಂತ ಮುಂಚೆಯೇ, ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಹಿಂದ ಪಕ್ಷವಾಗಿತ್ತು. ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಆಗಿ ಮೂಲ ಕಾಂಗ್ರೆಸ್ ಒಡೆದ ನಂತರದಲ್ಲಿ ಹಾಗೂ ಸಂಸ್ಥಾ ಕಾಂಗ್ರೆಸ್‍ನ ಮುಂದುವರೆದ ರೂಪವಾದ ಜನತಾಪಕ್ಷದಲ್ಲಿ ಹೆಗಡೆ, ಬೊಮ್ಮಾಯಿ, ದೇವೇಗೌಡ ಕಾಂಬಿನೇಷನ್‍ನಲ್ಲಿ ಒಕ್ಕಲಿಗ-ಲಿಂಗಾಯಿತರು ಕಾಂಗ್ರೆಸ್ ವಿರೋಧಿ ಪಾಳಯದಲ್ಲಿ ಕನ್ಸಾಲಿಡೇಟ್ ಆಗುತ್ತಾ ಹೋದರು. ಅದಕ್ಕೂ ಮುಂಚೆ ಕಾಂಗ್ರೆಸ್ಸೇನು ಅಹಿಂದ ಪಕ್ಷವಾಗಿರಲಿಲ್ಲ; ಮೇಲ್ಜಾತಿಗಳ ಪಕ್ಷವೂ ಆಗಿರಲಿಲ್ಲ. ಇಂದಿರಾ ಕಾಂಗ್ರೆಸ್ ಸ್ಥಾಪನೆಯ ನಂತರ ನಿಧಾನಕ್ಕೆ ಈ ಬದಲಾವಣೆ ಸಂಭವಿಸುತ್ತಾ ಹೋಯಿತು. ಹೆಗಡೆ ಬೊಮ್ಮಾಯಿ ಗೌಡ ನೇತೃತ್ವದ ಜನತಾಪಕ್ಷವೂ ಒಕ್ಕಲಿಗ-ಲಿಂಗಾಯಿತರ ಪಕ್ಷ ಮಾತ್ರವಾಗಿತ್ತು ಎಂದು ಹೇಳಲಾಗದು. ನಜೀರ್‍ಸಾಬ್, ರಾಚಯ್ಯ, ಸಿದ್ದರಾಮಯ್ಯ, ಲಕ್ಷ್ಮೀಸಾಗರ್‍ರಂತಹ ನಾಯಕರಿಗೆ ಅಲ್ಲಿ ಪ್ರಮುಖ ಸ್ಥಾನ ಕೇವಲ ಪ್ರಾತಿನಿಧ್ಯದ ಆಧಾರದಲ್ಲಿ ದೊರೆತಿರಲಿಲ್ಲ. ಬದಲಿಗೆ ಯಾವ ಪಕ್ಷವೂ ಒಂದೆರಡು ಸಮುದಾಯಗಳಿಗೇ ಸೀಮಿತವಾಗುವಷ್ಟು ಜಾತಿ ಧ್ರುವೀಕರಣ ಆಗಿನ್ನೂ ಆಗಿರಲಿಲ್ಲ.
ಹಾಗೆ ನೋಡಿದರೆ, ಸಂಸದೀಯ ರಾಜಕಾರಣ ಮಾಡುವ ಯಾವುದೇ ಪಕ್ಷ ಕೆಲವೇ ಸಮುದಾಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಕಷ್ಟ ಮತ್ತು ಕರ್ನಾಟಕದಲ್ಲಂತೂ ಇನ್ನೂ ಕಷ್ಟ. ಆ ರೀತಿಯ ಸಂದರ್ಭ ಬಂದರೆ, ಅಂತಹ ಪಕ್ಷವು ಜೆಡಿಎಸ್‍ನ ರೀತಿಯಲ್ಲಿ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಬೇಕಾಗುತ್ತದೆ. ಇಂದಿನ ಕಾಂಗ್ರೆಸ್ ಸಹಾ ಕೇವಲ ಅಹಿಂದ ಪಕ್ಷ ಎನ್ನುವುದಾದಲ್ಲಿ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ ಥರದವರ ಪ್ರಾಬಲ್ಯಕ್ಕೂ ಅವಕಾಶ ಇದೆಯಲ್ಲವೇ? ಇವೆಲ್ಲದರಾಚೆಗೂ ಸಿದ್ದರಾಮಯ್ಯನವರಿಗೆ ಇರುವ ಮಹತ್ವಕ್ಕೆ ಹಲವು ಕಾರಣಗಳಿವೆ.
ಅದೇ ಮತಗಳಿಕೆಯ ಪ್ರಮಾಣ (vote share)ದ ಲೆಕ್ಕಾಚಾರ. ಬಿಜೆಪಿಯು ದೇಶಾದ್ಯಂತ ಎಷ್ಟೇ ಪ್ರಾಬಲ್ಯ ಪಡೆದುಕೊಂಡರೂ ಅದರ ಮತಗಳಿಕೆಯ ಪ್ರಮಾಣವು ಶೇ.25ನ್ನು ದಾಟದಿದ್ದುದರಿಂದ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕನಸಿನ ಮಾತಾಗಿತ್ತು. ಮೋದಿ-ಷಾ ಜೋಡಿಯು ಇದಕ್ಕಾಗಿ ಎರಡು ತಂತ್ರಗಳನ್ನು ರೂಪಿಸಿದರು. ಒಂದು ಒಟ್ಟಾರೆ ಮತಗಳಿಕೆಯು ಶೇ.30ನ್ನು ದಾಟುವುದು ಮತ್ತು ಕೆಲವು ದೊಡ್ಡ ರಾಜ್ಯಗಳಲ್ಲಿ ಈ ಮತಗಳಿಕೆಯು ಸಾಂದ್ರವಾಗಿ ದಕ್ಕುವಂತೆ ನೋಡಿಕೊಳ್ಳುವುದು. ಅದರ ಪರಿಣಾಮವೇ ಅವರ ಮಿಷನ್ 272+ಅನ್ನು ದಾಟಿ ಬಹುಮತ ಪಡೆಯಲು ಸಾಧ್ಯವಾಯಿತು. ಹಾಗಿಲ್ಲದೇ ಮತಗಳಿಕೆಯ ಸ್ಥಗಿತತೆಯು ಕೆಲವು ಪಕ್ಷಗಳಿಗೆ ದೊಡ್ಡ ಶಾಪವಾಗಿರುತ್ತದೆ.
ಸಿದ್ದರಾಮಯ್ಯನವರ ಮಹತ್ವ ಇರುವುದೇ ಇಲ್ಲಿ. ಅವರ ನೇತೃತ್ವದಲ್ಲಿ ಸೋತರೆಂದು ಹೇಳಲಾಗುವ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮತಗಳಿಕೆಯ ಪ್ರಮಾಣವು ಕಡಿಮೆಯಾಗಿರಲಿಲ್ಲ; ಬದಲಿಗೆ ಶೇ.1.5ರಷ್ಟು ಹೆಚ್ಚಾಗಿತ್ತು. ಅದಕ್ಕೂ ಹಿಂದೆ ಅತ್ಯಂತ ಹೆಚ್ಚು ಮತಗಳಿಕೆಯನ್ನು ಕಾಂಗ್ರೆಸ್ ಕಂಡಿದ್ದು, 1999ರ ವಿಧಾನಸಭಾ ಚುನಾವಣೆಯಲ್ಲಿ, ಶೇ.40.84. ಈ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆಯು (1994ರ ಶೇ.16.99ರಿಂದ) ಶೇ.20.69ಕ್ಕೇರಿತ್ತು. 2004ರಲ್ಲಿ (ಈ ಸಾರಿಯಂತೆ) 2ನೇ ದೊಡ್ಡ ಪಕ್ಷದ ಸ್ಥಾನಕ್ಕಿಳಿದ ಕಾಂಗ್ರೆಸ್‍ನ ಮತ ಪ್ರಮಾಣ ಶೇ.35.27ಕ್ಕಿಳಿದರೆ, ಬಿಜೆಪಿಯದ್ದು ಶೇ.28.33ಕ್ಕೇರಿತು. 2008ರಲ್ಲಿ ಕಾಂಗ್ರೆಸ್‍ನ ಸೀಟುಗಳ ಸಂಖ್ಯೆ (2004ರ 65ರಿಂದ) 80ಕ್ಕೇರಿದರೂ, ಮತಗಳಿಕೆಯ ಪ್ರಮಾಣ ಶೇ.34.74ಕ್ಕಿಳಿಯಿತು. ಅದೇ ವರ್ಷ ಬಿಜೆಪಿಯ ಮತಗಳಿಕೆಯು ಶೇ.33.86ಕ್ಕೇರಿತು ಮತ್ತು 110 ಸ್ಥಾನಗಳನ್ನು ಗಳಿಸಿತು.
ಬಿಜೆಪಿಗಿಂತ ಭಿನ್ನವಾಗಿ ಕಾಂಗ್ರೆಸ್‍ನ ಮತಗಳಿಕೆಯು ರಾಜ್ಯಾದ್ಯಂತ ಹರಡಿಕೊಂಡಿರುವುದರಿಂದ ಅದು ಶೇ.40ರಷ್ಟು ಮತಗಳನ್ನು ದಾಟದಿದ್ದರೆ, ಸ್ವತಂತ್ರವಾಗಿ ಅಧಿಕಾರ ಹಿಡಿಯಲಾಗದು. 1989ರಲ್ಲಿ 178 ಸೀಟುಗಳ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದದ್ದು ಜನತಾದಳ ಮತ್ತು ಜನತಾಪಕ್ಷಗಳ ನಡುವೆ ಮತವಿಭಜನೆ ಆಗಿದ್ದಕ್ಕಷ್ಟೇ ಅಲ್ಲ, ಸ್ವತಃ ತಾನು ಶೇ.43.76 ಮತಗಳನ್ನು ಪಡೆದದ್ದರಿಂದಲೂ ಆಗಿತ್ತು. ಇದಕ್ಕೆ ಬೇಕಿರುವ ಮತಗಳನ್ನು ಕಾಂಗ್ರೆಸ್ಸು ಎಲ್ಲಿಂದ ಕ್ರೋಢೀಕರಿಸಬೇಕು? ಹೊಸದಾಗಿ ಹೆಚ್ಚಿಸಿಕೊಳ್ಳುವುದು ಎಲ್ಲಿಂದ ಎಂಬ ಪ್ರಶ್ನೆ ಬಹಳ ಮುಖ್ಯವಾಗಿತ್ತು. ಅದನ್ನು ಕಾಂಗ್ರೆಸ್ಸಿಗೆ ತಂದುಕೊಡು ವುದರಲ್ಲಿ ಸಿದ್ದರಾಮಯ್ಯ ನವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. 2008ರಲ್ಲಿನ ಶೇ.34.74ರಿಂದ 2013ರಲ್ಲಿ 36.55ಕ್ಕೇರಿದ್ದು ಮತ್ತು 2018ರಲ್ಲಿ ಶೇ.38ಕ್ಕೇರಿದ್ದಕ್ಕೆ ಕಾರಣ ಸಿದ್ದರಾಮಯ್ಯ ನವರಾಗಿದ್ದರು. ಈ ಚುನಾವಣೆಯಲ್ಲಿ ‘ಮೇಲ್ಜಾತಿ ವಿರೋಧ’ದ ಕಾರಣದಿಂದ ಶೇ.2-3ರಷ್ಟು ಮತಗಳು ಹೋಗಿವೆ ಮತ್ತು ‘ಮೋದಿ ಅಲೆ’ಯ ಕಾರಣದಿಂದ ಶೇ.1ರಷ್ಟು ಮತಗಳು ಹೋಗಿವೆ ಎಂದಿಟ್ಟುಕೊಂಡರೂ ಉಳಿದಂತೆ ಶೇ.4ರಷ್ಟು ಅಧಿಕ ಮತಕ್ರೋಢೀಕರಣವಾಗಿದ್ದು ಸಿದ್ದರಾಮಯ್ಯನವರಿಂದಲೇ ಎಂಬುದು ನಿರ್ವಿವಾದ. ಮುಸ್ಲಿಮರೂ ಸಹಾ ಜೆಡಿಎಸ್‍ಅನ್ನು ಸಂಪೂರ್ಣ ಕೈಬಿಟ್ಟು ಕಾಂಗ್ರೆಸ್‍ಗೆ ಒಲಿಯುವುದರಲ್ಲೂ ಸಿದ್ದು ಪಾತ್ರ ನಿರ್ಣಾಯಕವಾಗಿತ್ತು.
ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. 5 ವರ್ಷಗಳ ದುರಾಡಳಿತ, ಕಿತ್ತಾಟದ ಆಚೆಗೂ 2013ರಲ್ಲಿ ಬಿಜೆಪಿ ಪರಿವಾರ (ಬಿಜೆಪಿ+ಕೆಜೆಪಿ +ಬಿಎಸ್‍ಆರ್) ಪಡೆದುಕೊಂಡಿದ್ದು ಶೇ.33.5 ಮತ್ತು ಅದು 2018ರಲ್ಲಿ ಶೇ.36.2ಕ್ಕೇರಿತು. 1989ರಲ್ಲಿ ಬಿಜೆಪಿಯ ಮತಗಳಿಕೆಯ ಪ್ರಮಾಣ ಕೇವಲ ಶೇ.4 ಆಗಿತ್ತು! ಬಿಜೆಪಿಯ ಈ ಬೆಳವಣಿಗೆಗೆ ಹಲವು ಕಾರಣಗಳಿವೆ. ಹಾಗೆಯೇ ಕಾಂಗ್ರೆಸ್‍ನ ಸ್ಥಗಿತತೆಯನ್ನು ಮುರಿಯಲು ಏನು ಮಾಡಬೇಕು ಎಂಬ ಬಗ್ಗೆ ಆ ಪಕ್ಷಕ್ಕೆ ಖಚಿತವಾದ ಲೆಕ್ಕಾಚಾರವಿದೆ. ಅದೇನೆಂದರೆ, ಸಿದ್ದರಾಮಯ್ಯನವರು ಏನನ್ನು ಪ್ರತಿನಿಧಿಸುತ್ತಾರೋ ಆ ಸಾಮಾಜಿಕ ನೆಲೆಯ ಮೇಲೆ ಭದ್ರವಾಗಿ ಕಾಲೂರಿ ನಿಂತು, ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರು ಯಾವ ಸಾಮಾಜಿಕ ನೆಲೆಯನ್ನು ಪ್ರತಿನಿಧಿಸುತ್ತಾರೋ ಆ ಕಡೆಗೆ ವಿಸ್ತರಿಸುವುದು. ಇದರಲ್ಲಿ ಪ್ರಧಾನವಾದದ್ದು, ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದಿರುವ ಸಿದ್ದರಾಮಯ್ಯನವರದ್ದು.
ಚುನಾವಣೆ ಫಲಿತಾಂಶ ಬಂದು, ಅಹಿಂದ ರಾಜಕಾರಣ ಇನ್ನು ಮುಗಿದ ಅಧ್ಯಾಯ ಎಂಬ ಚರ್ಚೆ ಶುರುವಾದಾಗಲೇ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸ್ಪಷ್ಟವಾದ ಮಾತೊಂದನ್ನು ಹೇಳಿದ್ದರು. ಈ ರಾಜ್ಯದ ಅಹಿಂದ ಸಮುದಾಯಗಳು ಇನ್ನು ಮುಂದೆ ಸುಮ್ಮನೇ ಕೂರುವುದಿಲ್ಲ; They will bounce back in 5-6 months. ಅಂದರೆ ಕೇವಲ ಲೆಕ್ಕಾಚಾರಗಳಾಚೆ, ಸಮುದಾಯಗಳು ಪಡೆದುಕೊಂಡಿರುವ ರಾಜಕೀಯ ಎಚ್ಚರದ ಅಂಶವನ್ನು ಯಾರೂ ನಿರ್ಲಕ್ಷಿಸಲಾಗದು ಮತ್ತು ಅದು ಕಾಂಗ್ರೆಸ್ ಪಕ್ಷವು ತನ್ನ ಬಲ ಹೆಚ್ಚಿಸಿಕೊಳ್ಳುವುದಕ್ಕೆ ಪೂರಕವಾಗಿಯೂ ಇದೆ.
ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ಕರ್ನಾಟಕದ ದಲಿತ ಹಾಗೂ ಇತರ ಶೋಷಿತ ಸಮುದಾಯಗಳ ನಾಯಕ ಪರಮೇಶ್ವರ್ ಅಲ್ಲ. ಒಂದು ವೇಳೆ ಆ ರೀತಿ ಪ್ರೊಜೆಕ್ಟ್ ಆಗುವ ಸಾಧ್ಯತೆ ಯಾರಿಗಾದರೂ ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ. ದೀರ್ಘ ಅನುಭವ ಮತ್ತು ದೆಹಲಿ ರಾಜಕಾರಣದ ಸ್ಥಾನದಿಂದ ಅವರ ಇಮೇಜ್ ದಲಿತ ನಾಯಕನಿಗಿಂತಲೂ ಮಿಗಿಲಾಗಿ ಬೆಳೆದಿದೆ. ದಲಿತ ಸಮುದಾಯಕ್ಕೂ ಪ್ರಿಯವಾಗಬಹುದಾದ ವ್ಯಕ್ತಿತ್ವ ಸಿದ್ದರಾಮಯ್ಯನವರದ್ದೇ ಹೊರತು ಪರಮೇಶ್ವರ್‍ದಲ್ಲ. ಹೀಗಾಗಿ ಮುಖ್ಯಮಂತ್ರಿಯ ರೇಸ್‍ನಲ್ಲಿ ಸಿದ್ದರಾಮಯ್ಯನವರನ್ನು ನಿರ್ಲಕ್ಷಿಸಿ ಮುಂದಕ್ಕೆ ಸಾಗುವುದು ಡಿ.ಕೆ.ಶಿವಕುಮಾರ್‍ರಿಗೂ ಸಾಧ್ಯವಿಲ್ಲ; ಪರಮೇಶ್ವರ್‍ರಿಗೂ ಸಾಧ್ಯವಿಲ್ಲ.
ಅದರ ಲೆಕ್ಕಾಚಾರದಂತೆ, ಸಿದ್ದರಾಮಯ್ಯ ನವರು ಕರ್ನಾಟಕದ ಕಾಂಗ್ರೆಸ್‍ನ ಕೇಂದ್ರದಲ್ಲಿ ಪ್ರತಿಷ್ಠಾಪನೆ ಯಾಗಿದ್ದಾರೆ. ಅವರು ಮುಖ್ಯಮಂತ್ರಿ ಯಾದಾಗ ಮೊದಲ ಕ್ಯಾಬಿನೆಟ್‍ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಡಿ.ಕೆ.ಶಿವಕುಮಾರ್ ಇಂದಿನ ಲೆಕ್ಕಾಚಾರಕ್ಕೆ ತಕ್ಕಂತೆ ಮುಂಚೂಣಿ ತಂಡದ ಒಬ್ಬರಾಗಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಮತ್ತು ಗೃಹ ಸಚಿವರಾಗಿ ನಿಯೋಜಿತವಾಗಿರುವ ವೀರಶೈವ ಲಿಂಗಾಯಿತರು ಕಾಂಗ್ರೆಸ್‍ಗೆ ಬೇಕಾದ ಇತರ ವಿಸ್ತರಣೆಗೆ ನೆರವಾಗಬೇಕೆಂಬ ಜವಾಬ್ದಾರಿ ಪಡೆದುಕೊಂಡಿದ್ದಾರೆ. ಅಂದರೆ ಸಿದ್ದು ಕೈ ಮೇಲಾಗಿರುವುದು ನಿಜ. ಆದರೆ ಅದು ಒಂದು ಸಮಗ್ರ ಲೆಕ್ಕಾಚಾರದ ಭಾಗವಾಗಿದೆ. ಶೇ.40ರ ಮತಗಳಿಕೆಯನ್ನು ಪಡೆದು ಸ್ವತಂತ್ರವಾಗಿ ಮತ್ತೆ ಅಧಿಕಾರಕ್ಕೆ ಬರಲು ಅದು ಅನಿವಾರ್ಯವಾಗಿದೆ. ಈ ಲೆಕ್ಕಾಚಾರವು ಒಂದೊಂದು ಸಣ್ಣ ಅಥವಾ ದೊಡ್ಡ ಚುನಾವಣೆಯ ಏರುಪೇರುಗಳಿಂದ ದಿಢೀರ್ ಬದಲಾಗುವುದಿಲ್ಲ. ಆ ರೀತಿ ಬದಲಾವಣೆ ಕಳಪೆ ಚಾನೆಲ್‍ಗಳ ಕಳಪೆ ಪೊಲಿಟಿಕಲ್ ಸ್ಟೋರಿಗಳಲ್ಲಿ ಮಾತ್ರ ಸಾಧ್ಯ.

LEAVE A REPLY

Please enter your comment!
Please enter your name here