Homeರಾಜಕೀಯಕಾಗೇರಿ-ಭೀಮಣ್ಣ ಬಲಪ್ರದರ್ಶನದ ಬಡಿದಾಟ

ಕಾಗೇರಿ-ಭೀಮಣ್ಣ ಬಲಪ್ರದರ್ಶನದ ಬಡಿದಾಟ

- Advertisement -
- Advertisement -

ಉತ್ತರ ಕನ್ನಡದ ನಗರ-ಪಟ್ಟಣ ಪ್ರದೇಶದ ಆಯಕಟ್ಟಿನ ಅಧಿಕಾರ ಕೇಂದ್ರಕ್ಕೇರಲು ಲಾಟ್-ಪುಟ್ ಲೋಕಲ್ ಪುಢಾರಿಗಳು ನಡೆಸುತ್ತಿರುವ ಕಸರತ್ತು ದಿನಕ್ಕೊಂದು ಆಯಾಮ ಪಡೆದುಕೊಂಡು ಜನರನ್ನು ರಂಜಿಸುತ್ತಿದೆ. ಈ ಮರಿ ಮುಖಂಡರ ಹಿಕಮತ್ತಿನ ಹಿಂದೆ ಚಂಡ-ಪ್ರಚಂಡರ ಅಸ್ತಿತ್ವ-ಪ್ರತಿಷ್ಠೆ ಪ್ರಶ್ನೆಗಳು ಅಡಗಿರುವುದರಿಂದ ಮುನ್ಸ್‍ಪಾಲ್ಟಿ ಜಿದ್ದಾಜಿದ್ದಿಗೆ ಹೈವೂಲ್ಟೇಜ್ ಖದರು ಬಂದುಬಿಟ್ಟಿದೆ.
ಬಿಜೆಪಿ ಶಾಸಕರಾದ ಖಾಲಿಬರಡು ಕಾಗೇರಿ ಮಾಣಿ, ದೋಖಾ ದಿನಕರÀಶೆಟ್ಟಿ, ರಂಗೀಲಾ ರೂಪಾಲಿ ನಾಯ್ಕಗೆ ತಾವಿನ್ನೂ ತಮ್ಮೂರಿನ ಸಿಟಿಗಳಲ್ಲಿ ಶಕ್ತಿಶಾಲಿ ಸಂಘಿ ಸರದಾರರೆಂದು ತೋರಿಸಿಕೊಳ್ಳುವ ಅವಿವಾರ್ಯತೆ ಎದುರಾಗಿದೆ. ಕಾಂಗ್ರೆಸ್‍ನ ಮಾಜಿಗಳಾದ ಕಾರವಾರದ ಸೋಗಲಾಡಿ ಸತೀಶ್ ಸೈಲ್, ಕುಮಟೆಯ ಸ್ವಾಹ ಶಾರದಾಶೆಟ್ಟಿಯಮ್ಮ, ಶಿರಸಿಯ ಬಂಡಲ್‍ಬಾಜಿ ಭೀಮಣ್ಣನಾಯ್ಕ್, ಯಲ್ಲಾಪುರದ ಲಾಟರಿ ಶಾಸಕ ಹೇತ್ಲಾಂಡಿ ಹೆಬ್ಬಾರ ಮತ್ತು ಹಳಿಯಾಳದ ಮುದಿ ಹುಲಿ ದೋಷಪಾಂಡೆ ಹಿಂದಾದ ಅವಮಾನದ ಸೇಡು ತೀರಿಸಿಕೊಳ್ಳಬೇಕಾದ ಗಡಿಬಿಡಿಗೆ ಬಿದ್ದಿದ್ದಾರೆ. ಕಾರವಾರದಲ್ಲಿ ಜೆಡಿಎಸ್ ಜೋಕುಮಾರ ಆನಂದ ಅಸ್ನೋಟಿಕರ್ ನಗರದಲ್ಲಿ ತನ್ನ ಬೇರುಗಳಿನ್ನೂ ಒಣಗಿಲ್ಲ ಎಂಬುದನ್ನು ಶತ್ರುಗಳಿಗೆ ತೋರಿಸಬೇಕಾಗಿದೆ. ಕಾರವಾರ ನಗರಸಭೆ ರಣಾಂಗಣದಲ್ಲಿ ಬಿಜೆಪಿಗೆ ಕಾಂಗ್ರೆಸ್‍ಗಿಂತ ಜೆಡಿಎಸ್ಸೇ ಹೆಚ್ಚು ಹೆದರಿಸುತ್ತಿದೆ. ತನ್ನ ಕೃಪಾಶೀರ್ವಾದದಲ್ಲೇ ಪುಢಾರಿಯಾಗಿ ಬೆಳೆದು ಈಗ ಶಾಸಕಿಯಾಗಿ ತನ್ನನ್ನು ಅಣಕಿಸುತ್ತಿರುವ ರೂಪಾಲಿ ರಂಗು ಇಳಿಸಲು ಅಸ್ನೋಟಿಕರ್ ಸ್ಕೆಚ್ ಹಾಕಿದ್ದಾನೆ.
ಉತ್ತರ ಕನ್ನಡದ ಲೋಕಲ್ ಫೈಟಿಂಗ್‍ನಲ್ಲಿ ದೊಡ್ಡ ಮಟ್ಟದ ಕುತೂಹಲ ಕೆರಳಿಸಿರುವುದು ಘಟ್ಟದ ಮೇಲಿನ ಶಿರಸಿ ನಗರಸಭೆ ಗದ್ದುಗೆ ಗುದ್ದಾಟ! ಬಿಜೆಪಿ-ಕಾಂಗ್ರೆಸ್ “ಹಣಾ”ಹಣಿ ಇಲ್ಲಿ ನಡೆದಿದೆ. ಕೇಸರಿ ತಂಡಕ್ಕೆ ಕಾಗೇರಿ ಮಾಣಿ “ದಂಡ” ನಾಯಕನಾದರೆ, ಕಾಂಗ್ರೆಸ್ ಬೆಟಾಲಿಯನ್‍ಗೆ ಭೀಮಣ್ಣನಾಯ್ಕ ಬ್ರಿಗೇಡಿಯರ್. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಖಾಮುಖಿಯಾಗಿ ನಿಂತು ಸೆಣಸಾಡಿದ್ದ ಈ ಇಬ್ಬರು ಹೋಪ್‍ಲೆಸ್‍ಗಳು ಈಗ ಎರಡನೇ ಸುತ್ತಿನ ಕಾಳಗಕ್ಕೆ ಅಣಿಯಾಗಿದ್ದಾರೆ. ಕಾಗೇರಿ ಶಾಸಕನಾಗಿರುವುದು ಅನಿರೀಕ್ಷಿತ; ಭೀಮಣ್ಣ ಲಾಗಾಹಾಕಿರುವುದು ಅಚ್ಚರಿಯೆಂಬುದು ಇವತ್ತಿಗೂ ಶಿರಸಿಯಲ್ಲಿ ಚರ್ವಿತಚರ್ವಣ! ಈಗ ನಡೆದಿರುವ ಮುನ್ಸ್‍ಪಾಲ್ಟಿ ಎಲೆಕ್ಷನ್ ಕಾಳಗ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ತಕರಾರು-ತಲ್ಲಣ ಎಬ್ಬಿಸಿಬಿಟ್ಟಿದೆ. ಎರಡೂ ಕಡೆ ಬಂಡಾಯದ ಬಾವುಟ ಬಾನೆತ್ತರಕ್ಕೆ ಹಾರಾಡುತ್ತಿದೆ. ಕಾಗೇರಿಯಷ್ಟೇ ಪೀಕಲಾಟ ಭೀಮಣ್ಣನಿಗೂ ಶುರುವಾಗಿದೆ. ಸ್ವಕೀಯರೇ ಶತ್ರುಗಳಿಗಿಂತ ಅಪಾಯಕಾರಿ ಆಗಿದ್ದಾರೆಂಬ ದುಗುಡ ಕೈ-ಕಮಲ ಪಾಳೆಯವನ್ನು ಕಂಗಾಲಾಗಿಸಿಬಿಟ್ಟಿದೆ.
ಬರೋಬ್ಬರಿ 31 ಸದಸ್ಯ ಬಲದ ಶಿರಸಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕಾಗೇರಿ ಶಾಸಕನಾಗಿದ್ದರೂ ಶಿರಸಿಯಲ್ಲಿ ಬಿಜೆಪಿ ಸೋತಿರುವುದು ಆತನ ಸ್ವಪಕ್ಷೀಯ ಶತ್ರು ಅನಂತ್ಮಾಣಿ ಕರಾಮತ್ತಿನಿಂದಾಗಿ. ಈ ಸಲ ಅನಂತ್ಮಾಣಿ ಕೇಂದ್ರಮಂತ್ರಿಯಾಗಿದ್ದಾನೆ. ಹಾಗಾಗಿ ತಾನು ದಿಲ್ಲಿ ಲೆವಲ್ ನಾಯಕನೆಂಬ ದುರಹಂಕಾರದಿಂದ ಲೋಕಲ್ ರಾಜಕಾರಣದಿಂದ ದೂರಾಗಿದ್ದಾನೆ. ಮುನ್ಸ್‍ಪಾಲ್ಟಿ ಮಟ್ಟ ಏನಿದ್ದರೂ ಕಾಗೇರಿಯದೆಂಬ ಕುಹಕದ ಪೋಸು ಕೊಟ್ಟು ಸುಮ್ಮನಿದ್ದಾನೆ. ಕಾಗೇರಿ ಇಮೇಜು ಈ ಎಲೆಕ್ಷನ್‍ನಿಂದ ಹೆಚ್ಚಾಗುತ್ತದೆಂದು ಕಂಡರೆ ಅನಂತ್ಮಾಣಿ ಒಳಏಟು ಕೊಡದೆ ಬಿಡಲಾರ. ನಗರಸಭೆಯ ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಹೊತ್ತಲ್ಲಿ ಇದೇ ಅನಂತ್ಮಾಣಿ ಕಾಂಗ್ರೆಸ್‍ನ ಬಂಡಾಯಗಾರ ಪ್ರದೀಪ್ ಶೆಟ್ಟಿ ಟೀಮಿಗೆ ಬೆಂಬಲ ಕೊಟ್ಟು ಅಧ್ಯಕ್ಷನಾಗಿಸಿದ್ದು ಕಾಗೇರಿ ಮರೆಯಲು ಸಾಧ್ಯವಾ!
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್‍ಗೆ ಕೆಲವರು ಬಂದಿದ್ದಾರೆ. ಒಂದಷ್ಟು ಮಂದಿ ಕಾಂಗ್ರೆಸ್‍ನಲ್ಲಿ ಛಾನ್ಸ್ ಇಲ್ಲವೆಂದು ಬಿಜೆಪಿ ಸೇರಿ ಬೀದಿ ಪಾಲಾಗಿದ್ದಾರೆ. ಬಿಜೆಪಿಯಲ್ಲಿದ್ದ ಅರುಣ ಪ್ರಭು, ಕೇಶವ ಶೆಟ್ಟಿ ಈ ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಕೈಕೊಟ್ಟಿದ್ದರಿಂದ ಮುನಿದು ಶೀಲುರಾಜ್, ರಜಿಯಾಬಿ ಜೆಡಿಎಸ್ ಪಾಲಾಗಿದ್ದಾರೆ. ಉಪಾಧ್ಯಕ್ಷೆಯಾಗಿದ್ದ ಅರುಣಾ ವೆರ್ಣೀಕರ್, ಜಯಲಕ್ಷ್ಮಿ ಬೈಲೊರ್, ಅಬ್ದುಲ್ ಶೇಕ್ ಬಂಡೆದ್ದು ಕಾಂಗ್ರೆಸ್ ಕಿಂಗ್‍ಗಳಿಗೆ ಸೆÀಡ್ಡು ಹೊಡೆದಿದ್ದಾರೆ. ಬಿಜೆಪಿ ಜತೆಸೇರಿ ಅಧ್ಯಕ್ಷನಾಗಿದ್ದ ಅಧಿಕಪ್ರಸಂಗಿ ಪ್ರದೀಪ್‍ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಕೊಡಬಾರದೆಂದು ಹಿಂದಿನ ಬಿಜೆಪಿ ಅಧ್ಯಕ್ಷ ರಮೇಶ್ ದುಬಾಷಿ ಗ್ಯಾಂಗ್ ಮಾರಾಮಾರಿಗೂ ಇಳಿದಿತ್ತು. ಆದರೂ 12ನೇ ವಾರ್ಡಿನಲ್ಲಿ ಶೆಟ್ಟಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದಾನೆ. ವಾರ್ಡ್ ನಂಬರ್ 12, 18, 20, 1, 17, 9, 16, 26, 27 ಮತ್ತು 31ರಲ್ಲಿ ಬಂಡಾಯದ ಕಾವು ಕಾಂಗ್ರೆಸನ್ನು ಕರಗಿಸುತ್ತಿದೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣಪತಿನಾಯ್ಕ್ ಎಂಬ ಶಾಸಕ ಕಾಗೇರಿ ಶಿಷ್ಯನಿಗೆ ಭಿನ್ನಮತ ಮುಳುವಾಗಿದೆ. ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಸಂಧ್ಯಾ ಕುರ್ಡೇಕರ್, ಮಾಜಿ ಸದಸ್ಯ ನಾಗರಾಜ್ ಮುಕ್ತಾ, ಭೀಮಣ್ಣ ತಳವಾರ, ಯೋಗೀಶ್ ಪಾಟೀಲ, ಎ.ಪಿ.ನಾಯ್ಕ್ ಸಿಡಿದೆದ್ದಿದ್ದಾರೆ. ವಾರ್ಡ್ ನಂಬರ್ 31, 28, 6, 8, 10ರಲ್ಲಿ ಬಿಜೆಪಿ ಬಂಡಾಯಗಾರರು ಕಣದಲ್ಲಿದ್ದಾರೆ. ಕಾಗೇರಿ ಕಚೇರಿಗೆ ಹೋದಾಗ ಬಿ. ಫಾರ್ಮ್ ಕೊಡದೆ ಕಳಿಸಿದ್ದು ಅನೇಕ ಹಳೆ ಸದಸ್ಯರ ಕೆರಳಿಸಿದೆ.
ಇವರೆಲ್ಲಾ ಕಾಗೇರಿಗೆ ಶಾಪ ಹಾಕುತ್ತ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆ ಈ ಸಲ ಹೊಸಬರನೇಕರಿಗೆ ಛಾನ್ಸ್ ಕೊಡಲಾಗಿದೆ. ಇದೇ ಅಸಮಾಧಾನದ ಮೂಲ.
ವಾರ್ಡ್‍ಗಳ ವಿಭಜನೆ, ಮೀಸಲಾತಿ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಂಗ್ರೆಸ್‍ಗೆ ಒಂಚೂರು ಗೆಲ್ಲುವ ಅವಕಾಶ ಜಾಸ್ತಿ ಅನ್ನಿಸುತ್ತದೆ. ಆದರೆ ಬಿಜೆಪಿಯ ಮತಾಂಧ ಅಲೆ ಎದುರಿಸುವುದು ಅಷ್ಟು ಸುಲಭವೇನಿಲ್ಲ. ಕಾಂಗ್ರೆಸ್ ಬಿಸಿಸಿ ಅಧ್ಯಕ್ಷ ಉಪೇಂದ್ರ ಪೈ ಶಿರಸಿಯ ಲ್ಯಾಂಡ್ ಮಾಫಿಯಾದ ಕಿಂಗ್‍ಪಿನ್. ಈತ ಮಂತ್ರಿ ದೇಶಪಾಂಡೆ ಜಾತ್ಯಸ್ಥ. ಹೀಗಾಗಿ ಪೈ ಜಿಲ್ಲಾಧ್ಯಕ್ಷ ಭೀಮಣ್ಣನಿಗೂ ಕೇರ್ ಮಾಡದೆ ತನ್ನ ಆಪ್ತರಾದ ಭೂ ಭಾನ್ಗಡಿದಾರರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದಾನೆಂಬ ಪುಕಾರು ಕಾಂಗ್ರೆಸ್‍ಗೆ ಡ್ಯಾಮೇಜ್ ಮಾಡುತ್ತಿದೆ.
ಶಿರಸಿ ನಗರಸಭೆ ಎಂದರೆ ಒಂಥರಾ ಲೇವಾದೇವಿ ಅಡ್ಡೆಯಂತೆ. ಬಿಜೆಪಿ-ಕಾಂಗ್ರೆಸ್ ಎಂಬ ಭೇದವಿಲ್ಲದೆ ಸದಸ್ಯರು ಸಿಕ್ಕಷ್ಟು ಸ್ವಾಹ ಮಾಡಿದ್ದಾರೆ. ಚರಂಡಿ ಇಲ್ಲದ ಏರಿಯಾಗಳು, ಗುಂಡಿ ಬಿದ್ದ ರಸ್ತೆಗಳು, ಕಸ-ಕೊಳೆಯಿಂದ ಗಬ್ಬೆದ್ದ ನಗರ ಐದು ವರ್ಷ ಸದಸ್ಯರಾಗಿದ್ದವರ ಹಣೆಬರಹ ಹೇಳುತ್ತಿದೆ. ನಗರದ ಆಡಳಿತ ಅದ್ವಾನ ಎದ್ದುಹೋಗಿದೆ. ಆಡಳಿತ ಕಾಂಗ್ರೆಸ್‍ನೊಳಗಿನ ಬಂಡಾಯದಿಂದ ಪ್ರದೀಪ್‍ಶೆಟ್ಟಿಗೆ ಏನೂ ಮಾಡಲಾಗಲಿಲ್ಲ. ಆತ ವಿಪ್ ಉಲ್ಲಂಘನೆಯ ಆರೋಪದಿಂದ ಸದಸ್ಯತ್ವಕ್ಕೆ ಸಂಚುಕಾರ ತಂದುಕೊಂಡು ಕೋರ್ಟು-ಕಚೇರಿ ಅಲೆದನೇ ಹೊರತು ಊರು ಉದ್ಧಾರದ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಧಿಕಾರಾರೂಢ ಕಾಂಗ್ರೆಸ್‍ನ ಗೊಂದಲ-ಗಲಾಟೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿತು. ನೊಂದವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಯಾವ ಪಕ್ಷದವರಿಂದಲೂ ಆಗಲಿಲ್ಲ. ಕಾಂಗ್ರೆಸ್‍ನೊಳಗಿನ ಭಿನ್ನಮತ ಬಿಜೆಪಿ ಸದಸ್ಯರು ಸ್ವಲಾಭಕ್ಕೆ ತಕ್ಕಂತೆ ಬಳಸಿಕೊಂಡು ಹಾಯಾಗಿ ತಿಂದು ದುಂಡಗಾದರು. ಎಲೆಕ್ಷನ್ ಬರುವಸೂಚನೆ ಸಿಕ್ಕಾಗ ಆಡಳಿತಗಾರರ ಗ್ಯಾಂಗಿನಲ್ಲಿದ್ದ ಬಿಜೆಪಿ ನಗರಾಡಳಿತ ಸರಿಯಿಲ್ಲವೆಂದು ಪ್ರತಿಭಟನೆಯ ನಾಟಕ ನಡೆಸಿತು.
ದುರಂತವೆಂದರೆ ಕೋಟಿ-ಕೋಟಿ ಅನುದಾನ ಬಂದರೂ ಶಿರಸಿ ನಗರ ಮಾತ್ರ ಅಭಿವೃದ್ಧಿ-ಪ್ರಗತಿ ಕಾಣಲೇ ಇಲ್ಲ! ಖಾತಾ ಬದಲಾವಣೆಯಂಥ ಗಂಭೀರ ಸಮಸ್ಯೆ ನಗರಾಡಳಿತಾಗಾರರಿಂದ ಪರಿಹರಿಸಲಾಗಲೇ ಇಲ್ಲ. ಫಾರ್ಮ್‍ನಂಬರ್ 3 ಎಂಬ ಸಮಸ್ಯೆ ಇವತ್ತಿಗೂ ಜನರ ಜೀವ ಹಿಂಡುತ್ತಿದೆ. ಕಸ-ಕೊಳಕು ನಗರದ ತುಂಬೆಲ್ಲಾ ರಾರಾಜಿಸುತ್ತಿದೆ. ಆದರೂ ನಗರಸಭೆ ಖರೀದಿಸಿದ್ದ ಕಸ ಸಂಗ್ರಹ ಬಕೆಟ್ ಜನರಿಗೆ ವಿತರಿಸಲು ಪ್ರದೀಪ್ ಶೆಟ್ಟಿ ಮತ್ತಾತನ ಬಿಜೆಪಿ ಬೆಂಬಲಿಗರಿಂದ ಆಗಲೇ ಇಲ್ಲ. ಕುಡಿಯುವ ನೀರಿನ ನಳಗಳಿಗೆ ಮೀಟರ್ ಅಳವಡಿಸುವ ಗೊಂದಲ, ಘನತ್ಯಾಜ್ಯ ಸಂಗ್ರಹ ಶುಲ್ಕಹೆಚ್ಚಳ, ಹೊಸರಸ್ತೆಯಾದ ಮೂರು ತಿಂಗಳಿಗೇ ಕಿತ್ತು ಹೋದಗರಣ, ಅರೆಬರೆಯಾದ ದೇವಿಕೆರೆ ಕಾಮಗಾರಿ…… ಒಂದೇ ಎರಡೇ?! ಬರೀ ಅವ್ಯವಹಾರ, ಅವಾಂತರ, ಕಳಪೆ ಕಾಮಗಾರಿ ಆದಂತೆಲ್ಲಾ ನಗರ ಪಿತೃಗಳ ಆತ್ಮಕ್ಕೆ ಸದ್ಗತಿ ಸಿಕ್ಕಿದೆ!!
ನಗರಸಭೆ ಒಟ್ಟುಗೂಡಿಸುವ ತೆರಿಗೆ, ಎಸ್‍ಎಫ್‍ಸಿ ವಿಶೇಷ ಅನುದಾನ , 14ನೇ ಹಣಕಾಸು ಆಯೋಗದ ಅನುದಾನ, ಮಾರಿಕಾಂಬಾ ಜಾತ್ರಾ ವಿಶೇಷ ಅನುದಾನ, ನಗರೋತ್ಥಾನ ಯೋಜನೆ ಫಂಡ್…… ನಾನಾ ನಮೂನೆಯ ಅನುದಾನ ಶಿರಸಿ ನಗರಸಭೆಗೆ ಬಂದಿದೆ. ಆದರೆ ಸದ್ಬಳಕೆ ಮಾತ್ರÀ್ರ ಆಗಿಲ್ಲ. ಜನರು ಗೋಳು ತಪ್ಪಿಲ್ಲ. ಭೂರಹಿತರಿಗೆ ಮನೆ ಮಂಜೂರಿ ಮಾಡುವ ಯೋಜನೆಯಲ್ಲೂ ಕಣ್ಕಟ್ಟು ನಡೆದಿದೆ. ಶಾಸಕ ಕಾಗೇರಿ ಮತ್ತು ನ.ಪ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕುಳಿತು ಲಾಟರಿ ಹಾಕಿ ಫಲಾನುಭವಿಗಳ ಆಯ್ಕೆ ಮಾಡಿದ್ದಾರಂತೆ. ಆದರೆ ಭೂರಹಿತರಿಗೆ ಸಿಗÀಬೇಕಾದ ಈ ಯೋಜನೆ ಉಳ್ಳವರಿಗೆ ಸಿಕ್ಕಿದ್ದಾದರೂ ಹೇಗೆ! ಶಾಸಕ-ಅಧ್ಯಕ್ಷರ ಲಾಟರಿ ಮಹಿಮೆ ಅಸಹಾಯಕ ಬಡವರಿಗೆ ಇನ್ನೂ ಅರ್ಥವೇ ಆಗುತ್ತಿಲ್ಲ.
ಇಂಥ ಕೆಟ್ಟ ಘಳಿಗೆಯಲ್ಲಿ ಧರ್ಮಕಾರಣ, ಜಾತಿಯತೆ, ಹಣದ ವ್ಯಾಮೋಹಕ್ಕೆ ಮತದಾರ ಬಿದ್ದರೆ ಮತ್ತದೇ ದುರ್ದಿನಗಳು, ಕರಾಳ ಆಡಳಿತ ಖಂಡಿತ.

– ನಹುಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...