Homeಮುಖಪುಟಅನರ್ಹ ಶಾಸಕರ ರಾಜಕೀಯ ಭವಿಷ್ಯ ಮುಂದೇನು?

ಅನರ್ಹ ಶಾಸಕರ ರಾಜಕೀಯ ಭವಿಷ್ಯ ಮುಂದೇನು?

- Advertisement -
- Advertisement -

| ಅಶೋಕ್ |

ಬಿಜೆಪಿ ತವರೂರು ಗುಜರಾತ್‍ನಲ್ಲೇ 6 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇನ್ನು ಈ ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಗುಜರಾತ್‍ನ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್, ಮಹಾರಾಷ್ಟ್ರದ ರಾಜ ವಂಶಸ್ಥ ಉದಯನ್ರಾಜೆ ಬೋಸಲೆ ಹಾಗೂ ಹರಿಯಾಣದ ಸೊನಾಲಿ ಪೋಗಟ್ ಸೋಲು ಕಂಡಿರುವುದು ಪಕ್ಷಾಂತರಿಗಳಲ್ಲಿ ಭಯಕ್ಕೆ ಕಾರಣವಾಗಿದೆ.

ನಾವು ಆಮಿಷಗಳಿಗೆ ಒಳಗಾಗಿಲ್ಲ ಎಂದು ಹೇಳುತ್ತಲೇ 17 ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟು ಮಹಾರಾಷ್ಟ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಲ್ಲಿನ ಐಶಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡದ್ದು ಮತ್ತು ಈ ಎಲ್ಲಾ ಶಾಸಕರನ್ನು ಮುಲಾಜಿಲ್ಲದೆ ಸ್ಪೀಕರ್ ಅನರ್ಹಗೊಳಿಸಿದ್ದು ಈಗ ಹಳೆಯ ವಿಷಯ.

ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನೇರವಾಗಿ ಬಿಜೆಪಿ ಸರ್ಕಾರದ ರಚನೆಗೆ ಕಾರಣವಾಗಿದ್ದ ಅನರ್ಹ ಶಾಸಕರಿಗೆ ಆ ಎಲ್ಲಾ ಕ್ಷೇತ್ರದಲ್ಲೂ ಶತಾಯಗತಾಯ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಮಾತು ಕೊಟ್ಟಿದ್ದಾರೆ. ಮೊನ್ನೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡುವ ಕುರಿತು ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಮ್ಮತದ ನಿರ್ಣಯ ತೆಗೆದುಕೊಳ್ಳುವ ಮೂಲಕ ಅನರ್ಹರ ಪರ ಬ್ಯಾಟ್ ಬೀಸಿದ್ದಾರೆ.

ಆದರೆ, ಬಿಜೆಪಿ ಟಿಕೆಟ್ ನೀಡಿದ ಮಾತ್ರಕ್ಕೆ ಅನರ್ಹರ ಗೆಲುವು ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಹಾಗಾದರೆ ಇದೀಗ ಅನರ್ಹರ ಮುಂದಿರುವ ಸವಾಲುಗಳೇನು? ಮಹಾರಾಷ್ಟ್ರ-ಹರಿಯಾಣ ಚುನಾವಣೆಯು ರಾಜ್ಯದ ಉಪಚುನಾವಣೆ ಮೇಲೆ ಬೀರುವ ಪ್ರಭಾವವೇನು? ಸುಪ್ರೀಂ ತೀರ್ಪು ಕಂಟಕವಾದರೆ ಅನರ್ಹರ ಗತಿ ಏನು? ಅನರ್ಹರು ರಾಜೀನಾಮೆ ನೀಡಿರುವ 17 ಕ್ಷೇತ್ರದಲ್ಲೂ ಬಂಡಾಯ ಅಭ್ಯರ್ಥಿಗಳ ನಡೆ ಏನು? ನಿಜಕ್ಕೂ ರಾಜ್ಯದ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆಲ್ಲುವ ವಾತಾವರಣ ಇದೆಯೇ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಅನರ್ಹರಿಗೆ ಮುಹೂರ್ತವಿಟ್ಟ ಸುಪ್ರೀಂ; ಏನಾಗಲಿದೆ ತೀರ್ಪು?

ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಸಾಮೂಹಿಕ ರಾಜೀನಾಮೆ ನೀಡಿದ್ದ 14 ಕಾಂಗ್ರೆಸ್ ಹಾಗೂ 3 ಜೆಡಿಎಸ್ ಶಾಸಕರನ್ನು ಸ್ಪೀಕರ್ ರಮೇಶ್‍ಕುಮಾರ್ ಪಕ್ಷಾಂತರ ನಿಷೇಧ ಕಾಯ್ದೆ ಶೆಡ್ಯೂಲ್ 10ರ ಅನ್ವಯ ಕಳೆದ ಜುಲೈ 28ರಂದು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ನೀಡಿದ್ದರು. ಜೊತೆಗೆ ಈ ವಿಧಾನಸಭೆ ಚಾಲ್ತಿಯಲ್ಲಿರುವವರೆಗೆ ಯಾವುದೇ ಉಪಚುನಾವಣೆಯಲ್ಲಿ ಸ್ಪರ್ಧೆ ನಡೆಸುವಂತಿಲ್ಲ ಎಂಬುದೂ ಆದೇಶದ ಭಾಗವಾಗಿತ್ತು.

ಇದೇ ಕಾರಣಕ್ಕೆ ಸ್ಪೀಕರ್ ತೀರ್ಪನ್ನು ವಿರೋಧಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಎರಡು ವಾರದಿಂದ ವಾದ-ಪ್ರತಿವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ನವೆಂಬರ್ 4ಕ್ಕೆ ಕಾಯ್ದಿರಿಸಿದೆ. ಆದರೆ, ತೀರ್ಪು ಅನರ್ಹ ಶಾಸಕರ ಪರವಾಗಿಯೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಏಕೆಂದರೆ ಕಾಂಗ್ರೆಸ್ ಪರ ವಾದ ಮಂಡಿಸಿರುವ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ “ಪಕ್ಷಾಂತರ ಒಂದು ಸಾಮೂಹಿಕ ಪಿಡುಗಾಗಿ ಬದಲಾಗಿದ್ದು, ಇದಕ್ಕೆ ನ್ಯಾಯಾಲಯದ ತೀರ್ಪು ಔಷಧಿಯಾಗಬೇಕು. ಹೀಗೆ ಆಮಿಷಗಳಿಗೆ ಬಲಿಯಾಗಿ ಪಕ್ಷದ್ರೋಹ ಮಾಡುವವರಿಗೆ ತಕ್ಕ ಪಾಠವಾಗಬೇಕು ಎಂದು ನ್ಯಾಯಮೂರ್ತಿಗಳ ಒತ್ತಾಯಿಸಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು” ಎಂದು ಮನವಿ ಮಾಡಿದ್ದಾರೆ.

ಅಕಸ್ಮಾತ್ ನ್ಯಾಯಾಲಯ ಇವರ ವಾದಕ್ಕೆ ಮನ್ನಣೆ ನೀಡಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದರೆ ಅನರ್ಹರು ಉಪಚುನಾವಣೆ ಆಸೆಯನ್ನು ಬಿಡಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಂದುವೇಳೆ ತೀರ್ಪು ಅನರ್ಹರ ಪರ ಹೊರ ಬಿದ್ದರೂ ಸಹ ಖುಷಿ ಪಡಲು ಕಾರಣವಿಲ್ಲ. ಏಕೆಂದರೆ ಅನರ್ಹರ ಸೋಲಿಗೆ ಉದಾಹರಣೆಯಾಗಿ ಕಣ್ಣ ಮುಂದಿದೆ ತಮಿಳುನಾಡು ರಾಜಕಾರಣ. ಅನರ್ಹರಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದುಕೊಂಡ ಶಾಸಕರು ಚುನಾವಣೆಯಲ್ಲಿ ಸೋಲನುಭವಿಸಿದ್ದರು.

ಕರ್ನಾಟಕದಲ್ಲೂ ಅನರ್ಹ ಶಾಸಕರ ವಿರುದ್ಧ ಇದೇ ರೀತಿಯ ವ್ಯಾಪಕ ಜನಾಭಿಪ್ರಾಯ ಇದೆ. ಅಕಸ್ಮಾತ್ ಇವರು ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದರೂ ಗೆಲ್ಲಲು ಬೇಕಾದ ಪೂರಕ ವಾತಾವರಣ ಕ್ಷೇತ್ರದಲ್ಲಿ ಇಲ್ಲ. ಅಲ್ಲದೆ, ಸ್ಪೀಕರ್ ರಮೇಶ್‍ಕುಮಾರ್ ಸಾಮೂಹಿಕ ರಾಜೀನಾಮೆ ಪ್ರಕರಣವನ್ನು ಸಂಪೂರ್ಣ ವಿಚಾರಣೆ ನಡೆಸಿ ಕಾನೂನುತಜ್ಞರ ಅಭಿಪ್ರಾಯ ಪಡೆದೇ ತೀರ್ಪು ನೀಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಬಹುತೇಕ ಸ್ಪೀಕರ್ ತೀರ್ಪನ್ನು ಎತ್ತಿಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ಇದು ಸಾಧ್ಯವಾದರೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಬಹುತೇಕ
ಅಂತ್ಯವಾದಂತೆಯೇ ಸರಿ.

ಬಿಜೆಪಿಗೆ ಪೂರಕವಲ್ಲದ ಮಹಾರಾಷ್ಟ್ರ-ಹರಿಯಾಣ ಚುನಾವಣೆ ಫಲಿತಾಂಶ

ಪ್ರಸ್ತುತ ದೇಶದೆಲ್ಲೆಡೆ ಪ್ರಧಾನಿ ಮೋದಿ ಅಲೆ ಇದೆ ಎಂಬ ಸಂದೇಶವನ್ನು ನೀಡಲಾಯಿತಾದರೂ, ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ತೀರ್ಪು ಬಿಜೆಪಿಗೆ ಪೂರಕವಾಗಿಯೇನೂ ಬಂದಿರಲಿಲ್ಲ. ಅದರಲ್ಲೂ ಉಪಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸಿನ ದರ ಕಡಿಮೆಯೇ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆ ಫಲಿತಾಂಶವೂ ಇದನ್ನೇ ತೋರಿಸಿದೆ.
ಬಿಜೆಪಿ ಈ ಬಾರಿ ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ 140 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದರೆ, ಹರಿಯಾಣದಲ್ಲಿ ಮತ್ತೊಂದು ಅವಧಿಗೆ ಬಹುಮತ ಸರ್ಕಾರ ರಚನೆ ಮಾಡುವ ಮಹತ್ವಾಕಾಂಕ್ಷೆಯಲ್ಲಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಕೇವಲ 104 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಹರಿಯಾಣದಲ್ಲಿ ಬಹುಮತ ಗಳಿಸಲು ಎಡವಿ ಮುಖಭಂಗ ಅನುಭವಿಸಿತ್ತು.

ಅಲ್ಲದೆ, ಮಹಾರಾಷ್ಟ್ರ-ಹರಿಯಾಣ ವಿಧಾನಸಭೆ ಚುನಾವಣೆ ಜೊತೆಗೆ 17 ರಾಜ್ಯದ 51 ವಿಧಾನಸಭೆ ಹಾಗೂ 2 ಲೋಕಸಭೆಗೂ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲೂ ಬಿಜೆಪಿ ಶೇ.70 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಬಿಜೆಪಿ ತವರೂರು ಗುಜರಾತ್‍ನಲ್ಲೇ 6 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇನ್ನು ಈ ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಗುಜರಾತ್‍ನ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್, ಮಹಾರಾಷ್ಟ್ರದ ರಾಜ ವಂಶಸ್ಥ ಉದಯನ್ರಾಜೆ ಬೋಸಲೆ ಹಾಗೂ ಹರಿಯಾಣದ ಸೊನಾಲಿ ಪೋಗಟ್ ಸೋಲು ಕಂಡಿರುವುದು ಪಕ್ಷಾಂತರಿಗಳಲ್ಲಿ ಭಯಕ್ಕೆ ಕಾರಣವಾಗಿದೆ.

ಅಸಲಿಗೆ ಆರ್ಥಿಕ ಹಿಂಜರಿತ, ರೂಪಾಯಿ ಮೌಲ್ಯದ ಕುಸಿತ, ಬ್ಯಾಂಕ್‍ಗಳು ದಿವಾಳಿಯಾಗಿರುವುದು, ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ವಿಚಾರಗಳು ಸಾಮಾನ್ಯವಾಗಿ ಬಿಜೆಪಿ ವಿರೋಧಿ ಅಲೆಗೆ ಕಾರಣವಾಗಿದೆ. ಹೀಗಾಗಿ ಈ ಚುನಾವಣೆಯ ಫಲಿತಾಂಶ ರಾಜ್ಯದ ಉಪಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ಅಲ್ಲದೆ, ರಾಜ್ಯದ ಅನರ್ಹ ಶಾಸಕರ ವಿರುದ್ಧ 17 ಕ್ಷೇತ್ರದಲ್ಲೂ ಜನಾಭಿಪ್ರಾಯವು ಪಕ್ಷಾಂತರಿಗಳ ಪರ ಇರುತ್ತದೆಂದು ಭಾವಿಸಲಾಗದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read