?ಕೇರಳ ಅಕ್ಷರಶಃ ಜಲಪ್ರಳಯಕ್ಕೆ ತುತ್ತಾಗಿದೆ. ರಕ್ಕಸ ಗಾತ್ರದ ಬೆಟ್ಟಗುಡ್ಡಗಳೇ ಕುಸಿದು ಕುಳಿತಿವೆ. ಇಪ್ಪತ್ತು ಸಾವಿರಕ್ಕು ಹೆಚ್ಚು ಮನೆಮಠಗಳು ನೀರಿನಲ್ಲಿ ಕೊಚ್ಚಿಹೋಗಿದ್ದರೆ, ಸತ್ತವರ ಸಂಖ್ಯೆ ಇವತ್ತಿಗೂ ನಿಖರವಾಗಿ ತಿಳಿದುಬಂದಿಲ್ಲ. ರಾಜ್ಯದ ತುಂಬ ತೆರೆಯಲಾಗಿರುವ 1790 ನಿರಾಶ್ರಿತ ಶಿಬಿರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಕಿಕ್ಕಿರಿದು ಬದುಕಿಗಾಗಿ ಹಪಹಪಿಸುತ್ತಿದ್ದಾರೆ. ನೋಡುವವರ ದೃಷ್ಟಿ ತಮಗೆಲ್ಲಿ ತಾಕಿಬಿಡುತ್ತೋ ಅಂತ ನಾಚಿ, ನಿಂತಷ್ಟೇ ನಯವಾಗಿ ಹರಿಯುತ್ತಾ ಕೇರಳದ ಸೊಬಗು ಹೆಚ್ಚಿಸಿದ್ದ ನದಿಗಳೇ ಇವತ್ತು ರೊಚ್ಚಿಗೆದ್ದು, ತಮ್ಮ ಮೈತುಂಬಾ ಹೆಣಗಳ ರಾಶಿಗಳನ್ನೊತ್ತು ಓಡುತ್ತಿವೆ! 94 ವರ್ಷಗಳ ತರುವಾಯ ಇಂತದ್ದೊಂದು ರಣಭೀಕರ ಪ್ರವಾಹಕ್ಕೆ ಈಡಾಗಿರುವ ಕೇರಳದ ಈ ದುರಾದೃಷ್ಟಕ್ಕೆ ಯಾರು ಹೊಣೆ? ಕಿಕ್ಕಿರಿದು ಸುರಿದ ಮಹಾಮಳೆಯನ್ನು ಒಂದೇ ಏಟಿಗೆ ದೂಷಿಸಿ `ಪ್ರಕೃತಿ ವಿಕೋಪ’ದ ನೆಪ ಕೊಡಬಹುದಾದರು, ಆ ನೆಪದ ಆಳದಲ್ಲಿ ಹೂತಿರುವ ಮನುಷ್ಯನ ಲಾಲಸೆಗಳೆ ಈ ದುರಂತದ ನಿಜವಾದ ಅಪರಾಧಿಗಳೆಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿಗೆ ಏಳು ವರ್ಷಗಳ ಹಿಂದೆಯೇ ಮಾಧವ್ ಗಾಡ್ಗಿಳ್ ಎಂಬ ಪರಿಸರ ತಜ್ಞರು ಪಶ್ಚಿಮ ಘಟ್ಟಗಳ ಕುರಿತಂತೆ ಆಳ ಅಧ್ಯಯನ ನಡೆಸಿ, ಬೆಚ್ಚಿಬಿದ್ದು ಕೇರಳ ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದರು. ವನಸಿರಿಯ ಒಡಲಿನಲ್ಲಿ ನೀವು ನಡೆಸುತ್ತಿರುವ `ಅಭಿವೃದ್ಧಿ’ಗಳಿಗೆ ಮಿತಿ ಹೇರಿಕೊಳ್ಳದಿದ್ದರೆ ಮುಂದೊಂದು ದಿನ ಬೆಟ್ಟಗುಡ್ಡಗಳ ನಾಡಾದರೂ, ಕೇರಳ ಪ್ರವಾಹದ ನೀರಲ್ಲಿ ಮುಳುಗಿಹೋಗಲಿದೆ ಎನ್ನುವ ಎಚ್ಚರಿಕೆಯ ಸಹಿತ ಒಂದಷ್ಟು ಶಿಫಾರಸ್ಸುಗಳೂ ಅದರಲ್ಲಿದ್ದವು. ಆದರೆ ಕೈತುಂಬಾ ಆದಾಯ ತಂದುಕೊಡುತ್ತಿದ್ದ ರೆಸಾರ್ಟ್ ಪ್ರವಾಸೋದ್ಯಮ, ರಬ್ಬರ್-ಟೀ ಪ್ಲಾಂಟೋದ್ಯಮ, ಕಲ್ಲು ಕ್ವಾರಿಯ ಗಣಿಗಾರಿಕೆ, ನದಿ ಒಡಲಿನ ಮರಳು ಮಾರಾಟದ ಸಂಪದ್ಭರಿತ ಮೂಲಗಳನ್ನು ಕಳೆದುಕೊಳ್ಳಲು ಇಚ್ಚಿಸದ ಕೇರಳ ಸರ್ಕಾರ ಆ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಪರಿಣಾಮವೇ ಇವತ್ತಿನ ಈ ನರಕಸದೃಶ ಜಲಪ್ರಳಯ!
ಅಂದಹಾಗೆ, ಗಾಡ್ಗಿಳ್ ಸಮಿತಿ ಕೇವಲ ಕೇರಳಕ್ಕಷ್ಟೇ ಈ ಎಚ್ಚರಿಕೆ ಕೊಟ್ಟಿರಲಿಲ್ಲ, ಪಶ್ಚಿಮ ಘಟ್ಟಗಳು ಹೆಬ್ಬಾವಿನಂತೆ ಮೈಚೆಲ್ಲಿ ಮಲಗಿರುವ ಕೊಡಗು, ಕರಾವಳಿ, ಮಲೆನಾಡು, ಗೋವಾ ನಾಡುಗಳಿಗೂ ಇದೇ ಬಗೆಯ ಆದರೆ ಅಲ್ಲಿನ ಅಪಾಯಕ್ಕೆ ತಕ್ಕಂತ ಮುನ್ನೆಚ್ಚರಿಕೆಯ ಶಿಫಾರಸ್ಸು ಮಾಡಿತ್ತು. ಕೇರಳದಿಂದ ಪಾಠ ಕಲಿಯದಿದ್ದರೆ, ಇಂದಲ್ಲ ನಾಳೆ ಇಲ್ಲೂ ಅಂತದ್ದೇ ಭಯಂಕರ ದೃಶ್ಯಸರಣಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಕೊಡಗು ಅದರ ತಾಪ ಅನುಭವಿಸುತ್ತಿದೆ.
ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯ
ಕೇರಳ ಇಡೀ ದೇಶದಲ್ಲೆ ಅತ್ಯೆಚ್ಚು ಸುಶಿಕ್ಷಿತ ನೆಲ. ಇಲ್ಲಿನ ಜನ ಇತರರಿಗಿಂತ ಹೆಚ್ಚು ವಿಚಾರವಂತರೆಂದು ಕರೆಸಿಕೊಳ್ಳುವಂತವರು. ಅಷ್ಟೇ ಮುನ್ನೆಚ್ಚರಿಕೆಯ ಮಂದಿ ಅಂತಲೂ ಹೆಸರಾದವರು. ಆದರೂ ಇಂತದ್ದೊಂದು ಅವಘಡ ಕಣ್ಮುಂದಿದ್ದರು ಕಾಣದೆ ಹೋದದ್ದು ದುರಂತವೇ ಸರಿ. ಸಾಮಾನ್ಯವಾಗಿ ಭಾರತ ತಾನು ಪಡೆಯುವ ವಾರ್ಷಿಕ ಮಳೆಯ ಸರಿಸುಮಾರು ಶೇ.80ರಷ್ಟನ್ನು ವಾಯುವ್ಯ ಮಾನ್ಸೂನ್ ಮಾರುತಗಳಿಂದ ಪಡೆಯುತ್ತೆ. ಮಧ್ಯ-ಏಷ್ಯಾ ಮತ್ತು ಥಾರ್ ಮರುಭೂಮಿಯಂತಹ ಕಡಿಮೆ ವಾಯುಭಾರವಿರುವ ಪ್ರದೇಶಗಳು ಹಿಂದೂಮಹಾಸಾಗರದ ಅತಿ ವಾಯುಭಾರವನ್ನು ತಮ್ಮತ್ತ ಸೆಳೆದಾಗ ಈ ವಾಯುವ್ಯ ಮಾರುತಗಳು ಸೃಷ್ಟಿಯಾಗಿ ಭಾರತವನ್ನು ತೋಯಿಸುತ್ತಾ ಸಾಗುತ್ತವೆ. ಅರಬ್ಬೀ ಸಮುದ್ರಿಂದ ಏಳುವ ಮಾರುತಗಳು ಜೂನ್‍ನಲ್ಲಿ ಕೇರಳದ ಮೇಲೆ ಮಳೆಗರೆಯುತ್ತಾ ಜುಲೈ ಮೊದಲ ವಾರದ ಹೊತ್ತಿಗೆ ದಿಲ್ಲಿಯತ್ತ ಪಯಣ ಬೆಳೆಸಿದರೆ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಮಾರುತಗಳು ಅದೇ ಅವಧಿಯಲ್ಲಿ ಕೋರಮಂಡಲ್ ತೀರದಿಂದ ಒಡಿಶಾ ಮತ್ತು ಈಶಾನ್ಯ ರಾಜ್ಯಗಳತ್ತ ಚಲಿಸುತ್ತವೆ. ಹಾಗಾಗಿ ಜೂನ್ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಮಾನ್ಸೂನ್ ಮಳೆಗಳು ಇಡೀ ಭಾರತವನ್ನು ಒದ್ದೆ ಮಾಡುತ್ತವೆ. ತಾವು ಹುಟ್ಟುವ ತವರುಮನೆಗಳಾದ ದಕ್ಷಿಣ ರಾಜ್ಯಗಳ ಮೇಲೆ ಈ ಮಳೆಗಳಿಗೆ ಮಮಕಾರ ಹೆಚ್ಚು ಅಂತ ಕಾಣಿಸುತ್ತೆ. ಹಾಗಾಗಿ ಇಲ್ಲಿ ತುಸು ಹೆಚ್ಚೇ ಮಳೆ ಸುರಿಸಿ ಉತ್ತರದತ್ತ ಕ್ಷೀಣಗೊಳ್ಳುತ್ತಾ ಸಾಗುತ್ತವೆ. ಇದು ಭಾತರದಲ್ಲಿ ಸಾಗುವ ಮಾನ್ಸೂನ್ ಮಳೆಗಳ ಪಥ.
ಈ ಸಲವೂ ಜೂನ್‍ನಲ್ಲಿ ಶುರುವಾದ ವಾಯುವ್ಯ ಮಾನ್ಸೂನ್ ಮಳೆಗಳು ಆರಂಭದಿಂದಲೂ ವಾಡಿಕೆಗಿಂತ ಹೆಚ್ಚಾಗೇ ಧಾರೆಗರೆಯುತ್ತಿದ್ದವು. ಮಳೆಯ ಏಟಿಗೆ ಮೇ 29 ರಿಂದ ಜುಲೈ 19ರ ನಡುವಿನ ಅವಧಿಯಲ್ಲಿ ಸುಮಾರು 130 ಜನ ಅಸುನೀಗಿದ್ದಲ್ಲದೆ 53,000 ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ನಿರ್ವಸತಿಗರಿಗೆಂದೇ ರಾಜ್ಯದಲ್ಲಿ 439 ನಿರಾಶ್ರಿತ ಶಿಬಿರಗಳನ್ನು ತೆರೆಯಬೇಕಾಗಿ ಬಂದಿತು. ಆ ಮುನ್ಸೂಚನೆಯನ್ನು ಕೇರಳ ನಿರ್ಲಕ್ಷಿಸಿತು.
ರಾಷ್ಟ್ರೀಯ ಹವಾಮಾನ ಇಲಾಖೆಯ ಪ್ರಕಾರ ಪ್ರತಿವರ್ಷ ಈ ಅವಧಿಯಲ್ಲಿ ಸರಾಸರಿ 1606.7 ಮಿಮೀ ಮಳೆಯಾಗುತ್ತದೆ. ಆದರೆ ಈ ವರ್ಷ ಈಗಾಗಲೇ ಸುರಿದಿರುವ ಮಳೆ ಪ್ರಮಾಣ 2091.1 ಮಿಮೀ! ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂಬ ಸೂಚನೆ ಮೊದಲೇ ಸಿಕ್ಕಾಗಿತ್ತು. ಆಗಸ್ಟ್ 16ರ ಹೊತ್ತಿಗೆ ಕೇರಳದಲ್ಲಿ ಕಳೆದ ವರ್ಷಗಳಿಗಿಂತ 10 ಪಟ್ಟು ಹೆಚ್ಚು ಮಳೆ ಸುರಿದಿದೆ. ಹದಿನಾಲ್ಕು ಜಿಲ್ಲೆಗಳ ಪೈಕಿ ಇಡುಕ್ಕಿ ಡ್ಯಾಂ ಇರುವ ಇಡುಕ್ಕಿ ಜಿಲ್ಲೆಯಲ್ಲೇ ಹೆಚ್ಚು ಮಳೆಯಾಗಿದ್ದರೆ, ಎರ್ನಾಕುಲಂ, ಪಾಲಕ್ಕಾಡು, ಮಲಪ್ಪುರಂ ಜಿಲ್ಲೆಗಳೂ ಮಳೆಯಿಂದ ವಿಪರೀತ ಹಾನಿಗೆ ಒಳಗಾಗಿವೆ. ಒಟ್ಟು ಹತ್ತು ಜಿಲ್ಲೆಗಳಲ್ಲಿ ಸರ್ಕಾರ ಅದಾಗಲೇ ರೆಡ್ ಅಲರ್ಟ್ ಘೋಷಿಸಿದೆ. ಅಂದರೆ ಈ ಮಳೆ ರಾತ್ರೋರಾತ್ರಿ ತೊಪ್ಪನೆ ಸುರಿದಿದ್ದಲ್ಲ. ಮಾನ್ಸೂನ್ ಆರಂಭವಾದ ಜೂನ್‍ನಿಂದಲೂ ಯಥೇಚ್ಛ ಮಳೆ ಹೊಯ್ಯುತ್ತಲೇ ಇತ್ತು. ದಕ್ಷಿಣ ಭಾರತದಲ್ಲಿ 80 ದಿನಗಳನ್ನು ಮಾನ್ಸೂನ್ ಮಳೆಗಳ ಅವಧಿಯೆಂದು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ 67 ದಿನಗಳ ಕಾಲ ಸತತವಾಗಿ ಮಳೆ ಕೇರಳದ ಮೇಲೆ ಬೊಬ್ಬಿರಿದಿದೆ. ನೆಲಕ್ಕೆ ಬಿದ್ದ ನೀರು ಹಿಂಗುವುದಕ್ಕೂ ಅವಕಾಶವಿಲ್ಲದೆ ಸುರಿದು ಮೆತ್ತಗಾಗಿಸಿತ್ತು.

ಮೀರಿ ತುಂಬುತ್ತಾ ಬಂದವು. ಇವೆಲ್ಲವೂ ಎಚ್ಚರಿಕೆಯ ಕರೆಗಂಟೆಗಳಾಗಬೇಕಿತ್ತು. ಡ್ಯಾಂ ಅಧಿಕಾರಿಗಳು ಕೊಂಚ ಮುನ್ನೆಚ್ಚರಿಕೆ ವಹಿಸಿದ್ದರೂ ಈ ಪರಿ ಜಲಪ್ರವಾಹ ಘಟಿಸುತ್ತಿರಲಿಲ್ಲವೇನೊ. ಹಂತಹಂತವಾಗಿ, ಆಣೆಕಟ್ಟೆಗಳ ಗೇಟು ತೆರೆದು ನೀರು ಹರಿಯಬಿಡುತ್ತಾ ಬಂದಿದ್ದರೆ, ನದಿಗಳು ಈ ಪರಿ ರುದ್ರಭೀಕರವಾಗಿ ತುಂಬಿ ಹರಿಯುತ್ತಿರಲಿಲ್ಲ. ಆದರೆ ಆಣೆಕಟ್ಟು ನಿರ್ವಹಣೆ ಅಧಿಕಾರಿಗಳು ಕೊನೇ ಕ್ಷಣದವರೆಗೆ ಅಂತಹ ಎಚ್ಚರಿಕೆಗೆ ಕೈಹಾಕದೆ, ಸಾಧಾರಣ ಮಳೆ ವಾಡಿಕೆ ದಿನದಲ್ಲಿ ಎಷ್ಟು ನೀರು ಹರಿಬಿಡಬೇಕೊ ಅಷ್ಟು ಮಾತ್ರವೇ ಹರಿಬಿಡುತ್ತಾ ಬಂದರು. ಯಾವಾಗ ಮಳೆ ವಿಪರೀತಗೊಂಡು ಡ್ಯಾಂಗಳು ಅಪಾಯದ ಮಟ್ಟವನ್ನೂ ಮೀರಿ ನಿಂತವೋ ಆಗ, ಅಂದರೆ ಆಗಸ್ಟ್ 9ರ ನಂತರ ಹೆಚ್ಚೂಕಮ್ಮಿ ಒಂದು ವಾರದ ಅವಧಿಯಲ್ಲಿ ರಾಜ್ಯದ 27 ಡ್ಯಾಂಗಳ ಗೇಟುಗಳನ್ನು ತೆರೆಯಲಾಯ್ತು!
ಮೊದಲೇ ಮಹಾಮಳೆಯಿಂದಾಗಿ ತುಂಬಿತುಳುಕುತ್ತಿದ್ದ ನದಿಗಳಿಗೆ ಡ್ಯಾಂ ನೀರು ನುಗ್ಗಿದರೆ ಏನಾಗಬೇಡ. ಎಲ್ಲೆಲ್ಲಿ ಹರಿಯಲು ತಾಣವಿತ್ತೊ ಅಲ್ಲಿಗೆಲ್ಲ ನೀರು ನುಗ್ಗಿತು. ಕೇರಳ ಅಕ್ಷರಶಃ ಜಲಸಮಾಧಿಯ ಹಂತಕ್ಕೆ ಬಂದು ತಲುಪಬೇಕಾಯ್ತು. ವಾಸ್ತವದಲ್ಲಿ ಪ್ರತಿಯೊಂದು ಡ್ಯಾಂಗೂ `ರೂಲ್ ಕರ್ವ್’ ಎಂಬ ನಿಯಮವಿರುತ್ತದೆ. ಆಯಾ ಡ್ಯಾಂನ ಗಾತ್ರಕ್ಕೆ ಅನುಗುಣವಾಗಿ, ನೀರು ಸಂಗ್ರಹಣೆ ಇಂತಿಷ್ಟು ಮಟ್ಟ ತಲುಪಿದಾಗ ಇಷ್ಟು ಪ್ರಮಾಣದ ನೀರನ್ನು ಹೊರಬಿಡಬೇಕು ಎಂದು ಈ ನಿಯಮ ಸ್ಪಷ್ಟವಾಗಿ ಹೇಳುತ್ತದೆ.
ಆದರೆ, ಭವಿಷ್ಯದ ನೀರಿನ ಬೇಡಿಕೆಯ ದೃಷ್ಟಿಯಿಂದ ಕೇರಳದ ಡ್ಯಾಂಗಳಲ್ಲಿ ಮಾನ್ಸೂನ್ ಮಳೆಯ ನೀರನ್ನು ಹರಿಬಿಡದೆ ಸಂಗ್ರಹಿಸುವ ಪರಿಪಾಠವಿದೆ, ರೂಲ್ ಕರ್ವ್‍ನ್ನು ನಿರ್ಲಕ್ಷಿಸಿ! ಕೇರಳದಲ್ಲಿರುವ ಒಟ್ಟು 42 ಡ್ಯಾಂಗಳ ಪೈಕಿ 35 ಡ್ಯಾಂಗಳನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಈ ಸಲ ತೆರೆದುಬಿಡಲಾಗಿದೆ!! ಅಂದರೆ ಇಷ್ಟುದಿನ ಈ ಡ್ಯಾಂಗಳಲ್ಲಿ ನೀರನ್ನು ಮಾನ್ಸೂನ್ ಮುಗಿದರು ರೂಲ್ ಕರ್ವ್‍ಗೆ ವಿರುದ್ಧವಾಗಿ ಸಂಗ್ರಹಿಸಲಾಗುತ್ತಿತ್ತು. ಒಟ್ಟು ಡ್ಯಾಂಗಳಲ್ಲಿ 30 ಡ್ಯಾಂಗಳನ್ನು ಹಂತಹಂತವಾಗಿ ತೆರೆಯುತ್ತಾ ಬಂದಿದ್ದರೂ ಇನ್ನುಳಿದ ಬಹುಪಾಲು ಡ್ಯಾಂಗಳನ್ನು ಕೊನೇಕ್ಷಣದವರೆಗು ತೆರೆಯುವ ಗೋಜಿಗೇ ಅಧಿಕಾರಿಗಳು ಹೋಗಿರಲಿಲ್ಲ!
ಏಷ್ಯಾದ ಅತಿದೊಡ್ಡ ಕಮಾನು ಆಕಾರದ ಡ್ಯಾಂ ಎಂದೇ ಖ್ಯಾತಿ ಪಡೆದ ಇಡುಕ್ಕಿ ಆಣೆಕಟ್ಟೊಂದೆ ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಸೃಷ್ಟಿಸಿದ ಪ್ರವಾಹ ಸನ್ನಿವೇಶ ಮಳೆಯ ಅನಾಹುತವನ್ನು ಮತ್ತಷ್ಟು ಹೆಚ್ಚಿಸಿದೆ. 2403 ಅಡಿ ಸಾಮಥ್ರ್ಯದ ಈ ಆಣೆಕಟ್ಟನ್ನು 26 ವರ್ಷಗಳಿಂದ ತೆರೆದೇ ಇರಲಿಲ್ಲ. 1992ರಲ್ಲಿ ಒಮ್ಮೆ ಒಂದೆರಡು ಗೇಟುಗಳನ್ನು ತೆರೆದಿದ್ದು ಬಿಟ್ಟರೆ ಆಮೇಲೆ ಡ್ಯಾಂ ತೆರೆಯುವಂತಹ ಪರಿಸ್ಥಿತಿಯೇ ಎದುರಾಗಿರಲಿಲ್ಲ. ಮತ್ತೊಂದು ವಿಷಯವೆಂದರೆ, ಆ ಡ್ಯಾಂಗೆ ಐದು ಗೇಟುಗಳಿವೆ. ಒಟ್ಟಾರೆ ಆ ಡ್ಯಾಂನ ಇತಿಹಾಸದಲ್ಲಿ ಐದೂ ಗೇಟುಗಳನ್ನು ಒಮ್ಮೆಯೇ ತೆರೆದ ಚರಿತ್ರೆಯೇ ಇಲ್ಲ. ಆದರೆ ಈ ಸಲ ತೆರೆಯಲಾಗಿದೆ. ಅದೂ ನೀರಿನ ಮಟ್ಟ 2400 ಅಡಿ ತಲುಪಿದ ನಂತರ. ಪೂರ್ತಿ ತುಂಬಲು ಇನ್ನೇನು 3 ಅಡಿಯಷ್ಟೆ ಬಾಕಿಯಿರುವಾಗ ಐದೂ ಗೇಟುಗಳನ್ನು ಒಮ್ಮೆಲೇ ತೆರೆದು ನೀರುಬಿಟ್ಟರೆ ನದಿಪಾತ್ರದ ಕಥೆಯೇನಾಗಬೇಡ. ಅಜಮಾಸು ಒಂದು ಸೆಕೆಂಡಿಗೆ 7 ಲಕ್ಷ ಲೀಟರ್‍ನಂತೆ ಡ್ಯಾಂ ನೀರು ಪೆರಿಯಾರ್ ನದಿಯ ಒಡಲು ಸೇರಿತ್ತು. ಮಳೆಯಿಂದ ದಂಡೆಯವರೆಗೆ ತುಂಬಿ ಹರಿಯುತ್ತಿದ್ದ ಪೆರಿಯಾರ್ ನದಿ ಇಡುಕ್ಕಿ, ಎರ್ನಾಕುಲಂ ಜಿಲ್ಲೆಯ ಸಮಸ್ತ ನೆಲವನ್ನೇ ಪ್ರವಾಹದಲ್ಲಿ ಮುಳುಗಿಸಿಬಿಟ್ಟಿದೆ. ಹೆಚ್ಚೂಕಮ್ಮಿ ಉಳಿದ ಡ್ಯಾಂಗಳು ಸೃಷ್ಟಿಸಿದ ಅವಾಂತರವೂ ಹೀಗೇ ಇದೆ.
`ಅಭಿವೃದ್ಧಿ’ಯೇ ಮುಳುವಾಯ್ತು
ತನ್ನ ನೈಸರ್ಗಿಕ ಸಿರಿ, ರಮಣೀಯ ಹಸಿರು ಗಿರಿಶೃಂಗಗಳಿಂದಾಗಿ ಕೇರಳ ರಾಜ್ಯವು ಪ್ರವಾಸೋದ್ಯಮ ಮತ್ತು ಪ್ಲಾಂಟೇಶನ್‍ಗೆ ಹೇಳಿ ಮಾಡಿಸಿದ ಜಾಗ. ಪಶ್ಚಿಮಘಟ್ಟಗಳ ಚರಣಗಳ ಮೇಲೆ ನಿರಂತರ ದಾಳಿ ನಡೆಯಲು ಇದು ಮುಖ್ಯ ಕಾರಣವಾಯ್ತು. ರಬ್ಬರ್ ಮತ್ತು ಟೀ ಎಸ್ಟೇಟ್‍ಗಳ ವಿಸ್ತರಣೆಯ ನೆಪದಲ್ಲಿ ಕಾಡುಗಳು ನಾಶವಾಗುತ್ತಾ ಬಂದರೆ, ಹಿಲ್‍ವ್ಯೂ ಕಲ್ಪನೆಯ ರೆಸಾರ್ಟ್ ಭರಾಟೆಯಲ್ಲಿ ಬೆಟ್ಟಗಳನ್ನು ಅಪಾಯಕಾರಿಯಾಗಿ ಕೊರೆದು ನಿಶ್ಯಕ್ತಗೊಳಿಸಲಾಯ್ತು. ಸಾಲದ್ದಕ್ಕೆ ಗ್ರಾನೈಟ್ ಕಲ್ಲುಗಳ ಲಾಭದ ಮೇಲೆ ಕಣ್ಣಿಟ್ಟ ಜನರಿಗೆ ಬೇಕಾಬಿಟ್ಟಿ ಪರವಾನಗಿ ನೀಡುತ್ತಾ ಹೋದದ್ದೂ ಎಲ್ಲೆಂದರಲ್ಲಿ ಕ್ವಾರಿಗಳು ತಲೆಯೆತ್ತಲು ಕಾರಣವಾಯ್ತು. ಪ್ರಕೃತಿಯ ಸೆರಗಿನಲ್ಲೆ ತನ್ನ ಆದಾಯವನ್ನು ಕಂಡುಕೊಳ್ಳುತ್ತಾ ಸಾಗಿದ ಮನುಷ್ಯ ಸ್ವಾರ್ಥಕ್ಕಾಗಿ ನೀರಿನ ಹರಿವು ಜಾಡನ್ನೇ ಬದಲಿಸುತ್ತಾ, ಇನ್ನಿಲ್ಲವಾಗಿಸುತ್ತಾ ಬಂದ. ಇದು ಕೇರಳಕ್ಕಷ್ಟೇ ಸೀಮಿತವಾದುದಲ್ಲ. ಪಶ್ಚಿಮ ಘಟ್ಟಗಳು ಹಬ್ಬಿರುವ ಎಲ್ಲಾ ಕಡೆ ಇದೇ ಬಗೆಯ ನೈಸರ್ಗಿಕ ವಿದ್ರೋಹ ನಡೆಸುತ್ತಿದ್ದಾನೆ ಮನುಷ್ಯ.
ಇದರ ಬಗ್ಗೆ ಅಧ್ಯಯನ ಮಾಡಲೆಂದೇ ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಬೆಂಗಳೂರಿನ ಐಐಎಸ್‍ಸಿಯಲ್ಲಿ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರದ ಸ್ಥಾಪಕರಾದ ಪರಿಸರವಿಜ್ಞಾನಿ ಮಾಧವ್ ಗಾಡ್ಗಿಳ್‍ರ ನೇತೃತ್ವದಲ್ಲಿ `ಪಶ್ಚಿಮ ಘಟ್ಟಗಳ ಜೀವಪರಿಸರ ತಜ್ಞರ ಸಮಿತಿ’ ರಚಿಸಿ ವರದಿ ನೀಡುವಂತೆ ಕೇಳಿತ್ತು. 1,40,000 ಕಿಲೋಮೀಟರ್ ಉದ್ದಗಲಕ್ಕೆ ಹಬ್ಬಿರುವ ಪಶ್ಚಿಮ ಘಟ್ಟವನ್ನು ಅಧ್ಯಯನ ನಡೆಸಿದ ಸಮಿತಿ ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಪರಿಹಾರ ಕ್ರಮಗಳ ತೀವ್ರತೆಯನ್ನು ಆಧರಿಸಿ ಈ ಪ್ರದೇಶವನ್ನು ಮೂರು ವಲಯಗಳನ್ನಾಗಿ ವಿಂಗಡಣೆ ಮಾಡಿತ್ತು. ಇವತ್ತು ಜಲಪ್ರವಾಹದಿಂದ ತಬ್ಬಿಬ್ಬಾಗಿರುವ ಕೇರಳದ ಬಹುತೇಕ ಪ್ರದೇಶಗಳು ಗಾಡ್ಗಿಳ್ ವರದಿಯ `ಅತಿಸೂಕ್ಷ್ಮ-ಜೀವಪರಿಸರ ವಲಯ’ಗಳಲ್ಲಿ ಗುರುತಿಸಿಕೊಂಡಿದ್ದಂತವು. ಅಲ್ಲಿ ತುರ್ತಾಗಿ ಕೈಗೊಳ್ಳಲೇಬೇಕಿದ್ದ ಹಲವು ಶಿಫಾರಸ್ಸುಗಳನ್ನು ನೀಡಿತ್ತು. ಕಲ್ಲು ಕ್ವಾರಿಯೂ ಸೇರಿದಂತೆ ಎಲ್ಲಾ `ಅಭಿವೃದ್ಧಿ’ ಕಾರ್ಯಗಳನ್ನು ಕೂಡಲೇ ಸ್ಥಗಿತ ಮಾಡುವಂತೆ ಅದರಲ್ಲಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಕೇರಳ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಸಂಭವಿಸಿರುವ ಪ್ರವಾಹ ಮತ್ತು ಗುಡ್ಡ ಕುಸಿತಗಳನ್ನು ಕಂಡ ಮಾಧವ್ ಗಾಡ್ಗಿಳ್‍ರವರು `ಇದು ಪ್ರಕೃತಿ ವಿಕೋಪವಲ್ಲ, ಮಾನವನಿರ್ಮಿತ ವಿಕೋಪ’ ಎಂದು ಹೇಳಿರುವುದರಲ್ಲಿ ಖಂಡಿತ ಅರ್ಥವಿದೆ.
ಮುಳುಗಿದ ಮನೆಯಲ್ಲೂ ನೀಚ ರಾಜಕಾರಣ
ಪ್ರಕೃತಿ ಮೇಲಿನ ಈ ದಾಳೆಯೇನಿದೆಯಲ್ಲ, ಅದು ಕೇರಳಕ್ಕಷ್ಟೇ ಸೀಮಿತವಾದುದಲ್ಲ. ಸಮಸ್ತ ಜಗತ್ತೇ ಇವತ್ತು ನಿಸರ್ಗದ ಮೇಲೆ ಮುರಕೊಂಡು ಬಿದ್ದು ಮುಕ್ಕುತ್ತಿದೆ. ಅದಕ್ಕೆ ಪ್ರತಿಫಲವೆಂಬಂತೆ ಪ್ರಕೃತಿಯೂ ತನ್ನ ಸಿಟ್ಟುಸೆಡವು ತೋರಿ ಮನುಷ್ಯನಿಗೆ ಪಾಠ ಕಲಿಸುವ ಪ್ರಯತ್ನವನ್ನು ಆಗಿಂದಾಗ್ಗೆ ಮಾಡುತ್ತಲೇ ಬಂದಿದೆ. ಮಾನವ ಈ ವಿಚಾರದಲ್ಲಿ ಪಾಠ ಕಲಿಯದೆ ಹೋದರು, ಇಂತಹ ವಿಪತ್ತಿಗೆ ಈಡಾದಾಗ ಎಲ್ಲಾ ವಿಷವನ್ನೂ ಹೊರಗಿಟ್ಟು ನೊಂದವರ ನೆರವಿಗೆ ಧಾವಿಸುವ ಚೂರುಪಾರು ಮನುಷ್ಯತ್ವ ಉಳಿಸಿಕೊಂಡಿದ್ದಾನೆ, ಕೆಲವೊಮ್ಮೆ, ಕೆಲವೊಬ್ಬರಿಗೆ ಅದು ತೋರ್ಕೆಯಂತಾಗಿದ್ದರು ಸಹಾ!
ಆದರೆ ಕೇರಳ ಚಾರಿತ್ರಿಕ ಅವಘಡಕ್ಕೆ ತುತ್ತಾಗಿ ಕೋಟ್ಯಂತರ ಮಲೆಯಾಳಿ ಜನ ಆಸ್ತಿಪಾಸ್ತಿ, ಮನೆ ಮಠ ಕಳೆದುಕೊಂಡು ನಿಲ್ಲಲು ನೆಲವಿಲ್ಲದೆ ನೀರಿನಲ್ಲಿ ಪರಿತಪಿಸುತ್ತಿದ್ದಾಗ ನಡೆದ ರಾಜಕಾರಣದ ಹುನ್ನಾರವಿದೆಯಲ್ಲ ಅದು ನಿಜಕ್ಕೂ ದುರಂತದ್ದು. ಕೇರಳ ಈಡಾಗಿರೋದು ಅಂತಿಂತ ಅವಘಡಕ್ಕಲ್ಲ. ಕೇರಳದ ಮುಖ್ಯಮಂತ್ರಿ ಪಿಣರಾಜಿ ವಿಜಯನ್ ಇತ್ತೀಚೆಗೆ ಘೋಷಿಸಿದಂತೆ ರಾಜ್ಯದ ಸುಮಾರು 20,000 ಕೋಟಿಗೂ ಹೆಚ್ಚು ಆಸ್ತಿ ಹಾನಿಯಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯೇ ಅಜಮಾಸು 10,000 ಕಿಲೋಮೀಟರ್ ಧ್ವಂಸಗೊಂಡಿದೆ. ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳ ಲೆಕ್ಕವಿಟ್ಟರೆ 20 ಸಾವಿರ ಕಿಮೀಗೂ ಹೆಚ್ಚು ರಸ್ತೆ ಹಾನಿಯಾಗಿದೆ. 300ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆರು ಲಕ್ಷಕ್ಕು ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಶತಮಾನದಲ್ಲೇ ಭೀಕರವಾದ ಜಲಪ್ರಳಯವನ್ನು ಕೇರಳದ ಜನತೆ ಎದುರಿಸುತ್ತಿದ್ದರೆ, ಇತ್ತ ರಾಜಕಾರಣಿಗಳು ಮತ್ತು ಅವರ ಹಿಂಬಾಲಕ ಪಡೆಗಳು ತಮ್ಮ ಹೀನಾತಿಹೀನ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದಾರೆ. ಇಡೀ ರಾಜ್ಯವೇ ನೀರಿನಲ್ಲಿ ಮುಳುಗಿ, ಲಕ್ಷಾಂತರ ಜನರು ಪ್ರವಾಹದ ಮಧ್ಯೆ ಸಿಕ್ಕಿಬಿದ್ದು ಸಹಾಯಕ್ಕಾಗಿ ಆರ್ತನಾದ ಮಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಹೇಸಿಗೆ ಹುಟ್ಟಿಸುವಂಥದ್ದು. ತಾತ್ಕಾಲಿಕ ಪರಿಹಾರ ಕಾರ್ಯಗಳಿಗಾಗಿ ತಕ್ಷಣಕ್ಕೆ 2,600 ಕೋಟಿಗಳ ಪರಿಹಾರ ಒದಗಿಸಬೇಕೆಂದು ಕೇರಳ ಕೇಳಿದ್ದರೆ, ಪ್ರಧಾನಿ ಮೋದಿ ಮೊದಲಿಗೆ ಬಿಡುಗಡೆ ಮಾಡಿದ್ದು ಕೇವಲ 100 ಕೋಟಿ. ಕಾರಣ ಏನಿರಬಹುದು? ಬಹುಶಃ ಅಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರ ಇದೆ ಎಂಬುದಾಗಿರಬಹುದು. ಆದರೆ ದಶದಿಕ್ಕುಗಳಿಂದಲೂ ಛೀಮಾರಿ ಕೇಳಿಬಂದ ಮೇಲೆಯೇ 500 ಕೋಟಿ ಪರಿಹಾರ ಘೋಷಿಸಿದ್ದು.
ವಿಪತ್ತು ರಕ್ಷಣಾ ಪಡೆಗಳನ್ನು ಕಳಿಸಿಕೊಡುವ ವಿಷಯದಲ್ಲಿ ತೋರಿಸಿದ ವಿಳಂಬ ಧೋರಣೆಯಂತೂ ಅಕ್ಷಮ್ಯ ಅಪರಾಧ. ಬಣ್ಣ ಬಯಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ವೈಮಾನಿಕ ಸಮೀಕ್ಷೆಯ ನಾಟಕವೂ ನಡೆಯಿತು. ಒಂದು ರಾಜ್ಯ ತನ್ನ ಸಾಮಥ್ರ್ಯದಲ್ಲೇ ವಿಪತ್ತಿನಿಂದ ಹೊರಬರಲು ಸಾಧ್ಯವಾಗದಿರುವ ಸಂದರ್ಭದಲ್ಲಿ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕೆಂಬ ಆಗ್ರಹ ಕೇಳಿಬರುತ್ತದೆ. ಈ ಜನಪ್ರಿಯ ಬೇಡಿಕೆಗೂ ಯಾವುದೇ ಸ್ಪಂದನೆ ಇಲ್ಲ.
ಎಲ್ಲಕ್ಕಿಂತ ದಾರುಣವಾದ ವಿಷಯವೇನೆಂದರೆ ಮಾನವೀಯ ನೆಲೆಯಿಂದ ಹರಿದುಬಂದ ವಿದೇಶಿ ಸಹಾಯ ಕೇರಳದ ಜನರಿಗೆ ತಲುಪದಂತೆ ಕುಂಟುನೆಪಗಳನ್ನು ಮುಂದೊಡ್ಡಿ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿರುವುದು. ಮುಸ್ಲಿಂ ರಾಷ್ಟ್ರವಾದ ಯುಎಇ, ಕೇರಳದ ಪರಿಸ್ಥಿತಿಗೆ ಸ್ಪಂದಿಸಿ 700 ಕೋಟಿ ನೆರವು ಘೋಷಿಸಿತು. ಆದರೆ ಕೇಂದ್ರ ಸ್ವೀಕರಿಸಲು ನಿರಾಕರಿಸಿದೆ. ಕಾರಣ ಅದ್ಯಾವುದೋ ಹಳೆಯ ನೀತಿಯಂತೆ. ಮೋದಿಯ ನಿಲುವನ್ನು ಪ್ರಶ್ನಿಸಿರುವ ಕೇರಳದ ಹಣಕಾಸು ಮಂತ್ರಿ ಥಾಮಸ್ ಐಸಾಕ್ “2016ರ ಮೇನಲ್ಲಿ ಅಂಗೀಕಾರವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯ ಪ್ರಕಾರ ಯಾವುದೇ ವಿದೇಶದಿಂದ ಸ್ವಯಂಪ್ರೇರಿತವಾಗಿ ಬರುವ ದೇಣಿಗೆಗಳನ್ನು ಸ್ವೀಕರಿಸಬಹುದು. ಹೀಗಿದ್ದರೂ ಕೇಂದ್ರ ಸರ್ಕಾರ ಯುಎಇ ಬಗ್ಗೆ ನಕಾರಾತ್ಮಕವಾಗಿ ವರ್ತಿಸುವುದಾದರೆ ಅಷ್ಟು ಹಣವನ್ನು ಕೇಂದ್ರವೇ ಭರಿಸಲಿ” ಎಂಬ ಬೇಡಿಕೆ ಇಟ್ಟಿದ್ದಾರೆ.
ಇದು ನಿಜಕ್ಕೂ ನ್ಯಾಯಸಮ್ಮತವಾದ ಬೇಡಿಕೆ. ತಾವೂ ಕೊಡೋದಿಲ್ಲ; ಕೊಡೋರನ್ನು ಬಿಡೋದಿಲ್ಲ ಅನ್ನೊ ಹಾಗಾಯ್ತು ಕೇಂದ್ರ ಸರ್ಕಾರದ ಕಥೆ.
ಪ್ರಕೃತಿ ನಮ್ಮ ಮೇಲೆ ಈ ಪರಿ ಮುನಿಸಿಕೊಳ್ಳುವಂತೆ ಆದದ್ದಾಗಲಿ; ಎಲ್ಲವನ್ನೂ ಮರೆತು ಮನುಷ್ಯತ್ವದ ನೆರವುಗೈ ಚಾಚಬೇಕಾದ ಹೊತ್ತಿನಲ್ಲೂ ವಿಷ ರಾಜಕಾರಣ ಮಾಡುವಂತ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿದ್ದಾಗಲಿ, ಎರಡೂ ನಮ್ಮದೇ ಆಯ್ಕೆಗಳು…..

– ಗಿರೀಶ್ ತಾಳಿಕಟ್ಟೆ

LEAVE A REPLY

Please enter your comment!
Please enter your name here